Tuesday, July 8, 2014

ಗೊಂಚಲು - ನೂರು + ಇಪ್ಪತ್ತೈದು.....

ಅರ್ಧ ಬರೆದ ಸಾಲುಗಳು...
ಅರ್ಥ - ಅವರವರ ಭಾವಕ್ಕೆ.....

ಮಳೆ ಹನಿದ ನಂತರದ ಸಾವಿರ ಕವಲುಗಳ ಒದ್ದೆ ಒದ್ದೆ ದಾರಿ - ಇರುಳ ಮೊದಲ ಜಾವದಲ್ಲಿನ ಒಂಟಿ ಒಂಟಿ ಅಲೆದಾಟ – ನೆನಪುಗಳ ಚರಮಗೀತೆ – ಕನಸುಗಳ ಸೋಬಾನೆ ಹಾಡು – ಹುಟ್ಟು ಸಾವಿನ ನಡುವೆ ಬದುಕೆಂಬ ಹೆಳವನ ಕುಂಟು ಮೆರವಣಿಗೆ...
ಆ ಮೆರವಣಿಗೆಯ ನಡುವೆಯೇ ಈಗೊಂದಿಷ್ಟು ಕಾಲದಿಂದ ಸವಿ ಸ್ನೇಹಗಳ ಮಡಿಲ ತಂಪಲ್ಲಿ ನಾ ಎಂದಿನಿಂದಲೋ ಪ್ರೀತಿಯಿಂದ ಸಾಕಿಕೊಂಡು ಬಂದಿದ್ದನ್ನ ನಾನೇ ಮರೆತು ಹೋಗಿದ್ದ, ನಾ ಮರೆಯಬಾರದಾಗಿದ್ದ ನನ್ನ ಒಂಟಿ ಒಂಟಿ ಏಕಾಂತವ ನಾಳೆಗಳಿಗಾಗಿ ಮತ್ತೆ ದಕ್ಕಿಸಿಕೊಂಡೇನಾ...


ಅವಳೆಡೆಗಿನ ನನ್ನ ಒಲವು ನನ್ನ ಬದುಕಿನ ಮೂಲಾಧಾರ ಶಕ್ತಿಯಾಗಿ ನನ್ನೊಳಗೇ ಉಳಿದು ನನ್ನೊಂದಿಗೇ ಸಮಾಧಿ ಸೇರಲಿ...
ಕಾರಣ -
ಪ್ರೇಮವೆಂದರೆ ಬದುಕನ್ನೂ ಹಂಚಿ ತಿನ್ನುವುದಲ್ಲವಾ..?
ಹಳಸಿದ್ದನ್ನ ಹಂಚಿ ತಿನ್ನುವ ಬಾ ಅಂತ ಯಾರನ್ನಾದರೂ ಕೇಳಲಾದೀತಾ..?
ಹಸಿವಿದೆ ಅಂತ ಹೇಸಿಗೆಯ ತಿನ್ನಲಾರೆವಲ್ಲಾ...
ಅಲ್ಲಿಗೆ ಬರಡು ಬದುಕಿಗೆ ಪ್ರೇಮ ನಿಶಿದ್ಧ ಅಲ್ವಾ...
ದೂರವಿರಿ ಮಧುರ ಭಾವಗಳೇ ನನ್ನಿಂದ ದಯವಿಟ್ಟು...
ನಾನು ಸಲಹಲು ಅಶಕ್ತನಿದ್ದೇನೆ ನಿಮ್ಮನ್ನು ನಿಮ್ಮಂತೆ...


ಕೇಳು ಹುಡುಗೀ -
ಅವ ನಕ್ಕುಬಿಟ್ಟ – ಭುವಿಯೆಲ್ಲ ಬೆಳಕಾಯಿತು...
ಅವನೂ ನಿದ್ದೆಗೆ ಜಾರುವನಂತೆ – ಆಗ ಇರುಳೆಂದರು...
ಆಗಸದೆಡೆಗೆ ಕಣ್ಣಿಟ್ಟು ನೋಡು ಒಮ್ಮೆ ಚಂದಿರನೊಳಗಿಂದ ನಗುತಿದ್ದಾನೆ ಅದೇ ಅವನು – ಕುರುಡು ಬದುಕುಗಳಲೂ ಬಣ್ಣ ಬಣ್ಣದ ಕನಸ ತುಂಬುತ್ತಾ...
ನಿದ್ದೆ ಮರುಳಲ್ಲಿರಬೇಕು ನಕ್ಕಿದ್ದು ಅದಕೇ ಚಂದಿರ ಅಷ್ಟು ತಂಪು ತಂಪು...
ಅವರಿಬ್ಬರೂ ಅವಳ ಆತ್ಮ ಸಂಗಾತಿಗಳು...
ಅವರಿಲ್ಲದೇ ಅವಳಲ್ಲಿ ಉಸಿರ ಸಂಚಾರವಿಲ್ಲ...
ಉರಿಯುತ್ತಲೇ ಅವಳ ತಾಕಿ ಅವಳಲ್ಲಿ ಜೀವ ಸಂಚಾರದ ಶಕ್ತಿಯಾದವನು ಅವನು ಹಗಲ ಮಣಿ – ಬೆಳಕ ಗಣಿ...
ಅವನ ಬೆಳಕಿಂದಲೇ ಒಂದಿನಿತು ಕಿರಣಗಳ ಬಸಿದುಕೊಂಡು ಚಂದಗೆ ತಂಪಾಗಿ ನಗುತ ಅವಳಲ್ಲಿನ ಒಲವಿನುಬ್ಬರಕೆ ಸಾಕ್ಷಿಯಾಗುವವನು ಇವನು ಇರುಳ ದೀಪ...
ಇರುಳಾಯಿತೆಂದು ಮರುಗದಿರು ಚಂದಿರ ನಗುತಾನೆ ಅಂತಂದೆಯಲ್ಲ ಅಮಾವಾಸ್ಯೆಯ ಇರುಳಲೇನ ಮಾಡಲಿ ಅಂತ ಕೇಳದಿರು; ಬಾನ ಬಯಲಲ್ಲಿ ತಾರೆಗಳೂ ಇವೆ ನಿನ್ನ ನಗಿಸಲು ಗೆಳತೀ... 
ಚಂದಿರನೂ ಇಲ್ಲ ಬಾನೆಲ್ಲ ತಮ್ಮದೇ ಎಂಬ ಹುರುಪಲ್ಲಿ ಮಿನುಗೋ ಆ ಚುಕ್ಕಿಗಳ ಸಂಭ್ರಮದ ಗಡಿಬಿಡಿಯ ನೋಡಬೇಕು ನೀನು ನಿನ್ನ ಕನಸ ಕಂಗಳಲಿ...
ಕಾಣುವ ಒಳಗಣ್ಣ ತೆರೆದು ನೋಡಿದರೆ ಭುವಿಯ ಹಸಿರಲ್ಲಿ, ಚಂದಮನ ತಂಪಲ್ಲಿ, ತಾರೆಗಳ ಮಿನುಗಲ್ಲಿ ಎಲ್ಲೆಲ್ಲೂ ಅವನೇ ಕಾಣುತ್ತಾನೆ... 
ಬೆಳಕ ಪ್ರತಿನಿಧಿ – ಶಕ್ತಿ ಸಂಜೀವಿನಿ... 
ಹೊರಗೆಲ್ಲ ಬೆಳಗುವ ಆ ಸೂರ್ಯ ಚಂದ್ರ ಒಂದಿಷ್ಟು ನಮ್ಮ ಒಳಗನ್ನೂ ಬೆಳಗಲಿ - ಎಡಬಿಡದ, ಸೋತು ಸುಸ್ತಾಗದ ತಮ್ಮ ನಿತ್ಯ ಕೈಂಕರ್ಯದಿಂದ; ಅರಿವಿನ ಬೆಳಕಿಂದ... 
ಬದುಕೆಲ್ಲ ಬೆಳಕೇ ತುಂಬಲಿ - ಅವಳ ಮಡಿಲಲ್ಲಿ ಜೀವ ಜಾಲ ತುಂಬಿ ನಕ್ಕಂತೆ...


ಮರೀ -
ನಿನ್ನ ಗೆಲುವು ನನ್ನ ಸೋಲೇ ಆದರೂ ಆ ಸೋಲಲ್ಲೂ ನಂಗೆ ಸಂಭ್ರಮವಿದೆ...
ನಿನ್ನ ಸೋಲು ನನ್ನ ಗೆಲುವೆಂಬುದಾದರೆ ಆ ಗೆಲುವಲ್ಲೂ ನನ್ನ ಮನದ ನೋವ ಕಣ್ಣೀರಿದೆ...
ಈ ಮಧುರ ಭಾವಕ್ಕೆ ನಾ ಯಾವ ಹೊಸ ಹೆಸರನೂ ಕೊಡಲಾರೆ – ಸವಿ ಸ್ನೇಹವನ್ನುಳಿದು...
ನಿನ್ನಾಯ್ಕೆ ಗೆಲುವೋ, ಸೋಲೋ...?
ಉಳಿದದ್ದು ನಿನ್ನ ಚಿತ್ತ...


ಹಾಳಾದ ಈ ಕಹಿ ನೆನಪುಗಳೆಂಬ ಪಾರ್ಥೇನಿಯಂ ಕಳೆಯಂಥ ಭಾವಗಳು ಅದೆಷ್ಟು ಹುಲುಸಾಗಿ ಬೆಳೆಯುತ್ತವೆ ಗೊತ್ತಾ...
ಬೆಳೆಯದಿರಲೆಂದು ಎಷ್ಟೇ ಚಿವುಟಿದರೂ ಮತ್ತೆ ಮತ್ತೆ ಚಿಗುರಿ ಕನಸುಗಳ ಬೆಳೆಯ ಬೆಳವಣಿಗೆಯ ಕತ್ತು ಹಿಸುಕಿ ಮೆರೆದಾಡುತ್ತವೆ...
ಬೇರು ಸಹಿತ ಕಿತ್ತೆಸೆಯೋಣ ಅಂದುಕೊಂಡರೆ ನನ್ನೀ ಮನಸೆಂಬುದು ಕನಸುಗಳಿಗಿಂತ ಮುಂಚೆ ನೆನಪುಗಳ ತಾಯಿ...
ನೆನಪುಗಳನೂ ಪ್ರೀತಿಸಲು ಸಾವಿರ ಕಾರಣಗಳಿವೆ ಆ ತಾಯಿ ಮಡಿಲಲ್ಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. 'ದೂರವಿರಿ ಮಧುರ ಭಾವಗಳೇ ನನ್ನಿಂದ ದಯವಿಟ್ಟು...
    ನಾನು ಸಲಹಲು ಅಶಕ್ತನಿದ್ದೇನೆ ನಿಮ್ಮನ್ನು ನಿಮ್ಮಂತೆ...'
    ಯಾಕೋ ತೀವ್ರವಾಗಿ ತಟ್ಟಿ ಬಿಟ್ಟಿತು!

    ReplyDelete