Wednesday, November 7, 2012

ಚಿನ್ನದ ಗೊಂಚಲಿದು.....

ಕಾಲನ ಕುಣಿಕೆ.....

ಹೋಗುವವರೆಲ್ಲ
ಹೋಗುತ್ತಲೇ ಇರುತ್ತಾರೆ
ಕಳೆದುಕೊಂಬ ಇಚ್ಛೆ ಇರದಿದ್ದರೂ
ಉಳಿಸಿಕೊಂಬ ಸಾಮರ್ಥ್ಯ ನಮಗಿಲ್ಲ...



ಕಾಲನ ಕೈಯ ಕುಣಿಕೆಗೆ
ದಯೆಯ ಹಂಗಿಲ್ಲ
ಧರ್ಮದ ದರ್ದಿಲ್ಲ
ಯಾವ ಜಪ 
ಯಾವ ಜನಿವಾರವೂ
ಅವನ ಗೆದ್ದದ್ದಿಲ್ಲ...


ಎಂಥ ಕುಲ
ಯಾವ ಗೋತ್ರ
ಗಂಜಿಯೂ ಸಿಗದ ಬಡವ
ಸುಪ್ಪತ್ತಿಗೆ ಬಿಟ್ಟಿಳಿಯದ ಬಲ್ಲಿದ
ಅವನ ರಾಜ್ಯದಲ್ಲಿ 
ಎಲ್ಲರೂ ಸಮಾನ...
ಎಲ್ಲರಿಗೂ ಒಂದೇ
ನ್ಯಾಯದಾನ...


ಕಣ್ತೆರೆಯುತಿರುವ ಶಿಶು
ಕಣ್ಣು ಮಂಜಾದ ವೃದ್ಧ
ಯಾವುದು ಅಕಾಲ
ಯಾರದು ಸಕಾಲ
ಕಾಲನಿಗೆ ವಯಸೊಂದು
ಲೆಕ್ಕವೇ ಅಲ್ಲ...
ಅವನ ತೂಗುಗತ್ತಿ 
ನಮ್ಮ ತಲೆಮೇಲೆ
ಸದಾಕಾಲ... 

ನಮ್ಮ ಮುಂಚಿನವರು ಹೋದರು
ಹಿಂಚಿನವರೂ ಹೋದಾರು
ನಮ್ಮ ಸರದಿಗೆ ಕಾಯುತ್ತಾ
ನಾವು ಸಾಲಾಗಿ ನಿಂತಿದ್ದೇವಷ್ಟೇ...
ಅವನ ಬತ್ತಳಿಕೆ ಖಾಲಿಯಾದದ್ದಿಲ್ಲ
ಅಂಬಿಗೆ ಗುರಿ ಯಾರೆಂಬುದೂ
ತಗಲುವವರೆಗೆ 
ಅನಿಶ್ಚಿತ...


ಎಲ್ಲ ಹೋಗುವುದು ನಿಶ್ಚಿತ
ಹೋದವರ ನೆನಪೊಂದೇ ಶಾಶ್ವತ...
ನೆನಪು ಸಿಹಿಯಾ.? 
ಇಲ್ಲ ಕಹಿಯಾ.??
ಅದು
ಬದುಕಿದ್ದರ ಮೇಲೆ ಅವಲಂಬಿತ...

ಹೋಗುವ ಮುನ್ನ
ಸುತ್ತಲಿನ ನಾಕು ಮನಗಳಲಿ
ಸಿಹಿ ಭಾವಗಳ ಬಿತ್ತಿ ಹೋಗೋಣ...
ಅಳಿದ ಮೇಲೂ
ಉದುರೀತು ಎರಡು ಹನಿ
ಉಳಿದವರ ಕಣ್ಣಂಚಲ್ಲಿ...
ಸಾರ್ಥಕ್ಯ ಅಷ್ಟೇ
ಇಲ್ಲಿ ಬಂದಿದ್ದಕ್ಕೆ...
ಇಷ್ಟು ಕಾಲ ಬದುಕಿದ್ದಕ್ಕೆ...

ಚಿತ್ರ ಕೃಪೆ : ಅಂತರ್ಜಾಲ...

7 comments:

  1. ನಿನ್ನೊಳಗಿನ (ಏಕವಚನ) ಕವಿಗೆ ನನ್ನ ನಮನ :))..

    ReplyDelete
  2. ಹುಟ್ಟಿನ ಸಾರ್ಥಕತೆ, ಸಾವಿಗಿಂತಲೂ ಮುಂಚೆ ಸಾಧಿಸುವ ಒಳ್ಳೆಯತನಕ್ಕೆ.

    ಉತ್ತಮ ಕವನ.

    ReplyDelete
  3. ಕಾಲನ ಕುಣಿಕೆ..
    ಚೆನ್ನಾಗಿದೆ ಸರ್...

    ReplyDelete
  4. ಬದುಕನ್ನು ಎಷ್ಟು ಚನ್ನಾಗಿ ಅರ್ಥ ಮಾಡಿಕೊಂಡಿದ್ದೀಯಾ.....

    ಕಾಲನ ಮೃತ್ಯು ಬಾಣಕ್ಕೆ ತುತ್ತಾಗೋ ಮೊದಲು
    ನಮ್ಮ ನಂತರದ ನೆನಪಿನ ಬಾಣಂತನಕ್ಕೊಂದು ಗರ್ಭ
    ಕಟ್ಟಿಸಿ ಹೋಗಿಬಿಡಬೇಕು.....

    ಬದುಕಿದ್ದ... ಸತ್ತ..... ಎನ್ನುವುದಕ್ಕಿಂತ
    ಹೀಗಿದ್ದ ಹಾಗಿದ್ದ ಏನೆಲ್ಲ ಆಗಿದ್ದ ಎನ್ನುವುದರಲ್ಲಿ
    ಕಣ್ಣ ಹನಿಗಳು ಎರಡು ನಮ್ಮ ಪಾಲಿಗೆ ಹೆಚ್ಚಿಗೆ ಇರುತ್ವೆ...

    ತುಂಬಾ ಚಂದನೆಯ ಅರ್ಥವತ್ತಾದ ಬರಹ...

    ReplyDelete
  5. ಸಕ್ಕತ್ತಾಗಿದೆ ವತ್ಸ.. ನಿರೀಕ್ಷೆಗಳೆಲ್ಲಾ ಒಮ್ಮೆಲೇ ಸ್ತಬ್ಧವಾದ ಭಾವ!

    - ಪ್ರಸಾದ್.ಡಿ.ವಿ.

    ReplyDelete