Saturday, July 3, 2021

ಗೊಂಚಲು - ಮುನ್ನೂರೆಪ್ಪತ್ತಾರು.....

ನಿನ್ನ ಹುಡುಕುವ ಹುಚ್ಚು.....

ಓದಿದಷ್ಟೂ ಮುಗಿಯದ ಭಾವ ಸಂಪುಟ - ನಿನ್ನ ಕಣ್ಣು...

ನಿನ್ನ ಕಣ್ಣಂಕೆಯ ಸರ್ಗೋಲನು ದಾಟಿ ನಿನ್ನೆದೆ ಅರಮನೆಯ ಆವರಣದಿ ಹೆಜ್ಜೆ ಊರಲು ಅರ್ಹವಲ್ಲದ ನನ್ನ ಕನಸುಗಳ ಸೆಲೆ ನನ್ನ ಕಣ್ಣಲ್ಲೂ ಉಕ್ಕಲಾರದೇ ಅಲ್ಲಲ್ಲೇ ಬತ್ತುತ್ತದೆ...

___ಗಾಳಿಗೋಪುರ...

ನೀ ಮೆಚ್ಚುವ ಗುಣಗಳ ಲವಲೇಶವೂ ಇಲ್ಲದ ಭರಪೂರ ಬಡತನ ನನ್ನದು - ಅದನ್ನು ಸುತಾರಾಂ ಅರಗಿಸಿಕೊಳ್ಳಲು ಒಪ್ಪದ ಆಶೆಬುರುಕ ಮನಸೂ ನನ್ನದೇ...
ಹಾಗೆಂದೇ, ನನ್ನೊಂದಿಗೆ ನನ್ನ ಯುದ್ಧ ನಿನ್ನ ಹಾದಿಯಲ್ಲಿ - ಮತ್ತೆ ಮತ್ತಲ್ಲೇ ಸೋಲುವ ಖುಷಿ ನಿನ್ನದೇ ಗುಂಗಿನಲ್ಲಿ...
___ಮರುಳನ ಹಾದಿಯ ಬೆರಗು...

ಸುಳ್ಳೇ ಆದರೂ ಬದುಕಲೊಂದು ಕನಸು ಬೇಕಿತ್ತು - ನಿನ್ನ ಆಯ್ದುಕೊಂಡು ನನ್ನ ಕಾಯ್ದುಕೊಂಡೆ...
___ಹೆಸರು ವಿಳಾಸ ಸಿಗದಿರಲಿ...

ನೀನೆಂದರೆ ನನ್ನೊಳಗಿನ ಕಲ್ಪನಾ ವಿಲಾಸ.‌‌..
ನಾ ಬರೆವ ಕವಿತೆಯೇ ನಿನ್ನ ಖಾಯಂ ವಿಳಾಸ...
___ನೀನು, ನಾನು...

ನನ್ನ ಕವಿತೆಗಳ ಪಲುಕುಗಳಿಗೆ ಎಂದೂ ಸಿಗದ ಬೆಳಕು ನೀನು...
ಬಯಲ ಗಂಧವ ಬಂಧಿಸಲಾರೆ ನಾನು - ರುದಯದಲಿ ತಣ್ಣಗೆ ಕಾಯ್ದುಕೊಂಡ ಹೆಸರಿಲ್ಲದ ಮಾಧುರ್ಯ ನೀನು...
_____ಎದೆಯ ಚೆಲುವು ಬಾಡದಿರಲಿ...

ತುಂಬಾ ಚಂದ ಪ್ರೀತಿಸುವ ನಿನ್ನನ್ನು ಇಲ್ಲೇ ನನ್ನಲ್ಲಿ ಮಾತ್ರ ನಿಲ್ಲೂ ಅನ್ನುವ ನನ್ನ ಸ್ವಾರ್ಥ ಎಷ್ಟು ಸರಿ...
ನದಿ ಹರಿವು ನಿಲ್ಸೋದು ಅಂದ್ರೆ ಹಸಿರ ಹುಟ್ಟಿಗೂ ಸಿಗದೇ ಬಾನ ಬೆಂಕಿಗೆ ಸಿಲುಕಿ ಅಲ್ಲಲ್ಲೇ ಬತ್ತಿ ಹೋಗೋದೇ ಅಲ್ವಾ...
___ಸ್ವಾಧೀನತೆಯ ಸಂಕಟ...

ನಿನ್ನ ಅಳುವಿನ ಪಕ್ಕ ಅಳುತ್ತಾ ಕೂರುವುದು ನನ್ನ ಆ ಕ್ಷಣದ ಭಾವೋದ್ವೇಗ...
ನಿನ್ನ ನೋವಿನ ಭಾರಕ್ಕೆ ಹೆಗಲಾಗಿ ನಿಲ್ಲುವುದು ನನ್ನೊಡಲ ಅಮೂರ್ತ ಭಾವುಕತೆ...
____ಕಣ್ಣಳತೆಯಾಚೆಯೂ ಚೂರು ನಿನ್ನವನಾಗಬೇಕು...

ನೀನೆಂಬ ಕನಸ ಕಾವ್ಯವೇ -
ಸಿದ್ಧಿಸದ ಕನಸು ಕಲ್ಪನೆಗಳ ಒಂಟಿ ಹಾದಿಗೂ ಒಂದು ತುಂಡು ನಗು ಸಿದ್ಧಿಸಿರತ್ತೆ...
ಆ ನಗೆಯ ಹೋಳಿನಾಸೆಗಾಗಿಯಾದರೂ ನಾ ಕನಸು ಕಟ್ಟಬೇಕು...
____ಪ್ರತೀಕ್ಷಾ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಪ್ಪತ್ತೈದು.....

ನಗು ನೀ ವಸಂತವೇ - ನಗುವೇ ವಸಂತವೇ.....
ಕುಂಚ ಕಲೆ: ಸುಮತಿ ದೀಪಾ ಹೆಗಡೆ...


ಅವಧಿ ಮುಗಿದ ಔಷಧಿ - ನನ್ನ ಪ್ರೀತಿ...

"ನೀನು ಒಲವಿನ ಕಾವ್ಯನಾಮವಂತೆ..."

ನನ್ನ ಸೋಲಿನ ಗೆಲುವು ಮತ್ತು ಖುಷಿ ನೀನು...
___ ಹೆಸರಿಲ್ಲದ ಕನಸು...

ನಂಗೆ ನಾನೇ ಚಂದ ಕಾಣ್ಸೋ ಹಂಗೆ ಕಡು ಪ್ರೀತಿಯ ಕುಡಿದಮಲಿನ ನಿದ್ದೆ ಮರುಳ ಒದ್ದೊದ್ದೆ ಗರಿಕೆಯಂಥ ಕಣ್ಣಲ್ಲಿ ಮುದ್ದಾಗಿ ನನ್ನ ಮೆಲ್ಲುವ ನೀನು...
____ ಹೆಸರಿಲ್ಲದ ಸಹಿಯಂಥ ಹುಡಿ ಹುಡಿ ಕನಸು...

ಹಲ್ಮೊಟ್ಟೆ ಕಚ್ಚಿ ತುಟಿ ಬಿಗಿದು ನಾಲಿಗೆಯ ಬಂಧಿಸಿಕೊಂಡವಳ ಕಣ್ಣ ಕೊಳದ ಅಲೆಗಳು ಪಿಸುದನಿಯಲಿ ಉಸುರುವ ನೂರಾರು ಕಥೆಗಳ ದುರಂತ ನಾಯಕ ನಾನು...
_____ ಮರುದನಿ ಇಲ್ಲದ ನಿರ್ವಾತ...

ನಿಸ್ತೇಜ ಎದೆ ದಡವನ(ನೊ)ಪ್ಪಿದ ಜೀವ ಶರಧಿ ನೀನು...

ಮುಂಗಾರಿನ ಮುಗಿಲ ದಿಬ್ಬಣ ಹಾಯ್ದು ನೆನೆದ ಕಾಡು ಹಾದಿ ನೀನು...
ಗಿಡದ ಎದೆಯ ನೀರಜ ಮೌನ ಹೂವಾಗಿ ಅರಳೋ ಕವಿತೆ...
____ ಕೇಳಬೇಕು ಹೇಳಲಾಗದ ಏನನ್ನೋ...

ನಾನಾಗಿಯೇ ಪೂರ್ಣವಲ್ಲದ, ನನಗೇ ಸ್ವಂತವಲ್ಲದ ನಾನು ಪೂರ್ಣ ನನ್ನವನಾಗು, ಕೇವಲ ನನ್ನವನಷ್ಟೇ ಆಗಿರು ಎಂಬ ನಿನ್ನ ಅಕಾರಣ ಪ್ರೀತಿಯ (?) ಸೌಮ್ಯ ಸ್ವಾಮ್ಯತೆಯ ಆಗ್ರಹಗಳೆದುರು ದಿಕ್ಕುಗಾಣದ ಕಬೋಜಿಯಾಗಿ ನಿಲ್ಲುತ್ತೇನೆ...
___ನಾನು, ನೀನು ಮತ್ತು ನೇಹ...

ಪೊರೆಯಲೂ ಆಗದ ತೊರೆಯಲೂ ಆಗದ ತೊದಲು ಭಾವಗಳು ನಿದ್ದೆ ಕೊಲ್ಲುತ್ತವೆ...
ನಿನ್ನ ಮೌನಕ್ಕೆ ಮಾತು ಬರುತ್ತದೆ ಸುಳ್ಳು ಮಂಪಿನ ಕನಸಲ್ಲಿ - ಮಡಿಲ ಬಿಸಿಯ ಕಂಪಿನ ನೆನಪು ನೆತ್ತಿ ಹತ್ತಿ ನಿದ್ದೆ ಸಾಯುತ್ತದೆ...
___ ಮತ್ತೆ ಎಲ್ಲ ಮುಂದುವರಿಯುತ್ತದೆ...

ಜೀವದ್ರವ್ಯವೇ -
ಸದಾ ಸರ್ವದಾ ನಗಬೇಕು - ನಗುತಲೇ ಇರಬೇಕು 'ನೀನು...' 
ನೋವ ಬೆಳೆವ ರಕ್ಕಸ ಕೋಟೆಗಳ ಕೆಡವಿ ನಿನಗಾಗಿ ನಗೆಯ ಹುಡುಕಿ ತರಬೇಕು - ನಗಿಸುತಿರಬೇಕು - ನಿನ್ನ ನಗುವಾಗಬೇಕು 'ನಾನು...'
ನೀನು ನೀನಾಗಿ ನಿನ್ನ ನಗುವ ಹಡೆವಂತೆ ನಾ ನಿನ್ನ ಸಹಚಾರಿಯಾಗಬೇಕು...
ನಿನ್ನ ನಗಿಸುವ ನೆಪದಿ ನಾನೂ ನಗಬೇಕು - ನನ್ನ ನಗೆಯ ಜಪದಿ ನೀನು ನಗೆಯುಣ್ಣಬೇಕು...
ಯೋಗಾಯೋಗಗಳ ಮೀರಿ ಸಹಯೋಗವ ಸಾಧಿಸಬೇಕು - ಜೀವ ಜೀವ ಜತೆಯಾಗಿ ನಗೆಯ ಜೀವಿಸಲುಬೇಕು...
____ ನಗು ನೀ ವಸಂತವೇ - ನಗುವೇ ವಸಂತವೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಪ್ಪತ್ನಾಕು.....

 ಹಿನ್ನೀರು.....

ಬಯಲಿಗೆ ಗೋಡೆ ಕಟ್ಟಿ ಬೆಳಕ ಬೆಳೆದುಕೋ ಅಂದರು; ಬಿಡಲಿಲ್ಲ ಅವಳು ಸೆರಗು ಬಿಗಿದು ನಕ್ಕಳು - ಸೂರ್ಯ ಮುಗಿಲ ಮೇನೆಯ ಪರದೆ ಸರಿಸಿದ ಮತ್ತು ಕತ್ತಲು ಛಾವಣಿ ಕಳಕೊಂಡಿತು...
ಬೆವರನ್ನಷ್ಟೇ ನಂಬಿದವಳು; ಮೋಡ ಬೆವರದಿರೆ ಮಳೆಬಿಲ್ಲೆಲ್ಲೀ ಅನ್ನುತಾಳೆ - ಅವಳೆಂದರೆ ಬದುಕ ಬಣ್ಣ...

"ಅಪಾತ್ರ ದಾನವಾಗುವ ಸಣ್ಣ ಗೊಂದಲವೂ ಇಲ್ಲದ ಮುಕ್ತ ಹರಿವಿನ ಸರಿತೆ...
ನನಗೆಂದೇ ನೂರು ಕ್ಲೇಶಗಳ ಪೆಟ್ಟಣಿಸಿಟ್ಟ ನೆಲ ಸೀಳಿ ಬರುವ ಅವಳೆದೆಯ ಪ್ರೀತಿ ಒರತೆ..."

ದೇವ ನೆರಳು ಉಸಿರ ನಗೆಯ ಕಾಯುವುದೆಂದರೆ ಇಷ್ಟೇ - ಕರುಳ ಹೂ ಅರಳಿ ಕೊರಳ ತಬ್ಬುವಾಗ ಕುರುಳ ಸವರಿ 'ಮನ್ಸಿಂಗ್ಬಂದಂಗೆ ಮಂಗ್ನಂಗ್ ಆಡೂದ್ಬಿಟ್ಟು ಮಾತ್ರ ಮನ್ಷಾ ಆಗು' ಅಂತ ಅವಳು ಧಾವಂತದಲಿ ಗದರುವುದು - ಮತ್ತದು ಅವಳ ಶುದ್ಧ ಮಮತೆ...

ಮಣ್ಣು, ಸಗಣಿ ಬೆರೆತ ಬೆವರ ತನ್ನ ಸೆರಗಿನಂಚಿಗೆ ಮೆತ್ತಿಕೊಂಡು, ತೇಯ್ದು ತೇಯ್ದು ತೆಗೆದ ಗಂಧವ ಕಾಣದ ದೇವನ ಹಣೆಗಿಡುವವಳ ನೋಡಿ ನಕ್ಕವನು; ಅಂತೆಯೇ ತನ್ನೆದೆಯನು ಆದ್ಯಂತ ಸುಡುವ ನೋವ ದಾವಾನಿಲವ ಅವಳು ತನ್ನ ಕಣ್ಣಲೇ ಇಂಗಿಸಿಕೊಂಡು ಅಂತಃಕರಣ‌ದ ಸುಡುಮಣ್ಣಲ್ಲಿ ಬೆಳಕೊಂಡ ಮುರುಟು ನಗೆ ಮೊಗೆಯ ಎನ್ನ ಹೆಗಲಚೀಲದಲಿಟ್ಟು ಹರಸುವಾಗ ಸಾದ್ಯಂತ ಬೆಚ್ಚುತ್ತೇನೆ...
___ಆಯೀ ಎಂಬುವ ಅರ್ಥಕೆ ನಿಲುಕದ ನೀಳ್ಗವಿತೆ...

ಶುಭನುಡಿಯೇ ಶಕುನದ ಚುಕ್ಕಿ -
ಇನ್ನೂ ಅವಳ ಆ ಮುದಿ ಮಂಜುಗಣ್ಣಲಿಷ್ಟು ಬದುಕ ಬೆಳಕುಲಿದರೆ ಅದು ನಂದೇನೇ/ನಂಗೇನೇ...
ನನ್ನ ಪಾಪಗಳಲಿ ಸುಟ್ಟು ಹೋದ ಅವಳ ಕನಸುಗಳ ಬೂದಿಯಾದರೂ ಅವಳಿಗುಳಿಯಲಿ - ಮರು ಜನುಮಕಿಷ್ಟು ಗೊಬ್ಬರ ಮಾಡಿಕೊಂಡಾಳು...
💕💝💕

ಮಣ್ಣಿಗಂಟಿಕೊಳ್ಳದಿದ್ದರೆ ಊರು ನನ್ನ ಹೆಸರಿನ ಬೆನ್ನಿಗಷ್ಟೇ ಅಂಟಿಕೊಳ್ಳುತ್ತದೆ...
ಮತ್ತು
ಬೆನ್ನಾದವನ ಕಣ್ಣಲ್ಲಿ ಊರು ಕಲೆಸಿ ಹೋದ ಚಿತ್ತದ ಚಿತ್ರವಾಗಿ ಕರಗುತ್ತದೆ...
ಜಾತ್ರೆ ಮುಗಿದ ಮಾರ್ನೇ ಹಗಲು ದೇವರ ಇಳಿಸಿ ಬಣ್ಣ ತೊಳೆದುಕೊಂಡ ತೇರಿನ ಕೀಲುಗಳಲಿ ಭಕ್ತರ ಕಣ್ಣರಿಯದ ಸುಸ್ತಿನ ನಿಟ್ಟುಸಿರೊಂದು ಹಾಗೇ ಉಳಿದಂತೆ...
___ ಹಿನ್ನೀರು...

ರಕ್ತಕ್ಕಂಟಿದ್ದಿಷ್ಟು...
ಮಣ್ಣಿಗಮರಿದ್ದಿಷ್ಟು...
ಸ್ವಂತದ ಕಮಾಯಿಯೂ ಇಷ್ಟೇ ಇಷ್ಟಿದ್ದಿದ್ದರೆ...
___ ಹೆಸರು...

'ಒಂದಾನೊಂದು ಕಾಲದಲ್ಲಿ ನಗೆಯೊಂದಿತ್ತು' ಎಂಬ ಕಥೆ ಕಾಲದ ಜೊತೆ ನಡೆದು ಬಂದ ಚಂದದಲ್ಲಿಯೇ ಕಾಲನ ಕಾಡು ಹಾದಿಯ ಅಡ್ಡಾತಿಡ್ಡ ಕವಲಿನಲ್ಲಿ ಜೀವವಿದು ಸರಕ್ಕನೆ ಕಳೆದೋಗಬೇಕು...
ಮುಂದಾಗಿ ಹೋದ ಗುರುತಿಗೆ ಹಸಿ ಹೆಣೆಯೊಂದನು ದಾರಿ ಮಧ್ಯೆ ಎಸೆದು ಹೋದಂಗೇ ನಗೆಯ ಎಳೆಯೊಂದನು ಉಳಿಸಿ ಹೋಗಬೇಕು...
ನಿನ್ನೊಳುಳಿದ ನನ್ನ ನಗುವಿಗಿಂತ ಮಿಗಿಲು ಮುಗಿಲೂ ಅಲ್ಲವೇನೋ...
____ ಉಸಿರು...
💕💝💕

ಶುಭ ನುಡಿಯೇ ಕೊರವಂಜಿ -
ಮಳೆಬಿಲ್ಲು ಬಿರಿದಂತ ಒದ್ದೆ ಕಣ್ಣ ತುಂಬಿದ ಎಳೆ ಎಳೆ ಕನಸೂ ನಂದೇನೇ...
ಅಲ್ಲಿಂದ,
ಕತ್ತಲ ಸುಳಿಯ ಖಡ್ಡ ಖಾಲಿ ಬೀದಿಗೂ ತುಂಬಿ ತುಂಬಿ ಬರುವ ಜೀವ ಚೈತನ್ಯ ಅದು ನನಗೇನೆ...
____ ಅನುರಾಗದ ಅನುಸಂಧಾನ...
💕💝💕

ಮಳೇಲಿ ನೆಂದು ಬಂದೋನ್ಗೆ ನೆತ್ತಿ ಒರಸ್ಕೋ ಅಂತ ಬೈಯ್ಯೋಕಾದ್ರೂ ನೀವುಗಳು ಹತ್ರ ಇರ್ಬೇಕಿತ್ತು... 
____ಬೆಳದಿಂಗಳ ಕುಡಿದಂತ ಆಯಿ ಮತ್ತು ಆಗೀಗ ಮತ್ತೆ ಮತ್ತೆ ಆಯಿಯ ಆವಾಹಿಸಿಕೊಳ್ಳೋ ಕಪ್ಪು ಹುಡುಗಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, June 1, 2021

ಗೊಂಚಲು - ಮುನ್ನೂರೆಪ್ಪತ್ಮೂರು.....

ಸರ್ವಂ ಶೃಂಗಾರ‌ಮಯಂ...

ಕೃತಕ ಪ್ರಖರತೆಯ ಬೀದಿ ದೀಪದ ಬೆಳಕಿನ ಅಬ್ಬರದಲಿ ಕಲೆಸಿ ಒಣಗಿ ಕಳೆದು ಹೋದ ಬೆಳುದಿಂಗಳ ಹಾಲು...
ಕಣ್ಣೆತ್ತಿದರೆ ಚಂದಿರನ ಮುಖದ ಕಲೆಯೇ ಎದ್ದೆದ್ದು ಕಾಣುತ್ತದೆ - ಅಷ್ಟಾಗಿಯೂ ಅವ ಪಾರಿಜಾತ‌ದ ಮೈಯ್ಯರಳಿಸಿ ನನ್ನೊಳಗಿನ ವಿರಹದುರಿಗೆ ತುಪ್ಪ ಹೊಯ್ತಾನೆ...
ಬೀದಿ ಕಾಯೋ ನಾಯಿಗಳ ನಿತ್ಯದ ನಡುರಾತ್ರಿ‌ಯ ಸಾಮಾನ್ಯ ಸಾಮೂಹಿಕ ಸಭೆಯೂ ರದ್ದಾದಂತಿದೆ...
ಕತ್ತಲಲ್ಲಿ ಕಂಗಳ ಕೆರಳಿಸೋ ಮೌನವೊಂದು ಹಂಗಂಗೇ ಹೆಂಗೆಂಗೋ ಮುಂದುವರಿಯುತ್ತದೆ...
ಅಂದೆಂದೋ ನಿನ್ನ ಕಣ್ಣ ಚುಂಬಿಸಿದ ಈ ತುಟಿಗಳಿಗೆ ಅಂಟಿದ ಕಾಡಿಗೆ ಹೇಳಿದ ಕರುಳ ಕಥೆಗಳೆಲ್ಲ ನೆನಪಾಗುತ್ತವೆ...
ಮತ್ತು
ನಾನು ಆ ನಿಶ್ಯಬ್ದ‌ದ ಒಡಲೊಳಗೆಲ್ಲಿಂದಲೋ ನಿನ್ನ ಉಸಿರ ಸಂಗೀತ ಹೊಮ್ಮಿ ಬಂದೀತೆಂದು ಕಾಯುತ್ತಾ ಕಮನೀಯ ಕಳವಳದಲಿ ಇರುಳ ದಾಟಲು ಅಣಿಯಾಗಿ ಅಂಡಲೆಯುತ್ತೇನೆ...
____ ತಾರೆಯೊಂದ ಕಣ್ಣಲ್ಲೇ ಮಾತಾಡಿಸಿ ಸಣ್ಣ ಸುದ್ದಿ ಕೊಡು, ನಿನ್ನೊಳಗೂ ಹಿಂಗೇನಾ...?!
💨💨💨

ಅರೆಗಣ್ಣಲ್ಲಿ ಓದುತ್ತಾ ಓದುತ್ತಾ ಹಂಗೇನೇ ನಿದ್ದೆ ಹೋದೆ - ಎದೆಯ ಮೇಲೆ ಮಹಾಗ್ರಂಥದಂತೆ ಅವಳು ಒರಗಿದ್ದಳೂ... 😍

ಎದ್ದು ಕೂತ ಅವಳ ನಿದ್ದೆಗಣ್ಣಲಿನ್ನೂ ನಂದೇ ಬಿಸಿ ಕನಸಿನ ಹಸಿ ನೆರಳು ಹೊರಳುತಿದೆ... 😉🙈

ನಿನ್ನ ಕೋಪದೆದುರೂ ಗಟ್ಟಿಯಾಗಿ ಹೊಡ್ಪಡೆಗೆ ನಿಲ್ಲಬಲ್ಲ ನಾನು ನಿನ್ನ ಕಿರು ಲಜ್ಜೆ‌ಯ ಸುಳಿ ಮಾಟದೆದುರು ಬೇಶರತ್ತಾಗಿ ಸೋಲುತ್ತೇನೆ...

ಸೆರಗಿನ ಮೋಡ ಸರಿದು ಅವಳ ಮೆದು ಎದೆಯ ಗುಂಡು ಚಂದ್ರ ಮೆಲುವಾಗಿ ನಕ್ಕರೆ... 
ಆಹ್!! 
ಆ ಬೆಳುದಿಂಗಳ ಮೊಗೆಮೊಗೆದು ಕುಡಿವ ಕನಸಲಿ ನನ್ನ ಬೊಗಸೆಯಲಿನ ಕತ್ತಲು ಅಸುನೀಗಲಿ...
💨💨💨

ಒಂದೇ ಎರಕದಲ್ಲಿ ಎರಡು ವಿರುದ್ಧ ಅನ್ನುವಂಥಾ ಜೀವಾತ್ಮಗಳ ಸೃಷ್ಟಿಸಿ, ಎರಡರಲ್ಲೂ ಅಂತರ್ಲೀನವಾಗಿ ಹರಿವಂತೆ ಅವೆರಡೂ ಮತ್ತೆ ಒಂದಾಗುವ, ಒಂದೇ ಆಗುತ್ತಾ ಬಾಗುವ, ಸಾಗುವ ಆಕರ್ಷಣ ಭಾವೋತ್ಕರ್ಷದ ಕಿಡಿಯನ್ನು ಇಟ್ಟು ತನ್ನ ತಾನು ವಿಸ್ತರಿಸಿ ಕಾದುಕೊಳ್ಳುವ ಪ್ರಕೃತಿಯ ಲೀಲಾ ವಿನೋದವ ನೋಡಾ...
ನಾನೋ,
ಅದರದೇ ಅಂಶವಾಗಿಯೂ ಅದರ ಮೀರುತ್ತೇನೆಂದು ಹೊರಟು ಅದು ಇಟ್ಟ ಸವಿಯ ಇಟ್ಟಂತೆ ಸವಿಯಲರಿಯದ, ಮೀರಲಾಗದೇ ತೇಲುವಲ್ಲೂ ಅದರಾಳವ ಹೇಗೆಲ್ಲಾ ಹಾಡಬಹುದೋ ಹಾಗೆಲ್ಲಾ ಹಾಡಲೂ ತಿಣುಕುವ ಅತಿದಡ್ಡ ರಸಿಕ ಧೂಳ ಕಣ...
____ಸರ್ವಂ ಶೃಂಗಾರ‌ಮಯಂ...
💨💨💨

"ನನ್ನ ಹೆಗಲಾಗೆ ನಿನ್ನ ಕನಸುಗಳ ತೇರೆಳೆಯುತೇನೆ..."
ಹಾಗಂದದ್ದು ನೀನು...
ಅಯೋಮಯದಲಿ ಕಬೋಜಿಯಾಗಿ ನಿಂದವನ ಬೊಗಸೆಯಲಿ ಮೊಗೆದು ನಿನ್ನುಸಿರೇ ತಾಳಿ ನನ ಕೊರಳಿಗೆ ಅಂದು ತುಂಟ ಕಣ್ಮಿಟುಕಿಸಿ ನಗಿಸೋ ಗೆಳತೀ - 
ಪ್ರೀತಿ ಕೇಳುವವರು ಸಿಗುತಾರೆ - ಪ್ರೀತಿ ಹೇಳುವವರೂ ಸಿಕ್ಕಾರು - ನೀನು ನೀನಾಗಿ, ನಾನು ನಾನಾಗಿ, ಜೊತೆಯಾಗಿ ಸಂಭಾಳಿಸುವ ಬಾರೋ ಎದೆಗೆ ಬಿದ್ದ ಈ ಪ್ರೀತಿಯಾ ಅಂಬೋರು ಮತ್ತೆಲ್ಲಿ ಸಿಕ್ಕಾರೆಯೇ...
ಸೋತೆ ಮತ್ತು ಈ ಸೋಲು ಹಿತವಾಗಿದೆ...
ಹಿಂಗೆಲ್ಲಾ ಆಗಿ,
ಪುಟ್ಟ ಪುಟಾಣಿ ಸೂಜಿ ಮೆಣಸಿನಂತ ಒಲವಿನಂಥದ್ದೊಂದು ತನ್ನ ಎಳೇ ಉಗುರಿನಿಂದ ಎದೆ ಬಾಗಿಲ ಕೆರೆಯಿತು - ಆ ಸಂಜ್ಞೆಯನೇ ಉಸಿರಾಡಿ ಸಣ್ಣ ಕರುಳಿನಾಳದಲ್ಲಿ ಕವಿತೆಯೊಂದು ಗರ್ಭಕಟ್ಟಿ ಮಿಸುಕಾಡಿತು...
______ ಎದೆಗೂಡಲಿ ವೀಣೆ ಅನುರಣನ...
💨💨💨

ನುಡಿಸಿ ಎತ್ತಿಟ್ಟ ವೀಣೆ ದನಿಯ ಧುನಿ ನಿದ್ದೆಯಲೂ ವೈಣಿಕನ ಕಿವಿಯ ಲಾಲಿಯಾದಂತೆ...
ಅಲ್ಲೆಲ್ಲೋ ಆಡ್ತಾ ಇದ್ದ ಮಗುವೊಂದು ಸುಮ್ನೆ ಬಂದು ಎದೆ ಏರಿ ಮಲಗಿ ಗಲಬರಿಸಿ ನಿದ್ದೆ ಹೋದಂತೆ...
ಕೆಲವೊಮ್ಮೆ ಎಲ್ಲೆಲ್ಲಿಂದಲೋ ನಡೆದು ಬಂದು ಬೇಕಂತಲೇ ಎದೆಯ ಕಪಾಟಿನಲಿ ಅವಿತು ಕೂರೋ ಭಾವಗಳಿಗೆ ಹೆಸರೇ ಇರಲ್ಲ ನೋಡು...
ಚಂದ ಕಾರುಣ್ಯ ಅದು ಬದುಕಿನ‌ದು - ಬೆಚ್ಚಗೆ ಮುಚ್ಚಟೆ ಮಾಡಬೇಕಷ್ಟೇ ಅಂಥ ಅನುಭಾವವ...
ನೀನೂ ಹೀಗೇ ಅಲ್ಲವಾ - ಬಂದದ್ದು, ನೆಲೆ ನಿಂತದ್ದು... 
____ ಕವಿಯ ಪದಮಾಲೆ, ನಿನ್ನ ಕಣ್ಣ 'ವೀಣೆ...'
💨💨💨

ಹಂಗೆಲ್ಲಾ ಹನಿಗೂಡಿ ಗೊತ್ತೇ ಇಲ್ಲ ನಂಗೆ...
ಸುಖಾಸುಮ್ನೆ ಹಾಯ್ ಅಂದಷ್ಟೇ ಸರಾಗ ಬಾಯ್ ಅನ್ನಲೂಬೇಕು ಅಂತಿದ್ದೆ...
ಅದೇ ಸರೀ ಅಂತಲೂ ನಂಬಿದ್ದು ಕೂಡಾ ಹೌದು...
ಜಗದ ದಿಟ್ಟಿಯಲಂತೂ ನಾನು ತುಂಬಾನೇ ಭಾವಶೂನ್ಯ ಹುಳ...
ಬಲು ಹುಂಬ ಲೆಕ್ಕಾಚಾರಗಳ ಪ್ರಾಣಿ...
ಅದಕೆ ತಕ್ಕ ಹಾಗೆ,
ಎಂತೆಂಥವನೆಲ್ಲಾ ಬದಿಗೆ ಸರಿಸಿ ನಕ್ಕಿದ್ದೇನೆ ಗೊತ್ತಾ...
ಸಾವಿನ ಮನೆಯಲ್ಲೂ ನಗುವಿಗಾಗಿ ಮಗುವ ಹುಡುಕುವವನು...
ಮನದ ಭಾವಬೀಜಗಳ ಪ್ರಜ್ಞೆ‌ಯ ಸಾರಣಿಗೆಯಲಿ ಗಾಳಿಸಿ ಗಾಳಿಸಿ ಎಲ್ಲಾ ಜೊಳ್ಳು ಅಂತ ಸಾಧಿಸುವವನು...
ಅಂಥದ್ದರಲ್ಲಿ ಎಲ್ಲಿತ್ತು ಈ ಉಮ್ಮಳಿಕೆ...!!!
ನೋಟ ಮಸುಕು ಮಸುಕಾಗಿ ಹೊರಳೋ ಆ ತಿರುವಿನಲ್ಲಿ ನಿಂಗೆ ಟಾಟಾ ಮಾಡಿ ಬೆನ್ನಾಗಿದ್ದಷ್ಟೇ ಗೊತ್ತು ನೋಡು...
ಸದ್ದಿಲ್ಲದೇ, ಅರಿವೂ ಇಲ್ಲದೇ, ಎಂದಿನಂಗೆ ಬುದ್ಧಿ‌ಯ ಅನುಮತಿಗೂ ಕಾಯದೇ ನಿನ್ನ ಹೆಸರಿನ ಹನಿ ಕಣ್ಣಿಂದ ಕೆನ್ನೆಗಿಳಿದದ್ದು ಹೇಗೆ...!!
ಸಹಜ ಸಾಮಾನ್ಯ ಅಂದುಕೊಂಡ ಒಂದು ಬೀಳ್ಕೊಡುಗೆ ಇಷ್ಟು ಭಾರ ಹೇಗಾಯ್ತು...!!
ನೀನು ನಂಗೆ ಅಷ್ಟೊಂದು ಭಾವುಕ ಪರಿಚಯವಾ...
ಈ ಆಪ್ತತೆ ಎಲ್ಲಿಂದ, ಹೇಗೆ ಇದೆಲ್ಲಾ...?!
ನನ್ನಿಂದ ನನ್ನೇ ಯಾರೋ ಹೊತ್ತೊಯ್ದು ಈಗ ಇಲ್ಲೆಲ್ಲಾ ಅಪರಿಚಿತ ಅನ್ಸೋ ಹಾಗೆ...!!
ಕಣ್ಣ ಕಕ್ಷೆ‌ಯ ದೂರಾಭಾರಗಳೇನೂ ಕರುಳಿಗಂಟಲ್ಲ ಗೊತ್ತು...
ಜನ್ಮಾಂತರದ ಹಾಯಿ/ಯೀ ಭಾವದಲ್ಲೂ ಒಂದು ತೆಳುವಾದ ಕೂಗಳತೆಯ ಅಂತರವಾದರೂ ಇದ್ದೇ ಇದೆ ಅಂತಲೂ ಬಲ್ಲೆ...
ಆದರೂ, 
ವೈಣಿಕನೊಂದಿಗೆ ವೀಣೆ ಮುನಿದಂತ ವಿಭ್ರಾಂತ ತಳಮಳ...
ಜೀವದ್ದೋ ಭಾವದ್ದೋ ಕೊನರು ತೀವ್ರ ತಿವಿಯದೇ ಕಣ್ಣೇನೂ ಅಳ್ಳಕದಲಿ ತೇವವಾಗದಲ್ಲ...
ಅಲ್ಲಿಗೆ,
ನೀ ನನ್ನೊಳೇನನ್ನೋ ವಿಹಿತವಾದುದನು ತುಂಬಿದ್ದು ಮತ್ತು ಅಷ್ಟನ್ನೇ ನನ್ನಿಂದ ಸೆಳೆದೊಯ್ದದ್ದಂತೂ ವಿದಿತವಾಯ್ತಲ್ಲ...
ಹೇಯ್ ಕೇಳಿಲ್ಲಿ,
ನಂಗೆ ನಾ ಮತ್ತೆ ಸಿಕ್ಕಲು ನಿನ್ನ ಕರವಸ್ತ್ರವನೊಮ್ಮೆ ಎನ್ನೆದೆಗೊತ್ತಿಕೊಂಡು ನೋಡಲಾ...?
ಸಣ್ಣ ಸುಳಿವು ಸಿಗಬೇಕಿದೆಯಷ್ಟೇ...
ಈ ವಿದಾಯ ನಿನ್ನಲ್ಲೂ ಸಂಕಟವೇನಾ...??

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಪ್ಪತ್ತೆರಡು.....

ಮಣ್ಣ ವಾಸನೆ.....

ಸಾವಿನೆದುರು ಅತ್ತದ್ದೂ ಸುಳ್ಳಲ್ಲ...
ಬದುಕು ಮುನ್ಸಾಗಿದ್ದೂ ತಪ್ಪಲ್ಲ...

ಗ್ರೀಷ್ಮನ ಎದೆಯಲ್ಲೂ ವಸಂತನ ಕಾವಿದೆ...
ಹರಿದ್ವರ್ಣದ ಹಾದಿಯಲ್ಲೂ ಯಾರದೋ ಅಸ್ಥಿ ಬೆರಳ ಒಡೆದೀತು...

ಬೇಲಿಯಾಚೆಯ ಬಯಲ ತುಂಬಾ ಬೇಲಿ ಹೂವಿನ ಘಮ...
ಕಳಚಿ ಬಿದ್ದ ಕಾಡು ಹೂವಿಗೆ ದರಕು, ಗರಿಕೆಗಳೇ ದೇವ ಮುಡಿ...

ಸಾವು ಎಷ್ಟು ಹಗೂರ - ಹೆಣವಷ್ಟೇ ಮಣ ಭಾರ...
ಬೇಲಿ ಕಟ್ಟಿಕೊಂಡು ತಪ್ಪಲಲಿ ನಿಂತು ನಿಟ್ಟುಸಿರಿಟ್ಟರೆ ಬೇಲಿ ಬಳಸಿ ಬಯಲ ಸುಳಿವ ಗಾಳಿಗೆ ಸೂತಕವೇ...!?

ಎದೆಗಂಟಿದ ಒಂದು/ಒಂದೊಂದು ಉಸಿರಿನ ಪ್ರಾರ್ಥನೆ - ಕಾಡಿನಂದದಿ ಕಾಡುವ ನೀನು..‌.

ಮೌನವೊಂದು ಮಧುರ ಭಾಷೆ ಕಾಡೊಂದು ಎದೆಯಲಿದ್ದರೆ...
ಮೌನವೇ ಮರಣಗತ್ತಿ ಎದೆ ಉರಿ ಉರಿಯುತಿರೋ ಮಸಣವಾಗಿದ್ದರೆ...

ಕಾಯುತ್ತೇನೆ -
ಮಳೆ ಕಾಡು ಮಣ್ಣ ವಾಸನೆಗೆ,
ಮಣ್ಣು ಮಾಗುವ ವಾಸನೆಗೆ,
ಮತ್ತು
ಮಣ್ಣೇ ಆಗುವ ವಾಸನೆಗೆ...

ಎದೆಗೆ ಆನಿಕೊಂಡವರ ಹೆಗಲ ತಬ್ಬಿ ಆ ರುದಯದ ಹಸಿ ಗಾಯಕ್ಕೆ ಒಂದು ಚಿಟಿಕೆ ಪ್ರೀತಿ ಸ್ಪರ್ಶ‌ದ ಮುಲಾಮು ಸವರುವಷ್ಟಾದರೂ ಅಂತಃಕರುಣಿಯಾಗಿಸು ಎನ್ನ ಮತ್ತು ಎನ್ನವರಿಗೆ ಅಷ್ಟು ಮಾಡುವಷ್ಟಾದರೂ ಅವಕಾಶ‌ವ ಕರುಣಿಸು ಎನಗೆ ಬದುಕೇ...
ನೊಂದ ಆತ್ಮಗಳೆದುರು ಯೆನ್ನ ಕಣ್ಣು, ಕಿವಿ, ನಾಲಿಗೆ ಎಲ್ಲಾ ಚೂರು ಮಿದುವಾಗಲಿ...
_____ ಕಾಡು ಹುಡುಗನ ಪ್ರಾರ್ಥನೆ...
😐😑😐

ಅನಾಯಾಸೇನ ಮರಣಂ ಅನ್ನೋದು ಒಂದು ಕನಸೇ ಆಗಬಹುದು - ಆದ್ರೆ ಹೆಂಗೇ ದಕ್ಕಿದ್ರೂ ಅಕಾಲ ಸಾವು ಕಾಲನ ಕಾಟಕ್ಕೆ ಪರಿಹಾರ ಆಗಲಾರದು...
ಬದುಕನ್ನು ಯಥಾವತ್ ಸ್ವೀಕರಿಸಿದಾಗಲಷ್ಟೇ ಸಾವಿಗೊಂದು ಘನತೆ ತುಂಬಬಹುದು ಅನ್ನಿಸಿದರೂ ಮೃತ್ಯು ಬೋಧಿಸೋ ನಶ್ವರತೆಯ ಎದುರು ಎದೆ ಎತ್ತಿ ನಿಂತು ನಡೆವ ತ್ರಾಣವನು ಆ ನಶ್ವರತೆಯೇ ನೀಡಬೇಕೇನೋ ಈ ಬದುಕಿಗೆ...
ಸಾಯಲು ಸಾವಿರ ಕಾರಣಗಳಿದ್ದರೂ ಬದುಕಲಿರುವ ಒಂದೇ ಒಂದು ಕಾರಣಕ್ಕೆ ಜೋತು ಬೀಳಬೇಕೆಂದರೆ ಮಗ್ಗುಲಿನವರ ಸಾವು ತುಂಬಿ ಹೋಗುವ ಖಾಲಿತನವ ತುಂಬಿಕೊಳಲು ಸಾವೇ ಶಕ್ತಿ ಕೊಡಬೇಕು...
ಅಂತಕನ ಕ್ರೌರ್ಯ‌ವ ಪ್ರಶ್ನಿಸೋ ಶಕ್ತಿಯಿಲ್ಲದ ಅಸಹಾಯ ಬದುಕು ನಮ್ಮದಾದರೂ, ಬದುಕನ್ನು ಖುದ್ದು ಕೊಡವಿಕೊಂಡು ಸಾವನ್ನು ಅವಮಾನಿಸದೇ ಮರುದಿನವ ಹಾಯಲೇಬೇಕು...
_____ಜವನ ಮೋಸದಾಟಕೊಂದು ಕ್ರುದ್ಧ ಧಿಕ್ಕಾರವಿರಲಿ ಮತ್ತು ಇದ್ದ ಬದುಕು ಮೊದಲಿಂದ ಮತ್ತೆ ಮುನ್ಸಾಗಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಪ್ಪತ್ತೊಂದು.....

ಸನ್ನಿಧಿ..... 

ಬೆಳದಿಂಗಳು ಸುಡದಂತೆ ನೆತ್ತಿ ಕಾಯೋ ನೆರಳಿನಂಥಾ ಕೂಸೇ -
ಸಾವಿರ ಪ್ರೀತಿಗಳ ಧಿಕ್ಕರಿಸಿ ನಡೆದವನನೂ ಒಂದ್ಯಾವುದೋ ಮಡಿಲು ಕಿರುಬೆರಳ ಜಗ್ಗಿ ನಿಲ್ಲಿಸುತ್ತದೆ - ಕೊರಳ ಬಳಸಿದ ಒಲವ ಕಡಲು ನೀನು...
ಓಡಿ ಓಡಿ ಬೆವರಿಳಿದು ದಣಿದ‌ವನನು ತಂಬೆಳಲ ಕಿರು ಅಲೆ ಮೈದಡವಿ ನಿಲ್ಲಿಸಿದಂಗೆ ಎನ್ನೀ ಬರಡು ಬಂಡೆಯೆದೆಗೆ ನಿನ್ನಾ ಹಸಿ ಕನಸಿನೆದೆಯಾನಿಸಿ ತಡೆದು ನಿಲ್ಲಿಸಿಕೊಂಡವಳು...
ನನ್ನನೇ ನನ್ನಿಂದ ಕದ್ದು ನಿನ್ನ ರೂಪದಲಿ ನನಗೇ ನೀಡ ಹೊರಟವಳು...
ವೈತರಣಿಯ ಆಚೆ ದಡದಲ್ಲಿ ಸ್ವರ್ಗ‌ವಿದೆಯಂತೆ, ನೀನಿರುವ ಈಚೆ ದಡ ವೈಪರೀತ್ಯ‌ಗಳ ಸಂತೆ‌ಯಂತೆ ಮತ್ತು ನಾನು ನನ್ನ ಮುಕ್ತಿಗೂ ನಿನ್ನೂರನೇ ಆಯ್ದುಕೊಳ್ತೇನೆ...
 ____ಮುಂದುವರಿದು ಅಲ್ಲಿಂದ ನಗುವೊಂದು ಬಿಳಲು ಬಿಳಲಾಗಿ ತನ್ನ ಬಾಹುಗಳ ನಮ್ಮ ಹಾದಿತುಂಬಾ ಹರಡಿಕೊಳ್ಳುತ್ತದೆ...
💑💑💑

ಉಸಿರ ನಾಭೀ ನಾಳಕಂಟಿದ ಗಾಢ ಗಂಧವೊಂದು ಮೈಯ್ಯ ಬೇಲಿಗಳಲಿ ಹಿತ ನಡುಕವ ಹುಟ್ಟಿಸುತ್ತಲ್ಲ, ಏನಂತಾರೋ ಅದಕ್ಕೆ...
ನಿನ್ನ ತೋಳ್ಬಂಧಿಯ ಕನಸಲ್ಲಿ ಮನ ಮಲ್ಲಿಗೆ ಮೆಲ್ಲಗೆ ಅರಳುವಾಗ ಮನೆಯ ಮೂಲ್ಮೂಲೆಯೂ ಸರ್ವಾಲಂಕೃತ ಅಂತಃಪುರವೇ ನೋಡು...
ಮುಡಿಯಿಂದ ಅಡಿಗಿಳಿವ ಹನಿ ಹನಿ ನೀರ ಹವಳಗಳ ಎಣಿಸಲೇ ನನ್ನಾ ತುಂಟ ತುಟಿಯಿಂದ - ತಣ್ಣೀರ ಜೊತೆ ಬಿಂದಿಗೆ ತುಂಬಾ ನಿನ್ನ ಆ ರಸಿಕ ನುಡಿಗಳ ಬಿಸಿ ನೆನಪ ಬೆರೆಸಿ ಸುರಿದುಕೊಂಡೆ; ಎಂಥಾ ಚಂದ ಸಂಯೋಜನೆ ಮಾರಾಯ...
ಅಬ್ಬಿಕೋಣೆಯ ಆವರಿಸಿದ ಹಬೆಯ ತುಂಬಾ ನೀನೇ ನೀನು - ಈ ಮೈಯ್ಯ ವೀಣೆ ಬಿಗಿದು ಹೊನಲಿಡುವ ರಾಗಗಳಿಗೆಲ್ಲ ನಿನ್ನದೇ ಹೆಸರು...
ನನ್ನೆಲ್ಲಾ ಬೆಳಗೆಷ್ಟು ನಚ್ಚಗೆ, ಬೆಚ್ಚಗಿದೆ ನಿನ್ನಿಂದ...
____ ಸಾಗರನೂರಿಗೆ ಬೆಳುದಿಂಗಳು ನಡೆದು ಬಂದಂಗೆ...
💑💑💑

ನಿನಗಾಗಿ ಜೀವ ಕೊಡ್ತೀನಿ/ಬಿಡ್ತೀನಿ ಅನ್ನುವುದಂತೆ ಪ್ರೇಮ - ಜೀವನ್ಮುಕ್ತಿ(?)...
ನಿನ್ನಲ್ಲಿ ಜೀವ ತುಂಬುತ್ತೇನೆನ್ನೋ ಭಾವ ಚೈತನ್ಯ ಸ್ನೇಹ - ಜೀವನ್ಮುಖಿ...
ಪ್ರೇಮದ ನಶಾ ಸುಖವ ಧಿಕ್ಕರಿಸಬಲ್ಲ ನಾನು ನೇಹದ ಸಹಜ ಸಾಮಾನ್ಯ ಸಾಹಚರ್ಯವನೂ ದೂರ ಇಡಲಾರೆ...
#ಸನ್ನಿಧಿ...
💑💑💑

ಅವಳ ಸೆರಗಿಗಂಟಿ,
ಮಹಾ ತುಂಟನಂತೆ... ಚಿಕ್ಕವನಿದ್ದೆ... ಹೊರ ಬಯಲಿಗೋಡಿ ದಾಂಧಲೆ ಎಬ್ಬಿಸದಿರಲೀ ಅಂತ ಆಯಿ ಮಂಚದ ಕಾಲಿಗೂ ನನ್ನ ಕಾಲಿಗೂ ಸೇರಿಸಿ ಸಣಬೆ ದಾರ ಕಟ್ಟಿ ಜಗಲಿಯಲ್ಲಿ ಬಿಡ್ತಾ ಇದ್ಲು... ಅಡಿಗೆ ಮನೆಯಲ್ಲೋ ನನಗೆಂದೇ ಲಾಲಿ ಹಾಡು... ಸುಳ್ಳೇ ಅತ್ತರೂ ಎದೆಗವುಚಿಕೊಂಡು ಹಾಲೂಡಿ ಕೃಷ್ಣಾ ಅನ್ನುತಿದ್ದಳು... ಆಡಾಡಿ ತೂಕಡಿಸುವವನ ಅಂಗಾಲಿಗೆ ಎಣ್ಣೆ ಸವರಿ ಕೆನ್ನೆ ಕೆನ್ನೆ ಬಡಿದುಕೊಂಡು ಮುದ್ದೀಯುತಿದ್ದಳು...

ಇವಳ ಸೆರಗನೆಳೆದು,
ಬಲು ಪೋಲಿಯಂತೆ... ಬೆಳೆದ ಕಲಿ ಹೈದ... ಇವಳಿದ್ದಾಳೆ... ಬಲು ಜಾಣೆ... ನಂಗಿಂತ ಚೂರು ಚಿಕ್ಕವಳೇನೋ... ನಾ ಹತ್ತಿರ ಸುಳಿದು ಮೈಸೋಕದಂಗೆ ಕಣ್ಣಲೇ ದಿಗ್ಬಂಧನ ಬರೀತಾಳೆ... ಮತ್ತು ಎದೆ ತುಂಬಿ ನನ್ನದೇ ಹೆಸರು ಸೇರಿಸಿಕೊಂಡು ಸೋಬಾನೆ ಗುನುಗುತಾಳೆ... ಮೀಸೆ ಕುಡಿ ಅಡಿಯ ಸಿಡುಕಿಗೆ ನನ್ನ ಕೃಷ್ಣಾ ಎಂದು ಬೆನ್ನು ತಬ್ಬಿ ಮುದ್ದಾಗಿ ಮದ್ದರೆಯುತಾಳೆ... ಹುಸಿ ಮುನಿಸಿನ ತೂಕಡಿಕೆಗೆ ಮೃದು ತೋಳಿನ ಬಿಸಿ ಎರೆದು ಸುಖದ ನಿದ್ದೆಗೆ ಮೆತ್ತೆಯಾಗುತ್ತಾಳೆ...

ಕಾಲು ಕಟ್ಟಿ ಎದೆಯಲಿಟ್ಟುಕೊಂಡು ಕಣ್ಣಾಗಿ ಕಾಯುವ ಯಮುನೆಯಂಗಳದ ಗೊಲ್ಲಿತಿಯರು - ಅವಳು ಯಶೋಧೆ, ಇವಳು ರಾಧೆ...
💑💑💑

ಹೇ ಸ್ವಪ್ನಗಂಧೀ -
ಊರಾಚೆ ಹಳ್ಳದ ಕರಿಹಸಿರು ಏರಿಯಲಿ ನೀನೇನೋ ಸವಿ ಲಹರಿಯಲಿ ನನ್ನೆದೆಯ ತಣಿಸುವಂತೆ ಮಾತಾಗಿ ಗುಣುಗುಣಿಸುವಾಗ ಆ ಕಮನೀಯತೆಯಲಿ ಕಮ್ಮಗೆ ನಿನ್ನ ಕಣ್ಣಾಳದಲಿ ಕರಗಿ ಹೋಗುವ ಆಸೆಬುರುಕ ಕಬೋಜಿ ನಾನು...
ಸದಾ ಮುಸ್ಸಂಜೆಗಳ ಓಕುಳಿ ಬೆರಗಲ್ಲಿ ನನ್ನ ನೂರು ಫಾಲ್ತೂ ಫಾಲ್ತು ಮಾತುಗಳ ನಡುವೆ ಹಾಯಾಗಿ ಘಲಘಲನೆ ನಗುವ ಮತ್ತು ಛಕ್ಕನೇ ನನ್ನುಸಿರು ತೇಕುವ ತೆರದಿ ಮುದ್ದಿಸಿ ಸುಳ್ಳೇನಾಚಿ ಎದೆಯಲಡಗುವ ನೀನು...
ಈ ಉರಿ ಬೇಸಗೆಯಲಿ ತುಟಿ ಒಡೆದದ್ದು ಹೇಗೆಂದು ಅಮ್ಮ ಕೇಳಿದರೆ ಏನೆನ್ನಲೀ ಎನ್ನುತ್ತ ಕಣ್ಮಿಟುಕಿಸಿದರೆ ಮತ್ತೆ ಹೊರಳಿ ತುಟಿ ಕಚ್ಚುವ ಕಳ್ಳ ಕೊಂಡಾಟಗಳ ಈ ಮುದ್ಮುದ್ದು ಬಣ್ಣಾಚಾರಗಳಿಂದ ಬದುಕಿಂಗೋ ಇನ್ನೂ ಒಡೆಯದ ಮುಗ್ಧತೆ‌ಯಂತ ಸ್ನಿಗ್ಧ ಹೊಳಲು...
ಬೆಳಗುಂಜಾವದಲಿ ಇಂಥ ಕಾವ್ಯ ಕನಸಾಗಿ ಕಣ್ಣೊಡೆದರೆ ಸೂರ್ಯ ಎದ್ದಾಗಿನಿಂದ ಆರಂಭವಾಗಿ ರಾತ್ರಿ ಚಂದಮಾಮನೆದುರು ತೂಕಡಿಸುವವರೆಗೆ ಎದೆಯ ಅಂಗಳದಿ ಮನೋಹರವಾಗಿ ನರ್ತಿಸುವ ನಿನ್ನ ಬಂಗಾರ ನಗೆಯ ಹೆಜ್ಜೆ ಗೆಜ್ಜೆ ಲಜ್ಜೆ...
ಹೌದು,
ಬಡಪಾಯಿ ರಸಿಕ ಪ್ರಾಣಿ‌ಯ ಬದುಕಿಷ್ಟು ಸಹನೀಯವಾಗಲು ನಿನ್ನಂಥದೊಂದು ಸಿಕ್ಕೂಸಿಗದ ಮಧುರ ಕನಸಾದರೂ ಜೊತೆ ಬೇಡವೇ...
ಮುಂದುವರಿಯಲಿ ಇದು ಹಿಂಗೇ ಮನವು ಮಂದವಾಗದಂಗೆ...
___ ಈ ಪೋಲಿ ಗೆಳೆಯನ ಪ್ರಾರ್ಥನೆ‌ಗಳೆಲ್ಲ ಇಂಥವೇ...
💑💑💑

ಇಲ್ಕೇಳು -
ಜಗಳವಾಡಬೇಕು ನಿನ್ನಲ್ಲಿ ಪ್ರೀತಿ ಉಕ್ಕುವ ಹಾಗೆ...
ಚಕಮಕಿಗಳಾಚೆಯ ಗಾಢ ಮೋಹ ಜಗದ ಕಣ್ಣು ಕುಕ್ಕುವ ಹಾಗೆ...
ಹಾಂ,
ಜಗಳವಾಡಬೇಕು ನಿನ್ನಲ್ಲಿ ಜನ್ಮಕೂ ಈ ಹೆಗಲಿಗೆ ನಿನ್ನುಸಿರು ಅಂಟಿಕೊಳ್ಳುವ ಹಾಗೆ...
____ಹುಸಿಮುನಿಸಿಗೊಂದು ಕುಂಟು ನೆಪವ ನೀನೇ ಹುಡುಕಿಕೊಡು...
💑💑💑

ಪ್ರತಿಪದೆಯ ಚಂದ್ರ - ನೆಲವ ತುಳಿದ ಬೆಳುದಿಂಗಳ ಚಿಗುರು ಪಾದ - ಮಣ್ಣ ಮೂಸಿದ ಹೂವೆದೆಯಲಿ ಬೀಜ ಬಿರಿವ ಸಂಭ್ರಮ - ಸಂಜೆ ರಂಗಿನ ಗಲ್ಲ ತೀಡೋ ಗಾಳಿ ಗೊರವನ ಗಂಧರ್ವ ಸಲ್ಲಾಪ - ನನ್ನ ಕಿನ್ನರಿಯ ಬೆಳ್ಳಿ ಕಾಲಂದುಗೆಯಲಿ ಮೆಲ್ಲನುಲಿವ ಕಿನ್ನುರಿ ದನಿ...
ಮುಚ್ಚಂಜೆ ಓಕುಳಿಯ ನಡುವಿಗೇರಿಸಿಕೊಂಡು ಮುಂದೆ ಮುಂದೆ ನಡೆವ ಅವಳ ಭವ್ಯ ರೂಪ - ಅವಳ ಬೆನ್ನ ನಾಚಿಕೆಗಂಟಿದ ನನ್ನ ಕಣ್ಣ ದೀಪ...
ಅಲ್ಲಿಂದ,
ಇರುಳ ಸ್ವಪ್ನ‌ದಲಿ ಗುಮಿಗೂಡುವ ಸೌಂದರ್ಯ ಅವಳೇ ಅವಳು...
ಕನಸು - 
ಕಣ್ಚಮೆಯ ಕುಂಚವ ಮಾಡಿ, ಖಾಲಿ ಖಾಲಿ ಮೈಹಾಳೆಯ ತುಂಬಾ ನವಿಲುಗರಿಯ ಬರೆದು ಮುದಗೊಳ್ಳುವ, ಶೃಂಗಾರ ಗಾಣಕೆ ಜೀವ ಜೀವ ನೊಗ ಹೂಡಿ ಮದ ಅರೆದು ಸವಿರಸ ಹೀರುವ ಯುವ ಮಾಧುರ್ಯ ಮೇನೆ...
ಬೇಸಿಗೆಗೂ ಬೆಂಕಿ‌ಗೂ ಅವಿನಾಭಾವ‌ವಂತೆ - ನಾನೋ ನಿನ್ನ ಹಂಬಲದಿ ನನ್ನೇ ನಾ ಸುಟ್ಟುಕೊಳ್ಳುವ ಮಿಡತೆ...
ಪೋಲಿಯೊಬ್ಬನ ಎದೆಯಲ್ಲಿ ಪಲ್ಲಂಗವೊಂದು ಸದಾ ಸಿಂಗರಿಸಿಕೊಂಡು ಪ್ರಣಯ ಪೂಜೆಯ ಮುಹೂರ್ತ‌ಕೆ ಕಾಯುತ್ತಿರುತ್ತೆ...
_____ಮತ್ತು ನಾನೊಬ್ಬ ಹುಟ್ಟಾ ಪರಮ ಪೋಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, May 9, 2021

ಗೊಂಚಲು - ಮುನ್ನೂರೆಪ್ಪತ್ತು.....

ಜೀವಜೀವಾಂತರ ಭಾವಸಾನಿಧ್ಯ.....

ಎದೆಯ ಅಮೃತವ ಕರುಳಿಗೆ ಹನಿಸುತ್ತಾ ಎನ್ನ ನೋಟ, ರುಚಿ, ದನಿ, ಘಮ, ಸ್ಪರ್ಶಗಳಿಗೆಲ್ಲಾ ಮೊದಲಾಗಿ ಜೀವ ತುಂಬಿದ್ದು - 'ಅಮ್ಮ...'
ಕಟ್ಟುಸಿರ ಹಾಡಾಗಿ ಸದಾ ಎದೆಯ ಸುಷುಪ್ತಿಯಲಿ ಜೀವ ತಳೆದು ನಿಂತ ನನ್ನ ತೊದಲು - 'ಅಮ್ಮಾ'..‌‌.
ಒಡಲುಕ್ಕಿ ಹರಿವ ನಗುವಿನಂಚಲಿ ಹಾಗೂ ಜೀವಾಭಾವದ ನೋವಿನ ಬಿಕ್ಕಿನುದಯದಲಿ ದೇವಗಿಂತ ಮೊದಲು ಎಲ್ಲ ಎಲ್ಲಾ ಕೊರಳೂ ದನಿ ಎತ್ತಿ ಕೂಗುವ ಮಮತೆ ಕಡಲಿನ ಕುಡಿ - 'ಅಮ್ಮಾ...'
ದೇವರಲ್ಲ ಅವಳು, ಮಿಗಿಲು ದೇವರಿಲ್ಲದ ಎದೆಗೂ/ಎದೆಗಾಗಿಯೂ ತನ್ನ ಉಡಿಯಲಿ ಪ್ರೀತಿಯ ನೂರು ಕವಲುಗಳ ಹೃದಯ ಹಡೆಯುವವಳು; ಬೆನ್ನ ಹಿಂದಿನ ನೆರಳಂತ ಶಕ್ತಿ ಸುಧೆ - 'ಅಮ್ಮ...'
ಕೇಳಿ,
ಯಾರ ಮನೆಗೇ ಹೋದರೂ ಅವರ ಅಡಿಗೆ ಮನೆಯಲೊಮ್ಮೆ ಇಣುಕಿ ಬರುತ್ತೇನೆ, ಬದುಕಿಂಗಿಷ್ಟು ಗಟ್ಟಿ ಸ್ಫೂರ್ತಿ, ಎದೆ ಜೋಳಿಗೆಗಿಷ್ಟು ಅಕ್ಕರೆಯ ಪಡಿ ಕೇಳದೆಯೂ ಸಿಕ್ಕುತ್ತದೆ; ಬೇಶರತ್ತಾಗಿ ಉದರಕಿಷ್ಟು ಅನ್ನ, ಎದೆಗಿಷ್ಟು ಪ್ರೀತಿಯ ಬಡಿಸೋ ಅಕ್ಷಯ ಪಾತ್ರೆಯೊಂದು ಎಲ್ಲರ ಗೂಡುಗಳ ಅಡಿಗೆಮನೆಯ ಗೊಣಗು, ಗುಣುಗುಗಳಲಿ ಜೀವಂತ - 'ಅಮ್ಮ...'
ಏನು ಹೇಳುವುದು! ಹೇಳಿ ಮುಗಿಸಲಾಗುವ ಗುಣ ಭಾವವೇ ಅದೂ!! ಅವಳ ಹೇಳದೆಯೂ, ಅವಳದೇನನ್ನೂ ಕೇಳದೆಯೂ ನನ್ನ ಒಳಿತನಷ್ಟೇ ಹರಸಲೊಂದು ಹಸ್ತವಿದ್ದರೆ ಆ ಯಾವುದೇ ಕರಗಳಿಗೆ ನಾ ಕರೆಯುವುದು - 'ಅಮ್ಮಾ ಅಮ್ಮಾ...'

ನನ್ನ ನಗುವಲ್ಲಿ ನನಗಿಂತ ಹಿಗ್ಗಿ ಅಮ್ಮನ ನೆನಪಿಸೋ, ನಾ ನೋವೂ ಅಂದರೆ ಅಮ್ಮನೇ ಆಗಿ ವಿಲಪಿಸೋ ಎಲ್ಲರೊಳಗಿನ ಅಮ್ಮನಂಥ ಅಮ್ಮನಿಗೆ ನಿತ್ಯ ನಮನ...
____ ಇಂತಿ ನಿಮ್ಮ ಶ್ರೀ...
💞💕💞

ಏಕಾಂತದಲ್ಲೆಲ್ಲ ನೆನಹೋ, ಕನಸೋ, ಕನವರಿಕೆಯೋ ಆಗಿ ಎದೆಗೂಡಿನ ಪಡಸಾಲೆಗೇ ಬಂದು ಕೂತು ಹೆಗಲು ತಬ್ಬಿ ನೆತ್ತಿ ಮೂಸುವವರನ್ನು ಮಾರು, ಮೈಲು, ಸಾಗರ ತೀರಗಳ ನಡುವಿನಂತರಗಳಲ್ಲಿ ಅಳೆದು ಲೆಕ್ಕ ಹಾಕಿ ದೂರಾಭಾರವೆನ್ನಲಿ ಹೇಗೆ...
____ಜೀವಜೀವಾಂತರ ಮತ್ತು ಭಾವಸಾನಿಧ್ಯ...
💞💕💞

ಒಂದು ಸಾಸಿವೆಯಷ್ಟೇ ಆದರೂ ಶುದ್ಧಾತ್ಮ ಆಪ್ತತೆಯ ಎನ್ನೆದೆ ಬಟ್ಟಲಿಗೆ ಸುರಿದ ಜೀವವ ನಾ ಮರೆತ ದಿನ ಯೆನ್ನ ಸಾವಾಗಲಿ...
___ ಪ್ರಾರ್ಥನೆ...
💞💕💞

ನನ್ನೊಳಗಿನ ಸುಖದ ಹಂಬಲ ನಿನ್ನ ನೋವುಗಳಿಂದ ನನ್ನ ಪಾತ್ರ ದೂರ ನಿಂಬಂತೆ ಮಾಡುವುದು ಎಂಥ ಸ್ವಾರ್ಥ...
___ ನಿಜವಾಗಿ ನೀನಂದುಕೊಂಡಷ್ಟು ನಾನು ನಿನ್ನವನಲ್ಲ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, May 8, 2021

ಗೊಂಚಲು - ಮುನ್ನೂರರ‍್ವತ್ತೊಂಭತ್ತು.....

ಈ ಹೊತ್ತಿನ ಪಾಠ.....

ಉಸಿರು ಹೃದಯದಲೇ ಹುಟ್ಟುವುದಂತೆ...
ಸಾವೆಂದರೆ ಉಸಿರು ನಿಲ್ಲುವುದಂತೆ...
ಉಸಿರಿಗೇ ಅಂಟಿದ ಸಾವ ಮರೆತು ಮೆರೆವ ನಾನು, ಹೃದಯದ ಕಿರು ಗಾಯಕೆ ಸಾವಿನವರೆಗೂ ಅಳುತ್ತೇನೆ...
___ಮರುಳನೇ ಇರಬೇಕು ನಾ...

🔅🕂🔆

ಬದುಕು ಕೇಳೋ ಯಾವ ಪ್ರಶ್ನೆಗೂ ಸಾವಂತೂ ವಿವರಣೆ ಕೊಟ್ಟದ್ದಿಲ್ಲ...
ಅಥವಾ 
ಬದುಕಿನ ಪರಿಪ್ರಶ್ನೆಗಳಿಗೆಲ್ಲ ಬದುಕಿನ‌ದೂ ನಿರುತ್ತರವೇ ಉತ್ತರವಾ...
_____ ಸಾವಿಗೆ ತರ್ಪಣ ಬಿಟ್ಟಷ್ಟು ಸುಲಭವಲ್ಲ ಬದುಕಿಂಗೆ ಆಜ್ಯವನೆರೆವುದು... 
🔅🕂🔆

ನನ್ನ ನೋವು ನನ್ನೆಡೆಗೆ ನನ್ನಲ್ಲಿ ಕರುಣೆ ಹುಟ್ಟಿಸಬಾರದು...
ಹಂಗೇನೇ,
ಅವರ ಭಾವ ವಶಕ್ಕೆ ನಿಲುಕಿ, ಸದರವಾಗಿ ನಾನು ಕೊಳೆ ಬೀಳುವಷ್ಟು ಪರರ ನೋವು ನನ್ನ ದೌರ್ಬಲ್ಯ‌ವಾಗಬಾರದು...
ಹೌದು,
ನೋವು ನಶೆಯಾಗಲೇಬಾರದು - ಎದೆಯ ನಶೆಯಾದರೆ ನೋವು ಮತ್ತೆ ಮತ್ತಷ್ಟು ಆಳದ ನೋವಿನ ದಾರಿಯನ್ನೇ ತೋರುತ್ತೆ... 
ತಿಳ್ಕೋ ಶ್ರೀ -
ನಿನ್ನ ಪಾಪಿ ಮನಸಲ್ಲಿ ಪಾಪಚ್ಚಿ ಭಾವಗಳಿಗೆ ಪ್ರಜ್ಞೆಯ ತುಳಿವಷ್ಟೆಲ್ಲಾ ತಾವೂ, ಕಾವೂ ಸಿಗಲೇಬಾರದು...
ಹೃದಯ ಸಂವೇದನೆ ಎಂಬುದು ಕರುಣೆಯ ಆಚೆ ಮತ್ತು ದೌರ್ಬಲ್ಯ‌ದ ಈಚೆ ನಿಂತು ಸಂವಾದಿಸಬೇಕು...
____ ಈ ಹೊತ್ತಿನ ಪಾಠ...
🔅🕂🔆

ಅಯ್ಯಾsss, ಎಷ್ಟೋ ನಗಸ್ತೀಯಾ ಪಾಪೀ...
ಗೋಪೀ,
ನಿನ್ನ ನಗಿಸುವುದೆಂದರೆ ನಿನ್ನನಷ್ಟೇ ನಗಿಸಿದ್ದಲ್ಲ ಅದು - ಅಷ್ಟು ಘಳಿಗೆ ನನ್ನ ನೋವನೂ ನಾ ಮರೆತು ನಲಿದದ್ದೂ ಹೌದು...
ಸಾವಿಗೂ ಸಣ್ಣಗೆ ಹೊಟ್ಟೆ ಉರಿಯುವಂತೆ...
____ನಿಜವೆಂದರೆ, ನನ್ನ ನಗು ನನ್ನ ಮೊದಲ ಆದ್ಯತೆ ಮತ್ತು ಅಂತಿಮ ಆಯ್ಕೆ...
🔅🕂🔆

ಯಾರೂ ಮೆಚ್ಚದ ಜೊಳ್ಳು ಕಾವ್ಯ - ನಾನು...
ಕನ್ನಡಿಯೊಳಗಣ ತಪ್ತ ಕಣ್ಣು - ನನ್ನದೇ ಪುಸ್ತಕ...
___23.04.2021
🔅🕂🔆

ಮುನ್ಸಾಗುವುದಷ್ಟೇ - ಅಲ್ಲಲ್ಲಿ ಅಷ್ಟೋ ಇಷ್ಟೋ ಆದಷ್ಟು ಹಂಚುತ್ತಾ, ಸಿಕ್ಕಷ್ಟನ್ನು ಸಿಕ್ಕಂಗೆ ನಂದ್‌ನಂದೇ ಅಂದ್ಕೊಂಡು ಸವಿಯುತ್ತಾ ಕಾಲನೊಟ್ಟಿಗೆ ಕಾಲು ಹಾಕುವುದು...
ನಿಲ್ಲಲಾಗುವುದಿಲ್ಲ - ಕಾರಣ, ಕಾಲು ನಿಂತಲ್ಲೇ ಕಾಲ ನಿಲ್ಲುವುದಿಲ್ಲ...
_____ಜೀವಯಾನ...
🔅🕂🔆

ಕೇಳಿಲ್ಲಿ -
ಅನ್ನವಾದರೂ, ಪ್ರೀತಿಯಾದರೂ
ಜೀವನ್ದಲ್ಲಿ ಒಂದಿನವೂ ಊಟ ಬಿಟ್ಟು/ಇಲ್ಲದೇ ಉಪವಾಸ ಕೂತ/ಬಿದ್ದ ಪ್ರಾಣಿಯಲ್ಲ ನಾನು, ಅದಾಗದು ಕೂಡಾ ನನ್ನಿಂದ... 
ಏನು ತಿಂದೆನೋ, ಎಷ್ಟು ತಿಂದೆನೋ, ಆದ್ರೆ ಏನೋ ಒಂದು, ಒಂದು ತುತ್ತಾದರೂ ಕೂಳಿಲ್ಲದೇ ಅಂತೂ ಮಲಗಿಲ್ಲ...
ಅಂಥ ನಾನು 
ನಿನ್ನ ಉಂಬಲಾಗದ ಅನಾರೋಗ್ಯದ, ಅವರಿವರ ಉಣ್ಣಲೇನಿಲ್ಲದ ಬಡತನದ ಶುದ್ಧ ಹಸಿವಿನ ಆರ್ತನಾದಕೆ ನಿಜಕ್ಕೂ ಆರ್ದ್ರವಾಗಿ ಸ್ಪಂಧಿಸಿಯೇನಾ ಚೂರಾದರೂ...
___"ಜಗತ್ತು ಮಾಯೆ, ಜೀವನ ನಶ್ವರ" ಒಣಕಲೆದೆಯ ರಣ ಭಾಷಣ...
🔅🕂🔆

ನಿನ್ನ ನೀನು ಸಂಭಾಳಿಸಿಕೊಳ್ಳೋದ ಕಲಿಯೋ ಶ್ರೀ...
ಇದ್ದವರು ಕೇಳಿದ್ರೆ ಕೈಗಡವೋ ಇಲ್ಲಾ ಬಡ್ಡಿ ಸಮೇತ ಬರಬಹುದು ಅನ್ಸೋ ಸಾಲವೋ...
ಇಲ್ಲದವ ಕೇಳಿದ್ರೆ, ಕೇಳೋದೇನು ಸುಮ್ಮನೇ ಸುಳಿದರೂ ಅದು ಭಿಕ್ಷೆ/ಗೇ...
ಹಣವಾದರೂ ಅಷ್ಟೇ, ಪ್ರೀತಿಯಾದರೂ ಅಷ್ಟೇ...
____ಉಫ್!! ಇಲ್ಲಿ ಹೆಣದ ಬಾಯಿಗೋ ಅಕ್ಕಿಕಾಳು, ತುಪ್ಪ, ತೀರ್ಥ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರರ‍್ವತ್ತೆಂಟು.....

ಬದುಕಿರುವ ಕಾರಣಕ್ಕೆ.....

ಎದೆಗೂಡಿನ ಹೆಬ್ಬಾಗಿಲ ನಂದಾದೀಪದುರಿಯಂಗೆ 'ನನ್ನೊಳಗೆ' ನಾನು ನನ್ನೊಡನೆ ನಿನ್ನನೂ ನನ್ನಂತೆಯೇ ಬೆಚ್ಚಗೆ ತುಂಬಿಟ್ಟುಕೊಳ್ಳಬಹುದು, ಸುಖವಾದ ಸಣ್ಣ ತಳ್ಳಿಯೂ ಇಲ್ಲದೇ ನನ್ನ ಭಾವ ಕೋಶದಿಂದ ನಿನ್ನ ಹೆಸರು ಅಳಿಸಿ ಹೋಗದಂಗೆ ಮುಚ್ಚಟೆಯಿಂದ ಕಾಯ್ದುಕೊಳ್ಳಬಹುದು - ಅದು ನನ್ನ ಪ್ರೀತಿ, ನನ್ನ ಬೇಶರತ್ ಆಯ್ಕೆ, ಅಲ್ಲಿಯದೆಲ್ಲ ಹೊಡ್ಪಡೆಗಳಿಗೆ ನನ್ನದೇ ಹೊಣೆಗಾರಿಕೆ...
ಆದರೆ,
ಹಂಗಂಗೇ ಆತ್ಮ ಸಾನ್ನಿಧ್ಯ‌ವಾಗಿ 'ನಿನ್ನೊಳಗೂ' ನನ್ನನ್ನು ತುಂಬಿಡಬೇಕು/ತುಂಬಿಬಿಡಬೇಕೂ ಅಂತ ಹಠಕ್ಕೆ ಬೀಳ್ತೇನೆ ನೋಡು, ಆಗ ಮತ್ತೆ ಮತ್ತೆ ನಿನ್ನೊಳಗೆ ಇಣುಕಲೆಳಸುತ್ತೇನೆ; ಒಂದು ಪಕ್ಷ ನಿನ್ನಾ ಒಳಗಲ್ಲಿ ನೀನೊಬ್ಬನೇ ಕಂಡುಬಿಟ್ಟರೆ ಅಲ್ಲಿಗೆಲ್ಲ ಮುಗೀತು - ಗರಬಡಿದ ಮನಸಿನ ಅಡಸಂಬಡಸಾ ಹಡಾಹುಡಿಗಳಿಗೆ ಸಿಕ್ಕಿ, ಬುದ್ಧಿಯೆಂಬೋದು ಮಂಕುದಿಣ್ಣೆಯಾಗಿ ಬಾಂಧವ್ಯವೊಂದು ಮುರಿದುಬೀಳೋ ಸದ್ದಿದೆಯಲ್ಲ; ಉಫ್ - ಅಲ್ಲಿಂದಾಚೆಗೆ ಮಾತು ಮಗುಚಿಕೊಂಡಷ್ಟೂ ನೆನಪು ಮೊರೆಯುವಂತಾಗಿ ನನ್ನೊಳಗೆ ನಾನೂ ಇರದಂತಾ ಅಯೋಮಯ...
___ಒಡನಾಡಿ/ಟ...
🔰🕀🔰

ಭ್ರಮೆಗಳು ಕೊಂಡೊಯ್ದು ನಿಲ್ಲಿಸೋ ಎತ್ತರವೂ ಭ್ರಮೆಯದ್ದೇ ಅಲ್ಲದಾ.‌‌..
ಅಪಾಯ ತಾರದೇ ತುಂಟ/ಕಳ್ಳ ಖುಷಿ ತುಂಬುವುದಾದರೆ ಅಂತವಿಷ್ಟು ಭ್ರಮೆಗಳೂ ಜೊತೆಗಿರಲಿ ಬಿಡು...
_____ ನರಕ ಸುಖ...
🔰🕀🔰

ಪಾಠ ಮಾಡೀ ಮಾಡಿ ಬದುಕಿಗೂ ಸುಸ್ತಾದಂಗಿದೆ...
ಅರ್ಹತೆ ಇಲ್ಲದೇ ಮಾನ್ಯತೆ ಬಯಸಿ ಕಳೆದುಕೊಂಡವುಗಳ ಯಾದಿಯ ಕಂಡರೆ ಭಯವಾಗುವಂತಿದೆ...
ಕನಸು ಎದೆ ಸುಟ್ಟಾಗ ಭಾವಬರಹ ಕೈಹಿಡಿದಿತ್ತು - ಏನೋ ಒಂಚೂರು ಹಗೂರ...
ಅಕ್ಷರಗಳೂ ಪದಗಳಾಗಲು ಮುನಿಸಿಕೊಂಡರೆ ಸಾವೂ ಖುಷಿಕೊಡಲಿಕ್ಕಿಲ್ಲ - ನಗೆಯೂ ಭಾರ ಭಾರ...
____ಖಾಲಿ ಖಾಲಿ ಸಂಜೆಗಳು ಮತ್ತು ಹುರುಳಿಲ್ಲದಾ ಹಪಹಪಿ...
🔰🕀🔰

ಅವ್ರು ನಂಬ್ಸೋಕೆ ಒದ್ದಾಡೋದೂ, ನಾನು ನಂಬೋಕೆ ಹೆಣಗಾಡೋದೂ - ನಂಬಿಸಿಬಿಟ್ಟೆ ಅಂತ ಅವ್ರು ಸುಳ್ಳೇ ಬೀಗುತ್ತಾ ಬೆನ್ನಾಗೋದೂ - ನಾನೋ ನನ್ನೇ ನಂಬ್ಸೋಕೆ ಬರ್ತಾರಲ್ಲಾ, ನಂಬಿ ಬಿಡ್ತೀನಾ ಅಂತ ಹುಳ್ಳಗೆ ಬೆನ್ಹಿಂದೆ ನಗೋದು - ಈ ಇಂಥ ಅಪದ್ಧ, ಅಪ್ರಬುದ್ಧ ಮೇಲಾಟಗಳಲ್ಲಿ ಸತ್ಯ ಮತ್ತು ಸುಳ್ಳು ಎರಡೂ ಪ್ರಸ್ತುತತೆಯ ಅರಿವಿಲ್ಲದೆಯೇ ಹರಕೆಯ ಬಯಲಾಟದ ಕೋಡಂಗಿ ವೇಷಗಳಾಗುತ್ತವೆ...
____ಗಾಳಿಗಂಟಿದ ಗಂಧವನ್ನ ಮುಟಿಗೆಮೌನದಲಿ ಗುಟ್ಟುಮಾಡುವುದಂತೆ...
🔰🕀🔰

ಜಗಳದಾಳದ ಸಲಿಗೆಯ ಸಲಿಲ ಎದೆಗಿಳಿಯದಿದ್ದರೆ ಪ್ರೀತಿ ಶರಧಿಯ ಆಳ ವಿಸ್ತಾರ ಬದುಕ ಬಳಸೀತು ಹೇಗೆ... ?!!
____ನೀನು ನಾನು ಮತ್ತು ನೇಹ...
🔰🕀🔰

ಮೈಲಿಗಲ್ಲು ಚಲನೆ ಕಲಿತಿಲ್ಲ...
ದೂರಗಳ ಹೇಳೋ ಕಲ್ಲೊಂದು ದಾಟಿ ಹೋಗುವವರ ಎದೆಗೆ ಹತ್ತಿರಾಗುವ ಕನಸ ಕಾಣಬಹುದೇ...?!
ಎಲ್ಲಿಗೂ ಖಾಸಾ ಆಗದ ಮೈಲಿಗಲ್ಲು ಮಾಸಮಾಸಕೂ ಹಕ್ಕಳೆದ್ದು ಮಾಸಬಹುದಷ್ಟೇ...
#ನಾನು...
🔰🕀🔰

ಅಬ್ಬೆ ಗರ್ಭದಿಂದ ಬಯಲಿಗೆ ಬಿದ್ದಾಕ್ಷಣ ಜೋರು ಅತ್ತೆ - ಉಸಿರ ನಾಳ ಚೊಕ್ಕವಾಗಿ ಉಸಿರಾಟ ಹಗೂರವಾಯ್ತು - ಪೂರಾ ಪೂರಾ ನಿಸರ್ಗ ಸಂಸರ್ಗದ ಜೀವಂತ ಹಾಡು ಅದು...
ದಿನಗಳೆದಂತೆ ನಗುವುದ ಕಲಿತೆ - ಉಹೂಂ, ಕಣ್ಣ ತೀರಕೆ ಕಟ್ಟೆ ಕಟ್ಟಿ ನಗುವುದ ಕಲಿತೆ - ಬದುಕೇ ಕರುಳ ಕೊರಳ ಹಿಂಡುವಾಗಲೂ ನಗೆಯ ಆಳುವುದ ಕಲಿತೆನೆಂಬ ಕಾರಣಕೇ ಬಲಿತೆನೆಂದು ಬೀಗಿದೆ; ಈಗಲೋ ಚಂದ ನಗುವಿನ ಡೋಲಿಯಲ್ಲಿ ಉಸಿರು ಜೀವ ಹೊರಲಾರದಷ್ಟು ಭಾರಾ ಭಾರ...
ಬೆಳೀತಿರೋದಾ - ಬೆಳೆಯೋ ಹಪಹಪೀಲಿ ಬಳಲ್ತಿರೋದಾ...?
ಬಂದದ್ದೆಲ್ಲಿಂದ - ಹೊರಟದ್ದೆಲ್ಲಿಗೆ - ನಡುವೆ ಇದೇನು ಬಡಿವಾರ...!!
ನಗುವಿಗೂ, ಅಳುವಿಗೂ ಬೇರೆಬೇರೆಯದೇ ಕಂದಾಯ...
ನಾನೇ ಪ್ರಶ್ನೆ - ನಾನೇ ಉತ್ತರ - ಮತ್ತೇss 'ಮತ್ತೆ ಮಗುವಾಗಬೇಕು' ಎಂಬೋ ದೊಡ್ಡ ದೊಡ್ಡ ಮಾತು...
____ಏನಹೇಳಲಿ ಬಡ ಭೋಗಿಯ ಗೋಳು...
🔰🕀🔰

ಖಾಲಿತನದ ಹೊಗೆಯಲ್ಲಿ ಉಸಿರುಗಟ್ಟುವ ಸಂಜೆಗಳಲೂ ಕಣ್ಣುಜ್ಜಿಕೊಂಡು ನಗೆಯೊಂದ ಹುಡುಕುತ್ತೇನೆ...
___ ಬದುಕಿರುವ ಕಾರಣಕ್ಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, April 21, 2021

ಗೊಂಚಲು - ಮುನ್ನೂರರ‍್ವತ್ತೇಳು.....

ಗೆರೆ.....

ಕೇಳಿಲ್ಲಿ -
ನನ್ನ ಅತಿಯಾದ ಮತ್ತು ಅನಪೇಕ್ಷಿತ ಸ್ವಾಭಿಮಾನ ಕೂಡಾ ನಿನ್ನ ಪ್ರಾಮಾಣಿಕ ಪ್ರೀತಿ/ನೇಹಗಳ ಎದುರು ಸರಾಗ ಒಡನಾಟದ ಆಪ್ತ ತಂತುಗಳ ಬೆಸುಗೆಯನು ತಡೆಯೋ ಅಡ್ಡ ಗೋಡೆಯೇ ಆಗಬಹುದು... 
___ಗೆರೆ...
⇄↺↻⇆

ಬಂಧ ಅಥವಾ ಸಂಬಂಧಗಳನು ಸೋಸುವುದರಲಿ ಎರಡು ವಿಧ...
ಒಂದು ವ್ಯಕ್ತಿಗಳ ಗುಣಗಳನು ಸೋಸುವುದು...
ವ್ಯಕ್ತಿಗಳನೇ ಸೋಸುವುದು ಇನ್ನೊಂದು...
ಅವರವರ ವ್ಯಕ್ತಿತ್ವದ ಶಕ್ತ್ಯಾನುಸಾರ ಇದು ಅನುಸರಣೆಯಾಗುತ್ತೆ...
__ಕಳಚಿಕೊಳ್ಳುವ ಪಾಕ...
⇄↺↻⇆

ಹಾಯಲಾರದ, ಏಗಲಾರದ ಉರಿಗೆ ಜೀವಾ ಭಾವವ ನೆನೆನೆನೆದು ಪವಿತ್ರ ಪ್ರೇಮವ ಹಾಡುತ್ತಿದ್ದರು - ಪ್ರಕೃತಿಯೋ ಇರುಳ ಹೊಕ್ಕುಳಲ್ಲಿ ಅದೇ ಪ್ರೇಮದ ಕನಸೂಡಿ ಕಾಮವ ಸ್ಖಲಿಸಿ ಸಳಸಳ ಬೆವರಿ ನಿಸೂರಾಯಿತು...
#ಅಲ್ಲಿಗೆಲ್ಲ_ಚುಕ್ತಾ...
⇄↺↻⇆

ಎದೆಯ ತೇವ ಮೈಗಿಳಿಯದಂಗೆ ಅಥವಾ ಮೈಯ್ಯ ಬಿಸಿ ಹಸಿವು ನೆತ್ತಿಗೇರದಂಗೆ ಮೈಮನವ ಹದ್‌ಬಸ್ತಿನಲ್ಲಿಡ್ತಾ ಮುಖವ ಹಿಂಜಿಕೊಂಡು ಕಾಲಯಾಪನೆ ಮಾಡುವ ಹೈರಾಣು ಕಾಯಕ...
#ವಿರಾಗ...

ನಾ ನಿನಗಾಗಿ ಕಾಯುತ್ತೇನೆ, ನಿನ್ನನ್ನು ಕ್ಷಣ ಮಾತ್ರಕೂ ಕಾಯಿಸುವುದಿಲ್ಲ ಅಂತ ನಾ ಒರಲಿದರೆ ಅದು ಪ್ರೇಮಾಲಾಪವೇ ಆಗಬೇಕಿಲ್ಲ...
#ಸಾವಿಗೂ_ಕಾಯಬೇಕಾದೀತು...
⇄↺↻⇆

ನಿಸ್ಸಾರ ಪ್ರೇಮ ಕಾಮಗಳು ಸುಲಭವಾಗಿ ತಮ್ಮ ಬದುಕು ಕಟ್ಟಿಕೊಳ್ಳಲು ಆಶ್ರಯಿಸಿಕೊಂಡ ಆಳ - ಅದು ಕ್ರುದ್ಧ ಮೌನ...
ಮೌನಂ ಸಮ್ಮತಿ ಲಕ್ಷಣಂ ಎಂಬ ಆರೋಪಿತ ಭಾವದ ಸೂರಿನಡಿ ಧ್ವನಿಯ ಸಾಮಾನ್ಯ ಸಾಕ್ಷಿಯೂ ಇಲ್ಲದಲ್ಲಿ ತಾರ್ಕಿಕ ಆಖ್ಯಾನ, ವ್ಯಾಖ್ಯಾನಗಳೆಲ್ಲ ತಥಾಕಥಿತ ಕಥೆಗಳಾಗಿ ಬಲ ಕಳೆದುಕೊಳ್ಳುವಲ್ಲಿ ನೀ ಅಂದುಕೊಂಡದ್ದೇ ಸತ್ಯ ಅಥವಾ ನೀ ಹಲ್ಮೊಟ್ಟೆ ಕಚ್ಚಿ ಸಹಿಸಿಕೊಂಡದ್ದಕ್ಕೂ ಬಹುಪರಾಕಿನ ಹಾರ ತುರಾಯಿ...
ಎದೆಯಿಂದ ಎದೆಗೆ ಮೌನವೇ ದಾಟಿದರೆ ಅದು ಒಂದು ಜಗಳವೂ ಹುಟ್ಟದ ಸ್ತಬ್ಧ ಚಿತ್ರಗಳ ಜಾತ್ರೆ...
#ಆಡದೇ_ಉಳಿದದ್ದು_ಯುಗಳ_ಹಾಡಾಗುವುದು_ಹೇಗೆ...
⇄↺↻⇆

ಸಮಾನ ಅಥವಾ ಪೂರಕ, ಪ್ರೇರಕ ಸ್ಪಂದನೆ ಹುಟ್ಟದ ಇಲ್ಲವೇ ಕಳೆದೋದ ಭಾವ ಬೀದಿಯಲ್ಲಿ ಕ್ರಿಯೆಗೆ ಏನೋ ಒಂದು ಪ್ರತಿಕ್ರಿಯೆ ಅನ್ನುವಂತ ಒಣ ಒಣ ಸಂವಾದವಷ್ಟೇ ಉಳಿಯುತ್ತದೆ...
ಅಲ್ಲಿಗೆ ನೀನು, ನಾನು ನಡುವೆ ಮೌನ ಸಂಭಾಷಣೆಯ ಹೆಸರಿಟ್ಟುಕೊಂಡು ಉದ್ದಕೂ ಎಡೆ ಇಟ್ಟಂತೆ ಹಾಸಿಕೊಂಡ ಕ್ಷುದ್ರ ನಿಶ್ಯಬ್ದದ ಬೇಲಿ ಕರುಳ ಕಡೆಯುತ್ತದೆ...
ಸಂತೆಮಾಳದ ಇರುಳ ಅನಾಥ ಭಾವವನು ಹಸಿದ ಕುನ್ನಿಯೊಂದು ಮಲಗಿದಲ್ಲೇ ಗುರುಗುಟ್ಟಿ ತುಸು ಸಂತೈಸಿದಷ್ಟಾದರೂ ಸಂತವಿಸಲು ಒಂದು ಹಸಿ ಮಾತು ಬೇಕು ಮತ್ತು ಎದೆಯಲದು ಉಳಿಯಬೇಕು...
ಮತ್ತೆ ಮಾತಾಗಬಹುದೇ ಹೇಳೂ...
⇄↺↻⇆

ಸಾವಿರ ಸುಳ್ಳು ಹೇಳಿ ಒಂದು ಮದ್ವೆ ಮಾಡು ಅಂತಾರೆ ಎಲ್ಲಾ ಮೊದಲು...
ಸಾವಿರ ಸುಳ್ಳುಗಳ ನಂಬಿ, ನಂಬಿಸಿಯೇ ಅಲ್ವಾ ಮದ್ವೆ ಒಂದು ಅಷ್ಟುದ್ದ ಬದ್ಕಿರೋದು ಅನ್ನೋದು ಕೊನೇಯ ತೊದಲು...
ಕೆಲವೆಲ್ಲ ಪ್ರಶ್ನೆ ಉತ್ತರ ಎರಡೂ ಮನ್ಸಲ್ಲೇ ಉಳದ್ರೇ ಹಿತ...
#ನಿಟ್ಟುಸಿರಲೇ_ಜೀವಿಸೋ_ಪಾತ್ರಗಳು...
⇄↺↻⇆

ಆಟತಿಮನೆ ಕಟ್ಟಿ, ಎಂಜಲು ಬಾಯಿ ಮಾಡಿ ಕಾಡು ಹಣ್ಣಿನ ಊಟ ತಿಂದು, ಬುರ್ ಬುರ್ ಅಂತ ಬಾಯಲ್ಲೇ ಗಾಡಿ ಓಡ್ಸೋ ಗಂಡನ್ನ ಪ್ಯಾಟೆಗೆ ಕಳ್ಸಿ, ಗುಂಡಪ್ಪನ್ನ ಮಗು ಅಂತ ತೂಗಿ ಸುಳ್ಳೇಪಳ್ಳೆ ಸಂಸಾರ ಮಾಡ್ವಾಗ ಇದ್ದ ಸುಖ ಸಂತೋಷ ನಿಜ ಸಂಸಾರದಲ್ಲಿ ಒಂದಿನಾನೂ ಕಾಣ್ಲಿಲ್ವಲ್ಲೋ...!!!
#ಕಥೆಯಾಗಿ_ವ್ಯಥೆ_ಹೇಳುವ_ಪಾತ್ರಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)