Monday, November 26, 2012

ಗೊಂಚಲು - ಐವತ್ತು ಮತ್ತೆರಡು.....

ದ್ವೀಪ.....

ಆಗಿರುವೆ -
ಸುತ್ತ ಮೊರೆವ ಸಾಗರದ ನಡುವೆ ನಾನೊಂದು ಏಕಾಂಗಿ ಕಲ್ಲು ದ್ವೀಪ...
ಯಾಕಿಲ್ಲಿ ಇನ್ನೂ ಇದ್ದೇನೆ..
ಒಡೆದು ಚೂರಾಗಿ ಹೋಗದೇ...

ಆಸೆಯಾಗುತ್ತೆ ನಂಗೂ ಭಾವಬಂಧಗಳ ಒಳಗೊಂಡು ಹಿಗ್ಗಬೇಕೆಂದು...
ಆದರೇನ ಮಾಡಲಿ 
ಒಡಲ ಗೀತೆ ಹಾಡಲರಿಯದ ಮೂಕ ನಾನು...

ಎಲ್ಲೋ ಕಣ್ಣು ಹಾಯದ ದೂರದಲ್ಲಿ ನಾವೆಯೊಂದು ತೇಲಿದರೆ
ಅದು ನನ್ನನೇ ಅರಸಿ ಬಂತೆಂದು ಭ್ರಮಿಸಿ,
ನಾನಿಲ್ಲಿ ಹೊಸ ಕನಸಿಗೆ ಕಣ್ಣರಳಿಸುತ್ತೇನೆ...
ಬಳಿ ಬಂತೆಂದುಕೊಂಡ ನಾವೆ ಮಾರು ದೂರದಿಂದಲೇ ತಿರುಗಿಯೂ ನೋಡದೆ ನನ್ನಿಂದ ಮುಂದೆ ಸರಿದು ಹೋಗುತ್ತೆ...
ಆಗೆಲ್ಲ ಮನ ಬಿಕ್ಕಳಿಸುತ್ತೆ...
ಸಾಗರನ ಮೊರೆತದಬ್ಬರಕೆ ಬಿಕ್ಕಳಿಸಿದ ಸದ್ದು ನನಗೂ ಕೇಳಿಸದಂತಾಗಿ,
ನಾನತ್ತದ್ದು ನನಗೇ ಸುಳ್ಳೆನಿಸಿ ಮತ್ತಷ್ಟು ಕಂಗೆಡುತ್ತೇನೆ...
ಅಪಾರ ಜಲರಾಶಿಯಲ್ಲಿ ಲೀನವಾದ ಕಣ್ಣ ಹನಿಗೇನೂ ವಿಶೇಷ ಅಸ್ತಿತ್ವವಿಲ್ಲ...
ನನ್ನ ಕಣ್ಣ ಹನಿಯಿಂದೇನೂ ಸಾಗರದ ಪಾತ್ರ ವ್ಯತ್ಯಾಸವಾಗಲ್ಲ...
ಮನಸೂ ಬಂಡೆಯಾಗಿರುವ ಮಾತ್ರಕ್ಕೆ  ಇನ್ನೂ ನಿಂತಿದ್ದೇನೆ ಅಚಲವಾಗಿ...
ಹೊಸ ಕನಸಿನ ನೌಕೆ ಬಳಿ ಸುಳಿಯದಿದ್ದರೂ - ಒಂದಲ್ಲ ಒಂದು ದಿನ ನಾನಿರುವಲ್ಲಿ ನನಗಾಗಿಯೇ ಬಂದೇ ಬರುವುದು ಕಾಲನ ನಾವೆ...
ಅಲ್ಲಿಯವರೆಗೆ ಮೊರೆತಕ್ಕೆ ಮೈಯೊಡ್ಡಿ ಅದೇ ಸುಖವೆಂದುಕೊಂಡು ಕಾಯುತ್ತಲೇ ಇರುತ್ತೇನೆ - 
ಒಂಚೂರು ಒಲವಿಗೆ, ಸಣ್ಣ ಗೆಲುವಿಗೆ, ಮಗುವ ನಗುವಿಗೆ, ನಾನೂ ಜೀವಂತ ಅಂತ ನನಗೂ ಅನ್ನಿಸುವಂತೆ ಒಂದು ಕ್ಷಣವಾದರೂ ಜೀವಿಸುವ ಕನಸಿಗೆ...

5 comments:

  1. ಯಾವ ದೋಣಿಯೋ ತೇಲಿ ಎಂದು ಬರುವುದೋ ಕಾಣೇ ನೀನಿರುವ ಬಳಿಯಲ್ಲಿ ನನ್ನ ಬಿಡಲು...
    ಎಂದು ಭಾವಗೀತೆಯ ಸಾಲೊಂದನ್ನು ತಾನಾಗೆ ತುಟಿ ಮೇಲೆ ತಂದಂತಹ ಲೇಖನ....
    --

    ReplyDelete
  2. "ನನ್ನ ಕಣ್ಣ ಹನಿಯಿಂದೇನೂ ಸಾಗರದ ಪಾತ್ರ ವ್ಯತ್ಯಾಸವಾಗಲ್ಲ..."

    ಎನ್ನುವ ಕವಿಯ ಅಳಲು ನನ್ನದೂ ಸಹ.

    ನಾನು ಕಾದದ್ದೇ ಬಂತು ಒಬ್ಬಂಟಿಯಾಗಿ, ಇಲ್ಲಿಯವರೆಗೂ ಹೊತ್ತೊಯ್ಯುವ ನಾವೆಯ ಸುಳಿವಿಲ್ಲ!

    ReplyDelete
  3. ಚನ್ನಾಗಿದೆ ಶ್ರೀವತ್ಸ.... ಕೊನೆಯಲ್ಲಿನ ಆಶಾದಾಯಕ ಭಾವ ಇಷ್ಟವಾಯಿತು...

    ReplyDelete