Friday, January 25, 2019

ಗೊಂಚಲು - ಎರಡ್ನೂರ್ತೊಂಭತ್ತೆರ‍್ಡು.....

ಈ ಕೂಸಿಗೆ ಎಂಟು ತುಂಬಿತು.....!!! 

ಅಲೆತೊಳೆವ ಹಾದಿಯಲಿ ಹೆಸರ ಬರೆದು ಗುರುತು ಹುಡುಕುತ್ತೇನೆ - ಮರಳ ಕಣ ನಗುವಾಗ ಅಲೆಯ ಹೊಟ್ಟೆಹುಳುಕನು ಶಪಿಸುತ್ತೇನೆ...
ತಲೆಮಟ್ಟ ಸಿಡಿವ ತೆರೆ - ಮೈಯ್ಯೆಲ್ಲ ಉಪ್ಪುಪ್ಪು - ಆ ಹಾದಿ, ಆ ನೆನಪು, ಮತ್ತೆ ಹುಟ್ಟುವ ಕನಸು - ದಡದಾಚೆ ಕಾಡಿನಲಿ ಯಾರೋ ಕಾಯುತಿರುವಂತೆ, ನನ್ಹೆಸರ ಕೂಗುತಿರುವಂತೆ - ಕಣ್ಣ ಹನಿಯಲ್ಲಿ ಸಾಗರನಿಗೂ ಮುಪ್ಪು...

ಭಿನ್ನೆತ್ತೆಯಲ್ಲಿ ಅದದೇ ಅ ಆ ಇ ಈ ಗಳನ್ನು ಮತ್ತೆ ಮತ್ತೆ ತಿದ್ದಿ ತಿದ್ದಿ ಪಾಟಿಯ ಮೈ ಹಕ್ಕಳೆದ್ದರೂ ಶಾಲೆ ಓದು ತಲೆಗೆ ಹತ್ತಲೇ ಇಲ್ಲ - ಕಾಗುಣಿತದಾಚೆ ಬುದ್ಧಿ ಬೆಳೆಯಲೇ ಇಲ್ಲ...
ಬದುಕಿನ ಪಾಠಶಾಲೆಯಲ್ಲಿಯೂ ಈಗಲೂ ಅದೇ ಭಿನ್ನೆತ್ತೆಯ ದಡ್ಡ ಕುಮಾಂಡು ಹುಡುಗ ನಾನು - ಅದದೇ ಭಾವ, ಮತ್ತದೇ ಮಾತುಗಳನ್ನು ಸತತ "ಎಂಟು" ವರ್ಷಗಳಿಂದ ಬ್ಲಾಗ್ ಎಂಬೋ ಸಾರ್ವಜನಿಕ ದಿನಚರಿ ಪಟ್ಟಿಯಲ್ಲಿ ಗೀಚುತಲಿದ್ದೇನೆ - ಮನವೂ ಪಕ್ವವಾಗಲೇ ಇಲ್ಲ...

ಸಣ್ಣ ನಗೆಯ ಚಿಗುರಿಗೆ ಮಗ್ಗುಲ ನೋವಿನ ನೆರಳು ಜೋಗುಳ ಹಾಡುವ ರೀತಿಗೆ ವಿವಶನಾದವನಂತೆ ನಗುವಿಗಿಂತ ಹೆಚ್ಚು ನೋವನ್ನೇ ಗೀಚಿದೆ - ತುಟಿಯಂಚ ನಗು ಬಾಡಿಲ್ಲ...
ಸಾವಿರುವ ಕಾರಣಕ್ಕೆ ಬದುಕು ಚಂದ ಅನ್ನಿಸಿದ್ದಕ್ಕೋ ಅಥವಾ ಬದುಕು ಕಾಡುವ ಪರಿಗೆ ಸಾವೇ ಹಿತ ಅನ್ನಿಸುವ ಭಾವಕ್ಕೋ ಗೊತ್ತಿಲ್ಲ ಹುಟ್ಟಿನ ಸಂಭ್ರಮಕ್ಕಿಂತ ಸಾವಿನ ಸೂತಕವನ್ನೇ ಮತ್ತೆ ಮತ್ತೆ ಬರೆದೆ - ನನ್ನಲಿನ್ನೂ ಉಸಿರಿದೆ...
ಚೂರೂ ಪರಿಚಯವೇ ಇಲ್ಲದ ಪ್ರೇಮವ ಕೆತ್ತಿದೆ - ಹುಟ್ಟಾ ಪೋಲಿಯ ಕೆಟ್ಟ ಕನಸಿನಂತೆ; ಅವರಿವರೊಪ್ಪದ ಬೇಶರತ್ ಕಾಮವ ಒಪ್ಪಿ, ಅಪ್ಪಿ ಪದೇ ಪದೇ ಹಾಡಿದೆ - ಪ್ರೇಮವ ತೂಗಿದ ತೋಳ ತೊಟ್ಟಿಲಿನಂತೆ... 

ಸದಾ ಜಾಗೃತ ಅತೃಪ್ತಿಯೇ ನಡೆವ ಹಾದಿಯ ಹುಚ್ಚು ಸೌಂದರ್ಯವೇನೋ - ನಾ ನಡೆದದ್ದು ಪೂರಾ ಪೂರಾ ನನ್ನ ಹಾದಿ... ಅಂತೆಯೇ ನಾ ಬರೆದದ್ದೂ ನನ್ನ ವಿಕ್ಷಿಪ್ತ ಮನದ ಹುಚ್ಚನ್ನೇ...
ಆ ಆ ಕ್ಷಣಗಳಲ್ಲಿ ನನ್ನೊಳಗೆ ಕೆರಳುವ, ನನ್ನ ಕೆಣಕುವ ಪ್ರೇಮ, ಕಾಮ, ಕನಸು, ಕಲ್ಪನೆ, ಸೋಲು, ಅಸಹಾಯಕತೆ, ಗೆಲುವಿನ ಭ್ರಮೆ, ಅಹಂಕಾರ, ಆಕಾರ, ವಿಕಾರಗಳ ಸಾಂಗತ್ಯದಲ್ಲಿ  ಪಡಕೊಂಡ, ಕಳಕೊಂಡ ಕನವರಿಕೆಗಳಿಗೆಲ್ಲ ತೋಚಿದ ಅಕ್ಷರಗಳ ಹೆಕ್ಕಿ ಹೆಕ್ಕಿ ಶಬ್ದಗಳ ಬಣ್ಣ ತುಂಬುತ್ತಾ ನನ್ನೊಳಗನ್ನು ಬರಿದಾಗಿಸಿಕೊಂಡೆ, ಹಗುರಾಗಿಸಿಕೊಂಡೆ...

ಮನೆಯ ಬೆಳಕೆಲ್ಲ ಆರಿಸಿ ಕತ್ತಲ ಬಳಿದುಕೊಂಡು ಅಟ್ಟ ಹತ್ತಿ ಮಲಗಿ ಬೆಳದಿಂಗಳ ನೋಡ್ತಾ ಮನಸಿನ ಮಾತಿಗೆ ಕಿವಿ ತೆರೆದರೆ ಅಂಗಳದ ಮೂಲೆಯ ಪಾರಿಜಾತ ಅರಳ್ತಾ ಇತ್ತು ಎದೆಗೂಡಿನೊಳಗೂ - ಡೈರಿಯ ಚಿತ್ತುಕಾಟು ಕೈಬರಹವಾಗಿ ಅಲ್ಲಿಂದ ಶುರುವಾದ ಅಕ್ಷರ ಸಾಂಗತ್ಯ ಬ್ಲಾಗ್‌ನ ಗೊಂಚಲುಗಳಾಗಿ ಇಲ್ಲಿಯವರೆಗೂ ನಡೆದು ಬಂದದ್ದು ಖುಷಿಯ ಸೋಜಿಗ...

ನನ್ನ ಅದದೇ ಪ್ರಲಾಪಗಳನೂ ಅಕ್ಕರೆಯಿಂದ ಓದಿ ಮೆಚ್ಚಿದ ನಿಮ್ಮಗಳ ಅಕಾರಣ ಅಭಿಮಾನಕ್ಕೂ ಮಿಗಿಲು ಇನ್ನೇನಿದೆ - ವಿನಾಕಾರಣ ಪ್ರೀತಿಯ ಹರಿವಿನ ಅಭಯದೆದುರು ತುಂಬಾ ಚಿಕ್ಕವನು...

ಕೈಯೆತ್ತಿ ಕೊಟ್ಟ ಅರಿವಿಲ್ಲ, ಕೈಚಾಚಿ ಪಡೆದದ್ದೇ ಎಲ್ಲ - ಪ್ರೀತಿಯ ಹಿರಿತನಕೆ ಬೇಶರತ್ ಶರಣಾಗತಿ...

ಎಂಟು ವರುಷ - ಅಂದ್ರೆ ತೊಂಭತ್ತಾರು ಮಾಸ - ಮಾಸಕ್ಕೆ ಮೂರು ಮತ್ತೊಂಚೂರು ಗೊಂಚಲು...
ಹ ಹಾ... ನನ್ನ ಮಟ್ಟಿಗೆ ಬಹುದೊಡ್ಡ ಸಾಧನೆಯೇ...
ಸ್ವಗತದಂತೆ, ಸ್ವಪಚತನದಂತೆ, ಸಿನಿಕತೆಯನ್ನೂ ಸಿಹಿಪಾಕದಂತೆ, ನೋವಿಗಷ್ಟು ನಗುವಿಗಿಷ್ಟು ಗಾಢ ಬಣ್ಣವ ಮೆತ್ತಿ ಶಬ್ದಗಳ ಅಲಂಕಾರದಲಿ ಹೆಣೆದು ನನ್ನೇ ನಾ ತೂರಿಕೊಂಡೆ - ಬರೆದ ನೋವು, ನಗುವು, ನೇಹಗಳ ಅಷ್ಟಿಷ್ಟು ಬದುಕಿದೆ - ಮಧುರ ಪಾಪಗಳಿಗೆ ಮನಸಾರೆ ತೋಳ ತೆರೆದಿಟ್ಟು ಬೆಸೆದುಕೊಂಡ ರಸಿಕ ರವಳಿಯ ಗುಂಗನು ಬೆಚ್ಚಗೆ ಕಾಯ್ದುಕೊಂಡೆ; ಪರಿಣಾಮ  - ಅಲ್ಲಿಷ್ಟು ಇಲ್ಲಿಷ್ಟು ಸೇರಿ ಸ್ವಂತಕ್ಕೆ ಈಗ ಈ ಹೆಗಲ ಚೀಲದ ತುಂಬಾ ನೀವುಗಳು ಎತ್ತಿ ಕೊಟ್ಟ ಅಭಿಮಾನ ಅಕ್ಕರೆಗಳ ಸಕ್ಕರೆ ದಂಟು...!!! 
ಅದೇ ಹಳೆಯ ಸರಕನ್ನು ಹೊಸ ಪದಗಳಲ್ಲಿ ಇನ್ನೂ ಅದೆಷ್ಟು ಕಾಲ ಬರೆದೇನೋ ಗೊತ್ತಿಲ್ಲ - ಬರೆದಾಗ ಓದುವ ಪ್ರೀತಿ ಇಂತೆಯೇ ಉಳಿದಿರಲಿ ನಿಮ್ಮಲ್ಲಿ ಅನ್ನೋ ಚಂದದ ಸ್ವಾರ್ಥವಂತೂ ಇದ್ದೇ ಇದೆ...
ನಿಮ್ಮೊಡನಿದ್ದೂ ನಿಮ್ಮಂತಾಗದ ನಿಮ್ಮವನು... 




                               






--- ವಿಶ್ವಾಸ ವೃದ್ಧಿಸಲಿ
                                              ಶ್ರೀವತ್ಸ ಕಂಚೀಮನೆ   

Thursday, January 17, 2019

ಗೊಂಚಲು - ಎರಡ್ನೂರ್ತೊಂಭತ್ತೊಂದು.....

ಕನಸೂ.....

ಈ ಹುಚ್ಚು ಛಳಿಯ ಮೈಗೆ ನಿನ್ನ ಹಬೆಯಾಡೋ ಬೆತ್ತಲೆ ಭಾರವ ಹೊತ್ತು ಇರುಳ ದಾಟುವ ಕನಸು...
ಛಳಿಗೂ ಬೆತ್ತಲಿಗೂ ಹೊಯ್‌‌ಗೈ ಆದರೆ ಇರುಳ ಕೋಟೆಯಲಿ ಸುಖದ ವಿಜಯೋತ್ಸವ...
ಮಾಗಿ ಬಾಗಿಲ ಪಲ್ಲಂಗದ ರತಿ ರಂಗ ರಾಗದಲಿ ನಿನ್ನ ನರನಾಡಿ ತಂತಿಗಳ ಕೆಣಕಿ ಕೆರಳಿಸಿ ತಾರಕ ಮಿಡಿತಕ್ಕೊಯ್ದು ನೀ ಉತ್ಥಾನದಲಿ ವಿಜ್ರಂಭಿಸುವಾಗ ನನ್ನ ನಾ ಸಾರಾಸಗಟಾಗಿ ನಿನಗೊಪ್ಪಿಸಿ ಆ ಸುರತ ಸುಖಕ್ಕೆ ಶರಣಾಗುವ ಸುಖವುಂಟಲ್ಲ - ಉಫ್!! ಮದನನ ಹೂ ಬಾಣಕೂ ಭಾಷ್ಯ ಸಿದ್ಧಿಸಿರಲಿಕ್ಕಿಲ್ಲ ಆ ಎಲ್ಲ ಸೀಮೆಗಳ ಉಲ್ಲಂಘಿಸಿದ ಭಾಷೆಯಿಲ್ಲದ ಜೀವಾಭಾವಪ್ರಾಪ್ತಿಗೆ...
ಗೆದ್ದ ಇರುಳ ಕೋಟೆಯಲ್ಲಿ, ಸುಖದ ಸುಸ್ತು ಕಾಡುವಾಗ ನಿನ್ನ ತಳುಕು ತೋಳ ತೊಟ್ಟಿಲಲ್ಲಿ ನಿದ್ದೆಗೂ ಒಡಲುರಿಯ ತೊಳೆವ ಅಮೂರ್ತ ಹಿತ ಬೆಳಕಿದೆ...
ಹೆರಳ ಸವರುವ ನನ್ನ ಬೆಚ್ಚನುಸಿರು, ಏಕತಾನದಿ ಮಿಡಿವ ನನ್ನೀ ಹೃದಯ, ತಟ್ಟಿ ತಟ್ಟಿ ನಿನಗೆಂದು ನಿದ್ದೆಯ ಕರೆವ ಈ ಒರಟು ಕರಗಳು -  ನಗ್ನ ಮೈಮನದಿ ಎನ್ನೆದೆಯ ಕವುಚಿ ಮಲಗೋ ನಿನಗೆ ಅವೇ ನನ್ನ ಪ್ರೀತಿ ಲಾಲಿ...
ನಿದ್ದೆಗಣ್ಣಲ್ಲಿ ಕಾಲ್ಗಳ ಗೀರಿ ಕಚಗುಳಿ ಇಡುವ ನಿನ್ನ ಗೆಜ್ಜೆ, ಮತ್ತೆ ಮತ್ತೆ ಮುದ್ದು ಬಂದು ಬಿಗಿಯಾಗೋ ತೋಳು - ಇರುಳ ತುಂಬು ತೆಕ್ಕೆಯಲ್ಲಿ ಬೆಳಗಿಗೆ ಹೊಸ ಕನಸಿದೆ...
#ಛಳಿ_ಇರುಳ_ತಿಲ್ಲಾನ...
⇚⇖⇗⟴⇘⇙⇛

ಪ್ರೀತಿ ಪಡೆವ ಸುಖವಲ್ಲ - ಕೊಡುವ ಸೌಂದರ್ಯ...
#ಹೇಳಿಕೆ...
⇚⇖⇗⟴⇘⇙⇛

ತುಂಬ ಹೇಳಬೇಕು ಮೆಲ್ಲ - ಹೇಳಲಾಗದ ಗೊಲ್ಲ ಕೊಳಲ ಕೊಳಕೆಸೆದ...
ಯಮುನೆ ಗಂಟಲೊಣಗಿ ಉಗುಳು ನುಂಗುತ್ತಾಳೆ - ಬಿದಿರ ಬನದ ಗಾಳಿಯಲ್ಲೀಗ ಅವಳ ಮೌನದ ತಣ್ಣನೆ ಬೆಳಕೇ ಗಾನ...
ಮನಸು ಪರಿಚಯಿಸಿಕೊಂಡಂತೆಯೇ ಜಗಕೂ ತೋರಿಕೊಂಡರು - ಹಾಗೆಂದೇ ಗೊಲ್ಲ 'ಕೃಷ್ಣ'ನಾದ, ರಾಧೆ 'ಪ್ರೇಮವೇ' ಆದಳು...
ಒಪ್ಪಲಾರದ ಜಗ ಗುಡಿಯ ಕಟ್ಟಿತು...
⇚⇖⇗⟴⇘⇙⇛

ನೀನೆಂಬ ಮಂದ್ರ, ನೀನೇ ತಾರಕ , ನೀನಿಲ್ಲಿ ಎದೆ ಮಿಡಿತದ ಹಸಿ ಖುಷಿಯ ಗುಂಜಾರವದ ಆಲಾಪ... 
ನೀನೆಂದರೆ ಸಂಜೆಯ ಒರಟು ಅಂಗೈಯಲ್ಲಿ ಚೂರು ಚೂರೇ ಬಾಡುವ ನೆನಪ ಘಮದ ಸುಮ...
ಎದೆ ಸುಡುವ ಉರಿ ಛಳಿಯ ಥಳಿಸುವ ಹಂಡೆ ಒಲೆಯ ಕೆಂಡದಂತವಳೇ - ಜಗದ ಜಾತ್ರೆಯಲಿ ನಾನೆಂಬ ವಿಚಿತ್ರ ಹುಚ್ಚುಗಳ ವಿಕ್ಷಿಪ್ತ ಹುಳು ಇತಿಹಾಸವಾಗುವ ಒಂಚೂರು ಮುನ್ನವಾದರೂ ನನ್ನೊಳಗಿನ ನಿನ್ನನ್ನು ಪರಿಚಯಿಸಿಕೊಂಡು ಕಣ್ಮಿಟುಕಿಸಬಾರದಾ...
#ಕನಸೂ...
⇚⇖⇗⟴⇘⇙⇛

ಛಳಿಯಿನ್ನೂ ತನ್ನ ಬಿಡಾರ ಬಿಚ್ಚಿಕೊಂಡು ಊರು ಬಿಟ್ಟಿಲ್ಲ ಕಣೇ - ನಿನ್ನ ಎದೆ ಗೊಂಚಲ ಕಂದರದಲ್ಲಿ ಉಸಿರಿನ ಛಳಿ ಕಾಯಿಸಿಕೊಳ್ಳುವ ನಿತ್ಯ ಹಂಬಲದ ಮತ್ತ ಮುಂಜಾವುಗಳಿನ್ನೂ ಬಾಕಿ ಇದ್ದಂತೆಯೇ ಮಕರ ತಿಂಗಳ ಬಾರಿ ಅಂತ ನೀ ಆಯಿ ಮನೆ ಸೇರಿದರೆ ಆಸೆ ಬಲಿತ ಜೀವ ತಡೆದೀತು ಹೇಗೆ - ಮೈಯ್ಯ ಬಿಸಿಗೆ ಒಗ್ಗಿದ ಇರುಳು ಕಂಬಳಿಯ ಒಪ್ಪೀತೇ...
ನಿನ್ನ ಗೆಜ್ಜೆ ಗೀರಿಗೆ ಈ ಗಂಡು ಕಾಲ್ಗಳು ನಲುಗಿ ದಿನ ನಾಕಾಯಿತು - ಬಾಗಿಲಲಿ ಬೆಳುದಿಂಗಳ ನೆರಳಾಡಿದರೆ ಎದೆ ಸುಟ್ಟ ಹಾಗೆ ಚಡಪಡಿಕೆ...
ನೀ ಬರುವ ದಾರಿಗೆ ಆಸೆ ಬಣ್ಣವ ಚೆಲ್ಲಿ, ಮಾಗಿಯ ಕೊನೆ ಕೊನೆಯ ರತಿಯ ತೇರೆಳೆಯಲು ಮನೆ ತುಂಬಾ ಏಕಾಂತವ ತುಂಬಿಕೊಂಡು ಕಾಯುತಲಿದ್ದೇನೆ - ಅಲ್ಲಿ ನಿನ್ನ ಇರುಳಿಗೆ ಹಾಲ್ದಿಂಗಳು ಚುಚ್ಚಿ ಮೈಮಿಸುಕಿ ನಿದ್ದೆ ಕದಡಿದರೆ ಇಲ್ಲಿಯ ನನ್ನ ಬೈಯ್ಯದಿರು...
#ಛಳಿಗೆ_ಕಾದ_ಮೈಗೆ_ಸಣ್ಣ_ವಿರಹವೂ_ಶಾಪದಂಗೇ_ಭಾಸ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರ್ತೊಂಭತ್ತು.....

ಸಾವಿನಂಥಾ ತಣ್ಣನೆ ದಿನಗಳು..... 

ಕಳೆದದ್ದೆಲ್ಲ ಒಳಿತೇ ಇರಬೇಕು - ಸಣ್ಣ ಸಣ್ಣ ನಗುವುಳಿಸಿ ಹೋಗಿವೆ...
ಬರುವುದೆಲ್ಲವೂ ಒಳಿತೇ ಇದ್ದೀತು - ನಿರೀಕ್ಷೆಯ ಕೌತುಕದ ಕಣ್ಣು ನಗುವೇ ಅಲ್ಲವೇ...
ನಿನ್ನೆಯ ಹೊಸತಿನಿಂದ ನಾಳೆಯ ಹೊಸತಿನೆಡೆಗೆ ಕಣ್ಣಂಚು ತುಳುಕೋ ಹರಿವು...
#ಕಾಲ_ಪ್ರೀತಿ...
↢↯↯↹↯↯↣

ಒಳನಾಡಿ ಒಡನಾಡಿ ಬದುಕಿಗಂಟಿದ ನಗೆ ನಂಟಿನ ಹಸಿಹಸಿರು ಹಾದಿಗೆ ಹೆಸರಿದ್ದರೆ ಅದು - "ನೇಹ..."
ಬಿದ್ದೆದ್ದು ನಡೆವಾಗ ಹೆಜ್ಜೆ ನಡುಕಕೆ ಕೈಯ್ಯಾಸರೆಯ ಊರುಗೋಲಿನ ಹೆಸರು - "ನೇಹ..."
............ಇನ್ನೂ ಇನ್ನೂ ಇನ್ನೂ ಎನೇನೋ, ಎಷ್ಟೆಷ್ಟೋ.............
ಕಣ್ಣ ಪಾಪೆಯ ತುಂಬಾ ಭರವಸೆಯ ಪಸೆ ಹೆಗಲು ತಬ್ಬಿದ ಚಿತ್ರಗಳು.....
#ನೇಹವೇ_ನನ್ನ_ನಗೆಯ_ಬೇರು...
↢↯↯↹↯↯↣

ಅದ್ಯಾವುದೋ ಸಂತೆ ಬೀಡಿನಲಿ ಕೈಬಿಟ್ಟ ನಗೆಯ ನಂಟು ಖಾಲಿ ಖಾಲಿ ಒಂಟೊಂಟಿ ಭಯದ ಹಾದೀಲಿ ಕರೆದಂತೆ ಬಳಿ ಬಂದು ಮತ್ತೆ ಹೆಗಲು ತಬ್ಬಿದಾಗ ಉಸಿರ ಭಣಿತಕ್ಕೆ ಸಣ್ಣ ಕರುಳಿನಾಳದಿಂದ ನಶೆಯೊಂದು ಎದೆಗೇರಿ ಈ ಖುಷಿಗೆ ನಿನ್ನ ಹೆಸರಿಡಲೇ ಅಂತಂದೆ.......
ಮುರಿದ ಗುರುತುಳಿಯದಂತೆ ಬೆಸೆವ ಯಾವ ಮಾಯಾ ವಿದ್ಯೆ ಇದೆ? ಎದುರಾದ ತಣ್ಣನೆ ಮರು ಪ್ರಶ್ನೆಗೆ ಬುದ್ಧಿ ಬೆಪ್ಪಾಗಿ ಬೆವರುತಿದೆ...
#ಸಾವಿನಂಥಾ_ತಣ್ಣನೆ_ದಿನಗಳು...
↢↯↯↹↯↯↣

ಹೊರಡೋ ಹೊತ್ತಲ್ಲಿ ಸುತ್ತ ಯಾರೂ ಇರಬಾರದು...
ಸುಳ್ಳೇ ಅತ್ತರೂ ಹೊರಡೋ ಮನಸಾಗದು...
ಬದುಕಿನ ಪ್ರೀತಿ ಬಾಬತ್ತು ಅಲ್ಲಿಗಲ್ಲಿಗೆ ಚುಕ್ತಾ ಆಗಲಿ...
ಸಾವಿನ ಬಾಗಿಲಲ್ಲಿ ಬೊಗಸೆ ಖಾಲಿ ಉಳಿಯಲಿ...
#ತಣ್ಣನೆ_ಸಾವೆಂಬ_ಪುಟ್ಟ_ಆಸೆ...
↢↯↯↹↯↯↣

ಇರುಳ ಕನಸು ಹಗಲ ಸುಪ್ತ ಕನವರಿಕೆಯಾ......? ಭಯವಾಗುತ್ತೆ...
ಅವಸಾನ ಕಾಲಕ್ಕೆ ಕನಸೂ ಬಯಲ ಬೆರ್ಚಪ್ಪನಂತೆ ಭಯವನ್ನೇ ಹುಟ್ಟಿಸುತ್ತೆ...
ನನಗಲ್ಲವಾ ಜಗದ ನಂಟು, ಗಂಟು - ಜಗಕೇನಿದೆ ನನ್ನ ಜರೂರಿನಂಟು...
#ಸಾವಿನಂಥಾ_ತಣ್ಣನೆ_ದಿನಗಳು...
↢↯↯↹↯↯↣

ಹತ್ತು ಹೆಜ್ಜೆ ಜೊತೆ ನಡೆಯುವಾ, ಅಂಗೈ ಬೆವರಲ್ಲಿ ಸ್ನೇಹ ಮೆರೆಯಲಿ ಎಂದು ಮನ ಜಿಗಿದಾಡುವಲ್ಲಿಂದ - ಅಯ್ಯಾss ನಾನೇನ್ ಚಿಕ್ಮಗೂನಾ ದಾರೀಲಿ ಕೈಹಿಡಿದು ನಡ್ಯೋಕೆ ಅಂತ ಕೈಕೊಡವುವಲ್ಲಿಗೆ....
#ಚಿಕ್ಕ_ಬೆಳವಣಿಗೆ...

ಎಲ್ಲಾ ಗಜಿಬಿಜಿಗಳ ಬದಿಗ್ ಸರ್ಸಿ ಸಮಯ ಮಾಡ್ಕೊಂಡು ಆಸ್ಥೆಯಿಂದ ಮಾತಾಗುವಲ್ಲಿಂದ - ಸಮಯ ಸಿಕ್ರೆ ನಾನೇ ಮಾತಾಡಸ್ತೀನಿ ಬಿಡು ಅಂತಂದು ಸಿಡುಕುವಲ್ಲಿಗೆ.......
#ಸಣ್ಣ_ಬದಲಾವಣೆ...

ಇಷ್ಟೇ.... ಹಾಂ ಇಷ್ಟೇ.... ನಡೀತಾ ನಡೀತಾ ಕಟ್ಟಿಕೊಂಡು ಬಂದ ಚಿಕ್ಕ ಚಿಕ್ಕ ಗೋಡೆಗಳು..... ಪರಿಣಾಮ...? ತಿರುಗಿ ನೋಡಿದ್ರೆ ಎಂಥಾ ಭದ್ರ ಕೋಟೆ ನಮ್ಮ ನಡುವೆ...
#ವಿಷಾದ...
↢↯↯↹↯↯↣

ಹಣ್ಣು ತಾ, ಮರದ ಗುಣ ಹೇಳ್ತೇನೆ ಅಂದರಂತೆ ಅದ್ಯಾರೋ ಗುರು...
ಮರದ ಮುಳ್ಳಿಗೂ ಹಣ್ಣಿನ ರುಚಿಗೂ ಏನಕೇನ ಸಂಬಂಧ...?
ಬೇರು ಉಂಡ ಗೊಬ್ಬರದ ವಾಸನೆಗೂ ಹೂವ ಪರಿಮಳಕೂ ತಾಳೆ ಹಾಕಿ ಜಾತಕ ಬರೆಯಬಹುದೇ...??
#ನಿನ್ನೊಡನಿದ್ದೂ_ನಿನ್ನಂತಾಗದ_ನಾನು...
↢↯↯↹↯↯↣

ಇಲ್ಲಿ ಸತ್ತವರೇ ಹೆಚ್ಚು ಜೀವಂತವಿದ್ದಾರೆ...
#ತಿಥಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರೆಂಬತ್ತೊಂಭತ್ತು.....

ನಡೆದ ಹಾದಿಯ ಒಂದು ಮಗ್ಗಲು.....

ಮಣ್ಣು ಮತ್ತು ಸಾವಿನ ವಾಸನೆಯನು ತೀರಾ ನಿಕಟವಾಗಿ ಉಸಿರಿಗೆ ತುಂಬಿಕೊಂಡ ಕಾರಣ ಒಂದೇಟಿಗೇ ಬದುಕು ತುಂಬು ಉಲ್ಲಸಿತ ಮತ್ತು ಅಖಂಡ ಬಣಬಣ...
ಮಣ್ಣು ತನ್ನೊಡಲಿಗೆ ಬಿದ್ದ ಎಲ್ಲವನ್ನೂ ಪ್ರೀತಿಸುತ್ತದೆ - ಚಿಗುರೊಡೆಸಿ ಇಲ್ಲಾ ಗೊಬ್ಬರವಾಗಿಸಿ...
ಸಾವು ಗೊತ್ತಲ್ಲ, ಮೋಸವೇ ಇಲ್ಲ - ನಿನ್ನ ವ್ಯಾಪ್ತಿಯಲ್ಲಿ ದಕ್ಕಿದ್ದೆಲ್ಲವನ್ನೂ ಜೀವಿಸು ಅನ್ನುತ್ತೆ - ಚಿಗುರಾದರೆ ಗಗನ, ಗೊಬ್ಬರವಾದರೆ ಮಣ್ಣಾಳ...
"ಅಳಲು ತಿಳಿಯದವನ ಅಳಲಿಗೆ ಕತ್ತಲೂ ಮೂಕ ಚಿತ್ರವಾದಲ್ಲಿ ನನ್ನನು ನನಗೆ ಉಳಿಸಿಕೊಟ್ಟ ಮಣ್ಣಿಗೂ, ಸಾವಿಗೂ ನಗೆಯ ಅಭಿವಂದನೆ..."
ತುಳಸಿ ನೀರಿನು ಕನಸುತ್ತೇನೆ ಒಳಗೊಳಗೇ  - ಮಣ್ಣಲಿ ಮಣ್ಣಾಗಿ ಮಣ್ಣು, ಬದುಕಿನ ಋಣ ಮುಕ್ತಿಗೆ...
#ಮಣ್ಣು_ಮೂಲ#ಸಾವಿನ_ಸಾಲ#ಬದುಕು_ಬಣ್ಣದ_ನೇಗಿಲು...
↺↜↹↝↻

ಉಸಿರು ಉಗ್ಗುವ ವೇಗದಲಿ ಕುತೂಹಲದ ಪ್ರಶ್ನೆ ಕೇಳಿ, ಅದಕೊಂದು ಸ್ವಕಲ್ಪಿತ ಉತ್ತರವನೂ ತಾವೇ ಕೊಟ್ಟು ಕೊನೆಗೆ ಎಲ್ಲವನೂ ಎಳೆದೊಯ್ದು ಭಗವಂತನಿಗೆ ಗಂಟು ಝಡಿದು ದೇಶಾವರೀ ನಗುವ ಅಪದ್ಧ ಮುಗ್ಧರದ್ದೊಂದು(?) ವರ್ಗ - ಕಲ್ಲನು ಶಿವನಾಗಿಸಿ, ಶಿವನನೇ ಸಾರಾಸಗಟು ಕಲ್ಲಾಗಿಸಿ, ಅವರ ಮೂಗಿನ ವಾಸನೆಯಂತೆ ನನ್ನ ಜಾತಕ ಫಲ ಹೇಳಿ, ಜನುಮ ಜಾಲಾಡಿ ಶಬ್ದದ ಉಗುಳಿನಲ್ಲೇ ನನ್ನನೂ ನನಗೇ ಅಪರಿಚಿತನಾಗಿಸಿಬಿಡುವ ವಾಕ್ಚತುರರದ್ದೊಂದು ತೂಕ...
ಇಂತಿಪ್ಪವರ ನಡುವೆ ಸಂಖ್ಯೆಯಲ್ಲಿ ವಿರಳವಾದರೂ ಬಳಕೆಯಲ್ಲಿ ಚಂದವೆನಿಸುವ ಕಾರ್ಯ ಕಾರಣಗಳ ಬೆನ್ನು ಬೀಳದೇ ಪ್ರೀತಿಯೊಂದನೇ ಉಣಿಸಿ, ಉಡಿಸಿ ಧನ್ಯತೆಯ ಉಸಿರು ಚೆಲ್ಲೋ ಮೃದು ಸಂವೇದನಾಶೀಲರದ್ದೇ ಇನ್ನೊಂದು ದಡೆ...
ಮೃತ ಹಾದಿಯಲ್ಲಿ ಎದುರಾಗೋ ತರಾವರಿ ಜೀವಂತ ಮುಖಗಳು - ನನ್ನೀ ಹಾದಿಯ ಮೆರಗೂ ಅದೇ ಹೊತ್ತಿಗೆ ಕೊರಗೂ ಕೂಡಾ...
#ಜಗದ_ಜ್ಞಾತರಿಗೆಲ್ಲ_ಶರಣು_ಶರಣಾರ್ಥಿ...
#ತೊರೆದ_ಊರಿನ_ಹಾದಿಬೀದಿ...
↺↜↹↝↻

"ಎನ್ಸೋ ಮಾರಾಯ ಎಷ್ಟ್ ಕಾಲ ಆತು ನಿನ್ ಕಾಣದ್ದೇಯಾ - ಬದ್ಕಿದ್ಯಾ!! ಸತ್ತೇ ಹೊಯ್ದ್ಯನಾ ಅಂನ್ಕಂಡಿದ್ದೆ...
ಹಂಗಲ್ಲಾss ಆಪಸ್ನಾತೀಲಿ ಹೇಳೂದು - ದಿನಕ್ಕೊಂದ್ ಆತ್ಮಹತ್ಯೆ, ಅಪಘಾತದ ಸುದ್ದಿ ಮಾರಾಯಾ..."
ಉಫ್!! ನನ್ನ ಬೆಳೆದ ನೆಲದಲ್ಲೇ (?) ನಾ ಅಪರಿಚಿತನಾಗೋದು ಸುಖವಾ? ಸೋಲಾ??
ಕಳೆದೋಗುವಾಗ ಗೊತ್ತೇನೇ ಆಗಿಲ್ಲ ಅನ್ನೋ ಹಂಗೆ ತಣ್ಣಗೆ ಕಳಚಿರುತ್ತೆ ಕೊಂಡಿ - ಕಳೆದೋಗಿದೆ ಅಂತ ಬಯಲಲ್ಲಿ ಒಪ್ಪಿಕೊಳ್ಳಲು ಮಾತ್ರ ಮಹಾ ಗಲಿಬಿಲಿಯ ಯಾತನೆ...
ನಾನೆಂಬೋ ನಾನಿಲ್ಲಿ ಆಡೂ ಮುಟ್ಟದ ಸಪ್ಪು - ಸಾವೆಂದರೆ ಕೇವಲ ದೇಹದ್ದಲ್ಲವೇನೋ ಅಲ್ಲವಾ...
#ನಡೆದ_ಹಾದಿಯ_ಒಂದು_ಮಗ್ಗಲು...
↺↜↹↝↻

ಕಳೆ ಗಿಡದ ಹೂವಿನಲ್ಲಿ ಚಿಟ್ಟೆಗಿಷ್ಟು ಅನ್ನವಿದೆ - ಕನಸು ಕಟ್ಟಿಕೊಂಡು ನಿನ್ನೆದುರು ನಿಲ್ಲಲೊಂದು ಪುಟ್ಟ ಕಾರಣ...
#ಆಹಾಕಾರ...

ಬೆಳಕ ತೇರಲೆಯುವ ಅಗಾಧ ಶುದ್ಧ ನೀಲಿ ಪಥ - ನನ್ನೆಲ್ಲ ಕನಸುಗಳಲ್ಲಿ ಮರಿ ಚುಕ್ಕಿ ತಾರೆ...
#ವಿನೋದ_ವಿಶಾದ...

ಕತ್ತಲೆಗೂ ಮುನ್ನವೇ ಮೂಡಿದ ತಾರೆಯೊಂದು ತಿಳಿ ಬಾನ ನೀಲ ಮುಖಕೆ ವಜ್ರ ಮೂಗುತಿಯಂತೆ ಹೊಳೆಯುತ್ತದೆ - ಬಾನು ಗಂಡಾ ಹೆಣ್ಣಾ...!!
#ನಗು...

ಹಾದಿಗೆ ಸಾವಿರ ಕವಲುಗಳು - ಈ ಘಳಿಗೆ ನಾ ನಡೆಯಬಹುದಾದದ್ದು ಒಂದೇ ಮಗ್ಗಲು...
ಹಳೆ ಹಾದಿ ಕಳೆಯದೇ ಹೊಸದು ತುಳಿಯುವುದೆಂತು - ಹೊಸ ಹೆಜ್ಜೆ ಹೆಣೆಯದೇ ಹಳೆ ಕಳೆಯ ಕಳೆವುದೆಂತು...
#ಪ್ರಜ್ಞೆ...

ತುಂಬಾ ಕಳಕೊಂಡ ಮೇಲೆ ಅಳಿದುಳಿದ ಚೂರೇ ಚೂರೂ ತುಂಬಾ ತುಂಬಾ ಖುಷಿ ತುಂಬುತ್ತದೆ.......
#ಪ್ರೀತಿ...
*** ಹುಚ್ಚು ಹಲುಬಾಟಕ್ಕೆ ಅರ್ಥ ಕೇಳಬೇಡಿ...
↺↜↹↝↻

ಮನವ ಮುಚ್ಚಿಟ್ಟು ಮುಖವ ಬೆಳಗುವ ಬೆಳಕು ಮಹಾ ಸಭ್ಯ ಮತ್ತು ಶ್ರೇಷ್ಠ...
ನನ್ನನು ನನ್ನಂತೆ ತೆರೆದಿಡುವ ಒಳಗಿನ ಬೆತ್ತಲೆ ಕತ್ತಲು ಅಸಭ್ಯ ಮತ್ತು ಕ್ಷುದ್ರ...
ಇರೋದನ್ನ ಇದ್ದಂಗೇ ಕಾಣಲು ನಾವೇನು ಪ್ರಾಣಿಗಳಾ..‌.
ಅಲಂಕಾರದ ಬೆಳಕು - ನಿರಾಭರಣ ಕತ್ತಲು...
#ನಾನೆಂಬ_ಮನುಷ್ಯ_ಪ್ರಾಣಿ...
↺↜↹↝↻

ಸಂಜೆಗಳ ಮಗ್ಗುಲಲ್ಲಿ ಸುಖಾಸುಮ್ಮನೆ ನೋವಾದರೆ ಯಾರ ಹೊಣೆ ಮಾಡುವುದು...
ಎಂದೂ ಎದುರಾಗದ ಕನಸಿಗೆ ಕಾಯುತ್ತಾ ನಿದ್ದೆಗೆ ಬೀಳುತ್ತೇನೆ ಎಂದಿನಂತೆ...
#ಸಂತೆ_ಬೀದಿಯ_ಒಂಟಿ_ಪಥಿಕನ_ಮೃತ_ಮನದ_ಧ್ಯಾನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)