ಆಗಂತುಕ ಪರವಶತೆ.....
ಮಳೆಯ ಕೊರಳಿಂದ ಮಿಡಿದು ಬರುವ ನಿನ್ನ ಹೆಸರು...
ಖಾಲಿ ಬೆಂಚಿನಾಚೆ ಕತ್ತಲಲೆಲ್ಲೋ ಸುಳಿದು ನಕ್ಕಂತೆ ನಿನ್ನ ನೆಳಲು...
ಒದ್ದೆ ಹಾದಿಯ ಅಂಚು - ಹೂ ಗೆಜ್ಜೆ ಪಾದದ ಗುರುತು...
ಮಳೆ ಬರೆದ ಕವಿತೆಯಾ ಮೈಗಂಟಿದಾ ಘಮಲು ನಿನ್ನುಸಿರು...
ಕುಡಿಯೊಡೆದ ಭಾವದ ಗೂಡಿನಲ್ಲಿ ಅರ್ಧ ಬೆಳಕು ಇನ್ನರ್ಧ ಗಾಢ ಕಗ್ಗತ್ತಲು - ಪೂರ್ಣವಾಗದ, ಪೂರ್ಣ ದಕ್ಕಲೂ ಬಾರದ ಕಾಡು ಕವನ ನೀನು...
___ ನೆನಪು ಮಧುರ ಶಾಪ...
💏💏💏
ತೀರದ ಹಸಿವಿನ/ವಲ್ಲಿ ಕಾಮ ತುಟಿ ಕಚ್ಚುವಾಗ ಆರದ ಕನಸಿನ/ಸಲ್ಲಿ ಪ್ರೇಮ ಕಣ್ಮುಚ್ಚಿ ಸೋಬಾನೆ ಹಾಡುತ್ತೆ...
____ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ...
____ ಭಾವಾನುಭಾವ ಸಮಾಧಿ...
💏💏💏
ಈ ಸಂಜೆಗಳ ಅಡ್ನಾಡಿ ಮಳೆಯಲ್ಲಿ ನೆಂದ ಮೈಗೆ ಅವಳ ಅಪರಿಚಿತ ನಗುವೂ ಎಷ್ಟು ಬೆಚ್ಚಗಿದೆ...
ಮೋಡ ಮಳೆಯಾದಾಗಲೆಲ್ಲ ಅವಳಂಥ ಹೊಸ ನಗುವೊಂದು ತಬ್ಬುತಿರಲಿ ಹೀಂಗೆ - ಕಣ್ಣ ಚಮೆಯಲ್ಲಿ ನಾಭೀಮೂಲವ ಕೆದಕಿದ ಹಾಂಗೆ...
____ ಪೋಲಿ ಹೈದನಿಗೆ ಪ್ರಕೃತಿ ಪರಿಚಯಿಸಿಕೊಳ್ಳುವುದೇ ಹಿಂಗಿಂಗೆ...
💏💏💏
ಮನಸೋ ಇಚ್ಚೆ ಉಂಡು ಬೆರಳು ಚೀಪಿ, ಕೈ ನೆಕ್ಕುವಾಗ ನಾಲಿಗೆ ಹೊಮ್ಮಿಸುವ ತೃಪ್ತ ರುಚಿಯಿರುತ್ತಲ್ಲ ಅಂಥದ್ದೇ ವಿಶಿಷ್ಟ ರುಚಿಯೊಂದು ಹೊಕ್ಕುಳ ಕೆಳದಂಡೆಯಲಿ ಸುಳಿದಿರುಗುತ್ತದೆ ಆರ್ಭಟದಿ ಸುರಿದು ನಿಂತ ಮೋಡದಿಂದ ಪಿಟಪಿಟನೆ ಉದುರುತ್ತಲೇ ಉಳಿದ ಮಳೆಯ ಕೊನೆ ಹನಿಗಳಿಗೆ ಮೈಯ್ಯೊಡ್ಡಿ ನಿನ್ನ ನಡು ಬಳಸಿ ಅಷ್ಟು ದೂರ ನಡೆಯುವಾಗ...
____ ಮೈಯ್ಯೆಲ್ಲ ಕಣ್ಣಾಗಿ ಕಾಯುತ್ತೇನೆ - ಮತ್ತೆ ಮಳೆಯಾಗಬಹುದೇ...
💏💏💏
ನಿನ್ನೆಡೆಗಿನ ಮೋಹಕ್ಕೆ, ಪ್ರಣಯ ಸಲ್ಲಾಪ ಭಾವಕ್ಕೆ, ವಿರಹದಾಲಸ್ಯಕ್ಕೆ ಕಲ್ಪನಾ ವಿಲಾಸದ ಕಣ್ಣಿದ್ದರೆ ಸಾಕು ನೋಡು...
ಅಲ್ಲಿ ಮೌನವೂ ನವಿರು ಕಾವ್ಯ ಕಂಪನ...
ಆದರೋ,
ನೆತ್ತಿ ನೇವರಿಸೋ ಸಾಂತ್ವನಕ್ಕೆ ಮಾತ್ರ ನಿನ್ನೆದೆಯ ನೋವ ಬೇರು ನಿಟ್ಟುಸಿರ ಛಡಿಯಾಗಿಯಾದರೂ ಮಾತಾಗಿ ನನ್ನ ಕರುಳ ತಾಕಲೇಬೇಕು...
ಮೌನ ಸಾಂತ್ವನ ಎಂದರದು ಶ್ರದ್ಧಾಂಜಲಿಯ ತಲ್ಲಣ...
ಇಷ್ಟರಾಚೆ -
ಇಲ್ಲೆಲ್ಲೋ ಕತ್ತಲ ಕುಡಿಯುತ್ತಾ ಕೂತವನ ಕಾವ್ಯದ ಕಣ್ಣಲ್ಲಿನ ತಂಪು ರಮ್ಯತೆ, ಕರುಳಿನಾಳದ ಬಿಸಿ ಮೌನ ಎರಡರ ಅನುಭಾವದಲ್ಲಿ ನಿನಗೆ ನೀನೇ ಸಾಂತ್ವನವಾದರೆ ಕವಿ ಗೆದ್ದು ಗೆಳೆಯನಾಗಿ ಜೊತೆ ನಿಂದಂತೆ ಲೆಕ್ಕ...
____ ಮಾತಾಗು, ನಾನೂ ಗೆಳೆಯನಾದೇನು...
💏💏💏
ಕಡಲೇ -
ಸುಖದ ಕನಸು ಮತ್ತು ನೆನಪುಗಳ ನಶೆಯಲ್ಲಿ ಮೈಮನದ ತೀರಗಳಲಿ ಪಲ್ಲವಿಸುವಷ್ಟು ಸುಖೀ ರಸ ರಾಜಿ ಸುಖ ಸುರಿವ ಆ ಘಳಿಗೆಗಳಲೂ ತುಂಬಿ ಬರಲಿಕ್ಕಿಲ್ಲ ನೋಡು ಸಾಖೀ...
____ಖಾಲಿ ಖಾಲಿ ಬಟ್ಟಲು ಮತ್ತು ಸಿಕ್ಕುಸಿಕ್ಕು ಈ ಭಾವ ದಿಕ್ಕು...
💏💏💏
ನವಿಲು ನಡೆದ ಹಾದಿ ಬದಿ ಬಿದ್ದ ಗರಿಯ ಮೇಲೆ ಇರುವೆ ಮರಿಗಳು ಬಣ್ಣದಾಟ ಆಡುತಿವೆ - ಮೆಲ್ಲನೆತ್ತಿ ಎದೆಯಮೇಲಿಟ್ಟುಕೊಂಡೆ - ನಿನ್ನುಸಿರು ತುಳಿದಂತಿದೆ ಎದೆ ರೋಮವ...
ಕೆಂಡ ಹಬ್ಬಲಿಗೆಯ ಮೊಗ್ಗನೆಲ್ಲ ಮಡಿಲ ತುಂಬಿಕೊಂಡು ವೈಯ್ಯಾರದಿ ಒಳನಡೆದವಳ ಲಂಗದ ಕುಚ್ಚಿನ ಕಿರು ಗೆಜ್ಜೆಯ ಗಿಲಕಿಯೊಂದ ನಿನ್ನಂಗಳದಿಂದ ಹೆಕ್ಕಿ ತಂದು ಅದನಿಲ್ಲಿ ಕುಣಿಕುಣಿಸಿ ನಿನ್ನ ನಗೆಯ ಕೇಳಿಸಿಕೊಳ್ಳುತ್ತೇನೆ - ಕಲ್ಯಾಣಿಯ ತೀರದಲಿ ಮೀನುಗಳು ಮುದ್ದಿಕ್ಕಿಕೊಂಡು ಅಲೆಗಳು ಕಂಪಿಸುವಾಗ ನನ್ನೊಳಗಿನ ಮೆಲುನಗೆಯಲಿ ಕಳ್ಳ ಪ್ರೇಮಿಯೊಬ್ಬ ಕನಲುತ್ತಾನೆ...
ಕಿವಿ ಏರಿಯಲ್ಲಿ ಹೊಸದಾಗಿ ಹುಟ್ಟಿಕೊಂಡ ಬಿಳಿಗೂದಲುಗಳ ಎಣಿಸಿ ಎಣಿಸಿ ಕಿತ್ತುಕೊಳ್ತಿದೇನೆ - ನಾಳೆ ದಿನ ಸಂಕಷ್ಟಿಯಂತೆ, ಮನೆ ಎದುರಿನ ಗಣಪನ ಗುಡಿಗೆ ನಿನ್ನ ಪ್ರದಕ್ಷಿಣೆ ತಪ್ಪುವುದಿಲ್ಲ - ದೇವಳದ ಗರುಡ ಗಂಬದ ಹಲ್ಲಿ ನಾನು...
ನಿನ್ನ ಕೂಡುವ ನನ್ನ ಮೋಹದ ಕಾಲ್ದಾರಿಯ ಕಿಬ್ಬಿಗಳ ತುಂಬಾ ರಾತ್ರಿರಾಣಿ, ಪಾರಿಜಾತ, ಸೂಜಿಮಲ್ಲಿಗೆಗಳು ಘಮ್ಮೆಂದು ಅರಳುತ್ತವೆ - ಅಲ್ಲಲ್ಲಿ ಕೇಳಿದ ಊರ ಹೆಂಗಳೆಯರ ಸೋಬಾನೆ ಗೀತೆಗಳನೆಲ್ಲ ಅರ್ಧರ್ಧ ಗುನುಗುತ್ತಾ ಕಮ್ಮಗೆ ಬೆವರುತ್ತೇನೆ...
ಬೆಳುದಿಂಗಳ ಬಳುಕಿಗೆ, ಮೋಡಗಳ ಗುಡುಗಿಗೆ, ಮಳೆಮಾಲೆಯ ನಡುಕಿಗೆ, ಹಸಿ ಹಗಲ ಛಳಿಗೆ, ಕಾರಿರುಳ ಬಿಸಿಗೆ - ಹೀಗೆ ನಿನ್ನ ಮೃದುಲ ನೆನಪು, ಮತ್ತ ಕನಸುಗಳು ಹೆಜ್ಜೆ ಹೆಜ್ಜೆಗೆ ವಿರಹವ ಸೃಜಿಸುವಾಗ ನಾನು ಪರಮ ಪೋಲಿ ಕವಿಯಾಗುತ್ತೇನೆ...
___ಮತ್ತು ಮಳೆಯ ಸಂಜೆಯಲಿ ಕಪ್ಪು ಹುಡುಗಿಯ ನೆನೆಯಬಾರದೆಂದುಕೊಂಡೇ ನೆನೆನೆನೆದು ಸೋಲುತ್ತೇನೆ...
💏💏💏
ಮೀಸೆ ತಿರುವಿಗೆ ಆಸೆ ನಗೆ ಮೆತ್ತಿಕೊಂಡು ಮಾತಿಗಿಳಿದೆಯೆಂದರೆ
ಮುದ್ದುಕ್ಕಿ ಬರುವಂತೆ ಒಳಗಿಳಿದು ಬರ್ತೀಯಾ ಕಣೋ ಗೂಬೆ ಅಂದವಳೇ -
ಒಣಕಲು ಎದೆಯವನ ಹಸಿ ಹೊಕ್ಕುಳ ನಿತ್ಯಾಗ್ನಿ ನೀನು...
ಗಲಗಲಿಸಿ ನಗುವ ನಿನ್ನನೇ ತಾಕಿದಂತೆ
ಧಾರೆ ಧಾರೆ ತಂಪು ತಂಪು ಎಳೆ ಎಳೆಯ ಬಿರು ಮಳೆಯು
ಸಂಜೆಯ ಗದ್ದದಿಂದ ಜಾರಿ ಎದೆ ರೋಮವ ತೊಳೆಯುತ್ತದೆ...
ನೆಂದು ಬಂದವನ ಒದ್ದೆ ಮೈಯ್ಯನೇ ತೋಳ್ಚಾಚಿ ಬಳಸಿ
ನನ್ನ ಛಳಿ ನಡುಕದ ಉಸಿರಲ್ಲಿ ಮಿಂದೆದ್ದು
ಬಿಸಿಯುಣಿಸಿದ ನಿನ್ನ ನುಂಪು ಮೈಯ್ಯ ಮೈದಾನವ ನೆನಪಿಸಿ ಕಾಡುತ್ತಿದೆ
ಆ ಚಿಗುರೆಲೆಯ ಮೈಗಂಟಿ ಇಳಿವ ಹನಿ ಹನಿ ಇಬ್ಬನಿ/ಮಳೆಹನಿ... 🙈
ಎದೆಗೆಳೆದುಕೊಂಡು ನೆತ್ತಿ ಒರೆಸುವ ಮೋದಕೆ ಸೋತು
ಹಂಡೆ ಒಲೆ ಬೆಂಕಿಯ ಜಂಬೆ ಕುಂಟೆಯ ನಿಗಿ ನಿಗಿ ಕೆಂಡದಂಗೆ ನಾಭಿ ದಂಡೆ ಸುಡುತಿರುವಾಗ
ಇರುಳ ಬೆತ್ತಾಲೆ ಬೆನ್ನ ಮೇಲೆ ಮತ್ತೆ ಮತ್ತೆ ಬರೆಯದಿರಬಹುದೇ ನಿನ್ನ ಹೆಸರ...
ಈರ್ವರೂ ನೆಣೆ ಸುತ್ತಿ ಸುಳಿದು
ಮೈಯ್ಯ ಕತ್ತಲ ಬಳ್ಳಿಗಳಿಗೆ ಮರಮರಳಿ ಉಂಡು ಉಣಿಸದಿರಲಾದೀತೇ
ಉರಿ ಉರಿ ಸುಖದ ಉಸಿರ...
ಇರುಳ ಬಾಗಿಲಿಗೆ ಕರಿ ಮೋಡದ ದಿಬ್ಬಣ ಬಂದಾಗ
ಆಪಸ್ನಾತೀಲಿ ಸಿಕ್ಕರೆ ಏಕಾಂತವೇ ಏಕಾಂತ...
ಉದ್ದುದ್ದ ಬಿದ್ದ ಭರಪೂರ ಏಕಾಂತ...
ಯಾವೆಡೆಯಿಂದ ಸವಿಯಲಿ - ಎಲ್ಲೆಡೆಯೂ ಸವಿಯಿಹುದಾ...?!!
_____ ಹನಿ ಹನಿಯೂ ಶೃಂಗಾರವೇ...
💏💏💏
ಕರಿ ಮೋಡದಾ ಕೂಸೇ -
ಅಕಾಲದ ಅಡ್ನಾಡಿ ಪಿರಿ ಪಿರಿ ಮಳೆಯಲ್ಲಿ ತೋಯ್ದು ತೊಪ್ಪೆಯಾದ ಮುಸ್ಸಂಜೆ - ಅರೆಬರೆ ತಂಪಾಗಿ ಹನಿ ಹೊತ್ತ ಮೆಲು ಗಾಳಿ - ಭುವಿಯ ಬಿಸಿ ಉಸಿರಿಂದ ಹೊಮ್ಮಿ ಬರುವ ಮಣ್ಣ ನವಿರುಗಂಪು - ಕರುಳಿನಾಳದಿಂದ ಪುಟಿ ಪುಟಿಯುವ ಸಮ್ಮೋಹೀ ಕಚಗುಳಿ...
ಇರುಳ ಬಾಗಿಲಲ್ಲೋ ತಂಗಾಳಿಯು ಬೆಂಕಿಯೊಂದಿಗೆ ಸರಸಕಿಳಿದಂಗೆ ನಿನ್ನ ಬಿಗಿ(ಸಿ) ಆಸೆಯ ತೆಳು ನಾಚಿಕೆಯ ಕಣ್ಣ ಕುಡಿ ನೋಟದ ನೆನಹೊಂದು ಕಳ್ಳ ಬಾಣವಾಗಿ ನನ್ನ ನಾಭಿ ಮೂಲವ ಚುಚ್ಚುತ್ತದೆ...
ಎದೆಯಾಳದಿಂದೆದ್ದು ಬಂದು ನರನಾಡೀ ಹಾದಿಯಲೆಲ್ಲ ಪರವಶದಾ ಅಲೆಯೆಬ್ಬುವ ನಿನ್ನೆಡೆಗಿನ ನಿಗಿ ನಿಗಿ ನಗ್ನ ಕನಸು - ತಿಳಿಗಪ್ಪುಗತ್ತಲ ಕಿಟಕಿಯಲ್ಲಿ ಎಂದೋ ಉಸಿರಲುಸಿರ ಕಲೆಸಿ ನಲಿದು ಉಸಿರಲೇ ಉಳಿಸಿ ಹೋದ ಪರಮಾಪ್ತ ಪರಿಮಳದ ಸುಡು ಸುಡು ವಿರಹ...
ಇನ್ನೂ ಏನೋ ಏನೇನೋ...
_____ ನೀನಿರಬೇಕಿತ್ತು ಈಗಿಲ್ಲಿ, ಚಾದರದ ಬದಲೀ...
💏💏💏
ಹೂವು ಎಲೆಯ ಮೂಸಿ ಮೈನೆರೆದಂಗೆ...
ಉಸಿರ ಗೂಡಿನ ಕಿಬ್ಬಿಗಳ ತುಂಬಾ ಅವನ ಘಮ...
ತೇವ ತೇವದ ಕಣ್ಣಲ್ಲಿ ಪಟಪಟಿಸೋ ನಾಚಿಕೆಯ ಕಳ್ಳ ನಗೆರಂಗಿನ ಅಲರು...
ರುದಯದಿಂದೆದ್ದ ಪುಳಕದ ಸುಳಿ ಸುರುಳಿ ಅಲೆಗಳು ನಾಭೀ ದಂಡೆಗೆ ಬೀಸಿ ಬಡಿದು ನೂರು ಸಾವಿರ ಆಸೆ ಹನಿಗಳ ಹೋಳಾಗಿ ಸಿಡಿದು ಮೈಯ್ಯ ತೀರಗಳುದ್ದಕ್ಕೂ ಬೆವರ ಮುಂಗಾರು...
____ ಆಗಂತುಕ ಪರವಶತೆ...
💏💏💏
ಇದೆಲ್ಲ ಸೋಲು ಎಷ್ಟು ಸವಿಯಾದ ಶಾಪ - ನಿನ್ನ ತೋಳಲ್ಲಿ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
No comments:
Post a Comment