Sunday, November 5, 2017

ಗೊಂಚಲು - ಎರಡ್ನೂರಾ ಮೂವತ್ತೈದು.....

ಭಾವ ಗುಡುಗುಡಿ.....

ಕರಿ ಕಾನು ಮೌನ - ಕೆಂಬೂತದ ಕೂಗು - ಅಚ್ಚೆ ಮನೆ, ಇಚ್ಚೆ ಮನೆ ಪುಟ್ಟ ಪುಟ್ಟಿಯರ ಕಣ್ಣಲ್ಲಿನ ವಿಚಿತ್ರ ಬೆರಗು - ಪಿಟಿಕೋಟಿಗೆ ಮೆತ್ತಿದ ಅಂಗಳದ ಕಟ್ಟೆಯ ಕೆಮ್ಮಣ್ಣು - ಬೆನ್ನು ಸವರೋ ಪರಿಚಿತ ಕಳ್ಳ ಕಣ್ಣ ಹೆಜ್ಜೆ - ದಾಹಕ್ಕೆ ಕೈಗಿಟ್ಟ ಬೆಲ್ಲ ನೀರಿನ ರುಚಿ - ಹಕ್ಕಿ ನರಸಣ್ಣನ ಶುಭನುಡಿ - ಕಾಗೆ ಸ್ನಾನ - ಜಗುಲಿಯಲಿ ಸಿಡಿದ ಅಪ್ಪನ ರಸಿಕ ಮಾತಿಗೆ ಒಲೆಯೆದುರು ಅರಳಿದ ಆಯಿಯ ಕೆನ್ನೆಯ ಕೆಂಪು - ತುಳಸೀ ಕಟ್ಟೆಯ ಎದುರಿನ ಹಸೆಯ ಅಂಚಲ್ಲಿ ಗುಟ್ಟಾಗಿ ಗೀಚಿದ ಗೊಲ್ಲನ ಹೆಸರು - ಕರುಳ ಹಕ್ಕಿನ ಆಸ್ತಿಯಾದ ಬಣ್ಣ ಬಸಿದೋದ ಅಪ್ಪನ ಉದ್ದ ಕೈಯಿನ ಅಂಗಿ, ಜಡ್ಡು ಎಣ್ಣೆಯ ಘಮಲಿನ ಅಜ್ಜನ ಸ್ವೆಟರ್ರು, ಅಜ್ಜಿಯ ಸೆರಗೆಂಬ ಬಿಕ್ಕಿನ ಕರವಸ್ತ್ರ, ಹಾಸಿಗೆಯ ಮೇಲ್ಹಾಸಿನಲಿ ಅಸೀಮ ಬೆಚ್ಚನೆಯ ಆಯಿಯ ಹರಿದ ಸೀರೆ - ಬಂಡಿ ಚಂದಿರನ ಮೊಗದ ಚೌತಿಯ ಶಾಪದ ಕಲೆ - ಲಂಗದ ಮಡಿಲಲಿ ಉಳಿದ ಬಕುಲದ ಹೂಗಳ ಗಂಧ - ಕಲ್ಯಾಣಿ ಮೆಟ್ಟಿಲ ಏಕಾಂತಕೂ ನೀರ ಕನ್ನಡಿಯ ನಂಟು - ಎಂಜಲ ಗುಬ್ಬಿ ಮಾಡಿ ಹಂಚಿ ತಿಂದ ಪೇರಳೆ ಹಣ್ಣು - ಅಟ್ಟದ ಕತ್ತಲ ಕಳೆಯುವ ನಕ್ಷತ್ರ ಮಂಡಲ - ಮಂದಾರ ಗಿಡದ ಗೆಲ್ಲಲ್ಲಿ ಇಬ್ಬನಿಯ ಕುಡಿಯುತ್ತ ಕೂತ ಹಳದಿ ಹಬ್ಬಲಿಗೆ ದಂಡೆ - ಮೋಟು ಬೀಡಿ ಸೇದಿ ಸಿಕ್ಕಿ ಬಿದ್ದ ಅಣ್ಣ ಹಾಗೂ ಬಾವನ ಕಾಪಾಡಿದ ಸಿಹಿಯಲ್ಲಿನ ದೊಡ್ಡ ಪಾಲಿನ ಆಸೆ ಮತ್ತು ಅಕ್ಕರೆ - ಛಳಿ ಬೆಳಗಿನ ನಿದ್ದೆಯ ಎದೆಗೊದೆಯುವ ಉಸಿರ ಬೆವರಿನ ಕುಪ್ಪಸದ ಭಾರ - ಮಳೆ ಕಳೆದು ಸುರಿವ ಕಾರ್ತೀಕ ಹುಣ್ಣಿಮೆಗೆ ಸೋಬಾನೆಯ ಗಂಟು, ಘಾಟು - ಒಲವ ಸೆರಗಿನ ಅಂಚ ಹಿಡಿದು, ಮಂದಹಾಸದ ಮಿಂಚ ಮಿಡಿದು, ಎದೆಯ ಕನಸಿಗೆ ಜೋಗುಳ, ಬರೆವ ಜೋಗಿಯ ಹಂಬಲ - ಇನ್ನೂ ಇನ್ನೂ ಇನ್ನೂ ಏನೇನೋ ನೆನಪು, ಕನಸುಗಳ ಕಂಬಳ...
#ಹೊಸ_ನೀರ_ಮಿಂದು_ಹೆಣ್ಣೆದೆ_ನದಿಯಾಗುವ_ಕಾಲಕ್ಕೆ...
⥢⥮⥤ ⥢⥮⥤

ಮೇಲೆ ಕೋಟಿ ನಕ್ಷತ್ರ - ಕಣ್ಣ ತುಂಬಾ ಅವುಗಳದೇ ಬೆಳಕು ಗಾಢ ಕತ್ತಲ ತೋಟದ ಹಾದಿಗೆ - ತೆಳುವಾದ ಕಾಫಿ ಹೂಗಳ ಘಮ - ಹೆಜ್ಜೆಗೊಮ್ಮೆ ಕಾಲ ತಾಕುವ ಯಾರದೋ ಮನೆಯ ದಾಸು ಕುನ್ನಿಯ ಬಾಲ - ಬೆನ್ನ ಹಿಂದೆ ನೂರು ಗಜ ದೂರ ಮನೆ ಒಳಗೆ ಅಮ್ಮಾ ಅಂದ ಮಗು ಕುಕಿಲು - ಚಳಿಗೆ ಮುದುಡಿಕೊಂಡಂತಿರೋ ಆ ಅಂಗಳದ ದೀಪ - ಕೈಯ ಮೊಬೈಲ್ ಪರದೆ ಮೇಲೆ ಅಮ್ಮನ ನಗು ಮುಖದ ಚಿತ್ರ - ಕಾಫಿ ಹೆಸರಿನೊಂದಿಗೇ ನೆಪ್ಪಾಗೋ ಪುಟಾಣಿ ಗೆಳತಿಯ ಕಾಫಿ ನಾಡಿನ ಮಿಡಿತಗಳ ವರ್ಣನೆ - ಜಗದ ಯಾವ ಮೂಲೆಗೆ ಹೋದರೂ ಘಂಟೆಗೊಮ್ಮೆ ಮಾತಾಡಿಸ್ತಾನೇ ಇರೋ ಸಾಕ್ಷಿಪ್ರಜ್ಞೆಯಂಥ ನೇಹ - ಸುಮ್ನೆ ಅದೇನು ಕತ್ತಲಲ್ಲಿ ಅಲೀತೀಯಾ ಬಂದು ಮಲ್ಕೊ ಅನ್ನೋ ಬೆಳಗಿನಿಂದ ಜೊತೆ ಅಲೆದು ದಣಿದು ಹಾಸಿಗೆಗೆ ಬೆನ್ನು ತಾಕಿಸಿದ ಜೀವಗಳು... 
ಇನ್ನೇನು ಬೇಕು ಅಪರಿಚಿತ ಊರಿನ ಇರುಳೊಂದು ಸಾವಿನಷ್ಟೇ ಪರಿಚಿತ ಘಮ ಬೀರಲು...
#ಉಸಿರು_ಹೆಪ್ಪಾಗಿ_ಕನಸು_ಕರಗುವಲ್ಲೂ_ಮಿಣಿ_ಮಿಣಿ_ಮೀನುಗೋ_ಕರುಳ_ದೀಪಕ್ಕೆ_ಇಂಥದೊಂದಷ್ಟು_ರಾತ್ರಿಗಳು_ಬೇಕು_ಎಣ್ಣೆಯಾಗಿ...
⥢⥮⥤ ⥢⥮⥤

ಪಪ್ಪಾ ನನ್ನನ್ನ ಕಪ್ಪು ಎಂದವರೂ ನನ್ನ ಮೆಚ್ಚುವಂತ ಜಾದೂ ಕಲಿಸು...
ಹಾಗಂದ ಅಳುಮೋರೆ ಮಗಳ ಎಳೆಯ ನೊಸಲ ಮೇಲೊಂದು ನಗೆಯ ಕಿಡಿಯನಿಟ್ಟು ಆ ಹಾದಿಯಲಿ ಸುತ್ತಿ ಬಂದೆ...
ಅಗೋ ಈ ಸಂಜೆಗೆ ಬೀದಿಯ ಬಾಯ್ತುಂಬ ಇವಳ ಮಿನುಗು ಕಂಗಳದೇ ಮಾತು...
ಊರ ಕಣ್ಣು, ಮಾರಿ ಕಣ್ಣು, ನಾಯಿ ಕಣ್ಣು, ನರಿ ಕಣ್ಣು, ಯಾರ ಕಣ್ಣೂ ತಾಕದಿರಲಿ - ದೃಷ್ಟಿ ಸುಳಿಯಬೇಕೀಗ ಎದೆಯಮೇಲೊರಗಿದ ನಗೆಯ ನವಿಲು ಗರಿಗೆ...
#ಇವಳು_ಅವಳೆನಗಿತ್ತ_ನಗೆಯ_ಕವಳ...
⥢⥮⥤ ⥢⥮⥤

ಯಾವ ಹಾದಿಯೋ - ಯಾವ ತೀರಕೋ - ಕನಸೋ ಕಂಗಳ ರೆಪ್ಪೆಯಾಳದಿ ಹೊಳೆವ ಬೆಳಕಿಗದ್ಯಾವ ಬಣ್ಣವೋ - ಯಾವ ಮುರ್ಕಿಯಲಿ ಯಾವ ಹಾಡಿಯೋ - ಅದೆಷ್ಟು ಬೊಗಸೆ ಬೆವರಿಗೆ ಅದೆಷ್ಟು ಮೈಲಿಕಂಭವೋ - ಯಾವ ಕಲ್ಲೆಡವಿ ಯಾವ ನೆಪಕೋ ನಿಂತೇ ಹೋಗುವ ಪದ ಪಾದವೋ - ಅರಿವಿಲ್ಲದೀ ಪರಿಪರಿಯ ನಡಿಗೆ - ತೀರದ ನಗೆಹೊನಲ ಹಂಬಲದ ಸಾವಿರ ಬಣ್ಣದ ಹಸಿವಿನ ಎದೆಯ ಹುಚ್ಚಿಗೆ ನವ ನವಜಾತ ಕಾಣ್ಕೆಯ ಅಭಿಲಾಷೆಯೇ ದೀವಿಗೆ - ಗೂಢ ನಿಗೂಢ ಬದುಕ ಜಾಡಿಗೆ...
ಉನ್ಮತ್ತ ಉದ್ರಿಕ್ತ ಜಾತಕದ ಕೇಕೆಗೆ ಸಾವ ನೆರಳೇ ಹಾಸಿಗೆ...
ಅಲ್ಲಿಯೂ,
ಎನ್ನ ಎದೆ ಸಂಚಿಯ ತೂತಿಂದ ಜಾರಿ ಬಿದ್ದ ನಗೆಯ ಬೀಜ ಮರವಾಗಿ ಹಿಂದೆ ಬರುವವಂಗೆ ದಾರಿ ನೆರಳಾಗಲಿ... 
#ಪುಟ್ಟ_ಬುಟ್ಟಿಯಲಿ_ಬೆಟ್ಟ_ತುಂಬಿದ_ಭಾವ...
⥢⥮⥤ ⥢⥮⥤


ಹಂಗೇ ಖುಷಿಯಾದಾಗ - ನಗೆ ಗಂಗೆ ನಿನ್ನ ನೆನಪಾದಾಗ - ಎದೆಯಲೇನೋ ಸುಳಿದಿರುಗುತೈತೆ - ಬೊಂಬೆಯೂ ಮಾತಾಡತೈತೆ...😍😚




*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment