ನಿದ್ದೆಗೆ ವಿಚಿತ್ರ ಕನಸುಗಳು ಭೇಟಿ ಕೊಡುತ್ತಿವೆ.
ರಾತ್ರಿಯ ನಿಶೀಥದಲ್ಲಿ ಕಂಡ ಕನಸುಗಳಿಗೆ
ಹಗಲಿನ ನಿಚ್ಛಳದಲ್ಲಿ ಅರ್ಥ ಹುಡುಕುತ್ತಿದ್ದೇನೆ.
ನಾನು ಓಡುತ್ತಿದ್ದೇನೆ ಧೋ ಮಳೆಯಲ್ಲಿ.
ತಲೆ ತಗ್ಗಿಸಿದ್ದೇನೆ - ಕಾರಣ ನಾ ಬೆತ್ತಲಿದ್ದೇನೆ.
ಬೆನ್ನ ಹಿಂದೆ, ತೀರ ಸನಿಹದಲ್ಲಿ ಯಾತರದೋ ಹೆಜ್ಜೆ ಸದ್ದು.
ತಿರುಗಿ ನೋಡಲು ಭಯವಾಗುತ್ತೆ.
ನಾನು ಬೆಚ್ಚಿ ಎಚ್ಚರಾಗುತ್ತೇನೆ.
ಮನದಾಳದ ಹಗಲಿನ ತಲ್ಲಣಗಳೇ
ನಿದ್ದೆಯ ರಾತ್ರಿಯ ಸ್ವಪ್ನಗಳಂತೆ.
ಹಾಗಾದರೆ ನನ್ನ ಕಾಡುವ ಸುಪ್ತ ತಲ್ಲಣ ಯಾವುದು.?
ರಾತ್ರಿಯ ಸ್ವಪ್ನವನ್ನು ವಿಶ್ಲೇಷಿಸಿದಂತೆಲ್ಲ
ಮನದಿ ದ್ವಂದ್ವಗಳ ದೊಂಬರಾಟ.
ಎಲ್ಲ ಪ್ರಶ್ನಾರ್ಥಕ.
ನಾನು ಓಡುತ್ತಿದ್ದೇನೆ - ಯಾವುದರಿಂದ ?
ಯಾವುದರೆಡೆಗೆ ?
ಸುರಿವ ಧೋ ಮಳೆ - ಈಡೇರದ ಆಸೆಗಳದಾ ?
ಬಯಸುತ್ತೇನೆ ಯಾರೂ ಇದಿರಾಗದಿರಲೆಂದು -
ಎದುರಿಸಲಾಗದ ಅಸಹಾಯಕತೆಯಾ ?
ಮನವೂ ಬತ್ತಲಾದೀತೆಂಬ ಭಯವಾ ?
ಕತ್ತನ್ನು ಪೂರ್ಣ ಬಾಗಿಸಿದ್ದೇನೆ ಯಾರೂ ಗುರುತಿಸದಿರಲೆಂದು -
ಅನಾಮಧೇಯ ಪಥಿಕನಾಗುವ ಆಸೆಯಾ ?
ಮುತ್ತಿಕ್ಕುವ ಹಳೆಯ ನೋವ ನೆನಪುಗಳಿಂದ ತಪ್ಪಿಸಿಕೊಳ್ಳೋ ವ್ಯರ್ಥ ಪ್ರಯತ್ನವಾ ?
ಆದರೂ ಯಾರೋ ಇದಿರಾಗ್ತಾರೆ.
ಹಾಗೇ ಗುರುತಿಸಿಯೂಬಿಡ್ತಾರೆ.
ಕೆಲವರು ನನ್ನ ಹೆಸರಿನಿಂದ - ಒಳಗೊಳಗೇ ಏನೋ ಖುಷಿ.
ಕೆಲವರು ಅಪ್ಪನ ಹೆಸರು, ವಂಶದ ಹೆಸರಿಂದ - ಅಸಹ್ಯವಾಗುತ್ತೆ.
ಓಡುತ್ತೇನೆ ಇನ್ನಷ್ಟು ವೇಗವಾಗಿ.
ಗಮ್ಯ ಯಾವುದು ?
ಬರೀ ಶೂನ್ಯ...
ಯಾರದು ಬೆನ್ನ ಹಿಂದೆ ಇಷ್ಟು ಸನಿಹ ?
ನನ್ನ ತಲ್ಲಣದ ಮೂಲ - ಕನಸಿನ ಮೂಲ ಎಲ್ಲ ಅದೇನಾ ?
ತಿರುಗಿ ನೋಡಲೂ ಭಯ. ಅಂದುಕೊಂಡದ್ದು ನಿಜವಾಗಿಬಿಟ್ಟರೆ ?
ಬೆನ್ನ ಹಿಂದೆ ಇಷ್ಟೊಂದು ಸನಿಹದಲ್ಲಿ ನೆರಳಂತೆ ಹಿಂಬಾಲಿಸಿ
ಬರುತ್ತಿರೋದು...
ಅದು...
: : : :
: : :
: :
:
ಸಾವಾ.....??????