Sunday, December 31, 2023

ಗೊಂಚಲು - ನಾಕ್ನೂರಿಪ್ಪತ್ನಾಕು.....

ಆಯುಷ್ಯ ರೇಖೆ.....

ಕೇಳಿಲ್ಲಿ,
ನೆಲೆಗೊಂಡದ್ದು ಬಂಧವಾದರೆ ಪ್ರೀತಿ ಅದರ ಪರಿಚಾರಕ - ಒಡನಾಡಿದ್ದೆಲ್ಲಾ ಸಲಿಗೆಯ ಸವಿ ಸಾಂಗತ್ಯವೇ...
ಬೆಸಗೊಂಡದ್ದು ಸಂಬಂಧವಾದರೆ ಹಕ್ಕು ಅದರ ಮಾಲೀಕ - ಒಡನಾಟವೆಲ್ಲಾ ಖಡ್ಡಾಯ ಒಡಂಬಡಿಕೆಯೇ...
____ ಪ್ರೀತಿ ಅಥಿತಿ ಕಲಾವಿದ ಆದ ವೇದಿಕೆಯಲ್ಲಿ ನನ್ನ ಪಾತ್ರ ಇಲ್ಲದಿರಲಿ...
&&&

ಕೆಲವು ನೇಹಗಳೇ ಹಾಗೆ -
ಏನೆಲ್ಲವ ಕೇಳಬಹುದು, ಎಲ್ಲವನೂ ಹೇಳ್ಕೋಬಹುದು - ದೇವರ ಸಂತೀಗೆ ಮಾತಾಡಿದಂಗೆ...
ಯಾವ್ದಕ್ಕೂ ಮಾರುತ್ತರ ಬರ್ಲಿಕ್ಕಿಲ್ಲ, ಹಾಂ ಹೂಂ ಕೂಡಾ ಅನ್ಲಿಕ್ಕಿಲ್ಲ; ಆದ್ರೂ ಹರವಿಕೊಂಡ ಮನಸು ತಂತಾನೇ ಹಗೂರ ಹಗೂರ...
___ ಎದೇನ ಗುಡಿ ಮಾಡಿದವರು/ಮಾಡಿಕೊಂಡವರು...
&&&

ಪ್ರೇಮದ ಹಾದಿಯಲ್ಲಿ ಪಾವಿತ್ರ್ಯದ ಜಂಭವೂ ಬೇಡ, ಮಾಲಿನ್ಯದ ಆರೋಪವೂ ಬೇಡ...
ಪ್ರೇಮದ ಭಾವ, ಅನುಭವ, ಅನುಭಾವ ಎಲ್ಲವೂ ಪ್ರೇಮಿಯ ಆವರಿಸಿಯೇ ಗುರುತಾದುದೇ ಆದರೂ ಪ್ರೇಮವೆಂಬುದು ಬರೀ ಪ್ರೇಮಿಯಲ್ಲ...
ಪ್ರೇಮಿಯ ಅಪಸವ್ಯಗಳನೆಲ್ಲ ಪ್ರೇಮಕ್ಕೆ ಅಂಟಿಸಬೇಕಿಲ್ಲ...
ಪ್ರೇಮಿಯ ತಬ್ಬಿ ಪ್ರೇಮವ ತಾಕುವಾಗ ಬೆವರಿದ್ದು ಪ್ರೇಮಿ, ಸುಖವ ಕಡೆದು ಜಡವ ನೀಗಿಕೊಂಡದ್ದು ಪ್ರೇಮ...
ದಡವ ತಬ್ಬಿಯೇ ಹರಿದರೂ ನದಿಯೆಂದರೆ ದಡವಲ್ಲ ಮತ್ತು ನದಿ ದಡದ ಹಕ್ಕೂ ಅಲ್ಲ...
ದಡವ ಮೀರಿಯೂ ನದಿಗೆ ಹರಿವಿದೆ ಅಥವಾ ತನ್ನ ಹರಿವಿಗೆ ಬೇಕಾದ ದಡವ ನದಿಯೇ ಕಂಡುಕೊಂಡೀತು, ಸೃಷ್ಟಿಸಿಕೊಂಡೀತು...
ಆದರೆ, ನದಿ ಬತ್ತಿದರೆ ದಡ ದಡವಲ್ಲ, ಅಲ್ಲಿ ದಡಕೆ ಅಸ್ತಿತ್ವವೇ ಇಲ್ಲ...
ಅಂತೆಯೇ ಪ್ರೇಮ ಪ್ರೇಮಿಯನ್ನು ಬಳಸಿ ಬಾಳಿಸಿ ಹಾಯುವ ನಿರಂತರ ಹರಿವು...
ಅಂಥ ಪ್ರೇಮವನ್ನು ಪ್ರೇಮಿಯ ಜಹಗೀರೆಂದು ಬಗೆಯುವುದಕ್ಕೆ, ಪ್ರೇಮಿಯ ಮಡಿ ಮೈಲಿಗೆಗಳನೆಲ್ಲ ಪ್ರೇಮದ ಸೂತಕದಂಗೆ ಬಳಸಲು ಹೊರಡುವುದಕ್ಕೆ ಅರ್ಥವಿಲ್ಲ... 
____ ಆರಾಧನೆ ಅವಧೂತ ನಡಿಗೆಯಾಗಲಿ...
&&&

ಮನವು ಬರೀ ಭಾವೋದ್ವೇಗದ ಅಂಕೆಯಲಿರುವಾಗ ಹಚ್ಚಿಕೊಂಡ ಯಾವುದೇ ಬಂಧ ಅಥವಾ ಬಂಧಕ್ಕೆ ಬದುಕನೊಪ್ಪಿಸುವ ಗೊತ್ತುವಳಿಗೆ ನಿಜದಲ್ಲೊಂದು ಗಟ್ಟಿ ನೆಲೆ ಇರುವುದು ಅಪರೂಪ...
ಹಾಗೆಂದೇ ಸಮತೂಕದ 'ಭಾವ ವೈಭವ'ದ ಸಾಂದ್ರತೆಗೆ ಕಾಯದೇ ಅಂಟಿಕೊಂಡ ಬಾಂಧವ್ಯದ ಹೊಸತರಲ್ಲಿ ಓತಪ್ರೋತ ನಲಿದಾಡುವ 'ಶಬ್ಧ ವೈಭವ' ದಿನ ಕಳೆದಂತೆ ಸವಕಲಾಗುತ್ತ ಹೋಗಿ ಒಂದು ಬದಿ ಕೊರಕಲಾಗೋದು, ಅನುಬಂಧ ನರಳೋದು...
ಆಮೇಲೆ,
ಒಡನಾಡಿಯ ತಪ್ಪಾ? ಒಳನಾಡಿಯ ತಪ್ಪಾ? ನಡೆವಾಗ ಎಡವಿದ್ದಾ? ಆಯ್ಕೆಯಲ್ಲಿ ಸೋತದ್ದಾ? ಮನದ ಮೂಸೆಯಲ್ಲಿ ಎಲ್ಲಾ ಅಯೋಮಯ... 
ಗಾಯ ಆದದ್ದೆಲ್ಲಿ; ಕಣ್ಣಿಗೆ ಕಲೆ ಕಾಣ್ತಾ ಇಲ್ಲ, ಆದ್ರೆ ಎದೆ ತುಂಬಾ ಉರಿ ಉರಿ ಹುಳಿ ತೇಗು...
ಪ್ರಶ್ನಿಸೋದು ಯಾರನ್ನ? ಸಮರ್ಥನೆಗಳು ಎರಡೂ ಕಡೆ ಇದ್ದಾವು...
ಅಲ್ಲಿಗೆ,
ಬಂಧಕ್ಕಿಟ್ಟ ಹೆಸರು ಹಿಡಿದು ಇದರ ಹಣೇಬರವೇ ಇಷ್ಟು ಅಂತ ಹಳಹಳಿಸಬೇಕಷ್ಟೆ...
ತನ್ನ ವರವೂ ಶಾಪವಾದದ್ದನ್ನ, ಶಾಪವನೂ ವರವಾಗಿಸಿಕೊಂಡವರನ್ನ ಕಂಡಿರುವ ದೇವರೂ ಬಂಧಗಳ ಸೋಲು, ಗೆಲುವಿಗೆ ಉತ್ತರ ಕೊಡಲು ಸೋತಾನು...
ಭಾವನಾತ್ಮಕ ಬಾಗುವಿಕೆ ಮತ್ತು ಭಾವೋದ್ವೇಗದ ಭಾರದ ನಡುವಿನ ಸಣ್ಣ ಎಳೆಯನ್ನು ಗುರುತಿಸಿಕೊಂಡು ಬಂಧ, ಸಂಬಂಧಗಳ ನೇಯಿರೋ ಅಂತ ಹೇಳುವವರ್ಯಾರು ಎನ್ನಂಥವರಿಗೆ.......
____ ನನ್ನ ನಾ ಕಾಣುವುದೆಂತು ಅವಸರದ ಭ್ರಾಂತಿಗೆ...
&&&

ಕತ್ತಲ ಭಯಕ್ಕೆ ಹಚ್ಚಿಟ್ಟ ದೀಪದ ಬುಡದ ನೆರಳಲ್ಲಿ ಬೆಳಕಿನ ಅಲರ್ಜಿಗೆ ಕಣ್ಮುಚ್ಚಿ ಕೂತ ನಾನೇ ಕಂಡಂತಾಗಿ ಬೆಚ್ಚುತ್ತೇನೆ - ದಾರಿ ಕಾಣುವಲ್ಲಿ ಬೆಳಕು ಬೆರಗೇ ಹೌದಾದರೂ, ನಾನೂ ಬಯಲಿಗೆ ಬಿದ್ದ ಭಾವದಲ್ಲಿ ಬೆಳಕೇ ಭಯವೂ ಹೌದು...
ಬೆಳಕೇ ನೀನಾಗಿ ಹೊಯ್ದಾಡುವಾಗ ನೆರಳು ಕದಡಿ ನಿನ್ನ ಸೇರಿದಂತ ಸುಳ್ಳೇ ಸಮಾಧಾನ ಹೊಂದುತ್ತೇನೆ - ಗೊತ್ತಲ್ಲ ನಿನಗೆ ಅಪಾಯವಿಲ್ಲದ ಕೆಲವೆಲ್ಲ ಸಣ್ಣ ಸಣ್ಣ ಭ್ರಮೆಗಳು ಸುಖವೂ(ವೇ) ಹೌದು...
____ ಎದೆಗಣ್ಣು ತುಳುಕುವಾಗೆಲ್ಲ ಮತ್ತೆ ಇಷ್ಟೇ ಇಷ್ಟು ಮನುಷ್ಯನಾದಂತೆ ಭಾಸ...
&&&

ಒಂದು ಹೇಮಂತದ ಚೆಲುವು - ನೂರು ವಸಂತಗಳ ಕನಸು - 'ಪಾಪಿ ಚಿರಾಯು' ಎಂಬೋ ಹುಚ್ಚು ಭರವಸೆ...
____ ಆಯುಷ್ಯ ರೇಖೆ...


ಹಿಮದ ಹಾಡಿನ ಜಾಡಿನಲ್ಲಿ ನಿನ್ನ ಹುಡುಕುವ ಹೊತ್ತಲಿ ನನಗೆ ನಾನೇ ಸಿಕ್ಕಂತಿದೆ...
____ ಹಗಲುವೇಷ...
&&&

ಜಗತ್ತು ತುಂಬಾ ಬ್ಯುಸಿ ಆಗೋಗಿದೆ - ನಂಗೆ ಮಾತ್ರ ಕೆಲ್ಸ ಇಲ್ಲ...!
ಅಥವಾ,
ನಾ ಖಾಲಿ ಬಿದ್ದಿರೋದಕ್ಕೆ ಜಗತ್ತು ಬ್ಯುಸಿ ಅಂತ ಅನಿಸ್ತಿರೋದಾ...!?
ಇನ್ನೂ ಮಜಾ ಏನ್ಗೊತ್ತಾ -
ಮಾಡೋಕೆ ಕೆಲ್ಸಾನೂ ಇಲ್ಲ, ಕೊಡೋಕೆ ಟೈಮೂ ಇಲ್ಲ ನನ್ನತ್ರ... 😜
____ ರಾಜಾಶ್ರಯ ಇಲ್ಲದ ಕುಂಭಕರ್ಣ...
&&&

ಒಂದ್ರುಪಾಯಿ ಕಲಿಕೆಯಿಲ್ಲದೇ, ಗಳಿಕೆಯಿಲ್ಲದೇ (ಲೆಕ್ಕಕ್ಕೆ ಸಿಗದವುಗಳನು ಲೆಕ್ಕವಿಟ್ಟಿಲ್ಲ - ಅಲ್ಲೇ ಎಲ್ಲಾ ಇರಬಹುದು, ಗೊತ್ತಿಲ್ಲ) ಮುದಿ ಗಣಿಕೆಯಂಗೆ ಹಳೆಯ ವೈಭವವನೇ(?) ಜಗಿದು ಜಗಿದು ಉಗಿಯುತ್ತಾ, ಆಗೀಗ ಚೂರು ಚೂರು ನಿದ್ದೆಯಲ್ಲಿನ ಕನಸುಗಳಂಥ ಖುಷಿಗಳನಿತ್ತು ಸರಸರನೆ ಕಳೆದೇ ಹೋದ "ಕುಂಭಕರ್ಣ" ವರ್ಷ...
____ ಎರ್ಡು ಸಾವಿದಿಪ್ಪತ್ಮೂರು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment