ಮೋಹಿಯ ಕನಸಿನ ಬುಟ್ಟಿ.....
ಅವಳು : ಇರ್ಲಿ ಬಿಡು, ಕೆಲವಾದರೂ ಗಾಯದ ಕಲೆ ಇರ್ಬೇಕು, ಚಂದ್ರನ ಮೈಯ್ಮೇಲಿನ ಮೊಲದ ಚಿತ್ರದ ಹಾಗೆ; ಆಗ್ಲೇ ಬನದ ಹುಣ್ಮೆ ಚಂದ ಅನ್ಸೋದು...
ಅವನು : ಛಿ ಚೀ!!! ನಾನು ಹಂಗೆಲ್ಲಾ ಯಾರ ಮೈಯ್ಮೇಲೂ ಕಲೆಗಳನ್ನ ಉಳಿಸಿ(ಸೊ)ಲ್ಲಪ್ಪಾ - ಬೆತ್ತಲ ಬೆಳಕಿನ ಮೈಗಂಟಿದ ಕತ್ತಲ ಮಚ್ಚೆಗೂ ತುಟಿಯಷ್ಟನೇ ತೀಡುವ ಮೃದು ಜೀವಿ ನಾನು... 🙈
____ ಮಂಗನ ಕೈಲಿನ ಮಾಣಿಕ್ಯದಂತೆ ಪೋಲಿಯ ನಾಲಿಗೆಗೆ ಸಿಕ್ಕ ಘನ ಗಂಭೀರ ಮಾತೂ... 😜
&&&
ನೆಂದು ಬಂದವನ ವದ್ದೆ ಮೈ ವರೆಸುತ್ತಾ ವರೆಸುತ್ತಾ ಒಳಗಿಂದ ವದ್ದೆಯಾಗುವ ಅವಳ ಹರೆಯದ ನಾಚಿಕೆಯ ನೋಡಾ...
___ ರಸಿಕ ಹರೆಯದಲ್ಲಿ ಮನವೂ ತೊಯ್ಯುವ ಮಳೆ ಎಷ್ಟು ಚಂಽಽದ ಚಂಽಽದ...
~~~
ಮಳೆಯ ಸಂಜೆಗಳಲಿ ಬೀದಿಯ ಆ ತುದಿಯಲ್ಲಿ ಮರೆಯಾಗುವ ಮುನ್ನ ಕೊಡೆಯ ಮರೆಯಿಂದಲೇ ತಿರುಗಿ ನೋಡುವ ಅವಳು ಎಂಥಾ ಬೆಚ್ಚನೆಯ ಬೆರಗು...
____ ಬಿಸಿ ಹರೆಯದ ಚಂಚಲ ಚಂದಕ್ಕೆ ಹರೆಯವೇ ಸಾಟಿ...
~~~
ಕೇಳಿಸ್ತಾ -
ಗುಡ್ಗುಮ್ಮ, ಮಿಂಚುಳ್ಳಿ ಹಿಮ್ಮೇಳದ ಜೊತೆ ಸೇರಿ ಮಳೆ ನೆಲವ ತಾಕಿ ಹೊಮ್ಮೋ ಗಾನ ಸುಧೆ - ನಿನ್ನ ಘಮದ ನೆನಪಿನ ಗುಣುಗಿಗೆ ಧೋಽಽಧೋಽ ಹಿನ್ನೆಲೆ ಸಂಗೀತ...
ಜಪ್ಪಿ ಹೊಡೀತಿದೆ ಕಣೇ ಮಳೆ; ಗಾಳಿಯೊಂದಿಗೆ ತಂಪಾದ ಗುದ್ದಾಟ ಬೇರೆ...
ಇಲ್ಲಿರಬೇಕಿತ್ತೀಗ ನೀನು - ನಿನ್ನ ಸುಳ್ಳೇ ಭಯ, ನನ್ನ ಕಳ್ಳ ಆಸೆ ಕೂಡಿಯಾಡಿ ಬೆವರುವ ಒದ್ದೊದ್ದೆ ಇರುಳೊಂದು ಅರಳಬಹುದಿತ್ತು...
____ ಬಿರುಸು ಹರೆಯಕ್ಕೆ ಹಸಿ ಹರೆಯವ ಬೆರೆಯುವ ಕಿರು ಕನಸೂ ಎಷ್ಟು ಚಂಽಽದ ಚಂಽಽದ...
~~~
ಎಲ್ಲೇ ಹೋದರೂ ಅಲ್ಲೇ ಬಂದು ನಿಲ್ಲುವ ನನ್ನ ಕಣ್ಣ ಕಚಗುಳಿಯ ಮಾಟ, ಮಾತಿಗೆ ಮಾತಿನ ಮುತ್ತು ಪೋಣಿಸಿ ಆಸೆ ಕೆಣಕುವ ಆಟ...
ಅವಳು ಗುರಾಯಿಸುವುದು 'ಥೂ, ಪೋಲಿ ಬಸವ' ಅನ್ನುವ ಹಾಗೆ ಮತ್ತು ಅವಳು ಪ್ರೀತಿಸುವುದು ಕೂಡಾ ಅದನೇ ಹಾಗೆ ಹಾಗೇ...
____ ಶ್ರಾವಣದ ಮಳೆಯಂಥ ಮನಸಿನ ಈ ತುಂಟ ಆಸೆ ಹೋರಿನ ಹರೆಯ ಎಷ್ಟು ಚಂಽಽದ ಚಂಽಽದ...
&&&
ತಂಗಾಳಿಯ ತೆರೆಯೊಂದು ನಿನ್ನಂತೇ ತಲೆ ಸವರಿ - ಕಳೆದಿರುಳ ಕಚಗುಳಿಯೆಲ್ಲ ಹಂಗೇನೆ ಹಸಿಯಾಗಿ ಬೆಳಗಾನ ಕಣ್ಣಲ್ಲಿ ಹೊಸ ಕನಸ ಕಾಮನಬಿಲ್ಲು...🌱
&&&
ಕಪ್ಪು ಕಮಲಾಕ್ಷೀ,
ಕಣ್ತಣಿಸಿ ಕತ್ತಲ ಮೆರೆಸುವ ಆ ನೂರು ಅಲಂಕಾರಗಳ 'ಸೌಂದರ್ಯ'ದ್ದೊಂದು ದಡೆಯಾದರೆ, ಕಣ್ಣರಳಿಸಿ ಬೆಳಕ ಮೈಮರೆಸುವ ಉದ್ದಾಮ ನಗ್ನತೆಯೇ ಅಲಂಕಾರವಾದ ಹೆಣ್ತನದ 'ಚಂದ'ದ ತೂಕವೇ ಬೇರೆ...
ನೀನೋ ಚಂದ ಚಂದ...
ನಾ ಸೋತಲ್ಲೇ ಮತ್ತೆ ಮತ್ತೆ ಬಯಸೀ ಬಯಸಿ ಸೋಲುತ್ತೇನೆ, ಕಾರಣ - ನಿನ್ನ ನಾಚಿಕೆಯ ವಜನು ಮತ್ತು ಹೆಣ್ತನದ ಗಂಧ...
ನಿನ್ನ ಮುದ್ದು ನನ್ನ ಕಾಯ್ದಿರಿಸಿದ ಹಕ್ಕು ಕಣೋಲೇ ಎಂದು ಹಠ ಹೂಡುವ ಹುಡುಗೀ -
ನಿನ್ನ ಬೆತ್ತಲೆ ಬೆನ್ನ ಎನ್ನೆದೆ ರೋಮಕಂಟಿಸಿ, ಹಕ್ಕಿಗೊರಳಾಗಿ ಉಸಿರಿಗೆ ಉಸಿರ ಬೆಂಕಿ ಸೋಕಿಸಿ, ಕತ್ತಿನ ಇಳಿವಿನಾಳದ ಕತ್ತಲಲಿ ನೆರಳು ಕರಡಿ ಹೋಗಲನುವಾಗುವಂತೆ ಬಳಸಿ ಬೆಳೆಯುವ ನನ್ನ ಬಯಕೆ ಬೆರಳ ಆಟಕೆ ಅರಳಿ, ಕೆರಳಿ, ಹೊರಳಿ ಇರುಳ ಬಾಗಿಲಿಗೆ ತುಸು ಬಿಸಿಯನೂಡಬಾರದೇ...
___ ಹಣತೆ ಉರಿವ ಯಾಮಿನಿ ಮತ್ತು ಸವಿ ಸುಖ ಗೋಷ್ಠಿ...
&&&
ಭಯವಾಗುತ್ತೆ -
ನೀನೇ ಈ ಬದುಕಿನ ಕೊನೇಯ ಮೋಹವಾಗಿಹೋದರೆ...!!!
___ ಹೆಸರಿಲ್ಲದ ಛಾಯೆ...
ಮೋಹಿ ಎದೆಯ ನೂರು ನೂರು ನುರಿ ನುರಿ ದಾಹದ ಕಥೆಯ ಕೇಳಬಲ್ಲೆಯಾ, ಕೇಳಿಯೂ ಕೂಡಬಲ್ಲೆಯಾ...!!
___ ಬೇಲಿ ಅಸಹನೆ - ಬಯಲು ಭಯ...
ಪದ ಪಾದಗಳಲಿ ಮೋಹವ ಗೀಚಿ ಗೀಚಿ
ಹರಿದೆಸೆದ ಹಾಳೆಗಳ ಮೈಯ್ಯ ಗೀರುಗಳಲಿ
ಕಳೆದೋಯಿತೇ ನಿನ್ನೆದೆಯ ತಲುಪೋ ನನ್ನ ಕನಸಿನ ಕಾಲು ಹಾದಿ...
___ ನಿಶಾಚರೀ ಒಲುಮೆ...
ಕೊಲ್ಲುವಂತೆ ಕಾಡುವ ನಿನ್ನೆದೆಯ ಮೋಹದ ಬಿಸಿಗೆ ಷರತ್ತುಬದ್ಧ ಬಂಧಿ ನಾನು...
___ ಮಳೆಯ ಸಂಜೆಯಲಿ ಬೆವರ ಗಂಧ(ಮಿಂದ) ಕಾವ್ಯ...
ತಂಪಾಗಿ ನಿನ್ನ ತಬ್ಬಿ
ತಾಳ ತಪ್ಪಲಿ ಮನಸು
ಅರಳಿ ಬೆರಳಲಿ ಕನಸು...
___ ಅಖಂಡವಾಗಿ ನಿನ್ನ ಮೋಹಿಪ ಮಹಾ ಮಧುರ ಚಟಕ್ಕೆ ಬಿದ್ದವನು...
ನಾರಾದರೂ ಆಗಬೇಕು ನಾನು
ಹೂಗಳ ಗಂಧವಿಷ್ಟು ಅಂಟೀತು ಎದೆಯ ಗೋಡೆಗೆ...
___ ಮೋಹಿಯ ಕನಸಿನ ಬುಟ್ಟಿ...
ಕ್ರುದ್ಧ ನೋವು
ಸ್ಥಬ್ದ ಕಾಲ...
ಮತ್ತೆ ಹರಿವ ನೀಲಿ
ನಿನ್ನ ಮೋಹ ಜಾಲ...
____ ನೀನೆಂಬೋ ನಗೆಯ ಕೀಲಿಕೈ...
"ನೀನೆಂದರೆ ಎದೆಯಾಳದ ಉರಿ ಮೌನವೂ..."
___ ಆತ್ಮಸ್ಥ ಸನ್ನಿಧಿ...
&&&
ಮೈಮುರಿವ ತುಂಬು ಹೆಣ್ಹರೆಯದ ನೂರು ಬಣ್ಣ ಕಲೆಸಿದ ಸ್ವಪ್ನ ಸರಸಿಯಲಿ ಬಿಡುಬೀಸು ಈಸು ಬಿದ್ದು ಬಿಡದೆ ಕಾಡುವ ಜೋಗೀ...
ಒಪ್ಪಿಸಿಕೋ - ನಿನಗಿದೋ ಆಸೆಗಣ್ಣಲಿ ಕರೆವ ಈ ಹೆಣ್ತನದ ನಗೆ ಹೂವ ಮೊಗ್ಗಿನ ಬಾಗಿನ...
ನಿಜದಲೊಮ್ಮೆ ಹೆಣ್ಣೆದೆಯ ಬಿಗಿ ಉಸಿರಲ್ಲಿ ಹಣ್ಣಾಗು ಬಾರೋ...
____ ಹಾದಿ ಮರೆಯದಿರೋ ಮನಸಿಜನೇ...
ನಿನ್ನ ಉಸಿರ ಘಮದ ಎಳೆಯೊಂದನು ಹೆಗಲೇರಿಸಿಕೊಂಡು ಕೆಂಡ ಸಂಪಿಗೆ ಅರಳೋ ಬೀದಿಯಲಿ ಜಂಭದಿಂಧ ಅಲೆಯುವ ಅಮಲಿನೆದೆಯ ಫಕೀರ ನಾನು...
ನಿನ್ನ ಮೈಗಂ(ಅಂ)ಧದ ಜೀವಂತಿಕೆಯಲಿ ಈ ಜೀವ ಹೋಗಲಿ...
____ ಜೇನೆದೆಯ ಸುಖ ಮರಣ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Tuesday, September 26, 2023
ಗೊಂಚಲು - ನಾಕ್ನೂರಾ ಹದ್ನೇಳು.....
Subscribe to:
Post Comments (Atom)
No comments:
Post a Comment