Thursday, September 6, 2018

ಗೊಂಚಲು - ಎರಡ್ನೂರಾ ಎಪ್ಪತ್ನಾಕು.....

ಹಾದಿ ಪಾದಕ್ಕೆ ಹೇಳಿದ ಪಾಠ..... 

ನೀ ನಂಬಲಾರದ ಅಪ್ರಿಯ ಸತ್ಯ"ನಾನು..."
ನೀ ನಂಬಿರೋ ಗಾಢ ಸುಳ್ಳು"ನಾನು..."
ನನ್ನ ಉರಿಯಲಿ ನಾನೇ ಬೇಯುವ ನಗ್ನತೆಯು "ನಾನು..."
ನಾನಿಲ್ಲಿ ನಾನೆಂದರೆ ನಾನು ಮಾತ್ರ...
#ಬದುಕು#ಸಾವು
↻↢↯↯↣↺

ಜೊತೆಯಿದ್ದು ಒಂಟಿಯಾಗುವುದಕಿಂತ ಧಿಕ್ಕರಿಸಿ ಏಕಾಂಗಿಯಾಗುವುದು ಹಿತವೇನೋ...
ನನ್ನ ಭಾವಗಳಲ್ಲಿ, ಕ್ರಿಯೆ ಪ್ರಕ್ರಿಯೆಯ ನಿಲುವುಗಳಲ್ಲಿ ಸ್ಪಷ್ಟತೆ ಇಲ್ಲದೇ ಹೋದಲ್ಲಿ ನನಗೆ ನಾನು ಪ್ರಾಮಾಣಿಕನಾಗಿರಲು ಅದ್ಹೇಗೆ ಸಾಧ್ಯ...!?
ಅಂತಿಮವಾಗಿ ನಾ ಜೀವಿಸೋದು ನಂಗೋಸ್ಕರ - ನೋಡೋರ ಕಣ್ಣಿನ ಕಾಮಾಲೆ ಅದು ಅವರ ಸಮಸ್ಯೆ...
ಕುಹಕದ ಬಾಯಿ ಮುಚ್ಚುವಂತೆ ಬದುಕಬೇಕು ಅಥವಾ ಅವನ್ನು ನಿರ್ಲಕ್ಷಿಸಿ ಮುನ್ಸಾಗಬೇಕು - ಎರಡನ್ನೂ ಮಾಡಲಾಗದ ನನ್ನ ಕೀಳರಿಮೆಗೆ ಅವರಿವರ ದೂರಲೆಂತು...?
ಮೊದಲಾಗಿ ನನಗೆ ನಾನು ಪ್ರಾಮಾಣಿಕನಾಗಿರಬೇಕು - ಅಂತಿಮವಾಗಿ ನಾ ಜೀವಿಸೋದು ನಂಗೋಸ್ಕರ...
#ಹಾದಿ_ಪಾದಕ್ಕೆ_ಹೇಳಿದ_ಪಾಠ...
↻↢↯↯↣↺

ಗೆದ್ದದ್ದು ನಾನಲ್ಲ - ನೀನು ಗೆಲ್ಲಿಸಿಕೊಂಡದ್ದು...
ಎಷ್ಟು ಸೋತರೆ ಮೌನ ಸಿದ್ಧಿಸೀತು ನನ್ನೊಳಗೂ...
ಮೆದುವಾಗಲಾ ಇಲ್ಲಾ ಬಿಗುವಾಗಲಾ...???
ಎಲ್ಲಾದಕ್ಕೂ...........ನೀವು ಕರೆ ಮಾಡುತ್ತಿರುವ ಚಂದಾದಾರರು 'ನಿಮ್ಮ' ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ..‌.
#ಮಾತು #ಮೌನ
↻↢↯↯↣↺

ಅಯ್ಯೋ ಮರುಳೇ -
ಸ್ವಾತಂತ್ರ್ಯ, ಸ್ವೇಚ್ಛೆಗಳು ಕೊಂದದ್ದಕ್ಕಿಂತ ನೂರು ಪಟ್ಟು ಹೆಚ್ಚಾಗಿ ಭಾವ, ಬಂಧ, ಸಂಬಂಧಗಳನ್ನು ಕಾವಲಿನ ಕತ್ತಿ ಹಿಡಿದ ಈ ಬೇಲಿಗಳೇ ತಿಂದು ಹಾಕುತ್ತವೆ...
ಭಾವಕ್ಕೆ ಬೆರಗು ತುಂಬಲಾರದೇ ದೇಹದ ಬೆವರಿಗೆ ಬೆಚ್ಚುವ ಲೋಕವೇ -
ಪ್ರೀತಿಯ ಪಾವಿತ್ರ್ಯವ ಕಾಯುವುದು ಭಯದ ಬಂಧನದ ಗಡಿಯಲ್ಲ, ಮಡಿ ಮಡಿಯಾದ ಕಟ್ಟಳೆಯ ಗುಡಿಯಲ್ಲ; ಬದಲಾಗಿ ಪ್ರೀತಿ ಮಾಗುವುದು, ಬಾಗುವುದು ಖಾಯಿಲೆ ಬೀಳದ ಪಕ್ವ ಮನಸಿನ ಸುಂಕವಿಲ್ಲದ ಕಾಳಜಿಯ ಕುಡಿಯಲ್ಲಿ...
#ವಿಪರೀತದ_ಸತ್ಯ..
↻↢↯↯↣↺

ಬಾಗುವಿಕೆಯ ಬಲದ ಮೇಲಲ್ಲವಾ ಬಂಧದ ಬಾಳಿಕೆ...
#ನಾನು...
↻↢↯↯↣↺

ಮೌನವ ಸಲಹಿಕೊಳ್ಳಲರಿಯದ ಮನಸು ಸುಖಾಸುಮ್ಮನೆ ಮಗುಚಿಬಿದ್ದರೆ ಮಾತಿಗೆ ಉಗ್ಗು ರೋಗ............... ಕಷ್ಟ ಕಷ್ಟ....... ಎಷ್ಟಂತ ಸುಳ್ಳು ಸುಳ್ಳೇ ನಗುವುದು............ ಎಲ್ಲಿಯೂ ಸಲ್ಲದ...... ಯಾರೂ ಒಲ್ಲದ....... ವಿಕ್ಷಿಪ್ತ ಅಸ್ತಿತ್ವ...............‌‌ ದಾಟಿ ಬಂದ ಹಾದಿಯ ತುಂಬಾ ನೋಡನೋಡುತ್ತಾ ಮುರಿದುಬಿದ್ದ ಒಂದೊಂದೇ ಒಂದೊಂದೇ ಮೆಟ್ಟಿಲು.................... ಕೊನೆಗುಳಿದದ್ದು ಅಸ್ವಸ್ಥ ಉಸಿರೊಂದೇ......
#ನಾನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರಾ ಎಪ್ಪತ್ಮೂರು.....

ಶಬ್ದ ಸೋಲುವ ಸಾಹಿತ್ಯ..... 

ಪ್ರಕೃತಿ ಪ್ರೇಮದೊಡನೆ ಸಂವಾದಕ್ಕಿಳಿದಾಗಲೆಲ್ಲ ಒಳಗುಡಿಯ ಜೀವದೊಲುಮೆಯ ಕಂದೀಲು ಕರುಳ ಕಸರಿನ ಕಿಟ್ಟವ ಕೊಡವಿ ನಗೆಯ ಹೊನಲುಕ್ಕಿ ಉರಿಯುತ್ತೆ - ಅವಳ ನುಡಿಯೆಂದರೆ ಮರಳಿ ಮರಳಿ ಮೊರೆವ ಜೀವ ಭಾವ ಮುರಳಿ...
ಅದಕೆಂದೇ ಸೋಲು, ಸಾವು, ನೋವುಗಳು ಸೊಕ್ಕಿ ಕಾಡುವಾಗಲೆಲ್ಲ ಪ್ರಕೃತಿಯ ಮಡಿಲು ಅಡಿ ಮುಡಿಯ ಕಾಡುತ್ತೆ - ಮತ್ತೆ ಜೀವಿಸಲು ಕಾರಣಗಳ ಹೊಂದಿಸಿಕೊಳ್ಳಲು ಅವಳಲ್ಲಿಗೆ ಓಡುತ್ತೇನೆ - ಹುಚ್ಚಾಟದ ಪುಂಡ ಮಗುವಾಗುತ್ತೇನೆ...
#ನಾನುಳಿಯುತ್ತೇನೆ_ನನಗೆ...
↬↩↨↨↪↫

ಬದುಕೇ -
ನನ್ನ ಪ್ರೀತಿಯ ನಂಬಿ ನಾ ನಿನ್ನ ಪ್ರೀತಿಸಿದ್ದು...
ತಿರುಕನ ಹಣೆಯ ಕನಸಿನ ನಸೀಬು ನಿನ್ನ ಪ್ರೀತಿಯೂ ಇಷ್ಟು ಸಿಕ್ಕಿದ್ದು...
ಕೆನ್ನೆ ತಟ್ಟುವ ಮಳೆ ಹನಿಯೂ ಬೆಚ್ಚಗೆ ನಿನ್ನ ಹರಿವಿನೊಟ್ಟಿಗೆ...
#ಶಬ್ದ_ಸೋಲುವ_ಸಾಹಿತ್ಯ...
↬↩↨↨↪↫

ಹಸಿರು ಗರ್ಭ ಧರಿಸಿ ಮಳೆಯ ಕೊಯ್ಲೋ - ಮಳೆ ಬಿತ್ತಿದ ಹಿತ್ತಲ ಮದ್ದಿನ ಬೀಜ ಈ ಹಸಿರ ಪೈರೋ - ಯಾರು ಯಾರಿಗೆ ನೆಳಲೋ, ಬೆಳಕೋ - ಏಸು ಸೊಬಗಿನ ಬೆಡಗು ಬಿನ್ನಾಣ; ಕಸರಿಲ್ಲದ ಭುವಿ ಬಾನು ಸುರತ ಚಕ್ರ ಪಯಣ...
ಗಾಳಿ ಗೊಲ್ಲನ ಕೊಳಲ ಇಂಪು - ಮೈಮನದ ಮುಡಿ ಬಿಚ್ಚಿದ ನಲಿವಿನುಲಿಯ ಲೋಬಾನದ ಕಂಪು - ಈ ಮಿಣುಕು ಮುಚ್ಚಂಜೆಯ ಚುಕುಬುಕು ಹಾದಿಯ ಚೊಕ್ಕ ನಗೆಯ ಮಜ್ಜನೋತ್ಸವ...🎊💞
#ಶಬ್ದ_ಸೋಲುವ_ಸಾಹಿತ್ಯ...
↬↩↨↨↪↫

ಮನೆಯ ದಣಪೆ ಆಚೆಯ ಬೇಣದಲ್ಲಿ ದಿನಕ್ಕೊಂದು ಹೊಸ ಕಾಡು ಸೊಪ್ಪಿನ ಮನೆ ಕಟ್ಟಿ ಅಪ್ಪ ಅಮ್ಮನ ಆಟ ಆಡೋವಾಗ ಅಮ್ಮನ ಪಾತ್ರ ಮಾಡಿ ಒರಳು ಗುಂಡನ್ನು ಪಾಪು ಅಂತ ಮಡಿಲಲ್ಲಿ ಆಡಿಸ್ತಿದ್ದ ಮುದ್ಮುದ್ದು ಹುಡ್ಗೀರೆಲ್ಲ ಈಗ ಅಖಂಡ ಸಂಸಾರಿಗಳಾಗಿ ಎಲ್ಲಿ ಕಳೆದೋಗಿದಾರೋ...
#ಕಳೆದೋದ_ಬಾಲ್ಯದ_ಬಾಲಗಳು...
#ಮಲೆನಾಡ_ಮಡಿಲು...
↬↩↨↨↪↫

ಭಾವಕ್ಕೆ ಪದ ದಕ್ಕಿದ ಘಳಿಗೆಯ ಕವಿಯ ಮಂದಹಾಸವ ಕದ್ದು ಸವಿದೆ - ಕವಿತೆ ನನ್ನದಾಯಿತು...😍
↬↩↨↨↪↫

ಕೊಳಲ ಮಡಿಲಲಡಗಿಸಿಕೊಂಡು ನಾದವ ಜಗಕೆ ಬಿಟ್ಟಳು - ಕೃಷ್ಣ ಮತ್ತೆ ಮತ್ತೆ ಹುಟ್ಟಿದ...
ಕರಿಯನ ದಿನವಂತೆ - ಬೆಣ್ಣೆ ರಾಧೆ ನೆನಪಾದಳು...
ಅವಳು ಕೊಳಲ ಕಾಯ್ದಳು - ಇವ ಪಾಂಚಜನ್ಯವ ಮೆರೆದ...
#ಅಷ್ಟಮಿ...
↬↩↨↨↪↫

ದಾರಿಯ ಬಿಳಲು ಬೆಳಕನ್ನು ಮಿಂದಾಗ ಹುಳವ ಹೆಕ್ಕೋ ಬೆಳ್ಳಕ್ಕಿಯ ಕಣ್ಣಲ್ಲಿ ಗೂಡ ಬಾಗಿಲು ಕಾಯೋ ಮರಿಯ ಚಿತ್ರ...
#ಶಬ್ದವಿರದ_ಸಾಹಿತ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರಾ ಎಪ್ಪತ್ತೆರಡು.....

ಪ್ರೇಮ ಹೊಕ್ಕುಳ ಬೆಂಕಿ.....  

ಸಾಖೀ -
ಈ ಪ್ರೇಮಕ್ಕಿರೋ (?) ಭ್ರಮೆಯ ಜೀವಿಸುವ ಮಾಯಕ ತೀವ್ರತೆ ನೀ ತುಂಬಿ ಕೊಡುವ ಮಧು ಬಟ್ಟಲ ಉನ್ಮತ್ತ ಅಮಲಿಗೂ ಇಲ್ಲವಲ್ಲೇ...!!!
#ಕತ್ತಲ_ಸತ್ಯ...
⇴⇵⇴

ಜೋಗಿಯ ಕಾಲಿನ ಜಂಗಮ ಮೋಹವೇ -
ಓಡೋ ಮೋಡದ ಮೂಗು ಚಿವುಟೋ ಘಾಟಿ ಗುಡ್ಡದ ಮೇಲೆ ನೆನಪ ಮೇಯುತ್ತ ಕಾದು ಕೂತಿದ್ದೇನೆ ಕಣೇ - ಮರಿ ಕನಸಿಗೆ ತುರಾಯಿ ಕಟ್ಟಲು ನೀ ಬರಬಹುದಾ ನವಿಲ ಗರಿ ಹೆಕ್ಕೋ ನೆಪ ಹುಡುಕಿಕೊಂಡು...
ಹಸಿ ಹುಲ್ಲಿಗೆ ನಿನ್ನ ಆಸೆ ಹುಯಿಲಿನ ಮೆದು ಪಾದದ ಬಿಸಿ ತೀಡುವಾಗ ಬೆನ್ನ ತುಂಬ ಮೆರೆವ ಹೆರಳ ಘಮ ಸೋಕಿ ಕಾಡು ಮೊಲ್ಲೆಯೊಂದು ಮೆಲ್ಲ ಕಂಪಿಸೀತು...
ಕೇದಗೆಯ ತೋಪನು ಬಳಸಿ ಕಾಡು ಕೋಳಿ ಕೆದರಿದ ಹಾದಿಯಲಿ ನಿನ್ನ ಹೆಸರ ಬರೆದಿಟ್ಟು ಬಂದಿದ್ದೇನೆ - ಆ ಪುಳಕಕ್ಕೆ ಪುಟ್ಟ ಮೊಲೆಗಳ ಕಟ್ಟು ಬಿಗಿದರೆ ಹರೆಯಕ್ಕೆ ಹಗಲು ಅಡ್ಡವಿದೆ ಅನ್ನದಿರು - ಒಂದು ಹೆಜ್ಜೆ ಅಡ್ಡ ಇಟ್ಟರೆ ಗುಡ್ಡದ ಕಿಬ್ಬಿಯ ಇಬ್ಬದಿಗೂ ಜೊಂಪೆ ಜೊಂಪೆ ಹಸಿರು ಪೌಳಿಯ ಕಾವಲಿದೆ...
ಪ್ರಕೃತಿ ಎಂದಿಗೂ ಪ್ರಣಯ ಪಕ್ಷಪಾತಿ, ನನ್ನಂತೆ - ಒಲ್ಲೆ ಒಲ್ಲೆ ಅನ್ನುತಲೇ ಒಪ್ಪಿ ನಾಭಿ ಒಲೆಯ ಹೊತ್ತಿಸಿಬಿಡು, ನೀನೂ ನನ್ನಂತೆ - ಒಳಗೊಳಗೇ ಕಾಡಲು ನಾಳೆಗಿಷ್ಟು ಮಧುರ ಪಾಪದ ನೆನಪುಳಿಯಲಂತೆ...
ಕಿಬ್ಬದಿಯ ಕೀಲು ಕನಲುವಂತೆ ತಬ್ಬಿಕೊಳಲಿ ಹರೆಯ ಮತ್ತೆ ಮತ್ತೆ -  ಬೆವರಲ್ಲಿ ಬೆವರು ಬೆರೆವಂತೆ ಜೀಕುವಾ ಮೈಯ್ಯಲ್ಲಿ ಮೈಯ್ಯ ಮತ್ತೆ ಮತ್ತೆ...
ಹೆದರಬೇಡ ಮಳೆ ಮತ್ತು ಇಳೆ ಪ್ರಣಯದ ವಿರುದ್ಧ ಸಾಕ್ಷಿ ಹೇಳುವುದಿಲ್ಲ; ಅಂತೆಯೇ ಪ್ರತಿ ಸಂಜೆಗೂ ದಿಕ್ಕು ಬದಲಿಸೋ ಜೋಗಿ ತಾ ನಡೆದ ಹಾದಿಯಲಿ ಅವನ ನೆನಹುಗಳ ಹೊರತಾದ ಗುರುತುಳಿಸುವುದಿಲ್ಲ...
#ಇಷ್ಟಕ್ಕೂ_ಒಡಲಾಗ್ನಿ_ಸುಡದೇ_ಸುಖ_ಹುಟ್ಟೀತೆಂತು...
⇴⇵⇴

ಕಾಲಕೂ ಪ್ರೇಮವ ಸಾಕಿದ್ದು 'ಸುಳ್ಳೇ' ಅನ್ಸುತ್ತೆ...
#ಸಾವನೂ_ಸುಳ್ಳೆಂದವನು...
⇴⇵⇴

ಮಳೆಯ ಮುಸ್ಸಂಜೆಯಲಿ ಜೀವ, ಭಾವಗಳೆರಡೂ ಬಯಕೆ ಬೆಂಕಿಯ ತಬ್ಬಿ ನಿನ್ನ ಹೆಸರ ಕೂಗುತ್ತವೆ...
#ಪ್ರೇಮ_ಹೊಕ್ಕುಳ_ಬೆಂಕಿ...
⇴⇵⇴

ಪಡೆಯುವುದಷ್ಟನೇ ರೂಢಿ ಮಾಡಿಸಿದ್ದು ನಿಮ್ಮದೇ ತಪ್ಪಲ್ಲವಾ.....
#ಪ್ರೀತಿ_ಪೇರಳೆ...
⇴⇵⇴

ಅವನು ಕೊಂದ ಪ್ರೇಮ (?) ಅವಳಲ್ಲಿ ಕೊಳೆಯುತ್ತಿದೆ...
#ಬಲಿ...

ಘೋರಿಯ ಮೇಲೆ ಗರಿಕೆಯಿಷ್ಟು ಹುಟ್ಟಲಿ ಈ ಮಳೆಗೆ...
#ಪ್ರಾರ್ಥನೆ...

ಪ್ರೇಮಿಯೆಡೆಗಿನ ಹುಚ್ಚು ಅಳಿದ ಮೇಲೆ ಬದುಕ ಪ್ರೇಮ ತುಸು ನಿರಾಳ ಉಸಿರಾಡುತಿದೆ...
#ನನ್ನೊಳಗಿನ_ಹಣತೆ...
⇴⇵⇴

ನಿನ್ನ ಕುಪ್ಪಸ ಗೂಡಿನ ಶ್ರೀಮಂತ ಸೀಮೆಯಲಿ ಸ್ವಯಂ ಬಂಧಿಯಾದ ನನ್ನ ಕಣ್ಣ ಬೆಳಕಿಗೆ ತೋಳಾಸರೆ ನೀಡಿ ನೀನೆ ಕಾಯಬೇಕು...
ಬಿಗಿದ ಉಸಿರಿಗೆ ಕಂಕುಳ ಬೆವರ ಉನ್ಮತ್ತ ಘಮದ ಉರಿ ತುಂಬಿ ಈ ಕಾಯವ ಕಾಯಿಸಬೇಕು...
ನಿನ್ನ ಕಿವಿಯ ತಿರುವಿನ ಕಳ್ಳ ಮಚ್ಚೆಯಿಂದ ಹೊರಳಿ ಕೊರಳ ಶಂಖ ಮಾಲೆಗೆ ನನ್ನ ನಾಲಿಗೆ ಮೊನೆ ತೀಡಿ, ನನ್ನೊರಟು ಬೆನ್ನ ಹಾಳಿಯಲಿ ನಿನ್ನುಗುರ ಉಂಗುರ ಕೇಳಿ...
ಆಸೆ ಬೆಂಕಿಗೆ ಸಿಕ್ಕ ಐದರ ಮೇಲರ್ಧ ಅಡಿ ಆಕಾರವ ಊರು ಮೋರೆಯ ತೇವದಲದ್ದಿ ನೀರೇ ನೀನೆ ಕರಗಿಸಬೇಕು...
ಉತ್ಕಂಠ ಕೊಂಡಾಟದ ಉರುಳುರುಳು ಉಜ್ಜುಗದಿ ಮಂಚದ ಮೆತ್ತೆ ಹೊತ್ತಿ ಸ್ವರ್ಗ ಸಾಲಿನ ದೀಪ ಉರಿಯಬೇಕು...
ಹುಡುಗೀ, ನಿನ್ನ ತೋಳ್ತೊಡೆಗಳ ಹೂಂಕಾರ, ಸುಖೀ ಮುಲುಕಿನ ಝೇಂಕಾರಗಳಲಿ ಒರಟೊರಟು ಗಂಡು ಮೈಯ ಕೀಲುಗಳೆಲ್ಲ ಕಡೆದು ಒಂದೇಟಿಗೇ ಈ ಜನ್ಮದ ನಾಭಿ ಹಸಿವಿನ ಜಾಡ್ಯ ಹರಿಯಬೇಕು...
ಬೆವರ ಮಳೆಯ ಮಿಂದ ಮೈಯ್ಯಲ್ಲಿ ಮನಸೂ, ಕನಸೂ ಹೊಸದಾಗಿ ಅರಳಬೇಕು...
#ಪ್ರಕೃತಿ_ಪೂಜೆಗೆ_ಹರೆಯದ_ಪೌರೋಹಿತ್ಯ...
⇴⇵⇴

ಸುಡು ಸುಡು ಒಂಟೊಂಟಿ ಸಂಜೆಗಳ ಒರಟು ಅಂಗೈಯ ಮುರುಕು ರೇಖೆಗಳಿಗೆ ಕನಸ ಬೆವರ ನವಿರು ಘಮ ‌ಸವರಿದ ರೇಷಿಮೆ ಪಕಳೆಗಳ ಸ್ವರ್ಗ ಸೀಮೆಯ ಕುಸುಮ ಅವಳು...
ಸೋತ ಹಗಲಿನ ಹೆಗಲಂಥ ನಿತ್ರಾಣ ಇರುಳಲೂ ಆರದಂತೆ ಕಾಯ್ದುಕೊಟ್ಟು ನಾಭಿ ಜ್ವಾಲೆಯ; ಮರು ಹಗಲ ಗೆಲುವ ಎತ್ತಿ ಕೊಡೋ ಮಡಿಲು ಅವಳಲ್ಲದೇ ಇನ್ನಾರು...
#ಅವಳು_ಪಾರಿಜಾತ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರಾ ಎಪ್ಪತ್ತೊಂದು.....

ಬಣ್ಣ..... 

ಹೌದೇ ಹೌದು... ನಾನೀಗ ಬದಲಾಗಿದ್ದು ಹೌದು - ನಿನ್ನ ಕಣ್ಣಲ್ಲಿ; ಅಷ್ಟೇ, ಮತ್ತದು ಅಷ್ಟೇ...
#ಮಾಸಿದ_ಬಣ್ಣ...
#ನಿನ್ನೆಯಂತಿಲ್ಲದ_ಹಾದಿ...
↢↡↟↣

ಎಷ್ಟು ಬಾರಿ ಕ್ಷಮೆ ಕೇಳಿದರೆ ಅಷ್ಟು ಬಾರಿ ಮಾಡಿದ ಅದೇ ತಪ್ಪು ಸರಿಯಾದೀತು...
ಮೃದುವಾಗಿ ತಾಕಲು ಬಾರದವನ ಎದೆಯಲ್ಲಿ ಪ್ರೀತಿ ಎಷ್ಟಿದ್ದರೇನು ಬಂತು...
ಕಿವಿಯಾಗಲಾರದವನ ಮಾತಿನ ಅಹಂಕಾರಕ್ಕೆ ಜೊತೆಯ ಕರುಳ ನೋವೆಂತು ಅರಿವಾದೀತು...
'ಹತ್ತು ಹೆಜ್ಜೆ ನಿನ್ನ ಏಕಾಂತ ಎನಗೆ ಬೇಕು' ಎಂಬಷ್ಟೂ ಯಾರೊಬ್ಬರದೂ ಒಳನಾಡಿಯ ಮೀಟಲಾರದವನಿಗೆ ಮೌನ ಸಿದ್ಧಿಸುವುದೆಂತು...
ಎಷ್ಟೆಲ್ಲ ನೇಹಗಳ ಒಡನಾಟವಿದ್ದೂ ಒಂದಾದರೂ ಹೃದಯದ ಸೊಲ್ಲಾಗದವನ ಬದುಕ ಗೆಲ್ಲುವ ಹಠದ ಗಳಿಕೆಯೆಂದರೆ: ಜಾಳು ಮಳೆಗೂ ಬೆದರುವ ಹಡಾಲೆದ್ದ ಹಾಳು ಮನಸು - ಕೊಳೆತ ಕಳ್ಳಿಯಂಥ ಸಂಜೆಗಳು - ಬೆತ್ತಲೆ ಕಣ್ಣು - ಕಾಡು ಕನಸು - ಮನಸ ಬಸಿರುಗಳ ಸುಡದೇ ಒಂಟಿ ಹಾದಿ ಸಲೀಸಲ್ಲ ಎಂಬ ಹುಂಬ ಸಮಾಧಾನ.....ಅಷ್ಟೇ....
#ಧಗಧಗಿಸಿ_ಕುಣಿವ_ಚಿತೆಯ_ನೆಳಲು...
#ನಾನು...
↢↡↟↣

ನಂಬಿಕೆ ಅಂದರೆ ಇಷ್ಟೇ ಇರಬೇಕು - ನಂಬಲು ಶಕ್ಯವಾದ ಸಮರ್ಥನೆಗಳಿರುವ 'ಸತ್ಯವಾದ ಸುಳ್ಳು...'
#ಕರ್ಮಾಕರ್ಮಫಲ...
↢↡↟↣

ಮಾತು ಕಲಿತ ಮನುಷ್ಯನ ಬಹು ದೊಡ್ಡ ಸಾಧನೆ: ಸುಳ್ಳನ್ನು ಸುಂದರವಾಗಿ ಬದುಕೋ ತಂತ್ರ...
#ಬಣ್ಣ...
↢↡↟↣

ಯಾವುದೇ ಒಂದು ವಿಷಯ ವಿಚಾರದ ಸತ್ಯಾಸತ್ಯತೆಯನ್ನು ಪ್ರಮಾಣೀಕರಿಸುವ ಘನ ತಕ್ಕಡಿ - "ನಾನು..."
#ಬಣ್ಣ...
↢↡↟↣

ತೊರೆದ ಹಾದಿಯ ಅಳಿದುಳಿದ ನೆನಪಿಗೆ ಹೊಸ ಬಣ್ಣ ಬಳಿದಂತೆ, ಮಟ ಮಟ ಮಧ್ಯಾಹ್ನ ಹರೆಯದ ಹರಿವಿನ ಮೊದಮೊದಲ ಮೋಹ "ನೀನೇ ಬರಿ ನೀನೇ, ಎಲ್ಲೆಲ್ಲೂ ನೀನೇ" ಅಂತ ತುಂಟ ಸಂದೇಶ ಕಳಿಸಿದರೆ ಬಡ ಪಾಪಿ ಜೀವ ತಡೆದೀತು ಹೇಗೆ ಒಳಗಿನ ಉರಿಯ... 😜
#ದಣಿವು_ನೀಗುವ_ಸಣ್ಣಪುಟ್ಟ_ಸಲಿಲಗಳು...😍
↢↡↟↣

ಹಬ್ಬಿ ಹಸಿರಾಗಿರಲಿ ನೇಹ ಬಂಧ ಮೀರಿ ದೇಶ ಕಾಲ...
ನಗೆಯ ಅವಲಕ್ಕಿ ಬೆಲ್ಲವಾಗಿ ತಬ್ಬಿಕೊಂಡಂತೆ ಕರಿಯ ಕುಚೇಲ...
#ನೇಹವೆಂಬೋ_ನೆತ್ತಿಯ_ನೆರಳು...
                                       ತೇದಿ: 05-08-2018

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, September 5, 2018

ಗೊಂಚಲು - ಎರಡ್ನೂರಾ ಎಪ್ಪತ್ತು.....

ಆಯಿ_ಆನು..... 

ಇಬ್ಬರೂ ಒಟ್ಟಿಗೇ ಕೆಮ್ಮುತ್ತೇವೆ - ಅವಳು ಮುಂಬಾಗಿಲ ಎಡ ಬಲದಲ್ಲಿ, ನಾನು ಅಂಗಳದಂಚಲ್ಲಿ...
ಅವಳು ಅತ್ತ ಮುಖ ತಿರುವ್ತಾಳೆ - ನಾನು ಸರಸರನೆ ಸರಗೋಲು ಸರಿಸ್ತೇನೆ...
ಇಬ್ಬರೂ ನಮ್ಮ ನಮ್ಮ ನೆಳಲಲ್ಲಿ ಒಬ್ಬರನ್ನೊಬ್ಬರು ಹುಡುಕಿಕೊಳ್ತೇವೆ - ನೆರಳು ನರಳಿದಂಗೆ ಅಸ್ಪಷ್ಟ ಕಣ್ಣಿಗೆ...
ಅಲ್ಲಿಂದಾಚೆ ಖಾಲಿ ಮನೆಯೊಳಗೆಲ್ಲ ನಾನು - ಹಾದಿ ಬಯಲ ತುಂಬಾ ಅವಳು...
#ವಿದಾಯ...
↯↹↹↹↯

ಸಾವೇ ಇಲ್ಲವೇ ನೋವಿಗೆ...??
ನಗು ಕೂಡಾ ನೋವಿನ ಸುಂದರ ಮುಖವಾಡವಾ...??
ಸಾವೂ ಸಹಿತ ನೋವಿನ ಸ್ಥಾನ ಪಲ್ಲಟವಷ್ಟೇಯೇನೋ...
ಕೇದಗೆಯ ಕಂಪು - ಮುಳ್ಳು ಹಾದಿ - ಸರ್ಫ ಬಂಧ - ಬದುಕಿನ ಬಣ್ಣ...
ನಗೆಯ ಹಿಂದಣ ನೋವಿಗೆ ನಾವೇ, ನಾವಷ್ಟೇ ವಾರಸುದಾರರು....
#ಬೆಳಕಿಗೆ_ಹಾದಿಯದೇ_ಬಣ್ಣ#ಬಣ್ಣವಿಲ್ಲದ_ಕಣ್ಣಹನಿ...
↯↹↹↹↯

ಅತ್ತಾರೆ ಅತ್ತು ನಿಡುಸುಯ್ಯುವಂತೆ ಅಳು ಒಗ್ಗದ ಹುಂಬನಿಗೆ ನೋವ ನಸನಸೆಯ ದಾಟಿ ಕನಸ ಕುತ್ರಿಯ ಕಾಯಲು ಮೊಗಬಿರಿಯೆ ನಗುವೊಂದೆ ಶಾಶ್ವತ ಆಸರೆ...
#ಸ್ವಯಂಭೂ_ನೋವೂ_ಸ್ವಯಾರ್ಜಿತ_ನಗುವೂ...
↯↹↹↹↯

ಕಂದನಿಗೆ ಉಸಿರು ತುಂಬಲು ಸಾವಿಗೂ ಎದೆ ಕೊಟ್ಟೇನೆಂಬಳು - ತುಂಬು ಬದುಕನೇ ಎಡೆ ಇಟ್ಟೇನೆಂಬಳು... 
ಗೆಳತಿ ಅವಳು ಪುಟ್ಟ ಅಮ್ಮ...
ಅಮ್ಮ ಅಂದರೆ ದೇವನೂ ಬೆದರುವ ಗುಮ್ಮ...
#ಆಯಿ...
↯↹↹↹↯

ಬಣ್ಣ ಮಾಸಿದ ಮೇಲೂ ಬೆಚ್ಚನೆ ಭಾವವನೇ ನೇಯುವುದು ಅಮ್ಮನುಟ್ಟ ಸೀರೆ... 
ಅದರ ಮುದುರಿನ ಕನಸೆಲ್ಲಾ ಹೊತ್ತು ತಿರುಗುವುದು ನನ್ನ ಏಳ್ಗೆಯ ತೇರೇ...
ಅಮ್ಮ ಅವಳು ಪುಟ್ಟ ಗೆಳತಿ - ನನ್ನ ನೆತ್ತಿ ಕಾಯೋ ಬೇಶರತ್ ಪ್ರೀತಿ...
#ಆಯಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರಾ ಅರ್ವತ್ತೊಂಭತ್ತು.....

ಆನು.....  

ಎತ್ತಿಡುವ ಪ್ರತಿ ಹೆಜ್ಜೆಯೂ ಒಂದು ಹೊಸ ಕಲಿಕೆಯ ಪರೀಕ್ಷೆಯೇ; ಹಾದಿಯ ಹಾಳೆಯ ಅಂಕುಡೊಂಕು ಸಾಲುಗಳ ಕಣ್ಮುಚ್ಚಿ ಓದೆ, ಅಲ್ಲಿ ಏನಿದೆಯೋ ಅದನ್ನೇ ಆಲಿಸೆ...
ಜೊತೆ ನಡೆವ, ಟೂ ಬಿಡುವ, ಮುಂದೋಡುವ, ಹಿಂದಡಿಯಿಡುವ, ಎದುರಿಂದ ಬರುವ, ಎದುರಾಗಿ ನಿಲ್ಲುವ ಎಲ್ಲರೂ, ಎಲ್ಲವೂ ಅರಿವಿನ ಓಘದ ಅರವಟಿಕೆಗಳೇ...
ಎದೆ ಗೋಡೆಯ ಮೇಲಿನ ನೋವಿನ ಗೀರುಗಳು, ಕಣ್ಣಂಚಿನ ನಗೆ ಹನಿಗಳೇ ಅಂಕಪಟ್ಟಿ - ಅಂಡಿನ ಮೇಲಿನ ಸೋಲಿನ ಬಾಸುಂಡೆಗಳೂ, ಜುಟ್ಟಿಗೆ ಕಟ್ಟಿದ ಗೆಲುವಿನ ತುರಾಯಿಗಳೂ ಮಂಡೆಗೆ ಬಂಡೆ ಬಲ ತುಂಬುವ ಬಯಲ ಆಟೋಟಗಳು...
ಓದಬೇಕಷ್ಟೇ - ಉಂಡಾಡಿ ಉಡಾಳನೂ ಓದಲೇಬೇಕಷ್ಟೇ - ಮಹಾ ಗುರು ಅಂತಕ ಉಸಿರಿಗೆ ಒದ್ದು ಅವನೂರಿಗೆ ಒಯ್ಯುವವರೆಗೂ ನಿಲ್ಲಿಸುವಂತಿಲ್ಲ ಈ ಊರ ಕಲಿಕೆ...
ಸಾವೆಂಬೋ ಮಹಾಗುರುವಿನ ವಿಧೇಯ ಶಿಷ್ಯ ಈ ಬದುಕು - ನಾನಾದರೋ ಬದುಕೆಂಬ ಪಾಠಶಾಲೆಯ ಅತಿ ದಡ್ಡ ವಿದ್ಯಾರ್ಥಿ - ಶಿಕ್ಷಣದಿಂದ ಕಲಿತದ್ದಕ್ಕಿಂತ ಶಿಕ್ಷೆಯಿಂದ ಕಲಿತದ್ದೇ ಹೆಚ್ಚು...
#ಅರಿವಿನ_ಉರಿಗೆ_ಬಿದ್ದರೆ_ನನಗೆ_ನಾನೇ_ಗುರು...
↟↜↝↜↝↟

"ಅರ್ರೇ ನಿನ್ನ ನಗುವಿಗೇನಾಯ್ತು...!!?
ನಿಂಗೆ ನಗು ಚಂದ..."
ಸಹಚರ ಸಲಿಗೆಯ ವಿಚಿತ್ರ ತಳಮಳದ ಪ್ರಶ್ನೆಗೆ, ಅಕಾರಣ ಪ್ರೀತಿಗೆ ಉತ್ತರ ಎಲ್ಲಿಂದ...? ಹೇಗೆ...??
ಕೆಲವಕ್ಕೆ ಉತ್ತರವಾಗೋದು ಮಾತಿಗೂ, ಮೌನಕ್ಕೂ ಸಲೀಸಲ್ಲ...
ಆದರೊಂದು, ಇಂಥ ಸಣ್ಣ ಸಲಿಗೆಯಿಂದ ಒಳಗೊಳಗೇ ಸೋತು ಸುಸ್ತುಬಡಿದು ಮುರುಟಿ ಹೋದ ಮನಸಿನಲ್ಲೇನೋ ಹೊಸ ಚಡಪಡಿಕೆ - ಹಗುರ ಜೀವಂತಿಕೆಯ ಕದಲಿಕೆ...

ಕೂಸುಮರೀ ಕನಸೇ -
ಕಳೆದುಕೊಂಡ ನಿನ್ನೆಗಳಲ್ಲಿ ನೀನಿದ್ದೆ - ಈ ಸಂಜೆಯ ತೋಯಿಸಲು ಆ ನೆನಪುಗಳಿವೆ - ಅಂತೆಯೇ ಕಳೆದುಕೊಳ್ಳೋಕೇನೂ ಉಳಿದಿರದ ತೂತು ಜೋಳಿಗೆಯ ಫಕೀರನ ನಗು ಬತ್ತಿದ ಕಣ್ಣಲ್ಲೂ ಆಗೀಗ ಮತ್ತೆ ಜೀವಿಸೋ ಸಣ್ಣ ಸವಿ ಸಂಚೊಂದು ಮಿಂಚುವುದು; ಅದು ಉಳಿದಿರೋ ಅಪರಿಚಿತ ಖಾಲಿ ಖಾಲಿ ನಿಸೂರು ನಾಳೆಗಳಿಗಿಷ್ಟು ಹೊಸ ಬೆಳಕ ತುಂಬಿಕೊಳ್ಳುವ ಆಸೆಯ ಬೆರಗು ಮತ್ತು ಭಯ...
ಒಂದು ಮನಸಿಗೆ ನಿನ್ನನೇ ಉಳಿಸಿಕೊಂಡಿಲ್ಲ ಇನ್ನೇನ ಗಳಿಸಿಕೊಂಡೇನು ಅಂತನ್ನಿಸುವ ಹೊತ್ತಿಗೇ ಇನ್ನೊಂದು ಮಗ್ಗುಲಲ್ಲಿ ಕನಸ ಸಾಯಗೊಡಬಾರದು ಮತ್ತದು ಸಾಯುವುದಿಲ್ಲ ಪಥ ಬದಲಿಸುತ್ತದಷ್ಟೇ ಅಂತಲೂ ಅನ್ನಿಸುವುದು ಜೀವನ್ಮುಖೀ ನೆಲಗಟ್ಟಿನ ಅಕಳಂಕ ಸೋಜಿಗವಲ್ಲವೇ...
#ನಾನು...
↟↜↝↜↝↟

ಹೂಬನಕೆ ಬೇಲಿಯ ಹೆಣೆದೆ...
ಹೂಗಂಧ ಗಾಳಿಯೊಂದಿಗೆ ಕದ್ದೋಡಿತು, ಬಣ್ಣ ಬೆರಗಿನ ಅಂದ ಬೆಳಕಲ್ಲಿ ಲೀನವಾಯಿತು...
ಬೇಲಿಯೀಗ ಬೇಸರಾದಾಗ ಕೂತೆದ್ದು ಹೋಗುವ ದುಂಬಿ ಕಾಲಿನ ವಿಶ್ರಾಂತಿ ಸ್ಥಂಭ..‌.
ನಾನೋ ಹೊಸೆಯುತ್ತಲೇ ಇದ್ದೇನೆ ಮತ್ತೆ ಹೊಸ ಬೇಲಿಯ...
#ಬೇಲಿ_ಕಾಯುವ_ಬಡವ...
↟↜↝↜↝↟

ಗಂಟು ಕಳಚಿಕೊಳ್ಳಲಿ ಅಂಬುದು ನಂದೇ ಗಟ್ಟಿ ನಿರ್ಧಾರ ಮತ್ತು ನಂಟೂ ಕಳಚಿ ಹೋಗೇಬಿಟ್ಟದ್ದು ನನ್ನ ಶಾಶ್ವತ ನೋವು...
ನಡುಗಡ್ಡೆ ನಡುವಿನ ಒಣ ಮರ...
#ನಾನು...
↟↜↝↜↝↟

ನನ್ನತನವ ಕಾಯ್ದುಕೊಡೋ ಸ್ವಾಭಿಮಾನ ಎದೆಗೂಡಿನ ಒಳಮನೆಯ ಮಿಡಿತ...
ಗೆಲುವಿನ ಭ್ರಮೆ ಮೂಡಿಸಿ ಸೋಲನ್ನು ಎತ್ತಿ ತೋರಿಸೋ ಅಹಂಕಾರ ಹೊರಗಿನ ಕುಣಿತ...
#ನಾನು...
↟↜↝↜↝↟

ಎನ್ನದೇ ಕಣ್ಣಲ್ಲಿ ಎನ್ನ ಹಾದಿಯ ಕಂಡದ್ದಕ್ಕಿಂತ ಜನದ ನಾಲಿಗೆಯ ಮೊನಚಿಂದ ಅಳೆದದ್ದೇ ಯಾವತ್ತೂ... ಹಾಗೆಂದೇ ಅನ್ಸುತ್ತೆ ಆಗೀಗ ಜಗ ಎನ್ನ ಹಣಿದದ್ದಕ್ಕಿಂತ ಆನೇ ಎನ್ನ ಕಾಲಿಗೆ ಉರುಳು ಸುತ್ಕೊಂಡಿದ್ದೇ ಹೆಚ್ಚೇನೋ ಅಂತ...
#ಆನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)