'ಮಾಯಾ' ಜಾಲ.....
ಮೆಜೆಸ್ಟಿಕ್ಕಿನ ಜನ ಜಾತ್ರೆಯ ಜಂಗುಳಿ ನಡುವೆ
ಸುಮ್ಮನೆ ಸಣ್ಣಗೆ ನಕ್ಕು ಮರೆಯಾಗುವ
ಆ
ಅರಳು ಕಂಗಳು...
ಹಳೆಯ ಯಾವುದೋ ಮಧುರ ನೆನಪೊಂದು
ಕೈಜಗ್ಗಿ
ಹೆಗಲು ತಬ್ಬಿ
ನೆತ್ತಿ ನೇವರಿಸಿ
ಹಣೆಯ ಮುದ್ದಿಸಿ
ಇನ್ಯಾವುದೋ ಬೆಚ್ಚನೆ ಕನಸಿನ ಲೋಕಕ್ಕೆ ಒಯ್ದಂತೆ
ಯಾವುದೋ ಭಾವ ಲೋಕಕ್ಕೆ ನನ್ನ ಮನವ
ಹೊತ್ತೊಯ್ಯುತ್ತವೆ...
ಕಂಡ ಪ್ರತಿ ಬಾರಿಯೂ...
ಮನವಾಗ
ಸುರಿಯಲು
ಇಳೆಯ ಇಶಾರೆಗೆ ಕಾಯುತಿರುವ
ಮೋಡಗಟ್ಟಿದ ಬಾನು...
ಅವಳ ಕಣ್ಗಳ ಭಾವಗಳ ಓದಲು ಒದ್ದಾಡುತ್ತಾ
ಕಣ್ಗಳ ಒಡತಿಯ ಅಪರಿಚಿತತೆಯನ್ನು ಮರೆತು
ಹೊಸ ಕವನಕ್ಕೆ ಕಾವು ಕೊಟ್ಟ ಕವಿಯಂತೆ ನಲಿಯುತ್ತೇನೆ...
ಅವಳದೊಂದು ಕಿರುನಗೆಗೆ ಕಾಯುತ್ತ ಕಾಯುತ್ತ
ಹಸುಳೆಯ ಎಳೆ ದವಡೆಯಿಂದ ಕೆನ್ನೆ ಕಚ್ಚಿಸಿಕೊಂಡ
ಹಿತವಾದ ಯಾತನೆಯ ಖುಷಿಯ ಸವಿಯುತ್ತೇನೆ...
ಬಳುಕಿ ನಡೆವಾಗಿನ ಅವಳ ನೀಳವೇಣಿಯ ವೈಯಾರವ ಕಂಡು
ಒಂದು ಕ್ಷಣದ ಎನ್ನೆದೆಯ ಏರಿಳಿತ
ಪಕ್ಕ ಕುಳಿತ ಯಾರೋ ತಾತನ ಬೊಚ್ಚು ಬಾಯಲ್ಲಿ
ಮುಗುಳ್ನಗೆಯಾಗಿ ತೋರುತ್ತದೆ...
ಅವಳೆದೆಯ ಗೊಂಚಲ ನಡುವೆ ಬೆಚ್ಚಗೆ
ಮೈಮರೆಯುವ ಆಸೆಗೆ
ಕನಸಲ್ಲೂ ಉಸಿರುಗಟ್ಟುತ್ತೇನೆ...
ನಕ್ಕೂ ನಗದಂತಿರುವ ಅವಳು
ಕುಡಿನೋಟಕ್ಕೂ ಚಡಪಡಿಸುವ ನಾನು
ಎನ್ನ ಮನದಿ ಕುಣಿದಾಡುವ ಭಾವ
ಅದು
ಬರೀ ಮೋಹವೋ
ಪ್ರೇಮವೋ - ಕಾಮವೋ
ಇವೆಲ್ಲ ಸೇರಿದ ಇನ್ಯಾವುದೋ
ಏನೆಂದು ಅರ್ಥೈಸಿಕೊಳ್ಳಲಾಗದೇ
ಹೊರಚೆಲ್ಲುವ ಭಾವಗಳ ಹಿಡಿದಿಟ್ಟುಕೊಳ್ಳಲು ಒದ್ದಾಡುತ್ತಾ
ಒಂದಿಷ್ಟು ಪುಳಕಗಳೊಂದಿಗೆ
ಕಾಲ ತಳ್ಳುತ್ತಿದ್ದೇನೆ...
ಹಾಗೇ ಸುಮ್ಮನೆ...
ಒಂದಂತೂ ಸತ್ಯ...
ಮನಸನ್ನು ಅವಳ ಉಡಿಯಲ್ಲಿ ಅಡವಿಟ್ಟು ಬಹುಕಾಲ ಸಂದು ಹೋಯಿತು...
ಬಿಡಿಸಿಕೊಳ್ಳುವ ಪರಿಯ ತಿಳಿಯದೇ ಬುದ್ಧಿ ಕಂಗಾಲು ಕಂಗಾಲು...
ಬಿಟ್ಟೇನೆಂದರೂ ಬಿಡದೀ ಮನಕೆ ಕವಿದ ಮರುಳ
'ಮಾಯೆ...'
ಲೋ ಹುಷಾರಾಗಿ ಇರೋ.. :))
ReplyDeleteತುಂಬಾ ಚೆನ್ನಾಗಿದೆ.... ಮೆಜೆಸ್ಟಿಕ್ ಮಾಯಾ...ಜಾಲ.... :)
ReplyDeleteಮೆಜಸ್ಟಿಕ್ ಪುಟಗಟ್ಟಲೆ ಬರೆಯಬಲ್ಲ ಸರಕು.
ReplyDeleteಈ ಕವನ ಅದರ ಪ್ರೋಮೋ. ಸೂಪರ್.