ಗೊಂದಲದ ಹಾಡು.....
ನನ್ನ ಮನದ ಒಳನೋಟದಂತೆ ನನ್ನ ಕ್ಷಣಗಳು...
"ಕನಸ ಹಕ್ಕಿ ಹಾರುತಿದೆ"
ಎಂಬ ನನ್ನದೇ ಸಾಲುಗಳು ಮನಸು ನಗುತಿದ್ದಾಗ - ಕನಸುಗಳಿಗೆ ರೆಕ್ಕೆ ಮೂಡಿ ಗಗನಗಾಮಿ ಎಂಬರ್ಥವನ್ನು ಮೂಡಿಸಿದರೆ,
ಮನಸು ಮಗುಚಿ ಬಿದ್ದಾಗ - ಕನಸುಗಳೆಲ್ಲ ನನ್ನ ತೊರೆದು ಹಾರಿ ಹೋಗುತಿವೆ ಎಂಬಂತೆ ಭಾಸವಾಗಿ ಇನ್ನಷ್ಟು ಖಿನ್ನವಾಗಿಸುತ್ತವೆ.
ಎಲ್ಲ ಸರಿಯಿದ್ದಾಗ ಸಣ್ಣ ಸೋಕುವಿಕೆಯೂ ಝೇಂಕಾರವೇ.
ಒಂದು ತಂತಿ ಹರಿದರೂ ಪ್ರತಿ ಸ್ವರವೂ ಅಪಸ್ವರವೇ.
ಬದುಕೂ ಹಾಗೆಯೇ...
ಅದೇ ವೀಣೆ, ಅದೇ ತಂತಿ...
ಮಿಡಿವ ರಾಗಗಳು ನೂರಾರು - ಹೊಮ್ಮಿಸುವ ಭಾವಗಳು ಸಾವಿರಾರು...
ಒಮ್ಮೆ ನಗೆಯ ಝೇಂಕಾರ - ಇನ್ನೊಮ್ಮೆ ನೋವ ಹೂಂಕಾರ...
ಕಾಯುತ್ತ ನಿಂತಾಗಲೆಲ್ಲ ನಾನು ಹೋಗಬೇಕಾದ ಬಸ್ಸೊಂದನ್ನುಳಿದು ಬೇರೆ ಬಸ್ಸುಗಳೆ ಜಾಸ್ತಿ ಬರುತ್ವೆ ಯಾವಾಗಲೂ ಅಥವಾ ನಂಗೇ ಹಂಗನ್ನಿಸುತ್ತಾ...
ಇನ್ನೂ ಏನೋ ಬೇಕಿದೆ ಎಂಬ ತುಡಿತದಲ್ಲೇ ಬದುಕ ಈ ಕ್ಷಣ ನಗುತಿದೆ
ಮತ್ತು
ಆ ತುಡಿತದಲ್ಲೇ ನಗಬೇಕಿದ್ದ ಬದುಕ ಹಲ ಕ್ಷಣಗಳು ನಲುಗಿದ್ದೂ ಇದೆ...
ನಿನ್ನೆ ಅದ್ಭುತವಾಗಿ ಕಂಡ ಕನಸು ಇಂದು ನನಸಾಗಿ ಕೈಸೇರಿದಾಗ ಕ್ಷುಲ್ಲಕ.
ನಿನ್ನೆ ಇದೇನು ಹೊಳೆಯಾ ಅಂತಂದು ಅಣಕಿಸಿ ನಾ ದಾಟಿ ಬಂದಿದ್ದ ಪುಟ್ಟ ತೊರೆ - ಇಂದು ಹೊಸ ಝರಿಗಳ ಒಳಗೊಂಡು ದೊಡ್ಡ ಹಳ್ಳವಾಗಿ ಬೆರಗು ಮೂಡಿಸಿ, ದಾಟಿ ಹೋಗದಂತೆ ತನ್ನ ಸುಳಿಗಳಲಿ ಎನ್ನ ಮುಳುಗೇಳಿಸುತ್ತೆ...
ಕಣ್ಣಿಂದ ಜಾರಿದ ಹನಿ -
ಕನಸೊಂದು ಅರ್ಧಕ್ಕೇ ಸತ್ತುಹೋದದ್ದಕ್ಕೆ ಶ್ರದ್ಧಾಂಜಲಿಯಾ ಅಥವಾ ಹೊಸಕನಸಿಗೆ ಬಾಗಿಲು ತೆರೆಯಬಹುದಾದ ಖುಷಿಗಾ ಎಂದರ್ಥವಾಗದೇ ಕಂಗಾಲಾಗ್ತೇನೆ...
ಗೊಂದಲಗಳ ತೆರೆಗಳ ಮೇಲೆ ಹೊಯ್ದಾಡುತಿದೆ ಜೀವನ ನೌಕೆ...
ಸದಾ ನನ್ನ ಕಾಡುವ ನನ್ನದೇ ಮನಸಿನ ಮಾಯೆಗಳಿಗೆ ಏನೆನ್ನಲಿ...