Thursday, December 12, 2019

ಗೊಂಚಲು - ಮೂರು ನೂರಾ ಹದ್ನೇಳು.....

ಇಷ್ಟಕಾಮೇಷ್ಟಿಯಾಗ.....  

ತೋಳ್ದೆರೆದ ನೀನಿಲ್ಲಿ ತಂಪಿರುಳ ಅಗ್ಗಿಷ್ಟಿಕೆ - ರತಿ ಹೋಮದ ಅಧ್ವರ್ಯು...
ಉಸಿರುಸಿರು ಉಸುರುವ ಮಂದ್ರ, ತಾರಕ ಮಂತ್ರ ನಾದ...
ಏರು ತಿರುವಿನ, ಬಾಗು ಬಳುಕಿನ ತಿಳಿಗತ್ತಲಿಗಂಟಿದ ಹೋಮ ಧೂಮದ ಘಮ...
ತೆಕ್ಕೆ ತಾರುಣ್ಯದ ಮಥನದಲಿ ಉರಿದುರಿದು ಕರಗೋ ಜೀವಕಾಯಗಳ ಹವಿಸ್ಸು...
ಧಗಧಗಿಸುತಿರಲಿ ಸೃಷ್ಟಿಶೀಲ ನಾಭಿಕುಂಡ - ನಿತ್ಯೋಪಾಸನೆಯಾಗಲಿ ಪ್ರೇಮಯಜ್ಞ...
#ಇಷ್ಟಕಾಮೇಷ್ಟಿಯಾಗ...
⇴⏪⏩⇴

ಯಾರೋ ನೆಟ್ಟ ಯಾವುದೋ ತಿರುವಿನ ಗಿಡ...
ಸೂರ್ಯನ ಕುಡಿದ ಬೇರು ಚಂದ್ರನಿಗೆ ಬೆಳದಿಂಗಳಿನಷ್ಟೇ ಮೆದು ಮೈಯ್ಯ ಹೂ ಮುಡಿಸಿ ನಲಿಯುತ್ತದೆ...
ಗಾಳಿಗೊಲಿದ ಗಂಧ ಮೈಮುರಿದು ಆ ತಿರುವಿಗೆ ನನ್ನ ಕರೆಯುತ್ತದೆ...
ಇದೀಗ ದಿಂಬಿನ ಹೆರಳಿಗೂ, ನನ್ನ ಬೆರಳಿಗೂ ಸುರುಳಿ ಸುರುಳಿ ಘಮದ ನಂಟಿನ ಅಂಟು...
ಮುಚ್ಚಿದ ಕಣ್ಣಾಳದಲ್ಲಿ ಅಲ್ಲೆಲ್ಲೋ ಕಾಲ್ಬೆರಳ ನಟಿಕೆ ಮುರಿವ ಅವಳ ಸೆರಗು ನಲುಗಿದಂತೆ ಕನಸುತ್ತದೆ ಕಳ್ಳ ಮನಸು...
#ಪಾರಿಜಾತ...
⇴⏪⏩⇴

ಗಂಡು ರಸಿಕ ಕಂಗಳಿಗೆ ಇನ್ನಷ್ಟು ಯಾಚನೆ ಕಲಿಸೋ ಅಯಾಚಿತ ಹೆಣ್ಣು ಕ್ರಿಯಾ ವಿಧಿಗಳು...
#ಮುಡಿಬಿಗಿದು_ಸೆರಗೆಳೆದುಕೊಂಡಳು..‌.

ಕೋಪದಿಂದ ಅದುರೋ ಅವಳ ತುಟಿಗಳೂ ಮಡಿ ಮೀರಿದ ಹುರಿಮೀಸೆಯ ಹದುಳದ ಚುಂಬನಕೆ ಜೇನನ್ನೇ ತುಂಬಿ ಕೊಡುತ್ತವೆ...
#ಉಪಶಮನ...

ಸಳ ಸಳ ಬೆವರಿನ ಹಸಿ ಹಸಿ ಮಿಡಿತಗಳ ಮಿಂಚಿನ ಸಂಚಿಗೆ ಮಟಮಟ ಮಧ್ಯಾಹ್ನವೊಂದು ಇಷ್ಟಿಷ್ಟೇ ಕರಗಿ ಮಗ್ಗುಲಾಗುವ ಸುಖೀ ಸಂಭ್ರಾಂತಿ - ಸಖೀ ಸಲ್ಲಾಪ...
#ಅವಳಂಬೋ_ಮೋಹದ_ಮೋಹಕ_ಮೈತ್ರಿ...
⇴⏪⏩⇴

ಈ ತೋಳ ತಿರುವಿಗಂಟಿದ ಕಡು ಸ್ವಾರ್ಥ ಅವಳು...
"ಹೇಟ್ ಯೂ" ಅನ್ನೋದು "ಲವ್ ಯೂ" ಅನ್ನೋದ್ರ ಸಮಾನಾರ್ಥಕ ಪ್ರಿಯ ಪದವಾಗಿ ಕಿವಿ ತುಂಬುತ್ತದೆ ಅವಳು ಕೆನ್ನೆ ಕೆಂಡವಾಗಿಸ್ಕೊಂಡು ಮೂತಿ ತಿರುವಿ ಉಲಿಯುವಾಗ...
ಕುಪ್ಪಸದಂಚಿನ ಖಾಲಿ ಬೆನ್ನ ಮೇಲಿನ ಮಚ್ಚೆಯ ಸವತಿಯಂಥ ನನ್ನದೇ ಉಗುರ ಗೀರನು ಸುಮ್ಮನೆ ಕಣ್ಣಲೇ ಸವರುತ್ತೇನೆ ಒಮ್ಮೆ...
ಬೆನ್ನಿಗೂ ಕಣ್ಣಿರುವ ಹೆಣ್ಣು ಸೆರಗಿನ ಚುಂಗನು ಹಿಂದೆಳೆದು ಬಿಗಿದು ಬುಸುಗುಡುತ್ತಾಳೆ - ಮುನಿಸು ಮದನನಿಗೆ ಸೋಲುವ ಮೊದಲ ರೂಹದು...
ಬೆರಳ ಹಣಿಗೆಗೆ ಸಿಕ್ಕಿ ಉಸಿರ ತೀಡುವ ಹೆರಳ ಘಮದಲ್ಲಿ ಪೀಠಸ್ಥ ಸ್ವರ್ಗ - ಮುಂದಿನದು ರತಿಯ ಚಿತ್ತ...
#ಕೇದಗೆಯ_ಬನದಲ್ಲಿ_ಪ್ರಣಯ_ಕಲಹ...
⇴⏪⏩⇴

ಹಾಸಿಗೆಯ ಒಂಟಿತನಕೆ ನಿನ್ನ ಆವಾಹಿಸಿ ಹೊದ್ದುಕೊಂಡೆ - ಸೆಜ್ಜೆವನೆಯ ತುಂಬಾ ಲಜ್ಜೆ ಬೆಳುದಿಂಗಳು...
ಮುಚ್ಚಿದ ಕಣ್ಣ ಪಾಪೆಯೊಳಗೆ ಇಂಚಿಂಚೂ ಬಿಚ್ಚಿಕೊಳುವ ಉನ್ಮತ್ತ ಜೀವನ್ಮೋಹೀ ಚಿತ್ರಶಾಲೆ...
ಬೆತ್ತಲೆ ಮಡಿಯುಟ್ಟು ನೀ ಅರಳುವ ಕನಸಿಗೆ ಹೊರಳ್ಹೊರಳಿ ಮರಮರಳಿ ಅರಳುವ ನಾನು...
#ಸ್ವಪ್ನ_ಸುರತ...
⇴⏪⏩⇴

ಇರುಳ ಕೊರಳನು ಛಳಿ ಬಳಸಿದ ಋತು ಇದು...
ಹೈದನ ಹರೆಯದ 'ನಡು'ಗಡಲಲ್ಲಿ ವಿಪರೀತ ಉಬ್ಬರ..‌
ತುಟಿಯ ಕೊಂಕಿನಲೇ ಛಳಿಯ ಪೊರೆ ಕಳಚುವ ಬಿನ್ನಾಣಗಿತ್ತೀ -
ಉಕ್ಕುವ ಉಸಿರಲೆಗೆ ತೋಳ ರೇವಿನಲಿ ಚೂರು ಪ್ರೀತಿ ಹಕ್ಕಿನ ತಾವು ಕೊಡು...
ಹಸಿದ ಹಸಿ ಹರೆಯಕಿಷ್ಟು ಪ್ರಣಯ ಕಂಬಳ ಬಾಗಿನವಿಟ್ಟು ಇರುಳ ಉಡಿಯ ತುಂಬಿ ಕೊಡು...
ಕರಡಿ ಮುದ್ದು ಕಲೆಯಾಗಿ, ಮೋಹ ಬೆವರಾಗಿ, ಇಹಪರವೆಲ್ಲ ಒಂದೇ ಆಗಿ, ಸುಖವು ಸವಿ ನಿದ್ದೆಯಾಗಿ ಹೊರಳೋ ಘಳಿಗೆ ಹಣೆಯ ಬಿಂದಿ ಎದೆಗಂಟಲಿ...
ಬೆತ್ತಲೆ ಸರ್ಪಬಂಧ ಗಾಳಿಗೂ ಎಡೆ ಕೊಡದಂಗೆ ಅವುಚಿಕೊಂಡೇ ಇರುಳ ಝೋಮು ಕಳೆದು ಬೆಳಗಾಗಲಿ...
#ಮಾಗಿ_ಪಲ್ಲಂಗ...
⇴⏪⏩⇴

ಅಷ್ಟೇ -
ನಿನ್ನೆದುರು ಬಂದುದೇ ಆದರೆ ಕಣ್ಣಲ್ಲೇ ಮುಕ್ಕಳಿಸಿ ನೀ ನನ್ನ ಓದುವ ಚಂದಕ್ಕೆ ಅರಳಿದ ನನ್ನೊಳಗಿಂದ ಒದ್ದು ಬರುವ ಪುಳಕಗಳ ಧಾಳಿಗೆ ಪಕ್ಕಾ ಸೋಲುತ್ತೇನೆಂಬ ಭಯಕ್ಕೆ ಇಷ್ಟು ದೂರವೇ ನಿಲ್ಲುತ್ತೇನೆ...
ಹರೆಯದ ಹಸಿ ಹಸಿವಿನ ಎದೆಯ ಏರು ಬಿಸಿಯ ಅಡವಿಟ್ಟುಕೊಂಡ ಬೇಶರತ್ ಪ್ರಣಯ ನೀನು - ನಿನ್ನ ಮೀಟಿ ಬಹ ತಿಳಿ ಗಾಳಿಗೂ ಅಣುರೇಣು ರೋಮಾಂಚವ ಹೊದ್ದು ತಿರುಗೋ ಮರುಳ ಕಬೋಜಿ ನಾನು...
#ನೀನೊಂದು_ಮೋಹಕ_ಮೋಹ...
⇴⏪⏩⇴

ಹೊರ ಗಾಳಿಯ ನಡುಕ - ಒಳ ಬೆಂಕಿಯ ಪುಳಕ...
ನಾಭಿ ಸುಳಿಯಲ್ಲಿ ಮಿಡುಕೋ ನೀಲಿ ಚಿಟ್ಟೆ...
ಎಲ್ಲೆಗಳ ಬೇಧಿಸೋ ಬೆರಳುಗಳ ಯಕ್ಷಿಣೀ ವಿದ್ಯೆ...
ಉಗ್ಗುವ ಉಸಿರುಸಿರ ಉರುವಣಿಗೆ...
ಊರು ಕೇರಿಯ ಹುಚ್ಚು ಭಣಿತ...
ಏಕಾಂತದ ರುದ್ರ ಛಳಿಗೆ ರಮಣೀಯ ಮಿಲನ ಹೊದಿಕೆ...
#ಮಾಗಿಯ_ಧಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ನೂರಾ ಹದ್ನಾರು.....

ಅತೃಪ್ತಾತ್ಮ..... 
(ಮುರಿದ ಕೊಳಲಿನ ಧ್ಯಾನ...)

ಮಾತು ಮರೆಸಲು ಸಮರ್ಥನೆಗಳ ಹುಡುಕಾಟ ಶುರುವಾದಲ್ಲಿಂದಲೇ ಬಂಧದ ಸಾವಿನ ಹಾದಿಯೂ ತೆರೆದುಕೊಳ್ಳುತ್ತದೆ...
#ಜಗಳವೂ_ಹುಟ್ಟದ_ಸಾವಿನ_ತಂಪು...
↱↜↯↝↰

ಈ ಮುಖವಾಡಗಳು ಅದೆಷ್ಟು ಸಲೀಸಾಗಿ ಒಂದನ್ನೊಂದು ಎದುರುಗೊಳ್ತವೆ, ಅದೇನು ವಯ್ಯಾರ...
ಈ ಮುಖಗಳದ್ದೇ ಸಮಸ್ಯೆ - ಮುಖ ತೊಳೆದ ಮೇಲೆ ಕನ್ನಡಿ ನೋಡೋದೂ ಕಷ್ಟ ಕಷ್ಟ...
#ನಾನು_ನೀನು...
↱↜↯↝↰

ಬದುಕು ಕರುಣೆ ಕಳೆದು ಎದುರಿಗಿಡೋ ದೊಡ್ಡ ಪೆಟ್ಟಿನದೊಂದು ತೂಕವಾದರೆ, ನಮ್ಮವರು ನಮ್ಮ ಹಾದೀಲಿ ಬಿತ್ತೋ ಪುಟ್ಟ ಪುಟ್ಟ ಯಾತನೆಗಳದೇ ಒಂದು ದಡೆ... ಯಾವುದು ಹೆಚ್ಚು ನರಳಿಸುತ್ತೆ ಅಂತ ಕೇಳಿದರೆ ಕಣ್ಣು ಸುತ್ತ ಹೊರಳ್ಹೊರಳಿ ನಮ್ಮವರ ಹುಡುಕುತ್ತೆ...
#ಗಾಯ_ಮತ್ತು_ನಡವಳಿಕೆ...
↱↜↯↝↰

ನೀ ತಣ್ಣಗೆ ಕಳಚಿಕೊಂಡೆ - ನನ್ನ ನಾನು ಚೂರು ಚೂರೇ ಆಯ್ದುಕೊಳ್ಳುತ್ತಿದ್ದೇನೆ... ಧೂಳು ಹಾದೀಲಿ ನಂದ್‌ನಂದೇ ಪುಟ್ಟ ಪುಟ್ಟ ಹೆಜ್ಜೆ ಗುರುತು ಈಗ...
ಧ್ಯಾನವೆಂದರೂ, ಉತ್ಸವ ಎಂದರೂ ಇದೇ ಇರಬೇಕೆನಿಸುತ್ತಿದೆ...
#ಮಣ್ಣು...

ಉಹೂಂ.‌‌.. ಸೋಲುವುದು ನನ್ನ ಜನ್ಮ ಜಾಯಮಾನದಲ್ಲೇ ಇಲ್ಲ - ಅದಕ್ಕೇ ಬಿಟ್ಟುಕೊಟ್ಟು ನಿಸೂರಾಗೋದು ಸದಾ...
#ಪ್ರೀತಿ_ವೃತ್ತಾಂತ...

ಜೀವಂತವಿದ್ದೇನೆ - ಕುರುಹುಗಳ ಕೇಳಬೇಡಿ...
ಸಾಧನೆ...?
ಅದೇ ಹೇಳಿದ್ನಲ್ಲ - ಜೀವಂತವಿದ್ದೇನೆ...
#ಬೂದಿಯೂ_ಉಳಿಯಬಾರದು...
↱↜↯↝↰

ಎದೆಯ ನೋವು ಕಣ್ಣಿಗೆ ಅರಿವಾಗದಂತೆ ಬೇಯಬೇಕು...
ಸಾಕಿಕೊಂಡ ನಗೆಯ ನಾಯಿ ಸಾಯದಂತೆ ಕಾಯಬೇಕು...

ಸತ್ತವನನ್ನು ಬಡಿದು ಸುಖಿಸುವ ದೈವತ್ವ...
ಯಾರದೂರಲಿ? ಯಾವುದೂ ನನ್ನದೆನಿಸದ ಊರಲ್ಲಿ...

ಎಷ್ಟೇ ವರುಷ ಬದುಕಿದರೂ ನಿನ್ನೆಗಳ ಭೇಟಿಯಾಗಲಾರೆ...
ಭೂಮಿ ಗುಂಡಗಿದೆ; ಆದರೆ, ಕಾಲ ಸಂಜೆಯ ನೆರಳು...

ಕೆಲ ಹೆಗಲುಗಳೇ ಹಾಗೆ, ನಿಜ ನರಕವ ಹೊತ್ತು ತಿರುಗೋ ಮುರುಕು ತೇರು...
ಅಳಲು ತಿಳಿಯದವನ ಅಳಲಿಗೆ ಕತ್ತಲೂ ಮೂಕ ಚಿತ್ರ...
#ಎಲ್ಲ_ಮಣ್ಣು...
#ತುಳಸಿ_ನೀರಿನ_ಕನಸು...
↱↜↯↝↰

ಕಿವಿಯಷ್ಟೇ ಆಗಬೇಕಿತ್ತು - ಆದರೆ ನಾಲಿಗೆಗೆ ಬಹು ಚಪಲ...
ಕಲ್ಲಿಗೆ ಎದೆಗಣ್ಣೆಲ್ಲಿದೆ, ಕರುಳ್ಯಾವುದು...
#ನಾನು...
↱↜↯↝↰

ಬರುವಾಗ ಎಲ್ಲ ವಿಶೇಷವೇ, ಈ ಹಿಂದಿನಂತಲ್ಲ ಯಾವುದೂ; ಹೊಸತು ನೋಡೀ...
ಹೋಗುವಾಗ ಮಾತ್ರ ಎಲ್ಲ ಉಳಿಸುವುದು ಕೆರ್ಕೊಂಡು ಸುಖ ಪಡೋಕೆ ಹಳೆಯದರಂಥದ್ದೇ ಹೊಸ ಗಾಯ - ಒಂದನ್ನ ಕೆರ್ಕೊಂಡ್ರೆ ಸಾಲಾಗಿ ಎಲ್ಲಕ್ಕೂ ನವೆ ಹತ್ತೋ ಹಂಗೆ...
***ಅಪವಾದಗಳ ಹೊರತುಪಡಿಸಿ...
#ಸಂಬಂಧ...
#ಮಸಣ_ಕಾಯುವವನ_ಕಣ್ಣಿಂದ_ನಿರ್ಲಿಪ್ತಿಯನಿಷ್ಟು_ಭಿಕ್ಷೆ_ಪಡೆಯಬೇಕು...
↱↜↯↝↰

ಆಸೆಗಳ ಅದುಮಿಡುವ ಹಣಾಹಣಿಯಲ್ಲೇ ಜೀವದ ಬಹು ದೊಡ್ಡ ಪಾಲು ಶಕ್ತಿ ಕೊಚ್ಚಿ ಹೋಗುವ ದುರಂತವನ್ನು ಕಣ್ಣ ಹನಿ ಕತ್ತಲೆಗೆ ಕಥೆಯಾಗಿ ಹೇಳುತ್ತದೆ...
#ಸುಭಗತನ...
↱↜↯↝↰

ಜಗತ್ತು ತನ್ನಿಚ್ಛೆಯಂತೆ ನನ್ನ ಹುಡುಕುತ್ತೆ - ನಾನೋ ನನ್ನಿಚ್ಛೆಯಂತೆ ಜೀವಿಸೋ ಮಾತಾಡುತ್ತಾ ಜಗದಿಚ್ಛೆಯಂತೆ ಬದುಕಲು ಹೆಣಗುತ್ತೇನೆ - ಸಮಾಧಿಯ ಮೇಲಣ ಗರಿಕೆ ಸುಸ್ತಾದಂಗೆ ನಗುತ್ತದೆ...
#ಅತೃಪ್ತಾತ್ಮ...

ಖಾಲಿತನದ ಭಾರ ಮತ್ತು ಉಸಿರಿನ ಸುಸ್ತು...
#ಮರಳ_ಗೂಡಿನ_ಮೋಹಿತ...

ಎದೆಯ ಬೇನೆಗೆ ಮದ್ದಿಲ್ಲ - ಕನಸಿಲ್ಲದೆ ಹಬ್ಬವಾಗುವುದಿಲ್ಲ...
#ಮುರಿದ_ಕೊಳಲಿನ_ಧ್ಯಾನ...

ಬೆಳಕಿನಲ್ಲಿ ಕಳೆದು ಹೋಗಿ ಕತ್ತಲಲ್ಲಿ ಸಿಕ್ಕ ನೆಳಲು...
#ಕಣ್ಣಧಾರೆ...

ಸತ್ಯದ ಹಾದೀಲೇ ನಡೆಯುವವನಿದ್ದೆ , ಆದರೆ ಸುಳ್ಳಿನ ಉನ್ಮತ್ತ ಸೌಂದರ್ಯ ಸೆಳೆಯಿತು...
#ನಾನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ನೂರಾ ಹದ್ನೈದು.....

ಮುಗಿದಿಲ್ಲ ಇನ್ನೂ ಇಲ್ಲಿಯ ಬಡಿವಾರ..... 

ನಗುವುದಕ್ಕೂ ನಶೆಯೊಂದು ಬೇಕು - ಆ ನಶೆ ನೋವಿನದಾದರೆ ನಗೆ ಇನ್ನೂ ಚುರುಕು...
#ಹೊಸ_ರುಚಿಯ_ಕಣ್ಣೀರು...

ನನ್ನಲ್ಲಿ ನನ್ನನ್ನ ಹುಡುಕಿಕೊಂಡರೆ ನಿನ್ನನ್ನು ಪಡೆಯಬಹುದಾ ಅಥವಾ ಬೇಶರತ್ ನಿನ್ನನ್ನು ಪಡೆದರೆ ನಂಗೆ ನಾನು ಹೂಬೇಹೂಬು ಸಿಗಬಹುದಾ...
ಮನಸಿನ ಇಂಥಾ ಹುಚ್ಚು ಗೊಂದಲಗಳಿಗೆ ಪ್ರಜ್ಞೆಯ ಉತ್ತರ ಯಾವತ್ತೂ ಖಾಲಿ ನೋಟವಷ್ಟೇ...
ಹಾಗೆಂದೇ,
ನಾನೆಂದರಿಲ್ಲಿ ಹಸಿದ ಹಳೆಯ ಮುದಿ ನೋವೊಂದರ ಹಪ್ಪು ಪಿರಿ ಪಿರಿ...
#ಮುಗಿದಿಲ್ಲ_ಇನ್ನೂ_ಇಲ್ಲಿಯ_ಬಡಿವಾರ...

ಎದೆಯ ಮೇಲಣ ಗಾಯದ ನೋವು ಮಾಯಲೇ ಇಲ್ಲ...
#ನಿನ್ನ_ಗುರುತು...

ಬಗೆದರೆ ಸಾವನ್ನೇ ಬಗೆಯಬೇಕು - ಬದುಕನ್ನು ಬಗೆದರೂ ಸಿಗೋದು ಅದೇ ಅಲ್ಲವೇ...
#ಪ್ರಶ್ನಾತೀತ_ಪ್ರಶ್ನೆ...

ನೋವಿನ, ಸಾವಿನ ಜಾತಕವ ಉದ್ಘೋಷಿಸುವವನೊಬ್ಬ - ಹೋಮ ಧೂಮದಲಿ ದೇವರ ಹುಡುಕೋ ಇನ್ನೊಬ್ಬ - ಇಬ್ಬರದ್ದೂ ಕಾಲು ತೊಳೆದರೆ ಮಾತ್ರ ನಾನು ಸಾಚಾ...
ಸ್ವಂತ ಹಾದಿಯಾಸೆಯ ಹುಂಬ ನಾನು, ನನ್ನ ಕೊಂದುಕೊಂಡು ಸುಭಗನಾಗಲಾ - ಅವರ ಧಿಕ್ಕರಿಸಿ ರಕ್ಕಸನಾಗಲಾ...
#ಬಯಲಲ್ಲೂ_ಉಸಿರುಗಟ್ಟುವಂತಿದೆ...
#ಹರಸುವುದಾದರೆ_ಸಾವನ್ನೇ_ಹರಸಿ..‌.
↨↤↥↦↨

#ಪ್ರವಚನ...

*ಶಾಶ್ವತತೆಯ ಅಮಲಿಳಿದ ಮೇಲೆಯೇ ಬದುಕಿನ ಈ ಕ್ಷಣದ ರುಚಿ ಸಿಕ್ಕಿವುದು...

**ಪೂರಾ ಪೂರಾ ಖಾಲಿಯಾಗುವುದೊಂದೇ ಪರಿಹಾರ - ಹೇಗೆಂಬುದನ್ನು ನಿಮ್ಮಲ್ಲಿ ನೀವೇ ಕಂಡುಕೊಳ್ಳಿ...

***ಯಾರನ್ನೂ ಹುಡುಕಬೇಡಿ ನಿಮಗೆ ನೀವೂ ಸಿಗ್ಲಿಕ್ಕಿಲ್ಲ...

****ನನ್ನ ನಾ ಹುಡುಕುತ್ತಿದ್ದೆ, ಪಕ್ಕನೆ ದೇವರು ಸಿಕ್ಕಿಬಿಟ್ಟ - ಇಲ್ಲೇ ರಕ್ಕಸ ಪ್ರೀತಿಯ ಹಾಡಿಯಲ್ಲಿ...
↨↤↥↦↨

ನಾ ಹೇಳಿದ್ದನ್ನು ಮರೆತಷ್ಟು ಸುಲಭ ನಿನ್ನಿಂದ ಕೇಳಿಸಿಕೊಂಡದ್ದನ್ನು ಮರೆಯಲಾಗುವುದೇ ಇಲ್ಲ...!!!
#ಮಾತು...
↨↤↥↦↨

ಹಾರು ಹಕ್ಕಿಯ ರೆಕ್ಕೆ ಬಂಧಿಸಿ ಮನೆಯಂಗಳದ ಮೂಲೆ ಅಂದವೆನ್ನುವಾಗ ಹುಟ್ಟದ ಪಾಪಪ್ರಜ್ಞೆ, ಸುಳ್ಳೇ ತಂದು ತಂದು ಒಟ್ಟಿ ಕಪಾಟು ತುಂಬಿಸಿಟ್ಟ ರಂಪ ರಾಮಾಯಣದ ಪುಸ್ತಕಗಳ ಮಗ್ಗುಲಲಿನ್ನೂ ಅಲೆದಿಲ್ಲ ಎಂಬುದು ನೆನಪಾದಾಗ ಕಾಡುತ್ತೆ...!!!
#ದೊಡ್ಡಸ್ತಿಕೆ...
↨↤↥↦↨

ಊಟದಲ್ಲಿ ಸಿಕ್ಕ ಕಲ್ಲು ಹಲ್ಲು ಮುರಿಯದೇ ಹೋದರೂ ರುಚಿಯ ಆಸ್ವಾದಕ್ಕೆ ಬಾಧೆಯಂತೂ ಹೌದೇ ಹೌದು...
ಅಂತೆಯೇ,
ಮನದ ಆಪ್ತತೆಗೊಂದು ಪ್ರಜ್ಞಾಪೂರ್ವಕ ಬೇಲಿ - ನಡುವೆ ತೊಡುವ ಅನಗತ್ಯ ಔಪಚಾರಿಕತೆ...
#ನೇಹ_ಮತ್ತು.........
↨↤↥↦↨

ಕರುಳಿಗೆ ಪ್ರೀತಿಯೊಂದೇ ಮಾಪಕ - ಹಾಗೆಂದೇ ಕರುಳು ಮಾತು ಮರೆತು ಕೂತಿದೆ...
ನಾಲಿಗೆಗೆ ತನ್ನ ಹಿತ ಮತ್ತು ಗೆಲುವೊಂದೇ ಸಾಧನೆ - ಹಾಗಾಗಿಯೇ, ಸುಳ್ಳಲ್ಲ ಖರೆಯಲ್ಲ ಎಂಬಂತೆ ಸಮಯಾ ಸಮಯಕ್ಕೆ ಗಂಟಲ ಮೇಲಿನ ಮಾತಿಗೆ ನೂರು ಬಣ್ಣ...
ಕರುಳಾಳದಿಂದ ದನಿ ಬಿರಿದು ಕೂಗಬಾರದೇ ಒಳಗಿನ ಸತ್ಯವನ್ನೇ; ಕಹಿಯಾದರೂ ಕರುಳ ಸ್ಪರ್ಶದಲಿ ನಾಲಿಗೆ ಮಿಡಿದರೆ ಹೆಸರಿಲ್ಲದ ಭಾವಾನುಸಂಧಾನಕೆ ಹಿಡಿ ಉಸಿರು ಸಿಕ್ಕೀತು - ಬಂಧವೊಂದು ಹುಟ್ಟಿನ ಹಸಿ ಪ್ರೀತಿಯ ಘಮದೊಂದಿಗೇನೆ ಕಾಲಕೂ ಉಳಿದೀತು...
#ನೇಹ_ಪ್ರೀತಿ_ಇತ್ಯಾದಿ...
↨↤↥↦↨

ಕಳೆದು ಹೋದರು ಅನ್ನಿಸಿ ನೋವಾಯ್ತು...
ನೆನಪಾಗಿ ಉಳಿದು ಹೋದರು ಅನ್ಕೊಂಡೆ - ಸಣ್ಣ ಸಮಾಧಾನ ಈಗ...

ಪ್ರೀತಿ ಸಾಯುವುದಿಲ್ಲ ಅಂದರು - ಸೂತಕ ಕಳೆದುಕೊಂಡೆ...

ಭಾವ ಸ್ಖಲನಕ್ಕೆ ಕಾಲನೂ ಬೇಲಿಯಾಗಲಾರನೇನೋ...
ಹುಡಿ ಹುಡಿ ಭಾವಗಳ ಅಕ್ಷಯಾಂಬುಧಿ ಈ ಮನಸಿನ ನಡೆಯ ಪ್ರಶ್ನಿಸಲೆಂತು...
#ಸೋತ_ಕಥೆಗಳೇ_ಎಲ್ಲ...
↨↤↥↦↨

ಅಷ್ಟೆಲ್ಲ ಆಗಿಯೂ ಕೊನೇಲಿ ನಮ್ಗೆ ನೆನಪಲ್ಲುಳಿಯೋದು 'ನಾವು ಕೊಟ್ಟ', ಯಾವ್ಯಾವುದೋ ಕಾರಣಕ್ಕೆ "ನಾವು ಕೊಟ್ಟ" ಪ್ರೀತಿ ಒಂದೇ...
#ನಾನು...
↨↤↥↦↨

ಹಾದಿ ಹೇಳಿದ ಪಾಠ: ಒಳಗಿಳಿದು ನೋಡು - ಮುಳುಗಿದಷ್ಟು ಆಳ; ಹೊರ ನಿಂತು ಆಲಿಸು - ತೇಲಿದಷ್ಟು ವಿಸ್ತಾರ...
ಆದ್ರೆ -
ಸ್ವಾನುಭವದಿಂದಲೂ ಪಾಠ ಕಲಿಯಲೊಲ್ಲದವರೆದುರು ಬದುಕೂ ಸೋಲುತ್ತದೇನೋ ಶಿಕ್ಷಕನಾಗಿ...
ಶಿಕ್ಷೆಗೂ ಬಗ್ಗದ ಖಡ್ಡ ನಾನು...
....... ಅದಷ್ಟೇ ಸತ್ಯ, ಉಳಿದದ್ದೆಲ್ಲ ಬರೀ ಪೊಳ್ಳು ಸಮಾಧಾನಗಳಷ್ಟೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)