Thursday, September 6, 2018

ಗೊಂಚಲು - ಎರಡ್ನೂರಾ ಎಪ್ಪತ್ತೊಂದು.....

ಬಣ್ಣ..... 

ಹೌದೇ ಹೌದು... ನಾನೀಗ ಬದಲಾಗಿದ್ದು ಹೌದು - ನಿನ್ನ ಕಣ್ಣಲ್ಲಿ; ಅಷ್ಟೇ, ಮತ್ತದು ಅಷ್ಟೇ...
#ಮಾಸಿದ_ಬಣ್ಣ...
#ನಿನ್ನೆಯಂತಿಲ್ಲದ_ಹಾದಿ...
↢↡↟↣

ಎಷ್ಟು ಬಾರಿ ಕ್ಷಮೆ ಕೇಳಿದರೆ ಅಷ್ಟು ಬಾರಿ ಮಾಡಿದ ಅದೇ ತಪ್ಪು ಸರಿಯಾದೀತು...
ಮೃದುವಾಗಿ ತಾಕಲು ಬಾರದವನ ಎದೆಯಲ್ಲಿ ಪ್ರೀತಿ ಎಷ್ಟಿದ್ದರೇನು ಬಂತು...
ಕಿವಿಯಾಗಲಾರದವನ ಮಾತಿನ ಅಹಂಕಾರಕ್ಕೆ ಜೊತೆಯ ಕರುಳ ನೋವೆಂತು ಅರಿವಾದೀತು...
'ಹತ್ತು ಹೆಜ್ಜೆ ನಿನ್ನ ಏಕಾಂತ ಎನಗೆ ಬೇಕು' ಎಂಬಷ್ಟೂ ಯಾರೊಬ್ಬರದೂ ಒಳನಾಡಿಯ ಮೀಟಲಾರದವನಿಗೆ ಮೌನ ಸಿದ್ಧಿಸುವುದೆಂತು...
ಎಷ್ಟೆಲ್ಲ ನೇಹಗಳ ಒಡನಾಟವಿದ್ದೂ ಒಂದಾದರೂ ಹೃದಯದ ಸೊಲ್ಲಾಗದವನ ಬದುಕ ಗೆಲ್ಲುವ ಹಠದ ಗಳಿಕೆಯೆಂದರೆ: ಜಾಳು ಮಳೆಗೂ ಬೆದರುವ ಹಡಾಲೆದ್ದ ಹಾಳು ಮನಸು - ಕೊಳೆತ ಕಳ್ಳಿಯಂಥ ಸಂಜೆಗಳು - ಬೆತ್ತಲೆ ಕಣ್ಣು - ಕಾಡು ಕನಸು - ಮನಸ ಬಸಿರುಗಳ ಸುಡದೇ ಒಂಟಿ ಹಾದಿ ಸಲೀಸಲ್ಲ ಎಂಬ ಹುಂಬ ಸಮಾಧಾನ.....ಅಷ್ಟೇ....
#ಧಗಧಗಿಸಿ_ಕುಣಿವ_ಚಿತೆಯ_ನೆಳಲು...
#ನಾನು...
↢↡↟↣

ನಂಬಿಕೆ ಅಂದರೆ ಇಷ್ಟೇ ಇರಬೇಕು - ನಂಬಲು ಶಕ್ಯವಾದ ಸಮರ್ಥನೆಗಳಿರುವ 'ಸತ್ಯವಾದ ಸುಳ್ಳು...'
#ಕರ್ಮಾಕರ್ಮಫಲ...
↢↡↟↣

ಮಾತು ಕಲಿತ ಮನುಷ್ಯನ ಬಹು ದೊಡ್ಡ ಸಾಧನೆ: ಸುಳ್ಳನ್ನು ಸುಂದರವಾಗಿ ಬದುಕೋ ತಂತ್ರ...
#ಬಣ್ಣ...
↢↡↟↣

ಯಾವುದೇ ಒಂದು ವಿಷಯ ವಿಚಾರದ ಸತ್ಯಾಸತ್ಯತೆಯನ್ನು ಪ್ರಮಾಣೀಕರಿಸುವ ಘನ ತಕ್ಕಡಿ - "ನಾನು..."
#ಬಣ್ಣ...
↢↡↟↣

ತೊರೆದ ಹಾದಿಯ ಅಳಿದುಳಿದ ನೆನಪಿಗೆ ಹೊಸ ಬಣ್ಣ ಬಳಿದಂತೆ, ಮಟ ಮಟ ಮಧ್ಯಾಹ್ನ ಹರೆಯದ ಹರಿವಿನ ಮೊದಮೊದಲ ಮೋಹ "ನೀನೇ ಬರಿ ನೀನೇ, ಎಲ್ಲೆಲ್ಲೂ ನೀನೇ" ಅಂತ ತುಂಟ ಸಂದೇಶ ಕಳಿಸಿದರೆ ಬಡ ಪಾಪಿ ಜೀವ ತಡೆದೀತು ಹೇಗೆ ಒಳಗಿನ ಉರಿಯ... 😜
#ದಣಿವು_ನೀಗುವ_ಸಣ್ಣಪುಟ್ಟ_ಸಲಿಲಗಳು...😍
↢↡↟↣

ಹಬ್ಬಿ ಹಸಿರಾಗಿರಲಿ ನೇಹ ಬಂಧ ಮೀರಿ ದೇಶ ಕಾಲ...
ನಗೆಯ ಅವಲಕ್ಕಿ ಬೆಲ್ಲವಾಗಿ ತಬ್ಬಿಕೊಂಡಂತೆ ಕರಿಯ ಕುಚೇಲ...
#ನೇಹವೆಂಬೋ_ನೆತ್ತಿಯ_ನೆರಳು...
                                       ತೇದಿ: 05-08-2018

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ಮೃದುವಾಗಿ ತಾಕಲು ಬಾರದವನ ಎದೆಯಲ್ಲಿ ಪ್ರೀತಿ ಎಷ್ಟಿದ್ದರೇನು ಬಂತು.. ಅಧ್ಬುತವಾದ ಸಾಲು

    ReplyDelete