Thursday, August 1, 2019

ಗೊಂಚಲು - ಮೂರು ಸೊನ್ನೆ ಆರು.....

ಉದ್ದ ನಾಲಿಗೆ ಮತ್ತು ಸಣ್ಣ ಬೊಗಸೆ.....   
(ಜೀವಿಸಬೇಕಿತ್ತು - ಬದುಕಿದ್ದೇನೆ...)

ದಾಟಿದ ಆ ನಿನ್ನೆಗಳ ಮರೆತೇ ಬಿಡಬಹುದಿತ್ತು - ಕಂಡರಿಯದ ಆದಾವುದೋ ನಾಳೆಗಳ ನಿರ್ಲಕ್ಷಿಸಲೂಬಹುದಿತ್ತು - ಇಲ್ಲಿ ಈಗ ಹೆಗಲೇರಿ ತಿವಿಯುತಿರೋ ಈ ಘಳಿಗೆಯ ಗೆಲ್ಲುವ ಬಲ ತುಸುವಾದರೂ ಇದ್ದಿದ್ದರೆ...
"ಹುಟ್ಟು ಚಂದವೇ - ಬದುಕು ಜೊತೆ ನಿಂತರೆ..."
ತಾಳ ತಪ್ಪಿದರೆ,
ಎದೆಗೆ ಚುಚ್ಚಿದ ಮುಳ್ಳನು ನೇವರಿಸಿ................ ದಿಂಬಿನಂಚಲಿ ಕನಸುಗಳ ಗುಪ್ಪೆ ಹಾಕಿ ಹಾಕಿ.......... ಅನಾಯಾಸೇನ ಮರಣಂ ಎಂದು ಜಪಿಸುತ್ತಾ........ ಭ್ರಮೆಗಳಿಗೆ ಬಣ್ಣ ಮೆತ್ತಿ ಮೆರವಣಿಗೆ ಹೊರಡುವುದು...
"ನೈಜ ನಗೆಯ ಹೆಣ ಹೊತ್ತು,  ಹೆಗಲು ಬಾವಿಗೆ ಸುಳ್ಳು ಖುಷಿಯ ಮದ್ದು ಮೆತ್ತುತ್ತಾ  ಹಾಂಗೆ ಸಾಗುತ್ತಾ ಸಾಗುತ್ತಾ ಇದು ಮೂವತ್ತೇಳನೇ ಪಾದ..."
#ರುಚಿಯಿಲ್ಲದ_ಕಣ್ಣಹನಿ...
↜↹↺↻↹↝

ಅಲ್ಲೆಲ್ಲೋ ಕಳಚಿಕೊಂಡ ಕಿರು ಬೆರಳ ಕೊಂಡಿ ಹುಟ್ಟಿಸಿದ ತಬ್ಬಲಿತನವ ಈ ಸಂತೆಯಲ್ಲಿ ಅದೆಷ್ಟೋ ಹೆಗಲು ತಬ್ಬಿದಾಗಲೂ ತುಂಬಿಕೊಳ್ಳಲಾಗದೇ ಹೆಣಗುತ್ತೇನೆ.....
#ನವಿಲುಗರಿ...
↜↹↺↻↹↝

ಮರೆಯಲೇ ಬೇಕಿದ್ದದ್ದನ್ನೂ ಮರೆತು ನಿದ್ರಿಸಬೇಕೆಂದರೆ ಮರಣವೇ ಜೊತೆಯಾಗಬೇಕೇನೋ...
#ಗಾಯ...
↜↹↺↻↹↝

ಎಷ್ಟೇ ಸುಖವುಂಡರೂ ಲೆಕ್ಕವಿಟ್ಟರೆ ಅರೇ ಇಷ್ಟೇನಾ ಅನ್ಸತ್ತೆ - ಇಷ್ಟೇ ಇಷ್ಟು ನೋವಿನ ಲೆಕ್ಕವೂ ಅಯ್ಯೋ ಇಷ್ಟೊಂದಾss ಅನ್ಸತ್ತೆ...
ಒಡೆದ ಪಾದದ ಬಿರುಕುಗಳಲಿ ಬರೀ ಧೂಳೇ ಧೂಳು...
"ಸವಿ ನೆನಪುಗಳ ಕಾಲಿಗೆ ನಾನೇ ಕಟ್ಟಬೇಕು ಗೆಜ್ಜೆ, ಕಿವಿಯ ಇಂಪಿಗೆ...
ನೋವ ನೆನಪಿಗಾದರೋ ಜನ್ಮಜಾತ ಘಂಟೆ ಇದೆ, ಸುಮ್ಮನೆ ಕೊರಳು ಕೊಂಕಿದರೂ ಕಿವಿ ಸಿಡಿಯುತ್ತೆ ಸದ್ದಿಗೆ..."
#ಇರುಳಿನ್ನೂ_ಎಚ್ಚರವಾಗಿದೆ_ಯಾವ_ಕಾವಿಗೆ...!!!
↜↹↺↻↹↝

* ಮತ್ತೆ ಮತ್ತೆ ಮಗುವಾಗಲು ಹೊರಡುತ್ತೇನೆ - ಜಗತ್ತು ಹುಚ್ಚನೆಂದು ಕೂಗುತ್ತದೆ...
#ನೋಟ...

** ಕೋಗಿಲೆ ಹಸಿವಿನಿಂದ ಕೂಗಿದ್ದೂ ಕವಿಯ ಕಿವಿಗೆ ಸಂಗೀತವೇ...
#ಕವಿತೆ...

*** ಮಸಣದಿಂದ ಹೊರಟವರು ತಿರುಗಿ ನೋಡಬಾರದಂತೆ - ಬದುಕಿನಿಂದ ಹೊರಟಾಗ ತಿರುಗಿ ನೋಡೋ ಸಣ್ಣ ಅವಕಾಶವಾದರೂ ಎಲ್ಲಿದೆ...
#ಹಾದಿ...
↜↹↺↻↹↝

ನಿದ್ದೆಯಿಲ್ಲದ ಒಂಟಿ ಹಕ್ಕಿಯೊಂದು ಹೊತ್ತಿಗೂ ಮುಂಚೆ ಒಂದೇ ರಾಗದಲ್ಲಿ ಅರಚುತ್ತಿದೆ - ಯಾವ ವೇದನೆಯೋ, ಅದೇನು ಕೆಟ್ಟ ಕನಸೋ...
ಇರುಳ ಮೂರನೇ ಝಾವ -  ಸಂತೈಸುವ ದೇವನೂ ನಿದ್ದೆಯಲ್ಲಿದ್ದಾನು...
ಭಾಷೆ ಬರದ ನಾನು ನಿದ್ದೆಗಾಗಿ ಒಳಗೇ ಗೊಣಗುತ್ತ ಮಗ್ಗಲು ಬದಲಿಸುತ್ತೇನೆ - ನನ್ನ ಒಂಟಿ ತಲ್ಲಣಗಳಿಗೆ ವಿಚಿತ್ರ ಸುಳ್ಳು ಸಮಾಧಾನವೊಂದು ಜೊತೆಯಾಗುತ್ತೆ...
ಹಕ್ಕಿ ದನಿ ಇಷ್ಟಿಷ್ಟೇ ಇಂಗಿತು - ಗಂಟಲು ಸೋತಿತಾ ಇಲ್ಲಾ ನನಗೇ ಮಂಪರಾ...
ಕಣ್ಣೊರೆಸೋ ದಿಂಬಿಗೆ ಪ್ರಶ್ನೆಗಳು ಅರ್ಥವಾಗುವುದಿಲ್ಲ...
ಹೊದ್ದ ಚಾದರದಾಚೆ ಸುಂದರ ಸುಳ್ಳು ಭರವಸೆ - ಕತ್ತಲು ಕಳೆಯಿತು...
#ಹಕ್ಕಿ_ಗೂಡಿಗೆ_ಬೆಕ್ಕು_ಅಥಿತಿಯಾದೀತಾ...
↜↹↺↻↹↝

ಸಾವನ್ನು ಕಣ್ಣೀರಲ್ಲಿ ತೊಳೆಯುವುದು ಬದುಕಿನ ಬಹುದೊಡ್ಡ ಸಂಭ್ರಮ...
*** ಅರ್ಥಗಿರ್ಥ ಕೇಳಿ ಕೊಲ್ಲಬೇಡಿ...
↜↹↺↻↹↝

ಅರೇ ಬದ್ಕಿದ್ಯಾ ಇನ್ನುವಾ...!!! ಜೋರು ಮಳೇಲಿ ತೊಳ್ದೋದ್ಯನ ಅಂದ್ಕಂಡಿದ್ದೆ...

ಹಹಹಾ... ಹೋಪುದೇ ಆಯ್‌ತ್ತು, ಆದ್ರೆ ಈ ಧೋ ಮಳೇಲಿ ಹೋದ್ರೆ ನಿನ್ಗೆ ಅಪರ ಕಾರ್ಯ ಮಾಡೂದು ಕಷ್ಟ ಅವ್ತು ಹೇಳಿ ಹೊಯ್ದ್ನಿಲ್ಲೆ... ಈಗಂತೂ ರೇಶನ್ನಲ್ಲಿ ಚಿಮಣೀ ಎಣ್ಣೇನೂ ಕೊಡ್ತ್ವಿಲ್ಲೆ, ಸುಡೂದಕ್ಕೇ ಒದ್ದಾಡೆಕವ್ತು...

ಮಳೆಗಾಲ ಮುಗತ್ತು ಇನ್ನು ತಯಾರಿ ನಡ್ಸಲಡ್ಡಿಲ್ಲೆ...
ಅಯ್ಯೋ ಈ ಛಳೀಲಿ ಹೋದ್ರೆ ಕಾರ್ಯಕ್ಕೆ ಬಂದವ್ಕೆಲ್ಲ ಹಾಸಲೆ ಹೊದೀಲೆ ವಸ್ತ್ರ ಭರ್ತಿ ಮಾಡ್ಲವ್ತಾ ನಿನ್ಕಲ್ಲಿ... ಶೀತದಲ್ಲಿ ಎಲ್ಲವ್ವೂ ಬೈಕಂಬಂಗಪ್ಲಾಗ ನೋಡು...

ಸುಡು ಸುಡು ಬೇಸಿಗೆ... ಮತ್ತದೇ ಪ್ರಶ್ನೆ...
ಹಲಸು, ಮಾವು ಎಲ್ಲಾ ಬಲಿಯೋ ಕಾಲ ಮಳೆಗಾಲಕ್ಕೆ ನಿಂಗೆ ಕುರುಕುರು ತಿಂಬ್ಲೆ ತಯಾರ್ ಮಾಡಿಡವಲಿ... ಅಲ್ಲದ್ದೆ ನೆಂಟರಿಷ್ಟರಲ್ಲಿ ಎಷ್ಟ್ ಮುಂಜಿ ಮದ್ವೆ ಎಲ್ಲಾ ಇದ್ದು... ಇದಲ್ಲಾ ಬಿಟ್ಟಿಕ್ಕಿ ಹೋಪುದಾರೂ ಹೆಂಗೆ... ಶುಭಕಾರ್ಯ ಮಾಡವ್ಕೆ ಸೂತಕ ಹೇಳ್ವಂಗೆ ಆವ್ತು...

ಇನ್ನೂ ಏನ್ಕಂಡು ಏನ್ಕಾಣವಾ ಶಿವನೇ ಎಂದ ಮಗ್ಗುಲಲ್ಲೇ, ಹಿಂಗೆ ಹಿಂಗಿಂಗೆ ಋತುವಿಗೊಂದು ರಾಗ ಹಾಡಿ ಸಾವನ್ನು ಗೇಲಿ ಮಾಡುತ್ತಾ, ಬಾಗಿಲಾಚೆ ಸಾವನ್ನು ಮಂಡಿ ನಡುವೆ ತಲೆ ಹುಗಿಸಿ ಇವಳೇ ನಿಲ್ಲಿಸಿದ್ದಾಳೆನೋ ಅನ್ನುವಂತೆ ಬದುಕಿಗೆ ನಗು ತುಂಬಿಕೊಳ್ಳುತ್ತಾಳೆ - ಬಲು ಜಿಡ್ಡಿನ ಎಪ್ಪತ್ತರಾಚೆಯ ಎಳೆ ಹುಡುಗಿ... ಮೈಮನವ ಹಿಂಡುವ ರೋಗ ರಾಗಗಳಿಗೆಲ್ಲ ಅದ್ಯಾವ ಮೋಹಾಮಾಯೆಯ ಸಿರಪ್ಪು ಕುಡೀತಾಳೋ ನಾ ಕಾಣೆ...
#ಆಯಿ_ಎಂಬ_ಅಶ್ವತ್ಥ...
*** ಅವಳ ನೆನೆಯದೇ ಜನುಮ ದಿನಕೇನು ಗೆಲುವಾದೀತು... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)