ಖರೇ ಅವಳಿನ್ನು ನನ್ನ ಕರೆ ಸ್ವೀಕರಿಸುವುದಿಲ್ಲ.....
ತಮಾ ಎದ್ಕಳೋ ಸೂರ್ಯ ನೆತ್ತಿಗ್ ಬಂದ ಅಂತ ಗೊಣಗುತ್ತಾ ಸರಬರನೆ ಒಳಹೊರಗಾಡುತ್ತಿದ್ದ ಅವಳ ಸುಪ್ರಭಾತದ ಬೆಳಗುಗಳ ಜಾಗದಲ್ಲೀಗ ನೆನಪಿನ ಕೋಶದಲ್ಲಿನ ಅವಳ ಕಥೆಗಳ ಹುಡುಕುತ್ತಾ ಕಣ್ಣುಜ್ಜಿಕೊಳ್ಳೋ ನನ್ನ ಮಬ್ಬು ಬೆಳಗುಗಳಿವೆ...
____ ಮುಗಿದು ಹೋದ ಈ ಬದುಕಿನ ಮೊದಲ ಮತ್ತು ಕೊನೇಯ ಉದ್ದೇಶ...
ಬದುಕನು ಮೆರೆಸಲಾಗದೇ ಸೋತವನು ಸಾವಿನ ಊಟಕೆ ಯಥೇಚ್ಛ ತುಪ್ಪ ಬಡಿಸಿದೆ...
____ ಅವಳಿಷ್ಟದ ಅಡುಗೆ...
ಅವಳಿನ್ನು ನನ್ನ ಕರೆ ಸ್ವೀಕರಿಸುವುದಿಲ್ಲ...
ನನ್ನೆಡೆಗಿನ ಅವಳ ಹುಸಿ ಮುನಿಸಿನ ಆರೋಪಗಳನೂ ಕೂಡಾ ಊಫಿ ಮಾಫಿ ಎಂದು ಬರಕಾಸ್ತುಗೊಳಿಸಿ ಎದ್ದು ಹೋದಳು...
___ ಖರೇ ಅವಳಿನ್ನು ನನ್ನ ಕರೆ ಸ್ವೀಕರಿಸುವುದಿಲ್ಲ...
ಭೋರಿಡುವ ಮಳೆ ಮತ್ತು ಒಂದು ಹನಿ ಕಣ್ಣೀರ ನಿಷಾದ...
ಅವಳಿಲ್ಲದ ಈ ಹೊತ್ತನೂ ನಗುತ್ತಾ ದಾಟುವ ನನ್ನ ಧಾಡಸಿತನವೇ ಆಂತರ್ಯದಲ್ಲಿ ನನ್ನಲ್ಲಿ ಹುಟ್ಟುಹಾಕುವ ವಿಚಿತ್ರ ವಿಶಾದ...
____ ವಿಯೋಗ...
ಜಗ ಮತ್ತು ಜಗದೆದುರು ಅವಳ ಹಾಡಿದ್ದನ್ನು ನಾ ಅವಳಿಗೆಂದೂ ಹೇಳಿಲ್ಲ...
ನಾ ಬರೆದ ಸಾಲುಗಳಲ್ಲಿರುವಷ್ಟು ನಿಜಕ್ಕೂ ನಾನವಳ ಪ್ರೀತಿಸಿದೆನಾ? ಕೇಳೋಣ ಎಂದರೆ ಇಂದು ಅವಳೇ ಇಲ್ಲ...
___ ಕಾಕಗಳ ಕೂಗಿ ಕೂಗಿ ಕೂಗಿ ಕರೆದು ಅವಳ ಕಥೆ ಕೇಳುವ ಹುಚ್ಚು ಕುಣಿತ ಈಗ...
ಅಳಬೇಕಿತ್ತು, ಅತ್ತರೆ ಹಗುರಾಗಬಹುದಂತೆ - ನಾನೋ ಅವಳ ಚಿತ್ರದ ಕಣ್ಣಲ್ಲಿ ಕಣ್ಣಿಟ್ಟು ಗಲಗಲಿಸಿ ನಗುತ್ತೇನೆ...
ಕಾಡ ನಡುವಿನ ಆರಡಿ ಅಂಗಳದಿ ಹೆಗಲಿಂದ ಇಳಿಸಿ ಋಣ ಭಾರಕ್ಕೆ ಇಟ್ಟುಬಂದ ಬೆಂಕಿ ಭಾವಕೋಶವ ಸುಡುತ್ತಲೇ ಇದೆ/ಇರುತ್ತದೆ...
____ ಪ್ರೀತಿ, ಮಮತೆಗಳ ಭಾರವ ವಿಯೋಗದಲ್ಲಿ ಕಾಣಬೇಕು, ತಾಳಬೇಕು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
No comments:
Post a Comment