Saturday, December 9, 2017

ಗೊಂಚಲು - ಎರಡ್ನೂರಾ ನಲ್ವತ್ತೊಂದು.....

___ವಿವರ ಗೊತ್ತಿಲ್ಲದ ಸಾಲುಗಳು.....

ಶ್ರೀ,
ಕಾಡುವ ಎಲ್ಲಾ ಗೊಂದಲಗಳಿಗೂ ಸಾವೊಂದೇ ಉತ್ತರವಾಗಬಾರದಾದರೆ ಬದುಕಿನ ಪ್ರತಿ ಹೆಜ್ಜೆಯನ್ನೂ ಪ್ರಶ್ನಿಸಿಕೋ - ಪ್ರತಿ ಪ್ರಶ್ನೋತ್ತರಗಳೊಡನೆ ಆಪ್ತವಾಗಿ ಸಂವಾಧಿಸು - ಹಾದಿಯ ಕೊಟ್ಟ ಕೊನೆಯಲ್ಲಿ ಜೋಳಿಗೆಯಲ್ಲಿಷ್ಟು ಕುಶಲ ಸತ್ಯಗಳು ಜೊತೆಗುಳಿದಾವು...
ಬದುಕಿಗೆ ಅನುಭವಗಳೇ ಪ್ರಮಾಣವಾದರೆ; ಪ್ರಶ್ನೆ ಮತ್ತು ಸೃಜನಶೀಲ ಒಳ ಹೊರ ಸಂವಾದ ಆ ಅನುಭವ, ಅನುಭಾವಗಳ ವಿಸ್ತಾರದ ಸ್ಪಷ್ಟ ವಾಹಕಗಳು...
ಯಾವ ಪ್ರಶ್ನೆಗಳಿಗೂ ನಿಲುಕದ, ಪ್ರಶ್ನಿಸಲಾಗದೆ ಒಪ್ಪಲೇಬೇಕಾದ ಸತ್ಯ ಇದ್ದರೆ ಅದು ಸಾವು ಮಾತ್ರ...
#ನನ್ನ_ಆಧ್ಯಾತ್ಮ...
⇍↰⇎↱⇏

ಕವಳಕ್ಕೆ ಬೇಕಾದ ಹಾಗೆ ಕಳೆ ಕಳೆಯ ಮುಖವಾಡಗಳ ಚಿತ್ರ ವಿಚಿತ್ರ ಅಲಂಕಾರದಲಿ ಸಲೀಸು ಬದುಕುವ ಕಲೆಯ ಹೃದಯಸ್ತ ಮಾಡಿಕೊಳ್ಳಲಾಗದೆ ಸೋತದ್ದೂ ಇರಬೇಕು ಸೃಷ್ಟಿಯ ಬೇರಾವ ಪ್ರಾಣಿವರ್ಗವೂ ಮನುಷ್ಯನಷ್ಟು ವೇಗವಾಗಿ, ವಿಶಾಲವಾಗಿ ಮತ್ತು ವಿಕಾರವಾಗಿ ವಿಕಾಸ ಹೊಂದದೇ ಇರಲು ಒಂದು ಘನ ಕಾರಣ...
#ನಾನೆಂಬೋ_ತುರಂಗಬಲ_ಛದ್ಮವೇಷಿ...
⇍↰⇎↱⇏

ಇರುವಿಕೆ ಒಂದು ನಂಬಿಕೆ - ಅಂತೆಯೇ ಇಲ್ಲದಿರುವಿಕೆಯೂ ಒಂದು ನಂಬಿಕೆಯೇ...
ಬರುವಾಗ ತಂದದ್ದಷ್ಟನ್ನು ಕೂಡ ಹೋಗುವಾಗ ಒಯ್ಯಲಾಗುವುದು ಕಷ್ಟ; ಆದರೂ ಇರುವಾಗ ಉಂಡದ್ದೂ ಸುಳ್ಳಲ್ಲವಲ್ಲ...
ನಶ್ವರತೆಯ ಬೆನ್ನು ಬಿದ್ದರೆ ಈಶ್ವರನೂ ನಶ್ವರನೇ...
ಹೆಜ್ಜೆಗೊಬ್ಬ ಗುರು - ಕರೆದು ನಿಲ್ಲಿಸಿ ಎಲ್ಲರೂ ಒಂದೇ ದಾರಿ ಹೇಳಿದರೆ ಭಯವಾಗುತ್ತೆ; ಕಣ್ಣಿಗೆ ಬಣ್ಣಗುರುಡು ಅಂಟಿಕೊಂಡು ನನ್ನೊಳಗಣ ಹಾದಿ ಕಾಣದೇ ಹೊದೀತಲ್ಲ...
ಚಿತ್ರ ಬರೆದ ಬೆರಳು:
ಗೆಳತಿ ‘ಸುಮತಿ ದೀಪಾ ಹೆಗಡೆ’
ಅಪರಿಚಿತ ಕಾಡಿನಲ್ಲಿ ಜಾಡು ತಪ್ಪಬೇಕು - ಗುರಿಯೂ, ದಾರಿಯೂ ನಂದ್‌ನಂದೇ ಆದ ಸೊಕ್ಕು ನನಗಿರಲಿ - ನೀರು, ನಿಡಿ ಸಿಗದ ಬಯಲಲ್ಲಿ ಘಟ ಬಿದ್ದರೂ ಮೋಸವಿಲ್ಲ; ಹುಳದ ಹಸಿವಿಗಾದೀತು...
ನನ್ನ ಬದುಕ ನೊಗ ನಾನೇ ಹೊತ್ತು ತುಳಿದ ನನ್ನದೇ ಹಾದಿಯಲಿ ಹೆಟ್ಟಿದ ಮುಳ್ಳು, ಮೆತ್ತಿದ ಧೂಳು, ಕಟ್ಟಿದ ತೋರಣ, ಉಂಡೆದ್ದ ಹೂರಣ - ಓಹ್, ಹೇಳದೇ ಉಳಿದ ಎಷ್ಟೆಲ್ಲ ಹಿತ್ತಲ ಕಥೆಗಳೋ ನೆತ್ತರು ಬತ್ತಿದ ಅನುಭಾವಿ ಪಾದಗಳಡಿಯಲಿ...
ನನ್ನ ದೇವರು ನನ್ನ ಕಣ್ಣಲ್ಲೇ ಕಾಣಲಿ ಬಿಡಿ...
#ನಾನು...
             ______ವಿವರ ಗೊತ್ತಿಲ್ಲದ ಸಾಲುಗಳು...
⇍↰⇎↱⇏

ಅಲೆ ತೊಳೆದು ಹೋದ ದಂಡೆಯ ಎದೆ ಮೇಲೆ ಉಳಿದ ಮೌನದ ಅಸ್ಪಷ್ಟ ಹೆಜ್ಜೆ ಗುರುತು...
ದಂಡೆ ಸೆರಗಿನಂಚಲ್ಲಿ ಅಲೆ ಎಸೆದು ಹೋದ ಶಂಖದೊಡಲಲಿ ಕಡಲೊಡಲ ಮರ್ಮರ...
ನೆಂಚಿಕೊಳ್ಳಲು, ಹಂಚಿಕೊಳ್ಳಲು ನೋವೊಂದೇ ಇರುವಲ್ಲಿ ಕಣ್ಣಂಚು ಮೀಯುವಾಗ ಎದೆಯ ಆರ್ದ್ರತೆಗೆ ಪದಗಳ ಪಾದ ತೋಯುತ್ತದೆ...
ಪೂಜೆಯಿಲ್ಲದ ಪಾಳು ಗುಡಿಯ ಒಂಟಿ ಕೈಯ ದೇವರೆದುರಿನ ಘಂಟೆಯ ಅಸ್ತಿತ್ವದಂತೆ - ಕನಸು...
ಅಮ್ಮನ ಕೈ ಹಿಡಿದು ಮಗು ತನ್ನ ತಾ ಸಾಂತ್ವನಿಸಿಕೊಂಡಂತೆ - ನೇಹದಪ್ಪುಗೆ...
ಮಾತು ಮೌನಗಳ ಆತು ಕೂತಿರುವ ಪ್ರೀತಿಗೆ ಪ್ರೀತಿ ಸೋತು ಪ್ರೀತಿಯೊಂದೇ ಬದುಕ ಭಾಷ್ಯವಾಗಲಿ...
#ಭಾವ_ಬಿಡಿಚಿತ್ರ_ಬದುಕ_ಚೌಕಟ್ಟು...
⇍↰⇎↱⇏

ಅಲ್ಲಿ -
ಹೂ ಅರಳದೇ ದುಂಬಿ ಕೂರುವುದಿಲ್ಲ - ಕೂತರೂ ರಸವಿಲ್ಲ, ಫಲವಿಲ್ಲ...
ಊರೆಲ್ಲ ಅಲೆದ ಚಿಟ್ಟೆ ಕೂತಲ್ಲೆಲ್ಲ ಕಾಲು ಕೊಡವಿತು - ಚಿಟ್ಟೆ ಪಾದದ ಧೂಳಿಗೆ ಹೂಬನದಲೀಗ ಗರ್ಭೋತ್ಸವ...
ದುಂಬಿಯ ಹಾಡು ಹೂವು ಕಲಿತಿಲ್ಲ - ಹೂವಿನ ಗಂಧ ಚಿಟ್ಟೆ ಮೈಗಿಲ್ಲ - ಭಲೇ! ತಮ್ಮ ತಮ್ಮಂತೆ ತಾವಿದ್ದೇ ಬೆರೆತು ಬಾಳುವ ಸೊಗವ ಕಲಿಸಿದ್ಯಾರು ಅವರಿಗೆ...
ಇಲ್ಲೋ -
ಅವನ - ಅವಳ ನೇಹದ ಸವಿ ಸಾಂಗತ್ಯ ಸಂಗಾತಿ ಪಟ್ಟದಲಿ ಕೂತು ಸಂಸಾರವಾಗಿ ಗುಣಿಸ ಹೋಗಿ ಕೂಡಿದ್ದು ಕೂಡ ಭಾಗವಾಗಿ ಶೇಷಾವಶೇಷಗಳಲ್ಲಿ ಕೊರಗಿ ಸೋತದ್ದೇ ಹೆಚ್ಚು...
ಆದರೆ ಅದೇ ಸಂಗಾತಿಗಳ ಸಾಂಗತ್ಯ ನೇಹ ಭಾವದ ಬಂಡಿಯನೇರಿ ಸಾಗುವೊಲು ಬದುಕ ಹಾದಿ ತುಂಬ ನಲಿವಿನುತ್ಸವದ ಬೆಳಕಿನ ಸರ ಬೆಳಗಿದ್ದೂ ಸುಳ್ಳಲ್ಲ..
#ನಾನು...
                   ______ವಿವರ ಗೊತ್ತಿಲ್ಲದ ಸಾಲುಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment