Friday, November 11, 2016

ಗೊಂಚಲು - ನೂರಾ ತೊಂಭತ್ತು ಮೇಲೆ ಒಂಭತ್ತು.....

ಇನ್ನೂ ಎನೇನೋ..... 

ಇಲ್ಲೆಲ್ಲೋ ವೃದ್ಧರ ಗೂಡಿನ ಅಜ್ಜಿಯರ ತಬ್ಬುವಾಗ ಎದೆಯಲಿ ರಕ್ತ ತಂಪಾಗಿ ಉಸಿರು ಹೆಪ್ಪುಗಟ್ಟುತಿರೋ ಭಾವ - ಅಲ್ಲೆಲ್ಲೋ ಆಯಿ ನಕ್ಕಂತೆ ಭಾಸ...
ಬದುಕ ಹೊರಲಾರದ ಅಸಹಾಯ ಹೆಗಲ ಗಾಯದ ಘಾಟಿಗಿಂತ ಸಾವಿನ ವಾಸನೆಯೇ ಸಹನೀಯವೇನೋ...
{{*}}

ನನ್ನ ವ್ಯಕ್ತಿತ್ವದ ಬಗೆಯ ಪ್ರಾಮಾಣಿಕ ಪ್ರಮಾಣ ಪತ್ರ ನನ್ನದೇ ಅಂತರಾತ್ಮದ ನ್ಯಾಯಾಲಯದಲ್ಲಿ ಮಾತ್ರ ಸಿಗಲು ಸಾಧ್ಯ...
ಆಚೆಯಿಂದ ಸಿಗುವ ಎಲ್ಲಾ ಬಿರುದು, ಬಾವಲಿ, ಗುಣವಾಚಕಗಳೂ ನನ್ನ ಮಾತು, ಮೌನ, ಕ್ರಿಯೆ, ಪ್ರತಿಕ್ರಿಯೆಗಳಿಗೆ ಮತ್ತು ಅವನೆಲ್ಲ ನಿಯಂತ್ರಿಸಿ ನಿಭಾಯಿಸುವ ನನ್ನ ಸುಂದರ (?) ಮುಖವಾಡಕ್ಕೆ ಸಮಾಜ ದಯಪಾಲಿಸುವ ಬಿನ್ನವತ್ತಳೆ ಅಷ್ಟೇ...
{{*}}

ಬಿರುಕು ಪಾದ - ಬಳಸು ಹಾದಿ - ಆ ನೀಲಿ ಕನಸು - ಈ ಕೆಂಪು ಕಲೆ - ಚೆಲ್ಲಿ ಹೋದ ಶಾಯಿಯೆಡೆಗಿನ ಹಳಹಳಿಕೆ ಬದುಕು...
ಯಾವ ಮುರ್ಕಿ - ಇನ್ಯಾವ ಶಾಪ - ಯಾವ್ಯಾವುದೋ ರೂಪ - ಎಂಥ ಹೆಜ್ಜೆಯ ಗುರುತನೂ ಅರೆ ಚಣದಲಿ ಅಳಿಸುವ ಬಿರು ಬೀಸಿನಲೆ ಸಾವು...
{{*}}

ನಿಭಾಯಿಸಲರಿಯದ ಅಹಮಿಕೆ ಕೊಂದಷ್ಟು ಕ್ರೂರವಾಗಿ ಸಾವು ಕೂಡ ಬಂಧಗಳ ಕೊಲ್ಲಲಿಕ್ಕಿಲ್ಲ; ಅಹಂನ ಆರ್ಭಟದಲಿ ನೆನಪುಗಳಿಗೂ ಕಹಿ ಕಹಿಲೇಪ...
ಪ್ರೀತಿ ಹೆಣದ ಬೂದಿಯಲಿ ತುಂಡು ಬೆರಳ ಮೂಳೆಗೆ ತಡಕಾಡುತ್ತೇನೆ; ನೋವ ಅಸ್ತಿಯನು ಕಣ್ಣತೀರ್ಥದಲಿ ತೊಳೆದು ನಾಳೆ ನಾ ಮತ್ತೆ ನಗಬೇಕಿದೆ...
{{*}}

"ಪ್ರಜ್ಞೆಯ ಸಾರತ್ಯವಿಲ್ಲದೇ ಮನಸಿನ ಸಾರೋಟನ್ನು ಹಾದಿಗಿಳಿಸಿದಾತ ತನ್ನೆಲ್ಲ ಸೋಲಿಗೂ ಯಾರ್ಯಾರನ್ನೋ ದೂರುತ್ತಾ, ಹಳಹಳಿಕೆಗಳಲೇ ಬದುಕ ಸವೆಸುತ್ತಾನೆ..."
ಈ ಮಾತು ಮನಸಿನಾತುರಕೆ ಆಯ್ಕೆಯ ಅಡವಿಟ್ಟು ಕೊನೆಗೆ ಅಳುತ್ತ ಕೂರುವ ಎಲ್ಲಾ ಪ್ರೇಮಿಗಳಿಗೆ ಇನ್ನೂ ಹೆಚ್ಚು ಅನ್ವಯಿಸುತ್ತೆ...
ಪ್ರೇಮ ಕುರುಡು; ಗುಣಾವಗುಣಗಳನೆಲ್ಲ ಪರೀಕ್ಷಿಸಿ ಆಯ್ದುಕೊಳ್ಳೋಕೆ, ಒಪ್ಕೊಳ್ಳೋಕೆ ಪ್ರೇಮವೇನು ಒಪ್ಪಂದವಾ? ಪ್ರೇಮ ವ್ಯಕ್ತಿ ವ್ಯಕ್ತಿತ್ವಕ್ಕೆ ಜರಡಿ ಹಿಡಿದು ಕಾಯ್ದು ಮಾಡುವುದಲ್ಲ ಅದು ಸಹಜವಾಗಿ ಸಂಭವಿಸಿಬಿಡುವುದು; ಪ್ರೇಮದ ಗೆಲುವಿರೋದು ಮದುವೇಲಿ ಮಾತ್ರ... ಯಪ್ಪಾ ಎಂತೆಥಾ ಭ್ರಮೆಗಳು...!!!
ಅತ್ತು ಪ್ರೇಮವ ಒಲಿಸಿಕೊಳ್ಳುವುದಕ್ಕೂ ಒಲಿದ ಪ್ರೇಮದೆದುರು ಕಣ್ತುಂಬಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸ ಇದೆ...
ಮದುವೆಯ ಯಶಸ್ಸು, ಆಯಸ್ಸು ಪ್ರೇಮದಲ್ಲಿದೆ ನಿಜ; ಆದರೆ ಪ್ರೇಮದ ಸಾರ್ಥಕ್ಯ ಮದುವೆಯಲ್ಲಿ ಮಾತ್ರ ಅನ್ನೋದು ಬಯಲಿಗೆ ಬೇಲಿ ಹಾಕಿದಂತೆನಿಸುತ್ತೆ ನಂಗೆ...
- ಇನ್ನೂ ಎನೇನೋ...
*** ಭಗ್ನ ಮತ್ತು ಆದರ್ಶ (?) ಪ್ರೇಮಿಗಳ ಕ್ಷಮೆಕೋರಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, November 2, 2016

ಗೊಂಚಲು - ನೂರಾ ತೊಂಭತ್ತೆಂಟು.....

ಒಂದಿಷ್ಟು ತುಂಡು ಭಾವಗಳು..... 

ಈಗಿನ್ನೂ ಬಾಳೆಲೆ ಹರವಿ, ನಾಕು ಹನಿ ಚಿಮುಕಿಸಿ ಧೂಳು ಕೊಡವಿ, ಬಡಿಸಿಕೊಳ್ಳಬೇಕು ಊಟವ.......
...... ಬದುಕು ತುತ್ತೆತ್ತಿಕೊಳುವ ಮುನ್ನವೇ ಬಾಗಿಲಲಿ ಸಾವು ತೇಗಿತ್ತು...
(**ಎಲ್ಲ ಹಸಿವಿಗೂ ತರ್ಪಣ...)
<<^>>

***ಮಿಂಚಿನಂದದೊಳಾದರೂ, ತುಸುವೇ ಆದರೂ ಸುರಿದು ಹೋಗೊಮ್ಮೆ ಈ ಎದೆಯ ಹಾದಿಯಲಿ ಕನಸ ಬೆಳಕೇ...
***ನೀಗದ ನಿರ್ಲಜ್ಜ ಹಸಿವುಗಳ ಮಗ್ಗುಲಲೇ ನಿನಗಾಗಿ ನೀನಾಗಿ ನೀನೊಮ್ಮೆ ನಗು ಬದುಕೇ...
*** ಪ್ರೀತಿಯೂ ಹಸಿವೇ - ಕಾಮವೂ ಕನಸೇ - ಹೆಜ್ಜೆ ಭಾರವಾದಷ್ಟೂ ಸಾವು ಹಗುರ...
<<^>>

ಏಕಾಂಗಿ ನಿಲ್ಲಬೇಕು ಸಂತೆಯಲ್ಲಿ - ಏಕಾಂತ ತಬ್ಬಬೇಕು ಅಂಕದಲ್ಲಿ...!!!
<<^>>

ಯಾರದೋ ನಗೆಯ ಹಿಂದಿನ ತೀವ್ರ ನೋವಿಗೂ ಸಾಂತ್ವನದ ಮದ್ದಾಗಬಹುದು - ನಮ್ಮವರದೇ ನಗೆಯ ಹಿಂದಿನ ಗುದ್ದಿಗೂ ಸಿಗದ ತಣ್ಣನೆ ಕ್ರೌರ್ಯವ ಸಹಿಸಬೇಕಾಗಿ ಬರುವುದು ಅಸಹನೀಯ...
<<^>>

ಕನಸೊಂದು ಕನಸ ಕೈ ಹಿಡಿದು ನಡೆದಂತೆ, ಸೇರಲಾರದ ಮಿತಿಯ ಅರಿತೂ ಕುಗ್ಗದ ಅದೇ ಒಲವ ಮಿಡಿತಗಳ ಹೊತ್ತು ಬಹುದೂರ ದಾರಿ ಜೊತೆ ಜೊತೆಗೆ ಸಾಗೋ ರೈಲು ಕಂಬಿಗಳ ನಿರೀಕ್ಷೆಗಳಾಚೆಯ ಅನುಸಂಧಾನದ ಪ್ರೇಮ ಹಬ್ಬಿ ನಿಂತಿದೆ ನನ್ನೀ ಬದುಕು ಮತ್ತು ನೀನೆಂಬೋ ನನ್ನೊಳಗಿನ ಕನಸಿನ ನಡುವೆ...
<<^>>

ಒಂದು ಮುಖ:
ದುಂಬಿ ಮಲಗಿದ ಮೇಲೆ ಅರಳೋ ಪಾರಿಜಾತವೂ ಮನ ಅರಳಿಸೋ ಘಮ ಬೀರುತ್ತೆ...
ತಂಪಿನಲಿ ತಟ್ಟಿ ಮಲಗಿಸೋ ಚಂದಿರನೂ ಒಂದ್ಯಾವುದೋ ಕನಸಿಗೆ ಅಪ್ಪನಾಗುತ್ತಾನೆ...
ಬೆಳದಿಂಗಳ ತೋಪಲ್ಲೂ ಮೈಮುರಿವ ವಸುಧೆ ಬೆಳಗ ರವಿ ಕಿರಣಕೆ ಮತ್ತೆ ಹೊಸತೆಂಬಂತೆ ಮೈನೆರೆಯುತ್ತಾಳೆ...
ಬ್ರಹ್ಮ ಕಮಲ - ಸೂರ್ಯಕಾಂತಿ - ಹೆಸರಿಲ್ಲದ ಬಸಿರಲ್ಲಿ ಉಸಿರಾಡೋ ತರಹೇವಾರಿ ಹಣ್ಣುಗಳು...
ಪ್ರಕೃತಿ ಪ್ರೀತಿಗೆ ಹೀನತೆಯ ಕುರುಹಿಲ್ಲ, ಶ್ರೇಷ್ಠತೆಯ ಹಮ್ಮಿಲ್ಲ, ಬೇಲಿಗಳ ಹಂಗಿಲ್ಲ, ಪಾಪಗಳ ಗುಂಗಿಲ್ಲ...
ನೀನಾದರೋ ಅವರಿವರಂತೆ "ಪ್ರಶ್ನಿಸಿ ಕಾಮವ ಕ್ರಿಯೆಯಾಗಿಸಬೇಡ - ಪೂಜಿಸಿ ಪ್ರೇಮವ ಕಲ್ಲಾಗಿಸಬೇಡ..."
ಪ್ರಶ್ನೆಗಳನೆಲ್ಲ ಹಸಿವಿಗೆ ಬಲಿಕೊಟ್ಟು, ಪ್ರೇಮವ ಆ ತೋಳಲ್ಲಿ ಕರಗಿಸಿ, ಈ ಒಡಲಲ್ಲಿ ಹೊಸ ಕನಸ ಸ್ಖಲಿಸು...
ಪಾಪವಾದರೆ ಮಿಲನ; ಪಾಪವಾಗದೇ ಜನನ...!!??
<<^>>

ಆ ನಗುವಿಗೆ ಹೆಸರಿಡುವ ಹಂಗಿಲ್ಲದೆ ನನ್ನೆಡೆಗೊಂದು ನಿರ್ವ್ಯಾಜ್ಯ ಆಪ್ತತೆಯನು ಸಾಕಿಟ್ಟುಕೊಂಡ ಜೀವಗಳ ಕಣ್ಣಲ್ಲಿನ ಖುಷಿಯ ಮಿಂಚಿಗೆ ಸಾಕ್ಷಿಯಾಗಿ ಎದೆ ತೆರೆದು ಮಿಂದ ಗರಿ ಗರಿ ಹಗುರತೆಯ ಕ್ಷಣಗಳ ಬಾಚಿ ಭಾವ ಜೋಳಿಗೆಗೆ ತುಂಬಿಕೊಳ್ಳಲಾದರೂ ನಾನಾಗಿ ನನ್ನವರ ಮುಖಾಮುಖಿ ನಿಲ್ಲಬೇಕು ಆಗೀಗಲಾದರೂ - ನೆಪ ಹೇಳದೇ - ನೆಪ ಹುಡುಕಿಕೊಂಡು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)