Tuesday, September 26, 2023

ಗೊಂಚಲು - ನಾಕ್ನೂರಾ ಹದ್ನೆಂಟು.....

ಪ್ರೀತಿ ಪರಿಪಾಕ.....

ಹರಿವ ಪ್ರೀತಿಯೇ -

ಬದುಕು ಬೆನ್ನೆಲುಬನ್ನೇ ಮುರಿದು ನಗುವಾಗ, ಮಾತು ಮೌನಗಳೆಲ್ಲ ಸೋತ ಅಸಹಾಯ ಭಾವದಲ್ಲಿ ಬಾಗಿಲು ಹಾಕಿಕೊಂಡು ಕತ್ತಲ ತಬ್ಬಿ ಕೂತು ನಿನಗಾಗಿ ಕಾಯುತ್ತೇನೆ...

ಬೆಳಕೇ -

ಅಂಗಳದ ಕಿಬ್ಳಿಯಲಿ ನಿನಗೆಂದೇ ಒಂದು ಕೀಲಿಕೈ ಇಡುವ ಜಾಗವ ಮರೆಯಬಾರದು ನೀನು ಎಂದು ಒಳಗೇ ಹಂಬಲಿಸುತ್ತೇನೆ...

ಸುರಸಿಂಧುವೇ -

ಎನ್ನೊಡನೆ ಆನೇ ಠೂ ಬಿಟ್ಟು ನಡೆವಾಗಲೆಲ್ಲ ಕರೆದು ಕಣ್ಣ ಹನಿಯ ಕರೆಯ ತೊಳೆದು ಸಂತವಿಸುವ ನಿನ್ನ ಮಡಿಲ ಬಿಸುಪಲ್ಲಿ ಮತ್ತೆ ಗೆಲ್ಲುವ ಬಲವ ತುಂಬಿಕೊಳ್ಳುತ್ತೇನೆ...

___ ಕಪ್ಪು ಹುಡುಗೀ, ನನ್ನ ನೆಮ್ಮದಿಯ ತಂಗುದಾಣ ನಿನ್ನ ಹೆಗಲು...

&&&

ಭವದ ರಗಳೆಗಳ ಸಂತೆಯಲಿ ಕಳೆದು ಹೋದವರನು 

ಮತ್ತೆ ಮರಳಿ ಹುಡುಕಿ ಕರೆದು ಒಳಮನೆಗೆ 

ಇನಿತು ಪ್ರೀತಿಯ ಹಂಚಿಕೊಳ್ಳಬಹುದು...

ಆದರೋ,

ಭಾವದ ಬುರುಡೆಗಳಲಿ ಬಳಗದಿಂದ ಕಳಚಿಕೊಂಡು

ಬುಧ್ಯಾಪೂರ್ವಕ ಹಿತ್ಲಲ್ಲಿ ಅಡಗಿ ಕೂತವರನು 

ತಿರುಗಿ ಒಳ ಕರೆವುದು ಹೇಗೆ...? 

ಕರೆದರೂ ಕೂಡುವರೇ ಹಾಗೇ...?

___ ಕಳೆದೂ ಉಳಿದವರು ಮತ್ತು ಉಳಿದಂತೇ ಅಳಿದವರು...

&&&

.....ನೇಹವೇ -

ನಾನೇ ಅರ್ಥವಾಗದ ನನಗೆ 

ನೀನು ಅರ್ಥವಾಗುವುದಾದರೂ ಹೇಗೆ...?!

ಬದುಕಿದರೆ ಸಾಕಲ್ಲ -

ಸದಾ ಅರ್ಥ, ಅನರ್ಥ, ಅಪಾರಾರ್ಥಗಳ ಆಚೆಯೇ ನಿಂತು ನಗುವ ಪ್ರೀತಿ ಸಾರ್ಥವಾಗುವ ಹಾಗೆ...

ಕೂಡಿಕೊಳಲಿ, ಆಡಿಕೊಂಡಿರಲಿ -

ನಾನು ನೀನೆಂಬ ರಮ್ಯತೆ, 

ನಾನು ನೀನಾಗುವ ರಮ್ಯತೆ, 

ನೀನು ನಾನಾಗುವ ರಮ್ಯತೆ,

ನೀ ನಿನಗೂ ಸಿಗುವ ರಮ್ಯತೆ,

ನಾ ನನ್ನಲ್ಲೂ ಉಳಿವ ರಮ್ಯತೆ...

ಇರಲಿರಲಿ ಬಿಡು,

ಪ್ರೀತಿ ಅಂಬೋ ಮಧುರ ಸ್ವಾರ್ಥದ ಅಮಲು ಕಾಲಕೂ ಇಳಿಯದಂತೆ ಹೀಗೇ...

____ ಕಪ್ಪು ಹುಡುಗೀ...

&&&

ಫೋಟೋದಲ್ಲಿನ ನಗು

ಮತ್ತು

ನಗುವಿನ ಫೋಟೋ

ಎಷ್ಟೊಂದು ಬೇರೆ ಬೇರೆ...

___ ಎದೆಯ ಭಾಷೆಯಲ್ಲಿ ಕಣ್ಣು ಹೇಳುವ ಸತ್ಯ...

&&&

ಹರಿದ ದೋತರ - ಪಟ್ಟೆ ಪೀತಾಂಬರ

ಮುಟಿಗೆ ಅವಲಕ್ಕಿ - ಪ್ರೀತಿ ಫಲಾಹಾರ

ರಾಜ ಬೀದಿಯಲ್ಲಿ ಗೆಳೆತನದ ಮೆರವಣಿಗೆ... 

____ ಸೇವಿಸುವುದಾದರೆ ನೇಹವನೇ ಸೇವಿಸು - ಕರಿಯನ ಜಠರವ ತಂಪಾಗಿಸಿದ ಕುಚೇಲನ ಹೆಗಲ ಚೀಲ ಬರಿದಾಗದಿರಲಿ...

&&&

ನೇಹವೆಂದರೆ, 

ನನ್ನೊಳಗೆ ನನ್ನ ಕಾಯುವ ನಿನ್ನ ಎದೆಯ ಹಾಡು - ಎದೆಯೆದೆಯ ಅಮೂರ್ತ ಭಾವಂಗಳ ಕುಶಲ ಸಂವಾದದ ಜಾಡು...

ಗೆಳೆತನದ ಒಡಲ ಒಸಗೆಯ ನೋಡು - ಅದು, ಆಡಾಡುತ್ತಾ ನಗೆಯು ಬಗೆ ಬಗೆಯಲಿ ಅರಳುವ ಮಳೆಯ ಕಾಡು...

___ ಸ್ನೇಹವದು ಕುಶಾಲಿನ ಕರುಣೆಯಲ್ಲ, ಕಣ್ಣ ಹನಿಯ ಕು(ಕ)ಡಿವ ಗಟ್ಟಿ ಹೆಗಲು...

&&&

ಕೇಳಿಲ್ಲಿ -

ಹೊಸತೇ ಲೋಕಗಳ ಪರಿಚಯಿಸಿದ್ದು ನೀನು ಅಥವಾ ಅದೇ ಲೋಕದೊಳಿದ್ದೂ ನಾ ಅದುವರೆಗೂ ಗಮನಿಸಿಯೇ ಇಲ್ಲದ ಲೋಕ ವ್ಯಾಪಾರಗಳ ಎತ್ತಿ ತೋರಿಸಿದ್ದು ನೀನು...

ಹೌದು, 

ಮನದ ಭೂಮಿಕೆಯಲಿ ಒಂದಷ್ಟು ಭ್ರಮೆಗಳ ಪರದೆ ಹರಿದದ್ದೂ ಹೌದು, ಜೊತೆಗೊಂದಿಷ್ಟು ಹೊಸಾ ಸರ್ಕಸ್ಸಿನ ಅಂಗಡಿ ತೆರೆದದ್ದೂ ಹೌದು...

ನಿನ್ನ ಕೈ ಹಿಡಿದು ನನ್ನ ಕಣ್ತೆರೆದು ಅಷ್ಟು ದೂರ ನಡೆದೆನಲ್ಲ, ಈಗ ಇವೆಲ್ಲ ಅರಿವಿನ ಪರಿಧಿಯೊಳಗೆ ಬಂದೆನಾದ್ದರಿಂದ ನೀನು ಕೂಡಾ ನಂಗೆ ಅದೇ ಲೋಕ ಪಾಕದಲಿ ತೆವಳೋ ಸಾಮಾನ್ಯ ಹುಳದಂಗೇ ಕಂಡರೆ ತಪ್ಪು ಯಾರದ್ದು...!?

ಅಪರಿಚಿತ ಹಾದಿಯಲಿ ಎದುರು ಬದುರು ವಿನಿಮಯಗೊಂಡ ನಗು ಪರಿಚಯದ ಬೀದಿಗೆ ಏಕಮುಖವಾಗಿ ಹೊರಳದೇ, ಅಪರಿಚಿತ ಗಂಧವ ಉಳಿಸಿಕೊಂಡೇ ಹಾಗೇ ದಾಟಿ ಹೋದರೇ ಚಂದವಿತ್ತೇನೋ ಅನ್ಸತ್ತೆ ನೋಡೀಗ ಒಮ್ಮೊಮ್ಮೆ...!!

ಇಷ್ಟೆಲ್ಲಾ ಆಗಿ ಬೆಳೆದೆನಾ ಅಥವಾ ಕಳೆದು ಹೋದೆನಾ ಎಂಬುದೇ ಭಾವಲೋಕದ ಮುಗಿಯದ ಗೊಂದಲ ಆಗಿರುವಾಗ -

"ಈ ಪ್ರೀತಿ ಪರಿಕ್ರಮದ ಧೀಕ್ಷೆಯಲಿ ಮೈಮನದ ವಸನಗಳನೆಲ್ಲ ಒಂದೊಂದಾಗಿ ಕಳಚಿಕೊಳ್ಳುತ್ತಾ, ಕಳಚಿದ್ದು ನಾಚಿಕೆ ಅನ್ನಿಸದಂಗೆ, ಬೆತ್ತಲಾದದ್ದು ಪ್ರೀತಿಯಲ್ಲ ಪ್ರೀತಿಯಿಂದ ಬೆತ್ತಲಾದದ್ದು ಎಂಬ ಎತ್ತರವ ತಾಕಿ, ನಾನೂ ಅಳಿದು ನೀನೂ ಅಳಿದು ಉಳಿದದ್ದು ಪ್ರೇಮ ಎಂಬಂತೆ ಬದುಕ ಆಳುವುದು ಹೇಗೆ ಹೇಳು..."

____ ಬಂಧ ಅನುಬಂಧ ಪ್ರೀತಿ ಪರಿಪಾಕ...

&&&

ಕಸದ ಡಬ್ಬಿಯಲ್ಲಿ ಕಸವನ್ನೇ ಹಾಕಬೇಕಲ್ಲ....

___ ರದ್ದಿಸುದ್ದಿ...

ನೂರು ಕಾಲ ಜೊತೆಗಿದ್ದೂ ಸಲಿಗೆಯೇ ಬೆಳೆಯದಿದ್ದರೂ ನೋವಿಲ್ಲ - ಅಲ್ಪ ಕಾಲದಲ್ಲೇ ಎಲ್ಲೋಗ್ತಾನೆ, ಬಿದ್ದಿರ್ತಾನ್ಬಿಡು ಅನ್ನೋ ಸದರ ಹುಟ್ಟಿಬಿಟ್ಟರೆ ಮಾತ್ರ ಬಲು ಹಿಂಸೆ...

____ಬಂಧ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment