Saturday, December 21, 2013

ಗೊಂಚಲು - ನೂರೊಂದು.....

ಹೇಳಬಾರದ್ದು.....:)
(ಕೇಳಬೇಡಿ ಏನನ್ನೂ...)

ಬೆಳ್ಳಂಬೆಳಗ್ಗೆ ಸ್ನಾನದ ಮನೇಲಿ ನನ್ನವಳು ಮಿಂದ ಬಿಸಿನೀರ ಹಬೆಯಲ್ಲಿ ಮೀಯುತ್ತಾ ಅವಳು ಬಿಚ್ಚಿಟ್ಟ ಅವಳ ಕರಿಮಣಿ ಮತ್ತು ಕಾಲ್ಗೆಜ್ಜೆ ಪರಸ್ಪರ ಮಾತಿಗಿಳಿದಿದ್ದವು...

ಕರಿಮಣಿಯ ಮಾತು : –
ನಾನೆಂದರೆ ಇವಳಿಗೆ ಇವಳಷ್ಟೇ ಪ್ರೀತಿ... ಇವಳ ಕಣ್ಣಲ್ಲಿ ನಾನೆಂದರೆ ಅವನು ಮತ್ತು ಅವನ ಪ್ರೀತಿ... ನೂರಾರು ಹಿರಿಕಿರಿಯ ಹರಕೆ, ಹಾರೈಕೆಗಳ ಹೊತ್ತು ಅವಳ ಕೊರಳ ತಬ್ಬಿದ ಮಂಗಳ ಹಾರ ನಾನು... ಅವನ ಸೇರುವ ಇವಳ ಆಸೆಗೆ ಸಮಾಜ ತೋರಿದ ಸರ್ವರೊಪ್ಪಿತ ಮಾರ್ಗ ನಾನು... ಇವಳ ಉಸಿರಲ್ಲಿ ಬೆರೆತ ಅವನ ಉಸಿರ ಪ್ರೀತಿಗೆ ಜನ್ಮಾಂತರಗಳ ಸ್ವಂತಿಕೆಯ ಮುದ್ರೆ ಒತ್ತಿದ್ದು ನಾನೆಂಬುದು ಇವಳ ಭಾವ... ಅದಕೇ ನಾನವಳಿಗೆ ಅವಿನಾಭಾವ... ಇರುಳ ಮೊದಲಲ್ಲಿ ಹೊರಳು ಪ್ರೀತಿಯುತ್ತುಂಗದಲಿ ಹನಿವ ಕಣ್ಣ ಹನಿ ಹಾಗೂ ಕೊರಳ ಬೆವರ ಹನಿ ಸೇರಿ ನನ್ನ ತೋಯಿಸುತಿರುವಾಗ ಇವಳೆನ್ನನೊಮ್ಮೆ ಪ್ರೀತಿಯಿಂದ ಚುಂಬಿಸುತ್ತಾಳೆ – ಇದಕೆಲ್ಲ ನೀನೆ ಕಾರಣ ಎಂಬಂತೆ... ಆ ಕ್ಷಣ ನನ್ನಲ್ಲಿ ಜೀವ ಝಲ್ಲೆನ್ನುವ ರೋಮಾಂಚದ ಸಾರ್ಥಕ್ಯ... ಪ್ರತಿ ಹಗಲು ಅವನ ಸೇರೋ ವಿರಹದ ನೆನಪಲ್ಲೂ ಇವಳು ನನ್ನನೇ ಮುದ್ದಿಸುತಾಳೆ... ಇವಳ ಎದೆ ಗೊಂಚಲ ನಡುವ ಬಿಸಿಯಲ್ಲಿ ಹಗಲಿರುಳು ನಲಿವ ನನ್ನೆಡೆಗೆ ಅವನದು ಸದಾ ಹೊಟ್ಟೆಕಿಚ್ಚಿನ ನೋಟ... ಇವಳ ಕಪ್ಪು ಕೊರಳಿಗೆ ನಾನು ಕಪ್ಪು ಸೇರಿದ ಬಂಗಾರದ ದೃಷ್ಟಿಬೊಟ್ಟು... ಕೆಲವೊಮ್ಮೆ ರಕ್ಷಣಾ ಆಯುಧ ಕೂಡ... ಇವಳೊಂದಿಗಿನ ನನ್ನ ರೋಮಾಂಚಗಳು ಸಾವಿರಾರು... 

ಗೆಜ್ಜೆನಾದ : –
ಪ್ರತಿ ಮಿಲನದ ಮೊದಲಲ್ಲೂ ಅವನು ಇವಳ ಪಾದದೊಂದಿಗೆ ನನ್ನನೂ ತುಂಬು ಪ್ರೀತಿಯಿಂದ ಮುದ್ದಿಸುತ್ತಾನೆ... ಅವನಿಗೆ ನಾನೆಂದರೆ ಅವನೆದೆಯ ನಾದ... ನನ್ನ ದನಿಯ ವೇಗ ಅವನೆದೆಯ ಆವೇಗ... ನಾನೆಂದರೆ ಇವಳ ಇರುವಿಕೆಯ ಸಂಗೀತ... ಮೊನ್ನೆ ಇವಳೊಂದಿಗೆ ಅವನು ಅಂದಿದ್ದನ್ನು ನೀನೂ ಕೇಳಿದೆಯಲ್ಲ... “ಈ ಕಾಲಗೆಜ್ಜೆಗಳ ಮೇಲೆ ನಂಗೆ ನಿನ್ನೆಡೆಗಿನಷ್ಟೇ ಪ್ರೀತಿ ಕಣೇ... ಆ ಗುಡಿಯ ಕಲ್ಯಾಣಿಯ ಕಟ್ಟೆ ಬಳಿಯಲ್ಲಿ ಮೊದಲ ಸಲ ಈ ಗೆಜ್ಜೆ ದನಿಯಿಂದಲೇ ನಿನ್ನೆಡೆಗೆ ತಿರುಗಿ ನೋಡಿದ್ದು ಮತ್ತು ಆ ನೋಟವೇ ನಿನ್ನೆಡೆಗಿನ ಒಲವಿಗೆ ನಾಂದಿಯಾದದ್ದು... ಇಂದಿಗೂ ನಿನ್ನ ಗೆಜ್ಜೆ ದನಿ ನನ್ನಲ್ಲಿ ರೋಮಾಂಚವ ತುಂಬುತ್ತೆ... ಆ ದನಿ ಮನೆಯೊಳಿಲ್ಲದ ದಿನ ನಾ ಕಳೆದುಹೋಗಿರ್ತೀನಿ... ಮನೆತುಂಬ ಹಿತವಾಗಿ ಅನುರಣಿಸೋ ನಿನ್ನ ಸೀರೆಯ ಸರಬರ ಮತ್ತು ಈ ಗೆಜ್ಜೆಗಳ ಕಿಂಕಿಣಿ ನನ್ನಲೇನೋ ಹೊಸದಾದ ಮಧುರ ಚೈತನ್ಯ ತುಂಬುತ್ತಲಿರುತ್ತೆ ಪ್ರತಿ ಕ್ಷಣ... ನೀನು ನನ್ನವಳು ಅಲ್ಲಲ್ಲ ಕೇವಲ ನನ್ನವಳು ಎಂಬ ಭಾವ ಏನೋ ತೃಪ್ತ ಖುಷಿಯ ತುಂಬುತ್ತೆ... ಅಂಥ ಕೇವಲ ನನ್ನವಳಾದ ನಿನ್ನ ಇರುವಿಕೆಯ ಸಂದೇಶ ನೀ ಒಳಮನೆಯಲಿದ್ದರೂ ನನ್ನ ಸೇರುತ್ತೆ ಈ ಗೆಜ್ಜೆ ನಾದದೊಂದಿಗೆ... ನಿಂಗೊತ್ತಾ ನಿನ್ನ ಮನಸ್ಥಿತಿಯ ಅರಿವೂ ಒಮ್ಮೊಮ್ಮೆ ನಿನ್ನ ಗೆಜ್ಜೆ ನಾದದಿಂದಲೇ ನನ್ನರಿವಿಗೆ ಬರುತ್ತೆ... ಎರಡು ದಿನಗಳ ವಿರಹದ ನಂತರ ನನ್ನೆಡೆಗೆ ಬರುವಾಗಿನ ಘಲಘಲಕ್ಕೂ, ನಿನ್ನಲೇ ನೀ ನಗುತ ಓಡಾಡುವಾಗಿನ ಮಂದ್ರ ನಾದಕ್ಕೂ, ಸಿಟ್ಟು ಅಸಹನೆಗಳಲಿ ನೆಲ ತುಳಿದು ನಡೆವಾಗಿನ ಝೇಂಕಾರಕ್ಕೂ ಮತ್ತು ಹೀಗೆ ಮಿಲನಕೂ ಮುಂಚೆ ಪಾದದಡಿ ಬೆರಳಾಡಿಸಿ ನಾ ಕೆಣಕುವಾಗಿನ ಕಿಂಕಿಣಿಗೂ ಎಂಷ್ಟೊಂದು ವ್ಯತ್ಯಾಸವಿದೆ... ಸಣ್ಣ ಮಂದಹಾಸದೊಂದಿಗೆ ನೀ ಮಂಚದ ಮನೆಗೆ ನಡೆದು ಬರುತ್ತಿದ್ದರೆ ಮಾರು ದೂರದಿಂದಲೆ ನನ್ನ ತಲುಪುವ ಗೆಜ್ಜೆದನಿ ನನ್ನ ನಾಭಿಯಾಳದಲಿ ಆಸೆಯ ಝೇಂಕಾರವೆಬ್ಬಿಸಿ ಮುಂದಿನ ಕೆಲ ಕ್ಷಣಗಳು ನಾನು ಸುರಿವ ಮೇಘ ನೀನು ಎಲ್ಲ ಹೀರಿ ನಗುವ ವಸುಧೆ... ಎಷ್ಟೆಲ್ಲ ಮಧುರ ಭಾವಗಳೋ ಈ ಗೆಜ್ಜೆ ದನಿಯೊಂದಿಗೆ ನನ್ನಲಿ... ಗೆಜ್ಜೆಯಿಲ್ಲದ ನಿನ್ನ ಪಾದವ ನಾ ಕಲ್ಪನೆಯಲೂ ಕಾಣಲಾರೆ ಕಣೇ... ಅದಷ್ಟೇ ಅಲ್ಲ ನಂಗೆ ಮನೆ ತುಂಬ ನಿನ್ನ ಗೆಜ್ಜೆನಾದಕೆ ಪೈಪೋಟಿ ಕೊಡುವ ಪುಟ್ಟ ಕಿನ್ನರಿಯರು ಬೇಕು... ಕೊನೆಯ ಬಾರಿ ಮೈನೆರೆದು ದಿನವೆಷ್ಟಾಯಿತೆಂದು ಕಣ್ಣು ಮಿಟುಕಿಸಿದ್ದನಲ್ಲ...” ಎಷ್ಟು ಖುಷಿಯಾಯಿತು ಗೊತ್ತಾ... ನಾನಿವಳ ಕಪ್ಪು ಪಾದಗಳ ಬೆಳ್ಳಿ ಸಂಚಲನ... ಇವರೀರ್ವರ ಪ್ರೇಮ ಸಂಕಲನಕೆ ಓಂಕಾರ ಹಾಡಿದ ಅಂತಃಪುರ ಪುರೋಹಿತ... ಮಿಲನದಬ್ಬರದ ನಂತರ ಕಾಲ ಬೆರಳಲ್ಲೇ ನನ್ನೊಡನೆ ಆಡುತ್ತಾ ಇವಳಲ್ಲಿ ಪುಳಕದ ಅಲೆಗಳ ಹೊರಳಿಸುತ್ತಿರುತ್ತಾನಲ್ಲ ಆಗೆಲ್ಲ ನನಗೂ ಒಂಥರಾ ಸಾರ್ಥಕ ರೋಮಾಂಚನವಾಗುತ್ತೆ ಗೊತ್ತಾ...

ಕರಿಮಣಿ – ಕಾಲ್ಗೆಜ್ಜೆಗಳ ಲಜ್ಜೆ ಮರೆತ ಮಾತುಗಳ ಕೇಳುತಿದ್ದ ಕಾಲುಂಗುರ ತನ್ನೊಳಗೊಳಗೇ ನಗುತಿತ್ತು ಇವಳು ಸ್ನಾನದ ಮನೇಲಿ ಕೂಡ ತನ್ನ ಬಿಚ್ಚಿಟ್ಟಿಲ್ಲ ಎಂದು ಬೀಗುತ್ತಾ...

* ಗೆಜ್ಜೆ ಚಿತ್ರ ಅಂತರ್ಜಾಲದಿಂದ ಆಯ್ದದ್ದು...

12 comments:

  1. Odidavaredeyalluu karimani, kaalgejjegalade puLaka ;)

    ReplyDelete
  2. 'ಹೇಳಬಾರದ್ದು' ತುಂಬಾ ಚಂದ ಇದೆ ಶ್ರೀ...... Like it :-)

    ReplyDelete
  3. tumba chennagide.. sada vishista reetiya barahagaLanne needutteeri

    ReplyDelete
  4. ಕರಿಮಣಿ ಹಾಗೂ ಕಾಲ್ಗೆಜ್ಜೆಯ ಸ್ವಗತ ತು೦ಬಾ ಚನ್ನಾಗಿದೆ ಶ್ರೀವತ್ಸ :)

    ReplyDelete
  5. ಚನ್ನಾಗಿದೆ...ಕಾಲುಂಗರದ ಕಳ್ಳ ನಗು...

    ReplyDelete
  6. thumbaa ishta aatu....:)pade pade odabeku endu annisuvashtu channaagide....

    ReplyDelete
  7. ಅತ್ಯದ್ಭುತ .... ಓದುವಾಗ ಕೂಡ ರೋಮಾಂಚನವಾಯ್ತು ...!!!

    ReplyDelete
  8. ಏನೆಲ್ಲಾ .. ಎಷ್ಟೆಲ್ಲಾ ಅರ್ಥಗಳು ಕರಿಮಣಿಗೆ .. ಕಾಲ್ಗೆಜ್ಜೆಗೆ .. ಕಾಲುಂಗುರಕೆ .. ಕುಂಕುಮಕೆ ...
    ಹೇಳಬಾರದ್ದೆನನ್ನೋ ತುಂಬಾ ಚೆನ್ನಾಗಿ ಹೇಳಿದೆಯಲ್ಲ ... ಪಿಸುಮಾತುಗಳು ಚಂದ ...

    ReplyDelete
  9. ಅಂತರ್ಗತ ಎಷ್ಟೋ ಭಾವಗಳು ಲಹರಿಗೆ ಸಿಕ್ಕಿದಾಗ
    ಎಷ್ಟೆಷ್ಟು ನವಿರಾಗಿ ಪಿಸುಗುಟ್ಟುತ್ತವೆ ನೋಡು....

    ಹೀಗೊಂದು ಕಲ್ಪನೆಯೇ ತುಂಬಾ ಚಂದ..
    ಹೀಗೊಂದು ಭಾವ ಬರಬೇಕಾದರೆ ಮನಸಿನೊಳ ಭಾವ ಅದೆಷ್ಟು ಮಧುರವಾಗಿ
    ಪುಳಕಿಸಿರಬೇಡ.....

    ಒಳ್ಳೆಯ ಭಾವಸಿಂಚನ ಓದಲು ತಡವಾಯಿತು......
    ಚಂದ ಚಂದ.....

    ReplyDelete
  10. Ravi kanaddannu kavi kanda.. Naale inda naanu gejje hakuve.. ��

    ReplyDelete
  11. Ravi kanaddannu kavi kanda.. Naale inda naanu gejje hakuve.. ��

    ReplyDelete