Monday, May 6, 2013

ಗೊಂಚಲು - ಏಳು x ಹತ್ತು + ಮೂರು.....

ಮತ್ತಷ್ಟು ತುಂಡು ಭಾವಗಳು -
ಆಗಾಗ ಅಲ್ಲಲ್ಲಿ ಉಲಿವ ಪ್ರೇಮದ ಕೊಳಲು.....
(ದಯವಿಟ್ಟು ಇಲ್ಲಿನ ಯಾವ ಭಾವಗಳಿಗೂ ಕಾರಣ ಕೇಳಬೇಡಿ)

ಮುಂಬೆಳಗಲ್ಲಿ ಕೇಳಿದ ನಿನ್ನ ಇನಿದನಿ - ಈ ಇಳಿ ಸಂಜೆಯಲೂ ಕಿವಿಯಲಿ ರಿಂಗಣಿಸುತಲಿದ್ದು - ಈ ಸೋನೆ ಮಳೆಯೊಂದಿಗೆ ಸೇರಿ ನನ್ನ ಮನವ ಮತ್ತೇರಿಸುತಿದೆಯಲ್ಲೆ ನನ ಗೆಳತಿ...

ನಿನ್ನ ಗುಂಗಲ್ಲಿ ಅಂದು ಆ ಪುಸ್ತಕದ ಕೊನೆ ಪುಟದ ಅಂಚಲ್ಲಿ ನಾ ಗೀಚಿದ್ದ ನವಿಲುಗರಿ ಇಂದು ನನ್ನ ಅಣಕಿಸುತ್ತಿದೆ....
ಚಿತ್ರದಾ ನವಿಲಗರಿಗೂ ಜೀವ ಬಂದೀತು ಮತ್ತೆ ಆ ನಿನ್ನ ನಗು ನನ್ನದಾದ ದಿನ...

ನೀ ಬಂದೀಯೆಂಬ ನಂಬಿಕೆಯ ಕನಸಿಂದಲೇ ಬದುಕಿಗೆ ಬಣ್ಣ ಬಂದಿದೆ ಕಣೆ...
ಇನ್ನು ನೀ ಬಂದೇ ಬಿಟ್ಟರೆ... 
ಬದುಕು ಬರೀ ಸಂಭ್ರಮವೇ ಸಂಭ್ರಮ... 
ಆದರೂ ಸಣ್ಣದೊಂದು ಅಳುಕು ಇದೆಲ್ಲಾ, ನೀ ಬರಬೇಕು ಎಂಬುದೆಲ್ಲಾ ನನ್ನ ಅತಿಯಾಸೆಯಾದೀತಾ...

ನಿನ್ನ ಪ್ರೀತಿ ಜೊತೆಯಿರುವುದಾದರೆ ಸದಾ - ಅಳಿವಿನ ಮಾತೇ ಇಲ್ಲದ ಬದುಕ ಪ್ರೀತಿ ನನ್ನದಾದೀತು.... 
ಹೇಳು ಬರುವೆಯಾ ಜತೆಯಾಗಿ ಬದುಕ ತುಂಬಾ...?

ಕೈಯಾಸರೆ ನೀಡೆಂದ ಗೆಳತಿಗೆ -
ನಿನಗಾಸರೆಯಾದೀತಾದರೆ ನನ್ನವೆರಡೂ ಕೈಗಳು ನಿಂದೇ ಕಣೆ - ನಾನಿರುವವರೆಗೂ...
ನೆನಪುಗಳಲಿ ನಗುವೆಯಾದರೆ ನಾನಳಿದಮೇಲೂ ಅವು ಬರೀ ನಿನ್ನವೇ...

ನಾಳಿನ ದುಃಖದ ಭಯಕ್ಕೆ ಇಂದಿನ ಈ ಕ್ಷಣದ ನಗುವ ಕಳಕೊಳ್ಳಲಾರೆ ನಾನು...
ಈ ಕ್ಷಣದ ನಿನ್ನೊಲವಿಗೆ ಬದುಕ ಪೂರ್ತಿಯ ಖುಷಿಗಳ ನಗುತಲೇ ತ್ಯಜಿಸಬಲ್ಲೆ...
ಈ ಕ್ಷಣದ ನಿನ್ನೊಲವ ನಗೆಯ ನೆನಪೆ ಸಾಕು ನಾ ನಾಳೆಗಳಲಿ ನಗುತಿರಲು...

ಕನಸಿನೂರಲ್ಲಿ ಕಂಡ ಚೆಲುವಿನ ಚಿತ್ರ ಬಿಡಿಸಿದೆ...
ಅದೀಗ ನಿನ್ನನೇ ಹೋಲುತಿದೆ - ಬದುಕಿಗೀಗ ಬಣ್ಣ ಬಂದಿದೆ...

ಮೊದಲ ಮಳೆಯ ತಂಪಲ್ಲಿ ನಿನ್ನ ನೆನಪಿನ ಘಮ... 
ಎದೆಯಲೆನೋ ಮಧುರ ಯಾತನೆ...

ಮಾತ ಮರೆಸಿದೆ ಗೆಳತಿ ನಿನ್ನೊಲವ ರೀತಿ... 
ಎದೆಯ ಮುತ್ತಂತೆ ನನಗೆ ಆ ನಿನ್ನ ಪ್ರೀತಿ... 
ಮನದ ಬಾಗಿಲ ತೆರೆದು ಮಲಗೆನ್ನ ಒಲವೆ... 
ಕನಸಲಿ ಬಂದು ತೊಡಿಸುವೆ ಮುತ್ತಿನೊಡವೆ...

ಈ ಚಂದಮ ಯಾಕಿಷ್ಟು ಕಾಡ್ತಾನೆ ನನ್ನ... 
ಅಮ್ಮನ ಮಡಿಲ ಕಂಪಿನಂತೆ - ನಿನ್ನ ನಗೆಯ ಬೆಳಕಿನಂತೆ...

ಬಾನ ಬಯಲಲ್ಲಿ ನಗುವ ಬಂಡಿ ಚಂದಿರ - ಒಟ್ಟೊಟ್ಟಿಗೆ ಅಮ್ಮನ ಹಣೆಯ ಬಿಂದಿಯಂತೆ ಮತ್ತು ನಿನ್ನ ಕೆನ್ನೆ ಗುಳಿಯಂತೆ ಗೋಚರಿಸಿ ನನ್ನ ಕಾಡುವ ಪರಿಯ ಹೇಗೆ ಅರುಹಲೆ ನಿನಗೆ ನನ್ನ ಪುಟ್ಟ ಗೆಳತಿ...

ನೀ ದೂರ ಮಾಡಿದ ಮೇಲೆ ನಿನ್ನೆದುರು ನಿಲ್ಲುವ ನೋವ ಭರಿಸುವ ಶಕ್ತಿ - ನಿನ್ನೆದುರು ಅತ್ತು ಹಗುರಾಗಲೂ ಆಗದೇ ಮಿಡುಕಾಡುವ ನನ್ನ ಪುಟ್ಟ ಹೃದಯಕ್ಕೆಲ್ಲಿಂದ ಬರಬೇಕು ಗೆಳತಿ...

ಯಾರೂ ಯಾರದೇ ಕನಸಿನ ಪೂರ್ಣ ಚಿತ್ರವಾಗಲು ಆಗದು... 
ಕನಸಿನ ಚಿತ್ರದ ಅರ್ಧ ಬೆಳಕು ಸಿಕ್ಕರೂ ಕನಸುಗಾರನ ಬದುಕಿಗೆ ಹೊಸ ಬಣ್ಣ ಬರುತ್ತೆ ಕಣೆ... 
ಪೂರ್ಣ ಚಿತ್ರವೇ ಸಿಕ್ಕುಬಿಟ್ಟರೆ ಬದುಕಿಗೆ ಬಡಿದಾಡಲು ಕಾರಣವೇ ಇಲ್ಲದಂತಾದೀತಲ್ಲವೆ...

ನೀನಿರುವವರೆಗೂ ನಿನ್ನ ನೆರಳು ಸತ್ಯವೆ... 
ಬೆಳಕು ಸತ್ಯವಾದರೆ ನೆರಳೂ ಸತ್ಯವೇ ಮತ್ತು ನಿತ್ಯವೇ ಗೆಳೆಯಾ...

ಆ ಹಾಡು ನೆನಪಿದೆಯಾ... ?
ಕನಸಲ್ಲಿ ಬರುವ ರಾಜಕುವರನ ಕಣ್ಣಲ್ಲಿ ಕಣ್ಣಿಡು ನೆನಪಾದೀತು ಆ ಹಾಡು...
ಮಾತಿಲ್ಲದೂರಲ್ಲಿ ಮುಸ್ಸಂಜೆ ಮಬ್ಬಲ್ಲಿ , ನಾಕು ಕಂಗಳು ಒಂದೆ ಭಾವದಲ್ಲಿ ಹಾಡುತಿದ್ದ - ಒಲವು ಜಿನುಗುತಿದ್ದ ಮನಗಳ ಮಧುರ ಭಾವಗೀತೆ...

ಮನಸುಗಳ ಅರಳಿಸುವಂಥ ಕನಸುಗಳ ಹೊತ್ತು ತರುವ ಬಂಡಿ ಚಂದಿರ ಬಾನ ತುಂಬ ಹಾಲು ಚೆಲ್ಲಿ ನಗುತಲಿರುವ... 
ಯಾವ ಮಧುರ ನೆನಪೊ ಅವನ ಮನದಲ್ಲಿ... 
ಪಾಪಿ ನನ್ನ ನಿದ್ದೆ ಕೊಲ್ಲುವ...

ಗೆಳತೀ - ನೀ ಬಂದ ಮೇಲೆ ಮನಸಿಗೆ - ಕನಸು ಸಿಹಿಯಾಗದಿದ್ದೀತೇ..?

ತಂಗಾಳಿ, ಬೆಳದಿಂಗಳು, ಸಣ್ಣ ಮೌನ, ತಾರಸಿಯ ಮೇಲೆ ಒಂಟಿ ಅಲೆದಾಟ... 
ಹಾಳು ಮನಸಲ್ಲಿ ಹುಚ್ಚುಚ್ಚು ಕನಸುಗಳು...

ಕ್ಷಮಿಸಿಬಿಡು ಗೆಳತೀ - ನಿನ್ನ ಕಣ್ಣಂಚ ನಗುವಾಗಬೇಕೆಂದು ಬಯಸಿದೆ - ಬದುಕ ಕರುಣೆ ತಪ್ಪಿ ಕಣ್ಣ ಹನಿಯಾಗಿ ನಿಂಗೆ ನೋವ ತಂದೆ...

ಗೆಳತೀ - ಹೃದಯಗಳ ಭಾವನಾತ್ಮಕ ಸಂವಹನವನ್ನು ದೈವಿಕವೆಂದರೆ ನೀನು, ತಪ್ಪೆನ್ನಲಾರೆ ನಾನು....
ಪ್ರೀತಿಯೇ ದೇವರಲ್ಲವಾ...

ತಾರೆಗಳೂ ಮೋಹಗೊಳ್ಳುವಂತ ಚೆಲುವ ನಿನ್ನ ರಾಜಕುವರ...!!!
ಹೊರ ಹೋಗದಂತೆ ಬಚ್ಚಿಟ್ಟುಕೋ ಕಣ್ಣ ಪಾಪೆಯಲ್ಲಿ....

ಗೆಳತೀ -
ಆಗಸದಿ ಚಂದಿರ ನಗುತಲಿರುವ... 
ಯಾಕೇಂತ ಕೇಳಿದ್ರೆ ಹೇಳದೆ ಸತಾಯಿಸುತಿರುವ... 
ನಿಜಾ ಹೇಳು ಏನ ಹೇಳಿದೆ ನೀ ಅವನಿಗೆ ಅಥವಾ ಹಾಗೆ ಸುಮ್ಮನೆ ಒಂದು ಪಪ್ಪಿ ಕೊಟ್ಟೆಯಾ....

ಸುರಿದ ಸಣ್ಣನೆಯ ಸೋನೆ - ಎದೆಯ ನೆಲದಲಿ ಇಂಗಿ - ಭಾವಗಳ ಝರಿಯಾಗಿ ಹೊರಚಿಮ್ಮುವುದು ಎಂಥಾ ಸೊಗಸು....

ಕಣ್ಮುಚ್ಚೆ ನನ ಗೆಳತಿ ಕನಸಲ್ಲಿ ಲಾಲಿ ಹಾಡುವೆ... 
ರಾಜಕುಮಾರ ಕುದುರೆಯೇರಿ ಬರುವ ಕಥೆಯ ಹೇಳುವೆ... 
ನಿದ್ದೆಯಲ್ಲೂ ನಾಚಿ ರಂಗೇರುವ ನಿನ್ನ ಮೊಗವ ಕಂಡು ನಾ ನನ್ನೇ ಮರೆವೆ... 
ಜೋ ಜೋ ಲಾಲಿ ಜೋ ಲಾಲಿ ಜೋಕಾಲಿ...

ಅವಳ ಕೇಳಿದೆ - 
ಕನಸಿನೂರಲ್ಲಿ ಕೋತು ಮುಗುಳ್ನಗುವಲ್ಲೆ ಕಾಡುವ ಚೆಲುವೆಗೊಂದು ಫೋನು ಮಾಡಬೇಕಿತ್ತು... 
ನಂಬರ್ ಕೊಡ್ತೀಯಾ...?
ಕನಸಲ್ಲೆ ಕೇಳೆಂದು ಕಣ್ ಮಿಟುಕಿಸಿ ನಕ್ಕಳು...:)

ಆ ಸಂಜೆ ಇಂತದೇ ಛಳಿಗಾಳಿಯಿತ್ತು ಮತ್ತು ನಿನ್ನ ಮುಂಗುರುಳು ತುಂಟಾಟವಾಡಿ ನನ್ನ ಕಾಡುತ್ತಿತ್ತು...

ಮಳೆಯ ಸೂಚನೆ - ನೀ ಬರುವ ಸೂಚನೆಯಾ ಮನಕೆ - ಸುರಿವ ಪ್ರೀತಿಜಲ ಹೊತ್ತು...
ಮಣ್ಣ ಕಂಪಿನ ಮೂಲಕ ನಿನ್ನೊಲವ ಕನಸು ನನ್ನ ಜೀವಕೋಶವ ಸೇರಿ...
ಎದೆಯ ರಂಗಮಂಟಪದಲೀಗ ನಿನ್ನ ಗೆಜ್ಜೆಯ ನಾದ...
ಉಸಿರ ತಿತ್ತಿಯಲೆಲ್ಲ ಪ್ರೇಮ ಜೀವೋನ್ಮಾದ...
ನಾನಾಗಲೇ ನಿನ್ನ ಕೆನ್ನೆಗುಳಿಯಲ್ಲಿ ನನ್ನ ಕಳಕೊಂಡು ಜನ್ಮಾಂತರಗಳೇ ಸಂದುವಲ್ಲೇ...
ಹೇಳು ನಿನ್ನೊಲವ ನನ್ನೊಲವಲಿ ಬೆರೆಸಿ ಈ ಸುರಿವ ಸೋನೆಯಲಿ ನಾಕು ಹೆಜ್ಜೆ ಜತೆ ಬಂದು ಬದುಕಿಗೂ ಗುಲ್ಮೊಹರ ಬಣ್ಣ ತುಂಬುವೆಯಾ...
ಬರುವೆಯಾದರೆ ನೀನು ಇನ್ನಷ್ಟು ಕಾಲ ನಾ ಉಸಿರಾಡಿಯೇನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, May 2, 2013

ಗೊಂಚಲು - ಏಳು x ಹತ್ತು + ಎರಡು.....

ಅರೆಜ್ಞಾನಿಯ ಒಂದಷ್ಟು ತುಂಡು ಭಾವಗಳು.....
(ದಯವಿಟ್ಟು ಇಲ್ಲಿನ ಯಾವ ಭಾವಗಳಿಗೂ ಅರ್ಥ ಕೇಳಬೇಡಿ)


ಸಾವ ಭಯ ಗೆಲ್ಲೆಂದು ಬೋಧಿಸುವಾತನನ್ನು ಸನ್ಯಾಸಿಯೆಂದು ಗೌರವಿಸಿ ಸಾಷ್ಟಾಂಗವೆರಗುತ್ತೇವೆ.
ಸಾವ ಭಯವನ್ನು ನಿಜಕ್ಕೂ ಗೆದ್ದ ಸೈನಿಕನನ್ನು ನೆನೆಸಿಕೊಳ್ಳಲೂ ಪುರುಸೊತ್ತಿಲ್ಲ.
ನಿಜವಾದ ಸನ್ಯಾಸಿ ಯಾರು..?
ಸೈನಿಕನೇ ಅಲ್ಲವೇ..??

&&&

ಅವರವರ ಆಸಕ್ತಿಯಂತೆ ಅವರವರ ಬದುಕು.
ಪ್ರತಿಯೊಬ್ಬನೂ ತನ್ನ ಆಸಕ್ತಿಗಳಿಗೆ ತಕ್ಕಂತೆ, ಅವುಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲೇ ತನ್ನ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸ್ತಾನೆ.
ಒಬ್ಬೊಬ್ಬರ ಆಸಕ್ತಿ ಒಂದೊಂದರಲ್ಲಿ.
ಹೆಣ್ಣು, ಹೊನ್ನು, ಮಣ್ಣು, ದೇವರು, ದೆವ್ವ, ರಿಕಗ್ನಿಷನ್ ಹೀಗೆ ತರಹೇವಾರಿ ಆಸಕ್ತಿಗಳು.
ಅವರವರ ಆಸಕ್ತಿಗಳ ಸುತ್ತಲೇ ಅವರವರ ಬದುಕೂ ಗಿರಕಿಹೊಡೆಯುತ್ತಿರುತ್ತದೆ.
ಒಮ್ಮೆ ಮನಕ್ಕೆ ಒಪ್ಪಿದ ವೃತ್ತದಿಂದಾಚೆ ಹೆಜ್ಜೆಯಿಡಲು ಎಲ್ಲರೂ ಹಿಂಜರಿಯುತ್ತಾರೆ.
ಯಾಕೆ.? 
ಬಾವಿಯಿಂದಾಚೆ ಇಣುಕಿದರೆ ಸಾಗರ ಕಂಡೀತು ಎಂಬ ಭಯವಾ..?

&&&

ಕನಸು ಕಲ್ಪನೆಗಳನೆಲ್ಲ ಬದಿಗೊತ್ತಿ ಕೇವಲ ವಾಸ್ತವದ, ವರ್ತಮಾನದ ಚಿಂತನೆಯನ್ನು ಮಾತ್ರ ಮಾಡುತ್ತಲಿದ್ದರೆ ಬದುಕು ಯಾಂತ್ರಿಕವಾಗುತ್ತದಷ್ಟೇ.
ಬದುಕು ಯಾಂತ್ರಿಕವಾಗುವುದಕ್ಕಿಂತ ನರಕ ಮತ್ತೊಂದಿದೆಯಾ...
ಎಲ್ಲೋ ಓದಿದ ಗಾಲಿಬ್ ರ ಮಾತು ನೆನಪಾಗುತ್ತೆ - "ಒಬ್ಬ ಬ್ರಾಹ್ಮಣ ಹೇಳಿದ್ದಾನೆ. ಈ ವರ್ಷ ತುಂಬಾ ಚೆನ್ನಾಗಿದೆ ಎಂದು. ಈ ಮನಸನ್ನು ಇದೊಂದು ವರ್ಷ ಸಂತೋಷವಾಗಿಟ್ಟುಕೊಳ್ಳಲು ಅಷ್ಟು ನೆಪ ಸಾಕು..." ಎಂಬುದು ಆ ಮಾತಿನರ್ಥ.ಅವರ ಆ ಮಾತಿನಂತೆಯೇ ಈ ಕನಸು ಕಲ್ಪನೆಗಳೆಲ್ಲ. ಅವುಗಳ ಸಾರ್ಥಕ್ಯ ಅದಷ್ಟೇ. ಮನಸನ್ನು ಆ ಕ್ಷಣಕ್ಕೆ ಖುಷಿ ಖುಷಿಯಾಗಿಡುವುದು...

&&&

ಬದುಕೆಂಬ ಮೂರು ಚರಣಗಳ ಭಾವಗೀತೆಯಲ್ಲಿ ಪಲ್ಲವಿ ಜನನವಾದರೆ - ಕೊನೆಯ ಚರಣ ಮರಣ - ನಡುವಿನ ಅನುಪಲ್ಲವಿ ಜೀವನದಂತೆ. 
ಪಲ್ಲವಿ ಮತ್ತು ಕೊನೆ ಚರಣದ ನಡುವಣ 'ಅನುಪಲ್ಲವಿಯನ್ನು' ಎಷ್ಟು ಚೆನ್ನಾಗಿ ರಚಿಸಿ ಹಾಡಬಲ್ಲೆ ಎಂಬುದು ನಮ್ಮ ಬದುಕಿನ ಯಶಸ್ಸನ್ನು ಸೂಚಿಸುತ್ತದೆ.
ಅನುಪಲ್ಲವಿಯನ್ನು ಚಂದಗೆ ರಚಿಸಿ ಹಾಡಬಲ್ಲವರಾದಾಗ ಪಲ್ಲವಿಗೂ - ಕೊನೆ ಚರಣಕ್ಕೂ ಸಾರ್ಥಕ್ಯ ಒದಗಿಸಬಲ್ಲವರಾಗುತ್ತೇವೆ...

&&&

ಎಲ್ಲೋ ಅರಳುವ ಪ್ರೇಮ - ಇನ್ನೆಲ್ಲೋ ಕರಗುವ ಕಾಮ...
ಸನ್ನಿ ಲಿಯೋನ್ ಳ ಎದೆಯ ಸಂಪತ್ತಿಗೆ ರಾತ್ರಿ ಕನಸಲ್ಲಿ ಕಾಮ ಬೆವರುತ್ತಿದ್ದರೆ, ಮುಂಜಾನೆದ್ದು ಬಾಗಿಲಾಚೆ ಕಣ್ಬಿಟ್ಟರೆ ಎದೆಯ ಸೊಬಗೇ ಇಲ್ಲದ ಪಕ್ಕದ ಮನೆ ಮಾಧುರಿ ಕಣ್ಣಲ್ಲೇ ಪ್ರೇಮದ ರಂಗೋಲಿಗೆ ಚುಕ್ಕಿಯಿಡುತ್ತಿರುತ್ತಾಳೆ..
ಬದುಕೂ ಹಾಗೇ...
ಎಲ್ಲೋ, ಹೇಗೋ, ಯಾವುದರಲ್ಲೋ ಮೂಡುವ ಪ್ರೇಮ (ಇಷ್ಟ) - ಇನ್ನೆಲ್ಲೋ, ಇನ್ಹೇಗೋ, ಈಡೇರುವ ಕಾಮ (ಇಚ್ಛೆ)...
ಸಂತೆ ನಡುವೆ ಕೈಹಿಡಿವ ಪ್ರೇಮ - ಸಂಜೆ ಏಕಾಂತದಲಿ ಕಾಮವಾಗಿ ಕೆರಳುವ ಪರಿ ಏನೋ...
ಒಣ ಹುಲ್ಲ ಬಣವೆಯಲ್ಲಿ ಕಳೆದುಕೊಂಡ ಸೂಜಿಯಂಥ ನನ್ನವಳ ಪ್ರೇಮ - ಯಾರವಳೂ ಅಲ್ಲದ ಇನ್ನೊಬ್ಬಾಕೆಯ ಬೆವರಲ್ಲಿ ಲೀನವಾಗಿ ಸಂಭ್ರಮಿಸಿತು.
ಛೆ..
ಬದುಕು - ಪ್ರೇಮ - ಕಾಮಗಳೆಲ್ಲದರ ಅರ್ಥ ವೈಶಾಲ್ಯವನ್ನು ಮೊಟಕುಗೊಳಿಸಿಬಿಟ್ಟೆನೇನೋ ಅಲ್ಲವಾ..?

&&&&&


ಯಾರದೋ ಮನಸಿಗೆ, ಇನ್ಯಾರದೋ ಬದುಕಿಗೆ ಒಲ್ಲದ ಅಥಿತಿಯಾಗಿ ಅನಿವಾರ್ಯವಾಗಿ ಬದುಕಿರಬೇಕಾದ ಪರಿಸ್ಥಿತಿ, ವಿಚಾರಶೀಲ ಮನಸ್ಸು ಮತ್ತು ದೀರ್ಘಾಯಸ್ಸು ಈ ಮೂರನ್ನೂ ಕೊಟ್ಟು ಅಲ್ಲೆಲ್ಲೋ ಕುಳಿತು ಮಜ ನೋಡುವ ಆ ದೇವರು - ಅವನಿದ್ದದ್ದೇ ಆದರೆ ಆತನ ಹಿಂಸಾ ವಿನೋದದೆಡೆಗೆ ನನ್ನ ಧಿಕ್ಕಾರವಿದೆ...

&&&&&

ದೇಹದ ಉಸಿರು ನಿಂತ ಕಾರಣಕ್ಕೆ ಕಣ್ಗಳಲ್ಲಿನ ಕನಸುಗಳೂ ಸಾಯಬೇಕೆ.
ದೃಷ್ಟಿದಾನ ಮಾಡೋಣ...
ಇನ್ಯಾರದೋ ಕನಸುಗಳಿಗೆ ಜೀವ ಬಂದು ಅಲ್ಲಿ ನಮ್ಮ ಕನಸೂ ಜೀವಂತ...

@@@

ಬಂಡೆಯ ಭಾವ ಸುತ್ತುವರಿದ ಬೆಟ್ಟಕ್ಕೆ ಮತ್ತು ಸುತ್ತ ಮೊರೆವ ನೀರಿಗೆ ಮಾತ್ರ ಅರ್ಥವಾದೀತು... ದೂರ ನಿಂತು ಸ್ವಾರ್ಥದ ಕಣ್ಣಲ್ಲಿ ನೋಡುವವರ ಮೂದಲಿಕೆಗಳ ನೋವಿಗೆಲ್ಲಾ ನಿನ್ನ ಮನ ಬಂಡೆಯಾಗಲಿ...


@@@

ತುಂಬಾ ಪ್ರೀತಿಸುವ ನಿನ್ನೊಡನೆ ಪ್ರತಿ ಬಾರಿ ಜಗಳವಾಡಿದಾಗಲೂ ಇಬ್ಬರ ಮನಸ್ಸೂ ಇಷ್ಟಿಷ್ಟೇ ಬೆತ್ತಲಾಗುತ್ತಾ ಹೋಗಿ ಬಂಧವೊಂದು ಸದ್ದಿಲ್ಲದೇ ಸಾಯುತ್ತಿರುತ್ತದೆ. ನನ್ನೊಳಗಿನ ರಾಕ್ಷಸ ವಿಜಯದ ನಗು ನಗುತ್ತಾನೆ...


&&&

ಇನ್ನೂ ಏನೋ ಬೇಕಿದೆ ಎಂಬ ತುಡಿತದಲ್ಲೇ ಬದುಕ ಈ ಕ್ಷಣ ನಗುತಿದೆ ಮತ್ತು ಆ ತುಡಿತದಲ್ಲೇ ನಗಬೇಕಿದ್ದ ಬದುಕ ಹಲ ಕ್ಷಣಗಳು ನಲುಗಿದ್ದೂ ಇದೆ...

****

ಹುಡುಗ ಹುಡುಗಿಯರೆಂಬ ಬೇಧವಿಲ್ಲದೇ ಎಲ್ಲ ಒಟ್ಟಾಗಿ ಕೂಡಿ, ಕುಣಿದು, ಕುಪ್ಪಳಿಸುವ ಸುಂದರ ಬಾಲ್ಯದ ಹುಡುಗಾಟಗಳದ್ದು ಒಂದು ತೂಕವಾದರೆ; ಹುಡುಗ ಹುಡುಗಿಯನ್ನು - ಹುಡುಗಿ ಹುಡುಗನನ್ನು ಕಣ್ಣಂಚಲ್ಲೇ ಕದ್ದು ನೋಡುವ, ಒಬ್ಬರನ್ನೊಬ್ಬರು ವಿನಾಕಾರಣ ಹುಡುಕಿಕೊಳ್ಳುವ, ಕಣ್ಣಲ್ಲೇ ನಗುವ, ಮಾತಾಡುವ, ಸಿಟ್ಟಾಗುವ ತುಂಟ ಚೆಲ್ಲಾಟಗಳ ಯೌವನದ್ದೇ ಒಂದು ತೂಕ...

####


ಭರವಸೆಯನೇನೋ ಕೊಡಬಹುದು, ಜೊತೆ ನಡೆವುದು ಸೊಗಸೂ ಹೌದು... ಆದರೆ ನಿನ್ನ ಬದುಕೆಂಬುದು ಅಂತಿಮವಾಗಿ ನೀ ಮಾತ್ರ ನಡೆಯಬೇಕಾದ ಒಬ್ಬಂಟಿ ದಾರಿ ಅನ್ನೋದು ಬದುಕ ಕಟು ವಾಸ್ತವ ಕಣೋ... ನನ್ನೊಲವಿನ ಜೀವ ನೀನು ತಾನೇ ತಾನಾಗಿ ನಡೆವುದ ಕಲೀಬೇಕೆಂಬುದು ನನ್ನಾಸೆ ಕಣೋ ಮರೀ...

&&&

ಹುಚ್ಚಮ್ಮಾ... ಹಳೆಯ ಕೊಳೆಯ ತೊಳೆದುಕೊಂಡು ಹೊಳೆಯಬೇಕೆಂದರೆ ಹೊಸ ನೀರ ಆಳದಲ್ಲಿ ಮುಳುಗೇಳಬೇಕು ಕಣೇ ಚಿನ್ನಾ... ನಿನ್ನ ಬದುಕು ಭಾವ ಎರಡೂ ವಿಸ್ತರಿಸೀತು... ಹೊಸದರೆಡೆಗೆ ನಾಕು ಹೆಜ್ಜೆ ಇಡುವ ಬಾ ಜೊತೆ ಜೊತೆಗೆ... ನಾಕು ಹೆಜ್ಜೆ ನನ್ನೊಡನೆ ಬಂದೆಯಾದರೆ ಐದನೇ ಹೆಜ್ಜೆ ನಾನಿಲ್ಲದೆಯೂ ಖುಷಿಯಿಂದಲೆ ಹೊಸದರೆಡೆಗೆ ತುಡಿವಂತೆ ಬೆಳೆದು ನಿಲ್ಲುವಿಯಂತೆ...

@@@

ಮನಸು ಎಲ್ಲೋ ಕಳೆದು ಹೋಗಿದೆ. ಸಿಕ್ಕವರು ಹಿಂದುರುಗಿಸಿ...
ಹಿಂದಿರುಗಿಸಲು ಮನಸಾಗದಿದ್ದರೆ ನಿಮ್ಮದನ್ನಾದರೂ ನಂಗೆ ಕೊಡಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)