Wednesday, January 25, 2023

ಗೊಂಚಲು - ನಾಕು ನೂರಾ ಎರಡು.....

ಹನ್ನೆರಡರ ಎಳೆಗರು.....
(ಏನು ಬರೆದೆನೋ, ಏನೇನ ಬರೆದೆನೋ, ಗೀಚಿ ಗೀಚಿ ಹಗುರಾದ ಕರುಣ ಕಾಲಕ್ಕೆ ದಶಕದ ಮೇಲೆ ಎರಡು ವರ್ಷ ತುಂಬಿತು.....)

ಆತ್ಮಸ್ಥ ನೇಹವೇ -
ಖಾಲಿ ಎದೆಯ ಕವುಚಿಕೊಳುವ ಹೆಪ್ಪು ಛಳಿಯ ಈ ಮೃತ ಸಂಜೆಗಳಲಿ ಕಳವಳದ ಕಂಗಳಿವು ನಿನ್ನ ಹುಡುಕುತ್ತವೆ... 
ಮತ್ತೇನಿಲ್ಲ -
ಕತ್ತಲಿನಂತೆ ಸುಮ್ಮನೊಮ್ಮೆ ನೀ ನನ್ನ ಹಗುರಾಗಿ ತಬ್ಬಿಕೊಂಡೇಯಾ...?
ನೆತ್ತಿ ನೇವರಿಸೋ ನಿನ್ನ ಉಸಿರಲ್ಲಿ ಕಣ್ಮುಚ್ಚಿ ಎಲ್ಲ ಮರೆತೇ ಹೋಗಿ ನಿನ್ನೆದೆಯ ನಿರುಮ್ಮಳ ಪ್ರೀತಿಯನಿಷ್ಟು ನಾ ಕುಡಿಯಬೇಕು...
ಮತ್ತೆ ನಾಳಿನ ಬೆಳಕಿಗಾಗಿ ಜೀವ ಈ ಹೊತ್ತಿನ ಕಾವಳವ ಹಾಯಬೇಕು...
____ ನೀ ತಬ್ಬುವುದೆಂದರೆ ಲಾಲಿ, ನಿನ್ನ ತಬ್ಬಿ ಹಬ್ಬುವುದೆಂದರೆ ಸುಪ್ರಭಾತ...
☺☺☺

ತಮ್ಮ ಮರಣ ವಾರ್ತೆ‌ಯೇನೂ ನಮ್ಮನ್ನು ತಲುಪದ ಕಾರಣ ತಾವು ಜೀವಂತ ಇದ್ದೀರೆಂದು ನಾವು ಭಾವಿಸಿದ್ದೇವೆ ಮತ್ತು ಹಾಗೆ ನಂಬುವುದು ನಮ್ಮ ಜರೂರತ್ತು ಕೂಡಾ ಆಗಿದೆ...
ಆಗಾಗ ಚಿವುಟಿ ನೋಡ್ಕೋಬೇಕು ನಾನು ಬದ್ಕಿದೀನಾ ಅಂತ...
____ ಕೆಲವೆಲ್ಲ ಹೀಗೇ ಬದುಕುಳಿವುದು...
☺☺☺

ಕಣ್ಣಲ್ಲಿ ಚಿತೆ ಉರಿಯುವಾಗ ಕನಸಿಗೆ ರತಿಯ ಕರೆಯುವ ಹಡಾಹುಡಿಯ ಈ ನಿದ್ದೆ ಇನ್ನಷ್ಟು ಸುಸ್ತಾಗಿ‌ಸುತ್ತದೆ ಮರುಳ ಮಾನಸವ...
____ ಮಸಣಕ್ಕೆ ಬೇಲಿ ಕಟ್ಟಿ ಮಲ್ಲಿಗೆ ಬಳ್ಳಿಯ ಹಬ್ಬಿಸುವಾಸೆ...
☺☺☺

ನಾ ಕಾಣದ ಖಾಲಿತನ ನಿನ್ನ ಕಾಡಿತಾ...?
ಕಾಡುವುದಾ!!! ಉಫ್ -
ನನ್ನೇ ನಾ ಕಳೆದುಕೊಂಡ ವಿಚಿತ್ರ ನಿತ್ರಾಣ...
ನನಗೆ ನನ್ನ ತೋರುವ ಹಾದಿ ದೀಪ ಆರಿ ಹೋದ ಭಾವ...
ನಿನ್ನೆದುರು ಮಾತ್ರ ಬಿಚ್ಚಿಕೊಳ್ಳುವ ನನ್ನದೇ ಚಂದ ರೂಪಾಂತರವೊಂದು ನೀನಿಲ್ಲದೇ ವಿಳಾಸ ಮರೆತು ಮೂಲೆ ಹಿಡಿದು ಕೂರುತ್ತದೆ...
ಎದೆಯ ತುಂಬಿದ ಜೀವಕಳೆ ನೆನಪಲ್ಲಿ ನಕ್ಕು ಕಣ್ಣು ಮಂಜಾಗಿ...
ಮೈಯ್ಯ ತೀರದ ತುಂಬಾ ದೃಷ್ಟಿ ಬೊಟ್ಟುಗಳಂಥ ನಿನ್ನ ಕರಡಿ ಮುದ್ದಿನ ಗುರುತುಗಳು ಮಿಂಚಿ ಒಂದು ಸೆಳಕು ಆಸೆ ಬಳ್ಳಿ ಚಿಗುರಿ...
ಜೀವಾಭಾವವೆಲ್ಲ ಕಲಸುಮೇಲೋಗರ...
ಉಹುಂ ನೀನು ಖಾಲಿಯಾಗುವ ಭಾವ ಪಾತ್ರೆಯಲ್ಲ - ಕಾಣದಾದರೆ ಈ ಜೀವ ನಿಲ್ಲುವುದಿಲ್ಲ...
ಕಾಡು ಮಲ್ಲಿಗೆ‌ಗೆ ಸೋತ ಮೇಲೆ ಕಾಡು ಕಾಡದೇ ಇದ್ದೀತೇ...
ಆದರೂ ಈ ಸೋಲು ಸೋಲಲ್ಲ...
____ ದಿನವೂ ಅಂಗಳದ ಮೂಲೆಯ ಸಂದಿನಲಿ ಮನೆ ಬಾಗಿಲ ಕೀಲಿಕೈ ಇಟ್ಟು ಹೊರ ಹೋಗುತ್ತಿದ್ದೆ ಮತ್ತು ಮರಳುವ ಹೊತ್ತಿಗೆ ನೀ ಬಂದಿರಬಹುದೆಂದು ಹುಡುಕುತ್ತಿದ್ದೆ...
☺☺☺

ಊರಿನಾಚೆ ನಿಂತರೆ ದೇವರೂ ಏಕಾಂಗಿಯೇ...!!
ಮೆಲ್ಲಗೆ ಮಾತಾಗುತ್ತಾನಂತೆ ಎದೆಗೆ ಕಿವಿಯಿಟ್ಟರೆ...
ಮಾತು ಬಯಲಿಗೆ ಬಿದ್ದರೆ ಪೂಜೆಯಾದೀತು...¡¡
ಒಳಗಿನ ಮಾತು ಒಳಗೇ ಉಳಿದರೆ ಮೌನ - ಚಂದ ಬೆಳೆದರೆ ಧ್ಯಾನ...
____ ಒಣ ವೇದಾಂತ...
☺☺☺

ಬದಲಾವಣೆ ಜಗದ ನಿಯಮ, ಆದರದು ನನ್ನತನದ ಲೇವಾದೇವಿ ಅಲ್ಲ...
ಪ್ರೀತಿ ಕೂಡಾ ಪ್ರೀತಿಯಿಂದ ಈಜಬೇಕಾದ ಸೆಳವು...
___ 'ನಾನು' ಎಂಬುದು ಎಲ್ಲ ಕಾಲಕ್ಕೂ ಅಹಂಕಾರ‌ವಷ್ಟೇ ಅಲ್ಲ...
☺☺☺

ಚೂರು ಸಣ್ಣತನದ ತುಂಬ ಸಣ್ಣ ವಿಷಯವೇ ಹೆಚ್ಚಿನ ಸಲ ಅಸಹಜವೆನಿಸೋ ಕೆಟ್ಟ ನಿರ್ವಾತವ ಹುಟ್ಟುಹಾಕುತ್ತದೆ ಬೆಸೆದ ಗಾಢ ಬಂಧಗಳ ನಡುವೆಯೂ...
____ ಎಚ್ಚರವಿರು ಮನವೇ ಅತೃಪ್ತ ಮೌನದ ಜೊತೆಗೆ...
☺☺☺

ಸಂಬಂಧಗಳನು ನಾನಾವಿಧ 'ಅವಶ್ಯಕತೆ' (ಸಂ)ಬಾಳಿಸಿದಷ್ಟು ಏಕೋಭಾವದ 'ಪ್ರೀತಿ' ಜೀವಿಸುವುದು ಖರೆಯಾ...?!
'ನಿನಗೆಲ್ಲ' ಕೊಟ್ಟೆ ಎನುವ ನಾನು - 'ನಿನಗಾಗಿ' ಕೊಟ್ಟದ್ದಲ್ಲವಾ ಅನ್ನುವ ನೀನು...
______ "ನಾನೂ" ಎಂಬೋ ಮನೋ ವ್ಯಾಪಾರ...
☺☺☺

ಕೋಳಿ ಗೂಡಿಗೆ ಕೊಡೆ ಹಿಡಿಯುವ ಮನೆಯ ಮಗು ಏನು ಚಂದ ಮತ್ತು ಎಷ್ಟು ಮಾನವೀಯ ಅನ್ನೋದು ಅರಳೀಕಟ್ಟೆಯ ಮಾತುಕಥೇಲಿ ಮತ್ತೆ ಮತ್ತೆ ಸಿಕ್ಕೀತು ಮತ್ತು ಮುಗ್ಧ‌ವಾಗಿ ವರ್ತಿಸುವುದು ಆಪ್ತವೂ ಹೌದು...
ಹಾಗಂತ ಮಗುವನೊಯ್ದು ಮನೆಗೆ ಯಜಮಾನನ್ನಾಗಿ ಕೂರಿಸಿ ಬರೀ ಚಂದ ನೋಡಿ ಬದುಕಲಾದೀತಾ...
____ ಅರಿವಾಗಬೇಕಾದ ಬದುಕಿನ ರಾಜಕೀಯ...
☺☺☺

ಬೆಳಗು ಇರುಳನು ತಬ್ಬುವಾಗ ನಡುವೆ ಸುಳಿದ ಮಂದಹಾಸ‌ದ ಅರಳು ಸಂಧ್ಯೆ...
ಬೆಳಕ ಕಿರುಬೆರಳ ಹಿಡಿದ ಕತ್ತಲು ಪತ್ತಲದ ನೆರಿಗೆ ಬಿಡಿಸಿ ನುಡಿಸೋ ಸೋಬಾನೆಗೆ ನಾಚಿ ಕೆನ್ನೆ ರಂಗಾದ ಜಾಣೆ...
ಉಂಡು ತೇಗಿದ ಮೇಲೂ ನಾಲಿಗೆಗಂಟಿಯೇ ಉಳಿವ ಮೊಸರನ್ನದ ಸವಿರುಚಿ...
ಕಚಗುಳಿಯ ಮೋದಕೆ ಕಿಲಕಿಲನೆ ನಗುವ ಮುಗ್ಧ ಹಸುಳೆಯ ಮುದ್ದು...
ಚಿತ್ರಕಾರನ ಕುಂಚದಿ ಮೆರೆದುಳಿದ ನೂರು ಬಣ್ಣಗಳ ಒಟ್ಟು ಮೊತ್ತದ ಚೆಲುವು...
ದಿನವಿಡೀ ಆಡಿ ನಲಿದವರ, ದುಡಿದು ಬಳಲಿದವರ ಕಾಲ ಧೂಳಿನ ಸುತ್ತ ಕಾಲನ ಕಟ್ಟಿ ಹಾಕುವ ಮಂದಸ್ಮಿತೆ...
ಒಳ ಹೊರಗಿನ ರಂಗಿನಾಟದ ರಂಗಮಂದಿರ‌ದ ಬಣ್ಣ ಬೆಡಗಿನ ರಂಗ ಪರದೆ...
ನನ್ನೊಳಗೆ ನನ್ನ ನುಡಿಯುವ ನನ್ನ ಭಾವ ವೀಣೆ....
____ ಒಂದು ಮುಸ್ಸಂಜೆ‌ಯ ಬೆಡಗು/ಬೆರಗು...
☺☺☺

ನೋವು ನನ್ನ ನೋಯಿಸಬಹುದು ಅಷ್ಟೇ, ಹಾಗಂತ ನನ್ನ ನಗೆಯ ಅಳಿಸಲಾರದು - ಮೋಡ ಸೂರ್ಯ‌ನ ಕೊಲ್ಲಲಾದೀತೇ...
____ ನನ್ನ ನಗು ನನ್ನ ಕರುಳಿಗಂಟಿದ ಪ್ರೀತಿ...
☺☺☺

ನಿಂಗೇನು ಗೊತ್ತು ನಿರಾಕರಣೆ‌ಯ ನೋವಿನ ತೀವ್ರತೆ ಅಂತ ಅಸಹನೆ ತೋರಿದರು - ಮನದಲ್ಲೇ ಬದುಕೇ ಕೈಕೊಡವಿದ ಆ ದಿನಗಳ ನೆನಪುಗಳ ಬೆನ್ತಟ್ಟಿದೆ...
ಸಾವು ಎದುರಿಗಿಡುವ ನಿರ್ವಾತದ ಕಿಂಚಿತ್ತು ಅರಿವಾದರೂ ಇದೆಯಾ ನಿಂಗೆ ಅಂತ ಸಿಡಿಮಿಡಿಗೊಂಡರು - ಈದಿನದವರೆಗೂ ಬದುಕಿದ್ದೀನಲ್ಲಾ ಎಂದು ಖುಷಿಪಟ್ಟೆ...
ಏನ್ಗೊತ್ತಾ -
ಶುದ್ಧ ವಾಸ್ತವಿಕತೆಯ ಒಳನೋಟ ಮತ್ತು ನಗೆಯ ಸೂಡಿಯ ಮುಂದೆ ಮಾಡ್ಕೊಂಡು ನಡೆವ ನಾನೆಂಬ ಪ್ರಾಣಿ ಇಲ್ಲಿ ಅಪೂಟು ಇಷ್ಟವಾಗದ ವ್ಯಂಜನ...
____ ನಾನೆಂದರಿಲ್ಲಿ ಗುಂಪಿಗೆ ಸೇರದ ಪದ...
☺☺☺

ಅದೆಷ್ಟು ಜನುಮದ ಪುಣ್ಯ ಫಲ ಬಾಕಿಯಿತ್ತೋ ನಾಲಿಗೆಯೇ ನಿನ್ನದು... 😋
ನಿನ್ನೊಳಗಣ ನೂರು ರುಚಿಯನೂ ಹಿಂಗೇ ಸವಿದುಣ್ಣುವಾಸೆ - ಬದುಕೆಂಬೋ (ಬದುಕಿನಂಥ) ಮಾಯಾವಿಯೇ... 🥰


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

Tuesday, January 3, 2023

ಗೊಂಚಲು - ನಾಕು ನೂರೊಂದು.....

ಪರಮಾಪ್ತ ಪೋಲಿ ಸಾಂಗತ್ಯ.....

ಬೇಲಿಯಾಚೆಯ ಹಸಿರು ಬಯಲು ನೀನು - ಹಾರುವ ಹಂಬಲ ಮತ್ತು ಮೀರಲಾಗದ ಗೊಂದಲದಲ್ಲಿ ನಾ ಕಟ್ಟಿಕೊಂಡ ನಾನು...
ಮೋಹದ ಹಾತೆಯ ರೆಕ್ಕೆಯ ಮೇಲಿನ ಬೆಂಕಿಯ ಮೋಹಕ್ಕೆ ಬೆದರುತ್ತೇನೆ ಮತ್ತು ಬೆಳಗುತ್ತೇನೆ...
ಕೊನೇಯದಾಗಿ -
ಸುಟ್ಟ ಎನ್ನದೇ ರೆಕ್ಕೆಯಿಂದ ಹೊಮ್ಮುವ ಬೆಂಕಿಯ ಘಮವ ಹೀರಿ ಬೆಂಕಿಯ ಧರಿಸಿದ ಸಂಭ್ರಾಂತಿಯಲಿ ಕಣ್ಣೀರಾಗುತ್ತೇನೆ...

___ ಈ ಬೇಲಿಯ ಕಟ್ಟಿ(ಕೊಂಡ)ದ್ಯಾರು...?!
💏💏💏

ಅಳಬೇಡವೇ ಸಖೀ,
ಎಳೆದು ಕೆಡವುವ ಆ ಮಥುರೆಯ ಸಾಗರದ ರಾಜಕಾರಣದಲ್ಲೂ ನನ್ನ ಕೃಷ್ಣ‌ನ ಅಂತಃಸ್ಸತ್ವವನ್ನು ಕಾಯಬೇಕಾದದ್ದು, ಕಾಯಬಹುದಾದದ್ದು ಈ ಗೋಕುಲದ ಗೋಪಿಯರ ಕಣ್ಣಲ್ಲಿನ ಅನುರಾಗದ ಯಮುನೆಯೇ...
____ ಕೃಷ್ಣನಿಗೆ ಕಾಯುವ ಗೋಕುಲದಲ್ಲಿ ಕೃಷ್ಣನ ಕಾದ ಗೊಲ್ಲತಿ ರಾಧೆ...
💏💏💏

ಯಾಕಂದ್ರೆ -
ಸಿಗಲಾರದ್ದಾದರೆ ದೂರ ಇದ್ದಷ್ಟೂ ಸುಖ... 
ಮತ್ತು ಪರಮ ಸುಖಕ್ಕೆ ಕಾದಷ್ಟೂ ಕಾವು ಹೆಚ್ಚು...
______ ನನ್ನ ಕಾವ್ಯದ ಬೆಂಕಿ ನೀನು...
💏💏💏

ಚಂದಿರನ ತೋರಿಸ್ತೀನಿ ಅಂಗಳಕೆ ಬಾರೇ ಅಂದರೆ, 
ನೀನಿದೀಯಲ್ಲ ಇಲ್ಲೇ ಅಂತ ಒಂಟಿ ಹುಬ್ಬು ಕುಣಿಸ್ತಾಳೆ ನನ್ನ ಗೌರಿ... 😉
___ ಚೌತಿ... 
💏💏💏

ಒಬ್ಬ ಶಂಭು, ಒಬ್ಬ ಶ್ಯಾಮ
ಬೆಟ್ಟ ಬಯಲಿನ ದಿವ್ಯತೆ...
ಅವನ ಗಂಗೆ, ಇವನ ಯಮುನೆ
ನೂರು ಒಡಲಿನ ಪ್ರೇಮ ಕಥೆ...
ಅಲ್ಲೊಂಚೂರು ಇಲ್ಲೊಂಚೂರು
ಚೂರು ಚೂರೇ ಒಲವ ಹೋರು
ಎದೆಯ ಭಾವ ಕೆರಳಿ ಕುಣಿಯೇ 
ಅನುಭಾವದ ಚರಮ ತೋರೋ ಕೊಳಲು, ಡಮರು...
ಏದುಸಿರಲ್ಲೂ ಬಾಡಬಾರದು ಶಂಭು ಶ್ಯಾಮರ ಭಾವಲತೆ
ನನ್ನಲ್ಲೂ ನಿನ್ನಲ್ಲೂ ಮುಗಿಯಬಾರದು ಜೀವಂತಿಕೆ‌ಯಾ ಛಂದ ಕವಿತೆ...
___ ಕೇಳೇ ಎನ್ನ ಕಪ್ಪು (ಹುಡುಗಿ) ಕುಸುರಿ...
💏💏💏

ಹೆಣ್ತನಕೆ ವಯಸಾಗಬಾರದು, ವೈರಾಗ್ಯವೂ ಬರಬಾರದು...
___ ರಸಿಕನೆದೆಯ ಢವ ಢವ...
💏💏💏

ಅವಳು ಗುರಾಯ್ಸೋದ್ ನೋಡದ್ರೆ ಕಚ್ಬಿಡ್ತಾಳೇನೋ ಅಂತ ಆಸೆ ಆಗತ್ತೆ... 😉
💏💏💏

ಅರೆಗಣ್ಣು, ಅರೆ ಮನಸಿಂದಲೇ ತೋಳಿಂದ ಜಾರಿಕೊಂಡೆದ್ದು ಮೈಮುರಿದು, ಇರುಳು ಬೆವರುವ ಮೇಳದಲಿ ದಿಕ್ಕಾಪಾಲಾದ ನಾಚಿಕೆಯ ಕಿಡಿಗಳನೆಲ್ಲ ಹುಡುಕಿ ಹೆಕ್ಕಿ ಒಪ್ಪ ಮಾಡುವಂತೆ ಚದುರಿದ್ದ ವಸನಗಳ ಮೈಗೇರಿಸಿ ಮಡಿ ಮಾಡಿ, ಹರಡಿದ್ದ ಹೆರಳ ಮುಡಿ ಕಟ್ಟಿ, ತುಸು ನಿದ್ದೆಯಿನ್ನೂ ಬಾಕಿ ಇರುವ ಮತ್ತ ಕಂಗಳ ಮುದ್ದಿಸಿ ಅವಳು ಬೀರಿದ ತೃಪ್ತ ನಗೆಯಲ್ಲಿ ಎನ್ನ ಬೆಳಗಿನ ಭಾಷ್ಯ...
ಲಜ್ಜೆ‌ಯ ತೆಳು ಮಿಂಚಿನ್ನೂ ತನ್ನ ಕಿರು ಕಂಪನಗಳ ಹಡೆಯುತ್ತಲೇ ಇರುವ ಮಹಾ ಪೂಜೆಯ ಆ ಮರು ಹಗಲು ಅವಳ ಮೊಗ ನೋಡಬೇಕು - ಕಾಲ ಅಲ್ಲೇ ಮಂಡಿಯೂರಿ ನಿಲ್ಲಬೇಕು; ಈ ಹೆಗಲ ಮೇಲೆ ಅಚ್ಚಾದ ಅವಳ ಹುಕಿಯ ಚಿತ್ತಾರದುರಿ ಆರಲೇಬಾರದು, ಇಲ್ಲೇ ಇಟ್ಟು ಮರೆತ ಇಷ್ಟದ್ದೇನನ್ನೋ ಹುಡುಕುವವಳಂತೆ ಮೂಗುಜ್ಜಿ ಎದೆಯ ರೋಮಕುಲವ ಕೆದಕುತ್ತಾ ನಿತ್ಯ ಅವಳು ಎನ್ನ ತೋಳಲ್ಲರಳುವಂತೆಯೇ ಎನ್ನ ಪ್ರತಿ ಹಗಲೂ ಇಷ್ಟಿಷ್ಟಾಗಿ ತನ್ನ ಚಂದವ ಬಿಚ್ಚಿಕೊಳ್ಳಬೇಕು......
____ ಕಪ್ಪು ಹುಡುಗಿ...
💏💏💏

ಎಳೆದು ಎದೆಗವುಚಿಕೊಂಡು 'ನಂಗಿಷ್ಟ ಇಲ್ಲ ಇದೆಲ್ಲಾ, ಥೂ, ದೂರ ಹೋಗೂ' ಎಂದು ಗೊಣಗುವ ನಿನ್ನ ಆಮೋದಕ್ಕೆ ಮಳ್ಳಾಗದ ರಸಿಕನ್ಯಾವನು...
ಅಷ್ಟು ದೂರ ನಿಂತೇ ಸೋತವನನು ಇಷ್ಟು ಸನಿಹ ಸೆಳೆದು ಉಸಿರ ಪೂಸಿ ಹೋಗು ಎಂದರೆ ಉಸಿರೇ ಹೋದೀತು ಚೆಲುವಿನೆದೆ ಕೊರಕಲಲಿ...
____ ರತಿ ರಾಗ ಸಲ್ಲಾಪ...
💏💏💏

ನಾನು ನೀನು ಮತ್ತು ಟಬುಬಿಯ ಹೂಗಳರಳಿದ ಹಾದಿ ಅಷ್ಟೇ... 🥰
ಉಳಿದವೆಲ್ಲಾ ಬರೀ ನಶ್ವರ... 🤭
ಹಾಗಂದವಳ ಕನಸು ನಚ್ಚಗಿರಲಿ... 😍
💏💏💏

ಯಪ್ಪಾ
ಈ ಛಳಿ ಇರುಳ ಮಂಟಪದಲ್ಲಿ ಎದೆ ಬಿಗಿದು ಉಸಿರ ವೀಣೆ ತಾರಕದಿ ಮಿಡಿಯಲು ಬಲು ತುಂಟ ಪೌರೋಹಿತ್ಯ ನಿನ್ನ ನಾಲಿಗೆಯದು - ಮಾತಾಗಿಯೂ, ಮುತ್ತಾಗಿಯೂ...
____ ನೀನೊಂದು ಪರಮಾಪ್ತ ಪೋಲಿ ಸಾಂಗತ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ನಾಕು ನೂರು.....

ಆಗಂತುಕ ಪರವಶತೆ.....


ಮಳೆಯ ಕೊರಳಿಂದ ಮಿಡಿದು ಬರುವ ನಿನ್ನ ಹೆಸರು...
ಖಾಲಿ ಬೆಂಚಿನಾಚೆ ಕತ್ತಲಲೆಲ್ಲೋ ಸುಳಿದು ನಕ್ಕಂತೆ ನಿನ್ನ ನೆಳಲು...
ಒದ್ದೆ ಹಾದಿಯ ಅಂಚು - ಹೂ ಗೆಜ್ಜೆ ಪಾದದ ಗುರುತು...
ಮಳೆ ಬರೆದ ಕವಿತೆಯಾ ಮೈಗಂಟಿದಾ ಘಮಲು ನಿನ್ನುಸಿರು...
ಕುಡಿಯೊಡೆದ ಭಾವದ ಗೂಡಿನಲ್ಲಿ ಅರ್ಧ ಬೆಳಕು ಇನ್ನರ್ಧ ಗಾಢ ಕಗ್ಗತ್ತಲು - ಪೂರ್ಣ‌ವಾಗದ, ಪೂರ್ಣ ದಕ್ಕಲೂ ಬಾರದ ಕಾಡು ಕವನ ನೀನು...
___ ನೆನಪು ಮಧುರ ಶಾಪ...
💏💏💏

ತೀರದ ಹಸಿವಿನ/ವಲ್ಲಿ ಕಾಮ ತುಟಿ ಕಚ್ಚುವಾಗ ಆರದ ಕನಸಿನ/ಸಲ್ಲಿ ಪ್ರೇಮ ಕಣ್ಮುಚ್ಚಿ ಸೋಬಾನೆ ಹಾಡುತ್ತೆ...
____ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ...
____ ಭಾವಾನುಭಾವ ಸಮಾಧಿ...
💏💏💏

ಈ ಸಂಜೆಗಳ ಅಡ್ನಾಡಿ ಮಳೆಯಲ್ಲಿ ನೆಂದ ಮೈಗೆ ಅವಳ ಅಪರಿಚಿತ ನಗುವೂ ಎಷ್ಟು ಬೆಚ್ಚಗಿದೆ...
ಮೋಡ ಮಳೆಯಾದಾಗಲೆಲ್ಲ ಅವಳಂಥ ಹೊಸ ನಗುವೊಂದು ತಬ್ಬುತಿರಲಿ ಹೀಂಗೆ - ಕಣ್ಣ ಚಮೆಯಲ್ಲಿ ನಾಭೀಮೂಲವ ಕೆದಕಿದ ಹಾಂಗೆ...
____ ಪೋಲಿ ಹೈದನಿಗೆ ಪ್ರಕೃತಿ ಪರಿಚಯಿಸಿಕೊಳ್ಳುವುದೇ ಹಿಂಗಿಂಗೆ...
💏💏💏

ಮನಸೋ ಇಚ್ಚೆ ಉಂಡು ಬೆರಳು ಚೀಪಿ, ಕೈ ನೆಕ್ಕುವಾಗ ನಾಲಿಗೆ ಹೊಮ್ಮಿಸುವ ತೃಪ್ತ ರುಚಿಯಿರುತ್ತಲ್ಲ ಅಂಥದ್ದೇ ವಿಶಿಷ್ಟ ರುಚಿಯೊಂದು ಹೊಕ್ಕುಳ ಕೆಳದಂಡೆಯಲಿ ಸುಳಿದಿರುಗುತ್ತದೆ ಆರ್ಭಟ‌ದಿ ಸುರಿದು ನಿಂತ ಮೋಡದಿಂದ ಪಿಟಪಿಟನೆ ಉದುರುತ್ತಲೇ ಉಳಿದ ಮಳೆಯ ಕೊನೆ ಹನಿಗಳಿಗೆ ಮೈಯ್ಯೊಡ್ಡಿ ನಿನ್ನ ನಡು ಬಳಸಿ ಅಷ್ಟು ದೂರ ನಡೆಯುವಾಗ...
____ ಮೈಯ್ಯೆಲ್ಲ ಕಣ್ಣಾಗಿ ಕಾಯುತ್ತೇನೆ - ಮತ್ತೆ ಮಳೆಯಾಗಬಹುದೇ... 
💏💏💏

ನಿನ್ನೆಡೆಗಿನ ಮೋಹಕ್ಕೆ, ಪ್ರಣಯ ಸಲ್ಲಾಪ ಭಾವಕ್ಕೆ, ವಿರಹದಾಲಸ್ಯಕ್ಕೆ ಕಲ್ಪನಾ ವಿಲಾಸದ ಕಣ್ಣಿದ್ದರೆ ಸಾಕು ನೋಡು... 
ಅಲ್ಲಿ ಮೌನವೂ ನವಿರು ಕಾವ್ಯ ಕಂಪನ...
ಆದರೋ,
ನೆತ್ತಿ ನೇವರಿಸೋ ಸಾಂತ್ವನ‌ಕ್ಕೆ ಮಾತ್ರ ನಿನ್ನೆದೆಯ ನೋವ ಬೇರು ನಿಟ್ಟುಸಿರ ಛಡಿಯಾಗಿಯಾದರೂ ಮಾತಾಗಿ ನನ್ನ ಕರುಳ ತಾಕಲೇ‌ಬೇಕು... 
ಮೌನ ಸಾಂತ್ವನ ಎಂದರದು ಶ್ರದ್ಧಾಂಜಲಿಯ ತಲ್ಲಣ...
ಇಷ್ಟರಾಚೆ -
ಇಲ್ಲೆಲ್ಲೋ ಕತ್ತಲ ಕುಡಿಯುತ್ತಾ ಕೂತವನ ಕಾವ್ಯದ ಕಣ್ಣಲ್ಲಿನ ತಂಪು ರಮ್ಯತೆ, ಕರುಳಿನಾಳದ ಬಿಸಿ ಮೌನ ಎರಡರ ಅನುಭಾವದಲ್ಲಿ ನಿನಗೆ ನೀನೇ ಸಾಂತ್ವನ‌ವಾದರೆ ಕವಿ ಗೆದ್ದು ಗೆಳೆಯನಾಗಿ ಜೊತೆ ನಿಂದಂತೆ ಲೆಕ್ಕ...
____ ಮಾತಾಗು, ನಾನೂ ಗೆಳೆಯನಾದೇನು...
💏💏💏

ಕಡಲೇ -
ಸುಖದ ಕನಸು ಮತ್ತು ನೆನಪುಗಳ ನಶೆಯಲ್ಲಿ ಮೈಮನದ ತೀರಗಳಲಿ ಪಲ್ಲವಿಸುವಷ್ಟು ಸುಖೀ ರಸ ರಾಜಿ ಸುಖ ಸುರಿವ ಆ ಘಳಿಗೆಗಳಲೂ ತುಂಬಿ ಬರಲಿಕ್ಕಿಲ್ಲ ನೋಡು ಸಾಖೀ...
____ಖಾಲಿ ಖಾಲಿ ಬಟ್ಟಲು ಮತ್ತು ಸಿಕ್ಕುಸಿಕ್ಕು ಈ ಭಾವ ದಿಕ್ಕು...
💏💏💏

ನವಿಲು ನಡೆದ ಹಾದಿ ಬದಿ ಬಿದ್ದ ಗರಿಯ ಮೇಲೆ ಇರುವೆ ಮರಿಗಳು ಬಣ್ಣದಾಟ ಆಡುತಿವೆ - ಮೆಲ್ಲನೆತ್ತಿ ಎದೆಯಮೇಲಿಟ್ಟುಕೊಂಡೆ - ನಿನ್ನುಸಿರು ತುಳಿದಂತಿದೆ ಎದೆ ರೋಮವ...
ಕೆಂಡ ಹಬ್ಬಲಿಗೆಯ ಮೊಗ್ಗನೆಲ್ಲ ಮಡಿಲ ತುಂಬಿಕೊಂಡು ವೈಯ್ಯಾರದಿ ಒಳನಡೆದವಳ ಲಂಗದ ಕುಚ್ಚಿನ ಕಿರು ಗೆಜ್ಜೆಯ ಗಿಲಕಿಯೊಂದ ನಿನ್ನಂಗಳದಿಂದ ಹೆಕ್ಕಿ ತಂದು ಅದನಿಲ್ಲಿ ಕುಣಿಕುಣಿಸಿ ನಿನ್ನ ನಗೆಯ ಕೇಳಿಸಿಕೊಳ್ಳುತ್ತೇನೆ - ಕಲ್ಯಾಣಿಯ ತೀರದಲಿ ಮೀನುಗಳು ಮುದ್ದಿಕ್ಕಿಕೊಂಡು ಅಲೆಗಳು ಕಂಪಿಸುವಾಗ ನನ್ನೊಳಗಿನ ಮೆಲುನಗೆಯಲಿ ಕಳ್ಳ ಪ್ರೇಮಿಯೊಬ್ಬ ಕನಲುತ್ತಾನೆ...
ಕಿವಿ ಏರಿಯಲ್ಲಿ ಹೊಸದಾಗಿ ಹುಟ್ಟಿಕೊಂಡ ಬಿಳಿಗೂದಲುಗಳ ಎಣಿಸಿ ಎಣಿಸಿ ಕಿತ್ತುಕೊಳ್ತಿದೇನೆ - ನಾಳೆ ದಿನ ಸಂಕಷ್ಟಿಯಂತೆ, ಮನೆ ಎದುರಿನ ಗಣಪನ ಗುಡಿಗೆ ನಿನ್ನ ಪ್ರದಕ್ಷಿಣೆ ತಪ್ಪುವುದಿಲ್ಲ - ದೇವಳದ ಗರುಡ ಗಂಬದ ಹಲ್ಲಿ ನಾನು...
ನಿನ್ನ ಕೂಡುವ ನನ್ನ ಮೋಹದ ಕಾಲ್ದಾರಿಯ ಕಿಬ್ಬಿಗಳ ತುಂಬಾ ರಾತ್ರಿರಾಣಿ, ಪಾರಿಜಾತ, ಸೂಜಿಮಲ್ಲಿಗೆಗಳು ಘಮ್ಮೆಂದು ಅರಳುತ್ತವೆ - ಅಲ್ಲಲ್ಲಿ ಕೇಳಿದ ಊರ ಹೆಂಗಳೆಯರ ಸೋಬಾನೆ ಗೀತೆಗಳನೆಲ್ಲ ಅರ್ಧರ್ಧ ಗುನುಗುತ್ತಾ ಕಮ್ಮಗೆ ಬೆವರುತ್ತೇನೆ...
ಬೆಳುದಿಂಗಳ ಬಳುಕಿಗೆ, ಮೋಡಗಳ ಗುಡುಗಿಗೆ, ಮಳೆಮಾಲೆಯ ನಡುಕಿಗೆ, ಹಸಿ ಹಗಲ ಛಳಿಗೆ, ಕಾರಿರುಳ ಬಿಸಿಗೆ - ಹೀಗೆ ನಿನ್ನ ಮೃದುಲ ನೆನಪು, ಮತ್ತ ಕನಸುಗಳು ಹೆಜ್ಜೆ ಹೆಜ್ಜೆ‌ಗೆ ವಿರಹವ ಸೃಜಿಸುವಾಗ ನಾನು ಪರಮ ಪೋಲಿ ಕವಿಯಾಗುತ್ತೇನೆ...
___ಮತ್ತು ಮಳೆಯ ಸಂಜೆಯ‌ಲಿ ಕಪ್ಪು ಹುಡುಗಿ‌ಯ ನೆನೆಯಬಾರದೆಂದುಕೊಂಡೇ ನೆನೆನೆನೆದು ಸೋಲುತ್ತೇನೆ...
💏💏💏

ಮೀಸೆ ತಿರುವಿಗೆ ಆಸೆ ನಗೆ ಮೆತ್ತಿಕೊಂಡು ಮಾತಿಗಿಳಿದೆಯೆಂದರೆ 
ಮುದ್ದುಕ್ಕಿ ಬರುವಂತೆ ಒಳಗಿಳಿದು ಬರ್ತೀಯಾ ಕಣೋ ಗೂಬೆ ಅಂದವಳೇ -
ಒಣಕಲು ಎದೆಯವನ ಹ‌ಸಿ ಹೊಕ್ಕುಳ ನಿತ್ಯಾಗ್ನಿ ನೀನು...
ಗಲಗಲಿಸಿ ನಗುವ ನಿನ್ನನೇ ತಾಕಿದಂತೆ 
ಧಾರೆ ಧಾರೆ ತಂಪು ತಂಪು ಎಳೆ ಎಳೆಯ ಬಿರು ಮಳೆಯು
ಸಂಜೆಯ ಗದ್ದದಿಂದ ಜಾರಿ ಎದೆ ರೋಮವ ತೊಳೆಯುತ್ತದೆ...
ನೆಂದು ಬಂದವನ ಒದ್ದೆ ಮೈಯ್ಯನೇ ತೋಳ್ಚಾಚಿ ಬಳಸಿ
ನನ್ನ ಛಳಿ ನಡುಕದ ಉಸಿರಲ್ಲಿ ಮಿಂದೆದ್ದು
ಬಿಸಿಯುಣಿಸಿದ ನಿನ್ನ ನುಂಪು ಮೈಯ್ಯ ಮೈದಾನವ ನೆನಪಿಸಿ ಕಾಡುತ್ತಿದೆ 
ಆ ಚಿಗುರೆಲೆಯ ಮೈಗಂಟಿ ಇಳಿವ ಹನಿ ಹನಿ ಇಬ್ಬನಿ/ಮಳೆಹನಿ... 🙈
ಎದೆಗೆಳೆದುಕೊಂಡು ನೆತ್ತಿ ಒರೆಸುವ ಮೋದಕೆ ಸೋತು
ಹಂಡೆ ಒಲೆ ಬೆಂಕಿಯ ಜಂಬೆ ಕುಂಟೆಯ ನಿಗಿ ನಿಗಿ ಕೆಂಡದಂಗೆ ನಾಭಿ ದಂಡೆ ಸುಡುತಿರುವಾಗ 
ಇರುಳ ಬೆತ್ತಾಲೆ ಬೆನ್ನ ಮೇಲೆ ಮತ್ತೆ ಮತ್ತೆ ಬರೆಯದಿರಬಹುದೇ ನಿನ್ನ ಹೆಸರ...
ಈರ್ವರೂ ನೆಣೆ ಸುತ್ತಿ ಸುಳಿದು 
ಮೈಯ್ಯ ಕತ್ತಲ ಬಳ್ಳಿಗಳಿಗೆ ಮರಮರಳಿ ಉಂಡು ಉಣಿಸದಿರಲಾದೀತೇ 
ಉರಿ ಉರಿ ಸುಖದ ಉಸಿರ...
ಇರುಳ ಬಾಗಿಲಿಗೆ ಕರಿ ಮೋಡದ ದಿಬ್ಬಣ ಬಂದಾಗ
ಆಪಸ್ನಾತೀಲಿ ಸಿಕ್ಕರೆ ಏಕಾಂತವೇ ಏಕಾಂತ...
ಉದ್ದುದ್ದ ಬಿದ್ದ ಭರಪೂರ ಏಕಾಂತ...
ಯಾವೆಡೆಯಿಂದ ಸವಿಯಲಿ - ಎಲ್ಲೆಡೆಯೂ ಸವಿಯಿಹುದಾ...?!!
_____ ಹನಿ ಹನಿಯೂ ಶೃಂಗಾರವೇ...
💏💏💏

ಕರಿ ಮೋಡದಾ ಕೂಸೇ -
ಅಕಾಲದ ಅಡ್ನಾಡಿ ಪಿರಿ ಪಿರಿ ಮಳೆಯಲ್ಲಿ ತೋಯ್ದು ತೊಪ್ಪೆಯಾದ ಮುಸ್ಸಂಜೆ - ಅರೆಬರೆ ತಂಪಾಗಿ ಹನಿ ಹೊತ್ತ ಮೆಲು ಗಾಳಿ - ಭುವಿಯ ಬಿಸಿ ಉಸಿರಿಂದ ಹೊಮ್ಮಿ ಬರುವ ಮಣ್ಣ ನವಿರುಗಂಪು - ಕರುಳಿನಾಳದಿಂದ ಪುಟಿ ಪುಟಿಯುವ ಸಮ್ಮೋಹೀ ಕಚಗುಳಿ...
ಇರುಳ ಬಾಗಿಲಲ್ಲೋ ತಂಗಾಳಿಯು ಬೆಂಕಿಯೊಂದಿಗೆ ಸರಸಕಿಳಿದಂಗೆ ನಿನ್ನ ಬಿಗಿ(ಸಿ) ಆಸೆಯ ತೆಳು ನಾಚಿಕೆಯ ಕಣ್ಣ ಕುಡಿ ನೋಟದ ನೆನಹೊಂದು ಕಳ್ಳ ಬಾಣವಾಗಿ ನನ್ನ ನಾಭಿ ಮೂಲವ ಚುಚ್ಚುತ್ತದೆ...
ಎದೆಯಾಳದಿಂದೆದ್ದು ಬಂದು ನರನಾಡೀ ಹಾದಿಯಲೆಲ್ಲ ಪರವಶದಾ ಅಲೆಯೆಬ್ಬುವ ನಿನ್ನೆಡೆಗಿನ ನಿಗಿ ನಿಗಿ ನಗ್ನ ಕನಸು - ತಿಳಿಗಪ್ಪುಗತ್ತಲ ಕಿಟಕಿಯಲ್ಲಿ ಎಂದೋ ಉಸಿರಲುಸಿರ ಕಲೆಸಿ ನಲಿದು ಉಸಿರಲೇ ಉಳಿಸಿ ಹೋದ ಪರಮಾಪ್ತ ಪರಿಮಳದ ಸುಡು ಸುಡು ವಿರಹ...
ಇನ್ನೂ ಏನೋ ಏನೇನೋ...
_____ ನೀನಿರಬೇಕಿತ್ತು ಈಗಿಲ್ಲಿ, ಚಾದರದ ಬದಲೀ...
💏💏💏

ಹೂವು ಎಲೆಯ ಮೂಸಿ ಮೈನೆರೆದಂಗೆ... 
ಉಸಿರ ಗೂಡಿನ ಕಿಬ್ಬಿಗಳ ತುಂಬಾ ಅವನ ಘಮ...
ತೇವ ತೇವದ ಕಣ್ಣಲ್ಲಿ ಪಟಪಟಿಸೋ ನಾಚಿಕೆಯ ಕಳ್ಳ ನಗೆರಂಗಿನ ಅಲರು...
ರುದಯದಿಂದೆದ್ದ ಪುಳಕದ ಸುಳಿ ಸುರುಳಿ ಅಲೆಗಳು ನಾಭೀ ದಂಡೆಗೆ ಬೀಸಿ ಬಡಿದು ನೂರು ಸಾವಿರ ಆಸೆ ಹನಿಗಳ ಹೋಳಾಗಿ ಸಿಡಿದು ಮೈಯ್ಯ ತೀರಗಳುದ್ದಕ್ಕೂ ಬೆವರ ಮುಂಗಾರು...
____ ಆಗಂತುಕ ಪರವಶತೆ...
💏💏💏

ಇದೆಲ್ಲ ಸೋಲು ಎಷ್ಟು ಸವಿಯಾದ ಶಾಪ - ನಿನ್ನ ತೋಳಲ್ಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ತೊಂಭತ್ತೊಂಭತ್ತು.....

ಹಾದು ಹೋಗುವಾಗ.....

ನಿನ್ನ ಆರೈಕೆ ಅವರ ಜವಾಬ್ದಾರಿ ಅಲ್ಲದಿರುವಾಗ ಕಾಳಜಿ ತೋರುವುದು ಬಲು ಸುಲಭ...
ಜವಾಬ್ದಾರಿ ಆಗಿದ್ದೂ ಕಾಳಜಿ ಮಾಡುವ ಅಥವಾ ಜವಾಬ್ದಾರಿ ಅಲ್ಲದೆಯೂ ಕಾಳಜಿಯನ್ನು ಜವಾಬ್ದಾರಿ‌ಯಿಂದ ನಿಭಾಯಿಸುವ ಜೀವ ಜೊತೆಯಾಗಿದ್ದಷ್ಟು ಕಾಲ ಬದುಕಿನ ನಡಿಗೆ ಚೂರು ಸುಲಭ...
____ ನಾನು ನಿನಗೇನೆನ್ನುವುದು ಕೇಳಬಾರದ ಯಕ್ಷ ಪ್ರಶ್ನೆ...!!
☺☺☺

ಒಂದು ಹಗಲಿನ ಹಿಂದೆ, ಒಂದು ರಾತ್ರಿ‌ಯ ಮುಂದೆ ಒಂದೊಂದೇ ಅಧ್ಯಾಯಗಳು ಮುಗಿಯುತ್ತವೆ - ಭಾವದ್ದು, ಜೀವದ್ದು, ಜೀವನದ್ದೂ ಇಲ್ಲಿ...
ನಕಲು ತಿದ್ದಲಾಗದ ಆಯುಷ್ಯ‌ ಗ್ರಂಥದ ಕೊನೆಯ ಪುಟವ ಈ ಉಸಿರು ಸವರಿದ ಘಳಿಗೆ ಪುಸ್ತಕ‌ವ ಮುಚ್ಚಿಡಲೂ ನಾನಿಲ್ಲ ಅಲ್ಲಿ...
ಮೌನದ ಗೋಡೆ ಕಟ್ಟಿ ಎದೆಯ ಬಂಧಿಸಿದವರೂ, ಮಾತಿನ ಈಟಿಯಿಂದ ಬೆನ್ನ ಇರಿದವರೂ ಒಟ್ಟೊಟ್ಟಿಗೆ ನಿಟ್ಟುಸಿರಿನ ಶ್ರದ್ಧಾಂಜಲಿ ಸಲ್ಲಿಸಬಹುದೇನೋ ಆಗ, ಅಲ್ವಾ ಮಲ್ಲೀ...
____ ಹಾದು ಹೋಗುವಾಗ...
☺☺☺

ಮಾಸಿದ್ದಾದರೂ ಸರಿಯೇ ಒಂದ್ನಾಕು ಮುಖವಾಡಗಳಿದ್ದರೆ ಸಾಕು ಬಗಲಲ್ಲಿ, ಎಂಥಾ ಬಿರು ಹಗಲನಾದರೂ ಹೆಂಗೋ ದಾಟಿಕೊಂಡು ಬಿಡಬಹುದು...
ಆದರೋ -
ಎಲ್ಲಾ ಕಳಚಿಟ್ಟು ಹಾಯಬೇಕಾದ ಅಥವಾ ಬೆಳ್ಳಾನೆ ಬಿಳೀ ಮುಖವಾಡವೂ ಕಪ್ಪಾನೆ ಕಪ್ಪು ಕತ್ತಲ ಇರುಳಲಿ ಕಪ್ಪಾಗಿ ಕರಗಿ ಹೋಗುವ ಈ ಇರುಳಿನದ್ದೇ ರಣ ಚಿಂತೆ...
____ ದಿಂಬಿಗಂಟಿದ ಕಣ್ಣ ಪಸೆ...
☺☺☺

ಕೂಪ ಮಂಡೂಕ ಅಂತ ಬೈದರು...
ಕಡಲ ಮೀನು ಅಗಾಧತೆಯನು ವರ್ಣಿಸಬಹುದು,
ಆದರೆ
ಬಾವಿ ನೀರಿನ ರುಚಿಯನು ಬಾವಿ ಕಪ್ಪೆಯೇ ಹೇಳಬೇಕಲ್ಲವಾ...
ಅರಿವು ಮತ್ತು ಹಿರಿಮೆ ಎದೆಯ ಆನಂದದ್ದಲ್ಲವಾ...
ಕಣ್ಣ ಪಾಪೆಯೊಳಗಿನ ಆಕಾಶ - ಬೊಗಸೆ‌ಯಷ್ಟು ಸಾಗರ...
___ 'ನಾನು' ಬಾವಿಯ ಕಪ್ಪೆ...
 ***ಅರ್ಥ ಗಿರ್ಥ ಕೇಳಬೇಡಿ...
☺☺☺

ವತ್ಸಾ -
ಬದುಕಿನ ಮುಂದೆ ಸಾವು ಎಷ್ಟು ದೈನೇಸಿ ನೋಡು...
ಸಾವು ನಿಶ್ಚಿತ‌ವೇ ಎಂಬ ಅರಿವಿದ್ದರೂ ಪ್ರತಿ ಜೀವ ಜಂತುವೂ ನಾಳಿನ ಬೆಳಕನು ನೋಡುವ ಗಟ್ಟಿ ನಂಬಿಕೆಯಲ್ಲೇ ಇಂದನ್ನು ಸುಡುತ್ತಾ ಹಗಲಿರುಳನು ಹಾಯುತ್ತೆ...
ಭ್ರಾಂತು ಭ್ರಾಂತು ಎನ್ನುತ್ತಾ ನಶ್ವರತೆಯ ರಾಗ ಹಾಡುತ್ತಲೇ ನಾಳಿನ ಭದ್ರತೆ‌ಗೆ ಬಹುವಿಧ ಭಲ್ಲೆಗಳ ಕೆತ್ತಿಕೊಳ್ಳುತ್ತದೆ ಜೀವಕೋಟಿ...
ಅಲ್ಲಿಗೆ,
ಸಾವು ಎಷ್ಟು ಯಕಶ್ಚಿತ್ ಸತ್ಯ ಅನ್ಸಲ್ವಾ ಈ ಬದುಕಿನ ಭರವಸೆಯ ಮುಂದೆ...
____ ಚಿಗುರು...
☺☺☺

ಭಾವ ಸತ್ತವನೊಬ್ಬ ಹುಟ್ಟಿಸಿದ ಕೂಸಿಗೆ ಅವನ ಸುತ್ತ ಬಂಧ ಅಂಟುವುದಾದರೂ ಹೇಗೆ...
ಭಾವ ಒಡಮೂಡದೇ ಹೋದ, ರಕ್ತವಷ್ಟೇ ಹಿಡಿದಿಟ್ಟ ಸಂಬಂಧದ ಪರಿಧಿಯಲ್ಲಿಯ ಗಬ್ಬೆನ್ನುವ ಅಸಹನೀಯ ಸೂತಕದ ವಾಸನೆಯನು ಬದುಕ ತುಂಬಾ ಭರಿಸುವುದಾದರೂ ಹೇಗೆ...
ಹೇಳು -
ನನಗೆ ನನ್ನ ನಗುವ ಕೊಡದಲ್ಲಿ ನಾನಿರಲಿ ಹೇಗೆ...
ಕೇಳಿಲ್ಲಿ -
ಅಂತಲ್ಲಿ ನನಗೆ ನನ್ನ ಉಳಿಸಿಕೊಡುವ ಸುರಕ್ಷಿತ ಅಂತರವಷ್ಟೇ ನನ್ನ ಆಯ್ಕೆಯಾದರೆ ತಪ್ಪು ಹೇಗೆ...
____ ರಕ್ತ‌ಕೇ ಅಂಟಿದ ಕ್ಷುದ್ರ (ಸಂಬಂಧ) ಕಲೆಯ ತೊಳೆದುಕೊಳ್ಳುವ ಕಲೆ ಯಾವುದೂsss...
☺☺☺

ಒಳಗಣ ನಿರ್ವಾತವ ತುಂಬಿಕೊಳ್ಳೋ ಹಪಹಪಿಯಲ್ಲಿ ಹುಚ್ಚು ಬಡಬಡಿಕೆಗಳ ನಂಬಿ ನನ್ನ ತುತ್ತೂರಿಯ ನಾನೇ ಊದಿಕೊಳ್ಳುತ್ತಾ ನಿನ್ನ ಸುತ್ತ ಸುತ್ತುತ್ತೇನೆ...
ಬೆಳಕಿಗೆ ಸೋತ ಬಣ್ಣದ ಹುಳ ಮತ್ತು ಹೊಂಚಿ ಕೂತ ಹಲ್ಲಿಯ ಹೊಟ್ಟೆಯ ಹಸಿವು ಒಂದು ಜಾವ ನನ್ನಲ್ಲಿ ನನ್ನೆಡೆಗೇ ಕರುಣೆಯ ನಡುಕವ ಮೂಡಿಸುತ್ತದೆ...
____ ಅಲ್ಪನ ಆಲಾಪಗಳೆಲ್ಲಾ ಇಂಥವೇ...
☺☺☺

ಸಣ್ಣ ಸಣ್ಣ ಖುಷಿಯ, ಬೆರಳಂಚಿಗೊಂದು ಭರವಸೆಯ ತಣ್ಣಗೆ ತುಂಬಿ ಕೊಡುವ ಪ್ರಾಂಜಲ ಪ್ರೀತಿಗೆ ಬಾಲ್ಯ‌ವೆಂದು ಕೂಗಬಹುದು...
___ ಅನ್ಯೋನ್ಯತೆ‌ಯ ಅನನ್ಯತೆ - ಮಗು ಮನವೆಂಬ ಹಿರಿತನ...
☺☺☺

ಮೂಟೆ ಮೂಟೆ ಪ್ರೀತಿಯನು ಚಮಚೆ ಸಿಹಿಯಲ್ಲಿ ತುಂಬಿ ಕರುಳಿಗಿಡುವ ಮಗುವ ನಗುವ ತಾಯ್ತನ - ನನ್ನ ಉಸಿರ ಭರವಸೆ...‍

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ತೊಂಭತ್ತೆಂಟು.....

ಒಂದು ಮೈತ್ರಿ.....

ನನ್ನಲ್ಲಿ, ನಿನ್ನಲ್ಲಿ -
ಬಡಿದಾಟಕ್ಕೆ ನಿಂತದ್ದು ಎದೆಯ ನೋವು ಮತ್ತು ಬುದ್ಧಿಯ ಅಹಂ...
ಸಾವು ಪ್ರೀತಿಯದ್ದು - ಬಂಧಕ್ಕೆ ಸೂತಕ...
_____ರೆಕ್ಕೆಯ ಕನಸೂ ಕೂಡ ಎಷ್ಟು ಚಂದ ಚಂದ... 
💕💕💕

ಅವರಿಗೆ ಮಾತಾಗಲು ಮನಸಿಲ್ಲ...
ನನಗೋ ಕೇಳಿಸಿಕೊಳ್ಳುಲು ಪುರುಸೊತ್ತಿಲ್ಲ...
ಬಿಡಿ, ಅಲ್ಲಿಗಲ್ಲಿಗೆ ಚುಕ್ತಾ...
___ ಬಂಧ, ಸಂಬಂಧ...
💕💕💕

ಅವಳಿಗೆ ಮನಸಾದಾಗ (ಮಾತ್ರ) ಅವಳು ಮಾತಾಗಲು ನನ್ನ ಹುಡುಕುತ್ತಾಳೆ...
ನಂಗೆ ಸಮಯವಾದಾಗ (ಮಾತ್ರ) ನಾ ಹಾಯ್ ಅನ್ನುತ್ತಾ ಅವಳೆಡೆಗೆ ಹೊರಳುತ್ತೇನೆ...
ಈ ಮನಸು ಮತ್ತು ಸಮಯ ಸಂಧಿಸೋ ಅಷ್ಟ್ರಲ್ಲಿ ಕಾಲ ಕಾಲ್ಚಾಚಿ ಮಲಗಿ ಕಾಲವೇ ಸಂದಿರುತ್ತೆ...
ಅಲ್ಲಿಗೆ
ವಿಚಿತ್ರ ಕುಶಾಲಿನಲ್ಲಿ ಬಂಧದ ನಡುವಿನ ಆಪ್ತ ಸಲಿಗೆ ಸದ್ದಿಲ್ಲದೇ ಸತ್ತಿರುತ್ತದೆ...
___ 'ನಾನು...'
💕💕💕

ಈ ಕಣ್ಣ ಕನಸು
ಆ ಹಕ್ಕಿ ರೆಕ್ಕೆ
ನಡುವೆ ಪ್ರಿಯ ಆತ್ಮಗಳ 
ಮೌನ ಅನುಸಂಧಾನ...
___ ನನ್ನ ಕಾವ್ಯ ಕುಂಡಲಿ...
💕💕💕

ದಡದ ದಿವ್ಯ ಮೌನವ ಗುದ್ದಿ ಗುದ್ದಿ ನೋಯುತಿವೆ ಕಡಲ ಅಲೆಗಳು - ನಿನ್ನ ಕಾಯುವ ನನ್ನ ಕಡು ವಿರಹದಂತೆ...
____ ನೆನಪುಗಳು ಮಾತಾಗುತ್ತವೆ...
💕💕💕

ಸಾಖೀ -
ಈ ಸಂಜೆ ಮಳೆಯ ಪೆಟ್ಟಿಗೆ ಅಮ್ಮ ಸುಟ್ಟು ಕೈಗಿಡುತಿದ್ದ ಹಲಸಿನ ಹಪ್ಪಳ, ಒಣ ಕೊಬ್ಬರಿ ಚೂರಿ‌ನ ರುಚಿಯೂ ಮತ್ತು ಕೊರಳ ತೀಡಿ ಹರೆಯವ ಮೀಟಿದ ಮೋಹದೂರಿನ ಹುಡುಗಿ‌ ತುಟಿ‌ಯ ಬಿಸಿಯೂ ಒಟ್ಟೊಟ್ಟಿಗೆ ನೆಪ್ಪಾಗಿ ಎದೆಯ ಸುಟ್ಟರೆ ಹ್ಯಾಂಗೆ ತಡೆದೀತು ಹೇಳು ಈ ಬಡ ಜೀವ...
____ ಈ ಪಡಖಾನೆಯ ಪಡುವಣ ಕೋಣೆಯೂ ಎಷ್ಟು ನೀರಸ ಗೊತ್ತಾ ಅವೆಲ್ಲ ನೆನಪುಗಳು ಗುಮಿಗೂಡುವ ಹೊತ್ತಿಗೆ...
💕💕💕

ಕಪ್ಪು ಕಾಳಿಂದೀ -
ಕಣ್ಣ ನಗೆಯ ಕೌಶಲದ ಪ್ರತಿ ಪ್ರೇಮಿನೊಳಗೂ ನೀನೇ ಸಿಗಬೇಕು - ಗರಿ ಗರಿ ಕನಸ ಹಡೆಯಬೇಕು - ನನ್ನ ನಾನೇ ಪಡೆಯಬೇಕು...
___ ಅಪರಿಚಿತ ಹಕ್ಕಿಯ ಬನದ ಭಾವಗೀತೆ...
💕💕💕

ನಿನ್ನ ಸಮಯದಲ್ಲಿ ನಂಗೂ ಒಂಚೂರು ಪಾಲು ಕೊಡು ಅಂತ ಆತುಕೊಳ್ಳುವ ಮತ್ತು ನಿನ್ನ ಅಷ್ಟೂ ಸಮಯ ನಂಗ್‌ನಂಗೇ ಕೊಡಬೇಕು ಎಂದು ತಾಕೀತು ಮಾಡುವ ಮಾತು/ಭಾವಗಳ ನಡುವೆ ಪ್ರೀತಿ ಮತ್ತು ಸ್ವಾಧೀನತೆಯ ಅಂತರ...
ಪ್ರೀತಿ - ಬಯಲು, ರೆಕ್ಕೆಯ ಬಂಧ... 
ಸ್ವಾಧೀನತೆ - ಬೇಲಿ, ಬೆಳೆಯ ಸಂಬಂಧ...
____ ನಗೆಯ ರೆಕ್ಕೆ ಬಿಚ್ಚಿಕೊಂಡು ಬಯಲಿಗೆ ಬೀಳಬೇಕು 'ನಾನು...'
💕💕💕

ಕೇಳಿಲ್ಲಿ -
ಪರಿಚಿತ ಮುಖದ ಅಪರಿಚಿತ ನೋಟದೆದುರು ಸದಾ ಕಂಗಾಲು ಎದೆಯ ಭಯಗ್ರಸ್ಥ ಮಗು ನಾನು...
______ ನಡಾವಳಿ...
💕💕💕

ಹೂನಗೆಯ ಬೆಳಕು ಅವಳು - ನಾನೆಂಬ ನನ್ನ ತನ್ನ ಬಳಿ ಸೆಳೆವ ಅವಳ ಹುಸಿ ಧಾವಂತಗಳೆಲ್ಲ ಎನ್ನ ಎದೆ ಮುಗುಳು...
_____ ಸಂಜೆ ಸರಸಿಯ ಚೆಲುವು...
💕💕💕

ನೆಲದ ಮರಿ ತಾರೆಗಳ ತೋರಿ ನಗೆಯೊಂದ ದಾಟಿಸಿದ ಕಾಡು ಹೂವಿನಂಥ ಹುಡುಗಿಯ ಬದುಕಿನೊಡಲು ನಚ್ಚಗಿರಲಿ...
____ ಒಂದು ಮೈತ್ರಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)