Friday, July 13, 2012

ಗೊಂಚಲು - ಮೂವತ್ನಾಕು.....



ಆಷಾಡದ ಹಾಡು.....


ವಿರಹ : 
ಎರಡು ಪ್ರೇಮಿಸುವ ಜೀವಗಳು ದೇಹದಿಂದ ದೂರವಿದ್ದು - ನೆನಪು, ಕನಸುಗಳಾಗಿ ಮಾನಸಿಕವಾಗಿ ಒಬ್ಬರ ಮನಸೊಳಗೊಬ್ಬರು ಕೂತು ಕಾಡುವ ಭಾವನಾತ್ಮಕ ಸನಿಹ...


ಸಭ್ಯರೆನಿಸಿಕೊಂಡ ನವ ದಂಪತಿಗಳು ಹಾಗೂ ಪ್ರೇಮಿಗಳು ಕೂಡ ವಿರಹವೆಂದರೆ ಯಾಕಿಷ್ಟು ಭಯಬೀಳ್ತಾರೆ.?
ಆ ಕ್ಷಣಗಳ ಚಡಪಡಿಕೆಯ ಒಳಗಿನ ಒತ್ತಡ ಯಾವುದು.??
ಬರೀ ದೇಹದ ಬಯಕೆ - ಕಾಮದ ಒತ್ತಡ ಅಷ್ಟೇ ಆಗಿರಲಾರದು.
ಕಾಮದ ಉನ್ಮಾದವನ್ನು ನಿಗ್ರಹಿಸುವುದು ಸಭ್ಯ ಜೋಡಿಗಳಿಗೆ ಅಂಥ ಕಷ್ಟವೇನಲ್ಲ.
ಆದರೂ ವಿರಹ ಯಾಕಿಷ್ಟು ಕಾಡುತ್ತೆ.?
ಕಾಡುವ ವಿರಹದ ಹಿಂದಿನ ಭಾವ ಪ್ರೇಮವಿರಬಹುದಾ.??
ಹಾಗಾದರೆ ಇನ್ನೂ ಪ್ರೇಮಭಾವ ಪಕ್ವಗೊಂಡಿರದ ಹಿರಿಯರು ನಿಶ್ಚಯಿಸಿ ಜೊತೆಯಾದ ನವ ಜೋಡಿಗಳನ್ನೂ ವಿರಹ ಕಾಡುವ ಪರಿ ಎಂತು...
ಬಹುಶಃ ದೇಹದೊಂದಿಗೆ ಬೆಸೆದುಕೊಂಡಿರುವ ಮನದ ಮಧುರಾನುಭೂತಿಗಳ ನೆನಪಿನ ಬಿಸಿ ವಿರಹ ಕಾಲದಲ್ಲಿ ಹೆಚ್ಚಾಗಿ ಕಾಡುತ್ತೇನೋ...


ಮನೆತುಂಬ ಹರಿದಾಡುವ ಅವಳ ಗೆಜ್ಜೆ, ಬಳೆಗಳ ರಿಂಗಣ - ಸೀರೆಯ ಸರಬರ...


ಎಲ್ಲರ ಕಣ್ತಪ್ಪಿಸಿ ಅವಳನೇ ಹುಡುಕಿಕೊಳ್ಳುವ ಅವನ ಚಡಪಡಿಕೆಯ ಕಣ್ಣೋಟ...


ಸುಳ್ಳೇ ಸಿಟ್ಟು...


ಹುಚ್ಚುಚ್ಚು ನಗು...


ತೋಳುಗಳ ತಬ್ಬಿ ಅಷ್ಟು ದೂರ ನಡೆವ ಹಿತವಾದ ಆಯಾಸ...
ಅವಳ ಬೆಚ್ಚನೆ ಮಡಿಲ ಆಸರೆ...


ತಲೆಯ ನೇವರಿಸೋ ಆಕೆಯ ಚಿಗುರು ಬೆರಳುಗಳು...


ಅಮಾವಾಸ್ಯೆಗೆ ಹುಟ್ಟಿದಂತಿರುವವಳೂ ಅವನ ಕಣ್ಣಲ್ಲಿ ಚಂದ್ರಿಕೆ...
ಜೋಪಡಿಯ ಒಡೆಯನೂ ಇಂದ್ರಕುಮಾರ ಅವಳ ಪಿಸುಮಾತಲ್ಲಿ...


ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು - ನೋಟಗಳ ಮೌನ ಸಂಭಾಷಣೆಯಲ್ಲಿ ತಮ್ಮ ಒಳಗನೆಲ್ಲ ಬಿಚ್ಚಿಟ್ಟು ಬರಿದಾಗಿ - ಭಾವ ಶೂನ್ಯದಲಿ ತೇಲುವ ಹೃದಯಗಳ ಸಂಭ್ರಮ ಸುಖ...


ನಿದ್ದೆಯ ಮರುಳಲ್ಲಿರುವ ನಲ್ಲೆಯ ಚೆಂದುಟಿಗಳಿಂದ ಅಮೃತವ ಕದಿಯುವ ಮಧುರ ಕಳ್ಳತನದ ಖುಷಿ...


ಖುಷಿಯಲೂ - ಬೇಸರದಲೂ ಸಿಗುವ ಸಂಗಾತಿಯ ಹಿತವಾದ ತಬ್ಬುಗೆ...


ಹಾಗೇ ಸುಮ್ಮನೆ ಎಲ್ಲವನೂ ಮರೆತವರಂತೆ ಬೆತ್ತಲೆ ತಬ್ಬಿ ಮಲಗುವ ಆಹ್ಲಾದ...


ನಲ್ಲೆಯ ಎದೆ ಗೊಂಚಲ ನಡುವೆ ಬೇಕೆಂತಲೇ ಉಸಿರುಗಟ್ಟುವ ಉತ್ಸಾಹ...


ನಲ್ಲನ ಎದೆರೋಮವ ಕಚ್ಚಿ ಕಚಗುಳಿಯಿಡುವ ಆಕೆಯ ತುಟಿಗಳ ತುಂಟತನ...


ಬೆತ್ತಲೆ ಬೆನ್ನ ಮೇಲೆ ಬೆರಳಲೇ ಬರೆವ ತನ್ನ ಹೆಸರು...


ಹೊಕ್ಕಳ ಹೂವಿನೊಂದಿಗೆ ಉಸಿರಿನ ಸರಸ...


ಅಮ್ಮನಿಲ್ಲದ ಹೊತ್ತು ಒಟ್ಟಿಗೊಂದು ಅಭ್ಯಂಜನ...


ಹೆರಳ ಶಾಂಪೂವಿನೊಂದಿಗೆ ಬೆರೆತ ಕಂಕುಳ ಘಮ...


ತನ್ನ ಕಾಮದ ಕುಡಿಯ ಒಡಲಲ್ಲಿ ತುಂಬಿಕೊಂಡ ತನ್ನಾಕೆಯ ಕಿಬ್ಬೊಟ್ಟೆಗೆ ಕೆನ್ನೆ ತಾಕಿಸಿ ಬಿಸಿಯನಾಸ್ವಾದಿಸಿ, ಕಿವಿಯಿಟ್ಟು ಒಳಗಿರುವ ಕಂದನ ಎದೆ  ಬಡಿತಕೆ ಮಿಡಿವ ಉಲ್ಲಾಸ...


ಈ ಎಲ್ಲ ಮಧುರಾನುಭೂತಿಗಳ ಸವಿ ನೆನಪು ಸೇರಿ ಅಗಲಿಕೆಯ ಕಾಲದಲಿ ವಿರಹದುರಿಗೆ ತುಪ್ಪ ಸುರಿಯುತ್ತವೆ.
ಜೊತೆಯಿರುವಾಗ ಎಲ್ಲರೂ ಇವೆಲ್ಲವನ್ನೂ ಅನುಭವಿಸಿ ಆಸ್ವಾದಿಸ್ತಾರೋ ಇಲ್ಲವೋ ಆಗಲೀ ದೂರವಿರುವಾಗ ಅನುಭವಿಸಬೇಕೆನಿಸುವ ಈ ಭಾವಗಳಿಂದ ದೂರವಿರುವುದಂತೂ ಕಷ್ಟ ಕಷ್ಟ...


ಉನ್ಮಾದಿತ ಕಾಮಕ್ಕಿಂತ ಇಂಥ ಸಂಪೂರ್ಣ ಕಾಮವಲ್ಲದ ಕಾಮದ ಹಿಂಚುಮುಂಚಿನ ಮಧುರಾನುಭೂತಿಗಳೇ ಜೋಡಿಗಳನ್ನು ಹೆಚ್ಚಾಗಿ ಕಾಡುತ್ತೇನೋ ಅಲ್ಲವಾ...


ಹಾಗಾದರೆ ಪ್ರೇಮವೆಂದರೆ ಇದೇನಾ..??
ಅಲ್ಲದಿರಬಹುದು.
ಆದರೆ ಅವ್ಯಕ್ತ ಪ್ರೇಮದ ವ್ಯಕ್ತ ರೂಪವಂತೂ ಹೌದು.
ಇರುವ ಪ್ರೇಮವನ್ನು ಬಲಪಡಿಸುವ ಶಕ್ತಿಮದ್ದೂ ಹೌದು.
ದಾಂಪತ್ಯದ ದಶಮಾನೋತ್ಸವದ ನಂತರ ಕೂಡ ಹೊಸತು ಹಳತಾಗದಂತೆ ಇದೇ ಭಾವತೀವ್ರತೆಯ ವಿರಹ ಒಂದು ಜೋಡಿಯನ್ನು ಕಾಡುವುದಾದರೆ ಆ ಜೀವಗಳ ಪ್ರೇಮಕ್ಕೆ ಸಲಾಮ್.
ದೇಹದ ಉನ್ಮಾದ ಇಳಿದ ಮೇಲೂ ತಬ್ಬಿ ಮಲಗುವ ಪ್ರೇಮ ನಿಜಕ್ಕೂ ಮಧುರಾ ಮಧರಾ...


ದೇಹದ ಉನ್ಮಾದ ಕಳೆಯಲು ಒಂದು ಹಸ್ತಮೈಥುನ ಸಾಕು...
ಆದರೆ ಮನದ ಭಾವೋನ್ಮಾದಕ್ಕೆ ಸಂಗಾತಿಯ ಸಾಂಗತ್ಯವೇ ಬೇಕು...


ಹಾಗಾದ್ರೆ 
ಮನದ ಪ್ರೇಮವನ್ನು ದೇಹದ ಬಿಸಿಯಲ್ಲಿ ಕರಗಿಸುವ - ಹಾಗೇ ಸುಮ್ಮನೆ ತಬ್ಬಿ ಮಲಗುವ ಕಾಲವನ್ನೂ ಮೀರಿನಿಂತ ವಯೋವೃದ್ಧರು ಕೂಡ ಸಂಗಾತಿಯ ವಿರಹದಿಂದ ಬಳಲುತ್ತಾರಲ್ಲ...
ಇದಕೇನು ಕಾರಣ..??


ಬಹುಶಃ ಸಂಗಾತಿಯೊಡನೆ ಬೆಸೆದುಕೊಂಡ ದೀರ್ಘ ಕಾಲದ ಬದುಕು...
ಅಭ್ಯಾಸವಾಗಿಹೋದ ಸಾಂಗತ್ಯ...
ಮನದಿ ಹೆಪ್ಪುಗಟ್ಟಿ ನಿಂತ ಆ ಕಾಲದ ಮಧುರ ನೆನಪುಗಳು...
ಇಳಿಗಾಲದ ಆದ್ಯತೆ, ಆಸರೆಯ ಅವಶ್ಯಕತೆಗಳು ಸಂಗಾತಿಯ ಅನುಪಸ್ಥಿತಿಯಲ್ಲಿ ಖಾಲಿತನವಾಗಿ ಕಾಡುತ್ತವೇನೋ...
ಅಥವಾ ಇಳಿಗಾಲದ ವಿರಹಕ್ಕೆ ಬೇರೆಯದೇ ಆಯಾಮವೂ ಇದ್ದೀತು...


ಈ ವಿರಹ ಭಾವದಲ್ಲಿ ಇನ್ನೂ ಏನೇನಿವೆಯೋ...
ನಿಜಕ್ಕೂ ವಿರಹ ನೂರು ನೂರು ತರಹ...


ಈ ಬರಹ ಅನನುಭವಿಯೊಬ್ಬನ ಕಲ್ಪನಾ ಪ್ರಲಾಪ...
ಈ ಬರಹದ ಸತ್ಯಾಸತ್ಯತೆಯನ್ನು ಮಿಲನದ ಸವಿ ಮತ್ತು ವಿರಹದ ಕಹಿ ಎರಡನ್ನೂ ಉಂಡ ಅನುಭವಿಗಳು ವಿವರಿಸಬೇಕಷ್ಟೇ...


ಚಿತ್ರ ಕೃಪೆ : ಚಿತ್ರಸಂತೆಯಲ್ಲಿ ನನ್ನ ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದು...
                  ಕಲಾವಿದನ ಕ್ಷಮೆಕೋರಿ...

11 comments:

  1. ಶ್ರೀವತ್ಸ....

    ವಿರಹವನ್ನು ಅನುಭವಿಸಿದವರಿಗೇ ಗೊತ್ತು...
    ಅದರ ನೋವು.. ಬವಣೆಗಳು,...

    ಹಾಗಾಗಿ ಅದು "ವಿರಹಾ ನೂರು ನೂರು ತರಹ..." ಇದ್ದಿರಲಿಕ್ಕಿಲ್ಲ..

    "ವಿರಹಾ... ಸಾವಿರ.. ಲಕ್ಷ ತರಹ..." ಇದ್ದಿರಬಹುದು...

    ಪ್ರೇಮ..
    ವಿರಹದ ಬಹಳ ಚಂದದ ಲೇಖನ.. ಅಭಿನಂದನೆಗಳು...

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಪ್ರಕಾಶಣ್ಣಾ...

      Delete
  2. ಅನುಭವದ್ದೋ.. ಅನನುಭವದ್ದೋ.. ಗೊತ್ತಿಲ್ಲ.. ವಿರಹದ ರೂಪ ಮತ್ತು ಕಾರಣಗಳು ಓದಲು ಖುಷಿ ನೀಡುತ್ತವೆ..

    ReplyDelete
  3. ವತ್ಸಾ......
    ಇದರಲ್ಲಿನ ಎಷ್ಟೋ ಸಾಲುಗಳಿಗೆ ನಾನು certificate
    ಕೊಟ್ಟುಬಿಡಬಹುದು.... ಅದು ಏನೂಂತ....

    ಆದರೆ.....

    ವಿಷಯದ ಮೇಲೆ ಅಭಿಪ್ರಾಯಕ್ಕೆ ಈ ವೇದಿಕೆ ಸಾಕು.

    ಆದರೆ ವಿಷಯದ ಸಂಪೂರ್ಣತೆಯ ಚರ್ಚೆಗೆ ಎಂದಿನಂತೆ
    ಜೀರುಂಡೆಗಳ ಶಬ್ಧದಲಿ ಮಿಂದ ಆಲೇಮನೆಯಲ್ಲಿನ ನೀರವ ರಾತ್ರಿಯ
    ರಂಗಸ್ಥಳವೇ ಬೇಕು....

    ತುಂಬಾ ಮಸ್ತೈದೋ ದೊರೆ.

    ReplyDelete
    Replies
    1. ಜೀರುಂಡೆಗಳ ಶಬ್ಧದಲಿ ಮಿಂದ ಆಲೇಮನೆಯಲ್ಲಿನ ನೀರವ ರಾತ್ರಿಯ
      ರಂಗಸ್ಥಳವೇ ಬೇಕು....ನೆನಪಾದರೆ ರಂಗಸ್ಥಳ ಹುಡಿಕ್ಯಂಡು ಈಗ್ಲೇ ಬಂದ್ ಬಿಡ ಹೇಳ್ವಂಗೆ ಆವ್ತು...
      ಮೆಚ್ಚಿ ಸರ್ಟಿಫಿಕೇಟ್ ಕೊಟ್ಟದ್ದಕ್ಕೆ ಧನ್ಯ...

      Delete
  4. ವಿರಹ ಯಾವಾಗಲೂ ಹಾಗೆ .. ಎರಡು ಮನಸುಗಳು ಒಂದಾದರೆ ಮಾತ್ರ ಮೂಡುವನ್ತದ್ದು ...ಬಹುಷ: ಗಂಡು ಹೆಣ್ಣುಗಳಿಗೆ ಪ್ರಕೃತಿ ನೀಡಿದ ಕೊಡುಗೆಯೇನೋ... ಚಂದದ ಬರಹ ..ಇಷ್ಟವಾಯ್ತು ..

    ReplyDelete
    Replies
    1. ವೆಂಕಟೇಶ್ ಜೀ -
      ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
      ವಿಶ್ವಾಸ ವೃದ್ಧಿಸಲಿ...

      Delete
  5. ಆಷಾಡವೆಂಬುದು ಶಾಪ
    ಹೊಸ ಜೋಡಿಗಳಿಗೆ

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು ಬದರಿ ಜೀ...

      Delete
  6. ಅಬ್ಬಬ್ಬಾ ಅದ್ಭುತ ವಿಶ್ಲೇಷಣೆ...!! ಹಲವಷ್ಟನ್ನು ಇಲ್ಲಿ ವಿವರಿಸುವುದು ಕಷ್ಟ ...!! ಅನನುಭವಿಯ ಕಲ್ಪನೆಯಾದರೂ, ಸತ್ಯಕ್ಕೆ ಹತ್ತಿರ ... :) "ದಾಂಪತ್ಯದ ದಶಮಾನೋತ್ಸವದ ನಂತರ ಕೂಡ ಹೊಸತು ಹಳತಾಗದಂತೆ ಇದೇ ಭಾವತೀವ್ರತೆಯ ವಿರಹ ಒಂದು ಜೋಡಿಯನ್ನು ಕಾಡುವುದಾದರೆ ಆ ಜೀವಗಳ ಪ್ರೇಮಕ್ಕೆ ಸಲಾಮ್...." ಇಷ್ಟವಾಯ್ತು :)

    ReplyDelete