Thursday, January 25, 2018

ಗೊಂಚಲು - ಎರಡ್ನೂರಾ ನಲ್ವತ್ತೆಂಟು.....

ಒಂದು ಪ್ರೀತಿಯ ನಮನ.....
(ಏಳು ತುಂಬಿದ ಸಂಭ್ರಮ...)

ಒಳಮನೆಯಲಿ ಸೆರೆಯುಬ್ಬಿ ಅಳುವಾಗ ಕನಸು - ಮುಂಬಾಗಿಲಲಿ ನಗೆ ಹಸೆಯ ಬಿಡಿಸುವುದ ಕಲಿತು; ಹೇ ಬದುಕೇ, ಉಸಿರ ಬಳ್ಳಿಯ ಬೇರು ಕರಿ ಕಾನ ಮಣ್ಣಾಗುವ ಮುನ್ನ ತುಸು ಕಾಡಬೇಕು ನಿನ್ನ - ಕಾದು, ಕಾಡಿ ಕದಿಯಬೇಕು ನಿನ್ನಿಂದ ಚೂರೇ ಚೂರು ಕಾಡು ಹೂವಿನ ತುಂಟ ನಗೆಯನ್ನ...

ಅದಕೆಂದೇ,
ಏಳು ವರುಷ - ಸತತ ಎಂಬತ್ನಾಕು ಮಾಸಗಳು - ನಡೆದ ಹಾದಿಯಲ್ಲಿ ಮನಸು ಹಡೆದ ನನ್ನ ಪಾಲಿನ ವಿಶೇಷ ಹಾಗೂ ವಿಚಿತ್ರ ಭಾವಗಳನೆಲ್ಲ, ಗೊಂಚಲಿನ ಲೆಕ್ಕ ಹಚ್ಚಿ, ಪ್ರಜ್ಞೆಗೆ ದಕ್ಕಿದ ಒಂದ್ನಾಕು ಅಕ್ಷರಗಳನೇ ತಿರುವು ಮುರುವಾಗಿ ಬಳಸುತ್ತಾ ಬಿಚ್ಚಿಡುತ್ತಾ ಬಂದೆ - "ಭಾವಗಳ ಗೊಂಚಲು" ಎಂದು ಬೀಗುವ ಈ ತಾಣದಲ್ಲೀಗ ಒಟ್ಟು ಎರಡು ನೂರಾ ನಲವತ್ತೆಂಟು ಚಿತ್ರ ವಿಚಿತ್ರ ಬಿಡಿ ಬಿಡಿ ಗೊಂಚಲುಗಳು...!!!
ಮಲೆನಾಡ ಕಾಡ ಬೀಡಾಡಿ ಹುಡುಗ ನಾನು; ಅಲ್ಲಿಯ ಧೋ ಮಳೆಗೆ ಬೆಚ್ಚನೆ ಆಸರೆಯಾಗೋ ಕಂಬಳಿ ಕೊಪ್ಪೆಯಂತೆ ಈ ಊರಲ್ಲಿ ಎನ್ನೆದೆಯ ರಾಡಿ ರಾಡಿ ಭಾವಗಳ ಸಂಭಾಳಿಸಲು ಎನಗೆ ದಕ್ಕಿದ್ದು ತಲೆಯಲಿರುವ ಆ ಅದೇ ನಾಲ್ಕಕ್ಷರ...


ಅರ್ಥವೇ ಆಗದ ಪ್ರೇಮ - ಹುಟ್ಟು, 
ಸದಾ ಗುಮಿಗುಡುವ ಕಾಮ - ಸಾವು, 
ಹೊಂದಿಕೆಯಾಗದ ಜಗದ ರೀತಿ ರಿವಾಜುಗಳು,
ಇವಳಿಗೆ ಗೆಜ್ಜೆ ಕೊಡಿಸುವಾಗ ಆಯಿಯ ಬೋಳು ಕಾಲು ನೆನಪಾಗುವುದೇಕೆ - ಕೈತುಂಬ ಡಜನ್ಗಟ್ಟಲೆ ಬಳೆ ಇದ್ದರೂ ಒಂದ್ಯಾವುದೋ ಬಳೆ ಒಡೆದಾಗ ಆಯಿ ಆ ಪರಿ ಕಳವಳಿಸುವುದೇಕೆ - ಗದ್ದೇಲಿ ದುಡಿಯುವ ಆಯಿಯ ಆ ಪರಿ ಬೆವರಿಗೂ ಹಣೆಯ ಕೆಂಪು ಬಂಡಿ ಚಂದಿರನಂತ ಕುಂಕುಮ ಕದಡದೇ ಇರುವುದು ಯಾವ ಮಾಯೆ; ಸುಖಾ ಸುಮ್ಮನೆ ಹುಟ್ಟಿ ಸುಮ್ಮನಿರಲು ಬಿಡದೆ ಉರಿವ ಬಸುರಿ ಕುನ್ನಿಯ ಚಡಪಡಿಕೆಯಂಥ ಪ್ರಶ್ನೆಗಳು, 
ಎಲ್ಲೆಲ್ಲೋ ಹೇಗ್ಹೇಗೋ ದಕ್ಕಿದಂತೆನಿಸುವ - ದಕ್ಕಿಯೂ ದಕ್ಕದಂತೆ ನುಣುಚಿಕೊಳ್ಳುವ ಏನೇನೋ ಅಡ್ನಾಡಿ ಉತ್ತರಗಳು, 
ಬದುಕ ಬಿಡದೆ ಕಾಡುವ ಸಾವು - ‘ಪುನರಪಿ ಜನನಂ ಪುನರಪಿ ಮರಣಂ’ ಎಂಬ ಕಾಣದ ಕಣ್ಣಿನ ಸಮಾಧಾನ, 
‘ವಿನಾ ದೈನ್ಯೇನ ಜೀವನಂ - ಅನಾಯಾಸೇನ ಮರಣಂ’ ಎಂಬ ಪ್ರಾರ್ಥನೆ, 
ಬೆಕ್ಕಿನ ಮೀಸೆಯಂಥ ನನ್ನ ಅಹಮ್ಮಿನ ಕೋಟೆ - ಅವರಿವರ ಪ್ರೀತಿಯ ಹಾರೆ,
ಕಾಣದ್ದನ್ನು ನಂಬಲಾಗದ - ಕಂಡದ್ದನ್ನು ಒಪ್ಪಲಾಗದ ನಿರ್ಭಾವದ ಸೊಕ್ಕು, 
‘ನೀನು’ ‘ನಾನು’ಗಳ ಅಮಲಲ್ಲಿ ನೀನು ನಾನು ನೀನು ನಾನಾಗಿಯೇ ಉಳಿದು ನೀನು ನಾನು ಬೆಸೆದು ನಾವಾಗುವ ಚಂದ ಅಳಿದು, 
ನಿನ್ನೆಯ ಹುಣ್ಣಿನ ನೆನಪು - ನಾಳೆಯ ಹಣ್ಣಿನ ಕನಸು - ನೋವಿಗೂ ನಲಿವಿಗೂ ಹರಿವಾಗಿ ನಗುವನೇ ಆಯ್ದುಕೊಂಡ ಇಂದೆಂಬ ಕಲಸುಮೇಲೋಗರದ ಇಕ್ಕಟ್ಟಿನ ಹಾದಿ, 
ಗುರುತುಳಿಯಲಿಲ್ಲ ಏನೂ - ಗುರುತುಳಿಸಬಾರದು ಏನೇನೂ ಎಂಬಂತ ಗೊಂದಲಗಳ ವಿಕ್ಷಿಪ್ತ ಎದೆಯ ಗೂಡಲ್ಲಿ ಹುಚ್ಚುಚ್ಚಾಗಿ ಹರಡಿ ಹಾಡೋ, ಕಾಡೋ ಭಾವಗಳು ಅಷ್ಟೇ ಹುಚ್ಚುಚ್ಚಾಗಿ, ಮತ್ತೆ ಮತ್ತದೇ ರಾಗವಾಗಿ ಅಕ್ಷರಕೆ ಅಕ್ಕರೆಯಲಿ ನೇಯಲ್ಪಡುವಾಗ ಏನೋ ಹಗುಹಗುರ ಸಂವೇದ... 
ಬರೆದ ಸಾಲುಗಳ ನೈಜ ಸಾರ್ಥಕತೆ ಅದಷ್ಟೇ... 
ಅದರಾಚೆ ಅದಕ್ಕೆ ನಿಮ್ಮ ಮೆಚ್ಚುಗೆಯೂ ದಕ್ಕಿ ಅದೊಂತರ ಹೆಮ್ಮೆಯಾಗಿ ಬೆಳೆದು ನನ್ನ ಅಹಂ ಅನ್ನು ತಣಿಸಿದ್ದೂ ಅಷ್ಟೇ ಸತ್ಯ...
ಬರೆದದ್ದರಲ್ಲೇನೂ ತಿರುಳಿಲ್ಲದಿದ್ದರೂ ಓದುವ ಖುಶಿಗಾಗಿ, ಓದಿನ ಮೇಲಿನ ಪ್ರೀತಿಗಾಗಿ ಓದಿ, ಮೆಚ್ಚಿಗೆಯ ಮಾತಾಡಿದವರು ನೀವುಗಳು...
ಮನದ ಗೂಡಲ್ಲೇ ಮುದುಡಿ ಕೂರಬಹುದಿದ್ದ ಎಷ್ಟೋ ಎಷ್ಟೆಷ್ಟೋ ಭಾವಗಳು ಅಕ್ಷರದ ಝರಿಯಾಗಿ ಹರಿದು ವಿಸ್ತಾರವಾಗುವಲ್ಲಿ ನಿಮ್ಮಗಳ ಅಕ್ಕರೆಯ ಪಾತ್ರ ಬಲು ದೊಡ್ಡದು...
ಐವತ್ತು ಸಾವಿರ ಬಾರಿ ಈ ತಾಣದ (ಬ್ಲಾಗಿನ) ಬಾಗಿಲು ತೆರೆದುಕೊಂಡಿದೆ, ಅದರಲ್ಲಿ ನನ್ನ ಪಾಲನ್ನು ಕಳೆದರೂ ನಿಮ್ಮ ಪಾಲೂ ದೊಡ್ಡದೇ ಇದೆ...
ಈ ನಿಮ್ಮ ವಿನಾಕಾರಣದ ಪ್ರೀತಿಗೆ ಆಭಾರಿಯಾಗಿದ್ದೇನೆ... 
ಅರ್ಥಕ್ಕಿಂತ ಅನರ್ಥ, ವಿಪರೀತಾರ್ಥಗಳನ್ನೇ ವಿಪರೀತವಾಗಿ ಸೃಜಿಸುವ ಖಾಲಿ ಜೋಳಿಗೆಯ ಜಂಗಮನೊಬ್ಬನ ವಿಭ್ರಾಂತ ಖಯಾಲಿಯ ಹಾಡಿಗೂ ಈ ಪರಿಯ ಪ್ರೀತಿ ಭಿಕ್ಷೆಯೇ ಅಂತ ಬೆರಗಾಗುತ್ತೆ ಒಮ್ಮೊಮ್ಮೆ - ಬದುಕ ಬಹು ಚಂದದ ಕರುಣೆ...

ಮುಂದೆಯೂ -
ಜಾತ್ರೆ ನೆರೆದ ಊರ ರಥಬೀದಿಯ ತುದಿಯ ಜನಜಂಗುಳಿಯಲ್ಲಿ ಮಿಂಚಿ ಮರೆಯಾದ ಕಪ್ಪು ಕಂಗಳ ಬೆಳಕ ಕುಡಿ ಎದೆಯ ಹಾಳೆಯ ಮೇಲೆ ಗೀಚಿಟ್ಟು ಹೋದ ಚಿತ್ರಕ್ಕೆ ಹೆಸರಿಡದೆ ಮುದದ ಮುಚ್ಚಟೆಯಿಂದ ಕಾದಿಟ್ಟುಕೊಂಡು ಸಾಗುತ್ತೇವಲ್ಲ ಹಾಗೆ ಈ ಭಾವ ಗೊಂಚಲಿನ ಹಾದಿಯನೂ ಸಿಂಗರಿಸಿ ಸಾಗುತಲೇ ಇರುವ ಹಂಬಲ ನನ್ನದು... 
ಎಷ್ಟು ಕಾಲ, ಹೇಗೆ, ನೋವೋ, ನಗುವೋ, ಏನು, ಎತ್ತ ಒಂದೂ ಗೊತ್ತಿಲ್ಲ... 
ಆಗೀಗ ಹಾಗೀಗೆ ಹುಟ್ಟಿದ ಎದೆರಾಗವ ತೋಚಿದಂತೆ ಗೀಚಿಡುತ್ತ ಸಾಗುವುದು...
ಮನದ ವಾಂಚಲ್ಯದ, ಚಾಂಚಲ್ಯದ ಕಡು ಮೋಹಿ ಭಾವಗಳು ಕಾಡುವುದು, ಹಾಡುವುದು, ಕಾದಾಡುವುದು ನಿಲ್ಲುವವರೆಗೆ - ಎದೆಯ ಬತ್ತಳಿಕೆ ಖಾಲಿಯಾಗುವವರೆಗೆ...
ನೀವಿದ್ದೀರಲ್ಲ ಓದಿ ನನ್ನದೇ ಭಾವದಂತಿದೆ ಕಣೋ ಅಂತಂದು ನನ್ನ ನನ್ನೊಳಗೆ ಬೀಗುವಂತೆ ಮಾಡಲು...
ಇದಿಲ್ಲದೆಯೂ ನೀವೆಲ್ಲ ಸಿಕ್ಕಬಹುದಿತ್ತೇನೋ ಗೊತ್ತಿಲ್ಲ - ಆದರೆ, ಇದರ ಕಾರಣಕ್ಕೆ ನನ್ನ ದೌರ್ಬಲ್ಯಗಳನೂ ಕಡೆಗಣಿಸಿ ನನ್ನೊಡನೆ ಗಾಢ ಬೆಸೆದುಕೊಂಡ ಪ್ರತ್ಯಕ್ಷ, ಪರೋಕ್ಷ ಬಂಧಗಳಿರುವುದು ಒಳಗುಡಿಯ ಸತ್ಯ... 

ಈ ಪ್ರೀತಿ ಇಂತೆಯೇ ಜಾರಿಯಲ್ಲಿರಲಿ... 
ಅಕ್ಷರ ಬೆಸೆಯಲಿ ಬಂಧಗಳ...💕💕

ವಿಶ್ವಾಸ ವೃದ್ಧಿಸಲಿ - ಶ್ರೀವತ್ಸ ಕಂಚೀಮನೆ 

3 comments:

  1. ಮೌನ ಮತ್ತು ಪ್ರೇಮ ...

    ReplyDelete
  2. ಈ ಅಕ್ಷರ ಸಂಭ್ರಮ ಹೀಗೆಯೇ ಮುಂದುವರೆಯಲಿ...

    ReplyDelete
  3. ಇದಿಲ್ಲದಿದ್ದರೂ ಬಂಧ ಬೆಸೆಯುತ್ತಿತ್ತಾ ಗೊತ್ತಿಲ್ಲ ಆದರೂ ಬಂಧ ಬೆಸೆದದ್ದು ಈ ಗೊಂಚಲಿನ ಅಕ್ಷರ ಸೆಳೆತದಿಂದಲೇ.....
    ಬದುಕೆಂದರೆ ಹಾಗೆಯೇ ಇರಬಹುದು, ಇದ್ದೂ ಇಲ್ಲದೇ ಮತ್ತೆ ಮತ್ತೆ ಹುಟ್ಟುತ್ತಾ ಕಾಡುತ್ತಾ ನಮ್ಮೊಡನೆ ಸುಮ್ಮನಿರುವ ಮೌನ. ನಿನ್ನೀ ಮನದ ಪುಸ್ತಕದ ಗೊಂಚಲಿನಲ್ಲಿ ದಿನಕ್ಕೊಂದು ನಗುವು‌ ಮೂಡಿ ನೂರಾರು ವಸಂತಗಳೂ ಹೀಗೆಯೇ ಅಕ್ಷರ ಪ್ರೀತಿ ಹರಿಯುತ್ತಿರಲಿ ಜೊತೆಗೆ ನಗುವಾಗಿ ಕಾಡುವ ಬಂಧಗಳೂ.......

    ReplyDelete