ನಮನ.....
"ಎನ್ನ ಎದೆ ಸಾಲಿನ ಒಂದಕ್ಷರ ಓದಿದ ಪ್ರತೀ ಪ್ರೀತಿ ಜೀವಕೂ ಶಿರಸಾ ಆಭಾರಿ..."
ಹೇಳಬೇಕಿದ್ದದ್ದನ್ನು ಹೇಳಲು ನಡೆಸುವ ತಯಾರಿಯ ಗೊಣಗಾಟದಲ್ಲೇ ಚಿತ್ತಭಿತ್ತಿಯಿಂದ ಸಿಡಿದು ಬಿದ್ದ ಬರಹವೆಂಬ ಭಾವ ಬಯಲಾಟದ ರಂಗ ಪ್ರವೇಶಕ್ಕೆ ವರುಷಗಳ ಲೆಕ್ಕದಲ್ಲಿ ಹತ್ತು ಹೆಜ್ಜೆ ಕಾಲ ಸರಿದುಹೋಯಿತು...!!!
ಹಾಯ್ದ ಬೆಂದ ಬದುಕಿನ ಹೊರತಾಗಿ ಓದಿಕೊಂಡದ್ದು ಭಾಷೆಯ ವರ್ಣಮಾಲೆಯನಷ್ಟೇ, ಅದನ್ನೇ ಭಾವಗಳ ಗೋಂದನು ಬಳಸಿ ಜೋಡಿಸಿ ಜೋಡಿಸಿ ಬದುಕನ್ನು, ಬದುಕಿನ ಸುಪ್ತ ಕೋಶಗಳನು ಅಕ್ಷರಗಳಲಿ ಚಿತ್ರಿಸಲು ಹೊರಡುತ್ತೇನೆ...
ಹುಟ್ಟಿನಿಂದ ಬೆನ್ನಟ್ಟಿ ಬಂದ ಸೋಲು, ನೋವು, ನಿದ್ದಂಡಿತನ, ದಕ್ಕದ ಸುಖಗಳೆಡೆಗಿನ ಹಾತೊರೆತ, ಅವಮಾನಗಳೆಲ್ಲವುಗಳ ನಡುವೆ ನನ್ನ ನಾನು ಸಮಾಧಾನಿಸಿಕೊಳ್ಳಬಹುದಾದ ಪುಟಾಣಿ ಗೆಲುವು ಹಾಗೂ ಪಾಪಚ್ಚಿ ನಗು ಈ ಬ್ಲಾಗ್ - 'ಸಾವಿನ ನೋವಿಗೆ ಬದುಕಿನ ನೋವು ಸಾಂತ್ವನ ಹೇಳಿದಂಗೆ...'
ಉಣುಗಿನ ಕಜ್ಜಿ ಕೆರ್ದಂಗೆ ಎದೆ ಗೋಡೆಯ ಕೆರೆಯುವಾಗ ಹುಡಿಹುಡಿಯಾಗಿ ಬೀಳೋ ಒಟ್ರಾಶಿ ಭಾವಗಳ ಒಡ್ಡೊಡ್ಡಾಗಿ ಒಟ್ಟಾಕಿ ಒತ್ತೊತ್ತು ಪದಗಳಲಿ ಹರಡಿಡುವ ನರಕ ಸುಖದ ಉತ್ತುಂಗದಂಥಾ ಹುಚ್ಚು ಗೀಳಿಗೆ ಇದೀಗ ಸುದೀರ್ಘ ಹತ್ತು ತುಂಬಿತು...
ಉಸಿರಾಡಿದ ನಾಕು ದಶಕಗಳ ನೋವಿನ ಬಿರುಸನ್ನು ನೆನೆದು, ನಗೆಯ ಮೆದುವನ್ನು ಮಿಡಿದು, ಠೂ ಬಿಟ್ಟು ನಡೆದ ಕನಸುಗಳನು, ಉಸಿರಿಗಂಟಿ ಕರುಳರಿತೂ ಪ್ರಜ್ಞೆ ಧಿಕ್ಕರಿಸೋ ಸಾವನ್ನು, ಶೃಂಗಾರದ ಕಾವನ್ನು ಆಪ್ತವಾಗಿ ಎದೆಗೊತ್ತಿಕೊಂಡು ಸುತ್ತಿ ಸುತ್ತಿ ಅದದನ್ನೇ ಬಹುವಿಧ ಅಲಂಕಾರಗಳ ಪದಗಳಲಿ ಗೀಚಿದೆ - ಕೊನೆಗೆ ಅಮ್ಮನೆಂಬ ಆತ್ಮ ಸಂವೇದನೆ / ಸಂವಾದವನೂ ನನ್ನ ಕಣ್ ಕಾಣ್ಕೆಯ ವಲಯದಲೇ ಚಿತ್ರಿಸಿ ಬೆನ್ತಟ್ಟಿಕೊಂಡೆ...
ಸಾಲು ಸಾಲು ಭಾವದೀಪಗಳ ಹಣತೆ ಬೆಳಕಿಗೆ ಶಬ್ದಗಳ ಅಡವಿಟ್ಟು, ಪದಗಳ ಎಡೆಯಿಟ್ಟು ಏನ ಹುಡುಕಿದೆ ಮತ್ತು ಏನನ್ನ ಪಡೆದೆ ಅಂತ ಕೇಳಿದರೆ - "ನನ್ನನ್ನ ಹುಡುಕಿದೆ ಹಾಗೆಂದೇ ನಿಮ್ಮನ್ನ ಪಡೆದೆ ಅಂತೀನಿ..."
ಓದಲು ತೆರಕೊಂಡ ನಿಮ್ಮಗಳಿಗೇನು ಸಿಕ್ಕಿತೋ, ಏನಾದರೂ ಸಿಕ್ಕಿದ್ದಿದ್ದರೆ ಅದು ನನ್ನ ವ್ಯಾಪ್ತಿಯ ಆಚೆಯದ್ದು ಮತ್ತು ನಿಮ್ಮ ಪ್ರೀತಿಯ ಪ್ರಾಪ್ತಿ ಅದು...
"ಹೃದಯ ರಕ್ತದ ಗೂಡು - ಆದರೋ ಬಣ್ಣವಿಲ್ಲದ ಕಣ್ಣ ಹನಿ ಅದರ ನೋವು ನಗುವಿನ ಹೆದ್ದೆರೆಗಳ ನೆಚ್ಚಿನ ಹಾಡು..."
ಈ ರುದಯದ ಪಾಡು ಹಾಡು ಇನ್ನಾವುದೋ ಎದೆಯ ನೋವು ನಗುವಿನ ಕಡಲ ತುಳುಕಿನ ತೇವವಾಗಿ ಆ ಕಣ್ಣು ಮಿಂದರೆ ಅದು ಭಾವಕುಲದ ಆಪ್ತ ನೆಂಟಸ್ತಿಕೆ...
ಅಂಥಾ ನೆಂಟಸ್ತಿಕೆಗಳೇ ಈ ಪಾಪಿ ಬದುಕಿನ ಜೀವಭಾವ ಧಾತು - ಮತ್ತವನ್ನು ಬೆಸೆದದ್ದು ಓದು ಬರಹವೆಂಬ ಅಭಿರುಚಿಯ ರುಚಿ...
ಅಷ್ಟು ವರುಷಗಳ ಹಿಂದೆ ದಟ್ಟ ಕಾಡು ಕಣಿವೆ ನಡುವೆಯ ಪುಟ್ಟ ಮಿಡಿತವೊಂದು ಫಟ್ಟನೆ ಬೀಸಿ ಹೊಡೆದ ಬದುಕಿನ ಸುಳಿ ಗಾಳಿಗೆ ಮಣ್ಣಿನ ಮಡಿಲಿಂದ ತೂರಿ ಮಹಾನಗರವೆಂಬ ಸಿಮೆಂಟು ಧೂಳಿಗೆ ಬಿತ್ತು...
ಅಂಥ ತಳಮಳದ ಹೊತ್ತಲ್ಲಿ ನನ್ನ ನಾ ಕಾಯ್ದುಕೊಳ್ಳಲು ನೆಚ್ಚಿಕೊಂಡ ನನ್ನೊಡನೆಯ ನನ್ನ ಹುಚ್ಚುಚ್ಚು ಸಂವಹನದ ವ್ಯಕ್ತ ಹಾದಿಯನೇ ಚೂರು ಹಿಗ್ಗಲಿಸಿ ನಿಮ್ಮ ಅಂಗಳದ ಸನಿಹ ಸುಳಿದು ನಿಮ್ಮದೊಂದು ನಗೆಯ ಕದಿಯಬಹುದಾ ಎಂಬ ಹಂಬಲಕೆ ಬಿದ್ದು ಶುರುಹಚ್ಚಿಕೊಂಡ ಭಾವ ಬರಹಗಳೆಂಬ ವಟವಟ ಬಡಬಡಿಕೆಗಳ ಗುಚ್ಛವೇ ಈ ಬ್ಲಾಗ್ - "ಭಾವಗಳ ಗೊಂಚಲು..."
ನೆನಪು ಕನಸಿನಾಟದ ಹಿಂದು ಮುಂದಿನ ಬದುಕು - ಬದುಕರಿಯದ ಅವಳ್ಯಾರೋ ಕಪ್ಪು ಹುಡುಗಿ - ಕೈಕುಲುಕಿಯೂ, ಸ್ವಂತದವರ ಸೂತಕಕೆ ಸಾಕ್ಷಿಯಾಗಿಯೂ, ಸ್ವಂತಕ್ಕಿನ್ನೂ ತುಟ್ಟಿಯೇ ಆಗಿರೋ ಜವರಾಯ - ಭಂಡತನದಿ ಉಂಡೆದ್ದ ಒಂಭತ್ತು ರಸಗಳು - ಕಂಡದ್ದು, ಉಂಡದ್ದು, ಕಲ್ಪಿಸಿದ್ದು, ಕಾಮಿಸಿದ್ದು ಮುಂತೆಲ್ಲವನು ಪದಗಳ ಪೇರಿಸಿ ವೈಭವೀಕರಿಸಿ 'ಸಾವಿನ ತಲೆ ಮೇಲೆ ಶೃಂಗಾರದ ಕಳಶ ಕೂರಿಸಿ ಮೆರವಣಿಗೆಗೆ ಬಿಟ್ಟಂತೆ' ಬರೆದೇ ಬರೆದೆ...
ತೀರಾ ಸಣ್ಣದೇ ಆದರೂ ನನ್ನದೇ ವ್ಯಾಪ್ತಿಯಲ್ಲಿ ನಾನೂ ಗುರುತಿಸಿಕೊಳ್ಳಬೇಕೆಂಬ ನನ್ನ ಹಪಹಪಿಯ ಅಡುಂಬೋಲಕ್ಕೆ ಭರ್ತಿ ತುಂಬಿದ ಹತ್ತರ ಪ್ರಾಯ ಇಂದು...
ತಿಂಗಳೊಂದಕ್ಕೆ ಕಡೇ ಪಕ್ಷ ಒಂದಾದರೂ ಗೊಂಚಲು ಎಂಬ ಲೆಕ್ಕದಲ್ಲಿ - ಹತ್ತು ವರುಷ - ನೂರಿಪ್ಪತ್ತು ತಿಂಗಳು - ಮೂನ್ನೂರರ‍್ವತ್ತು ಗೊಂಚಲುಗಳು; ಯಾವ ಕಟ್ಟುಪಾಡುಗಳಿಗೂ ಒಗ್ಗದೇ ಒಡ್ಡೊಡ್ಡಾಗಿ ಎಳೆದು ಬೆಳೆದು ಆಡಿ ಕಾಡಿದ ಎನ್ನೆದೆಯ ಭಾವಗಳ ತೇವ ತೀಡಿ ಹಸಿ ಹಸಿ ಪದಗಳ ಗುಪ್ಪೆಯಾಗಿಸಿದೆ - ನೀವದನ್ನು ಎತ್ತಿ ಎದೆಗೊತ್ತಿಕೊಂಡು ಮೆದುವಾದೆ ಅಂದಿರಿ...
ಬರಹದ, ಓದಿನ ಕಾಲ್ಹಾದಿಗುಂಟ ಬಂದಪ್ಪಿದ ಬಂಧಗಳಿಗೂ, ಅಪರಿಚಿತ ತೀರದಿಂದಲೇ ಕೈಬೀಸೋ ಅಜ್ಞಾತ ಅಭಿಮಾನಗಳಿಗೂ, ಬೆಸೆದು ಬಸಿದು ಆದರಿಸಿದ ಎಲ್ಲ ಎಲ್ಲಾ ಪ್ರಿಯ ಓದುಗ ಮನಸುಗಳಿಗೂ ಶಿರಸಾ ಆಭಾರಿ...
ಪ್ರತಿ ಹತ್ತರ ಆಚೀಚೆ ಬದುಕು ಮಗ್ಲು ಬದಲಿಸ್ತಾ ಬಂದಿದೆ - ಎಂದೂ ನನ್ನದಾಗಲೇ ಇಲ್ಲ ಎಂಬಂತೆ...
ಅಷ್ಟಿಷ್ಟು ನನ್ನದೆನಿಸಿದ ಏನೇನೋ ಗೋಳುಗಳನು ಗೀಚಿ ಗೀಚಿಯೇ ಅನ್ಯಾಯವಾಗಿ ಬರಹಗಾರನ ಪಟ್ಟವ ಕಟ್ಟಿಕೊಂಡೆ - ಹಹಹಾ!!! ಆ ಪಟ್ಟ ಮಹೋತ್ಸವಕ್ಕೆ, ಅಂದರೆ ಈ ಬ್ಲಾಗ್ ಪಯಣಕೀಗ ಹತ್ತರ ಹುಟ್ದಬ್ಬ...
ಏನ್ಗೊತ್ತಾ -
ಪರಿಚಿತ ಕಾಲ್ಹಾದೀಲೂ ಕೊಳ್ಳಿ ದೆವ್ವಗಳು ಎದುರಾಗೋ ಭಯ ಬಿತ್ತೋ ಅಮಾಸೆ ಕತ್ಲಂಥ ಬದುಕನ್ನು ಬೇಶರತ್ ಪ್ರೀತಿಸಿದೆ - ಸಾವಿನ ಭಯವೇನೋ ಅಂದರು; ಸಾವಿನ ಬಗೆಗೆ ದಕ್ಕಿದ್ದಷ್ಟನ್ನೂ ಪದಗಳಲಿ ಭಟ್ಟಿಯಿಳಿಸಿದೆ - ನಿರ್ವಾಣವ ಬಿಡ್ಸ್‌ಬಿಡ್ಸಿ ಹೇಳ್‌ಹೇಳಿಯೇ ಬದುಕಿನ ಮೋಹ ಹೆಚ್ಚಿಸಿದೆ ನೋಡು ಅಂತಾರೆ...
ಧೋss ಮಳೆ, ಹೆಸರ ಹಂಗಿಲ್ಲದ ಪುಟ್ಟ ಸಲಿಲ, ಅಪರಂಪಾರ ನೀರ ಸಾಗರ, ಸೂರ್ಯನ ರಥವೂ ಹಾದಿ ತಪ್ಪೋ ದಟ್ಟ ಕಾಡು, ಬಾನ ಬಯಲ ತುಂಬಾ ಬಿಕ್ಕಿಬಿದ್ದ ತಾರೆಗಳನೂ ಹೆಕ್ಕಿ ಹೆಕ್ಕಿ ತೊಳೆವಂಥ ಬೆಳದಿಂಗಳ ಬಗೆಗೆಲ್ಲ ತೀವ್ರ ಹುಚ್ಚಿದೆ - ಅದಕೇ ಅವನ್ನು ಮತ್ತೆ ಮತ್ತೆ ಬರೆದೆ - ಬಾಲ್ಯ ಬಿಚ್ಚಿಕೊಂಡ ಮಲೆನಾಡಿನ ಮಣ್ಣ ಸಂಸರ್ಗ ಅದು, ಕಳಚಿಕೊಳ್ಳುವುದಾಗದು...
ಪ್ರಕೃತಿಯ ಜೀವೋಲ್ಲಾಸ ಸೌರಭವಾದ ಶೃಂಗಾರವ ಬರೆದೇ ಬರೆದೆ - ಹಪಾ ಪೋಲಿ ಎಂಬ ಮಾತನ್ನು ಬಿರುದಿನಂತೆ ಆಸ್ವಾಧಿಸಿದೆ - ಹೆಣ್ಣೆಂದರೇ ಮಾಧುರ್ಯ, ಅವಳೆಂಬ ಸೃಷ್ಟಿ ಚೈತನ್ಯ ಜನ್ಮತಃ ಒಂದು ಸೂಕ್ಷ್ಮ ಬೆರಗು / ಬಯಕೆ / ಬೆಳಕು ನನ್ನಲ್ಲಿ...
ಹೌದೂ -
ಇನ್ನಾದರೂ ನಿಂತೀತೇ ಈ 'ಹಾಡಿದ್ದೇ ಹಾಡೋ ಕಿಸ್ಬಾಯ್ ದಾಸನ' ಹುರುಳಿಲ್ಲದ ಅಪದ್ಧ ಬಡಬಡಿಕೆ - ಕಾರಣ ಮತ್ತೆ ಹತ್ತಾಯಿತಲ್ಲ - ಹೊರಳಿಕೊಳ್ಳಬಹುದು ಇನ್ನಾವುದೋ ಬದಿಗೆ ಅಥವಾ ಉರುಳಿಕೊಂಡರಾದೀತು ಮಣ್ಣ ಎದೆಗೆ...
ಕಾಯುವಿಕೆಯ ಕಿಡ್ಕಿ ತೆಗೆದೇ ಇದೆ...
ಹರಿದರೂ, ನಿಂತೇ ಹೋದರೂ, ಕಾಣಲು, ಕಾಯಲು ನೀವಿದ್ದೀರಲ್ಲ - ಈ ಅಬ್ಬೇಪಾರಿ ನಡಿಗೆಯ ಬಹು ದೊಡ್ಡ ಧನ್ಯತೆ ಅದು...
ನಿಮಗೆ - ಪ್ರೀತಿ ಪ್ರೀತಿ ಮತ್ತು ಪ್ರೀತಿ ಅಷ್ಟೇ...
- ವಿಶ್ವಾಸ ವೃದ್ಧಿಸಲಿ,
___ ಶ್ರೀವತ್ಸ ಕಂಚೀಮನೆ