Friday, April 10, 2020

ಗೊಂಚಲು - ಮುನ್ನೂರ್ಮೂವತ್ತು.....

ನೆನೆ ಮನವೇ..... 

ಸುಖ ಒಂದು ಸಂಭ್ರಮವಾದರೆ, ಕಲ್ಪನೆಯ ಕಾವಡಿಯಲಿ ಕೂತ ಸುಖದ ನೆನಪು ಹಾಗೂ ಸುಖೀ ಕನಸಲ್ಲಿ ಸುಖಕೆ ಬಲುವಿಧ ರುಚಿ, ಬಹುವಿಧ ಬಣ್ಣ - ಪ್ರೇಮ, ಕಾಮ, ಭಾವ, ಬಂಧ, ಬೆರಗು, ಬೆಳಕು...
ಖಾಲಿ ಘಳಿಗೆಗಳ ಬೆಚ್ಚಗೆ ಬಳಸಿ ಹಿಡಿಯಲು ಎದೆಯಲಿಷ್ಟು ಕಲ್ಪನೆಯ ಕಾವಿಲ್ಲದೇ ಹೋದರೆ, ಬಣ್ಣಗುರುಡಾದ ಹಾದಿ ಬರಡು ಬರಡೆನಿಸದೇ...!!
ಕಣ್ಣ ಹನಿಗೂ ಬಣ್ಣ ತುಂಬುವ ನಿರುಪದ್ರವೀ ಭಾವಗುಚ್ಛ - ಅತಿಯಾಗದ, ಅಪಾಯ ತಾರದ ಸುಳ್ಳು ಸುಳ್ಳೇ ಸವಿಯನುಣಿಸುವ ಸಣ್ಣ ಸಣ್ಣ ಭ್ರಮೆಗಳೂ ಬೇಕೇನೋ ಬದುಕು ಗೆಲುವಾಗಿರಲು...
#ನೆನೆ_ಮನವೇ...
↟↸↢↣↸↟

ನಾನೆಂಬೋ ಹಮ್ಮಿನ ಕೊಂಬಿನ್ನೂ ಮೂಡಿರದ - ಎಲ್ಲಾ ತೀರದಲ್ಲೂ ತೀರಾ ಸಾಮಾನ್ಯನಾಗಿರುವ, ಸಹಜತೆಯ ಸರಳ ಹರಿವಿನ ಸುಖದ ಕಾಲ...
ಬೆಳುದಿಂಗಳಿಗೆ ಗೆಜ್ಜೆ ತೊಡಿಸಿ ಗಿರಗಿಟ್ಲೆ ಆಡುತಿದ್ದ ತುಂಟ ಮನಸಿನ ಆ ಕಾಲ...
ಪೋಲಿ ಕನಸಿನ ಕಳ್ಳ ಹೆಜ್ಜೆಗಳಲಿ ಮೊದಮೊದಲಾಗಿ ನಿನ್ನ ನೆರಳು ಬಿದ್ದ ಬೆಚ್ಚಗಿನ ಭಯದ ಕಾಲ...
ಇರುಳ ಬಿಸುಪಲ್ಲಿ ಕಣ್ಣ ಗೋಳದ ತುಂಬಾ ನೀನೆಂಬ ಅಜ್ಞಾತ ಚೆಲುವ ಕುಸುಮ ಹೊಸ ಹೊಸತಾಗಿ ಅರಳುವ ಸೊಬಗಿಗೆ ಬೆರಗಾಗಿ ಮೈಯ್ಯೆಲ್ಲಾ ಆಸೆ ಗಣಿಯಾಗಿ ನರಳಿ, ಮರು ಮುಂಬೆಳಗಲಿ ಆ ಸ್ವಪ್ನ ಸೃಷ್ಟಿಸಿದ ಸವಿಸುಖ ಅವಾಂತರಕೆ ನನ್ನಲೇ ನಾ ನಾಚಿ ನಗುತಿದ್ದ ಕಾಲ...
ಮೀಸೆ ಚಿಗುರೊಡೆದು ಹುಡುಗ ಗಂಡಾಗೋ ಕಾಲಕ್ಕೆ ಉಳಿದೆಲ್ಲ ಮಾಮೂಲು ನಿತ್ಯಕರ್ಮ - ನೀನೊಂದು ವಿಶೇಷ ಭಾವಧಾಮ...
ಬಿಟ್ಟಿ ಶೋಕಿಗೂ ಸ್ವಚ್ಛ ನಗೆಯ ಬಣ್ಣ ಬಳಿದವಳೇ - ಬಲು ಪೋಲಿ ಮಾತು ನಾನು ನಿನ್ನಿಂದ ಅಂದಿನಿಂದಿಂದಿಗೂ...
#ನೆನಪಿನ_ಚಿತ್ರಮಂಜರಿ...
↸↢↣↸↟

ಅಮೃತ ಕುಡಿದವರ ಯಾರನೂ ಕಾಣೆ...
ಸಾವಿನ ಮುಖದಲ್ಲಿ ನಿಂತು ನೋಡಿದ್ರೆ ಸಂನ್ಯಾಸಿಯ ಅಲೌಕಿಕ ಬ್ರಹ್ಮಾನಂದವೂ ಸಾಮಾನ್ಯನ ಪ್ರಾಕೃತಿಕ ಸುರತ ಸುಖದಂತೆಯೇ ಕ್ಷಣಿಕ ಸುಖವೇ ಅನ್ಸುತ್ತೆ...

ನಾ ಕಾಯ್ದುಕೊಂಡರೆ ಯಾವುದೂ ಕ್ಷಣಿಕವಲ್ಲ - ನಾನೇ ತಳ್ಳಿದರೆ ಯಾವುದೂ ಸುದೀರ್ಘ ಹಿತವಿಲ್ಲ....
ಎಲ್ಲ ನನ್ನದೇ ಭಾವಕೋಶದ ಮಾಯೆ...

ನೆಲೆಯಿಲ್ಲದ ಅಥವಾ ಮಿತಿಗಳ ಪೊರೆ ಕಳಚಿ ನೆಲೆ ನಿಲ್ಲುವಷ್ಟು ಬಲವಿಲ್ಲದ ಸಂಚಾರಿ ಭಾವಗಳು ಸಂಚರಿಸಿದಲ್ಲೆಲ್ಲ ಗೊಂದಲಗಳನಷ್ಟೇ ಬಿತ್ತಿ ಬೆಳೆಯಬಲ್ಲವು...
#ಇತಿಮಿತಿಮತಿ...
#ವಾದ್ಕೆ...
↸↢↣↸↟

ಹೆಣದ ಕಮಟು ವಾಸನೆ - ಹೆಣದ ತಲೆ ಓಡನು ಒಡೆವ ಉರಿ - ಸಗೋತ್ರ ಪ್ರವರಗಳ ನೆನೆನೆನೆದು ಹೆಣ ಸಾಗಿದ ಹಾದಿಯ ತೊಳೆವ ಕಣ್ಣೀರು...
ಬಚ್ಚಲಲ್ಲಿ ಜೀವದ ಸೂತಕವನಷ್ಟೇ ತೊಳೆದು ಮಡಿಯಾಯಿತೆನ್ನಬಹುದು...
ಹೆಣ ಭಾವದ್ದಾದರೆ...?
ಎಂಥ ಉರಿ? ಎಷ್ಟು ಕಣ್ಣೀರು?? ಮಡಿ ಹೇಗೆ???
ಹೊರಗಿನ ಹುತ್ತ - ಒಳಗಿನ ವರ್ಲೆ...
ಯಮನಷ್ಟೇ ಕೊಲ್ಲುವುದಿಲ್ಲ - ಬದುಕೂ ಕೊಲ್ಲುತ್ತದೆ...
#ನೋವಿನ_ಬೀಜ...
↸↢↣↸↟

ಯಾರನ್ನು ಹಳಿಯೋಣ - ನಮ್ಮಲ್ಲೇ ಎಲ್ಲಾ ಮುಶಂಡಿತನಗಳ ತುಂಬಿಟ್ಟುಕೊಂಡು...
ಯುಗಾದಿ, ಹೊಸ ವರುಷದ ಬಾಗಿಲಂತೆ - ನಮ್ಮಗಳ ವಿವೇಕದ ಭಾವಕೋಶಕೂ ಹಿಡಿ ಬೆಳಕು ಸೋಕಲಿ...
ಹೊಸ ಸಂವತ್ಸರಕೆ ಪ್ರಕೃತಿ ತನ್ನೆಲ್ಲ ಕೃತಿಗಳ ಜೊತೆ ತನ್ನ ಪುಂಡ ಕೂಸಾದ ಮನುಷ್ಯನ ಪ್ರಜ್ಞೆಯನ್ನೂ ಚೂರು ಚಂದವಾಗಿ ಅಲಂಕರಿಸಲಿ...
ಒಳಿತನ್ನು ಆಶಿಸೋಣ; ಉಹೂಂ ಅಷ್ಟು ಸಾಲದು, ಒಳಿತಿಗಾಗಿ ಶ್ರಮಿಸಲು ನಮ್ಮ ನಾವು ಬದ್ಧರಾಗಿಸಿಕೊಳ್ಳೋಣ..‌.
#ಹಬ್ಬ_ಆತ್ಮದ_ನಗುವಾಗಲಿ...
#ಶುಭಾಶಯ...💞🤝🏼
   ___25.03.2020
↸↢↣↸↟

ಇಷ್ಟೇ -
ತನಗೆ ಹಸಿವಾದರೆ ಕಂದನ ಊಟಕ್ಕೇಳಿಸೋ ಕರುಳ ಮಮತೆ...
ಸೋತ ಹೆಗಲನಾತು ಕೂತು ಚೂರು ಬೆಳಕನುಣಿಸೋ ಮಾತೆಂಬ ಹಣತೆ...
ಕಾರ್ಯ ಕಾರಣದಾಚೆಯಲ್ಲೂ ಎದೆಯಿಂದ ಎದೆಗೆ ಹರಿಯುತಿರೋ ಪ್ರೀತಿ ಸರಿತೆ...
#ಜೀವಂತ_ಕವಿತೆ...
    __21.03.2020
↸↢↣↸↟

ಹಳ್ಳಿ ಮನೆಯ ಜಗ್ಲಿಚಿಟ್ಟೆ ಮೇಲೆ ಅಂಗಳ ಮುಖಿಯಾಗಿ ಕೂತ ಹಿರಿಯ ಜೀವದ ಬೊಚ್ಚು ಬಾಯ ಬಿಚ್ಚು ನಗೆಯಲ್ಲಿ ನುಂಗಿ ಗೆದ್ದ ನೋವನ್ನು, ಮುದುರು ರೆಪ್ಪೆಗಳ ಕಣ್ಣಾಳದಲ್ಲಿ ಹೊಯ್ದಾಡೋ ಅನುಭವದ ಮಿಡಿತಗಳನು, ಅದೇ ಅನುಭವದ ದೊಡ್ಡ ದನಿಯ ಬೈಗುಳಗಳಲಿನ ತಲ್ಲಣಗಳ ನುಡಿಸಂಜೆಗಳನು, ಯಥಾವತ್ತು ಅಕ್ಷರಕಿಳಿಸಬಲ್ಲ ಅನುಭಾವಿ ಕವಿ ಸಿಕ್ಕರೆ ಹೇಳಿ...
ಊರ ಬಯಲ ತುಂಬಿ ಬೇರಿನೆದೆಯಲೂ ಹೂವಿನದೇ ಕಥೆ - ಮಣ್ಣ ಕಿವಿಯಾಗಿ ಬೇರಿನಳಲ ಕವಿತೆ, ವ್ಯಥೆಯ ಹಾಡಿದ ಕವಿಯ ಹೆಸರು ಹೇಳಿ...
#ಜೀವನಾರೋಹ...
    ____21.03.2020
↸↢↣↸↟

ಅಂಗಳವಿಲ್ಲದ ಮಹಾನಗರದಲ್ಲಿ ಬಾನ ದೀಪಗಳ ಬೆಳಕಲ್ಲಿ ಕಣ್ಣು ಮೀಯಬೇಕೆಂದರೆ ಮನೆಗಳ ನೀಯಾನ್ ದೀಪವ ಆರಿಸಲೇಬೇಕು...
#ಕತ್ತಲೆಲ್ಲಿದೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರಿಪ್ಪತ್ತೊಂಭತ್ತು.....

ಬದುಕಿನ ಭಾವಗತಿ.....  

ಅವಳ ಒಂದೇ ಒಂದು ಹನಿ ನೋವನೂ ಇದ್ದಂತೆ ಬರೆಯಲಾಗದ ಹಳಹಳಿಗೆ ನನ್ನ ಸಾವನ್ನು ಬರೆದ ಲಾಚಾರು ಪ್ರಾಣಿ ನಾನು - ಕಣ್ಣಲ್ಲಿ ಕಣ್ಣಿಟ್ಟು ಕಾಲವೆಷ್ಟಾಯಿತೋ...
ನನ್ನೊಳಗಿನ ಪರಮಾತ್ಮ "..." ಅಸ್ವಸ್ಥನಾಗಿ ದಶಕಗಳ ಮೇಲಷ್ಟು ಕಾಲ ಕಳೀತು - ಭಾವದ್ದು, ಜೀವದ್ದೂ...
ಅಲ್ಲೀಗಲೂ ನನ್ನ ಹೊರತು ಬೇರೇನಿಲ್ಲ ಎಂಬ ಅರಿವಿದ್ದೂ ಅವಳ ಕಣ್ಣ ಕನ್ನಡಿಯಲಿ ನನ್ನ ಬಿಂಬ ನೋಡುವ ಧೈರ್ಯ ಎಲ್ಲಿಂದ ತರಲಿ - ನೆನಹಿಂದು, ಕನಸಿಂದು...
'ಬೇಶರತ್ ಪ್ರೀತಿ' ಹಾಗೂ 'ಹಿಡಿದಿಟ್ಟ ಕಂಬನಿ' ಅಕ್ಷರದ ಅಂಕೆಗೆ ಮೀರಿದ ಮಿಡಿತಗಳಲ್ಲವೇ - ಪಾಪಿಯ ಕೈ ಸೋತರೆ ಯಾರ ದೂರುವುದು...
ಇಷ್ಟಕ್ಕೂ ಹೆಗಲಾಗದವನಿಗೆ ಮಾತಾಗುವ ಹಕ್ಕೆಲ್ಲಿಯದು...
#ನಿತ್ರಾಣ...
↩↨↨↪↷

ನೀ ಎದ್ದು ಹೋದ ಖಾಲಿತನವ ಮತ್ತೆ ನೀನೇ ಬಂದೂ ತುಂಬಲಾಗಲಿಕ್ಕಿಲ್ಲ ನೋಡು...
ಪ್ರೀತಿಯ ಕೊನೆಯ ಹನಿ - ಮೌನದ ಯುದ್ಧ ಕಹಳೆ...
#ಬದುಕಿನ_ಭಾವಗತಿ...

ನನ್ನೆದೆಯ ಕಾಳಜಿಯ ಅಗತ್ಯ ಅಲ್ಲಿಲ್ಲ ಅನ್ನಿಸಿದಲ್ಲಿ ಜಗಳವೂ ಹುಟ್ಟುವುದಿಲ್ಲ...
ಹರಿವಿಲ್ಲದ ಪ್ರೀತಿಗೆ ಹರವು ಎಲ್ಲಿಂದ...
#ಬಂಧ_ಬಾಂಧವ್ಯ_ಇತ್ಯಾದಿ...

ಜಗದೆಲ್ಲ ಕತ್ತಲ ಅಟ್ಟಾಡಿಸಿ ಓಡಿಸೋ ಬೆಳಗೂ ನೀನಿಲ್ಲದ ನನ್ನೆದೆಯ ನಿರ್ವಾತವ ತುಂಬಲಾರದೇ ಸೋಲುತ್ತದೆ...
ಮೌನದೆದುರು ಮೂಕ ನಾನು...
#ಕನಸಿಲ್ಲದ_ಹಾದಿ...

ಪ್ರೀತಿಗೆ ಪ್ರೀತಿಯೊಂದೇ ಉಡುಗೊರೆ ಅಂತಂದವನೂ ನಾನೇ - ಅಷ್ಟೆಲ್ಲ ಪಡೆದು ಇಷ್ಟೇ ಇಷ್ಟನೂ ಕೊಡಲಾಗದೇ ಕೈಸೋತವನೂ ನಾನೇ..‌.
#ನಶೆ_ಇಳಿದ_ಹಗಲು...

ಪಾಪಿ ಕಾಲಿಗೆ ಹಾದಿ ಚೊಕ್ಕ ಅಭ್ಯಾಸವಾಗಿಹೋಗಿದೆ - ಕಣ್ಕಟ್ಟಿ ಬಿಟ್ರೂ ನಿನ್ನ ಮನೆ ದಣಪೆಗೇ ಬಂದು ನಿಲ್ಲತ್ತೆ...
ಅದೇ ಹೊತ್ತಿಗೆ ಅಷ್ಟು ದೂರದಲ್ಲಿ ಕಿಟಕಿಯಾಚೆ ನೆರಳು ಸರಿದರೆ ಕನಸ ಕಣ್ಣೀರಿಗೆ ಭಾವ ಮುಕ್ತಿ...
#ಖಾಲಿ_ಅಂಗಳ...

ನಾನಿಲ್ಲಿ ಪ್ರೇಮವ(?) ಹುಡುಕ್ಕೊಂಡು ಊರೆಲ್ಲ ಅಲೆದಲೆದು ಪರಮ ಸಭ್ಯ ಕತ್ತಲ ಹಾಸಿಗೆಯಲ್ಲಿ ಮೈ ಸುಕ್ಕಾಗಿ ನರಳುವಾಗ ಅದಾವುದೋ ಕೆಂಪು ದೀಪದ ಬೀದಿಯ ಒರಟು ಮೂಲೆಯಲಿ ಪ್ರೇಮ ತನಗಾಗಿ ಮೊಳ ಮಲ್ಲಿಗೆ ತಂದವನ ಕಣ್ಣಲ್ಲಿ ಮನಸಾರೆ ಅರಳುತ್ತಿತ್ತು...
#ಹಿಡಿ_ಮಣ್ಣು...
#ಮಾತಾಗದ_ಸತ್ಯಗಳು...
↶↩↨↨↪↷

ಪಾತ್ರೆಗೆ ಅಂಟಿಸಿರೋ ಕಂಪನಿ ಹೆಸರಿನ ಅಥವಾ ಬೆಲೆಯ ಬಿಲ್ಲೆಯನ್ನ ಕಿತ್ತಾಗ ಚೂರು ಅಂಟು ಹಾಗೇ ಉಳಿದುಬಿಡತ್ತೆ - ಅದನ್ನ ತೆಗೆಯೋಕೆ ಸೋಪಿನ ನೀರಲ್ಲಿ ತಿಕ್ಕಿ ತಿಕ್ಕಿ ತೊಳೀತಿರ್ತೀವಿ...
ಹಾಗೆನೇ ಬಂಧವೊಂದು ಕಳಚಿಕೊಂಡಾದ್ಮೇಲೂ ಅಷ್ಟೋ ಇಷ್ಟೋ ನೆನಪಿನ ಅಂಟು ಉಳಿದ್ಬಿಡತ್ತೆ - ಆದ್ರೆ, ಅಳಿಸಿ ಹಾಕೋಕಂತ ಜಾಸ್ತಿ ಉಜ್ಜಿದ್ರೆ ನಮ್ಮೆದೆಗೇ ಗಾಯ, ಹಾಗೇ ಬಿಟ್ರೆ ಏಕಾಂತ ಕೈಯ್ಯಿಟ್ಟಾಗೆಲ್ಲ ಅಂಟೋ ಕಲೆ...
#ಬಂಧ_ಸಂಬಂಧಗಳೆಂಬೋ_ಗರಗಸ...
↩↨↨↪↷

ಗುಮ್ಮನೆಂಬ ಸುಳ್ಳು ಮತ್ತು ಅಮ್ಮನ ಸೆರಗಿನ ಬಿಸಿ - ಪ್ರೀತಿಯ ಕಲಿಸಿದ ಮೊದಮೊದಲ ಗುರುಗಳು...
#ಎದೆಯ_ಪಾದ...

ಮಾತಾಗದ ಅವಳ ನೋವು ಕವಿತೆಗೂ ದಕ್ಕುವುದಿಲ್ಲ...
ಕಣ್ಣ ಹನಿಗಳ ಕುಡಿದು ಕನಸ ಪೊರೆದ ಜೀವ ಕಾವ್ಯ ಆಕೆ...
ಅವಳ ನಿಟ್ಟುಸಿರು ಶಾಪವಾಗುವುದಾದಲ್ಲಿ ಅವಳು ನೆನೆವ ದೇವರೂ ಸುಟ್ಟು ಹೋದಾನು...
#ಪೂಜೆಯಿಲ್ಲದ_ದೈವ_ಅವಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರಿಪ್ಪತ್ತೆಂಟು.....

ಖಾಲಿ ಕಣ್ಣು..... 

ಆಸೆ ಹುಟ್ಟದೇ ಇರುವುದಕ್ಕೂ ಆಸೆಗಳ ಬುಧ್ಯಾಪೂರ್ವಕ ಕೊಂದುಕೊಳ್ಳುವುದಕ್ಕೂ ನಡುವೆ ಶರಧಿ ಈಜುವ ಸುಸ್ತು...
#ಬದುಕು_ಬವಣೆ...

ಮಾತು ಜರಿಯುತ್ತೆ, ಮೌನ ಇರಿಯುತ್ತೆ - ಹೊಸ ಹಾದಿಯಿದ್ದರೆ ಹೇಳು ನಿನ್ನ ಸೇರಲು, ನನ್ನ ನೀಗಿಕೊಳ್ಳಲು...
#ಕನಸೇ...
⇋↶↷⇌

ವೇದಿಕೆ ಮೇಲಿನ ಜೊಳ್ಳು ನಗುವನ್ನು ಒಳಮನೆಗೂ ಎಳೆದು ತಂದುಕೊಳ್ಳೋದಂದ್ರೆ ಎದೆಯ ಜೀವಂತಿಕೆಯನ್ನು ಖುದ್ದು ಕೊಂದ್ಕೋತಿದೀವಿ ಅಂತಲೇ ಅರ್ಥ...
ನಮ್ಮೊಟ್ಟಿಗಾದರೂ ನಮ್ಮ ಪ್ರೀತಿ ಸಹಜವಾಗಿರಲಿ...
#ಒಣ_ಔಪಚಾರಿಕತೆ...
⇋↶↷⇌

ವ್ಯಕ್ತಪಡಿಸಿದರೆ ಮಾತ್ರ ಪ್ರೀತೀನಾ...?
ಅಲ್ಲ...
ಮತ್ತೆಂತಾ ಕುಸುಕುಸು ನಿಂದು...??
ತನ್ನದೆಂಬ ಮುಚ್ಚಟೆಯಲಿ ಅಕಾರಣವೆಂಬಂತೆ ವ್ಯಕ್ತವಾಗುತ್ತಾ ಬೆಸೆಯೋದು ಪ್ರೀತಿ ತನ್ನೆಲ್ಲ ಮುಖಗಳಲಿ ಅಗಲಗಲ ಬೆಳೆಯುವ ಮತ್ತು ಬಾಳುವ ಸಹಜ, ಸರಳ ರೀತಿ...
ಅರಳಿದರೇ ಅಲ್ವಾ ಹೂವ ಘಮ ಗಾಳಿಗುಂಟ ಬಯಲೆಲ್ಲ ಹರಡುವುದು...
#ನಾಯಿಬಾಲ...
⇋↶↷⇌

ಉರುಳಾಡಿ ನಕ್ಕರೂ ಎದೆಯ ಚುಚ್ಚಿ ಹಿಡಿದ ಖಾಲಿತನದ ಮಂಜುಗತ್ತಿ ಮುಕ್ಕಾಗುವುದಿಲ್ಲ - ಅಳಲಾರದವನ ಅಳಲು ಕೇಳಲು ಒಂದಾದರೂ ಹೆಗಲು ಗಳಿಸದವನ ಅಸ್ವಸ್ಥ ಸಂಜೆಗಳ ಎದೆಯ ಗಾಯದ ಮೇಲೆ ಚಂದಿರನೂ ಉಪ್ಪು ಸುರಿಯುತ್ತಾನೆ...

ಒತ್ತಡವೇ ಎಲ್ಲರನಾಳುವ ಜಗದಲ್ಲಿ ಬದುಕು ಅಳುವಾಗ ನಿನಗೆ ನಿನ್ನದೇ ಹೆಗಲು - ಸಾವು ಗೆದ್ದಾಗ ಸುತ್ತ ನೂರು ಕಣ್ಣು - ಒಂದು ನಿಮಿಷ ಮೌನ...

ಬರುವ ಸುದ್ದಿ ಕೊಟ್ಟಮೇಲೆ ಸುಖಾಸುಮ್ಮನೆ ಕಾಯಿಸಬಾರದು.‌‌..
ಹಾದಿಗೆ ಕಣ್ಣು ನೆಟ್ಟು, ಕುತ್ಗೆ ಸೆಳೆಸುವಾಗಲೂ ಕ್ಷಣಕೊಂದು ಪುಳಕದ ಹೆಜ್ಜೆ ತುಳಿಯಲು ಸಾವೇ ನೀನೇನು ಹೊಸ ಹರೆಯದ ಹುಚ್ಚು ಪ್ರಣಯವಾ...
#ಒಂದು_ಸುಳ್ಳೇಪಳ್ಳೆ_ಕನಸೂ_ಇಲ್ಲದ_ಕತ್ತಲು...
⇋↶↷⇌

ಎದೆ ಮಂಡಲದ ಐಬು ಕಣ್ಣ ಗೋಳದಲಿ ಕದಲಿದರೆ ನೋಟದಲ್ಲಿ ಮಸಣ ಕಳೆ...
ಸೋತ ಕಣ್ಣಿನ ನಗೆಯನ್ನು ಸೋಲದಂತೆ ಕಾಯ್ದು ತೋರುವ ಹಡಾಹುಡಿಯ ಬೇಗೆ...
ಹಿಂದೆ ದಾರಿ ಇಲ್ಲ, ಮುಂದೆ ಗೊತ್ತಿಲ್ಲ - ನಿಂತಲ್ಲೇ ನಿಂತವನಲ್ಲಿ ಏನು ಗಿಟ್ಟೀತು ಮಣ್ಣು ಮಸಿ...
ಮುಂದೆ ಹೋಗಲೆಂಬ ಆಶಯಕ್ಕೋ, ಹಿಂದುಳಿದು ಹೆಗಲ ಹೊರೆಯಾದೇನೆಂಬ ಒಳಭಯಕ್ಕೋ ಬೆಸೆದ ಹಸ್ತಗಳ ಬೆರಳ ಬಿಗಿ ಸಡಿಲಿಸಿದ್ದು - ಒಟ್ನಲ್ಲಿ ಕಳಚಿ ಹೋದದ್ದು ಮಾತ್ರ ಎದೆಯ ಪ್ರೀತಿ ತಂತುವೇ...
ಈಗಿಲ್ಲಿ ಜೊತೆ ಉಳಿದದ್ದು ನಿನ್ನೆಗಳ ಹಿಕ್ಕೆಯಂಥ ನೆನಪುಗಳ ಕನವರಿಕೆ ಅಷ್ಟೇ...
#ಕನಸು_ಸತ್ತ_ಅನಾಥ_ಬಿಂದು...
⇋↶↷⇌

ಬಂಧಿಸುವುದನ್ನು ಮನುಷ್ಯನಿಂದ ಕಲಿಯಬೇಕು - ಖರೇಖರೆ ಜೇಡನೂ ನಾಚಬೇಕು...
#ಮುಷ್ಟಿಯಲಿ_ತರಹೇವಾರಿ_ಹೆಸರು...
⇋↶↷⇌

ನೆಪಕಾದರೂ ಜೀವಿಸುತ್ತಿರುವ ಭಾವ ತುಂಬುವ ಒಂದಾದರೂ ಸಾಕ್ಷಿ ತೋರು ಬೆಳಕೇ - ಚೂರೇ ಚೂರು ಇರುಳ ಋಣಭಾರ ಇಳಿದೀತು ಎದೆಯಿಂದ...
#ಖಾಲಿ_ಕಣ್ಣು...

ಕನಸುಗಳೇ ದೂರ ನಿಲ್ಲಿ - ನಿದ್ದೆ ಬೇಕಿದೆ...
ಬದುಕು ಬಿಚ್ಚಿಕೊಂಡರೂ, ಸಾವು ಸುಳಿದರೂ ಕಣ್ಣೇ ಸೋಲುವುದು...
#ಗಾಢ_ನಿದಿರೆಯೇ_ಪ್ರಾರ್ಥನೆ...
⇋↶↷⇌

ಇರುಳ ಪಾಟೀಚೀಲದೊಳಗೆ ಹಳಹಳಿಕೆಯ ಕನಸುಗಳ ಬಚ್ಚಿಟ್ಟು ಕಣ್ಣ ನಿದ್ದೆ ಕೊಂದ ಬದುಕೇ ಹಗಲ ನಿತ್ರಾಣಕೂ ನಿನ್ನನಲ್ಲದೇ ಬೇರೇನ ಹಳಿಯಲಿ...
"ಇದೇ ಕೊನೆಯ ನಿದ್ದೆ" ಅಂದುಕೊಂಡೇ ಕಣ್ಮುಚ್ಚುತ್ತೇನೆ ಪ್ರತಿ ರಾತ್ರಿ...
"ಇದು ಹೊಸತೇ ನಾನು" ಎಂದುಕೊಂಡೇ ಮುಸುಕು ಸರಿಸಿ ಏಳುತ್ತೇನೆ ಎಲ್ಲಾ ಹಗಲೂ...
ಎರಡೂ ಎಷ್ಟು ಚಂದನೆ ಸುಳ್ಳುಗಳು - ನಿನ್ನೆಯಲ್ಲಿಯೇ ಇದ್ದು ನಾಳೆಯ ಹಂಬಲಿಸೋಕೆ...
#ನಾನೆಂಬೋ_ತಲೆತಿರುಕ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)