ಎದೆಗೂಡಿನ ಬೆಳಕು.....
ಕೇಳಿಸಿಕೊಳ್ಳೋ ಆಪ್ತ ಕಿವಿಗಳು ಜೊತೆಗಿದ್ರೆ ಒಳಗಿನ ಸತ್ಯಗಳನ್ನು (ನೋವುಗಳನ್ನು) ಹೇಳ್ಬೇಕಾದ ಸಮಯದಲ್ಲೇ ಹೇಳಿಕೊಳ್ಳೋ ಮನಸ್ಥಿತಿ ನಮಗಿರತ್ತಾ ಅಂತ ಮೊದ್ಲು ನೋಡ್ಕೋಬೇಕಲ್ವಾ - ಅಯ್ಯೋ ನನ್ನವರಾರಿಲ್ಲ ಅಂತ ಜಗವ ಆರೋಪಿಸೋ ಮುನ್ನ...
ಸ್ವಾಭಿಮಾನದ ಹೆಸರಿನ ಮುಸುಕಲ್ಲಿ ಮುಚ್ಚಿಟ್ಟುಕೊಂಡ ನಮ್ಮ ಅಹಂ ನಮ್ಮನ್ನು ಅಷ್ಟು ಮುಕ್ತವಾಗಲು ಬಿಡತ್ತಾ...?ಅದೂ ಹೋಗ್ಲಿ ಅಂದ್ರೆ, ಅದೇ ಅಹಂ ಜಗತ್ತಿನ ಕಣ್ಣಲ್ಲಿ ಸಣ್ಣವರಾಗಿಬಿಡ್ತಿವೇನೋ ಅನ್ನೋ ಭ್ರಮೆಯನ್ನ ಹುಟ್ಟಾಕಿ ನಮ್ಮ ನೋವಿಗೆ ನಮ್ಮನ್ನು ಸ್ವಯಂ ವೈದ್ಯ ಆಗೋಕೂ ಅಥವಾ ಮನಸಿನ ಅಸಹಜ ಹೊಯ್ದಾಟಕ್ಕೆ ಸ್ವಯಂ ಆಗಿ ಮನೋವೈದ್ಯರ ಕಾಣೋಕೂ ಬಿಡಲ್ಲವಲ್ಲ - ಇದಕ್ಕೇನುತ್ತರ...??
ಇನ್ನು ಪ್ರೀತಿ ಸಿಕ್ಕಿಲ್ಲ ಅನ್ನೋಕೂ ಮುಂಚೆ ಪ್ರೀತೀನ ಪಡೆಯೋಕೆ, ಬೆಳೆಯೋಕೆ, ಉಳಿಸಿಕೊಳ್ಳೋಕೆ ಎಷ್ಟು 'ಪ್ರಬುದ್ಧ'ವಾಗಿ ಶ್ರಮಿಸಿದ್ದೀವಿ ಅನ್ನೋದನ್ನ ಯೋಚಿಸಬೇಕಲ್ವಾ...
ಹಂಚಿಕೊಳ್ಳೋಕೆ ಪ್ರಾಮಾಣಿಕವಾಗಿ ಶ್ರಮಿಸಿಯೂ ಪ್ರೀತಿ ಸಿಕ್ಕಿಲ್ಲ ಅಂತೀವಾದ್ರೆ, ಆ ದಾರೀಲಿ ಸಾಗ್ತಾ ಸಾಗ್ತಾ ನಮ್ಮನ್ನು ನಾವು ಪ್ರೀತಿಸಿಕೊಳ್ಳೋದನ್ನು ಕಲಿತಿಲ್ಲ ಅಂತಾಯ್ತು...
ಅರ್ರೇ, ನಮ್ಮನ್ನು ನಾವು ಪ್ರೀತಿಸ್ಕೊಳ್ಳೋಕೆ ಕಲಿಸದ ಇತರರೆಡೆಗಿನ ಪ್ರೀತಿ, ಪ್ರೀತಿ ಹೇಗಾದೀತು - ಅದೇ ಪ್ರೀತಿ ಅನ್ನೋದಾದ್ರೆ ನಮ್ಮ ಪ್ರೀತಿ ನಮ್ಮ ಶಕ್ತಿಯಲ್ಲ, ಬದಲಾಗಿ ನಮ್ಮ ದೌರ್ಬಲ್ಯ ಅದು - ಮತ್ತು ಚಟವಾದದ್ದೆಲ್ಲ ಅವಸಾನದ ದಾರಿಯನ್ನೇ ತೋರತ್ತೆ...
ಅಸೀಮ ಆದರಕೆ ಗೋಡೆಯನ್ನೂ, ಆ ಮೂಲಕ ಸುಳ್ಳು ಸ್ವಾಭಿಮಾನದ ಸೌಧವನ್ನು ಕಟ್ಟಿಕೊಂಡು ಒಳಗೆ ಕೂತವರಿಗೆ ಮಾತ್ರ ಪ್ರೀತಿಯ ಕೊರತೆ ಮೂಡೀತು - ಅದೇ ಬಯಲಿಗೆ ಮುಕ್ತ ನಿಂತವನನ್ನ ಖಿನ್ನತೆ ಹೇಗಪ್ಪಾ ಕಾಡೀತು...!!
ನಾಕಾರು ದಾರಿಗಳ ಸೋಲು, ಅವಮಾನ, ಮೋಸ, ವಂಚನೆಗಳ ಹತಾಶೆಯನ್ನು ಸರ್ವತ್ರ ಆರೋಪಿಸಿಕೊಂಡು ಮನಸ್ಸಿನ ಬಾಗಿಲು ಹಾಕ್ಕೊಂಡ್ರೆ ಅದ್ಯಾವುದೂ ಸೋಂಕಿಲ್ಲದ ಅದರಾಚೆಯ ಹಾದಿಗಳ ನಿರುಪದ್ರವಿ ನಗೆಯ ಬೆಳಕೂ ಹೊರಗೇ ನಿಲ್ಲಬೇಕಾಯ್ತಲ್ಲ - ಇಷ್ಟಕ್ಕೂ ರಾಜಕುಮಾರಿ ಸ್ವಂತವಾಗಬೇಕಂದ್ರೆ ಏಳು ಸಾಗರ ದಾಟಿ ಮಾಯಾವಿ ಕೋಟೆಯೊಳಗಣ ಗಿಣಿಯ ಬಿಡಿಸಿ ತರಲೇಬೇಕಲ್ಲ...
ನಡೆದು ಬಂದ ಹಾದಿಯನು ಪೂರಾ ಮರೆತವನ ಗೆಲುವಿಗೆ ಅಹಂಕಾರ ಮೆತ್ತಿಕೊಂಡಂತೆಯೇ, ಗೆದ್ದ ಹಾದಿಯಲ್ಲೂ ಹಿಂದೆ ಸೋತ ಹಾದಿಗಳ ಕಹಿಗಳನೇ ನೆನೆನೆನೆದು ಅಳುತ್ತಾ ಕೂತವನ ನಗುವಿಗೂ ಹತಾಶೆಯ ರಾಡಿ ಅಂಟಿಕೊಳ್ಳತ್ತೆ, ಮತ್ತೀ ಹತಾಶೆ ಪಡೆದ ಎಲ್ಲವನ್ನೂ ನುಂಗಿ ಹಾಕತ್ತೆ; ಕೊನೆಗೆ ವಿಕೋಪಕ್ಕೆ ಒಯ್ದರೆ ಬದುಕನ್ನೂ...
ಯಾರದ್ದೋ ಮೋಸವನ್ನೇನು, ಬದುಕು ಮಾಡಿದ ಮೋಸವನ್ನೂ ಒಂದಮ್ಮೆ ಕ್ಷಮಿಸಬಹುದು; ಆದ್ರೆ ನಂಗೆ ನಾನೇ ಮಾಡಿಕೊಳ್ಳೋ ಮೋಸಕ್ಕೆ ಕ್ಷಮೆ ಹೇಗೆ...
ನನಗೆ ಯಾರೂ ಇಲ್ಲ ಅಂಬುದು ಶುದ್ಧ ಸುಳ್ಳು - ನನ್ನ ಜೊತೆ ನಾನೇ ನಿಂತಿಲ್ಲ ಎಂಬುದು ಮಾತ್ರ ಕೊಟ್ಟಕೊನೆಯ ಅಕ್ಷಮ್ಯ ಸತ್ಯ...
ಹಾಗೆಂದೇ, ಸ್ವಯಂ ಹತ್ಯೆಯ ಸಮರ್ಥಿಸೋ ಎಲ್ಲವೂ ಬರೀ ಸಬೂಬು ಅನ್ಸತ್ತೆ...
ಕಾರಣ, ಪ್ರತಿ ಕ್ಷಣ ಸಾವಿಗಂಜಿ ಬದ್ಕೋ ನಮಗೆ ಸಾಯೋಕೆ ಬೇಕಾದಷ್ಟು ಧೈರ್ಯ ತಣ್ಣಗೆ ಬದ್ಕೋಕೆ ಖಂಡಿತಾ ಬೇಕಿರಲ್ಲ - ಬದುಕು ಮೊದಲ ಹಾಗೂ ಕೊನೆಯ ಆದ್ಯತೆ ಆಗಿರಬೇಕಷ್ಟೇ...
ಎಷ್ಟು ಸರಳ ನಿಯತಿಯ ನೀತಿ:
"ಬದುಕು ಸಾವಿರ ಸಲ ಸೋತ್ರೂ ಗೆಲ್ಲೋಕೆ ಸಾವಿರದೊಂದನೇ ಅವಕಾಶವನ್ನು ಮುದ್ದಾಂಮಾಗಿ ಕೊಡತ್ತೆ - ಆದ್ರೆ, ಸಾವು ಒಮ್ಮೆ ಗೆದ್ದರೆ ಅಲ್ಲಿಗೆಲ್ಲಾ ಮುಗೀತು ನಮ್ಮ ಪಾಲಿಗೆ..."
#ಖಿನ್ನತೆ_ಎಂಬ_ಹಳಹಳಿಕೆ...
↜↯↯↝
ಸುಸ್ತಾಗ್ತಿದೆ ಕಣೋ, ಯಾವ ದಾರಿನೂ ಕಾಣಿಸ್ತಿಲ್ಲ, ಬದುಕೇ ಸಾಕೂ ಅನ್ಸೋ ಹಂಗೆ, ನಂದೇ ನಗೆಯೂ ನಂಗೆ ಮುಖವಾಡ ಅನ್ಸೋಕೆ ಶುರುವಾಗಿದೆ...
ಏನೋ ಮಾಡ್ಲಿ...?
ಏನೂ ಮಾಡ್ಬೇಡ - ಸುಮ್ನೇ ಇದ್ಬಿಡು ಚೂರು ಕಾಲ - ಓಡುವುದರಷ್ಟೇ ಕೂತು ಸಾವರಿಸಿಕೊಳ್ಳೋದೂ ಅಗತ್ಯ ದೂರ ತೀರ ನಡಿಗೆಗೆ...
ಬದುಕು ನಮ್ಮನ್ನು ಒಪ್ಕೋಬೇಕು ಅಂದ್ರೆ ಮೊದ್ಲು 'ನಮ್ಮನ್ನು ನಾವು' ಒಪ್ಕೋಬೇಕಲ್ವಾ - ನೋವಿರುವಾಗಲೂ ನಗೋದು ಮುಖವಾಡ ಅನ್ನೋದಾದ್ರೆ ಅದರ ಧನಾತ್ಮಕತೆ ಒಡೆಯದಷ್ಟು ಆ ಮುಖವಾಡ ಗಟ್ಟಿ ಇರ್ಲಿ...
ಯಾಕೇಂದ್ರೆ -
"ಯಾರದೇ ಆತ್ಮದ ಗರಡಿಮನೆಯಲ್ಲಿ ನಗೆಯ ಸಾಮು ನಿಲ್ಲಬಾರದು" ಆಯ್ತಾ...
ಕಣ್ಣೆದುರು ಕತ್ಲೆ ಕವದ್ರೂ ಕಣ್ಣೊಳಗಿನ ಬೆಳಕು ಆರಲ್ಲ - ಸವೆದ ದಾರಿ ಯಾವ್ದೂ ಎದುರಿಲ್ಲದಾಗಲೂ ನಡಿಗೆ ನಿಂತಿಲ್ಲವಾದರೆ ನನ್ನ ಹಾದಿಯ ನಾನೇ ಸವೆದ ಗರ್ವದ ಖುಷಿ ನಂದು ಅಲ್ವಾ...
ನಂಗೇ ಯಾಕೆ ಎಲ್ಲಾ ಸುತ್ಕೋಳತ್ತೆ ಅಂತ ನೋಯೋ ಬದ್ಲು ಸುತ್ಕೊಳ್ಳೋ ನೋವಿಗೆಲ್ಲ ನಗೆಯ ಕಷಾಯ ಕುಡಸ್ತೀನಿ ಅನ್ಕೊಂಡು ಹೊರಟ್ರೆ ಅರ್ಧ ಯುದ್ಧ ಗೆದ್ದಂತೆಯೇ ಲೆಕ್ಕ...
ನಿನ್ನ ಮುಗುಳ್ನಗು ನನ್ನೆದೆ ನೆಲದಲ್ಲಿ ಬಿತ್ತಿ ಬೆಳೆದ ಹಗಲಿರುಳ ಕನಸ ಪೈರಿನ ತಲೆ ಸವರಿ ಹೋಗು ಬಾ...
ತುಂಬಾ ನೋವಾಗ್ತಿತ್ತು, ನೀನು ನೆನಪಾದೆ, ಹಗುರಾಯ್ತು ಉಸಿರು - ನಿಂಗೂ ನೋವಾದಾಗ ಸ್ನೇಹಗಳೇ ನೆನಪಾಗ್ತಾವಾ...?
ನಾನೇನು ಮೇಲಿಂದ ಉದುರಿದವನಾ!!
ಇಲ್ಲೇ ನಿನ್ನಂಥದ್ದೇ ತೊಳಲಾಟಗಳಲಿ ಮಿಂದು, ನಿನ್ನಂಥವರ ನೇಹದ ಸವಿ ಉಂಡೇ ಬೆಳೆದದ್ದು...
ಒಂದೊಮ್ಮೆ ಕಿವಿಯಾಗುವುದು, ಸಣ್ಣ ಸಾಂತ್ವನದ ನುಡಿಯಾಗುವುದು ಕೂಡಾ ಹೆಗಲಿಗೆ ಹೆಗಲಾದಂತೆಯೇ ಲೆಕ್ಕ - ಹಾಗೆಂದೇ, ಚೂರು ಸಂವೇದನೆಯುಳ್ಳ ಸಹಯಾತ್ರಿಗಳೆಲ್ಲ ನೇಹಿಗಳೇ ಇಲ್ಲಿ...
ಹೀಗಿರುವಾಗ -
ತೀರ ಸೋತಾಗಲೂ ನೆನಪಾಗಬೇಕು - ಕಾಲವೂ ನೆನಪುಳಿಯಬೇಕು - ಬದುಕು ಬಿಡಿಸಿದ ನೋವು ನಗುವಿನ ಬೆರಗನೆಲ್ಲ ಮಾತಲ್ಲೇ ಬಗೆಯುತ್ತ ಕಾಲವ ಹಂಚಿ ತಿಂದ ನೇಹಗಳು...
ಎಲ್ಲರೂ ಆಯ್ದು, ಕಾಯ್ದುಕೊಳ್ಳಬೇಕು - ತಮ್ಮ ಎದೆಯ ಹಾಡನು ಆಲಿಸಬಲ್ಲ ಒಂದಾದರೂ ಅನ್ಯ ಆಪ್ತ ಎದೆ ಗೂಡನು...
ಒಂದು ಸಮಾಧಾನದ ನಿಟ್ಟುಸಿರ ಉಳಿಸುವ ಹೀಗೇ ಹೀಗೊಂದಿಷ್ಟು ಮಾತಾಗುತ್ತದೆ ಆಗೀಗ ಒಡನಾಡಿಗಳ ಒಳಗುದಿಗಳ ಜೊತೆಗೆ...
ಉತ್ತರ ನನ್ನದಾ, ಇಲ್ಲಾ ಪ್ರಶ್ನೆಯೇ ನಂದಾ ಎಂಬುದು ಗೊತ್ತಾಗದ ರೀತಿಯಲ್ಲಿ...
ಕೊನೆಗೆ -
ಅಟ್ಟ ಸೇರಿ ಲಡ್ಡಾದ ನೆನಪುಗಳ ಮಾಯಾ ಪೆಟ್ಟಿಗೆಯಲಿ ಕೈಯ್ಯಾಡಿಸಿ ಒಂದಿಷ್ಟು ಸವಿ ನೆನಪುಗಳ ಕೆದಕಿ, ಅನಾದಿಯ ಕನಸೊಂದನು ಹೆಕ್ಕಿ ಆಡಿಕೊಂಡು ನಕ್ಕು, ಹಳೆಯ ಜಗಳವೊಂದಕೆ ಹೊಸ ಆಜ್ಯ ಸುರಿದು ಜೀವ ತುಂಬಿ, ಬುಡ ಅಲ್ಲಾಡುತಿರುವ ನಾಳೆಗಳ ಭರವಸೆಯ ದೀಪಗಂಬವ ಪಾಳಿಸಿ ಚೂರು ಗಟ್ಟಿ ಮಾಡಿ "ಕಣ್ಣ ಆಯಾಸ ಕಳೆಯಲು ಚೂರು ಕತ್ತಲೂ ಜೊತೆಗಿರಲಿ - ಕತ್ತಲ ಪತ್ತಲದ ಜೋಲಿಯಲಿ ಎದೆಗುಡಿಯ ಬೆಳಕು ತೂಗಲಿ ಲಾಲಿ" ಎನ್ನುವಲ್ಲಿ ಮಾತು ಮುಗಿಯುತ್ತದೆ ಅಂದಿಗೆ...
ಏನ್ಗೊತ್ತಾ -
ಹಿಂಗೆ ನನ್ನೊಳಿಲ್ಲದ ನಿಜ ಧೈರ್ಯವನು ಭಂಡತನದಂಗೆ ನನ್ನವರಿಗೆ ಉಣಿಸಲು ನಿಂತಾಗ, ಇಲ್ಲವೇ ನನ್ನ ಕಿರು ನೋವ ಮುಳ್ಳನು ತೋರಿ ಅವರ ಎದೆಗೇ ನಾಟಿದ ವಿಷದ ಅಂಬಿನ ಮೊನೆಯ ಕೀಳುವ ಹುಚ್ಚು ಸಾಹಸಕೆಳಸುವಾಗ ಒಳಗಿನ ಸತ್ಯ ಕಣ್ಣಲ್ಲಿಳಿಯುವ ಭಾರಕ್ಕೆ ಜೀವ ಹಿಡಿಯಾಗುತ್ತದೆ...
ನಿನ್ನೆದುರಲೂ ಅಳಬಾರದಾ ಎಂಬ ಅವರ ಆರ್ತ ಪ್ರಶ್ನೆಗೆ ಅಸಹಾಯಕತೆಯ ಹಿಮ ಕರುಳ ಕೊರೆಯುತ್ತದೆ...
ಆದರೂ ಜೀವಕೆ ಕೆಚ್ಚು ತುಂಬೋ ಮಾತು ನಿಲ್ಲಿಸಲಾರೆ - ಅಜ್ಜಿಯ ಕಥೆಯ ರಾಜಕುಮಾರಿ/ರ ಇದ್ದಿದ್ದೇ ಸುಳ್ಳಾದರೂನೂ, ಏಳು ಸಾಗರ ದಾಟಿ ರಕ್ಕಸನ ಸಂಹರಿಸಿದ ಭಾವ ಬೆಳೆದುಕೊಟ್ಟ ಹಿತದ ಕನಸೊಂದು ನಡೆಯಬೇಕಾದ ಒಂಟಿ ಹಾದಿಯ ಸುಸ್ತನು ಕಳೆದು ನಗೆಯ ಬುತ್ತಿಯಾದದ್ದು ಸುಳ್ಳಲ್ಲವಲ್ಲ...
ಉಹೂಂ...
ಸುತಾರಾಂ ಬಿಟ್ಟು ಕೊಡೋ ಮನಸಿಲ್ಲ, ಕಾರಣ ಯಾರೂ ಘನತೆಯ ಬಡಿದಾಟವೂ ಇಲ್ಲದೇ ಜವನೆದುರು ಸೋಲಬಾರದು - ನನ್ನ ಹಡಾಹುಡಿ ಸುಳ್ಳಾಗಬಾರದು...
#ಪ್ರೀತಿಯು_ಬಿತ್ತುವ_ಅರೆಬರೆ_ಭರವಸೆಯೂ_ನೋವನು_ಗೆಲ್ಲಲೆಂಬಾಶಯದ_ಘನ_ಪ್ರಾರ್ಥನೆಯೇ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
ಸರಳ ಸುಂದರ ನೇರ ಸ್ಪಷ್ಟ..����
ReplyDelete