Thursday, February 7, 2019

ಗೊಂಚಲು - ಎರಡ್ನೂರ್ತೊಂಭತ್ತ್ಮೂರು.....

ಅವಳ ಗುರುತು.....
(ತಾರೀಖು, ಫರಾಕುಗಳ ಹಂಗಿಲ್ಲದವಳು...)

ಈ ಮಣ್ಣು ಸಗ್ಣಿಯ ವಾಸನೇಲೇ ಜೀವಕ್ಕೆ ಏನೋ ಸಮಾಧಾನ ಇದ್ದು...
ಹುಲ್ಲು ಕೊಯ್ದ ಸುಸ್ತು ದನ ಮೈ ನೆಕ್ವಾಗ ಮರ್ತೊವ್ತು...
ನೀರ್ ಹೊಯ್ದು ರಟ್ಟೆ ಸೋತದ್ದು ಹೂ ಕಾಯಿ ಕಾಂಬಾಗ ಯಾರಿಂಗ್ ನೆನ್ಪಾವ್ತು...
ಬೆಕ್ಕು ಕುನ್ನಿ ಎಲ್ಲಾ ಮೂಗ ಪ್ರಾಣಿಗೊ ಅಂದ್ರುವ ಅವ್ವು ಕೊಡು ಪ್ರೀತಿನ ಮನಷ್ರೂ ಕೊಡ್ತ್ವಿಲ್ಲೆ...
ಹುಟ್ಟಿದ್ದಿಲ್ಲಿ, ಆಡಿ ಬೆಳ್ದದ್ದಿಲ್ಲಿ, ಉಂಡದ್ದು ಉಟ್ಟದ್ದು ಎಲ್ಲಾ ಇಲ್ಲೀದೇ, ಕಷ್ಟಾನ ಸುಖಾನ ದೇವ್ರು ಕೊಟ್ಟದ್ದು ಒಳ್ಳೇದಕ್ಕೇಯಾ ಅಂದ್ಕಂಡು ಬದ್ಕಿ ಆಯ್ದು, ಇನ್ನು ಸತ್ರೂ ಇಲ್ಲೇಯಾ, ಅದೇ ನೆಮ್ದಿ...
#ಅವಳ_ಚಿತ್ತದ_ಚಿತ್ರಗಳು...

ಸಾವಿನ ಕನಸು ಬಿತ್ತು ಕಣೋ ನಿನ್ನೆ - ಆದ್ರೆ ಬೆಳಗಾದಾಗ ಬದ್ಕೇ ಇದ್ದೆ ಅಂತಂದು ಬೇಸರಿಸಿಕೊಂಡಳು - ಮೊದಲಾಗಿ ಹೊರಡೋ ಒಳ ಆಸೆ ಅವಳಿಗೆ...
ಸಾವಿನ ಕನಸೂ ಖುಷಿ ಕೊಡುವುದಾದರೆ ಬದುಕಿನ್ನೆಷ್ಟು ಹಣಿದಿರಬೇಡ...
ಸಾವಿನ ಕನಸಾ...  ಮತ್ತೆ ಹತ್ವರ್ಷ ಆಯಸ್ಸು ಜಾಸ್ತೀನೇ ಹಂಗಾರೆ - ಹಾಗಂದು ನಗುತ್ತೇನೆ...
ಹೌದಾ!! ಥೋ ಬೇಕಾಯ್ತ್ಲೆ ಸಾಕೈತ್ತು ಅಂತ್ಹೇಳಿ ನಗುವಿಗೆ ಜೊತೆಯಾಗ್ತಾಳೆ...
#ಸಾವು_ನಗೆ_ಚಟಾಕಿ_ಹತಾಶೆಯಲ್ಲಿ...

ಒಂದು ಪುರುಡು, ಇನ್ನೊಂದು ಸೂತಕ - ಬದುಕಿನೆರಡು ಅಮೂರ್ತ ತೀರಗಳು...
ನಡುವಿನ ಹರಿವೆಂದರೆ ಹೀಗೆ ಬಂದು ಹಾಗೆ ಹೋಗಿ ಅಲ್ಲಿಷ್ಟು ಇಲ್ಲಿಷ್ಟು ಪುಡಿ ಗುರುತು...
ಅವಳ ಹುಟ್ಟಿನಿಂದ ನನ್ನವರೆಗಿನ ಕರುಳ ಚಿಗುರು ವಿಸ್ತಾರ‌...
#ಸಾವಿಗೆ_ಮೊಲೆಯುಣಿಸುವುದು...

ಹುಟ್ಟಿನ ಸಂಭ್ರಮ ಬದುಕೆಂಬೋ ಬದುಕಿನ 'ಮುಕ್ತ ನಗು'ವಿನಲಲ್ಲವಾ...
ಜನುಮ ದಿನವಂತೆ ಅವಳಿಗಿಂದು - ಸಾವು ನೋವಿನ ಮಾತು ಮತ್ತು ಅವೆಲ್ಲವ ಮರೆವ ಹವಣಿಕೆಯ ಹಾಹಾಕಾರದ ನಗು ಬಲು ಜೋರು ಜೋರು...
ನಗುವುದ ಬಿಟ್ಟು ಬೇರೆ ಏನಿದೆ ದಾರಿ - ಕಣ್ಣುಕ್ಕಿಯೂ ಕರುಳಾಳದಲಿ ಉಳಿದೇ ಹೋಗುವ ಬಿಕ್ಕಳಿಕೆಗೆ...
ಕನಸ ಕಣ್ಣಿಗೆ ಹೂಬಿದ್ದ ರೌದ್ರ ಹಾದಿಗಳೇ ಹಾಗೆ - ಹಳವಂಡಗಳ ಹಳಿಯ ಮೇಲಿನ ನಡಿಗೆ...
#ನೋವುಂಡು_ನಗೆಯ_ಹಡೆವುದೇ_ಅಲ್ಲವೇ_ಅಮ್ಮನ_ಪಟ್ಟ...

ಅದಾಗಿಯೂ ಉಂಡ ನೋವುಗಳೆಲ್ಲ ಅವಳ ಹಣಿದದ್ದೇ ಸುಳ್ಳು ಅನ್ಸಿಬಿಡತ್ತೆ - ಈ ಎಲ್ಲ ಮಾತುಗಳಾಚೆ ಅಲ್ಲವಳು ಕಣ್ಣ ಹನಿಗಳನೆಲ್ಲ ಗಂಟಲಲ್ಲೇ ಗಂಟ್ಹಾಕಿ ಜಗದ ನದರಿಂದ ಮುಚ್ಚಿಟ್ಟುಕೊಂಡು ಬದುಕ ನಿಭಾಯಿಸುವ ಪರಿ ಕಾಂಬಾಗ...
ಅತ್ತು ಹಗುರಾದ ರಾತ್ರಿಗಳ ಸಾಕ್ಷಿ ಉಳಿಯಬಾರದು - ನಕ್ಕ ಘಳಿಗೆಯ ಚಿತ್ರ ಮರೆಯಬಾರದು...
#ಅವಳ_ಅಂತರಂಗ...
*****
ಆಯೀ ಎಂಬ ಮುದ್ದು ಹುಡ್ಗೀ -
ನಿನ್ನ ಹುಟ್ಟು ಹಬ್ಬವಾಗಿತ್ತೋ ಇಲ್ವೋ ಗೊತ್ತಿಲ್ಲ - ನೀರನ್ನೇ ಖೀರು ಎಂದು ಕುಡಿದು ಹಬ್ಬ ಮಾಡಿಕೊಂಡು ನಕ್ಕು ಅಣಕಿಸಿದೆ ನೀ ನಿನ್ನ ಬದುಕ...
ತುಂಬ ನಗಬೇಡ್ವೇ, ನಿನ್ನ ದೇವರೂ ಉಸಿರುಗಟ್ಟಿಕೊಂಡಾನು...  
ಎಷ್ಟು ಬರೆದರೆ ನಿನ್ನ ಇಷ್ಟೇ ಇಷ್ಟು ಹೇಳಬಹುದಿಲ್ಲಿ ನಾನು...
ಎಷ್ಟು ಬದುಕಿದರೆ ಅಷ್ಟೆಲ್ಲ ಬಗ್ಗಡಗಳ ಹಾಯುವಾಗಲೂ ನಿನ್ನಲ್ಲಿರುವ ಜೀವನ ಪ್ರೀತಿಯ ಬಸಿದುಕೊಂಡೇನು ನಾನು...
ಇಷ್ಟೇ ಹೇಳಬಲ್ಲೆ:
ಎಪ್ಪತ್ತರಾಚೆಯ ಮಗುತನಕೆ ಮುದ್ಮುದ್ದು ಶುಭಾಶಯ ಕಣೇ...
ಲವ್ ಯೂ ಸುಂದ್ರೀ... 😘😘

ಅವಳೊಳಗಿನ ಮಗು ನಕ್ಕಾಗ...