Tuesday, June 1, 2021

ಗೊಂಚಲು - ಮುನ್ನೂರೆಪ್ಪತ್ತೊಂದು.....

ಸನ್ನಿಧಿ..... 

ಬೆಳದಿಂಗಳು ಸುಡದಂತೆ ನೆತ್ತಿ ಕಾಯೋ ನೆರಳಿನಂಥಾ ಕೂಸೇ -
ಸಾವಿರ ಪ್ರೀತಿಗಳ ಧಿಕ್ಕರಿಸಿ ನಡೆದವನನೂ ಒಂದ್ಯಾವುದೋ ಮಡಿಲು ಕಿರುಬೆರಳ ಜಗ್ಗಿ ನಿಲ್ಲಿಸುತ್ತದೆ - ಕೊರಳ ಬಳಸಿದ ಒಲವ ಕಡಲು ನೀನು...
ಓಡಿ ಓಡಿ ಬೆವರಿಳಿದು ದಣಿದ‌ವನನು ತಂಬೆಳಲ ಕಿರು ಅಲೆ ಮೈದಡವಿ ನಿಲ್ಲಿಸಿದಂಗೆ ಎನ್ನೀ ಬರಡು ಬಂಡೆಯೆದೆಗೆ ನಿನ್ನಾ ಹಸಿ ಕನಸಿನೆದೆಯಾನಿಸಿ ತಡೆದು ನಿಲ್ಲಿಸಿಕೊಂಡವಳು...
ನನ್ನನೇ ನನ್ನಿಂದ ಕದ್ದು ನಿನ್ನ ರೂಪದಲಿ ನನಗೇ ನೀಡ ಹೊರಟವಳು...
ವೈತರಣಿಯ ಆಚೆ ದಡದಲ್ಲಿ ಸ್ವರ್ಗ‌ವಿದೆಯಂತೆ, ನೀನಿರುವ ಈಚೆ ದಡ ವೈಪರೀತ್ಯ‌ಗಳ ಸಂತೆ‌ಯಂತೆ ಮತ್ತು ನಾನು ನನ್ನ ಮುಕ್ತಿಗೂ ನಿನ್ನೂರನೇ ಆಯ್ದುಕೊಳ್ತೇನೆ...
 ____ಮುಂದುವರಿದು ಅಲ್ಲಿಂದ ನಗುವೊಂದು ಬಿಳಲು ಬಿಳಲಾಗಿ ತನ್ನ ಬಾಹುಗಳ ನಮ್ಮ ಹಾದಿತುಂಬಾ ಹರಡಿಕೊಳ್ಳುತ್ತದೆ...
💑💑💑

ಉಸಿರ ನಾಭೀ ನಾಳಕಂಟಿದ ಗಾಢ ಗಂಧವೊಂದು ಮೈಯ್ಯ ಬೇಲಿಗಳಲಿ ಹಿತ ನಡುಕವ ಹುಟ್ಟಿಸುತ್ತಲ್ಲ, ಏನಂತಾರೋ ಅದಕ್ಕೆ...
ನಿನ್ನ ತೋಳ್ಬಂಧಿಯ ಕನಸಲ್ಲಿ ಮನ ಮಲ್ಲಿಗೆ ಮೆಲ್ಲಗೆ ಅರಳುವಾಗ ಮನೆಯ ಮೂಲ್ಮೂಲೆಯೂ ಸರ್ವಾಲಂಕೃತ ಅಂತಃಪುರವೇ ನೋಡು...
ಮುಡಿಯಿಂದ ಅಡಿಗಿಳಿವ ಹನಿ ಹನಿ ನೀರ ಹವಳಗಳ ಎಣಿಸಲೇ ನನ್ನಾ ತುಂಟ ತುಟಿಯಿಂದ - ತಣ್ಣೀರ ಜೊತೆ ಬಿಂದಿಗೆ ತುಂಬಾ ನಿನ್ನ ಆ ರಸಿಕ ನುಡಿಗಳ ಬಿಸಿ ನೆನಪ ಬೆರೆಸಿ ಸುರಿದುಕೊಂಡೆ; ಎಂಥಾ ಚಂದ ಸಂಯೋಜನೆ ಮಾರಾಯ...
ಅಬ್ಬಿಕೋಣೆಯ ಆವರಿಸಿದ ಹಬೆಯ ತುಂಬಾ ನೀನೇ ನೀನು - ಈ ಮೈಯ್ಯ ವೀಣೆ ಬಿಗಿದು ಹೊನಲಿಡುವ ರಾಗಗಳಿಗೆಲ್ಲ ನಿನ್ನದೇ ಹೆಸರು...
ನನ್ನೆಲ್ಲಾ ಬೆಳಗೆಷ್ಟು ನಚ್ಚಗೆ, ಬೆಚ್ಚಗಿದೆ ನಿನ್ನಿಂದ...
____ ಸಾಗರನೂರಿಗೆ ಬೆಳುದಿಂಗಳು ನಡೆದು ಬಂದಂಗೆ...
💑💑💑

ನಿನಗಾಗಿ ಜೀವ ಕೊಡ್ತೀನಿ/ಬಿಡ್ತೀನಿ ಅನ್ನುವುದಂತೆ ಪ್ರೇಮ - ಜೀವನ್ಮುಕ್ತಿ(?)...
ನಿನ್ನಲ್ಲಿ ಜೀವ ತುಂಬುತ್ತೇನೆನ್ನೋ ಭಾವ ಚೈತನ್ಯ ಸ್ನೇಹ - ಜೀವನ್ಮುಖಿ...
ಪ್ರೇಮದ ನಶಾ ಸುಖವ ಧಿಕ್ಕರಿಸಬಲ್ಲ ನಾನು ನೇಹದ ಸಹಜ ಸಾಮಾನ್ಯ ಸಾಹಚರ್ಯವನೂ ದೂರ ಇಡಲಾರೆ...
#ಸನ್ನಿಧಿ...
💑💑💑

ಅವಳ ಸೆರಗಿಗಂಟಿ,
ಮಹಾ ತುಂಟನಂತೆ... ಚಿಕ್ಕವನಿದ್ದೆ... ಹೊರ ಬಯಲಿಗೋಡಿ ದಾಂಧಲೆ ಎಬ್ಬಿಸದಿರಲೀ ಅಂತ ಆಯಿ ಮಂಚದ ಕಾಲಿಗೂ ನನ್ನ ಕಾಲಿಗೂ ಸೇರಿಸಿ ಸಣಬೆ ದಾರ ಕಟ್ಟಿ ಜಗಲಿಯಲ್ಲಿ ಬಿಡ್ತಾ ಇದ್ಲು... ಅಡಿಗೆ ಮನೆಯಲ್ಲೋ ನನಗೆಂದೇ ಲಾಲಿ ಹಾಡು... ಸುಳ್ಳೇ ಅತ್ತರೂ ಎದೆಗವುಚಿಕೊಂಡು ಹಾಲೂಡಿ ಕೃಷ್ಣಾ ಅನ್ನುತಿದ್ದಳು... ಆಡಾಡಿ ತೂಕಡಿಸುವವನ ಅಂಗಾಲಿಗೆ ಎಣ್ಣೆ ಸವರಿ ಕೆನ್ನೆ ಕೆನ್ನೆ ಬಡಿದುಕೊಂಡು ಮುದ್ದೀಯುತಿದ್ದಳು...

ಇವಳ ಸೆರಗನೆಳೆದು,
ಬಲು ಪೋಲಿಯಂತೆ... ಬೆಳೆದ ಕಲಿ ಹೈದ... ಇವಳಿದ್ದಾಳೆ... ಬಲು ಜಾಣೆ... ನಂಗಿಂತ ಚೂರು ಚಿಕ್ಕವಳೇನೋ... ನಾ ಹತ್ತಿರ ಸುಳಿದು ಮೈಸೋಕದಂಗೆ ಕಣ್ಣಲೇ ದಿಗ್ಬಂಧನ ಬರೀತಾಳೆ... ಮತ್ತು ಎದೆ ತುಂಬಿ ನನ್ನದೇ ಹೆಸರು ಸೇರಿಸಿಕೊಂಡು ಸೋಬಾನೆ ಗುನುಗುತಾಳೆ... ಮೀಸೆ ಕುಡಿ ಅಡಿಯ ಸಿಡುಕಿಗೆ ನನ್ನ ಕೃಷ್ಣಾ ಎಂದು ಬೆನ್ನು ತಬ್ಬಿ ಮುದ್ದಾಗಿ ಮದ್ದರೆಯುತಾಳೆ... ಹುಸಿ ಮುನಿಸಿನ ತೂಕಡಿಕೆಗೆ ಮೃದು ತೋಳಿನ ಬಿಸಿ ಎರೆದು ಸುಖದ ನಿದ್ದೆಗೆ ಮೆತ್ತೆಯಾಗುತ್ತಾಳೆ...

ಕಾಲು ಕಟ್ಟಿ ಎದೆಯಲಿಟ್ಟುಕೊಂಡು ಕಣ್ಣಾಗಿ ಕಾಯುವ ಯಮುನೆಯಂಗಳದ ಗೊಲ್ಲಿತಿಯರು - ಅವಳು ಯಶೋಧೆ, ಇವಳು ರಾಧೆ...
💑💑💑

ಹೇ ಸ್ವಪ್ನಗಂಧೀ -
ಊರಾಚೆ ಹಳ್ಳದ ಕರಿಹಸಿರು ಏರಿಯಲಿ ನೀನೇನೋ ಸವಿ ಲಹರಿಯಲಿ ನನ್ನೆದೆಯ ತಣಿಸುವಂತೆ ಮಾತಾಗಿ ಗುಣುಗುಣಿಸುವಾಗ ಆ ಕಮನೀಯತೆಯಲಿ ಕಮ್ಮಗೆ ನಿನ್ನ ಕಣ್ಣಾಳದಲಿ ಕರಗಿ ಹೋಗುವ ಆಸೆಬುರುಕ ಕಬೋಜಿ ನಾನು...
ಸದಾ ಮುಸ್ಸಂಜೆಗಳ ಓಕುಳಿ ಬೆರಗಲ್ಲಿ ನನ್ನ ನೂರು ಫಾಲ್ತೂ ಫಾಲ್ತು ಮಾತುಗಳ ನಡುವೆ ಹಾಯಾಗಿ ಘಲಘಲನೆ ನಗುವ ಮತ್ತು ಛಕ್ಕನೇ ನನ್ನುಸಿರು ತೇಕುವ ತೆರದಿ ಮುದ್ದಿಸಿ ಸುಳ್ಳೇನಾಚಿ ಎದೆಯಲಡಗುವ ನೀನು...
ಈ ಉರಿ ಬೇಸಗೆಯಲಿ ತುಟಿ ಒಡೆದದ್ದು ಹೇಗೆಂದು ಅಮ್ಮ ಕೇಳಿದರೆ ಏನೆನ್ನಲೀ ಎನ್ನುತ್ತ ಕಣ್ಮಿಟುಕಿಸಿದರೆ ಮತ್ತೆ ಹೊರಳಿ ತುಟಿ ಕಚ್ಚುವ ಕಳ್ಳ ಕೊಂಡಾಟಗಳ ಈ ಮುದ್ಮುದ್ದು ಬಣ್ಣಾಚಾರಗಳಿಂದ ಬದುಕಿಂಗೋ ಇನ್ನೂ ಒಡೆಯದ ಮುಗ್ಧತೆ‌ಯಂತ ಸ್ನಿಗ್ಧ ಹೊಳಲು...
ಬೆಳಗುಂಜಾವದಲಿ ಇಂಥ ಕಾವ್ಯ ಕನಸಾಗಿ ಕಣ್ಣೊಡೆದರೆ ಸೂರ್ಯ ಎದ್ದಾಗಿನಿಂದ ಆರಂಭವಾಗಿ ರಾತ್ರಿ ಚಂದಮಾಮನೆದುರು ತೂಕಡಿಸುವವರೆಗೆ ಎದೆಯ ಅಂಗಳದಿ ಮನೋಹರವಾಗಿ ನರ್ತಿಸುವ ನಿನ್ನ ಬಂಗಾರ ನಗೆಯ ಹೆಜ್ಜೆ ಗೆಜ್ಜೆ ಲಜ್ಜೆ...
ಹೌದು,
ಬಡಪಾಯಿ ರಸಿಕ ಪ್ರಾಣಿ‌ಯ ಬದುಕಿಷ್ಟು ಸಹನೀಯವಾಗಲು ನಿನ್ನಂಥದೊಂದು ಸಿಕ್ಕೂಸಿಗದ ಮಧುರ ಕನಸಾದರೂ ಜೊತೆ ಬೇಡವೇ...
ಮುಂದುವರಿಯಲಿ ಇದು ಹಿಂಗೇ ಮನವು ಮಂದವಾಗದಂಗೆ...
___ ಈ ಪೋಲಿ ಗೆಳೆಯನ ಪ್ರಾರ್ಥನೆ‌ಗಳೆಲ್ಲ ಇಂಥವೇ...
💑💑💑

ಇಲ್ಕೇಳು -
ಜಗಳವಾಡಬೇಕು ನಿನ್ನಲ್ಲಿ ಪ್ರೀತಿ ಉಕ್ಕುವ ಹಾಗೆ...
ಚಕಮಕಿಗಳಾಚೆಯ ಗಾಢ ಮೋಹ ಜಗದ ಕಣ್ಣು ಕುಕ್ಕುವ ಹಾಗೆ...
ಹಾಂ,
ಜಗಳವಾಡಬೇಕು ನಿನ್ನಲ್ಲಿ ಜನ್ಮಕೂ ಈ ಹೆಗಲಿಗೆ ನಿನ್ನುಸಿರು ಅಂಟಿಕೊಳ್ಳುವ ಹಾಗೆ...
____ಹುಸಿಮುನಿಸಿಗೊಂದು ಕುಂಟು ನೆಪವ ನೀನೇ ಹುಡುಕಿಕೊಡು...
💑💑💑

ಪ್ರತಿಪದೆಯ ಚಂದ್ರ - ನೆಲವ ತುಳಿದ ಬೆಳುದಿಂಗಳ ಚಿಗುರು ಪಾದ - ಮಣ್ಣ ಮೂಸಿದ ಹೂವೆದೆಯಲಿ ಬೀಜ ಬಿರಿವ ಸಂಭ್ರಮ - ಸಂಜೆ ರಂಗಿನ ಗಲ್ಲ ತೀಡೋ ಗಾಳಿ ಗೊರವನ ಗಂಧರ್ವ ಸಲ್ಲಾಪ - ನನ್ನ ಕಿನ್ನರಿಯ ಬೆಳ್ಳಿ ಕಾಲಂದುಗೆಯಲಿ ಮೆಲ್ಲನುಲಿವ ಕಿನ್ನುರಿ ದನಿ...
ಮುಚ್ಚಂಜೆ ಓಕುಳಿಯ ನಡುವಿಗೇರಿಸಿಕೊಂಡು ಮುಂದೆ ಮುಂದೆ ನಡೆವ ಅವಳ ಭವ್ಯ ರೂಪ - ಅವಳ ಬೆನ್ನ ನಾಚಿಕೆಗಂಟಿದ ನನ್ನ ಕಣ್ಣ ದೀಪ...
ಅಲ್ಲಿಂದ,
ಇರುಳ ಸ್ವಪ್ನ‌ದಲಿ ಗುಮಿಗೂಡುವ ಸೌಂದರ್ಯ ಅವಳೇ ಅವಳು...
ಕನಸು - 
ಕಣ್ಚಮೆಯ ಕುಂಚವ ಮಾಡಿ, ಖಾಲಿ ಖಾಲಿ ಮೈಹಾಳೆಯ ತುಂಬಾ ನವಿಲುಗರಿಯ ಬರೆದು ಮುದಗೊಳ್ಳುವ, ಶೃಂಗಾರ ಗಾಣಕೆ ಜೀವ ಜೀವ ನೊಗ ಹೂಡಿ ಮದ ಅರೆದು ಸವಿರಸ ಹೀರುವ ಯುವ ಮಾಧುರ್ಯ ಮೇನೆ...
ಬೇಸಿಗೆಗೂ ಬೆಂಕಿ‌ಗೂ ಅವಿನಾಭಾವ‌ವಂತೆ - ನಾನೋ ನಿನ್ನ ಹಂಬಲದಿ ನನ್ನೇ ನಾ ಸುಟ್ಟುಕೊಳ್ಳುವ ಮಿಡತೆ...
ಪೋಲಿಯೊಬ್ಬನ ಎದೆಯಲ್ಲಿ ಪಲ್ಲಂಗವೊಂದು ಸದಾ ಸಿಂಗರಿಸಿಕೊಂಡು ಪ್ರಣಯ ಪೂಜೆಯ ಮುಹೂರ್ತ‌ಕೆ ಕಾಯುತ್ತಿರುತ್ತೆ...
_____ಮತ್ತು ನಾನೊಬ್ಬ ಹುಟ್ಟಾ ಪರಮ ಪೋಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment