ಗೊಂದಲದ ಹಾಡು.....
ನನ್ನ ಮನದ ಒಳನೋಟದಂತೆ ನನ್ನ ಕ್ಷಣಗಳು...
"ಕನಸ ಹಕ್ಕಿ ಹಾರುತಿದೆ"
ಎಂಬ ನನ್ನದೇ ಸಾಲುಗಳು ಮನಸು ನಗುತಿದ್ದಾಗ - ಕನಸುಗಳಿಗೆ ರೆಕ್ಕೆ ಮೂಡಿ ಗಗನಗಾಮಿ ಎಂಬರ್ಥವನ್ನು ಮೂಡಿಸಿದರೆ,
ಮನಸು ಮಗುಚಿ ಬಿದ್ದಾಗ - ಕನಸುಗಳೆಲ್ಲ ನನ್ನ ತೊರೆದು ಹಾರಿ ಹೋಗುತಿವೆ ಎಂಬಂತೆ ಭಾಸವಾಗಿ ಇನ್ನಷ್ಟು ಖಿನ್ನವಾಗಿಸುತ್ತವೆ.
ಎಲ್ಲ ಸರಿಯಿದ್ದಾಗ ಸಣ್ಣ ಸೋಕುವಿಕೆಯೂ ಝೇಂಕಾರವೇ.
ಒಂದು ತಂತಿ ಹರಿದರೂ ಪ್ರತಿ ಸ್ವರವೂ ಅಪಸ್ವರವೇ.
ಬದುಕೂ ಹಾಗೆಯೇ...
ಅದೇ ವೀಣೆ, ಅದೇ ತಂತಿ...
ಮಿಡಿವ ರಾಗಗಳು ನೂರಾರು - ಹೊಮ್ಮಿಸುವ ಭಾವಗಳು ಸಾವಿರಾರು...
ಒಮ್ಮೆ ನಗೆಯ ಝೇಂಕಾರ - ಇನ್ನೊಮ್ಮೆ ನೋವ ಹೂಂಕಾರ...
ಕಾಯುತ್ತ ನಿಂತಾಗಲೆಲ್ಲ ನಾನು ಹೋಗಬೇಕಾದ ಬಸ್ಸೊಂದನ್ನುಳಿದು ಬೇರೆ ಬಸ್ಸುಗಳೆ ಜಾಸ್ತಿ ಬರುತ್ವೆ ಯಾವಾಗಲೂ ಅಥವಾ ನಂಗೇ ಹಂಗನ್ನಿಸುತ್ತಾ...
ಇನ್ನೂ ಏನೋ ಬೇಕಿದೆ ಎಂಬ ತುಡಿತದಲ್ಲೇ ಬದುಕ ಈ ಕ್ಷಣ ನಗುತಿದೆ
ಮತ್ತು
ಆ ತುಡಿತದಲ್ಲೇ ನಗಬೇಕಿದ್ದ ಬದುಕ ಹಲ ಕ್ಷಣಗಳು ನಲುಗಿದ್ದೂ ಇದೆ...
ನಿನ್ನೆ ಅದ್ಭುತವಾಗಿ ಕಂಡ ಕನಸು ಇಂದು ನನಸಾಗಿ ಕೈಸೇರಿದಾಗ ಕ್ಷುಲ್ಲಕ.
ನಿನ್ನೆ ಇದೇನು ಹೊಳೆಯಾ ಅಂತಂದು ಅಣಕಿಸಿ ನಾ ದಾಟಿ ಬಂದಿದ್ದ ಪುಟ್ಟ ತೊರೆ - ಇಂದು ಹೊಸ ಝರಿಗಳ ಒಳಗೊಂಡು ದೊಡ್ಡ ಹಳ್ಳವಾಗಿ ಬೆರಗು ಮೂಡಿಸಿ, ದಾಟಿ ಹೋಗದಂತೆ ತನ್ನ ಸುಳಿಗಳಲಿ ಎನ್ನ ಮುಳುಗೇಳಿಸುತ್ತೆ...
ಕಣ್ಣಿಂದ ಜಾರಿದ ಹನಿ -
ಕನಸೊಂದು ಅರ್ಧಕ್ಕೇ ಸತ್ತುಹೋದದ್ದಕ್ಕೆ ಶ್ರದ್ಧಾಂಜಲಿಯಾ ಅಥವಾ ಹೊಸಕನಸಿಗೆ ಬಾಗಿಲು ತೆರೆಯಬಹುದಾದ ಖುಷಿಗಾ ಎಂದರ್ಥವಾಗದೇ ಕಂಗಾಲಾಗ್ತೇನೆ...
ಗೊಂದಲಗಳ ತೆರೆಗಳ ಮೇಲೆ ಹೊಯ್ದಾಡುತಿದೆ ಜೀವನ ನೌಕೆ...
ಸದಾ ನನ್ನ ಕಾಡುವ ನನ್ನದೇ ಮನಸಿನ ಮಾಯೆಗಳಿಗೆ ಏನೆನ್ನಲಿ...
ಮನಸ್ಸಿನಾಳದ ತಳಮಳಗಳನ್ನು ನೀವು ಅಕ್ಷರೀಕರಿಸಿದ ರೀತಿಯನ್ನು ನೋಡಿ ಬೆರಗಾಗುತ್ತೇನೆ ... ಓದುತ್ತ ಓದುತ್ತ ಕಳೆದುಹೋಗಿದ್ದೇನೆ ಶ್ರೀವತ್ಸ ...
ReplyDeleteತು೦ಬಾ ಚನ್ನಾಗಿದೆ ಶ್ರೀವತ್ಸ... ಬಹಳ ಇಷ್ಟ ಆಯಿತು. ಜೀವನ ಒ೦ದು ರೀತಿ ಗೊ೦ದಲಗಳ ಸ೦ತೆ. ಕೆಲವೊಮ್ಮೆ ಗೊ೦ದಲಗಳನ್ನು ಹೆಚ್ಚು ಬಿಡಿಸ ಹೋದ೦ತೆ ಮತ್ತೂ ಜಟಿಲವಾಗುವುದೇನೋ ಎ೦ದು ಅನಿಸಿದ್ದು೦ಟು. ಆದರೆ ಕೆಲವೊಮ್ಮೆ ಹೃದಯ ಎಲ್ಲ ಗೊ೦ದಲಗಳಿಗೆ ಉತ್ತರ ನೀಡಿದ್ದೂ ಉ೦ಟು. ಕೆಲವೊಮ್ಮೆ ಇದಕ್ಕೆಲ್ಲಾ ಉತ್ತರ ಹುಡುಕುತ್ತಾ ಜೀವನವನ್ನು ಯಾಕಿಷ್ಟು ಜಟಿಲಗೊಳಿಸಿಕೊಳ್ಳಬೇಕೆನಿಸಿದ್ದೂ ಉ೦ಟು. ಒ೦ದೇ ವಿಷಯದ ಬಗ್ಗೆ ಇಷ್ಟೆಲ್ಲಾ ಅನಿಸಿದ್ದು ಹೇಗೆ ಎ೦ಬುದೂ ಒ೦ದು ರೀತಿಯ ಗೊ೦ದಲವೇ ಆಗಿದೆ....
ReplyDeleteಅದೇ ವೀಣೆ, ಅದೇ ತಂತಿ...
ReplyDeleteಮಿಡಿವ ರಾಗಗಳು ನೂರಾರು - ಹೊಮ್ಮಿಸುವ ಭಾವಗಳು ಸಾವಿರಾರು...
ಇಷ್ಟವಾಯಿತು ಸಾಲುಗಳು ...
ದಿನ ದಿನವು ಹೊಸ ಹೊಸ ತುಮುಲಗಳು ...
ಬಹುಷಃ ಇವೇ ಮುಂದಿನ ದಿನಕ್ಕೂ ಇನ್ನೊಂದು ಆಯಾಮ ನೀಡುತ್ತವೇನೋ ...??
chandada blog... barahagalu ishtavadavu..
ReplyDeleteಬದುಕೊಂದು ಭಾವಗಳ ತಾಣ...ಕಷ್ಟಕರ ಹಾದಿಯಲ್ಲಿ ಬೆಂದು ಬಾಯಾರಿ ಕಣ್ಣೀರ ಕೆರೆ ನೀರು ಕುಡಿದು ಸಮಾಧಾನಿಸಿಕೊಳ್ಳಬೇಕಾಗುತ್ತದೆ..ಅಲ್ಲಲ್ಲಿ ನಾವು ನಿತ್ತು ಕೊಂಚ ವಿಶ್ರಮಿಸಬೇಕಾದ ಸ್ಥಳವೇ ಗೊಂದಲದ ನಿಲ್ದಾಣ.. ಎಂತಿದ್ದರು ಮುಂದೊಂದು ದಿನ ಖುಷಿಯ ಬೆಟ್ಟವನೇರುವ ಜೀವದ ಕನಸ ಕೈಬಿಡದೇ ನಾಳೆಯ ನಂಬಿಕೆಯಲಿ ಜೀವನ ಸಾಗಿಸಬೇಕು...ಸಾಗಿಸೋಣ.. :)
ReplyDeleteನಮ್ಮ ಮನದಲಿರುವ ಆಸೆಗಳನ್ನು ಭಗವಂತ ನನಸು ಮಾಡುವುದೇ ಇಲ್ಲ.
ReplyDeleteಎಲ್ಲೋ ಬೆಂಬತ್ತಿ ಹೋಗುತ್ತೇವೆ. ಅಲ್ಲಿನ ಕಂದಕ ಕಂಡು ಬೆಚ್ಚುತ್ತೇವೆ.
ವಾವ್ ಪುಟ್ಟ ಬರಹದಲ್ಲಿ - ಹಿರಿಯಾರ್ಥ ಸಂಜೀವಿನಿ!
ಅದೆಷ್ಟು ಭಾವನೆಗಳು...
ReplyDeleteಭಾವಗೊಂಚಲು ಸೂಕ್ತವಾಗಿದೆ ಹೆಸರು..
ಪ್ರತಿಯೊಂದು ಶಬ್ಧಕ್ಕೂ ಮುತ್ತಿಕ್ಕಿ ಅಪ್ಪಿಕೊಳ್ಳುವ ಭಾವನೆಗಳು..
ತುಂಬಾ ಚೆನ್ನಾಗಿದೆ ಶ್ರೀವತ್ಸ...
ಬರೆಯುತ್ತಿರಿ..
ಹಾಂ "ಕಣ್ಣಿಂದ ಜಾರಿದ ಹನಿ -
ಕನಸೊಂದು ಅರ್ಧಕ್ಕೇ ಸತ್ತುಹೋದದ್ದಕ್ಕೆ ಶ್ರದ್ಧಾಂಜಲಿಯಾ....."
ಆ ಕಲ್ಪನೆಯೇ ವಿಶಿಷ್ಟ...
ನಾನಂತೂ ನಿಮ್ಮ ಅಭಿಮಾನಿಯಾದೆ...
ಬರೆಯುತ್ತಿರಿ..
ನಮಸ್ತೆ..