Sunday, September 26, 2021

ಗೊಂಚಲು - ಮುನ್ನೂರೆಪ್ಪತ್ತೊಂಭತ್ತು....

ಸಂಜೆಯ ಮೈನೋವು.....

ಎದೆ ಕಡಲು ಉಕ್ಕಿ ದಡ ಮೀರಿ ಮರಮರಳಿ ಕಣ್ಣಿಂದ ಇಳಿವಾಗ ಯಾವುದೋ ನೋವಿಗೆ ಮಾತಾಗಿ ಗಂಟಲ ಕುಳಿಯಲೇ ಕಚ್ಚಿಕೊಂಡ ಉಸಿರಲ್ಲಿ ಕಲೆಸಿಹೋದ ದನಿಯಲ್ಲೇ ಫಕ್ಕನೆ ನಕ್ಕು ಸುಮ್ಮನಾಗ್ತೀಯಲ್ಲ - ಆ ಮೃತ ನಗೆಯ ಧುನಿ ಮತ್ತು ಆ ಒಂದು ಕ್ಷಣದ ವಿಶಾದ ಮೌನದೆದುರು ನನ್ನ ಸ್ವಾರ್ಥಗಳೆಲ್ಲ ಸತ್ವ ಕಳಕೊಂಡು ಹಿಡಿಯ ಹುಡಿಯಾಗುತ್ತವೆ...
______ ಅಳು ನುಂಗಿ ನಗು ಒಮ್ಮೆ ಅಂದವನ ಒಡಕು ನುಡಿಗಳೂ ಕರುಳಲ್ಲೇ ಹೆಪ್ಪು ಗಟ್ಟುವ ಘಳಿಗೆ...
↜↝↰↱↜↝

ಆಳಿ ಮುಗಿದ ಕೋಟೆ ಕೊತ್ತಲಗಳ ಅವಶೇಷಗಳನ್ನು ಬಗೆದು ಬಗೆದು ನೆನಪುಗಳ ಹೆಕ್ಕುತ್ತೇನೆ...
ಎದೆಯ ಹಳೇ ಹಪ್ಪು ಗಾಯಗಳ ಸಣ್ಣ ಸಣ್ಣ ಹಕ್ಕಳೆಗಳಲೂ ಮತ್ತೆ ನೆತ್ತರೊಸರುತ್ತದೆ...
ರಣ ಮೌನದ ಶೀತಲ ಪಾತ್ರೆಯಲಿ ರಕ್ಕಸ ಮೋಹವೂ ಹೆಪ್ಪು‌ಗಟ್ಟುತ್ತದೆ...
ಪಾದಕೆ ಮೆತ್ತಿದ ಧೂಳನು ಅಂಗಳದಲೇ ತೊಳಕೊಂಡು ಒಳಬಂದಂಗೆ ಹುಚ್ಚು ಗಾಳಿ ಮೆಟ್ಟಿದ ಮನಸನೂ ಸರಾಗ ಕೊಡವಿ ಮುನ್ನಡೆವಂತಿದ್ದಿದ್ದರೆ...
ವಿಯೋಗ, ವಿಶಾದಗಳನೇ ನಗ ನಾಣ್ಯಗಳಂಗೆ ಹೊತ್ತು ತಿರುಗುವುದೂ ಒಂದು ಖಯಾಲಿಯೇ ಬಿಡು...
____ ಸ್ವಯಂ ಮರುಕದ ನಶೆಯೇರದೇ ವಿಶಾದ ಗಾಢವೆನಿಸೋದಿಲ್ಲ...

ನಿರಾಶೆಯೊಂದಿಗೇ ಆಶೆಯ ಸಹಯಾನವಾ...?!
ಅಥವಾ
ಆಶೆಯ ಬೆನ್ನಿಗೆ ಬಿದ್ದ ಕೂಸಿರಬಹುದಾ ನಿರಾಶೆ...!!
____ ಹುಳಿ ತೇಗಿನಂಥ ಸಂಜೆ...

ಮುಸಲ ಸುರಿವ ಕರಿ ಮೋಡ, ಬಣ್ಣಾಬಣ್ಣದ ನೆನಪುಗಳು ಮತ್ತು ಬಣ್ಣವಿಲ್ಲದ ಕಣ್ಣ ಹನಿ...
____ ಸಂಜೆಯ ಮೈನೋವು...!!
↜↝↰↱↜↝

ಮುದ್ದೆಕಟ್ಟಿ ಎಸೆದ ಖಾಲಿ ಹಾಳೆಯ ಮುಂದುವರಿದ ಭಾಗ ನಾನು...
ಈ ರಸಕಾವ್ಯ ಸೃಷ್ಟಿ ಚೆಲುವೆಲ್ಲ ನನ್ನದೇ...
ಇಲ್ಲಿನ ಎಲ್ಲ ಎಲ್ಲಾ ಪ್ರೀತಿ ಪಲ್ಲವವೂ ನನಗೆಂದೇ ಇದೆ...
ಆಹಾ...!!
ಈ ಬಾಳ್ವೆ ಇದು ಬಲು ಚಂದ ಚಂದ...
***ಶರತ್ತುಗಳು ಅನ್ವಯಿಸುತ್ತವೆ...
↜↝↰↱↜↝

ಬದುಕಿಂಗೇ ಇಲ್ಲದ ಖಾತ್ರಿಯ ಹಂಬಲಗಳಿಗೆಲ್ಲಿಂದ ಕೊಡಲೇ...
ಬೇಲಿಯಿಲ್ಲದ ಭಾವಕೋಶ‌ದಲಿ ಮುಫತ್ತಾಗಿ ಬೆಳೆಯುತ್ತಾ ಹೋಗುವುದಷ್ಟೇ ಕನಸ ಮುತ್ತುಗಳ...
____ ಸ್ವಪ್ನ‌ದೂರಿನ ಹಾದಿಗೆ ಸುಂಕ ಕೇಳುವರಿಲ್ಲ ನೋಡು...
↜↝↰↱↜↝

ಜೀವಿಸುವ ಹುಕಿಗಾಗಿ ಸಾವಿನ ಮನೆಯಲೂ ನಗುವ ಹುಡುಕುತ್ತೇನೆ, ಮಗುವ ಬಳಸುತ್ತೇನೆ ಅಂದವನು ಮತ್ತು ಹಂಗಂಗೇ ಬದುಕಿದವನು...
ಅಷ್ಟಾಗಿಯೂ,
ಎಷ್ಟು ಬೇಗ ನೋವುಗಳ ಮೀರಿ ನಿಂತೆ ಎಂಬುವುದೇ ನೋವಾಗಿ ಕಾಡುತ್ತೆ ಒಮ್ಮೊಮ್ಮೆ - ವಿಚಿತ್ರ ಅಪರಾಧೀ ಭಾವ...
ವಾಸ್ತವಗಳನು ವಾಸ್ತು ನೋಡದೇ ಒಪ್ಪಿಕೊಳ್ಳುತ್ತಾ ಸ್ಪಂದನೆಗಳಿಗೆ ಬರಡಾಯಿತಾ ಎದೆ ಬಿಳಲೂ ಅನ್ಸಿಬಿಡತ್ತೆ...
____ಮುಂದುವರಿದು ಅರ್ಥವಾಗುತ್ತಿಲ್ಲ...
↜↝↰↱↜↝

ಮೈಮನಕೆ ಸುಖವುಂಡು ಅಭ್ಯಾಸ‌ವೇ ಇಲ್ಲದಿದ್ದರೆ ಸಣ್ಣ ಸುಖದ ಇಣುಕು ಬೆಳಕಿಗೂ ಕಣ್ಣು ಹೆಚ್ಚೇ ದಿಗಿಲಿನಿಂದ ತಡವರಿಸುತ್ತದೆ...
ಮತ್ತು
ಉಸಿರಾಳದಲ್ಲೆಲ್ಲೋ ದೀಪ ಜೋರು ಉರಿಯುತಿದೆ - ಇಷ್ಟರಲ್ಲೇ ಆರಬಹುದು ಎಂಬಂಥ ಅಪ್ರಬುದ್ಧ ಭಾವ ಕೆರಳುತ್ತದೆ...
ಗೊತ್ತಲ್ಲ,
ಬಂಗಾರ ಬಣ್ಣದ ಕೇದಗೆಯ ಮೈತುಂಬಾ ಮುಳ್ಳೇಮುಳ್ಳು - ಆ ದೇವಪರಿಮಳದ ಒಡಲದು ಸರ್ಪ ಸತ್ರವಂತೆ...
____ ವಿಕ್ಷಿಪ್ತ...
↜↝↰↱↜↝

ಹಾರ ಹೊರೆಯಾಗಬಾರದು...
↜↝↰↱↜↝

ದನಿ ಸೋತ ಬಿಕ್ಕುಗಳಾಗಿ ನಿನ್ನ ಕಣ್ಣಲೇ ಒಣಗಿದ ಹನಿಗಳೊಂದಿಗೆ ಎದೆಯ ಭಾಷೆ‌ಯಲಿ ಮಾತಿಗಿಳಿದೆ, ನಿನ್ನಾ ಸ್ವಚ್ಛ ನಗೆಯ ಖಾಯಂ ವಿಳಾಸ ಸಿಕ್ಕಿತು...
ಕರುಳುರಿಯ ಹೊಳೆಯಲ್ಲಿ ತೊಳೆದ ನಗೆಯ ಶಿಲ್ಪಕ್ಕೀಗ ಎಂಥ ಚೊಕ್ಕ ಹೊಳಪು, ಎಷ್ಟು ಗಂಭೀರ ಒನಪು...
____ಕಥೆಯಾಗದ, ಕಥೆಗೆ ಒಗ್ಗದ ಪಾತ್ರಗಳು...



*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment