ಬದುಕು ಬಗೆಹರಿಯದ ಹಾಸ್ಯವು..... ಕೇಳು - ವಿದಾಯ ಅಪರಿಚಿತವೇನಲ್ಲ; ವಿರಹವೇನೂ ವಿಯೋಗವೂ ಅಲ್ಲ... ಹಾಗೂ - ಗೆದ್ದ ಹಮ್ಮಿಲ್ಲದಲ್ಲಿ, ಗೆಲ್ಲೋ ದಮ್ಮಿಲ್ಲದಲ್ಲಿ ಏನನ್ನಾದರೂ ಕಳಕೊಂಡೇನೆಂಬ ಭಯ ಕೂಡಾ ಇರಲಾರದಲ್ಲ... ಇಷ್ಟೇ - ಅಸಂಗತ ಹುಡುಕಾ(ಗಾ)ಟಗಳಲಿ, ನಾನು ನಾನಾಗಿರದ ಹೊತ್ತಿನ ನನ್ನಲ್ಲಿ ನಂಗೇ ನಂಬಿಕೆಯಿಲ್ಲ... ಕಾರಣ - ನಿರುತ್ತರಗಳ ಹುಡುಕಾ(ಗಾ)ಟದ ಹುಚ್ಚಿನ ಹಾದಿಯಲ್ಲಿ ಮತ್ತೆ ಮತ್ತೆ ಮತ್ತನಾಗಿ ಕಳೆದೋಗುವುದು ಇವನಿಗೆ ಹೊಸತೇನಲ್ಲ... ಹಾಗಂತ - ಹೊಸ ಹುಡುಕಾಟ ಅಂದ್ರೆ ಈಗಿರುವುದರ ಮರೆತೇನೆಂತಲ್ಲ; ನೆನಪುಗಳಲೇ ನಿಲ್ಲುವುದಿಲ್ಲ ಅಷ್ಟೇ, ಮತ್ತೇನಲ್ಲ... ____ ವಿಕ್ಷಿಪ್ತಾತ್ಮ... &&& ಇಲ್ಕೇಳು -
ದಾರಿ ಕವಲಾದದ್ದೂ ಅಷ್ಟು ನೋಯಿಸಲ್ಲ... ಜೀವ ಅಷ್ಟು ದೂರ ದಾರಿಯಲಿದ್ದದ್ದೂ ಅಂಥಾ ಏನೂ ನೋವೆನಿಸಲ್ಲ... ಜೊತೆಯಾಗಿದ್ದ (?) 'ಭಾವ' ಎಷ್ಟು ದೂರಾಗಿದೆ ಅನ್ನೋದು ಗೊತ್ತಾಗಿಬಿಡತ್ತೆ ನೋಡು, ಅದು ಬಲು ಹಿಂಸೆ ಹಿಂಸೆ... ___ ವಿದಾಯ - ವಿರಹ - ವಿರಾಗ... &&& ಇರು ನಾಳೆ ಮಾತಾಡ್ತೀನಿ, ಈಗ ಚೂರು ಬ್ಯುಸಿ, ಹಾಗಂದು ಎದ್ದು ಬಂದಿರ್ತೇನೆ ತುಂಬಾ ಸಲ; ಜಗದ ಭಾರವೆಲ್ಲಾ ನನ್ಮೇಲೇ ಇದ್ದ ಹಾಗೆ - ತಪ್ಪೇನಿಲ್ಲ... ಖೇದ ಅಂದ್ರೆ ಆ ನಾಳೆ ಬರೋದೇ ಇಲ್ಲ - ಕಾರಣ, ನಾಳೆಗೂ ನಾಳೆ ಒಂದಿದ್ಯಲ್ಲ, ಅದರ ನೆಪದಲ್ಲಿ ಇನ್ನಷ್ಟು ಬ್ಯುಸಿ... ಒಂದಿನ ನೀ ಸದ್ದಿಲ್ಲದೆ ದೂರ ಹೋಗ್ಬಿಟ್ಟೆ ನೋಡು, ನಾ ಬಂದು ಮಾತಾಡಿಸಲಾಗದ ಊರಿಗೆ; ಎಲ್ರೂ ಹೋಗ್ಬೇಕಾದದ್ದೇ ನಿಜ... ಆದ್ರೆ, ಈಗ ತುಂಬಾನೇ ಫ್ರೀ ಆಗ್ಬಿಟ್ಟೆ, ಕೆಲಸವೇ ಇಲ್ಲ ಅನ್ನೋ ಅಷ್ಟು ಖಾಲಿ ಖಾಲಿ; ಪ್ರತಿ ಹೆಜ್ಜೆಗೂ, ಎಚ್ರಕ್ಕೂ, ನಿದ್ದೇಲೂ ನಿಂದೇ ಮಾತೇ ಮಾತು - ನೆನಪು ಹಲುಬಿದಷ್ಟು ಬದುಕ್ಯಾಕೆ ಮಾತಾಗಲ್ಲ ಹೇಳು...!! ನಿನ್ನ ಬದುಕಿನ ಹಾಡನು ಆಲಿಸದಲೇ ಸಾವಿನ ಸೂತಕದ ಭಾಷಣಕ್ಕೆ ನಿಂತ ಬೇಕೂಫ ನಾನು - ನಾಳೆ ನನ್ನ ಸಾವಲ್ಲಿ ವಿದಾಯದ ನಾಕು ನುಡಿಗೆ ಒಂದು ತಲೆಯನ್ನಾದರೂ ಗಳಿಸ್ಕೊಂಡೇನಾ... ___ ನಿನ್ನ ಪಾಲಿಂದು ಕೊಡೋದನ್ನ ಮರೆತದ್ದು ಕಾಡೋದೇನಿದ್ರೂ ನನ್ನ ಪಾಲಿಗಿಂತ ಹೆಚ್ಚಿನದು ನಂಗೆ ಬರ್ತಿದ್ದದ್ದು ನಿಂತೋದಾಗ್ಲೇ ನೋಡು... &&& "......" ಎಂದು ಕಾಡುವ ಹಾಡು ನೀನು, ಎನಗೆ ಒಲಿಯದ ರಾಗವೂ... "......" ಕನ್ನಡಿಯ ಕಣ್ಣಲ್ಲಿ ನೆನಪು ಕಣ್ಣ ಹನಿ, ಬದುಕು ಬಗೆಹರಿಯದ ಹಾಸ್ಯವು... &&& ಕಣ್ಣಾಳದ ತೇವ ಮತ್ತು ಮೊಗ ಬಿರಿವ ಬಿಚ್ಚು ನಗು, ಎರಡೂ ಸಾವಿನ ಮನೆಯ ಮಗುವ ಕೇಕೆಯಂಥ ವಿಚಿತ್ರ ವಿನೋದದ ಗಾಢ ಸಂಯೋಜನೆ... ____ ಬೆರಣಿಯೊಳಗಣ ಬೆಂಕಿ... &&& ಅಲ್ವೇ - ಕದ್ದು ಮೆದ್ದ ಸುಖೀ ಖುಷಿಗಳ ಖುದ್ದು ಅರುಹುವಾಗ ಎಷ್ಟೆಲ್ಲಾ ಮರೆಯುತ್ತೇವೆ ಅಥವಾ ಏನೆಲ್ಲ ಮರೆತಿದ್ದರೆಷ್ಟು ಚಂದ ಅನ್ಕೋತೇವೆ - ಕೊನೆಗೆ ಜಾಣ ಪದ ಜೋಡಣೆಯಲಿ ಯಾವೆಲ್ಲಾ ಹುಳುಕುಗಳ ಅಡಗಿಸಿ ನಗುತ್ತೇವೆ... ನಮ್ಮ ಬಗೆಗಿನ ಸತ್ಯ ಮತ್ತು ಸುಳ್ಳು ಎರಡೂ ಒಂಥರಾ ಕಳ್ಳ ನೆಂಟನ ಹಾಗೆ ನೋಡು - ನಂಬಿದ್ರೆ ಕಷ್ಟ, ಆರೋಪಿಸಿದ್ರೆ ಅವಮಾನ... ಪೋಣಿಸಹೋದರೆ ಸುಳ್ಳು ಇಬ್ಬನಿಯಷ್ಟು ಹಗುರ ಮತ್ತದರ ಒಡಲ ತುಂಬಾ ನಾ ತುಂಬಿದ್ದೇ ಬಣ್ಣ - ಹೇಳುತ್ತಾ ಹೇಳುತ್ತಾ ಸತ್ಯದ ಮೈಯ್ಯೆಲ್ಲಾ ಬೆಳಕಿನ ಕಣ್ಣು ಮತ್ತದು ಬರೀ ಕಪ್ಪು ಬಿಳುಪಿನ ಭಾರ... ಇದುವರೆಗೆ, ನನ್ನ ಬಗ್ಗೆ ನಾನಾಡಿದ್ಯಾವುದೂ ಸುಳ್ಳಲ್ಲ ಮತ್ತು ಸತ್ಯವ ಹೇಳಿಯೂ ಹೇಳದಂತೆ ಪದಗಳ ನುಂಗಿದ್ದೂ ಸುಳ್ಳಲ್ಲ... ____ ಆತ್ಮಪತ್ರ... &&& ಎದೆಯಲಿಷ್ಟು ನೋವು ಮಿಜಿಗುಡುತಿರಬೇಕು... ಕನಸು ಹೊತ್ತಿದ ಕಮಟು ಉಸಿರಿಗಂಟಿರಬೇಕು... ಬಿದ್ದು ಬಿದ್ದು ಮಾಗುವುದು, ಮಾಗಿ ಬೀಗುವುದು, ಬೀಗಿ ಬಿಗುವಳಿದು ಬಾಗುವುದು... ಆಹಾ!! ಅಲ್ಲಿ ನಗುವೆಷ್ಟು ಚಂದ ಚಂಽಽದ... ನಿನ್ನ ನೆನಪಾದಾಗಲೆಲ್ಲ ನಗುತ್ತೇನೆ ಅಥವಾ ನಗುವಾಗಲೆಲ್ಲಾ ನೀ ತಬ್ಬಿದಂತೆನಿಸುತ್ತೆ... ____ ಎಷ್ಟು ದೊಡ್ಡ ನಗುವೋ ಅಷ್ಟೇ ಗಟ್ಟಿ ಮೌನ... &&&
ನಿನ್ನ ಮರೆಯಲು ಹೋಗಿ ಎಲ್ಲಾ ಮರೆತೆ - ನಿನ್ನ ಹೊರತು... ಸೂತಕದ ಮನೆಯಲ್ಲಿ ಹಬ್ಬವಿಲ್ಲ ಮತ್ತು ನಿನ್ನ ಕಳಿಸಿ ಹಿಂತಿರುಗಿ ನೋಡದೆ ಮನೆಗೆ ಬಂದವನೆದೆಯಲ್ಲಿ ಸೂತಕ ಕಳೆದೇ ಇಲ್ಲ... 'ಜೀವ ತಣ್ಣಗಿರಲೀ' ಅಂತ ಯಾರೇ ಹರಸಿದರೂ ಸಣ್ಣಗೆ ಭಯವಾಗುತ್ತೆ ಈಗೀಗ - ಕೊನೇಯ ಸಲ ತಾಕಿದ ನಿನ್ನ ಕೆನ್ನೆಯ ತಂಪಿನ್ನೂ ಕಂಪಿಸುತಲೇ ಇದೆ ಎದೆಯೊಳಗೆ... ___ ತಂಪು ಹೊತ್ತಿನ ಉರಿ ಉರಿ ನೆನಪು ನೀನು - ಆ ನೆನಪಿನುರಿ ಒಲೆಯ ಮೇಲೇ ಜೀವದಗುಳಿಯಿಟ್ಟು ಬೇಯಿಸಿಕೊಂಡ ನಗೆಗೆ ಹಬ್ಬದಡುಗೇ ಅನ್ನಬೇಕು ನಾನಿನ್ನು... *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
No comments:
Post a Comment