Thursday, January 14, 2021

ಗೊಂಚಲು - ಮುನ್ನೂರೈವತ್ತೇಳು.....

ವತ್ಸಾ ನಿನ್ನದೇನು ಕೊಸರು.....

ಮೌನವನ್ನು ಆಚರಿಸಿ ಎಂದು ಮಾತಿನ ಮೂಲಕ ಸಾರಲಾಯಿತು...
ಧ್ಯಾನಸ್ಥ ಗುರುವಿನ ಚಿತ್ರಪಟದ ಅಡಿಗೆ ಆತನ ಸಾವಿರ ಮಾತುಗಳ ಪೈಕಿ ಹೆಕ್ಕಿ ತೆಗೆದ ಪ್ರಸಿದ್ಧ ವಾಕ್ಕುಗಳ ಬರೆದಿಡಲಾಗುತ್ತದೆ...
#ಮೌನ_ಶ್ರೇಷ್ಠವಂತೆ_ಆದರೆ_ನಂಗೋ_ಸಾವೆಂದರೆ_ಭಯ...
↜⇍⇑⇏↝

ಕಾಯುವ ಎದೆ ಕೊಳಲ ನೂರು ರಾಗಗಳಲೂ ಕೃಷ್ಣನೊಂದೇ ಉಸಿರು...
#ಸಖತ್ವ...
↜⇍⇑⇏↝

ಸುಮ್ಮನೇ ಬಿಟ್ಟಿಟ್ಟರೂ ಲಡ್ಡಾಗಿ ಹರಿದು ಹೋಗತ್ತೆ...
ಗಟ್ಟಿ ಎಳೆದಾಡಿದ್ರೂ ಬಲ ತಾಳದೆ ತುಂಡಾಗಿಬೀಳತ್ತೆ...
ಮೌನ - ಮಾತು - ಭಾವ - ಬಂಧ - ಸಂಬಂಧ ಎಲ್ಲಾ ಅಷ್ಟೇ ಅಷ್ಟೇ...
ಬಗೆಹರಿಯದ ಇದನ್ನೆಲ್ಲಾ ಸಮದೂಗಿಸೋ ಬಗೆ ಅರಿವುದರೊಳಗೆ ಬದುಕು ಮುಗಿದೇ ಹೋಗಿರತ್ತೆ...
#ವತ್ಸಾ_ನಿನ್ನದೇನು_ಕೊಸರು...
↜⇍⇑⇏↝

ಶರಧಿಯ ಹಾರಿದ್ದು ಹನುಮನ ಶಕ್ತಿಯಾದರೂ ಹಾರಿಸಿದ್ದು ಜಾಂಬವನ ಯುಕ್ತಿ...
ಒಡನಾಡಿಯ ಒಳಗನರಿತು ಒಡನಾಡುವ ನೇಹಿಗಳೆಲ್ಲ ಜಾಂಬವನ ಕುಲದವರೇ ಅನ್ಸತ್ತೆ...

ನನ್ನ ಜೀವಿತ ಚೈತನ್ಯವ ನನಗಿಂತ ಗಟ್ಟಿಯಾಗಿ ನಂಬಿದ್ದಲ್ಲದೇ ಕತ್ತಲ ಕುಹರದಲಿ ನಾ ತೆವಳುವಾಗದನು ನನಗೇ ಬಿಡಿಸಿ ತೋರುವ ಹೊರಗಿನ ಬೆಳಕ ಕಿಡಿ - ಅದು ಆಪ್ತ ನೇಹ...
"ಒಂದೊಂದು ಆತ್ಮೀಯ ನೇಹವೂ ಅಗಣಿತ ನೆನಪು, ಕನಸುಗಳ ಹೆತ್ತುಕೊಡೋ ಹೇಮಗರ್ಭವೇ..."
ಬಂದದ್ದು ಕಾಲವೂ ಇರಲಿರಲಿ, ಲೆಕ್ಕ ತಪ್ಪಿ ಬಪ್ಪಷ್ಟು ಯಾವತ್ತೂ ಜೊತೆ ಬರಲಿ ಬದುಕಿನುಡಿತುಂಬಿ ನಗೆಯಾಗಿ ನೇಹಿಗಳೆದೆಯ ಪ್ರೀತಿ ಫಲತಾಂಬೂಲ...
#ಗೆಳೆತನವೆಂಬೋ_ಹೃದಯಸ್ಥ_ಸಂಭಾಷಣೆ...
↜⇍⇑⇏↝

ಕೇಳಿಸ್ತಾ -
ಸತ್ಯಕ್ಕೂ ಕೂಡಾ ಸುಳ್ಳಿನೆದುರು ತನ್ನನ್ನು ತಾನು ಸಾಬೀತುಪಡಿಸಿಕೊಂಡಾಗಲೇ ಜಗಮನ್ನಣೆ ಇಲ್ಲಿ...
ಹಾಗೆಂದೇ,
ನನ್ನ ಕ್ರಿಯೆಗಳನ್ನು ನನ್ನ ನೆಲೆಯಲ್ಲಿ ಸಮರ್ಥಿಸಿಕೊಳ್ಳುವ ಅವಕಾಶ ಇಲ್ಲವಾಗುವ ಸ್ಥಿತಿಯಲ್ಲಿ "ನಾನು" ತೀರಾ ಕಂಗಾಲಿಗೆ ಬೀಳ್ತೇನೆ...
ಅದರಲ್ಲೂ ದೇಹದ ನಿತ್ಯವಿಧಿಗಳು ಎಷ್ಟು ಪ್ರಾಕೃತಿಕವೋ ಅಷ್ಟೇ ಅವುಗಳ ಲೋಕಮರ್ಯಾದಿಯ ಬಣ್ಣವೂ ಗಾಢ ಮತ್ತು ಅದನ್ನೇ ನನ್ನ ಮನಸಿಗೂ ನಾನು ಮೆತ್ತಿಕೊಂಡಾಗಿದೆಯಲ್ಲ...
ಇಲ್ಕೇಳು,
ಹೆಣವಾದಾಗ ಬೆತ್ತಲಾಗಿಸಿ ಸುಡ್ತಾರೆ ಅಂತ ಗೊತ್ತಿದ್ದೂ ಬೆತ್ತಲೆ ಮಲಗಿದಲ್ಲೇ ಸಾಯುವ ಧೈರ್ಯ ಹುಟ್ಟುವುದಿಲ್ಲ ನೋಡು - ಅದಕೆಂದೇ ನಿನ್ನಿಂದಲಷ್ಟೇ ಅಲ್ಲ ನನ್ನಿಂದಲೂ ದೂರ ನಿಂತು ಬಟ್ಟೆಯ ಬಡಿವಾರಕ್ಕೆ ಜೋತುಬೀಳ್ತೇನೆ...
ಆ ತೀರದಲಿ ನೀನು, ಈ ದಂಡೆಯಲಿ ನಾನು - ಮನಸುಗಳ ದೋಣಿ ವಿಹಾರ; ಕನಸುಗಳು ಬೆರೆತರೆ ನಿರ್ಬಂಧವೇನಿಲ್ಲ ಬಿಡು - ಬೆರಳುಗಳ ಬೆಸೆದು ನಡೆದರಲ್ಲವಾ ಬೀದಿಯ ಕಣ್ಣಲ್ಲಿ ಕೆಂಪು ಖಾರ...
ಏನ್ಗೊತ್ತಾ,
ಬೀದಿ ಹೆಣವಾಗೋ ಭಯದಿಂದ ಲೋಕಮಾನ್ಯತೆಯ ಸಗಟು ಮಾರಾಟದ ಬೀದಿ ಬೀದಿ ಸುತ್ತುತ್ತೇನೆ ಮತ್ತು ಬೆತ್ತಲಲ್ಲೇ ಹೆಣವಾಗೋ ನಡುಕಕ್ಕೆ ಸಭ್ಯತೆಯ ಸೋಗನ್ನು ಸಾಕಿಕೊಳ್ತೇನೆ...
ಅಲ್ವೇ,
ಮನಸನಾದರೂ ಮಗುವಂತೆ ದುಂಡಗೆ ಆಡಲು ಬಿಡಬಹುದಿತ್ತು ನಿನ್ನುಡಿಯಲ್ಲಿ...
ಆದರೋ,
ಮೌನವ ದಾಟಿಸಲಾರೆ - ಮಾತಿನ ಶಾಪವಿರಬೇಕು... 
ಮಾತಿನ ಅಂಬಲಿ ಅರಗುವುದಿಲ್ಲ - ಮೌನದ ಅಭಿಶಾಪವೇನೋ...
#ವಿಕ್ಷಿಪ್ತನ_ನಿವೇದನೆ...
↜⇍⇑⇏↝

ದನಿ ಹೊರಡುವ ಮುನ್ನವೇ ಸಂಭಾಷಣೆ ಮುಗಿದುಹೋಗುತ್ತದೆ - ಭಾವ ಬರಡಾದ ನೆಲದಲ್ಲಿ..‌.
ಕಟ್ಟು ಕಥೆಗಳೂ ಹುಟ್ಟದ ಖಾಲಿತನದೊಳಗೆ ಇಂಚಿಂಚಾಗಿ ಜಾರುವ ದಿನ ಸಂಜೆಗಳು..‌.
ಇವನ ಎದೆಯೀಗ ಒಳಗೆ ತಿರುಳಿಲ್ಲದ ಬರಿ ತೌಡು...
ಮಸಣದ ಬಾಗಿಲಲ್ಲಿ ಹೆಗಲ ಭಾರವನೇನೋ ಇಳಿಸಿಬಿಡಬಹುದು...
ಆದ್ರೆ ಎದೆಯ ಭಾರವನಾದರೋ ಇಳುಕಲು ಕಾಲನೂ ಹೆಣಗಬೇಕು...
ಬುಟ್ಟಿ ಬುಟ್ಟಿ ಭಾವಗಳಿಗಿಂತ ಮುಟಿಗೆ ನಿರ್ವಾತಕ್ಕೇ ತೂಕ ಹೆಚ್ಚೆಂಬುದು ನೀ ಎದ್ದು ನಡೆಯುವ ತನಕ ಗೊತ್ತೇ ಆಗಲಿಲ್ಲ ನೋಡು...
ಮುರಿದು ಹೋಗುವ ಮುನ್ನ ಮುಗಿದು ಹೋಗಬೇಕಿತ್ತು...
ಕುಂಟು ನೆಪಗಳ ಜೋತು ಎಷ್ಟೂಂತ ನಡೆಯಬೇಕು ಹೇಳು...
ಸಾವಿನ ಮನೆಯಲೂ ನಗೆಯ ಹುಡುಕೋ ಮೋಹಿಯೂ ಒಳಗೇ ಸಾವಿಗೆ ಕಾಯಬೇಕು..‌.
#ಭಾವನಿರ್ವಾಣ...
#ಕೆಟ್ಟ_ಅಲವರಿಕೆ...
↜⇍⇑⇏↝

ನೀ ಬಳಸಿಕೊಂಡ ಹಾಗೆ ಹಾಗೂ ನೀ ಉಳಿಸಿಕೊಂಡಷ್ಟು ನಾನು ನಿನ್ನವನೇ...
#ಕೇಳಿಸ್ತಾ...
↜⇍⇑⇏↝

ಸ್ಪರ್ಶ ಮಳೆಯಂತೆ - ತಂಪಾಗುತ್ತೇನೆ ಒಮ್ಮೆ, ಕೊಚ್ಚಿ ಹೋಗುತ್ತೇನೆ ಇನ್ನೊಮ್ಮೆ...
ಒಂದು ಸ್ಪರ್ಶ - ಮಾತು ಮೌನಗಳೆಲ್ಲ ಮೈಮರೆತು ಸ್ಥಾನ ಕಳಕೊಳ್ಳುತ್ತವೆ...
#ತಬ್ಬಿಕೊಂಡದ್ದು_ಭಾವ_ಕಾವ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment