ಹಾದು ಹೋಗುವಾಗ.....
ನಿನ್ನ ಆರೈಕೆ ಅವರ ಜವಾಬ್ದಾರಿ ಅಲ್ಲದಿರುವಾಗ ಕಾಳಜಿ ತೋರುವುದು ಬಲು ಸುಲಭ...
ಜವಾಬ್ದಾರಿ ಆಗಿದ್ದೂ ಕಾಳಜಿ ಮಾಡುವ ಅಥವಾ ಜವಾಬ್ದಾರಿ ಅಲ್ಲದೆಯೂ ಕಾಳಜಿಯನ್ನು ಜವಾಬ್ದಾರಿಯಿಂದ ನಿಭಾಯಿಸುವ ಜೀವ ಜೊತೆಯಾಗಿದ್ದಷ್ಟು ಕಾಲ ಬದುಕಿನ ನಡಿಗೆ ಚೂರು ಸುಲಭ...
____ ನಾನು ನಿನಗೇನೆನ್ನುವುದು ಕೇಳಬಾರದ ಯಕ್ಷ ಪ್ರಶ್ನೆ...!!
☺☺☺
ಒಂದು ಹಗಲಿನ ಹಿಂದೆ, ಒಂದು ರಾತ್ರಿಯ ಮುಂದೆ ಒಂದೊಂದೇ ಅಧ್ಯಾಯಗಳು ಮುಗಿಯುತ್ತವೆ - ಭಾವದ್ದು, ಜೀವದ್ದು, ಜೀವನದ್ದೂ ಇಲ್ಲಿ...
ನಕಲು ತಿದ್ದಲಾಗದ ಆಯುಷ್ಯ ಗ್ರಂಥದ ಕೊನೆಯ ಪುಟವ ಈ ಉಸಿರು ಸವರಿದ ಘಳಿಗೆ ಪುಸ್ತಕವ ಮುಚ್ಚಿಡಲೂ ನಾನಿಲ್ಲ ಅಲ್ಲಿ...
ಮೌನದ ಗೋಡೆ ಕಟ್ಟಿ ಎದೆಯ ಬಂಧಿಸಿದವರೂ, ಮಾತಿನ ಈಟಿಯಿಂದ ಬೆನ್ನ ಇರಿದವರೂ ಒಟ್ಟೊಟ್ಟಿಗೆ ನಿಟ್ಟುಸಿರಿನ ಶ್ರದ್ಧಾಂಜಲಿ ಸಲ್ಲಿಸಬಹುದೇನೋ ಆಗ, ಅಲ್ವಾ ಮಲ್ಲೀ...
____ ಹಾದು ಹೋಗುವಾಗ...
☺☺☺
ಮಾಸಿದ್ದಾದರೂ ಸರಿಯೇ ಒಂದ್ನಾಕು ಮುಖವಾಡಗಳಿದ್ದರೆ ಸಾಕು ಬಗಲಲ್ಲಿ, ಎಂಥಾ ಬಿರು ಹಗಲನಾದರೂ ಹೆಂಗೋ ದಾಟಿಕೊಂಡು ಬಿಡಬಹುದು...
ಆದರೋ -
ಎಲ್ಲಾ ಕಳಚಿಟ್ಟು ಹಾಯಬೇಕಾದ ಅಥವಾ ಬೆಳ್ಳಾನೆ ಬಿಳೀ ಮುಖವಾಡವೂ ಕಪ್ಪಾನೆ ಕಪ್ಪು ಕತ್ತಲ ಇರುಳಲಿ ಕಪ್ಪಾಗಿ ಕರಗಿ ಹೋಗುವ ಈ ಇರುಳಿನದ್ದೇ ರಣ ಚಿಂತೆ...
____ ದಿಂಬಿಗಂಟಿದ ಕಣ್ಣ ಪಸೆ...
☺☺☺
ಕೂಪ ಮಂಡೂಕ ಅಂತ ಬೈದರು...
ಕಡಲ ಮೀನು ಅಗಾಧತೆಯನು ವರ್ಣಿಸಬಹುದು,
ಆದರೆ
ಬಾವಿ ನೀರಿನ ರುಚಿಯನು ಬಾವಿ ಕಪ್ಪೆಯೇ ಹೇಳಬೇಕಲ್ಲವಾ...
ಅರಿವು ಮತ್ತು ಹಿರಿಮೆ ಎದೆಯ ಆನಂದದ್ದಲ್ಲವಾ...
ಕಣ್ಣ ಪಾಪೆಯೊಳಗಿನ ಆಕಾಶ - ಬೊಗಸೆಯಷ್ಟು ಸಾಗರ...
___ 'ನಾನು' ಬಾವಿಯ ಕಪ್ಪೆ...
***ಅರ್ಥ ಗಿರ್ಥ ಕೇಳಬೇಡಿ...
☺☺☺
ವತ್ಸಾ -
ಬದುಕಿನ ಮುಂದೆ ಸಾವು ಎಷ್ಟು ದೈನೇಸಿ ನೋಡು...
ಸಾವು ನಿಶ್ಚಿತವೇ ಎಂಬ ಅರಿವಿದ್ದರೂ ಪ್ರತಿ ಜೀವ ಜಂತುವೂ ನಾಳಿನ ಬೆಳಕನು ನೋಡುವ ಗಟ್ಟಿ ನಂಬಿಕೆಯಲ್ಲೇ ಇಂದನ್ನು ಸುಡುತ್ತಾ ಹಗಲಿರುಳನು ಹಾಯುತ್ತೆ...
ಭ್ರಾಂತು ಭ್ರಾಂತು ಎನ್ನುತ್ತಾ ನಶ್ವರತೆಯ ರಾಗ ಹಾಡುತ್ತಲೇ ನಾಳಿನ ಭದ್ರತೆಗೆ ಬಹುವಿಧ ಭಲ್ಲೆಗಳ ಕೆತ್ತಿಕೊಳ್ಳುತ್ತದೆ ಜೀವಕೋಟಿ...
ಅಲ್ಲಿಗೆ,
ಸಾವು ಎಷ್ಟು ಯಕಶ್ಚಿತ್ ಸತ್ಯ ಅನ್ಸಲ್ವಾ ಈ ಬದುಕಿನ ಭರವಸೆಯ ಮುಂದೆ...
____ ಚಿಗುರು...
☺☺☺
ಭಾವ ಸತ್ತವನೊಬ್ಬ ಹುಟ್ಟಿಸಿದ ಕೂಸಿಗೆ ಅವನ ಸುತ್ತ ಬಂಧ ಅಂಟುವುದಾದರೂ ಹೇಗೆ...
ಭಾವ ಒಡಮೂಡದೇ ಹೋದ, ರಕ್ತವಷ್ಟೇ ಹಿಡಿದಿಟ್ಟ ಸಂಬಂಧದ ಪರಿಧಿಯಲ್ಲಿಯ ಗಬ್ಬೆನ್ನುವ ಅಸಹನೀಯ ಸೂತಕದ ವಾಸನೆಯನು ಬದುಕ ತುಂಬಾ ಭರಿಸುವುದಾದರೂ ಹೇಗೆ...
ಹೇಳು -
ನನಗೆ ನನ್ನ ನಗುವ ಕೊಡದಲ್ಲಿ ನಾನಿರಲಿ ಹೇಗೆ...
ಕೇಳಿಲ್ಲಿ -
ಅಂತಲ್ಲಿ ನನಗೆ ನನ್ನ ಉಳಿಸಿಕೊಡುವ ಸುರಕ್ಷಿತ ಅಂತರವಷ್ಟೇ ನನ್ನ ಆಯ್ಕೆಯಾದರೆ ತಪ್ಪು ಹೇಗೆ...
____ ರಕ್ತಕೇ ಅಂಟಿದ ಕ್ಷುದ್ರ (ಸಂಬಂಧ) ಕಲೆಯ ತೊಳೆದುಕೊಳ್ಳುವ ಕಲೆ ಯಾವುದೂsss...
☺☺☺
ಒಳಗಣ ನಿರ್ವಾತವ ತುಂಬಿಕೊಳ್ಳೋ ಹಪಹಪಿಯಲ್ಲಿ ಹುಚ್ಚು ಬಡಬಡಿಕೆಗಳ ನಂಬಿ ನನ್ನ ತುತ್ತೂರಿಯ ನಾನೇ ಊದಿಕೊಳ್ಳುತ್ತಾ ನಿನ್ನ ಸುತ್ತ ಸುತ್ತುತ್ತೇನೆ...
ಬೆಳಕಿಗೆ ಸೋತ ಬಣ್ಣದ ಹುಳ ಮತ್ತು ಹೊಂಚಿ ಕೂತ ಹಲ್ಲಿಯ ಹೊಟ್ಟೆಯ ಹಸಿವು ಒಂದು ಜಾವ ನನ್ನಲ್ಲಿ ನನ್ನೆಡೆಗೇ ಕರುಣೆಯ ನಡುಕವ ಮೂಡಿಸುತ್ತದೆ...
____ ಅಲ್ಪನ ಆಲಾಪಗಳೆಲ್ಲಾ ಇಂಥವೇ...
☺☺☺
ಸಣ್ಣ ಸಣ್ಣ ಖುಷಿಯ, ಬೆರಳಂಚಿಗೊಂದು ಭರವಸೆಯ ತಣ್ಣಗೆ ತುಂಬಿ ಕೊಡುವ ಪ್ರಾಂಜಲ ಪ್ರೀತಿಗೆ ಬಾಲ್ಯವೆಂದು ಕೂಗಬಹುದು...
___ ಅನ್ಯೋನ್ಯತೆಯ ಅನನ್ಯತೆ - ಮಗು ಮನವೆಂಬ ಹಿರಿತನ...
☺☺☺
ಮೂಟೆ ಮೂಟೆ ಪ್ರೀತಿಯನು ಚಮಚೆ ಸಿಹಿಯಲ್ಲಿ ತುಂಬಿ ಕರುಳಿಗಿಡುವ ಮಗುವ ನಗುವ ತಾಯ್ತನ - ನನ್ನ ಉಸಿರ ಭರವಸೆ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
No comments:
Post a Comment