ಭಾವಾನುಭಾವ ಬೆಳಕು.....
"ಪ್ರೀತಿ"
ಉಸಿರಿನಂಗೆ ಸುಮ್ಮನೇ ಜೀವಿಸಿದಾಗಷ್ಟೇ ಜೀವಂತ...
ಕೊಟ್ಟೆ, ಪಡೆದೆ ಎಂಬುದೆಲ್ಲ ಬರೀ ಖೊಟ್ಟಿ ಧಾವಂತ...
_____ ಏಕಾಂತದೊಡನೆಯ ಏಕಾಂಗಿಯ ಅನುಸಂಧಾನ...
💞💞💞
ಕೊಟ್ಟಾತ ಮರೆತು ಪಡೆದಾತ ಮೆರೆಸಿ ಮರಮರಳಿ ಅರಳುವಲ್ಲಿ ದಿವ್ಯ ಗಂಧ "ಪ್ರೀತಿ..."
____ ಭಾವಾನುಭಾವ ಬೆಳಕು...
💞💞💞
ಕಟಬಾಯಿಗಂಟಿದ ಕದ್ದು ಮೆದ್ದ ಬೆಣ್ಣೆ ನೆಯ್ಕ್ಲು ಪಾಪವಾಗದೇ ಪಾಪಚ್ಚಿ ನಗೆಯಾಗುವ ಪರಿಗೆ 'ಕೃಷ್ಣಾsss' ಇಂದಿಗೂ ನಿನ್ನದೇ ಹೆಸರು...
ಬದುಕಿನ ಎಲ್ಲಾ ವಯೋಮಾನದಲೂ, ನೂರು ಸ್ಥಿತ್ಯಂತರದಲೂ ಮಗುವಾಗಬಹುದು ನೋಡು ನಿನ್ನ ನಗೆಯಲ್ಲಿ ಮಿಂದುದಾದರೆ - ಬೆಣ್ಣೆಯಷ್ಟೇ ಮೆದುವಾಗಿ ಕಟು ಮನಸನೂ ಕದಿಯಬಲ್ಲ ನೀನೆಂದರೆ (ಮಗುವೆಂದರೆ) ನವಿಲುಗರಿಯ ನವಿರು ಮೈ ಸೋಕಿದ ಗರಿ ಗರಿ ಕಚಗುಳಿ...
____ ಅದ್ವೈತ...
ನೀನಿಲ್ಲದೆ ಬದುಕಬಲ್ಲೆನೆ ಹೊರತು ಜೀವಿಸಲಾರೆ...
ಉಸಿರಾಡಿದರಾಯಿತೇ - ಜೀವಂತ ಅನ್ನಿಸೋ ನಿನ್ನ ಕನಸಿಲ್ಲದೇ ನಿಟ್ಟುಸಿರ ಭಾರ ನೀಗಲಾರೆ...
ಬಿಂಬ - ಪ್ರತಿಬಿಂಬ, ಬಾನು - ಭೂಮಿ, ಕೊಳಲು - ನಾದ, ರುದಯ - ಬಡಿತ, ಮಂದ್ರ - ತಾರಕ, ತುಡಿತ - ಮಿಡಿತ, ಸೆಳೆತ - ಮಿಳಿತ, ನವಿಲು ಗರಿ - ಮೊಲ್ಲೆ ಮಾಲೆ, ಕಪಿಲೆ ಕೊರಳ ಘಂಟೆಯ ದನಿ - ನೊರೆ ಹಾಲ ಹಸಿ ಘಮ, ನಿನ್ನ ಪಾದಕೆ ಎದೆ ಕೊಟ್ಟ ಧೂಳು - ಊರಾಚೆಯ ಪಾಳು ಭವಂತಿ, ಇಲ್ಲಿಯದೆಲ್ಲದರಲ್ಲೂ - ಮತ್ತಲ್ಲದೇ ಶರತ್ತುಬದ್ಧ ಬದುಕಿಗೆ ಒಪ್ಪಿಸಿಕೊಂಡೂ ಬೇಶರತ್ತಾಗಿ ನಿನ್ನ ಪ್ರೀತಿಸಿಕೊಂಡ ನನ್ನಲ್ಲೂ ನೀನೊಂದು ಆತ್ಮಸ್ತ ನವಿರು ಛಾಯೆ...
ನಿನ್ನ ಬರುವಿಕೆಯ ಬಯಕೆಯಲ್ಲಿರುವವಳ ನೀ ಬರಲಾರೆಯೆಂಬ ವಾಸ್ತವದ ಅರಿವಿನಲ್ಲೂ ನೀನೇ ನೀನು...
ನೀನಿಲ್ಲದ ನಾನೇನು ಎಂಬ ನನ್ನದೇ ಪ್ರಶ್ನೆಯ ಮರುಳುತನದ ನಗುವಲ್ಲೂ ಮತ್ತೆ ನೀನು...
ನೀನಿಲ್ಲದೆ ಬದುಕಬಲ್ಲೆನೆ ಹೊರತು ಜೀವಿಸಲಾರೆ - ನೀನು ನೀನಾಗಿಯೇ ನನ್ನೊಳಿಳಿದು, ನಿನದೆಲ್ಲ ನನದಾಗಿ, ನೀನೇ ನಾನಾಗಿ ಭೋರ್ಗರೆಯುವಾಗ ನನ್ನಿಂದ ನಿನ್ನ ಬೇರ್ಪಡಿಸಲಿ ಹೇಗೆ...!!
ಮುಸ್ಸಂಜೆ ನೆಳಲಲ್ಲಿ ನೆನಪು, ಕನಸುಗಳ ಬೆರಳು ತಲೆ ಸವರುವಾಗ ಮಡಿಯ ಮಡಿಲಲ್ಲಿ ನಿನ್ನ ಶಾಂತ ಮೊಗವರಳುತ್ತದೆ...
ಮತ್ತು
ನಾನು ನನಗೆ ಸಿಗುತ್ತೇನೆ - ನಾನಾಗಿ...
____ಮಾಧವರಾಧಾನುಭಾವ...
*** ಭಾವ ಭಿತ್ತಿ - ವೀಣಾ ಶಂಕರ್...
** ಶಬ್ದ ಪಾತ್ರೆ - ಶ್ರೀವತ್ಸ ಕಂಚೀಮನೆ...
💞💞💞
ಪ್ರೀತಿ ನೆರಳು ಉಸಿರ ನಗೆಯ ಕಾಯುವುದೆಂದರೆ ಇಷ್ಟೇ -
ಕರುಳ ಹೂ ಅರಳಿ ಕೊರಳ ತಬ್ಬುವುದು...
ಆ ಹೊಂಬೆಳಕಲ್ಲಿ ಎದೆಯ ಹೊರೆ ಕಳೆದು ಹಬ್ಬವಾಗುವುದು...
ಮನದಂಗಳದ ಕಂಬ ಕಂಬದ ಸುತ್ತಲೂ 'ಕೃಷ್ಣ' ತುಂಟ ಕೂಸಾಗಿ ಆಡುವುದು...
ಜಗದ ಜಾತ್ರೆಯ ಮರೆತು 'ಆನು/ನೂ' ಮಗುವಾಗುವುದು...
#ಶಿಶುವೊಲವ_ಮುದ್ದೆಂಬ_ದೇವ_ಭಾಷೆ...
#ಅಮೃತ_ಘಳಿಗೆ...
#ಮಮತೆ_ಕೂಸುಮರಿ...
____ಆದ್ಯಾ - ಶಶಾಂಕ್... 😘😘
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
No comments:
Post a Comment