Sunday, December 31, 2023

ಗೊಂಚಲು - ನಾಕ್ನೂರಿಪ್ಪತ್ಮೂರು.....

ಕಾರ್ತೀಕದ ಛಳಿಯ ಕಾವಿಗೆ...

ತುಂಬಾ ಅನ್ನೋ ಅಷ್ಟು ಚಂದ ಇದ್ಬಿಟ್ರೆ ನೀ ಚಂದ ಅನ್ನೋಕೂ ಪದಗಳ ಉಸಿರು ಉಗ್ಗತ್ತೆ...
ವತ್ಸಾ,
ನಿನ್ನ ರಸಿಕತೆಯದೇನು ಬಂತು ಹೆಗ್ಗಳಿಕೆ...
___ ಇವಳೇ, ಒಂಚೂರು ಸಲಿಗೆ ಕೊಡು...
&&&

ಸೂರ್ಯ ಕೂಡಾ ಮೋಡವ ಹೊದ್ದು ಮಲಗಿದ ಈ ಛಳಿಯ ಮಧ್ಯಾಹ್ನಗಳಲಿ ಬೆಚ್ಚಗೆ ನಿನ್ನ ಮೆದ್ದು(ದು) ಹೊದ್ದು ಮಲಗಲಾದರೆ......
___ ಸಣ್ಣ ಆಸೆ - ಕಳ್ಳ ನಿದ್ದೆ...
&&&

ಕೇಳೇ -
ನಿಶೆಯೊಂದು ರಸಮಯವಾಗಲು ಹದವಾದ ನಶೆಯೊಂದು ಬೇಕು...
ಮದಿರೆಯಂಥ ನೀನು ಅಥವಾ ಮದಿರೆಯೊಳು ನೀನು ನನಗೆಂದೇ ಸಿಗಬೇಕು...
___ ಕಾರ್ತೀಕದ ಛಳಿಯ ಕಾವಿಗೆ...
&&&

ಯೇ ಇವ್ನೇ -
ಇಷ್ಟಪಟ್ಟ ಗಂಡು ಮೈ ಘಮ ನೆನಪಾದರೆ ಸ್ನಾನದ ಮನೇಲಿ ಒಂದು ಅಮಲು ಮೂಡುತ್ತಲ್ಲ, ನಂಗೆ ನಾನು ಮತ್ತು ನನ್ನ ಬೆತ್ತಲು ಇನ್ನಷ್ಟು ಇಷ್ಟವಾಗತ್ತಲ್ಲ; ಅಂಥ ಗಾಢ ಕಂಪಿನ ಸಣ್ಣ ಸಣ್ಣ ಹಿತಗಳನು ಹೇಗೆ ದಾಟಿಸಲಿ ನಿಂಗೆ...
ಮತ್ತೆ ಸಿಗೋ ಅಂತಲೂ ಗಟ್ಟಿಯಾಗಿ ಹೇಳಲೂ ಬಾರದೇ ಹಸಿ(ದ)ಗಣ್ಣಲ್ಲಿ ಸೋತು ನಿಲ್ಲುವ ಮೂಗಿ ನಾ ನಿನ್ನೆದುರು...
ಈ ಮೋಹ‌ ಮತ್ತು ಮೋಹದುತ್ಥಾನದ ಸುಖ ಎಷ್ಟು ಮೆತ್ತಗಾಗಿಸತ್ತೆ ನೋಡು ಮೈಮನವ...
ಬಂದು ಹೋಗೋ ರಸಿಕನೇ ಕನಸಂತಾದರೂ - ಕಾದ ಮೈಯ್ಯ ಕಾಯಿಸದೇ ಪ್ರೀತಿ ಕೊಡು ನಿತ್ಯ ವಸಂತದ ಯೌವನಕಾದರೂ...
ಈ ಕನ್ನೆ ಎದೆಗಣ್ಣ ಆಸೆ, ಸ್ವಪ್ನ ಸರಸಿಯಲಿ ಬಿಡುಬೀಸು ಈಸು ಬಿದ್ದ ಮಾಯ್ಕಾರ ನೀನು - ಹಾದಿ ಮರೆಯದಿರೋ ಮನಸಿಜನೇ...
___ ಹೇಳೋಕೆ ನಾಚ್ಕೆ ಆಗತ್ತೆ - ಆದ್ರೂ, ಹೇಳ್ಕೊಂಡು ನಾಚ್ಕೋತೇನೆ...
&&&

ಓಯ್ -
ಚಪ್ಪರಿಸಿ ಸವಿಯುವ ಈ ತುಟಿಗಳಲೇನೂ ನಿಜದಲ್ಲಿ ಜೇನಿದ್ದಂತಿಲ್ಲ (ನಮ್‌ ನಮ್ಮ ಉಸಿರಿಗಂಟಿದ ಸಿಗರೇಟಿನದೋ, ಈರುಳ್ಳಿಯದೋ ಘಮವೇ ಬರೋದು); ಆದ್ರೆ ತುಟಿಗೆ ತುಟಿ ಒತ್ತುವ ಹೊತ್ತು ಮುಚ್ಚಿದ ಕಂಗಳಲಿ ಎದೆಯಿಂದ ಎದೆ ತಾಕುವ ತಾದಾತ್ಮ್ಯವಿದೆಯಲ್ಲ ಅದು ಮೈಮನದ ತುಂಬಾ ಜೇನ್ಭಾವವ ತುಳುಕಿಸುವ ಮೋದವಿದೆ ನೋಡು, ಅದನೇ ಕವಿ ಕೋವಿದರು ಅಧರ ಮಧು ಅಂದಿರಬೇಕು ಅಲ್ವೇನೋ...
ಆ ಕ್ಷಣ ಕಣ ಕಣ ನೀ ನನ್ನದೆನ್ನುವ ಆ ನವಿರಿಗೆ ನವಿಲಾಗಿ ಮತ್ತೆ ಮತ್ತೆ ತುಟಿ ತೆರೆದು ಸೋಲುತ್ತೇನೆ - ಬರೀ ಆಸೆಯಷ್ಟೇ ಇದ್ದಲ್ಲಿ ತುಟಿ ಪಪ್ಪಿಯಲಿ ಆಸ್ಥೆ ಇರಲಾರದು ಅಂತಲೇ ನಂಬುತ್ತೇನೆ...
ಉನ್ಮಾದ ಇಳಿದ ಮೇಲೂ ದೂರ ಸರಿಯದ ಮೈ, ಕುಚ್ಚು ತಟ್ಟುವ ಕೈ, ಲಾಲಿ ಹಾಡುವ ಉಸಿರು, ಅಲೆ ಬಡಿದು ಸುಸ್ತಾದ ದಂಡೆಯ ಮೇಲೆ ಮರಿ ಏಡಿ ಓಡಾಡಿ ಹಸೆ ಬರೆದ ಹಾಗೆ ಕಾಲ್ಗೆಜ್ಜೆಗಳ ಎಳೆದು ತೀಡಿ ಮೈಯ್ಯೆಲ್ಲಾ ಪುಳಕದ ಅಲೆ ಬೀರುವ ನಿನ್ನ ಒರಟು ಪಾದಗಳು; ಓಹ್!! ನೀ ಮೀಸೆ ಅಡಿಯ ಬಿಗುಮಾನದಲ್ಲಿ ಗಂಟಿಕ್ಕಿಕೊಂಡ ಭಾವಗಳು ನನ್ನೀ ತುಟಿಯ ತೇವದ ಘಮಕ್ಕೆ ಸಿಕ್ಕು ಬಿಡಿಸಿಕೊಂಡಾಗ ಎಷ್ಟೆಲ್ಲಾ ಚಂದ ಮಾತಾಡುತ್ತವೆ ಮಾರಾಯಾ...
ಗಂಡಸು ಕಳೆದು ಗೆಳೆಯ ಸಿಕ್ಕುವ ನಂದ್‌ನಂದೇ ಆದ ಅಂಥ ಚೊಕ್ಕ ಘಳಿಗೆಗೆಂದೇ ಮಧುರ ಪಾಪದ ಮುಂದಿನ ಆ ಮನದ ಮೂರ್ತಕ್ಕೆ ಮತ್ತೆ ಮತ್ತೆ ಮೈದೆರೆದು ಹೆಣ್ಣಾಗಿ ಕಾಯುತ್ತೇನೆ - ಬರಿಯ ಮೈಯ್ಯಾದರೆ ಸೊಕ್ಕಿಳಿದ ಮೇಲೆ ಹೆಣ್ಣ ತಬ್ಬುವುದಿಲ್ಲ ಎಂಬುದ ಅರಿತಿದ್ದೇನೆ...
__ಪ್ರೇಮವ ಹೇಳದವನ ಆರ್ದ್ರ ಪ್ರೀತಿಯ ಬೇಶರತ್ ಒಪ್ಪಿದ್ದೇನೆ...
&&&

ಮೋಹದಪ್ಪಿಗೆ - ಆ ಸಣ್ಣ ಒಪ್ಪಿಗೆ........
ಥೂ, ನಾಚ್ಕೆ ಇಲ್ದೋನೆ ಅಂತಂದು ಸುಳ್ಳೇ ನಾಚುತ್ತಾ, ನೀನು ಮೂತಿ ತಿರುವಿ, ತೋಳ ಚಿವುಟಿದ ನೋವು ಹಿತವಾಗಿ ಮೈಯ್ಯೆಲ್ಲಾ ವ್ಯಾಪಿಸಿ....... 
ಧಮನಿ ದಾರಿಯಲಿ ಕಾಯುತ್ತಾ ಕೂತ ಕಳ್ಳ ಆಸೆಗಳೆಲ್ಲ ಧಿಗ್ಗನೆದ್ದು ಮೈಮುರಿದು......
ಬೊಗಸೆ ಬೊಗಸೆ ಗಾಳಿ ಕುಡಿದರೂ ಆರದ ನಾಭಿಗೊರಳ ದಾಹದೋಂಕಾರ........
ಅಲ್ಲಿಂದ ಮುಂದೆ.....
ಎಳೆ ಎಳೆ ನಿನ್ನುಸಿರ ಘಮ, ಒಂದು ಒಂದೊಂದು ತುಟಿಯ ಅಮೃತ ಧಾರೆ, ಮೀಟಿ ನರ ನರ ಬೀಗಿ ಬೀಗಿ ಹಿತಾಘಾತ ನಗಾರಿ, ಮೇಘಸ್ಪೋಟಕೆ ಉನ್ಮತ್ತ ತಯಾರಿ........
.....ಉಫ್......
ಇರುಳಲ್ಲ ಇದು ಹಗಲು - ನಿದಿರೆಗಲ್ಲ ಕಣ್ಮುಚ್ಚಿದ್ದು........
ಉಹೂಂ, ಕನಸಲ್ಲ ಇದು - ಆಸೆ ಬಿಗಿದೆರಡು ಹರೆಯ ಕೊರೆದ ಕಲ್ಪನೆಯ ಕೂಡು ಕರಡು ತಿದ್ದುಪಡಿ.....
ಬಳ್ಳಿ ಬೆಡಗಿನ ಕಪ್ಪು ಹುಡುಗಿ ಮೈತುಂಬಾ ಕಂದು ಕಂದು ಕಲೆಗಳು.......
(ನನ್ನ ನಾನಿನ್ನೂ ನೋಡಿಕೊಂಡಿಲ್ಲ....)
_____ ಇದೆಲ್ಲಕೂ ಮುಂಚೆ,
ಮಧುರ ಪಾಪ ಸಮ್ಮೋಹಿತ ನನ್ನ ನೂರು ಪೋಲಿ ಗೋಗರೆತ - ನಿನ್ನದೊಂದು ನಡು ಕೊಂಕಿನ ತುಂಟ ಆಹ್ವಾನ.........
&&&

ಚಂದ ಮೋಹವೇ -
ಒಂದು ದಿನ, ಒಂದು ಪ್ರಹರ, ತನ್ನ ತಾ ಮರೆತು ಮೈಮನಸು ಹುಚ್ಚೆದ್ದು ಕುಣಿದು, ತಣಿದರೆ ಆ ಅದರ ಸವಿ ಕಂಪು, ಕಂಪನಗಳ ತೀವ್ರತೆ ಎಷ್ಟಿರತ್ತೆ ಗೊತ್ತಾ ಮರುಳೇ - ಮುಂದಿನ ನಾಕಾರು ದಿನವಾದರೂ ಅದೇ ಉನ್ಮತ್ತ ಅಮಲು ಈ ಮೈಮನದ ಧಮನಿಗಳಲಿ ಅಲೆ ಅಲೆ ತುಯ್ಯುತ್ತಾ, ಮತ್ತೆ ಮತ್ತೆ ಮತ್ತೇರಿ; ಕನಸು, ರಸಕಾವ್ಯ, ಆಸೆಮೋಡ, ಸುಖಭಾವ ಬೆವರ ಮಳೆ...
ತಿಥಿ, ವಾರಗಳ ಲೆಕ್ಕವೆಲ್ಲ ಒತ್ತಟ್ಟಿಗಿಟ್ಟು ಮರಳಿ ಮರಳಿ ತೋಳ ಬಿರುಸಲ್ಲಿ ಹೊರಳುತಿರುವ ಬಾ ಇಲ್ಲಿ - ನಶೆಯಿಳಿಯದಂಗೆ ಕಾಲ ಕಳೆದು ಹೋಗಲಿ; ಕಾಲಿನಿಕ್ಕಳದಾಳದಲ್ಲಿ, ಸುರತ ಸುಖದೊಡ್ಡೋಲಗದಲ್ಲಿ...

____ ನಿನ್ನ ಕೂಡಿ, ಕೊಂಡಾಟವಾಡಿ...
&&&

ಇರುಳೆಂದರೇ ಸುಖದ ಛಾಯೆ...

ಒಳಗಿಂದ ಉಕ್ಕುವ ಭಾರಗಳನೆಲ್ಲ ಇಳುಕಿ ನಿಟ್ಟುಸಿರಾಗಬಲ್ಲ ಕತ್ತಲ ಗೂಡೆಂದರೆ ಸುಖದ ಪ್ರತಿಮೆಯೇ...

ಎದೆ ಕೀಲುಗಳ ಮುರಿವ ನೋವ ಗಂಟು, ಹೊಕ್ಕುಳ ಸುಳಿಯ ಆಸೆ ಹಸಿವಿನ ಸುಳಿ ಎಲ್ಲಾ ಸರಾಗ ಬಿಚ್ಚಿಕೊಂಡು ಹರಿದು ಹಗುರಾಗಿ ಸುಶಾಂತ ನಿದ್ದೆಯ ಜೋಲಿ ತೂಗುವ ನಿಶೆಯ ಹಾಡೆಂದರೆ ಬದುಕೋ ನಶೆಯ ಸುಖದ ನೆರಳೇ...

____ ನಾನಳಿವ, ನಾನರಳುವ ಕತ್ತಲೆಂಬ ವಿಚಿತ್ರ ಆಲಾಪ...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment