Saturday, October 5, 2019

ಗೊಂಚಲು - ಮೂರು ನೂರಾ ಹತ್ತು.....

ಅಳಿದುಳಿದ ನಾನು..... 

ಇಳೆ, ಬೆಳಗು ಜೋಡಿ ಜಳಕ ಮಳೆಯ ಮಾಯಕದಲ್ಲಿ...
ಇಲ್ಲಿ ಮಳೆ...
ಬೆಳ್ಳಾನ ಬೆಳಗ್ಗೆ ಚೂರು ನೆಂದು ಬಂದೆ - ನೆತ್ತಿಯಿಂದ ಜಾರುತಿವೆ ತಂಪು ತಂಪು ಹನಿ ಬಳಗ...
ಎದ್ದೇಳೋ ಬೆಳಗಾಯ್ತೂ ಅಂತಂದು ನೀನೆನ್ನ ಮುಂದಲೆಯ ತೀಡಿ ಹಣೆಯ ಮುದ್ದಿಸಿದಂತೆ ಸವಿಭಾಸ...
ಕರಗೋ ಮೋಡದ ಸೆರಗ ಮರೆಯಲಿ ಸೂರ್ಯ ಕಣ್ಮುಚ್ಚಿ ಕೂತಿರುವಂತಿದೆ ಬೆಳಗು - ಥೇಟು ನಿನ್ನ ತುಂಬೆದೆಯ ನೆರಳಲ್ಲಿ ನಾ ಹಗಲ ಕಳ್ಳ ನಿದ್ದೆಯ ಸವಿವಂತೆ..‌.
#ತುಂತುರು_ಬೆಳಗು..‌.🌦
⇛⇖↢↣⇗⇚

ಹುರಿಗಟ್ಟಿಯೂ ಸುರಿಯಲೊಲ್ಲದೇ ಗಾಳಿಯ ರೆಕ್ಕೆ ಕಟ್ಟಿಕೊಂಡು ಎಲ್ಲಿಂದೆಲ್ಲಿಗೋ ಹಾರುವ ಒಂದಿಷ್ಟು ಮತ್ತು ಹಳೆಯ ಹುಸಿ ಮುನಿಸೊಂದು ಮತ್ತೆ ನೆನಪಾಗಿ ಸುಳ್ಳೇ ಸೆಟೆದು ನಿಂತಂತೆ ನಿಂತ ಮತ್ತಿಷ್ಟು ಕರಿ ಕರಿ ಮೋಡದ ಹಕ್ಕಿಗಳು...
ನಾವ್ಯಾರೂ ಈ ಲೋಕಕ್ಕೆ ಸಂಬಂಧಿಸಿದವರೇ ಅಲ್ಲ ಅನ್ನೋ ಭ್ರಮೆಯಲ್ಲಿ ಹುಳ್ಳಹುಳ್ಳಗೆ ಮುಖ ಮಾಡಿಕೊಂಡು ಶಾಪಗ್ರಸ್ಥ ಗಂಧರ್ವರಂತೆ ಗಡಿಬಿಡಿಯಲ್ಲಿ ಓಡಾಡೋ ನಗರ ಜೀವಿಗಳು ಮತ್ತು ಮುಖ ಮುಖಗಳ ಮಿಕಮಿಕ ನೋಡುತ್ತಾ ಗುಂಪಿನ ಮೂಲೇಲಿ ಬೆರ್ಚಪ್ಪನಂತೆ ನಿಲ್ಲೋ ಅವರೊಲ್ಲೊಬ್ಬ ನಾನು...
ಎಲ್ಲಿಗೂ ತಲುಪದ, ಗಾಳಿಗೆಗರಿ ಬಿದ್ದ ಹರಿದ ಉತ್ತರೀಯದಂತ ತುಂಡು ತುಂಡು ಹಾದಿಗಳು - ಅವುಗಳೆಡೆಯಲ್ಲೇ ಅಲ್ಲಲ್ಲಿ ಬಣ್ಣ ಬಳಕೊಂಡ ಕಾಂಕ್ರೀಟಿನ ಅಟಾಟೋಪಕ್ಕೆ ಹೆದರುತ್ತಲೇ ತನ್ನ ಅಸ್ತಿತ್ವಕ್ಕೆ ಹೆಣಗಾಡಿ ಹುಯ್ದಾಡೋ ಹೊಗೆ ಮೆತ್ತಿದ ಹಸಿರು - ಎಲ್ಲಿಗೋ ತಲುಪುವ ವಿಚಿತ್ರ ಹುಕಿಯಲ್ಲಿ ಬುರ್ರಬುರ್ರನೆ ಎಗರೆಗರಿ ಓಡೋ ತರಹೇವಾರಿ ಗಾಡಿಗಳು...
ಹುಸಿ ಮಳೆಯ ಮುಂಜಾವೊಂದು ಹಿಂಗೆ ಬಿಚ್ಚಿಕೊಳ್ಳುತ್ತೆ...
ಬೆದರು ಬೊಂಬೆ ಬೆಚ್ಚುವಾಗ ಕಾಗೆಯೊಂದು ಅದರ ಭುಜದ ಮೇಲೆ ಹಿಕ್ಕೆ ಹಾಕಿ ಸಮಾಧಾನಿಸಿತು...
#ಮಾಯಾಬಜಾರಿನ_ಬೆಳಗು...
⇛⇖↢↣⇗⇚

ನಿನ್ನೊಡಲ ಹಿಡಿ ಮೌನವ ಭಿಕ್ಷೆಯನಿಕ್ಕು ಮಳೆಯ ಮಿಂದ ಇಳೆಯೇ - ಈ ಬಡಕಲು ಬದುಕಿಂಗೆ ಚಿಟಿಕೆ ಪ್ರೀತಿ ನಗೆಯ ಮಾತನೂಡಬೇಕಿದೆ...
#ಪ್ರಾರ್ಥನೆ...
⇛⇖↢↣⇗⇚

"ಎತ್ತರ ಭಯ, ಎತ್ತರ ಬಲ ಮತ್ತು ಎತ್ತರ ನನ್ನೊಳಗಿಂದ ನಾ ಕೂಗಿ ಕೂಗಿ ಕರೆವ ನಿನ್ನ ಹೆಸರು..."
ಗಾಳಿ ಕಾಲಿಗೆ ಗೆಜ್ಜೆ ಕಟ್ಟಿ ಬಿಟ್ಟದ್ದು ನೀನೇ ಇರಬೇಕು - ಕಿವಿಯ ಶಂಖದ ತುಂಬಾ ನಿನ್ನದೇ ಗುನುಗು ದನಿಯ ಇಂಪು...
ಇಲ್ಲೆಲ್ಲೋ ಕಳೆದೋದವನು ಅಲ್ಲೆಲ್ಲೋ ಸಿಗಬಹುದಾ - ಆ ಅಂಚಲಿ - ಗಾಳಿಯಲ್ಲಿ ನೀ ತುಂಬಿಕೊಟ್ಟ ಉಸಿರು ನನ್ನೆದೆಯಲ್ಲಿ ಭಾವೋತ್ಸವ ರಾಗವ ತಾರಕದಿ ಮಿಡಿವಾಗ...
ಹೆಗಲು ಹರಿದರೂ ಕಣ್ಣು ತುಳುಕಿಸದೆ ಎಳೆದೇ ಎಳೆವ ಹುಚ್ಚು ಹಸಿವಿನ ತೇರು - ಕತ್ತಲನು ಸಿಂಗರಿಸಿ ಬೆಳಕನ್ನು ಎದುರ್ಗೊಂಬುವ ಬಿಚ್ಚುಗೈಯ್ಯ ಪಯಣ...
ಇಷ್ಟೆಲ್ಲಾ ಆಗುವಾಗಲೂ "ನಿನ್ನ ಅರಸುತ್ತಿಲ್ಲ ನಾನು - ನನ್ನ ಉಳಿಸಿಕೊಳ್ಳುತ್ತಿದ್ದೇನಷ್ಟೇ..."
#ಪ್ರತೀಕ್ಷೆ...
⇛⇖↢↣⇗⇚

ನನ್ನ ಸಾವಿರ ಮಾತು ಕೊಲ್ಲಲಾಗದ್ದನ್ನು ನಿನ್ನದೊಂದೇ ಒಂದು ಜಾಣ ಮೌನ ಸೀಳಿಹಾಕಿತು...
ನಾಕು ದಿನ ಗಟ್ಟಿಯಾಗಿ ಬಾಯಿ ಹೊದ್ಕೊಂಬಿಟ್ರೆ ಜಗಳವೂ ಉಳಿಯುವುದಿಲ್ಲ - ಸಂವಹನ ಸತ್ತರೆ ಪ್ರೀತಿಯ ಸ್ವಚ್ಛಂದ ಹರಿವಿಗೆ ಕಡ್ಡಾಯ ಸೂತಕ...
"ಮುಚ್ಚಿದ ಬಾಗಿಲು ಯುದ್ಧವ ತಡೆಯುತ್ತೋ ಇಲ್ಲವೋ ಗೊತ್ತಿಲ್ಲವಾಗಲೀ, ಒಳಬರುವ ಪ್ರೀತಿ ಬೆಳಕನ್ನಂತೂ ಸಮರ್ಥವಾಗಿ ತಡೆಯುತ್ತೆ..."
#ಮೌನ...
#ಮೃತ್ಯುಗಂಧ...
⇛⇖↢↣⇗⇚

ನೀ ತೇಲಿ ಬಿಟ್ಟ ಕಾಗದದ ನಾವೆಯ ಒಳಪದರದ ಚಿತ್ತುಕಾಟಿನಲಿ ಸಣ್ಣ ಕನವರಿಕೆಯಂತೆ ನನ್ನ ಹೆಸರಿದ್ದಿತ್ತಾ...?!
ದಾರಿ ಕವಲಿನಲಿ ನಿನ್ನ ಕಣ್ಣು ಉದುರಿಸಿ ಹೋದ ಹನಿಯೊಂದು ಜಟಾಯುವಿನ ಮುರಿದ ರೆಕ್ಕೆಯಂತೆ ಕಾಡುತ್ತಿದೆ...
ಬಯಲಲ್ಲಿ ತೇಲುವಂಥ ಖುಷಿಯಲ್ಲಿರುವಾಗ ಛಕ್ಕನೆ ನಿನ್ನ ನೆನಪಾಗಿಬಿಡುತ್ತೆ ಮತ್ತು ನಗುವಿನೊಡನೆ ಬಿಕ್ಕಳಿಕೆ ಜೊತೆಯಾಗುತ್ತೆ...
ನನ್ನ ನಾ ಹುಡುಕುತ್ತಿದ್ದೇನೆ ಈಗ - ಹನಿ ಮಳೆಯಲ್ಲಿ, ಹರಿವ ಹೊಳೆಯಲ್ಲಿ, ಧಿಮಿಗುಡುವ ಜಲಪಾತದಡಿಯಲ್ಲಿ, ನಾವೆ ತೇಲಬಹುದಾದ, ಉರುಳಬಹುದಾದ ಎಲ್ಲೆಂದರಲ್ಲಿ, ಮುರಿದು ಬಿದ್ದಿರಬಹುದಾದ ದಡಗಳಲ್ಲಿ...
#ನಾನಿಲ್ಲಿ_ಬರೀ_ಸುಳ್ಳು_ನಗೆಯು...
⇛⇖↢↣⇗⇚

ಮೂಲೇಲಿ ಕಾದಿಟ್ಟ ಅದೇ ತುಂಡು ಗಂಧದ ಕೊರಡನು ತೇಯ್ದು ತೇಯ್ದು ಹೊಸತು ಹೊಸತೇ ಘಮವೆಂದು ಮೂಗರಳಿಸಿ ನಿನ್ನೆಯ ಮುಕ್ತಗೊಳಿಸುವ ಈ ಇಂದು...
ನನ್ನೊಡನೆ ನನ್ನ ಅದದೇ ಹಳೆಯ ಯುದ್ಧಕೆ ಹೊಸದಾಗಿ ಕತ್ತಿಯ ಮಸೆಯುವ ಬಿಕರಿಯಾಗದ ಸರಕಿನಂತ ಸುಳ್ಳು ಕನಸು...
ಇರುಳ ಕಣ್ಣಿನ ತೇವ - ಹಗಲ ಕೊರಳಿನ ಹಾಡು...
#ಅಳಿದುಳಿದ_ನಾನು...
⇛⇖↢↣⇗⇚

ಒತ್ತಾಯದಿಂದ ತುಂಬಿದ್ದೆಲ್ಲ ವಾಂತಿಯಾಗೋದೇ ಹೆಚ್ಚು - ಪ್ರೀತಿಯಾದರೂ ಅಷ್ಟೇ...
#ಗೆರೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment