ತುಂಬಿ ಹರಿದಷ್ಟೂ ಶುದ್ಧ..... ಹಬ್ಬ ಅಂದ್ರೆ ಅಷ್ಟೇ - ಇರುವಿಷ್ಟು ಪ್ರೀತಿಯನು ಅಷ್ಟಷ್ಟು ಕೊಟ್ಟು ಕೊಂಡುಂಬುವುದು... ___ ನಾನು, ನೀನು, ಅವರಿವರು... &&& ಹೆಸರಿಲ್ಲದ ಬೇಲಿ ಹೂವು, ಬೇಲಿಯಿಲ್ಲದ ಬಯಲ ಚಿಟ್ಟೆ, ಹಂಚಿಕೊಂಡು ನೆಂಚಿಕೊಂಡು ಎದೆಯ ಪಾಕವಾ; ಬನವೆಲ್ಲ ಹೂ ಬಳ್ಳಿ - ಒಲವ ಪರಿಕ್ರಮ... 💞 ಎದೆಯಿಂದ ಎದೆಗೆ ನಗೆಯ ಬೆಳಕು... ☺️ ಬೆಳಕಿಗೆ ಎಣ್ಣೆ ಸವರಿ ಹಬ್ಬವಾಗಿಸುವುದು... 🪔 ಅನುದಿನವೂ ಅನುಭಾವದ ಮಮತೆ ದೀಪಾವಳಿ... 🎇 ಪ್ರೀತಿ ಶುಭಾಶಯ... 🤝 &&& ನಗೆ ಮಂಗಳವೇ - ಹಳೇ ಹಪ್ಪು ಭಾವಗಳೂ ಹೊಸದಾಗಿ ಒಪ್ಪಗೊಂಡು ಕುಪ್ಪಳಿಸುತ್ತವೆ ನಿನ್ನ ರುದಯದ ಹಾಡು ಎನ್ನ ಎದೆ ಗೋಡೆಯ ಮುತ್ತುವಾಗ... ಸುಖಾಸುಮ್ಮನೆ ತಬ್ಬು ಬಾ ಒಮ್ಮೆ - ಹೆಸರಾಗಲಿ ಬೆಳಕು ತಬ್ಬಲಿಯ ತಬ್ಬುವ ಹೆಮ್ಮೆ... ___ 'ದೊ(ದ)ಡ್ಡ' ಹೃದಯದವನ ಪುಟಾಣಿ ಪ್ರಾರ್ಥನೆ... &&&
ಕಲ್ಲು ಕಣಿವೆಯ ನೀರೂ - ನೀರ ಒಡಲಿನ ಕೆಸರೂ - ಕೆಸರನುಂಡು ಅರಳುವಾ ಹೂವೂ - ನಂಟು, ಗಂಟುಗಳನೆಲ್ಲ ಬಿಡಿಸಿ ತೋರುವ ಬೆಳಕೂ - ಅರಿವಿನೆಳೆ ಎಳೆ ಪ್ರೀತಿ... 💞 ~~ ಪ್ರೀತಿಸುವುದನಿನಿತು ಕಲಿಸು ಪ್ರೀತಿಯನಿನಿತು ಗುಣಿಸು ಗುಣಿಸಿ ಗುಣಿಸಿ ಇನಿತಿನಿತು ಪ್ರೀತಿಯನೇ ಉಣಿಸು "ಪ್ರೀತಿಯೇ ಯೆಲ್ಲವೂ ಅಲ್ಲ ಆದರೆ, ಪ್ರೀತಿಯಿರದೇ ಯಾವುದಕೂ ರುಚಿ ಇಲ್ಲ;" ಯೆಂಬ ಭಾವದಿ ಮನವ ಭಾ/ಬಾಗಿಸು ನೆನಪು, ಕನಸೆಲ್ಲ ಪ್ರೀತಿ ಪ್ರೀತಿ ಪ್ರೀತಿಯೇ ಆಗಿಸು... 💞 ____ ಪ್ರಾರ್ಥನೆ... ~~ ನೂರು ಕಥೆಗಳ ಒಂದೇ ಉಸಿರು; ಪ್ರೀತಿ ಅದರ ಹೆಸರು... 💞🕊️ &&& ಕಾಲಿಗೆಡವಿದ ಕಲ್ಲ ಮೇಲಿನ ಕೋಪ ಕರಗಿ ಹೋಗತ್ತೆ - ಬೀಳದಂಗೆ ಹಿಡಿದ ಕೈಯ್ಯ ಭರವಸೆಯ ತಂಪು ಪಸೆಯಲ್ಲಿ... ಕಲ್ಲನ್ನು ಅಲ್ಲೇ ಬಿಟ್ಟು ಮುಂದೆ ಸಾಗ್ತೇವೆ ಹಿಡಿದ ಕೈಯ್ಯ ನಗೆಯ ಜೊತೆಯಲ್ಲಿ.... ಯಾವ ತಿರುವಲ್ಲಿ, ಹೇಗೆಯೂ ಸಿಗಲಿ - ಬದುಕು ಬಂಧ ಬೆಸೆದು ಕರುಣಿಸಿದ ಪ್ರೀತಿ, ಖುಷಿಗಳೆಲ್ಲ ಚಂದ ಚಂದವೇ... ಅಂಥದೊಂದೊಂದು ಹೆಗಲೂ ಹಾದಿ ಬೆಳಗೋ ಬೆಳಕು... ____ ನಿಮಗೆಲ್ಲ ಪ್ರೀತಿ ಪ್ರೀತಿ ನಮನ... 💞 &&& ಬಹುಶಃ, ಹೆಚ್ಚಿನ ಸಲ ಮಿಲನ ಅನ್ನೋದು ಗಂಡಸಿಗೆ ಅವನ ಅಹಂಕಾರವನ್ನು ತಣಿಸೋ ಸುಖದ ಕ್ರಿಯೆ - ಅದಕೆಂದೇ ಪ್ರತೀ ಸಲ ಗೆಲ್ತೇನೆ ಅನ್ನೋ ವೀರಾವೇಶದಲ್ಲೇ ತೊಡಗಿಕೊಳ್ತಾನೆ... ಆದ್ರೆ, ಹೆಚ್ಚಾಗಿ ಹೆಣ್ಣಿಗೆ ಮಿಲನ ತನು ಮನ ಸಮತೂಕದಲ್ಲಿ ಅರಳಿಕೊಂಡು ಹಗುರಾಗೋ ಪ್ರೀತಿ - ಹಾಗೆಂದೇ ಗೆದ್ದೇ ಅಂದು ಗೆಲ್ಲಿಸ್ತಾಳೆ, ಇಲ್ಲಾ ಸೋಲಿಸಿದ್ದನ್ನ ತೋರಗೊಡದೇ ಗೆಲ್ತಾಳೆ... ಇಲ್ಕೇಳು, ಆಟ ಮುಗಿದ್ಮೇಲೆ, ಬಿಗಿದ ತೋಳ್ಗಳು ಬೆವರಿಗೆ ಜಾರುವಾಗ, ಮತ್ತೆ ಮತ್ತೆ ಎಳೆದು ಸೆಳೆದು ಉಕ್ಕುಕ್ಕಿ ಮುದ್ದಿಸೋ ಹೆಣ್ಣ ಕಣ್ಣಲ್ಲೊಮ್ಮೆ ಮುಳುಗು; ಗೆಲುವೆಂದರೇನೆಂದು ಅರಿವಾಗತ್ತೆ ಅಥವಾ ಸೋಲುವ ಸುಖದ ಆಪ್ತ ಪರಿಚಯ ಮೈದುಂಬುತ್ತೆ... ಕಾಮ ಅಂದ್ರೆ ಪ್ರಕೃತಿ ಕಣೋ - ಪ್ರಕೃತಿಯ ಪ್ರೀತಿ ಮತ್ತು ಅಹಂಕಾರ ಎರಡೂ ಪ್ರೀತಿಯಿಂದಲೇ ತಣೀಬೇಕು... ಪ್ರೀತಿಯ ಸಮಪಾಕದಲ್ಲಿ ಅವ್ಳು ಒಡಲು, ಅವ್ನು ಹೆಗ್ಲು... ___ ಕೇಳಸ್ಕೊ ವತ್ಸಾ, ಕಥೆಯಾಗದ ಪಾತ್ರಗಳ ಎದೆಯಲ್ಲಿ ಸುಮಾರು ಸತ್ಯಗಳು ಎಚ್ರ ತಪ್ಪಿ ಮಲ್ಗಿರ್ತಾವೆ... &&& ಗಾಳಿ ಮತ್ತು ನೀರಿನ ಮೂಲ ಬಣ್ಣ ಯಾವ್ದು ಅಂತ ಕೇಳಿದಲ್ಲಿ "ಪ್ರೀತಿ" ಅನ್ನೋದು ನನ್ನ ಉತ್ತರ... "ಪ್ರೀತಿ" ಬಣ್ಣವಾ ಅಂತ ಕೇಳಿದ್ರೆ "ಪ್ರೀತಿಗಿಂತ ಚಂದ ಬಣ್ಣವಿಲ್ಲ" ಅನ್ನೋದು ಪ್ರೀತಿಯ ಎತ್ತರ... ____ ತುಂಬಿ ಹರಿದಷ್ಟೂ ಶುದ್ಧ... *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
No comments:
Post a Comment