Tuesday, September 26, 2023

ಗೊಂಚಲು - ನಾಕ್ನೂರಿಪ್ಪತ್ತು.....

ಬದುಕೇ ನಾನು ನದಿಯಂಥವನು.....


ಅವಳ ನುಡಿಯಲ್ಲಿ ಗುಮ್ಮನೂ ಅವಳ ಆಜ್ಞಾವರ್ತಿ ಸೇವಕ...

ಹುಡುಗೀ - ಈಡೇರದೇ ಉಳಿದ ನಿನ್ನ ಆಸೆಗಳು ನನ್ನ ಸೋಲಿನಂತೆ ಕಾಡುತ್ತವೆ... ಶಪಿಸಿಬಿಡು - ನನ್ನಲ್ಲೇ ಹಾಗೇ ಉಳಿದು ಹೋಗುವ ನನ್ನ ಕನಸುಗಳು ನನ್ನ ಚಿತೆಯಲ್ಲೇ ಬೆಂದು ಹೋಗಲಿ... .........ಸಾವಿಗೆ ನಿದ್ದೆ ಸಾಕ್ಷಿಯಾದರೆಷ್ಟು ಚೆನ್ನ... ಬರಗೆಟ್ಟ ಬದುಕಿಗೆ ನಿದ್ದೆಗೂ ಬರವೇ... ಉಫ್.... ಇನ್ನೂ ಎಷ್ಟು ದೂರವೋ.... ಅದೆಷ್ಟು ನಾಳೆಗಳೋ.... ___ ಮೌನ ಸದ್ಗತಿ... &&&

ಸತ್ರೆ - ನಮ್ದೇ ಬೊಜ್ಜಕ್ಕೂ ನಮ್ಗೆ ಊಟ ಅಂದ್ರೆ ಕಾಕೆ ಪಿಂಡ ಅಷ್ಟೇಯಾ... ಬದ್ಕು ದುಡಸ್ಕ್ಯಂಡಂಗೆ ನೆಮ್ದಿಂದ ದುಡ್ದು ಸಾಯವು - ಸುಖ ಅಂದ್ರೆ ಅದಷ್ಟೇಯಾ ವತ್ಸಾ... &&&

ಬದುಕೇ - ಕ್ಷಣ ಕ್ಷಣಗಳ ಕಣ ಕಣವನೂ ಒಡಗೂಡಿ ಒಡನಾಡಿ ಬಾಚಿ ಬಾಚಿ ತುಂಬಿಕೊಂಡ ಮಧುರ ನೆನಪುಗಳೇ ವಿದಾಯದ/ವಿಯೋಗದ ಹಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಕಾರೆಯ ಮುಳ್ಳಂತೆ ಚುಚ್ಚುತ್ತವೆ... ಜೀವಿಸಿದ ಅದಮ್ಯ ಖುಷಿಯೂ ನೆನಪಾಗಿ ಪಲ್ಲಟವಾಗುವ ಹೊತ್ತಲ್ಲಿ ದಟ್ಟ ಕಟ್ಟುಸಿರು - ಅಲ್ಲೂ ತುಟಿಯು ನಗಬಹುದು/ನಗುತ್ತದೆ ಎದೆಯ ಗಟ್ಟಿ ಕಟ್ಟಿಹಾಕಿದ್ದರೆ... ____ ನೆನಪುಗಳ ಹಾಜರಿಯ ಒಂದು ಮುಖ.... &&&

ನಗಲು ಇರುವ ನೂರು ಕಾರಣಗಳನೂ ನಿನ್ನ ಒಂದು ನೆನಪಿನ ಬಿಕ್ಕಳಿಕೆ ಅಲ್ಲಲ್ಲಿಯೇ ಅಳಿಸಿ ಉಸಿರನು ತಲ್ಲಣಿಸುತ್ತದಲ್ಲ... ಏನ ಹೆಸರಿಡಲಿ ಆ ಸೋಲಿಗೆ(?)... ___ ಎದೆಯ ಕಾವು...


ಸಾಕಿನ್ನು .......ಈ ನೋವುಗಳೂ ಹಳತಾಗಿ ಹೋದವು... &&&


ಗುರುವಿನ ಋಣ ದೊಡ್ಡದು... ಕರುಳಿಂದ ಈ ಜೀವಾತ್ಮಗೆ ಉಸಿರ ತುಂಬಿ, ಕರುಳ ದಾರದಲೇ ತೊಟ್ಟಿಲ ಕಟ್ಟಿ ಬದುಕ ತೂಗಿದ ಅಮ್ಮ... ಕಾಲನೆಡವಿ ಬೀಳಿಸಿ, ಕೈನೀಡಿ ಮೇಲೆತ್ತಿ, ಚಂಚಲತೆಯಲಿ ಉಸಿರ ಕಾಡಿ ಕಾಡಿ ಕಡೆದು ರೂಪಿಸಿದ ಬದುಕು... ಅನವರತ ಕಣ್ಣಾಮುಚ್ಚಾಲೆ ಆಡುತ್ತಾ, ಕದ್ದು ಬಳಿ ಬಂದು ಉಸಿರ ಮುಟ್ಟಿ ಬದುಕ ಗೆರೆಯಿಂದ ನಮ್ಮನು ಆಚೆ ಹಾಕುವ ಸಾವು... ಅರಿವೇ ಗುರುವೆಂದರು; ನನ್ನ ಅರಿವೆಂದರೆ - ಅಮ್ಮ, ಬದುಕು ಮತ್ತು ಸಾವು... ____ ಗುರುವೇ ನಮಃ &&&

ಕೇಳಿಲ್ಲಿ - ಅವರಿವರಂತೆ ನಾನು ಸಂಕುಚಿತ ಕುಹಕಗಳ ಕೊಳಕನ್ನು ಯೋಚಿಸಲಾರೆ, ಯೋಜಿಸಲಾರೆ ನಿಜ... ಹಾಗಂತ, ಅಗತ್ಯವಾದಲ್ಲಿ ಅವರ ಮಾತಿಗೆ ಅವರವರ ಯೋಚನೆಯ ಮಟ್ಟದ ಧಾಟಿಯಲ್ಲೇ ಅಲ್ಲಲ್ಲೇ ತಿರುಮಂತ್ರ ಕೊಡಲಾರೆ ಎಂದರ್ಥವಲ್ಲ... ಮಾತಿಗೆ ಮಾತು ಕೊಡಲೇಬೇಕು ಎಂದೇನಲ್ಲ; ಆದರೆ, ನನ್ನ ಮೌನದೊಳಗಣ ಸಾವಧಾನ ಅವರ ಸಣ್ತನದ ಮಾತಿನ ಬುಧ್ಯಾಪೂರ್ವಕ ಇರಿತಕ್ಕೆ 'ನಾನೇ ಸರಿ ಇಲ್ವೇನೋ' ಅನ್ಕೊಂಡು ಕುಗ್ಗಿ ಕದಡಿ ಹೋಗಬಾರದಲ್ಲ... ನನ್ನೊಳಗೇ ನಾ ಇಳಿದು ಹೋಗುವುದಕಿಂತ, ತಿರುಗಿ ಆಡಿ ಸೋಲುವುದಾದರೂ ಸಮಾಧಾನವೇ ನನಗೆ... ____ ಕಚ್ಚುವ ಇರಾದೆಯಿಲ್ಲ; ಹಂಗೇನೇ, ಬುಸುಗುಡದೆಯೂ ಇರುವಷ್ಟು ಒಳ್ಳೆತನವೂ ಇಲ್ಲ... &&&

ನಾ ನಂಬಿದ್ದು ಸತ್ಯವೇ ಇರಬಹುದು, 'ಆದ್ರೆ ನಂಬಿದ ಸತ್ಯದಿಂದ ನಂಗೆ ಸಿಕ್ಕಿದ್ದೇನು, ಸತ್ಯಾನ ನಂಬಿ ಏನು ಸುಖ ಕಂಡೆ' ಎನ್ನುವ ಅಂತರಂಗದ ಆರ್ತನಾದ ಹುಟ್ಟದಂತೆ ಸತ್ಯವನ್ನು ದುಡಿಸಿಕೊಳ್ಳುವುದಿದೆಯಲ್ಲ ಅದು ಮತ್ತು ಸತ್ಯದ ವಾಸ್ತವಿಕ ಕಠೋರತೆಗೆ ಮನಸಿನ ಹಸಿತನವ ಸಾಯಗೊಡದಂತೆ ಕಾಯ್ದುಕೊಳ್ಳುವುದಿದೆಯಲ್ಲ ಅದು ತುಂಬಾನೇ ದಾರ್ಷ್ಟ್ಯವ ಬೇಡುವ ಕೆಲಸ... ____ ಗೆಲುವು ಬೇಡ, ಸೋಲದಂತೆ ನನ್ನ ನಾ ಕಾಯ್ದುಕೊಂಬುವುದು ಎಂದಿನ ಪ್ರಾರ್ಥನೆ... &&&


"ಸಾವು ಕಾಣದೇ ಬದುಕು ಗಟ್ಟಿಯಾಗುವುದೆಂತು..."

"ಸಾವೆಂದರಿಲ್ಲಿ ಬರೀ ದೇಹದ್ದಷ್ಟೇ ಅಲ್ಲವಲ್ಲ..."

___ಉಸಿರು ಬಿಸಿಯಿದೆ - ಬದ್ಕಿದೀನಂತೆ...

&&&


ನಿನ್ನ ಗೆಲ್ಲುವ ಹಠವಿಲ್ಲ... ಹಾಗೇ, ನಿನ್ನ ಒಳಗೊಳ್ಳುವ ಅಸೀಮ ಖುಷಿಯ ತುಡಿತಕ್ಕೇನೂ ಬರವಿಲ್ಲ... ಎದೆಯ ನೋವು ಎಷ್ಟೇ ಎಡಗಣ್ಸಿದ್ರೂ ರಸಿಕ ಕಣ್ಣಿನ ತೇವ ಬತ್ತುವುದಿಲ್ಲ... ___ ಬದುಕೇ ನಾನು ನದಿಯಂಥವನು... &&&

ನಿನ್ನ ನಗೆಯ ನೂಪುರವನೆತ್ತಿ 

ಎದೆಯ ಕಾವ್ಯ ಕರಡಿಗೆಯಲಿಟ್ಟು 

ಕುಣಿ ಕುಣಿಸಿ ನಲಿವ ನನ್ನೀ ಹುಚ್ಚು ನಶೆಗೆ 

ನಿನ್ನ ಅಕಾರಣದ ಅನನ್ಯ ಪ್ರೀತಿಯೇ ಹೊಣೆ...

____ ಭಂಡ ಭರಮನೂಳಿಗದ ಬದುಕೇ...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment