Monday, May 6, 2013

ಗೊಂಚಲು - ಏಳು x ಹತ್ತು + ಮೂರು.....

ಮತ್ತಷ್ಟು ತುಂಡು ಭಾವಗಳು -
ಆಗಾಗ ಅಲ್ಲಲ್ಲಿ ಉಲಿವ ಪ್ರೇಮದ ಕೊಳಲು.....
(ದಯವಿಟ್ಟು ಇಲ್ಲಿನ ಯಾವ ಭಾವಗಳಿಗೂ ಕಾರಣ ಕೇಳಬೇಡಿ)

ಮುಂಬೆಳಗಲ್ಲಿ ಕೇಳಿದ ನಿನ್ನ ಇನಿದನಿ - ಈ ಇಳಿ ಸಂಜೆಯಲೂ ಕಿವಿಯಲಿ ರಿಂಗಣಿಸುತಲಿದ್ದು - ಈ ಸೋನೆ ಮಳೆಯೊಂದಿಗೆ ಸೇರಿ ನನ್ನ ಮನವ ಮತ್ತೇರಿಸುತಿದೆಯಲ್ಲೆ ನನ ಗೆಳತಿ...

ನಿನ್ನ ಗುಂಗಲ್ಲಿ ಅಂದು ಆ ಪುಸ್ತಕದ ಕೊನೆ ಪುಟದ ಅಂಚಲ್ಲಿ ನಾ ಗೀಚಿದ್ದ ನವಿಲುಗರಿ ಇಂದು ನನ್ನ ಅಣಕಿಸುತ್ತಿದೆ....
ಚಿತ್ರದಾ ನವಿಲಗರಿಗೂ ಜೀವ ಬಂದೀತು ಮತ್ತೆ ಆ ನಿನ್ನ ನಗು ನನ್ನದಾದ ದಿನ...

ನೀ ಬಂದೀಯೆಂಬ ನಂಬಿಕೆಯ ಕನಸಿಂದಲೇ ಬದುಕಿಗೆ ಬಣ್ಣ ಬಂದಿದೆ ಕಣೆ...
ಇನ್ನು ನೀ ಬಂದೇ ಬಿಟ್ಟರೆ... 
ಬದುಕು ಬರೀ ಸಂಭ್ರಮವೇ ಸಂಭ್ರಮ... 
ಆದರೂ ಸಣ್ಣದೊಂದು ಅಳುಕು ಇದೆಲ್ಲಾ, ನೀ ಬರಬೇಕು ಎಂಬುದೆಲ್ಲಾ ನನ್ನ ಅತಿಯಾಸೆಯಾದೀತಾ...

ನಿನ್ನ ಪ್ರೀತಿ ಜೊತೆಯಿರುವುದಾದರೆ ಸದಾ - ಅಳಿವಿನ ಮಾತೇ ಇಲ್ಲದ ಬದುಕ ಪ್ರೀತಿ ನನ್ನದಾದೀತು.... 
ಹೇಳು ಬರುವೆಯಾ ಜತೆಯಾಗಿ ಬದುಕ ತುಂಬಾ...?

ಕೈಯಾಸರೆ ನೀಡೆಂದ ಗೆಳತಿಗೆ -
ನಿನಗಾಸರೆಯಾದೀತಾದರೆ ನನ್ನವೆರಡೂ ಕೈಗಳು ನಿಂದೇ ಕಣೆ - ನಾನಿರುವವರೆಗೂ...
ನೆನಪುಗಳಲಿ ನಗುವೆಯಾದರೆ ನಾನಳಿದಮೇಲೂ ಅವು ಬರೀ ನಿನ್ನವೇ...

ನಾಳಿನ ದುಃಖದ ಭಯಕ್ಕೆ ಇಂದಿನ ಈ ಕ್ಷಣದ ನಗುವ ಕಳಕೊಳ್ಳಲಾರೆ ನಾನು...
ಈ ಕ್ಷಣದ ನಿನ್ನೊಲವಿಗೆ ಬದುಕ ಪೂರ್ತಿಯ ಖುಷಿಗಳ ನಗುತಲೇ ತ್ಯಜಿಸಬಲ್ಲೆ...
ಈ ಕ್ಷಣದ ನಿನ್ನೊಲವ ನಗೆಯ ನೆನಪೆ ಸಾಕು ನಾ ನಾಳೆಗಳಲಿ ನಗುತಿರಲು...

ಕನಸಿನೂರಲ್ಲಿ ಕಂಡ ಚೆಲುವಿನ ಚಿತ್ರ ಬಿಡಿಸಿದೆ...
ಅದೀಗ ನಿನ್ನನೇ ಹೋಲುತಿದೆ - ಬದುಕಿಗೀಗ ಬಣ್ಣ ಬಂದಿದೆ...

ಮೊದಲ ಮಳೆಯ ತಂಪಲ್ಲಿ ನಿನ್ನ ನೆನಪಿನ ಘಮ... 
ಎದೆಯಲೆನೋ ಮಧುರ ಯಾತನೆ...

ಮಾತ ಮರೆಸಿದೆ ಗೆಳತಿ ನಿನ್ನೊಲವ ರೀತಿ... 
ಎದೆಯ ಮುತ್ತಂತೆ ನನಗೆ ಆ ನಿನ್ನ ಪ್ರೀತಿ... 
ಮನದ ಬಾಗಿಲ ತೆರೆದು ಮಲಗೆನ್ನ ಒಲವೆ... 
ಕನಸಲಿ ಬಂದು ತೊಡಿಸುವೆ ಮುತ್ತಿನೊಡವೆ...

ಈ ಚಂದಮ ಯಾಕಿಷ್ಟು ಕಾಡ್ತಾನೆ ನನ್ನ... 
ಅಮ್ಮನ ಮಡಿಲ ಕಂಪಿನಂತೆ - ನಿನ್ನ ನಗೆಯ ಬೆಳಕಿನಂತೆ...

ಬಾನ ಬಯಲಲ್ಲಿ ನಗುವ ಬಂಡಿ ಚಂದಿರ - ಒಟ್ಟೊಟ್ಟಿಗೆ ಅಮ್ಮನ ಹಣೆಯ ಬಿಂದಿಯಂತೆ ಮತ್ತು ನಿನ್ನ ಕೆನ್ನೆ ಗುಳಿಯಂತೆ ಗೋಚರಿಸಿ ನನ್ನ ಕಾಡುವ ಪರಿಯ ಹೇಗೆ ಅರುಹಲೆ ನಿನಗೆ ನನ್ನ ಪುಟ್ಟ ಗೆಳತಿ...

ನೀ ದೂರ ಮಾಡಿದ ಮೇಲೆ ನಿನ್ನೆದುರು ನಿಲ್ಲುವ ನೋವ ಭರಿಸುವ ಶಕ್ತಿ - ನಿನ್ನೆದುರು ಅತ್ತು ಹಗುರಾಗಲೂ ಆಗದೇ ಮಿಡುಕಾಡುವ ನನ್ನ ಪುಟ್ಟ ಹೃದಯಕ್ಕೆಲ್ಲಿಂದ ಬರಬೇಕು ಗೆಳತಿ...

ಯಾರೂ ಯಾರದೇ ಕನಸಿನ ಪೂರ್ಣ ಚಿತ್ರವಾಗಲು ಆಗದು... 
ಕನಸಿನ ಚಿತ್ರದ ಅರ್ಧ ಬೆಳಕು ಸಿಕ್ಕರೂ ಕನಸುಗಾರನ ಬದುಕಿಗೆ ಹೊಸ ಬಣ್ಣ ಬರುತ್ತೆ ಕಣೆ... 
ಪೂರ್ಣ ಚಿತ್ರವೇ ಸಿಕ್ಕುಬಿಟ್ಟರೆ ಬದುಕಿಗೆ ಬಡಿದಾಡಲು ಕಾರಣವೇ ಇಲ್ಲದಂತಾದೀತಲ್ಲವೆ...

ನೀನಿರುವವರೆಗೂ ನಿನ್ನ ನೆರಳು ಸತ್ಯವೆ... 
ಬೆಳಕು ಸತ್ಯವಾದರೆ ನೆರಳೂ ಸತ್ಯವೇ ಮತ್ತು ನಿತ್ಯವೇ ಗೆಳೆಯಾ...

ಆ ಹಾಡು ನೆನಪಿದೆಯಾ... ?
ಕನಸಲ್ಲಿ ಬರುವ ರಾಜಕುವರನ ಕಣ್ಣಲ್ಲಿ ಕಣ್ಣಿಡು ನೆನಪಾದೀತು ಆ ಹಾಡು...
ಮಾತಿಲ್ಲದೂರಲ್ಲಿ ಮುಸ್ಸಂಜೆ ಮಬ್ಬಲ್ಲಿ , ನಾಕು ಕಂಗಳು ಒಂದೆ ಭಾವದಲ್ಲಿ ಹಾಡುತಿದ್ದ - ಒಲವು ಜಿನುಗುತಿದ್ದ ಮನಗಳ ಮಧುರ ಭಾವಗೀತೆ...

ಮನಸುಗಳ ಅರಳಿಸುವಂಥ ಕನಸುಗಳ ಹೊತ್ತು ತರುವ ಬಂಡಿ ಚಂದಿರ ಬಾನ ತುಂಬ ಹಾಲು ಚೆಲ್ಲಿ ನಗುತಲಿರುವ... 
ಯಾವ ಮಧುರ ನೆನಪೊ ಅವನ ಮನದಲ್ಲಿ... 
ಪಾಪಿ ನನ್ನ ನಿದ್ದೆ ಕೊಲ್ಲುವ...

ಗೆಳತೀ - ನೀ ಬಂದ ಮೇಲೆ ಮನಸಿಗೆ - ಕನಸು ಸಿಹಿಯಾಗದಿದ್ದೀತೇ..?

ತಂಗಾಳಿ, ಬೆಳದಿಂಗಳು, ಸಣ್ಣ ಮೌನ, ತಾರಸಿಯ ಮೇಲೆ ಒಂಟಿ ಅಲೆದಾಟ... 
ಹಾಳು ಮನಸಲ್ಲಿ ಹುಚ್ಚುಚ್ಚು ಕನಸುಗಳು...

ಕ್ಷಮಿಸಿಬಿಡು ಗೆಳತೀ - ನಿನ್ನ ಕಣ್ಣಂಚ ನಗುವಾಗಬೇಕೆಂದು ಬಯಸಿದೆ - ಬದುಕ ಕರುಣೆ ತಪ್ಪಿ ಕಣ್ಣ ಹನಿಯಾಗಿ ನಿಂಗೆ ನೋವ ತಂದೆ...

ಗೆಳತೀ - ಹೃದಯಗಳ ಭಾವನಾತ್ಮಕ ಸಂವಹನವನ್ನು ದೈವಿಕವೆಂದರೆ ನೀನು, ತಪ್ಪೆನ್ನಲಾರೆ ನಾನು....
ಪ್ರೀತಿಯೇ ದೇವರಲ್ಲವಾ...

ತಾರೆಗಳೂ ಮೋಹಗೊಳ್ಳುವಂತ ಚೆಲುವ ನಿನ್ನ ರಾಜಕುವರ...!!!
ಹೊರ ಹೋಗದಂತೆ ಬಚ್ಚಿಟ್ಟುಕೋ ಕಣ್ಣ ಪಾಪೆಯಲ್ಲಿ....

ಗೆಳತೀ -
ಆಗಸದಿ ಚಂದಿರ ನಗುತಲಿರುವ... 
ಯಾಕೇಂತ ಕೇಳಿದ್ರೆ ಹೇಳದೆ ಸತಾಯಿಸುತಿರುವ... 
ನಿಜಾ ಹೇಳು ಏನ ಹೇಳಿದೆ ನೀ ಅವನಿಗೆ ಅಥವಾ ಹಾಗೆ ಸುಮ್ಮನೆ ಒಂದು ಪಪ್ಪಿ ಕೊಟ್ಟೆಯಾ....

ಸುರಿದ ಸಣ್ಣನೆಯ ಸೋನೆ - ಎದೆಯ ನೆಲದಲಿ ಇಂಗಿ - ಭಾವಗಳ ಝರಿಯಾಗಿ ಹೊರಚಿಮ್ಮುವುದು ಎಂಥಾ ಸೊಗಸು....

ಕಣ್ಮುಚ್ಚೆ ನನ ಗೆಳತಿ ಕನಸಲ್ಲಿ ಲಾಲಿ ಹಾಡುವೆ... 
ರಾಜಕುಮಾರ ಕುದುರೆಯೇರಿ ಬರುವ ಕಥೆಯ ಹೇಳುವೆ... 
ನಿದ್ದೆಯಲ್ಲೂ ನಾಚಿ ರಂಗೇರುವ ನಿನ್ನ ಮೊಗವ ಕಂಡು ನಾ ನನ್ನೇ ಮರೆವೆ... 
ಜೋ ಜೋ ಲಾಲಿ ಜೋ ಲಾಲಿ ಜೋಕಾಲಿ...

ಅವಳ ಕೇಳಿದೆ - 
ಕನಸಿನೂರಲ್ಲಿ ಕೋತು ಮುಗುಳ್ನಗುವಲ್ಲೆ ಕಾಡುವ ಚೆಲುವೆಗೊಂದು ಫೋನು ಮಾಡಬೇಕಿತ್ತು... 
ನಂಬರ್ ಕೊಡ್ತೀಯಾ...?
ಕನಸಲ್ಲೆ ಕೇಳೆಂದು ಕಣ್ ಮಿಟುಕಿಸಿ ನಕ್ಕಳು...:)

ಆ ಸಂಜೆ ಇಂತದೇ ಛಳಿಗಾಳಿಯಿತ್ತು ಮತ್ತು ನಿನ್ನ ಮುಂಗುರುಳು ತುಂಟಾಟವಾಡಿ ನನ್ನ ಕಾಡುತ್ತಿತ್ತು...

ಮಳೆಯ ಸೂಚನೆ - ನೀ ಬರುವ ಸೂಚನೆಯಾ ಮನಕೆ - ಸುರಿವ ಪ್ರೀತಿಜಲ ಹೊತ್ತು...
ಮಣ್ಣ ಕಂಪಿನ ಮೂಲಕ ನಿನ್ನೊಲವ ಕನಸು ನನ್ನ ಜೀವಕೋಶವ ಸೇರಿ...
ಎದೆಯ ರಂಗಮಂಟಪದಲೀಗ ನಿನ್ನ ಗೆಜ್ಜೆಯ ನಾದ...
ಉಸಿರ ತಿತ್ತಿಯಲೆಲ್ಲ ಪ್ರೇಮ ಜೀವೋನ್ಮಾದ...
ನಾನಾಗಲೇ ನಿನ್ನ ಕೆನ್ನೆಗುಳಿಯಲ್ಲಿ ನನ್ನ ಕಳಕೊಂಡು ಜನ್ಮಾಂತರಗಳೇ ಸಂದುವಲ್ಲೇ...
ಹೇಳು ನಿನ್ನೊಲವ ನನ್ನೊಲವಲಿ ಬೆರೆಸಿ ಈ ಸುರಿವ ಸೋನೆಯಲಿ ನಾಕು ಹೆಜ್ಜೆ ಜತೆ ಬಂದು ಬದುಕಿಗೂ ಗುಲ್ಮೊಹರ ಬಣ್ಣ ತುಂಬುವೆಯಾ...
ಬರುವೆಯಾದರೆ ನೀನು ಇನ್ನಷ್ಟು ಕಾಲ ನಾ ಉಸಿರಾಡಿಯೇನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

9 comments:

  1. :-) ಬರ್ತಾರೆ ಬಿಡಿ.

    ReplyDelete
  2. ಅದೆಲ್ಲೋ ಕುಳಿತು ಆಕೆಯೂ ಚಂದ್ರಮನನ್ನು ಕಣ್ಣು ತುಂಬಿಸಿಕೊಳ್ಳುತ್ತಿರಬೇಕು.....

    ನಿನ್ನ ಹೃದಯವನ್ನು ಅಷ್ಟು ಮೃದು ಮಾಡಿದ ಆಕೆಗೆ, ನಿನ್ನ ಕಣ್ಣು ಪ್ರತಿ ದಿನದ ಸಂಜೆಯಲಿ

    ಆ ಚಂದ್ರಮನನ್ನು ನೊಡುತ್ತಿರುತ್ತದೆ ಮತ್ತು ಹೃದಯದ ಭಾವಗಳು ಅದರಲ್ಲಿ ಲೀನವಾಗುತ್ತಿರುತ್ತದೆಂದು

    ಗೊತ್ತಿರದೇ ಇದ್ದೀತೇ.....

    ನಮ್ಮ ಾಸೆಯೂ ಆಕೆ ಬರಬೇಕೆಂಬುದೇ..... ಬರ್ತಾಳೆ ಬಿಡು.....

    ReplyDelete
  3. "ಪ್ರೀತಿಯೇ ದೇವರಲ್ಲವಾ..." ಅನ್ನುವ ನಿಮ್ಮ ಮಾತು ನಿಜ :)

    ReplyDelete
  4. ಎಪ್ಪತ್ತು * ಹತ್ತು + ಮೂರು ಎಂಬ ಶೀರ್ಷಿಕೆ ನೋಡಿ ಒಮ್ಮೆ ದಂಗಾದೆ.. ಏಳ್ನೂರು ಲೇಖನಗಳಾದವಾ ಅಂತ !!
    ಕವನ, ಭಾವ, ಕಥನ ಎಲ್ಲಾ ಮಿಳಿತವಾದ ಪರಿಗೆ ಶೀರ್ಷಿಕೆ ಅತಿಶಯೋಕ್ತಿಯೇನಲ್ಲ ಅನಿಸಿತು. ನಿಮ್ಮ ಬ್ಲಾಗಲ್ಲಿ ಆ ಏಳ್ನೂರೂ ಸದ್ಯವೇ ಮುಟ್ಟಲೆಂಬ ಹಾರೈಕೆಯೂ ಕೂಡ :-)

    ಕೈಯಾಸರೆಯಾಗೆಂಬ ನಿನ್ನ ಕೋರಿಕೆಗೆ.. ನನ್ನೆರೆಡೂ ಕೈಗಳೂ ನಿನ್ನದೇ ಗೆಳತಿ.. ವಾವ್ :-)

    ReplyDelete
    Replies
    1. ಕ್ಷಮಿಸಿ...ಏಳು x ಹತ್ತು + ಮೂರು ಆಗಬೇಕಾದದ್ದು ನನ್ನ ಅಲಕ್ಷ್ಯದಿಂದ ಎಪ್ಪತ್ತು x ಹತ್ತು + ಮೂರು ಆಗಿತ್ತು...ಈಗ ಸರಿಪಡಿಸಿದ್ದೇನೆ...
      ಮೆಚ್ಚುಗೆಗೆ ಧನ್ಯವಾದಗಳು...

      Delete
  5. ವತ್ಸ,, ಬರೆಯೋದಿರಲಿ ಇಷ್ಟೇಲ್ಲಾ ಕಲ್ಪನೆಗಳೂ ಕೂಡ ಬಾರದು ನಮಗೆ,, :-)
    ನಿಮ್ಮ ಶಕ್ತಿಗೆ.......... (Y) ...
    ನಿಮ್ಮ ಕನಸು ಬೇಗ ಸಿಕ್ಕುಬಿಡಲಿ, ಆಗ ಇನ್ನಷ್ಟು ಸೊಗಸಾದ ನಿಮ್ಮ ಬರವಣಿಗೆಗಳನ್ನು ಸವಿಯುತ್ತಾ ಕಳೆದು ಹೋಗುವ ಭಾಗ್ಯ ನಮ್ಮದಾಗುತ್ತದೆ

    ಕೈಯಾಸರೆ ನೀಡೆಂದ ಗೆಳತಿಗೆ -
    ನಿನಗಾಸರೆಯಾದೀತಾದರೆ ನನ್ನವೆರಡೂ ಕೈಗಳು ನಿಂದೇ ಕಣೆ - ನಾನಿರುವವರೆಗೂ...
    ನೆನಪುಗಳಲಿ ನಗುವೆಯಾದರೆ ನಾನಳಿದಮೇಲೂ ಅವು ಬರೀ ನಿನ್ನವೇ...

    ಕಣ್ಮುಚ್ಚೆ ನನ ಗೆಳತಿ ಕನಸಲ್ಲಿ ಲಾಲಿ ಹಾಡುವೆ...
    ರಾಜಕುಮಾರ ಕುದುರೆಯೇರಿ ಬರುವ ಕಥೆಯ ಹೇಳುವೆ...
    ನಿದ್ದೆಯಲ್ಲೂ ನಾಚಿ ರಂಗೇರುವ ನಿನ್ನ ಮೊಗವ ಕಂಡು ನಾ ನನ್ನೇ ಮರೆವೆ...

    ಸೂಪರ್ ಸಾಲುಗಳು (Y)

    ReplyDelete