Tuesday, August 1, 2023

ಗೊಂಚಲು - ನಾಕ್ನೂರಾ ಹದ್ನಾರು.....

ಚಾಳೀಸಿನ ವಿಭ್ರಮ.....

ಯಾವುದಿಲ್ಲಿ ಹೆಚ್ಚು ಪ್ರಖರ...?
ಒಂಟಿತನದ ಉರಿ ಬೇಗೆಯೋ...?
ಅಥವಾ
ಕಡು ಶೀತಲ ಖಾಲಿತನವೋ...?
___ ಬಿಟ್ಟ ಸ್ಥಳಗಳ ತುಂಬಾ ತುಂಬಿಕೊಳಲು ಅವಳಿಲ್ಲ...

'ಹುಟ್ದಬ್ಬವಾ ನಿಂದು, ಎರ್ಡು ಕಾಳು ಶಕ್ರೆ ಆರೂ ತಿನ್ನು' ಅಂತಂದು ಖುಷಿಪಡಲು ಅವಳಿಲ್ಲ...
'ನಗು' ನನ್ನ ಗುರುತಾಗಬೇಕು ಅಂತನ್ನಿಸಿದಾಗಲೆಲ್ಲ ಅವಳ ಸೆರಗಿನ ತುದಿಯಲ್ಲಿ ಕಣ್ಣೊರೆಸಿಕೊಂಡವನು ನಾನು...
ಒಳಗೊಂದು ತುಂಡು ಸಂಭ್ರಮದ ಹಸಿವೂ ಇಲ್ಲ ಈಗ...
ಮತ್ತು 
ಬಳಿದುಳಿದ ಕಾಯ ಕಾಮನೆಗಳಿಗೆ ಚಾಳೀಸಿನ ವಿಭ್ರಮ...
____ ನಾಕು ದಶಕ ದಾಟಿ...

ಶೋಕಗೀತೆಯ ಕೊನೇಯಲ್ಲಿ ಮೂರು ಡಾಟಿಟ್ಟು ಒಂದು ನಗೆಯ ಮೊಹರಿಟ್ಟರೆ ಅದು ನಾನು ಮತ್ತು ನಾ ನನ್ನ ಹುಟ್ಟನ್ನು ಬದುಕಾಗಿ ಸಂಭ್ರಮಿಸುವುದು ಹಂಗೇನೇ...
____ ಅವಳಿಲ್ಲದ ಕಾಲಕ್ಕೆ...

ನನ್ನ ಕಾಯುವ, ಕಾಯುವಂತೆ ಕಾಡುವ ಆ ಗೋಡೆಯ ಮೇಲಣ ಚಿತ್ರದಲ್ಲಿನ ಅವಳ ನಗು ಮಾಸುವುದೇ ಇಲ್ಲ...
ಮಾತಿನ್ನು ಸಾಕೂ ಎಂದು ಮೌನವ ತಬ್ಬಿದ ಅವಳ ಕೂಗಿ ಕೂಗಿ ನನ್ನ ನೂರು ವಟವಟಗಳ ಅವಳಿಗೆ ದಾಟಿಸುವಲ್ಲಿ ನಾನು ಸೋಲುವುದೂ ಇಲ್ಲ... 
ಅವಳಿತ್ತ ಉಸಿರು ಅವಳ ಹಿತವಾಗಿ ನೆನೆಯುತ್ತ ಅವಳನಿಲ್ಲೇ ಹುಡುಕುವುದು ಹುಚ್ಚಾದರೆ ಆ ಹುಚ್ಚಲ್ಲಿ ಏಸು ಹಿತವಿದೆಯೋ ಅದನು ನನ್ನಂತ ಹುಚ್ಚನೇ ಬಲ್ಲ...
_____ ಭಾವ ಬೇಗುದಿಗಳ ಸಂಸ್ಥಾನ ಬೀದಿಯಲಿ ನೆಲ ನೆಲೆಯ ಅರಸಿ ಅಲೇಯೋ ತಬ್ಬಲಿ...


ಹೆಚ್ಚಾಗುವುದು ವಯಸ್ಸೊಂದೇ – ಹೆಚ್ಚಾದಷ್ಟೂ ಕಳೆದು ಖಾಲಿಯಾಗುವುದೂ ವಯಸ್ಸೊಂದೇ...

ಇಷ್ಟಾಗಿಯೂ -
ನೀ ಹಾಯುವ ಹಾದಿ ಬದಿಯಲಿ ನಿನಗೆಂದೇ ನಮ್ಮ ಪ್ರೀತಿ ಅರವಟಿಗೆಗಳಿವೆ, ನಮ್ಮ ಎದೆ ಅಂಗಳದಲಿ ನಿನ್ನ ಇರುವಿಕೆ ಚಂದವಿದೆ, ಜೊತೆಗಿರು ಮಾರಾಯಾ ಅಂದು ಆಗ್ರಹಿಸುವ ನಿಮ್ಮಗಳ ಹಾರೈಕೆಗಳಲಿ "ಹಗಲಾಗುವವರೆಗೆ ಇರುಳ ಭಯ ಕಾಡದ ಹಾಗೆ ನನ್ನ ಕಾಯುವ ಪುಟ್ಟ ದೀಪವೊಂದು ಉರಿಯುತ್ತದೆ ಎನ್ನೆದೆಯಲ್ಲಿ..." 
ಸೂತಕದ ಮನೆ ಅಂಗಳದಲೂ ಸಂಕ್ರಮಣದ ಹಗಲು, ವಸಂತದ ಚಿಗುರು ಅರಳುವುದು ಸುಳ್ಳಲ್ಲ ನೋಡೀ...
ಇರಬಹುದು,
ನನ್ನ ಹುಟ್ಟು ಅವಳ ಹಬ್ಬ - ಅವಳಿಲ್ಲದ ಊರಲ್ಲೂ; ಅವಳನೇ ನೆನಪಿಸುವ, ಅವಳಂಗೇ ಹಾರೈಸುವ ನನ್ನದೆಂಬೀ ಭಾವ ಬಂಧಗಳಲಿ...
ಪ್ರೀತಿ ಕಾಯಲಿ ಅನವರತ - ತನ್ನೆಲ್ಲಾ ವಿಶ್ವರೂಪಗಳಲಿ...
_____ ಧನ್ಯವಾದ... 

ಗೂಡಲ್ಲಿ ಅವಳಿದ್ದ ಕಾಲಕ್ಕೆ…


&&&

ಮಸಣ ಕಾಯುವವನ ಕೈಯ್ಯ ಕುಡಿಕೆಯ ಹುಳಿ ಹೆಂಡದಲಿ ಉಸಿರು ಹಿಡಿದುಕೊಂಡಿರುವ ಒಂದು ಮಧುರ ಪ್ರೇಮದ ಕಥೆ...
ಹುಟ್ಟುತಲೇ ಸತ್ತ ಕರುವ ನೆಕ್ಕಿ ನೆಕ್ಕಿ ಅಳುತ ನಿಂತ ತುಂಬು ಹಾಲ್ಗೆಚ್ಚಲ ದನದ ಕರುಣ ಕಥೆ...
ಹಿರಿತಲೆಯ ಸೂತಕದ ಮನೆಯ ಹೊಸ್ತಿಲಲಿ ತಾಳಕ್ಕಿ ಬಡಿದು ಕುಣಿವ ಎಳೆ ಮಗುವ ಮುದ್ದು ನಗುವ ಕಥೆ...
ವೃದ್ಧರ ಗೂಡಿನ ಅಜ್ಜಿಯ ಕಣ್ಣಲ್ಲಿ ಹೊರಳುವ ಕಳೆದೋದ ಮಗು ಮುಗ್ಧ ಮನಸಿನ ಸುಂದರ ಬದುಕಿನ ಹುಡುಕಾಟದ ಕಥೆ...
ವೈದ್ಯರ ಕೈಗಿಟ್ಟ ತನ್ನ ಹೃದಯ ನಾಡಿ ನೋವ ನುಡಿಯದಿರಲೀ ಎಂದು ಕಣ್ಮುಚ್ಚಿ ಕೈಮುಗಿವ ರೋಗಿಯ ದೈನೇಸಿ ಕಥೆ...
ಯಾವ ಹುತ್ತದಲಿ ಯಾವ ಹಾವೋ, ಯಾವ ದೇವ ದರ್ಶನದಲಿ ಕಾವ ಹಾರೈಕೆಯೋ, ಅರಿವಿನಾಚೆಯ ಹರಿವಿಗೆ ಸರತಿಯಲಿ ನಿಂತ ಭಕ್ತರ ಪ್ರಾರ್ಥನೆಯ ಕಥೆ...
ಸೋಂಬೇರಿಯ ಎದುರಲ್ಲಿ ನಿದ್ದಂಡಿಯಾಗಿ ಮೂಗು ಮುಚ್ಕೊಂಡು ಕನಸ ಜಪಕ್ಕೆ ಕೂತ ಮತ್ತು ದಂಡಿಯಾಗಿ ದುಡಿವವನ ಕೆಸರು ಕೈಯಿಂದ ತಪ್ಪಿಸ್ಕೊಂಡು ಶರವೇಗದಿ ಓಡುವ ಕಳ್ಳ ಕಾಲನ ಕಥೆ...
ಎದೆ ಹಾಲನುಣಿಸದೇ ಹೆಗಲ ತಬ್ಬಿ ತಾಯಾದ ಗೆಳೆತನದ ಕಥೆ...
ಜೊತೆ ಬೆಳೆದೂ ಜೊತೆ ಬೆರೆಯಲಾಗದೇ ಬದಲು ದಾರಿಯಾಗಿ ಬಡಿದಾಡುವ ಮತ್ಸರದ ಕಥೆ...
ಪರಲೋಕದ ಪಿತೃಗಳ ಬಂಟ ಅನ್ನಿಸಿಕೊಂಡ ಕಾಕೆಯ ಗೂಡಲ್ಲಿ ವಸಂತದ ಮಧುರ ಹಾಡಿನ ಕೋಗಿಲೆಯ ಮೊಟ್ಟೆ ಮರಿಯಾಗಿ ಬೆಚ್ಚಗೆ ಬೆಳೆಯುವ ವಿಪರ್ಯಾಸದ ಕಥೆ...
ಗುಬ್ಬಿ ಎಂಜಲಿನ ಪ್ರೀತಿ, ತುತ್ತು ಎತ್ತಿಟ್ಟ ಅಕ್ಕರೆ, ಎಳೆ ಕನಸುಗಳ ಛವಿ ಬಿಡಿಸುವ ಹಂಡೆ ಒಲೆಯ ಹೊಗೆ, ಬಡಿದು ಬಾಗಿಸುವ ವಿಚಿತ್ರ ಹಗೆ, ಅಲ್ಲಿಂದಿಲ್ಲಿಗೆ ಹಾದಿಯಲಿ ಬೆನ್ನೇರಿ ಬಂದ ಎಷ್ಟೆಲ್ಲಾ ಭಾವ ಅಭಾವಗಳ ಬಗೆಹರಿಯದ ಬೇತಾಳ ಪ್ರಶ್ನೆಗಳ ಕಥೆ...
ಬದುಕೆಂಬೋ ಕಡಲು ನಿತ್ಯವೂ ಎದೆ ದಂಡೆಗೆ ತಂದೆಸೆವ ಹತ್ತಾರು ಕತ್ತಲು, ಬೆಳಕಿನಂಥ ತರಹೇವಾರಿ ಹಸಿ ಬಿಸಿ ಕಥೆಗಳಲಿ ಒಂದನಾದರೂ ಚೆಂದವಾಗಿ ಹೇಳಬೇಕು ನಾ ನಿನಗೆ...
ನಾ ಮುಗಿದರೂ ಹೇಳಿ ಮುಗಿಯದಷ್ಟು ಕಥೆಗಳಿವೆ ನೋಡು...
ಆದರೋ, 
ಕಥೆ ಹೇಳಲು ಹೋಗಿ ಕಥೆಯೇ ಆಗಿ ಕಥೆ ಕರಗಿ ಹೋಗಿ ಖಾಲಿ ಆಗುವ ನಾನು ಪದಗಳಲಿ ಆತ್ಮವ ತುಂಬಿ ಕೊಡಲಾಗದ ನನ್ನ ಪ್ರಜ್ಞೆಯ ಸೋಲನೊಪ್ಪಿ ಮೌನವಹಿಸುತ್ತೇನೆ ನನ್ನೊಳಗೇ...
ಬೆಂಕಿಯ ಹಣೆಗಿಟ್ಟು, ಪ್ರಳಯವ ಮುಡಿಗಟ್ಟಿ, ಬೆಳಕ ಮುಡಿದು, ವಿಷವ ಗಂಟಲಲೇ ತಡೆದು, ತೊಡೆ ಮೇಲೆ ಪ್ರೀತಿಯ ಸಲಹುತ್ತಾ, ಸ್ಮಶಾನ ಕಾಯುವ ಬೋಳೆ ಭೀರುಗಳು ಎಷ್ಟಿಲ್ಲ ಹೇಳು ಇಲ್ಲಿ - ಪಿಳ್ಳಂಗೋವಿಯನೂದಿ ದನಗಳ ಮೇಯಿಸಿ, ಶಂಖನಾದದಲಿ ಕುದುರೆಗಳ ಕುಣಿಸಿ, ನುಡಿ ನೀಡಿ ಬದುಕ ಯುದ್ಧವ ಗೆದ್ದು, ಗೆಲ್ಲಿಸಿದ ಮೇರುಗಳು ನಮ್ಮ ನಡುವೆಯೇ ಎಷ್ಟೊಂದಿಲ್ಲ ಹೇಳು...
ಹೌದು ಬಿಡು,
"ಕಥೆಯಾದವರು, ಒಳಗೆ ಕಥೆಗಳಿದ್ದವರೇ ಎಲ್ಲಾ - ಆದರೆಲ್ಲಾ ಇಲ್ಲಿ ಕಥೆಗಾರರಾಗಬೇಕಿಲ್ಲ..."
___ ಶಾಯಿ ಖಾಲಿಯಾದ ಕಿಲುಬು ಲೇಖನಿ...