Friday, January 25, 2019

ಗೊಂಚಲು - ಎರಡ್ನೂರ್ತೊಂಭತ್ತೆರ‍್ಡು.....

ಈ ಕೂಸಿಗೆ ಎಂಟು ತುಂಬಿತು.....!!! 

ಅಲೆತೊಳೆವ ಹಾದಿಯಲಿ ಹೆಸರ ಬರೆದು ಗುರುತು ಹುಡುಕುತ್ತೇನೆ - ಮರಳ ಕಣ ನಗುವಾಗ ಅಲೆಯ ಹೊಟ್ಟೆಹುಳುಕನು ಶಪಿಸುತ್ತೇನೆ...
ತಲೆಮಟ್ಟ ಸಿಡಿವ ತೆರೆ - ಮೈಯ್ಯೆಲ್ಲ ಉಪ್ಪುಪ್ಪು - ಆ ಹಾದಿ, ಆ ನೆನಪು, ಮತ್ತೆ ಹುಟ್ಟುವ ಕನಸು - ದಡದಾಚೆ ಕಾಡಿನಲಿ ಯಾರೋ ಕಾಯುತಿರುವಂತೆ, ನನ್ಹೆಸರ ಕೂಗುತಿರುವಂತೆ - ಕಣ್ಣ ಹನಿಯಲ್ಲಿ ಸಾಗರನಿಗೂ ಮುಪ್ಪು...

ಭಿನ್ನೆತ್ತೆಯಲ್ಲಿ ಅದದೇ ಅ ಆ ಇ ಈ ಗಳನ್ನು ಮತ್ತೆ ಮತ್ತೆ ತಿದ್ದಿ ತಿದ್ದಿ ಪಾಟಿಯ ಮೈ ಹಕ್ಕಳೆದ್ದರೂ ಶಾಲೆ ಓದು ತಲೆಗೆ ಹತ್ತಲೇ ಇಲ್ಲ - ಕಾಗುಣಿತದಾಚೆ ಬುದ್ಧಿ ಬೆಳೆಯಲೇ ಇಲ್ಲ...
ಬದುಕಿನ ಪಾಠಶಾಲೆಯಲ್ಲಿಯೂ ಈಗಲೂ ಅದೇ ಭಿನ್ನೆತ್ತೆಯ ದಡ್ಡ ಕುಮಾಂಡು ಹುಡುಗ ನಾನು - ಅದದೇ ಭಾವ, ಮತ್ತದೇ ಮಾತುಗಳನ್ನು ಸತತ "ಎಂಟು" ವರ್ಷಗಳಿಂದ ಬ್ಲಾಗ್ ಎಂಬೋ ಸಾರ್ವಜನಿಕ ದಿನಚರಿ ಪಟ್ಟಿಯಲ್ಲಿ ಗೀಚುತಲಿದ್ದೇನೆ - ಮನವೂ ಪಕ್ವವಾಗಲೇ ಇಲ್ಲ...

ಸಣ್ಣ ನಗೆಯ ಚಿಗುರಿಗೆ ಮಗ್ಗುಲ ನೋವಿನ ನೆರಳು ಜೋಗುಳ ಹಾಡುವ ರೀತಿಗೆ ವಿವಶನಾದವನಂತೆ ನಗುವಿಗಿಂತ ಹೆಚ್ಚು ನೋವನ್ನೇ ಗೀಚಿದೆ - ತುಟಿಯಂಚ ನಗು ಬಾಡಿಲ್ಲ...
ಸಾವಿರುವ ಕಾರಣಕ್ಕೆ ಬದುಕು ಚಂದ ಅನ್ನಿಸಿದ್ದಕ್ಕೋ ಅಥವಾ ಬದುಕು ಕಾಡುವ ಪರಿಗೆ ಸಾವೇ ಹಿತ ಅನ್ನಿಸುವ ಭಾವಕ್ಕೋ ಗೊತ್ತಿಲ್ಲ ಹುಟ್ಟಿನ ಸಂಭ್ರಮಕ್ಕಿಂತ ಸಾವಿನ ಸೂತಕವನ್ನೇ ಮತ್ತೆ ಮತ್ತೆ ಬರೆದೆ - ನನ್ನಲಿನ್ನೂ ಉಸಿರಿದೆ...
ಚೂರೂ ಪರಿಚಯವೇ ಇಲ್ಲದ ಪ್ರೇಮವ ಕೆತ್ತಿದೆ - ಹುಟ್ಟಾ ಪೋಲಿಯ ಕೆಟ್ಟ ಕನಸಿನಂತೆ; ಅವರಿವರೊಪ್ಪದ ಬೇಶರತ್ ಕಾಮವ ಒಪ್ಪಿ, ಅಪ್ಪಿ ಪದೇ ಪದೇ ಹಾಡಿದೆ - ಪ್ರೇಮವ ತೂಗಿದ ತೋಳ ತೊಟ್ಟಿಲಿನಂತೆ... 

ಸದಾ ಜಾಗೃತ ಅತೃಪ್ತಿಯೇ ನಡೆವ ಹಾದಿಯ ಹುಚ್ಚು ಸೌಂದರ್ಯವೇನೋ - ನಾ ನಡೆದದ್ದು ಪೂರಾ ಪೂರಾ ನನ್ನ ಹಾದಿ... ಅಂತೆಯೇ ನಾ ಬರೆದದ್ದೂ ನನ್ನ ವಿಕ್ಷಿಪ್ತ ಮನದ ಹುಚ್ಚನ್ನೇ...
ಆ ಆ ಕ್ಷಣಗಳಲ್ಲಿ ನನ್ನೊಳಗೆ ಕೆರಳುವ, ನನ್ನ ಕೆಣಕುವ ಪ್ರೇಮ, ಕಾಮ, ಕನಸು, ಕಲ್ಪನೆ, ಸೋಲು, ಅಸಹಾಯಕತೆ, ಗೆಲುವಿನ ಭ್ರಮೆ, ಅಹಂಕಾರ, ಆಕಾರ, ವಿಕಾರಗಳ ಸಾಂಗತ್ಯದಲ್ಲಿ  ಪಡಕೊಂಡ, ಕಳಕೊಂಡ ಕನವರಿಕೆಗಳಿಗೆಲ್ಲ ತೋಚಿದ ಅಕ್ಷರಗಳ ಹೆಕ್ಕಿ ಹೆಕ್ಕಿ ಶಬ್ದಗಳ ಬಣ್ಣ ತುಂಬುತ್ತಾ ನನ್ನೊಳಗನ್ನು ಬರಿದಾಗಿಸಿಕೊಂಡೆ, ಹಗುರಾಗಿಸಿಕೊಂಡೆ...

ಮನೆಯ ಬೆಳಕೆಲ್ಲ ಆರಿಸಿ ಕತ್ತಲ ಬಳಿದುಕೊಂಡು ಅಟ್ಟ ಹತ್ತಿ ಮಲಗಿ ಬೆಳದಿಂಗಳ ನೋಡ್ತಾ ಮನಸಿನ ಮಾತಿಗೆ ಕಿವಿ ತೆರೆದರೆ ಅಂಗಳದ ಮೂಲೆಯ ಪಾರಿಜಾತ ಅರಳ್ತಾ ಇತ್ತು ಎದೆಗೂಡಿನೊಳಗೂ - ಡೈರಿಯ ಚಿತ್ತುಕಾಟು ಕೈಬರಹವಾಗಿ ಅಲ್ಲಿಂದ ಶುರುವಾದ ಅಕ್ಷರ ಸಾಂಗತ್ಯ ಬ್ಲಾಗ್‌ನ ಗೊಂಚಲುಗಳಾಗಿ ಇಲ್ಲಿಯವರೆಗೂ ನಡೆದು ಬಂದದ್ದು ಖುಷಿಯ ಸೋಜಿಗ...

ನನ್ನ ಅದದೇ ಪ್ರಲಾಪಗಳನೂ ಅಕ್ಕರೆಯಿಂದ ಓದಿ ಮೆಚ್ಚಿದ ನಿಮ್ಮಗಳ ಅಕಾರಣ ಅಭಿಮಾನಕ್ಕೂ ಮಿಗಿಲು ಇನ್ನೇನಿದೆ - ವಿನಾಕಾರಣ ಪ್ರೀತಿಯ ಹರಿವಿನ ಅಭಯದೆದುರು ತುಂಬಾ ಚಿಕ್ಕವನು...

ಕೈಯೆತ್ತಿ ಕೊಟ್ಟ ಅರಿವಿಲ್ಲ, ಕೈಚಾಚಿ ಪಡೆದದ್ದೇ ಎಲ್ಲ - ಪ್ರೀತಿಯ ಹಿರಿತನಕೆ ಬೇಶರತ್ ಶರಣಾಗತಿ...

ಎಂಟು ವರುಷ - ಅಂದ್ರೆ ತೊಂಭತ್ತಾರು ಮಾಸ - ಮಾಸಕ್ಕೆ ಮೂರು ಮತ್ತೊಂಚೂರು ಗೊಂಚಲು...
ಹ ಹಾ... ನನ್ನ ಮಟ್ಟಿಗೆ ಬಹುದೊಡ್ಡ ಸಾಧನೆಯೇ...
ಸ್ವಗತದಂತೆ, ಸ್ವಪಚತನದಂತೆ, ಸಿನಿಕತೆಯನ್ನೂ ಸಿಹಿಪಾಕದಂತೆ, ನೋವಿಗಷ್ಟು ನಗುವಿಗಿಷ್ಟು ಗಾಢ ಬಣ್ಣವ ಮೆತ್ತಿ ಶಬ್ದಗಳ ಅಲಂಕಾರದಲಿ ಹೆಣೆದು ನನ್ನೇ ನಾ ತೂರಿಕೊಂಡೆ - ಬರೆದ ನೋವು, ನಗುವು, ನೇಹಗಳ ಅಷ್ಟಿಷ್ಟು ಬದುಕಿದೆ - ಮಧುರ ಪಾಪಗಳಿಗೆ ಮನಸಾರೆ ತೋಳ ತೆರೆದಿಟ್ಟು ಬೆಸೆದುಕೊಂಡ ರಸಿಕ ರವಳಿಯ ಗುಂಗನು ಬೆಚ್ಚಗೆ ಕಾಯ್ದುಕೊಂಡೆ; ಪರಿಣಾಮ  - ಅಲ್ಲಿಷ್ಟು ಇಲ್ಲಿಷ್ಟು ಸೇರಿ ಸ್ವಂತಕ್ಕೆ ಈಗ ಈ ಹೆಗಲ ಚೀಲದ ತುಂಬಾ ನೀವುಗಳು ಎತ್ತಿ ಕೊಟ್ಟ ಅಭಿಮಾನ ಅಕ್ಕರೆಗಳ ಸಕ್ಕರೆ ದಂಟು...!!! 
ಅದೇ ಹಳೆಯ ಸರಕನ್ನು ಹೊಸ ಪದಗಳಲ್ಲಿ ಇನ್ನೂ ಅದೆಷ್ಟು ಕಾಲ ಬರೆದೇನೋ ಗೊತ್ತಿಲ್ಲ - ಬರೆದಾಗ ಓದುವ ಪ್ರೀತಿ ಇಂತೆಯೇ ಉಳಿದಿರಲಿ ನಿಮ್ಮಲ್ಲಿ ಅನ್ನೋ ಚಂದದ ಸ್ವಾರ್ಥವಂತೂ ಇದ್ದೇ ಇದೆ...
ನಿಮ್ಮೊಡನಿದ್ದೂ ನಿಮ್ಮಂತಾಗದ ನಿಮ್ಮವನು... 




                               






--- ವಿಶ್ವಾಸ ವೃದ್ಧಿಸಲಿ
                                              ಶ್ರೀವತ್ಸ ಕಂಚೀಮನೆ   

No comments:

Post a Comment