Wednesday, February 7, 2018

ಗೊಂಚಲು - ಎರಡ್ನೂರಾ ನಲ್ವತ್ರೊಂಭತ್ತು.....

ಅಮ್ಮನ ಎದೆ ಹಾಲು ಬತ್ತುವುದಿಲ್ಲ...

ಕರುಳ ಕುಡಿಗಳ ಬೇರು ಬಲಿಯಲು ಅವಳ ಆರದ ಹಣೆಯ ಬೆವರೇ ನೀರು ಗೊಬ್ಬರ...
ಜಗದ ಕುಹಕಕೆಲ್ಲ ಅವಳು ಕಿವುಡು - ಅವಳ ದೈವ ಮುನಿದರೆ ಹಠವೇ ಉತ್ತರ - ಸ್ವಾಭಿಮಾನಕೆ ಬದುಕೇ ಸಾಕ್ಷಿ...

ಕಣ್ರೆಪ್ಪೆಯ ಗೆರೆಗಳ ಕೇಳಿದರೆ ಅದೆಷ್ಟು ತನ್ನೊಳಗೇ ಇಂಗಿದ ನೋವ ರೂಕ್ಷ ಕಥೆಗಳ ಹೇಳಿಯಾವೋ; ಅದನೂ ಮೀರಿ ಕಣ್ರೆಪ್ಪೆಯ ಗಡಿ ದಾಟಿ ಧುಮುಕಿದ ಹನಿಗಳು ಇರುಳಿಗೂ ಅರಿವಾಗದಂತೆ ಸೆರಗಿನಂಚಲ್ಲಿ ಇಂಗುತ್ತವೆ - ಹೇಳಲಾರಳು ಅವಳದನ್ನ...

ಬೆರಳ ಸಂಧಿಯಿಂದ ಮುಷ್ಟಿಯೊಳಗಣ ಮರಳಿನಂತೆ ಖುಷಿಗಳೆಲ್ಲ ಜಾರಿ ಹೋಗುತ್ತಿದ್ದರೆ ಹಸ್ತಕ್ಕೆ ಮೆತ್ತಿರೋ ನಾಕು ಮರಳ ಹುಡಿಯನ್ನೇ ಎದೆಗೊತ್ತಿಕೊಂಡು ನಕ್ಕು ಹಾದಿ ಸಾಗುವುದಿದೆಯಲ್ಲ - ಅವಳಿಂದ ಕಲಿಯಬೇಕದನ್ನ.......

ನೋವ ಗೆದ್ದೇನೆಂಬ ಹಮ್ಮಿಲ್ಲ ಅವಳ ನಗುವಿಗೆ - ಅದ ಸಿಗದಂತೆ ಮುಚ್ಚಿಟ್ಟ ಹರಕು ಸಮಾಧಾನವಷ್ಟೇ ಜಗದ ನಾಲಿಗೆ ನದರಿನ ಹಸಿವಿಗೆ...

ಮನೆಯ ಚಿಟ್ಟೆ ಅಂಚಿನ ಅವಳ ಹೂದೋಟದಲಿ ನಿತ್ಯ ಅರಳೊ ನಿತ್ಯ ಪುಷ್ಪ, ಮುತ್ಮಲ್ಲಿಗೆ, ಚಿಗುರು ತುಳಸಿ ಅವಳ ದೇವರ ತಲೆಗೆ...
ಕೆಂಡಗೆಂಪು, ತಿಳಿ ಹಳದಿ ಹಬ್ಬಲಿಗೆ ಅವಳ ಮುಡಿಯ ಆಭರಣ...

ಅಂಗಳದ ಮೂಲೆಯ ಕೌಲ ಮರಕ್ಕೆ ಹಬ್ಬಿಸಿದ ಮಲ್ಲಿಗೆ ಬಳ್ಳಿ ಮೂರನೇ ಸುತ್ತು ಹೂಬಿಡುವ ಹೊತ್ತಿಗೆ ಇನ್ನೇನು ಮಳೆಗಾಲ ಶುರುವಾಗುತ್ತೆ ಅಂತ ಅವಳಲ್ಲೊಂದು ಖುಷಿಯ ಧಾವಂತ...
ಹಪ್ಪಳಕ್ಕೆಂದು ಹಲಸಿನ ಸೊಳೆ ಬಿಡಿಸುವಾಗಲೆಲ್ಲ ಮನೆಯ ಮಾಡಿಗೆ ಹಂಚು ಬಂದು ಸೋಗೆ ಕರಿಯ ಗೊಬ್ಬರ ಸಿಗದೇ ಹಲಸಿನ ಮರಕ್ಕೆ ಫಲ ಕಮ್ಮಿಯಾದದ್ದು ಅವಳೊಳಗೆ ವಿಚಿತ್ರ ಸಂಕಟ ಹುಟ್ಟಿಸಿ  ಗೊಣಗಾಟವಾಗುತ್ತೆ... 

ಕೊಟ್ಟಿಗೆಯಂಚಿನ ತೊಂಡೆ ಚಪ್ಪರ, ಅಲ್ಲೇ ಗೊಬ್ಬರ ಗುಂಡಿಯ ಏರಿಯ ಮೇಲಣ ಕೆಸುವಿನ ಹಾಳಿ, ಗದ್ದೆ ಬದುವಿನ ಹಿತ್ತಲ ಮೊಗೆ ಬಳ್ಳಿಗಳಿಗೆ ಅವಳು ಮಾಡುವ ಆರೈಕೆ, ಉಪ್ಪು ಹಾಕಿ ಮಾವಿನ ಮಿಡಿ - ಹಲಸಿನ ಸೊಳೆಗಳನ್ನವಳು ಭದ್ರ ಮಾಡುವ ಪರಿ, ಬೆಣ್ಣೆ ಕಾಸಿ ತುಪ್ಪ ಮಾಡುವಲ್ಲಿನ ಅವಳ ಶ್ರದ್ಧೆಗಳಲ್ಲಿ ಅವಳು ನಿತ್ಯ ಅನ್ನಪೂರ್ಣೆ...

ಎಮ್ಮೆಯ ಮುದ್ದು ಮಾಡಿ, ನಾಯಿಯ ಪ್ರೀತಿಯಿಂದಲೇ ಗದರಿ, ಬೆಕ್ಕಿನ ಕಿವಿ ಹಿಂಡಿ, ಎಲ್ಲರ ಅಕ್ಕರೆಯಿಂದ ಸಲಹುವ ಸಹನೆಯೇ ಅವಳನ್ನವಳು ಪ್ರೀತಿಸಿಕೊಳ್ಳುವ ರೀತಿ - ಅವಳೊಡನೆ ತೋಟದಂಚಿನ ನಾಗರ ಕಲ್ಲೂ ಮಾತಾಡುತ್ತದೆ...

ಕಾಗೆ ಕರೀತಾ ಇದೆ - ಮನೆ ಕೋಳಿನ ಮೇಲೆ ಕೂತು; ಕಾಯುತ್ತಾಳೆ ಹಾದಿಗೆ ಸಗಣಿ ನೀರು ಸುರಿದು ಇಂದು ಯಾರೋ ಬಂದಾರು ನನ್ನ ನೋಡೋಕೆ ನನ್ನೋರು - ಸುಳ್ಳೇ ಆದರೂ ಖುಷಿಯ ನಿರೀಕ್ಷೆಯಲಿ ಆ ದಿನಕೊಂದು ಚಂದ ತುಂಬೋ ಶಕ್ತಿಯ ಕಂಡುಕೊಂಡವಳಿಗೆ ಕಾಗೆಯೊಂದು ಶುಭ ಶಕುನ...

ಇರುವೆಗಳಿಗೆ ಡಮಕ್ಷನ್ನು, ಇಲಿಗಿಷ್ಟು ಪಾಷಾಣ ಮತ್ತು ಕೊಳೆಯೋ ಕಾಲಿಗೊಂದು ಹರ್ಬಲ್ ಅಥವಾ ಬಿ-ಟೆಕ್ಸ್ ಡಬ್ಬ ಪೇಟೆಗೆ ಹೊರಟಾಗೆಲ್ಲ ಅವಳ ಬೇಡಿಕೆ...

ಸ್ವಂತಕ್ಕೆ ವರುಷಕ್ಕೊಂದು ಸೀರೆ, ಅಲ್ಲಿಲ್ಲಿಯ ಹಬ್ಬಗಳಿಗೊಂದು ಡಜನ್ ಕಾಜಿನ ಕೆಂಪು ಚುಕ್ಕಿಯ ಬಳೆ - ಅವಳ ಬದುಕು ಎಷ್ಟು ಸಸ್ತ - ‘ನನಗೇನು ಕಮ್ಮಿ ಆಗಿದೆ’ ಅನ್ನುವ ಸಿದ್ಧ ಮಂತ್ರ, ತಂತ್ರದ ನೆರಳಲ್ಲಿ ಮನೆ ಯಜಮಾನನ ಖಾಲೀ ಜೇಬನ್ನು ಅಣಕಿಸುವ ಆಸೆಗಳ್ಯಾವುವೂ ಅವಳಲ್ಲಿ ಹುಟ್ಟುವುದೇ ಇಲ್ಲ...

ಪೂಜಿಸಿ ಮರುಕ್ಷಣವೇ ತನ್ನ ಅಥವಾ ತನ್ನವರ ಕರುಳ ಕಲಮಲಕೆ ಆ ದೇವರನ್ನೂ ಶಪಿಸಬಲ್ಲಳು - ಮಲಗೋ ಮುನ್ನ ಶಿವನೇ ನನ್ನೆಲ್ಲ ಕುಡಿಗಳ ಕಾಯಪ್ಪಾ ತಂದೇ ಅಂತಂದು ಅಂದಿನ ತನ್ನೆಲ್ಲ ಸುಸ್ತನ್ನೂ ಕಳಕೊಂಡು ನಿಸೂರಾಗಬಲ್ಲಳು...  

ತನ್ನನ್ನ, ತನ್ನದನ್ನ, ತನ್ನತನವನ್ನ ಉಳಿಸಿ ಬೆಳೆಸಿಕೊಳ್ಳೋಕೆ ಅವಳು ಬಡಿದಾಡುವ ರೀತಿಯನ್ನ ಕಣ್ಣು ಕೀಲಿಸಿ ನೋಡಬೇಕು - ಬದುಕಿನೆಡೆಗೆ ಅದಮ್ಯ ಪ್ರೀತಿ ಹುಟ್ಟಲು ಮತ್ಯಾವ ಪುರಾಣ, ಪ್ರವಚನಗಳನೂ ಕೇಳಬೇಕಿಲ್ಲ...

ಪುಟ್ಟ ಪುಟ್ಟ ಕನಸುಗಳು, ಬೆಟ್ಟ ಮಣಿಸಿ ಮುಡಿಗೇರಿಸಿಕೊಳ್ಳೋ ಸ್ವಚ್ಛ ಸುಂದರ ನಗು;  ಅವಳ ಹಾದಿ ಎಷ್ಟು ಜಟಿಲವೋ ಅವಳು ಆ ಹಾದಿಯ ತುಳಿಯುವ ರೀತಿ ಅಷ್ಟೇ ಸರಳ - ಬೆಳಕು ಹುಟ್ಟಿದ್ದು ಅವಳಿಂದಲೇ - ಅವಳೊಂದು ಕರುಳ ಜಾನಪದ... 

ಬೆಳಗಿನ ಐದಕ್ಕೋ ಆರಕ್ಕೋ ಎದ್ದು ಬಾಗಿಲಿಗೆ ರಂಗೋಲಿ ಇಟ್ಟು, ಅಂಗಳದ ಕಟ್ಟೆ ತುಳಸಿಯ ಬುಡಕ್ಕೆರಡು ಧಾರೆ ನೀರು ಸುರಿದು, ಅಲ್ಲೇ ಘಳಿಗೆ ನಿಂತು ಆಗಸಕೆ ಮುಖ ಮಾಡಿ ಸೂರ್ಯಂಗೊಂದು ನಮನದ ಗಡಿಬಿಡಿಯ ಹಾಯ್ ಅನ್ನುವಲ್ಲಿಂದ ಶುರುವಾಗಿ ರಾತ್ರಿ ಕರೆಂಟ್ ಇಲ್ಲದೇ ನೋಡಲಾಗದ ಧಾರಾವಾಹಿಯ ನೆನೆದು ಕೆಇಬಿಯವರ ಬೈದು ಕಣ್ಣ ರೆಪ್ಪೆಗೆ ಹನಿ ಎಣ್ಣೆ ಹಚ್ಚಿಕೊಂಡು ಶಿವ ಶಿವಾ ಎನ್ನುತ್ತ ನಿದ್ದೆಗೆ ಜಾರುವವರೆಗೆ ಎದೆಗೆ ಗುದ್ದುವ ಎಷ್ಟೆಲ್ಲ ಅವಾಂತರಗಳ ನಡುವೆಯೂ ಹಾಗೇ ಉಳಿದುಕೊಂಡ ಅವಳ ಅಳಿಯದ ನಂಬಿಕೆಯ ಆಳ, ಕಳೆಯದ ಮುಗ್ಧತೆಯ ತಿಳಿ, ಆರದ ಬೆರಗಿನ ಹರಹು ನನಗೇಕೆ ಸಾಧ್ಯವಾಗಲಾರದು...  

ಅವಳ ಕೇಳಿದರೆ “ನಿನ್ನ ಬುದ್ಧಿ ನಿನ್ನ ಕೈಲಿದ್ದರೆ ಸಾಕು’’ - ಎಂದಿನ ಒಂದೇ ಬುದ್ಧಿವಾದ...

ಬದುಕು ಎದುರಿಗಿಟ್ಟ ಎಂಥ ಬಿರು ಬೇಸಿಗೆಗೂ ಅವಳ ಪ್ರೀತಿಯ ಎದೆ ಹಾಲು ಬತ್ತಿದ್ದೇ ಕಂಡಿಲ್ಲ - ಅವಳೊಂದು ಕಾರುಣ್ಯದ ಅಕ್ಷಯಾಮೃತ ಗಿಂಡಿ...
;;;;

ಏನೇ ಹುಡ್ಗೀ ಬದ್ಕಿದ್ಯೇನೇ...

ಹೂಂ - ನಾನೇಯಾ ಫೋನ್ ಎತ್ತಿದ್ದು, ಅಂದ್ರೆ ಬದ್ಕಿದ್ದೆ ಹೇಳೇ ಅಲ್ದಾ ಲೆಕ್ಕ... ಛಳಿಗಾಲದಲ್ಲಿ ಹೋದ್ರೆ ನಿಂಗೆ ಕಾರ್ಯ ಮಾಡ್ಲೆ ಕಷ್ಟ ಅವ್ತು ಹೇಳಿ ಹೋಯ್ದ್ನಿಲ್ಲೆ...

ಹಹಹ...

ಅಲ್ಲಾ ಕಣೇ ನಿಂಗೆ ಇಂದು ಎಪ್ಪತ್ತು ವರ್ಷ ತುಂಬಿತ್ತು ಗೊತ್ತಿದ್ದಾ... ಅದೇನ್ಕಂಡು ಬದಕ್ದೆ ಮಾರಾಯ್ತೀ... 

ಹೌದಾ...!! ನಿಂಗೆ ಲೆಕ್ಕ ತಪ್ಪೋಯ್ದು - ಇನ್ನೂ ಎಪ್ಪತ್ತೇಯಾ...? ಇನ್ನೂ ಏನೇನ್ ಕಾಣವಾ ಹಂಗಾರೆ...

ಹೌದೇ,  ಬರೀ ಎಪ್ಪತ್ತೆಯಾ... ಇನ್ನೂ ಸಣ್ಣ ಕೂಸು - ಹಾಲು ಹಲ್ಲು ಉದ್ರಿದ್ದು ಈಗಷ್ಟೇ, ಇನ್ನೂ ಗಟ್ಟಿ ಹಲ್ಲು ಬರವು... :) 
ಪ್ರಾಯ ಈಗಷ್ಟೇ ಬಾಗ್ಲತ್ರ ಬಂದ್ ನಿಂತಿದ್ದು...

ಹೌದೌದು... ಎಲ್ಲಾರು ಚಲೋ ಮಾಣಿ ಇದ್ನಾ ನೋಡು - ಮದ್ವೆ ಮಾಡ್ಲಕ್ಕು...

ಹಹಹಾsss...

ಹ್ಯಾಪಿ ಹುಟ್ದಬ್ಬ ಕಣೇ ಸುಂದ್ರೀ... ಲವ್ಯೂ... 😘

ಹಾಂ... ಸಿಹಿ  ತಿಂಬ್ಲಿಲ್ಲೆ, ಖಾರ ಜೀವಕ್ಕಾಗ, ಗುಳ್ಗೆ ತಿಂದೇ ಹೊಟ್ಟೆ ತುಂಬೋ ಕಾಲ್ದಲ್ಲಿ ಎಂತಾ ಹುಟ್ದಬ್ಬ...  
ಆಗ್ಲಿ ಆಯಿ ಲೆಕ್ದಲ್ಲಿ ಎನಾರೂ ಬೇಕಾದದ್ದು ತಕ... ನೀ ಆಸ್ರಿಂಗೆ ಕುಡದ್ಯಾ...? ಹುಶಾರು... ಅದೂ ಈ ಸಲ ಎರ್ಡೇ ಎರ್ಡು ಬದ್ನೆ ಗಿಡ ನೆಟ್ಟಿದ್ದೆ, ಅದ್ಕೆ ಗೆಜ್ಜೆ ಮುಟ್ಟಂಗೆ ಹೂ ಬಿಟ್ಟಿದ್ದು;  ಇನ್ನು ಎಂಟ್ ದಿನಕ್ಕೆ ಮನೆಗ್ ಬಂದ್ರೆ ಅವ್ತಿಪ್ಪು... ನೀ ಅಂತೂ ಬತ್ಲೆ - ಎನ್ಗಿಲ್ಲಿ ತಿಂದದ್ ಮೈಗ್ ಹತ್ತತ್ಲೆ... ಸಾಕು, ಎಂದು ಬೆಳಗಣ ಕೆಲ್ಸ ಎಂತದೂ ಮುಗೀದ್ಲೆ... ಕಡೀಗ್ ಮಾತಾಡ್ತೆ... ಹುಶಾರೋ - ಆಸ್ರಿಂಗ್ ಕುಡಿ ಹಂಗೇ ಉಪಾಸ ಇರಡಾ...

ಅವಳಿಗೆ ವಯಸ್ಸು ಮತ್ತು ಸುಸ್ತು ಅಗೋದೇ ಇಲ್ವೇನೋ...

ಆಟದ ಆಟತೀ ಮನೆಯ ನಗುವಿನ್ನೂ ಮಾಸಿಲ್ಲ, ಆಗಲೇ ಸಂಸಾರ ಅಂದ್ರೇನು ಅಂತ ಗೊತ್ತಾಗೋ ಮುಂಚೇನೇ ಹಾಲು ಗಲ್ಲಕ್ಕೆ ಅರಿಸಿನ ಮೆತ್ತಿ ಮದ್ವೆ ಅಂದರು - ಇರೋ ಬರೋ ದೇವರಿಗೆಲ್ಲ ಹರಕೆ ಹೊತ್ತು ಮಡಿಲಲ್ಲಿ ಮೂರು ಕೂಸುಗಳು - ಕುಕ್ಕಿ ತಿನ್ನೋ ಮಗ್ಗುಲು ಮತ್ತು ಮನೆಯದೇ ಹದ್ದುಗಳ ಜೊತೆಗೆಲ್ಲ ಬಡಿದಾಡಿ ಮಕ್ಕಳನೆಲ್ಲ ದಡ ಸೇರಿಸೋ ಹೊತ್ತಿಗೆ ಉಂಡ ಅವಮಾನಗಳಿಗೆ ಕರುಳು ಬೆಂದು, ಬೆನ್ನು ಮೂಳೆ ಕಬ್ಬಿಣವೇ ಆಗಿರಬೇಕು... ಆದರೂ ಮನಸಿಗಿನ್ನೂ ಬೆಣ್ಣೆಯ ಮೃದು ಉಳಿದದ್ದು ಹೇಗೆ...!!

ಎಲ್ಲ ಹದವಾಯಿತು ಎನ್ನುವ ಹೊತ್ತಲ್ಲೇ ಬದುಕು ಮತ್ತೆ ಹಗೆ ಸಾಧಿಸುತ್ತೆ - ಕೃಷ್ಣಾ ಅಂದವಳು ಮತ್ತೊಂದು ಯುದ್ಧಕ್ಕೆ ಅಣಿಯಾಗುತ್ತಾಳೆ - ಒಡಲಲ್ಲೊಂದು ಬೆಂಕಿಯ ಸಾಕಿಕೊಳ್ಳದೇ ಸಾಧ್ಯವಾ; ಹೆಜ್ಜೆ ಹೆಜ್ಜೆಗೂ ಎಡಗುವ ನೋವ ಅರಗಿಸಿಕೊಂಡು ನಗೆಯ ಹೊತ್ತು ತಿರುಗಲು...  

ಸುಳ್ಳೇ ಗುಮ್ಮನ ಕರೆದು, ಬೆಳದಿಂಗಳ ಕಲೆಸಿ, ಹಟ ಮರೆಸಿ ನನಗೆ ಅನ್ನ ತಿನ್ನಿಸಿದವಳೂ ಒಂದೊಮ್ಮೆ ಅವಳ ಆಯಿಯ ಉಡಿಯ ಕತ್ತಲ ಗುಮ್ಮನಿಗೆ ಹೆದರಿದ್ದವಳೇ ಅಂತೆ...  

ಎನ್ನ ಆಯಿ ಅವಳು - ಅವಳಿಗಿಂದು ಜನುಮ ದಿನ...

ಜಗದ ಚೆಲುವನೆಲ್ಲ ನಿನ್ನಲ್ಲೇ ತುಂಬಿಕೊಂಡ ಬೆಳದಿಂಗಳ ಕುಡಿಯಂಥ ಮುದ್ದಮ್ಮಾ - ಲವ್ಯೂ ಲವ್ಯೂ ಲವ್ಯೂ ಕಣೇ... 😘😘

No comments:

Post a Comment