Thursday, January 14, 2021

ಗೊಂಚಲು - ಮುನ್ನೂರೈವತ್ತೆಂಟು.....

ಉತ್ತರಾಯಣ ಪುಣ್ಯ ಕಾಲ.....

ಎಳ್ಳು ಬೆಲ್ಲದಾ ಹದ ಬೆರೆಸಿ ಹಿಂಜಿ ಕಟ್ಟಿದ ಪ್ರೀತಿ ಪಾಕದ ಉಂಡೆ,
ಊರೆಲ್ಲ ಬೀರಿ ಬೀರಿ ಎದೆಯ ಬಳ್ಳದ ತುಂಬಾ ನಗೆಯ ಸಿರಿ ಪೈರು,
ಹೃದಯದಿಂ ಹೃದಯಕೆ ಪ್ರೀತಿ ನಗೆ ಬೆಳಕ ಸಂಕ್ರಮಣ... 🌾ಶುಭವೊಂದೇ ಆಶಯ... 🥳
↽⇈⇋⇊⇁

ಉತ್ತರಾಯಣ ಪುಣ್ಯ ಕಾಲವಂತೆ - ಕಾಲ ಕರೆದರೆ...

ಮತ್ತು -
ಹೊರಡೋ ಹೊತ್ತಲ್ಲಿ 'ಒಂದು ಘಳಿಗೆ ಇದ್ದು ಹೋಗೋ ಗೂಬೆ' ಅಂತ ಕಣ್ತುಂಬಿ ಪೀಡಿಸೋರು ಎದುರಾಗಿಬಿಟ್ರೆ ಕೊರಳುಬ್ಬಿ ಬಾಗಿಲ ಪಟ್ಟಿಗೆ ಕಾಲು ಎಡವುತ್ತಲ್ಲ ಅದು ಬದುಕಿನ ಮಹಾ ಪುಣ್ಯ ಕಾಲ...

ಗಳಿಕೆ -
ಅಂತಿಮ ಸತ್ಯಕೂ ಅಗಣಿತ ಪ್ರೀತಿ ಸ್ಪರ್ಶ - ಚಿತೆಯ ಮೇಲಿನ ಪಾದ ತೊಳೆದ ಕಣ್ಣ ಹನಿ...
↽⇈⇋⇊⇁

ನಿನ್ನ ಕಾಳಜಿಯಾಗಿ ಒಮ್ಮೆ, ನಾ ಬದ್ಕಿದೇನೆ ಅಂತ ನಿಂಗೆ ತಿಳಿಸಲು ಇನ್ನೊಮ್ಮೆ, ನೀನೆಂಬ ನೇಹವೊಂದು ನಗುವಿಗೂ, ಅಳುವಿಗೂ ಬಿಚ್ಚಿಕೊಳ್ಳಲೊಂದು ಆಪ್ತ ಎದೆಯಾಗಿ ಜೀವಿಸಿದ್ದ ನಿನ್ನೆಗಳ ನೆನಪಿನ ಉರಿಯ ಆರಿಸಲಾಗದ ಎದೆಗುದಿಗೆ ಬೆಳಗಾಗಿದ್ದಕ್ಕೋ, ಹಗಲು ಮುಗಿದದ್ದಕ್ಕೋ ಯಾವುದಕ್ಕೋ ಶುಭಾಶಯ, ಒಂದೇನೋ ಹಳಸಲು ನಗು, ಹಂಗೋ ಹಿಂಗೋ ಒಟ್ನಲ್ಲಿ ಯಾವುದೋ ಕುಂಟು ನೆಪ ಬಳಸಿ ನಿನ್ನ ಮಾತಾಡಿಸುವುದು ಎನ್ನ ಹುಚ್ಚೆದೆಯ ಖಾಯಂ ಖಯಾಲಿ..‌.
#ನೀ_ದೂರ_ನಿಂತದ್ದು_ಅರಿವಾದ_ಮೇಲೂ...
↽⇈⇋⇊⇁

ಇಲ್ಕೇಳು,
ಎಲ್ಲ ನಡೆವ ಹಾದಿಯಲ್ಲೇ ಸಾವೂ ನಡೆಯುವುದು...
ನಿನ್ನ ತೋರೋ ಹಾಳಿಗುಂಟ ಬದುಕು ಚಿಗುರುವುದು...
ವಸಂತ ಮುತ್ತಿ ಹಸಿರನುಟ್ಟ ಲತೆಯ ನಡುವನು ಒಂದೊಮ್ಮೆ ಗ್ರೀಷ್ಮವೂ ಬಳಸುವುದು...
ಹಾದಿ ಸವೆದು, ಚಪ್ಪಲಿ ಹರಿದು, ಪಾದ ಒಡೆದು ನೋವು ಕಣ್ಣ ತೊಟ್ಟಿಲ ತೂಗಿದರೂ ನಿನ್ನ ತೋಳಿನಂಗಳ ಸೇರುವಾಗ ಎದೆಯ ನಗೆಯು ಸೋಬಾನೆ ಹಾಡುವುದು...
ನಿನ್ನೂರ ಮುರ್ಕಿ ಹಾಗೂ ಸಾವಿನೂರ ಬಯಲು - ಕೆರೆ ದಂಡೆ ಬಾಲ್ಯದ್ದಲ್ಲ ಬದುಕಿನ ಆಟ...
ಆಟ ಕಲಿಯದೇ ತರಬೇತಿಯ ಅಖಾಡಕ್ಕಿಳಿದಂತೆ ಬದುಕ ಬಯಲಿಗೆ ಬಿದ್ದವನಿಗೂ ಗೊತ್ತು; ನಿಲ್ದಾಣದ ಹೆಸರಿಟ್ಟುಕೊಂಡವೆಲ್ಲ ಹಾದಿಬದಿಯ ಅರವಟಿಗೆಗಳಷ್ಟೇ ಎಂಬುದು...
ಆದರೂ,
ಹಂಗೇ ಸಾಗುವಾಗ ಒಂದು ಚಿಪ್ಪು ಪ್ರೀತಿ ಅಂಬಲಿಯ ಉಂಡು ಹೋಗೋ ಗೂಬೆ ಅಂದವಳ ತೆರೆದ ಎದೆ ಕದದ ಹಣೆಪಟ್ಟಿಯ ಕಣ್ಣಿಗೊತ್ತಿಕೊಳ್ಳದೇ ಹೆಂಗೆ ಭವ ದಾಟುವುದು...
ಸಾವು ಹಾಯುವ ಮುನ್ನ ಒಂದು ರಜ ಬದುಕಿಗೆ ಹಾಯ್ ಅನ್ನಬೇಕು ಮತ್ತು ಅದಕ್ಕೆ ನಿನ್ನ ಬಾಹು ಬಳ್ಳಿ ಬಿಗಿ ಬಂಧದಲ್ಲಿ ತೃಪ್ತ ಕಣ್ಣು ತೂಗಬೇಕು, ಮೈಮನವು ತೇಗಬೇಕು...
#ಯಾವ_ಹಾದಿಯಲ್ಲಿದ್ದೀನೋ_ಅಂತೂ_ಹೊರಟದ್ದಾಗಿದೆ_ತಲುಪಬಹುದು...
↽⇈⇋⇊⇁

ನನ್ನ ಕರೆ, ಅರಿಕೆ, ಅಹವಾಲು ಅಲ್ಲಿಗೆ ತಲುಪಿ ಮಾರುತ್ತರ ಬರುವ ಖಾತರಿ ಏನಿಲ್ಲ...
ಹಾಗಂತ,
ಅಲ್ಲಿಂದ ಬರುವ ಸಣ್ಣ ಕೂಗಿಗೂ ಓಗೊಡದೆ ಮುಖತಿರುವಲು ನನ್ನಲ್ಲಂತೂ ಕಾರಣಗಳೇ ಇಲ್ಲ...
ಬಿಡಿ,
ಮೌನ ಶ್ರೇಷ್ಠವಂತೆ - ನಾನು ಮಾತಿನ ಗೊಲ್ಲ...
#ದೇವರಂಥವರು...
↽⇈⇋⇊⇁

ಯಾವ ಹಾದಿಯಲ್ಲಿದ್ದೀನೋ...
ನಾ ಸವೆಯುತಿರುವುದು ನನಗೆ ನನ್ನ ಹೊರತು ಬೇರೇನೂ ಕಾಣದ ಭಂಡತನದ ಗರಡಿಯಲ್ಲಾ ಅಥವಾ ನನಗೇ ನಾನೂ ಸಿಗದ ಸಾವಿನ ಕೋವೆಯಲ್ಲಾ...?!
ನಿನ್ನ ಅಂತಃಕರಣದ ನುಡಿ ನಡೆಗಳೂ ಬರೀ ಹೇಳಿಕೆ ತೋರಿಕೆಗಳಾಗಿ ಕಾಣುವ ನನ್ನ ಭಾವರಾಹಿತ್ಯವ ಏನೆಂದು ಸಮರ್ಥಿಕೊಳ್ಳಲಿ ಅಥವಾ ಸಮರ್ಥನೆಗೆ ಸಿಕ್ಕಿದ್ದೆಲ್ಲಾ ಸಮ ಅಂತ ಒಪ್ಪಲಾದೀತಾ...!!
ಮತ್ತು
ಅನಿಸಿಕೆಗಳ ಜೋತು ಬದುಕು ನಿಲ್ಲೊಲ್ಲ ಹಾಗೂ ಸಮರ್ಥನೆಗಳಗಳನು ಸಾವು ಕೂತು ಕೇಳೊಲ್ಲ...
ಮೌನವ ನೀನೇ ಶ್ರೇಷ್ಠ ಎಂದು ಒಪ್ಪಿಸಿದ್ದು ಮಾತಿನ ಸೋಲೇ ಇದ್ದೀತು ಬಿಡು...
ಒಂದು ಬಿರುಕಾದರೂ ಇದ್ದರೆ ಅದರೆಡೆಯಿಂದಲೇ ಹಸಿರ ಚಿಗುರೊಂದು ಉಸಿರಾಡೀತೇನೋ, ಆದ್ರೆ ಉರುಟು ಬಂಡೆ ಮೇಲೆ ಪಾಚಿ ಕೂಡಾ ಗಟ್ಟಿ ನಿಲ್ಲೊಲ್ಲ...
ಏನ್ಗೊತ್ತಾ -
ನನಗಿನ್ನೂ (ಎಂದೂ) ಅರ್ಥವಾಗದ್ದನ್ನು ಪದಗಳ ಪಾದದ ಪಾದುಕೆಯಾಗಿಸಲು ಹೊರಟಾಗಲೆಲ್ಲಾ ಇಂಥ ಅಸಂಬದ್ಧ ಪದಮಾಲೆಯಾಗುತ್ತದೆ... 
#ಹೆಣ_ಕಾಯುವವನ_ಹುಳಿ_ಹೆಂಡ_ಮಾತಾಡುವಾಗ_ಬದುಕಿನ_ಬಿಡಿ_ಸತ್ಯಗಳು_ಬಲ_ಮಗ್ಗುಲಾಗಿ_ಮೈಮುರಿಯುತ್ತವೆ...
↽⇈⇋⇊⇁

ಪ್ರೀತೀನ ವಾಚಾಮಗೋಚರ ಹಾಡಿ ಹೊಗಳುವ ರುದಯ ಚತುರ ನಾನೇ 'ನನ್ನದೇ ನೂರಿರುವಾಗ ನಿನ್ನದೇನ ಕೇಳಲೀ' ಅನ್ನಬಲ್ಲೆ ಸುಲಭವಾಗಿ...
ನುಡಿವಲ್ಲಿ, ಪಡೆವಲ್ಲಿ ಚೂರೂ ಅಡ್ಡ ಬರದ ಅಹಂ ಕೊಡುವ ಸಹನೆಯ ಎದುರು ಮಾತ್ರ ಗಟ್ಟಿ ನಿಲ್ಲುತ್ತೆ...
#ವ್ಯಾಖ್ಯಾನಗಳ_ನಂಬಿದರೆ_ಸತ್ರಿ...
↽⇈⇋⇊⇁

ಕೇಳಿಲ್ಲಿ -
ಮರೆತುಬಿಡೂ ಅಂತ ಹೇಳಿ ಹೋದದ್ದಲ್ಲ ನೀನು, ನೀನೇ ಮರೆತಂತೆ ನನ್ನಿಂದ ದೂರ ನಿಂತು ಬದುಕಲು ಕಲಿತದ್ದು - ನನ್ನ ಪಾಲಿನ ಪುಣ್ಯ...
ಮರೆಯ ಹೊರಟದ್ದೇ ಮತ್ತೆ ನೆನಪಾಗುವಂತಾಗಬಾರದು ನೋಡು ಅಡಿಗಡಿಗೆ, ನನ್ನ ಬೀದಿಯಲ್ಲಿ ಅಲೆವ ಯಾವ ಅನಿವಾರ್ಯ ಕೆಲಸವೂ ಬಾರದಿರಲಿ ಎಂದೂ ನಿನಗೆ - ನನ್ನದಿದೊಂದೇ ಹಾರೈಕೆ...
ಕಲೆಸಿಹೋದ ಹೆಜ್ಜೆ ಗುರುತು - ಕಣ್ಣ ಚುಚ್ಚುವ ಧೂಳ ಕಣ - ಯಾರು, ಯಾರಲ್ಲಿ, ಎಷ್ಟು, ಹೇಗೆ ಜೀವಂತವೋ - ಹೆಣ ತೂಗುವ ಹಗಣವೇತಕೆ ಹೇಳು...
ಸೋಲಿನ ಪಟ್ಟ ನನಗೇ ಇರಲಿ - ಜೊತೆಗೆ ಚೂರು ಮರೆವೂ ದಕ್ಕಲಿ...
#ಕಂಗಾಲು_ಕನವರಿಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment