ಶುಭ + ಬೆಳಕು = ಶುಭದಿನ - ಪ್ರೀತಿ ಸಂಧಿ... 🤝🫂
ಮುಗಿದುಹೋದ ನಿನ್ನೆಗೆ ಮರಳಲಾರದ ಪಾಪದವನ ಅನುತಾಪದ ಯೆದೆಗೆ ಮರಳಿ ಮರಳಿ ಪ್ರೇಮ ತುಂಬೋ ಕಾರುಣ್ಯ ಸಿಂಧು ಬೆಳಗು...
ಮುಗಿದ ಸಮಯವ ಮರೆತು, ಮುಂದಿರುವ ಬಾಳ್ಮೆಯ ನೆನೆದು, ಮುಷ್ಟಿ ಬಿಗಿದು ಕಳಕೊಂಡ ನಗುವನು ಬೊಗಸೆಯೊಡ್ಡಿ ಪಡೆಯಲೊಂದು ಸಣ್ಣ ಅವಕಾಶದ ಬಾಗಿಲು ಬೆಳಗು...
ಬೆಳಗಾಗಿದೆ - ತೆರೆದಿದೆ ಶುಭದ ಕಕ್ಷೆ... 🤝🫂
ಬೆಳಗಾಯಿತು...
ಕಣ್ಣ ಗೋಳದ ತುಂಬಾ ಬೆಳಕೇ ಬೆಳಕು...
ಜಗ ಬೆಳಗೋ ಬೆಳಕು ತಾನೇ ತಾನಾಗಿ ತಲುಪಲಾರದ ಎನ್ನ ಯೆದೆಯ ಕುಹರದಲೊಂದು ಪ್ರೀತಿ ಪಣತಿಯ ನಾನೇ ಹಚ್ಚಿಡಬೇಕು...
ನನ್ನ ಬದುಕ ಬೊಗಸೆಗೆ ನಂಗಾಗಿ ಶುಭವ ನಾನೇ ತುಂಬಿಕೊಳ್ಳಬೇಕು - ನಿಂಗಾಗಿ ಶುಭವ ಪ್ರಾರ್ಥಿಸುತ್ತಾ...
ಶುಭಾಶಯ - ಶುಭದಿನ... 🤝🫂
ಬೆಳಕಿನ ಪಂಜು ಉರಿದುರಿದೆಚ್ಚರ ಜಗದ ಬಯಲ ಮಂದಿರ...
ಪ್ರೀತಿ ಚಿಮಣಿಯ ಹಚ್ಚಿಟ್ಟರೆ ಬೆಳಕು ಮಂದಿ ಯೆದೆಯ ಕುಹರ...
ನೆಟ್ಟ ಪ್ರೀತಿ ಕೊರಡು ಬೆಳಕಾಗಿ ಚಿಗುರಿ ಹಬ್ಬುವುದು ಎದೆಯ ಮಂಟಪಕೆ ನೂರು ಕವಲಿನ ನಗೆಯ ಬಳ್ಳಿ...
ಕೊಟ್ಟು ಕೊಟ್ಟು ತುಂಬಿಕೊಂಬುವ ಹಬ್ಬ - ಪ್ರೀತಿ ಪ್ರೀತಿ ಬೆಳಗು... 🤝🫂
ಬೆಳಗಾಯಿತು...
ಅವನು ಮೂಟೆ ಮೂಟೆ ಬೆಳಕನು ಸುರಿದೇ ಸುರಿವ - ನಮ್ಮ ಜೀವ ಪಾತ್ರೆಯ ಅಳತೆಯ ಹಂಗಿಲ್ಲದೇ...
ನಾವಿಲ್ಲಿ ಹಿಡಿ ನಗುವನಾದರೂ ಹಂಚಿಕೊಳ್ಳುವಾ - ನಮ್ಮ ನಮ್ಮ ಯೆದೆಗೂಡು ಒಂದರೆ ಚಣ ಹಿಗ್ಗಿನಲಿ ಅರಳುವಷ್ಟಾದರೂ...
ಅಂತರ್ವಾಹೀ ಪ್ರೀತಿ ಬೆಳಗಿ ಹಬ್ಬಿ ತಬ್ಬಿ ಕಾಲವೂ ಕಾಯುವ ಚಂದನೆ ಪರಿ ಬೆಳಗು...
ಶುಭದಿನ ನೇಹೀ...🤝🫂
ಬೆಳಕಿನೊಡಗೂಡಿ ಬರುವ ನೆನಪುಗಳು,
ನೆನಪಿಗಂಟಿ ಬರುವ ಬೆಳಕು,
ಕನಸಿನ ವಸ್ತುವನು ವಾಸ್ತವದ ಮೊರದಲಿಟ್ಟು ಕೇರಿ ಕೇರಿ ನೋಡಿ ಪಯಣವನು ಗಟ್ಟಿಯಾಗಿಸುವ ಅನುಭವದ ಗರಡಿಮನೆ...
ಬೆಳಗು ಬದುಕ ಪ್ರೀತಿಯ ಬೇರಿನ ನಿಚ್ಚಳ ಕನ್ನಡಿ...
ಶುಭದಿನ... 🤝🫂
ಯೆದೆಯ ಸಂಚಿಯಿಂದ ತೆಗೆದ ಕಟ್ಕಟೀ ಬೆಳಕಂಥ ಅಡಿಕೆ ಮತ್ತೆ ತುಸು ಪ್ರೀತಿ ಸುಣ್ಣವ ನಗೆಯ ವೀಳ್ಯದೆಲೆಗೆ ಬೆರೆಸಿ ಹಂಚಿ ತಿಂದರೆ ಬದುಕು ಬಲು ರುಚಿಯ ಕವಳ...
ಇನ್ನಷ್ಟು ಸಿಹಿ ಸಿಹಿಯಾದ ನಾಲ್ಗೆ ರುಚಿಯ ಹುಕಿಯಿದ್ದರೆ ಪ್ರೀತಿಯ ಹಲವಾರು ಕವಲುಗಳಾದ ಅಕ್ಕರೆಯ ಸಕ್ಕರೆ, ತಬ್ಬುಗೆಯ ಕರ್ಪೂರದ ತಂಪು, ಏಲಕ್ಕಿ ಕಾಳಿನ ರಸಿಕತೆ, ಭಾವದ ಬಡೆಸಪ್ಪಿನ ಕಂಪು ಇಂಥವಿನ್ನಷ್ಟು ರಸಗಳನು ಬೆರೆಸಿ ಜಗಿಯಬಹುದು...
ಬೆಳಕಾಗುವುದೆಂದರೂ, ಬೆಳಗಾಗುವುದೆಂದರೂ ಪ್ರೀತಿಯನು ಪ್ರೀತಿಯಿಂದ ಹಂಚಿ ಸವಿಯುವುದೇ ಅಲ್ಲವಾ...
ಶುಭದಿನ... 🤝🫂
ರುದಯ ರುದಯಗಳ ಪ್ರೀತಿಯ ಬಣ್ಣಗಳ ವೈಭವವ ತೋರುವ
ಮತ್ತು
ಬಣ್ಣಾಚಾರದ ಪ್ರೀತಿಯ ಮುಖಗಳ ಬಣ್ಣ ಇಳಿಸುವ
ಎದೆಯ ಬೆಳಕನು ಎಲ್ಲರುಡಿಗೂ ತುಂಬಿಕೊಡಲಿ ಈ ಬೆಳಗು...
ಪ್ರೀತಿಯ ಬಣ್ಣವೇ ಬೆಳಕು...
ಶುಭದಿನ ಪ್ರೀತಿಯೇ... 🫂🤝
ನೂರು ನೂರಾರು ನಗೆ ಮುಗುಳ ಚಂದ ಸಂಕಲನವೀ ಬೆಳಗು...
ಪ್ರೀತಿ ಬೆಳಕಾಗಲಿ ನಿನ್ನ ನನ್ನ ಯೆದೆಯಂಗಳದ ಹೊರಗೂ ಒಳಗೂ...
ಬೆಳುದಿಂಗಳನುಂಡು ನೆಲವ ತಬ್ಬಿದ ಪಾರಿಜಾತದ ಬೇರಿಗೂ, ಕಾದ ನೆತ್ತಿಗಿಷ್ಟು ನೆರಳನೂ ಊಡದ ಜಾಲಿಯ ಮುಳ್ಳಿಗೂ ಅದೇ ಪ್ರೀತಿ ರಸವ ಬಡಿಸುವ ಬೆಳಗು...
ಪ್ರೀತಿ ನಗೆಯ ಲಾವಣ್ಯ ಬೆಳಗು...
ಶುಭದಿನ... 🤝🫂
ಮೈಯ್ಯೆಲ್ಲಾ ಕಣ್ಣಾದ ಬೆಳಕಿನ ಒಡಲ ದಿಟ್ಟಿ ಪ್ರೀತಿ...
ಮಡಿಲಲಿ ದಾರಿದೀಪಗಳ ಅಕ್ಷಯ ಪಾತ್ರೆಯಿರುವ ಪ್ರೀತಿಯ ಮೂಲ ಬಣ್ಣ ಬೆಳಕು...
ಪ್ರೀತಿ ಬೆಳಕಿನ ದೃಶ್ಯ ಕಾವ್ಯದಾರಂಭ ಬೆಳಗು...
ಶುಭದಿನ... 🤝🫂
ಇರುಳ ತುಂಬಾ ಸೊಕ್ಕಿ ಉರಿದು ಉಕ್ಕಿ ಯೆದೆಯ ಮೇಲೊರಗಿದ ನನ್ನೊಡನಾಡಿ ಬೆಳಕು ಬಿಂಕದಲಿ ಸಾಕಿನ್ನೆಂದು ಈ ತೋಳಿಂದ ಕೊಸರಿ ವಸನವನರಸುವಾಗ ಕೊರಳ ತಿರುವುಗಳ ಅಲಂಕರಿಸಿದ ನನ್ನ ಹಸಿವಿನ ಗುರುತುಗಳ ಸೋಕಿದ ಛಳಿ ಗಾಳಿ ಕಂಪನಕೆ ಅಮಲುಗಣ್ಣಲಿ ಮೋದದಿ ನಕ್ಕಾಗ - ಬೆಳಗಾಯಿತು...
ಶುಭದಿನ... 🍬
ನೇಹೀ -
ಪ್ರತಿ ಬೆಳಗನೂ ಪ್ರೀತಿ ರೆಕ್ಕೆಯ ಬಿಚ್ಚಿ ಕನಸಿನ ಗಗನವ ಅಳೆದು ಸಂಭ್ರಮಿಸಲು ಇನ್ಯಾವ ಕಾರಣ ಬೇಕು ಹೇಳು...
ಈವರೆಗಿನ ಎಲ್ಲಾ ಬೆಳಗಿಗೂ ನಾನೂ ನೀನೂ ಕಣ್ತೆರೆದೇ ಸಾಕ್ಷಿಯಾದ ದಿವ್ಯ ಆಮೋದಕಿಂತ...
ಉಸಿರ ಜೀವೋತ್ಸವಕಿಂತ ದೊಡ್ಡ ಮಹೋತ್ಸವ ಯಾವುದಿದೆ...!!
ಶುಭದಿನ... 🤝🫂
ಶುಭವೆಂದರೆ ಮತ್ತೇನಲ್ಲ - ಬೆಳಕಿನ ಕೂಸು ಯೆದೆಯ ತೊಟ್ಟಿಲಲಿ ದೇವನಗೆ ಬೀರುವುದು...
ಭಾವಕೋಶ ಮತ್ತು ಬುದ್ಧಿಕೋಶ ಜೊತೆ ಸೇರಿ ಪ್ರೀತಿಕೋಶವ ಕಾಯುವುದು...
ಶುಭದಿನ... 🤝🫂
ಪ್ರೀತಿ ಬೆಳಕಿನ ಕೂಸಿರಬಹುದು...
ಬೆಳಕಿನ ಆಳ ವಿಸ್ತಾರಗಳ ಅನುಭಾವ ದಕ್ಕಲು ಪ್ರೀತಿ ಬೆಳಕಿನ ಭಾಷೆಯೂ ಇರಬಹುದು...
ಬೆಳಕು ಎದೆಗೂಡ ಇಣುಕಿದರೆ ಪ್ರೀತಿ ಶುಭದ ಹೊಸಿಲಕ್ಕಿ ತುಳಿದು ಹೊಲಿಯಾಗಿ ಯೆದೆಮನೆಯ ಸೇರಬಹುದು...
ಎನ್ನ ಯೆದೆಬೆಳಕು ನಿನ್ನಂಗಳದ ಪ್ರೀತಿ ಹೂವಾಗಿ ಅರಳಲಿ ಮತ್ತು ಅದಲೂ ಬದಲು...
ಶುಭದಿನ ನೇಹೀ... 🤝🫂
ಶುಭವನಲ್ಲದಿದ್ದರೂ
ಶುಭದ ಸಂದೇಶವನಾದರೂ ತಂದು ಸುರಿ ಹಗಲೇ...
ನಗುವನಲ್ಲದಿದ್ದರೂ
ನಗೆಯ ಕನಸನಾದರೂ ಎದೆಗಾತುಕೊಂಡು ದಾಟಿಬಿಡುತ್ತೇನೆ (ದೀ)ದಿನ ಕಾಲವ...
ಶುಭದಿನ... 🤝🫂
ನಿನ್ನ ಕಣ್ಣಲ್ಲರಳುವ ಎನ್ನ ನೆನಪಿನ ತಾವರೆ ನಿನ್ನ ದಿನದಾರಂಭಕೆ ನಗೆಯ ಘಮ ಸುರಿದರೆ - ಬೆಳಗು ಪ್ರೀತಿಯ ಬಾಯಲ್ಲಿ ಶುಭದ ಶಕುನವ ಹೇಳಿಸಿ ಮೈಮನಕೆ ಬೆಳಕಿನ ಕಿಡಿ ತಾಗಿಸಿ ತಟ್ಟಿ ಎಬ್ಬಿಸಿದಂತೆ ಲೆಕ್ಕ...
ನನ್ನ ಶುಭದಿನ - ನಿನಗೂ ಶುಭವೇ ಹಾರೈಕೆ... 🤝🫂
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Thursday, December 11, 2025
ಗೊಂಚಲು - ನಾಕ್ನೂರಾ ಎಪ್ಪತ್ತು ಮೇಲಾರು.....
Subscribe to:
Post Comments (Atom)
No comments:
Post a Comment