Friday, November 28, 2014

ಗೊಂಚಲು - ಒಂದು ನೂರಾ ಮೂವತ್ತು ಮತ್ತು ಆರು.....

ಹಗಲಿಗೊಂದಷ್ಟು - ಇರುಳಿಗಿನ್ನೊಂದಿಷ್ಟು ನಲ್ನುಡಿಗಳು.....

ಕಣ್ಣ ಮಡಿಲಲ್ಲಿ ಕನಸುಗಳು ಮಾತಾಗೋ ಸವಿ ಹೊತ್ತಲ್ಲವಾ ಇರುಳೆಂದರೆ...
ರೆಪ್ಪೆ ಮುಚ್ಚಿ ನಕ್ಕುಬಿಡಿ...
ಇರುಳಿಗೂ ಬಣ್ಣದ ಮೆರಗು...

ವಸುಧೆಯ ಮಡಿಲ ತುಂಬಾ ದಿನಮಣಿಯ ಮುತ್ತಿನ ಮಾಲೆ - ಅದು ಬೆಳಗು....

ಇರುಳೆಂದರೆ ಈಗ ಸ್ನೇಹವು ಹಾಡುವ ಜೋಗುಳ...

ಹೊಸ ಊರಿನ ಹಾದಿ ಬೀದಿಗಳಲೂ ಅದೇ ಬೆಳಗು - ನನಗಾದರೋ ಇನ್ನಿಲ್ಲದ ಬೆರಗು...

ಬಯಲ ನಡುವಿನ ಹಣತೆ - ಗಾಳಿಯ ಕುಹಕ...
ಇರುಳಿಗೆ ಬೆಳಕಿನ ತವಕ...
ಭರವಸೆಯ ಶುಭರಾತ್ರಿ...

ನಾ ಹೋದಲ್ಲೆಲ್ಲಾ ಬಂದು ಬೆಳಗುತ್ತಾನೆ ಅವನು - ಅದ್ಯಾವ ಪರಿ ಪ್ರೀತಿ ಉರಿಯುತ್ತೋ ಅವನ ಒಡಲಲ್ಲಿ...
ಶುಭದಿನವಲ್ಲದೇ ಇನ್ನೇನು...

ಇರುಳೆಂದರೆ ಈಗ -
ಕಣ್ಣ ರೆಪ್ಪೆಗಳಡಿಯಲ್ಲಿ ಕದ್ದು ಕೂಡಿಟ್ಟುಕೊಂಡ ಕನಸುಗಳೆಲ್ಲಾ ಸೇರಿ ಕಲರ್ ಕಲರ್ ವಾಟ್ ಕಲರ್ ಎಂದು ಆಡುವ ಸಮಯ...

ಬೆಳಗೆಂದರೆ ಭರವಸೆಯ ಹಬ್ಬ...
ಪ್ರತಿ ಕ್ಷಣವೂ ಹಬ್ಬವಾಗಲಿ...
ನಗೆಯ ಸುಗ್ಗಿಯಾಗಲಿ...

ಇರುಳೆಂದರೆ ಈಗ -
ನೆನಪು ಹಾಗೂ ಕನಸುಗಳ ಕರುಳ ಸುವ್ವಾಲಿ...
ಕಣ್ಣ ರೆಪ್ಪೆಗಳಡಿಯಲ್ಲಿ ಜೀಕಲಿ ಒಲವ ಜೋಕಾಲಿ...

ನಗುವಿರಲಿ ನಯನದಲಿ...
ಮುಂಬೆಳಗಿಗದೇ ರಂಗೋಲಿ...

ನೆತ್ತಿ ಸುಡೋ ಸೂರ್ಯನಿಗಿಂತ ಎದೆಯ ಬೆಂಕಿಗೆ ತುಪ್ಪ ಸುರಿಯುವ ಚಂದಿರನೆಡೆಗೆ ಮಹಾ ಕೋಪ – ಜತೆಗೆ ಅಷ್ಟೇ ಪ್ರೀತಿ ಕೂಡ...
ತಾರೆಗಳೊಡನೆ ಸರಸವಾಡ್ತಾನೋ ಇಲ್ಲವೋ ಗೊತ್ತಿಲ್ಲವಾಗಲೀ ಅವುಗಳ ಮಿನುಗಿನ ಗೋಚರೆತೆಯ ಕೊಲ್ಲುವುದಂತೂ ಸತ್ಯ...
ಚಂದಿರ ಸಿಹಿ ನಗೆಯ ಸುರಿಯಲಿ ಇರುಳಿಗೆ...

ಬೆಳಗೆಂದರೆ ಸ್ನೇಹದ ತೊಟ್ಟಿಲ ದಾರಕೆ ಕಟ್ಟಿದ ಗಿಲಕಿಯ ಕಿಣಿ ಕಿಣಿ...
ಬೆಳಗೆಂದರೆ ಅಮ್ಮನೆಡೆಗೆ ಕೈಚಾಚೋ ನಿದ್ದೆಗಣ್ಣಿನ ಕಂದನ ಕಿಲ ಕಿಲ...
ಬೆಳಗೆಂದರೆ ಕಂದನ ತಬ್ಬುವ ಅಮ್ಮನೆದೆಯ ಒಲವಾಮೃತ...
ಬೆಳಗೆಂದರೆ ಪಾರಿಜಾತದ ರಂಗೋಲಿ...

ಚಂದಮಾಮನನ್ನೊಮ್ಮೆ ಮಾತಾಡಿಸಿ, ಬೆಳದಿಂಗಳಲ್ಲೊಂದಿಷ್ಟು ಮೈತೋಯಿಸಿಕೊಂಡು, ಹೊಸತೊಂದು ಕನಸ ಸುರತಕ್ಕೆ ಕರೆದುಕೊಂಡು, ಹಿತವಾದ ಭಾವದಲಿ, ಹೊಸ ಗೆಲುವಿನ ಭರವಸೆಯ ಹೊದ್ದು ಮಲಗು... 
ನಲಿವಿನ ನಾಳೆಯ ಬೆಳಕಿನುತ್ಸವಕೆ ನಾಂದಿಯಾಗುವ ಪ್ರಚ್ಛನ್ನ, ಪ್ರಶಾಂತ ಇರುಳು ನಿನ್ನ ತಬ್ಬಲಿ... 
ಶುಭರಾತ್ರಿ...

ಇರುಳ ಕಣ್ಣಿಂದ ಜಾರಿದ ಹನಿಗಳನು ಶೇಷವೂ ಉಳಿಯದಂತೆ ಹೀರಿ ನಗು ಚೆಲ್ಲುತಾನೆ ದಿನಕರ... 
ಬೆಳಗಾಯಿತು... 
ಬೆಳಗೆಂದರೆ ಕಣ್ಣಹನಿಗಳ ಅವಸಾನ... 
ಶುಭದಿನ...

5 comments:

  1. ಇರುಳ ತಣಿಸೋ .. ಹಗಲ ಮಣಿಸೋ .. ಹೊಸ ಹೊಸ ಭಾವಗಳು ..

    ಚಂದ ವತ್ಸಾ

    ReplyDelete
  2. 136 ಪಕ್ಕಾ possitive ಬರಹ.

    ReplyDelete
  3. ಯಾಕೋ ಈ ಭಾವ ಇಷ್ಟ ಆಯ್ತು. ಬರಹ ಎಂದಿನಂತೆಯೇ ಸುಪರ್. :)

    ReplyDelete
  4. ರಾತ್ರಿ ಹಗಲುಗಳು ಬೆಳಗು ಬೈಗುಗಳ ಈ ಭಾವದೊರತೆ ಚಿಮ್ಮುತ್ತಿರಲಿ. ಸದಾ ನಿನ್ನ ಕಂಗಳಲ್ಲಿ ಹಾಗೂ ಈ ಗೊಂಚಲುಗಳಲಿ....

    ReplyDelete
  5. ಬೆಳಗೆಂದರೆ ಸ್ನೇಹದ ತೊಟ್ಟಿಲ ದಾರಕೆ ಕಟ್ಟಿದ ಗಿಲಕಿಯ ಕಿಣಿ ಕಿಣಿ...
    ಬೆಳಗೆಂದರೆ ಅಮ್ಮನೆಡೆಗೆ ಕೈಚಾಚೋ ನಿದ್ದೆಗಣ್ಣಿನ ಕಂದನ ಕಿಲ ಕಿಲ...
    ಬೆಳಗೆಂದರೆ ಕಂದನ ತಬ್ಬುವ ಅಮ್ಮನೆದೆಯ ಒಲವಾಮೃತ...
    ಬೆಳಗೆಂದರೆ ಪಾರಿಜಾತದ ರಂಗೋಲಿ... << Nice

    ReplyDelete