ಕಣ್ಣ ಸಲಿಗೆಯಲಿ
ಭಾವಗಳ ಸುಲಿಗೆ...
"ಮನಸು ತನ್ನ ಭಾವನೆಗಳ ತೀವ್ರತೆಯನ್ನು ಮಾತಿನಿಂದಲ್ಲದೇ ಮೌನದಲ್ಲೇ ಹೇಳಬೇಕೆಂದುಕೊಂಡಾಗ ಕಂಗಳ ಆಸರೆ ಬೇಡುತ್ತದೆ. ಹನಿದುಂಬಿದ ಕಂಗಳು ಮನದ ಭಾವ ತೀವ್ರತೆಯ ಸಂಕೇತ. ಹಾಗೆ ಹನಿದುಂಬಿದ ಕಂಗಳು ಆನಂದದ ಅತಿರೇಕಕ್ಕೆ ಸೂಚನೆ.ಅದು ದುಃಖದ ಅತಿರೇಕಕ್ಕೂ ಸೂಚನೆಯೇ...!"
"ಹೃದಯ ತೀವ್ರತರ ಭಾವಗಳ ಗಂಗೋತ್ರಿ.
ಕಣ್ಣು ಧುಮ್ಮಿಕ್ಕುವ ಗಂಗೆಯ ಜಲಪಾತ..."
ಹೃದಯದಲ್ಲಿ ಆವಿರ್ಭವಿಸುವ ಭಾವನೆಗಳನ್ನು ಕರಾರುವಾಕ್ಕಾಗಿ ವ್ಯಕ್ತಪಡಿಸುವ ಸಾಧನ ಕಣ್ಣು ಮಾತ್ರ. ಎದುರಿನ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಆತ್ಮವಿಶ್ವಾಸಕ್ಕೆ ಪ್ರತೀಕವಾದರೆ, ಆ ಕಂಗಳ ಮೂಲಕ ಮನದ ಭಾವಗಳ ಓದಬಲ್ಲವರಾಗುವುದು ಆಪ್ತ ಸಂವಹನ ಸಾಧಿಸಲು ಉತ್ತಮ ಮಾರ್ಗ.
ವ್ಯಕ್ತಿತ್ವದ ಸಾರವೆಲ್ಲ ಕಂಗಳಲ್ಲಿನ ಜೀವಂತಿಕೆಯಲ್ಲಿದೆ.ಅರ್ಥೈಸಿಕೊಳ್ಳುವ ತಾಕತ್ತಿದ್ದರೆ ಕಣ್ಣುಗಳೇ ಎದುರಿನ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು ಬಿಡಿಸಿಡುತ್ತವೆ. ಹಾಗಾಗೇ ನಂಗೆ ಕಂಗಳಡೆಗೆ ವ್ಯಾಮೋಹ ಮತ್ತು ಸಣ್ಣ ಭಯ ಕೂಡ.
ನಯನ - ಚೆಲುವನ್ನೂ ಮತ್ತು ಒಲವನ್ನೂ ಚೆಲ್ಲುವ ಕಾವ್ಯ ಸ್ಫೂರ್ತಿಯ ಅಂಗ.
ಚೆಲುವೆಯರ ಚೆಲುವ ಕಂಗಳು ಕವಿಯ ಕಾವ್ಯಕೆ ಸದಾ ಸ್ಫೂರ್ತಿ.
ಹಾಗಾಗೇ ಕಂಗಳನು ವರ್ಣಿಸದ ಕಾವ್ಯಗಳಿಲ್ಲ.
ಕಮಲಾಕ್ಷಿ - ಮೀನಾಕ್ಷಿ - ನಳಿನಾಕ್ಷಿಯರು ತಮ್ಮ ಕಣ್ಗಳಲ್ಲೇ ನಗುವ - ನಕ್ಕು ಸೆಳೆಯುವ, ಕಂಣ್ಣಂಚಲ್ಲೇ ಗದರುವ, ಕಡೆಗಣ್ಣ ಕುಡಿನೋಟಗಳಲ್ಲೇ ಕಾಡುವ ಆ ಪರಿಯನ್ನು ಮೆಚ್ಚದಿರಲಾದೀತೇ...!
ತನ್ನವಳ ಕಣ್ಣಲ್ಲಿ ತನ್ನ ಚಿತ್ರವ ಕಾಣ ಬಯಸದ ಪ್ರೇಮಿ ಇಲ್ಲವೇನೋ...
ಮನದಲ್ಲಿ ಪ್ರೇಮ ಪಡಿಮೂಡುವುದೇ ಕಣ್ಣ ರಾಯಭಾರಿಕೆಯಲ್ಲಿ...(ಹಾಗಾದ್ರೆ ಅಂಧರ ಪ್ರೀತಿಗೆ ಏನಂತೀಯಾ ಅಂತ ಕೇಳಬೇಡಿ. ಅವರ ಪ್ರೀತಿ ಸಂಪೂರ್ಣ ಅಲೌಕಿಕ.)
ಪ್ರೇಮ - ಕಣ್ಣಲ್ಲಿ ಹುಟ್ಟಿ, ಮನದಲ್ಲಿ ಹೆಪ್ಪುಗಟ್ಟಿ, ಕಣ್ಣ ಹನಿಯಾಗಿ ಹೊರಬರುವ ತೀವ್ರತರವಾದ ಅಲೌಕಿಕ ಭಾವ.
ಕಣ್ಣಿಗೂ ಪ್ರೇಮಕೂ ಸಂಬಂಧ ಅವಿನಾಭಾವ...
ಮಗುವ ಕಂಗಳ ಮುಗ್ಧತೆ
ತಾಯ ಕಣ್ಣಲ್ಲಿನ ಮಮತೆ
ಗೆಳತಿಯ ಪ್ರೀತಿಯ ನೋಟ
ಹಿರಿಯರ ಹಾರೈಕೆಗಳ ದೃಷ್ಟಿ
ಅಕ್ಕಂದಿರು,ಅಣ್ಣಂದಿರು ಕಣ್ಣಲ್ಲೇ ತುಂಬುವ ಭರವಸೆ
ತಂಗಿಯ ತುಂಟ ಕೀಟಲೆಯ ನೋಟ
ಗೆಳೆಯನೊಬ್ಬ ನೋಟದಲ್ಲೇ ತುಂಬುವ ಧೈರ್ಯ
ಇವೆಲ್ಲ ಕಣ್ಣ ರಾಯಭಾರಿಕೆಯಲ್ಲಿ ನಮ್ಮ ಬದುಕನ್ನು ಶ್ರೀಮಂತಗೊಳಿಸುವ,ನಮ್ಮನ್ನು ಮುನ್ನಡೆಸುವ ಮಧುರ ಭಾವಗಳು...
ಭಾವಗಳ ಬಡಿದೆಬ್ಬಿಸುವ ಕಂಗಳಿಗೊಂದು
ಪ್ರೀತಿಯ ಪಪ್ಪಿ...
ಹೂಂ... ಕಣ್ಣಿಗೂ ಒಂದು ಭಾಷೆಯಿದೆ......
ReplyDeleteಕಣ್ಣಿನ ಭಾಷೆ ತುಂಬಾ soft.....
and....
interesting...........
ಕಣ್ಣೊಂದಿಲ್ಲದಿದ್ದರೆ ಎಷ್ಟು ಭಾವಗಳು ಹೃದಯದಲ್ಲೇ ಹೆಪ್ಪುಗಟ್ಟುತ್ತಿದ್ದವೋ......
ಕಣ್ಣಿಲ್ಲದವರ ದುಃಖಗಳು ಅಂತಾ ಟಿ.ವಿ.ಕಾಮತ್ ಅವರು ಬರೆದ ಒಂದು ಪುಸ್ತಕ ಇದೆ..
feel ಆಗೋಕೆ ತುಂಬಾ ಇದೆ ಆ ಪುಸ್ತಕದಲ್ಲಿ.....
ಚಂದನೆಯ ಬರಹ ೋದಿ ನೋಡು ಸಿಕ್ಕರೆ....
ಉತ್ತಮ ಲೇಖನ ದೊರೆ......