Thursday, September 20, 2012

ಗೊಂಚಲು - ನಲವತ್ನಾಕು.....

ಸಾಗರದ ಸಾವಿರ ಪ್ರಶ್ನೆಗಳಿಗೆ
ದಂಡೆಯ ನಸುನಗೆಯ
ಮೌನವೇ ಉತ್ತರ.....

ಆಯೀ -
ಇದೊಂದು ಪ್ರಶ್ನೆ ಕೇಳಬೇಡ. 
ಉತ್ತರ ಖಂಡಿತಾ ಗೊತ್ತಿಲ್ಲ. 
ಉತ್ತರ ಹುಡುಕುವ ಮನಸೂ ಈಗ ನಂಗಿಲ್ಲ. 
ಅವನನ್ನು ಯಾಕೆ ಪ್ರೀತಿಸಿದೆ.? 
ಅವನನ್ನೇ ಯಾಕೆ ಪ್ರೀತಿಸಿದೆ.??
ಈವರೆಗೆ ನನ್ನನ್ನೇ ನಾನು ಕೇಳೀಕೊಂಡದ್ದು ಅದೆಷ್ಟು ಬಾರಿಯೋ...
ಉತ್ತರ ದಕ್ಕಿಲ್ಲವಾಗಲೀ ಪ್ರೀತಿಸದೇ ಇರಲು ಸಾಧ್ಯವೇ ಇಲ್ಲ ಎನ್ನುವುದು ಮಾತ್ರ ಮತ್ತೆ ಮತ್ತೆ ಋಜುವಾಗಿದೆ.

ಸಾಗರದಲೆಗಳ ಕೇಳಿದೆ ಒಮ್ಮೆ - ಒಂದಿನಿತೂ ಪ್ರತಿಸ್ಪಂದಿಸದಿರುವ ದಂಡೆಯನೇಕೆ ಅಷ್ಟೊಂದು ಪ್ರೀತಿಸುವಿರಿ.?
ದಂಡೆಯನು ಪ್ರೀತಿಸಲು ಒಲ್ಲೆನೆನುವ ಅಲೆ ಮರಳ ಒರಟನ್ನು ತಾಕುವ, ದಡದಲಾಡುವ ಕಂದನ ಅಂಬೆಗಾಲ ಮುದ್ದಿಸುವ ಸುಖಗಳ ಕಳಕೊಂಡು ಮಧ್ಯದಲೇ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ನಕ್ಕಿತು ಸಾಗರ.
ಅವನ ಎದೆ ರೋಮಕೆ ಮೂಗನುಜ್ಜುವ ಸುಖವ, ಅವನ ಮಗುವಿಗೆ ಒಡಲಾಗುವ ತಾಯ ಸುಖವ ನಾ ಕಳೆದುಕೊಳ್ಳಲಾರೆ ಅಮ್ಮ...

ದಂಡೆಯನೂ ಕೇಳಿ ನೋಡಿದೆ.
ಪ್ರೀತಿಗೆ ನೀನೇಕೆ ಮೌನಿ ಎಂದು.
ನನ್ನ ಮೌನ ಸಮ್ಮತಿಯೇ ಸಾಗರದ ಪ್ರೀತಿಗೆ ಪ್ರೇರಣೆ.
ಸ್ವಚ್ಛ ಮೌನವೂ ಪ್ರೇಮವೇ ಕಣೇ ಎಂದಿತು ದಂಡೆ.
ಅಂದಿನಿಂದ ಅವನ ಮೌನವನೂ ಅದಮ್ಯವಾಗಿ ಪ್ರೀತಿಸಲಾರಂಭಿಸಿಬಿಟ್ಟೆ.

ಒಮ್ಮೆ ಅವನನ್ನೇ ಕೇಳಿಬಿಟ್ಟೆ.
ಯಾಕೆ ನಾನಿನ್ನ ಇಷ್ಟೊಂದು ಪ್ರೀತಿಸ್ತೇನೆ.??
ಒಂದು ಕ್ಷಣ ಭಯದಿಂದ ನನ್ನ ನೋಡಿ, ಅದೇ ಭಯದ ದನಿಯಲ್ಲಿ ಹೇಳಿದ್ದ -
ಪ್ರೀತಿಗೆ ಕಾರಣವ ಹುಡುಕ ಹೋಗ್ಬೇಡ.
ಹುಡುಕ ಹೊರಟರೂ ಉತ್ತರ ಸಿಗದಂತೆ ನೋಡಿಕೋ.
ಯಾಕೇಂದ್ರೆ ಉತ್ತರ ಸಿಕ್ಕ ದಿನ ಪ್ರೀತಿ ಸತ್ತಂತೆಯೇ ಸರಿ.
ಬದುಕನೇ ಕಳಕೊಂಡು ಬದುಕಿರುವ ಶಕ್ತಿ ನಂಗಿಲ್ಲಾ ಕಣೇ.
ಅಲ್ಲಿಂದ ಮುಂದೆ ಆ ಪ್ರಶ್ನೇನ ನನ್ನಲ್ಲಿ ನಾನೂ ಕನಸಲ್ಲಿ ಕೂಡಾ ಕೇಳಿಕೊಂಡಿಲ್ಲ.

ಆಯೀ -
ಅಷ್ಟಕ್ಕೂ ಯಾರನ್ನಾದ್ರೂ ಯಾಕಾದ್ರೂ ಪ್ರೀತಿಸ್ತೇವೆ ಅನ್ನೋದಕ್ಕೆ ನಿಂಗಾದ್ರೂ ಉತ್ತರ ಗೊತ್ತಾ.?
ಅಪ್ಪ ಅಮ್ಮ ತೋರಿಸಿದ, ಆವರೆಗೆ ಸರಿಯಾಗಿ ನೋಡಿಯೂ ಇರದವನೊಂದಿಗೆ ಇಷ್ಟೆಲ್ಲ ವರ್ಷ ಬದುಕ ಹರವಿಕೊಂಡೆಯಲ್ಲ...
ನಿನ್ನದೆಂಬುದೆಲ್ಲವನೂ ನೀಡಿ ಪ್ರೀತಿಸಿದೆಯಲ್ಲ ಯಾಕೆ.??
ಅಂಥ ಸಿಡುಕಿನ ಅಪ್ಪ (ಅಪ್ಪ ನಿನ್ನೊಂದಿಗೆ ಸರಸವಾಗಿದ್ದದ್ದನ್ನ ನಾನಂತೂ ನೋಡಿಲ್ಲ) ಕೂಡ ಪ್ರತಿ ಬಾರಿ ಪೇಟೆಗೆ ಹೋದಾಗಲೂ ಎರಡಾದರೂ ಉತ್ತಪ್ಪವನ್ನು ನಿನಗಿಷ್ಟ ಅಂತ ತರ್ತಾರಲ್ಲ ಯಾಕೆ.?
ಹೂವೆಂದರೆ ನಂಗೆ ಎಷ್ಟಿಷ್ಟ ಎಂದು ನಿಂಗೊತ್ತು. ಚಿನ್ನು ಬೆಕ್ಕು, ಜೂಲಿ ನಾಯಿ, ಕೊಟ್ಟಿಗೆಯ ಚಂದ್ರಿ ಕರು, ರಾಡಿ ಗದ್ದೆ, ಗುಡಿಯ ಗಣಪನೆದುರಿನ ದೊಡ್ಡ ಘಂಟೆಯ ಸದ್ದು ಎಲ್ಲ ನಂಗಿಷ್ಟ. ಅವೆಲ್ಲಕ್ಕಿಂತ ಈಗಲೂ ನಂಗಿಂತ ಸುಂದರಿ ಆಗಿರೋ ನೀನಂದ್ರೆ ಎಷ್ಟೊಂದು ಪ್ರೀತಿ. ಆಗೆಲ್ಲ ಯಾಕೇಂತ ಕೇಳದೇ ನನ್ನ ಇಷ್ಟಗಳಲ್ಲಿ ಖುಷಿಪಟ್ಟ ನೀನು ಈಗ ಮಾತ್ರ ಕಾರಣ ಕೇಳುವ ಹಂಗೇಕೆ.?
ನಂಗರ್ಥವಾಗುತ್ತೆ ಅಮ್ಮಾ ನಿನ್ನ ಧಾವಂತ. ಆದರೆ ನಾನು ನಿನ್ನ ಮಗಳು. ಹಾಗೆಲ್ಲ ಸುಲಭಕ್ಕೆ ಎಡವುವಳಲ್ಲ ಭಯಬೀಳದಿರು.
ನನ್ನ ಹುಡುಗ ನನಗಿಂತ ನನ್ನ ಜಾಸ್ತಿ ಪ್ರೀತಿಸ್ತಾನೆ ಎಂಬ ಖಾತ್ರಿ ನಂಗಿದೆ.
ಅವನದು ಮರಳ ದಂಡೆಯ ಸಹನೆಯಂಥ ಪ್ರೀತಿ...
ಒಂದೇ ಬೇಸರ ಕೆಲವೊಮ್ಮೆ ಸಾಗರದ ಸಾವಿರ ಪ್ರಶ್ನೆಗಳಿಗೆ ದಂಡೆಯ ನಸುನಗೆಯ ಮೌನವೇ ಉತ್ತರ ಅಷ್ಟೇ.
ಆ ಮೌನವೇ ಕಾಯ್ದೀತು ನಮ್ಮಿಬ್ಬರ ಬದುಕುಗಳ.

ಆಯೀ ಯಾಕೆ ಪ್ರೀತಿಸಿದೆ ಅಂತ ಹೇಳಲಾರೆನಾದರೂ ನಮ್ಮಿಬ್ಬರ ನಡುವಿನ ಒಂದಷ್ಟು ಭಾವಗಳ ನಿಂಗೆ ಹೇಳ್ಬೇಕು.
ನನ್ನ ಬಿಟ್ಟೂ ಬಿಡದ ಬಡಬಡಿಕೆಗಳನ್ನೆಲ್ಲ ಮೌನವಾಗಿ ಆಲಿಸುವ ಅವನ ಸಹನೆ ಮುದ್ದು ಬರಿಸುತ್ತೆ ಒಮ್ಮೊಮ್ಮೆ. 
ಅವನ ಕೈಹಿಡಿದು ಬೀದಿಯಲಿ ನಡೆವಾಗ ದಾರಿಯಲ್ಲಿನ ಹುಡುಗೀರೆಲ್ಲಾ ಆಸೆ ಕಣ್ಣಿಂದ ಅವನ ನೋಡುವಾಗ ಹೆಮ್ಮೆ ಅನ್ನಿಸುತ್ತೆ ನಂಗೆ.
ಏಕಾಂತದಲಿ ಅವನ ಮಡಿಲ ಸೇರುವ ನನ್ನ ಮಗುವಂತೆ ದಿಟ್ಟಿಸುವ ಅವನ ಕಂಗಳು ನಂಗೆ ಆಯೀ ನಿನ್ನನ್ನೇ ನೆನಪಿಸುತ್ತೆ.
ಒಮ್ಮೊಮ್ಮೆ - ನಿನ್ನೆ  ಮೊನ್ನೆ ಸತ್ತ, ಇಂದೂ ಸಾಯುತಿರುವ, ಅರ್ಧಕ್ಕೇ ಆತ್ಮಹತ್ಯೆ ಮಾಡ್ಕೊಂಡ, ನಾಳೆಗಳಲ್ಲೂ ಸಾಯಲಿರುವ ಕನಸುಗಳ ಬಗ್ಗೆ ಮಾತಾಡ್ತಾ ಅವನು ಭಾವುಕನಾದಾಗ ನನ್ನಂತೇ ಅವನೂ ಅತ್ತು ಬಿಡಲಿ ಎದೆಗವುಚಿಕೊಂಡು ಸಂತೈಸಿಯೇನು ಅಂತನಿಸುತ್ತೆ.
ಆದರವನು ಮಹಾ ಸ್ವಾಭಿಮಾನಿ ಪ್ರಾಣಿ.
ಎದೆಯ ನೋವನೆಂದೂ ಕಣ್ಣ ಹನಿಯಾಗಲು ಬಿಡಲೊಲ್ಲ.
ಅತ್ತು ಬಿಡು ಮನಸು ಹಗುರಾದೀತು ಅಂದರೆ ಗಂಡಸು ಕಣೇ ಎಂಬ ಉತ್ತರ.
ಆಗೆಲ್ಲ ನಂಗೆ ನಾನು ಹೆಣ್ಣಾಗಿದ್ದರ ಬಗ್ಗೆ ಖುಷಿಯಾಗುತ್ತೆ.
ಯಾಕಮ್ಮ ಗಂಡಸು ಅಳಲೇ ಬಾರದಾ...??
ತನ್ನ ಪ್ರೀತಿಯ ಮುಂದೆಯೂ...???

ಅರಳಿದ ಹುಣ್ಣಿಮೆಯಂದು ಉಕ್ಕುವ ಕಡಲನ್ನು ನೋಡಿ ಮುದಗೊಳ್ಳುತ್ತಿದ್ದರೆ ನಾನು - ನನ್ನನೇ ನೋಡುತ್ತಾ ಮೈಮರೆಯುತ್ತಾನೆ ಅವನು...
ಮಲ್ಲಿಗೆ ಬಿಳುಪಿನ ಹತ್ತಾರು ಚೆಲುವೆಯರ ನಡುವೆಯೂ ಈ ಕಪ್ಪು ಹುಡುಗಿಯನೇ ಹುಡುಕಾಡಿ, ಸುಳ್ಳೇ ನಗುವಾಗ ನಾನು  ಚಡಪಡಿಸುತ್ತಾನೆ ಅವನು...
ಬಚ್ಚಲ ಏಕಾಂತದಲಿ ನನ್ನ ನಾ ಕಾಣುವಾಗ - ಅವನ ನೋಟದ ನೆನಪಾಗಿ ಸಣ್ಣಗೆ ಕಂಪಿಸಿ ನಾಚುತ್ತೇನೆ ನಾನು...

ದೂರ ನಿಂತೇ ನನ್ನಲೇನೋ ಹುಡುಕುವಂತಿರುವ ಆ ಅವನ ಶಾಂತ ಕಂಗಳಲ್ಲಿರುವುದು ಆಸೆಯಾ.? ಸ್ನೇಹಾಭಿಮಾನವಾ.?? ಪ್ರೀತಿಯಾ.??? ಆರಾಧನೆಯಾ.???? ಇವುಗಳೆಲ್ಲದರ ಮಿಶ್ರಣದ ಇನ್ಯಾವುದೋ ಭಾವವಾ.?????
ಏನೊಂದೂ ಅರ್ಥವಾಗದೇ ಒದ್ದಾಡುತ್ತೆ ನನ್ನ ಮನಸು ಒಮ್ಮೊಮ್ಮೆ...
ಆದರೆ ಈ ಕ್ಷಣ -
ಕನಸುಗಳ ಜೋಕಾಲಿಯಲಿ ಜೀಕುವ ರೋಮಾಂಚನವಷ್ಟೇ ನನ್ನದು...

ನನ್ನ ಪ್ರೀತಿ, ನನ್ನ ಭಾವ ನಿನಗರ್ಥವಾಗಲು ಇಷ್ಟು ಸಾಕೆಂದುಕೊಳ್ತೇನೆ.
ಬೇಡದೆಯೂ ಸಿಗುವ ನಿನ್ನ ಹಾರೈಕೆ ನನ್ನ ಕಾಯುತ್ತೆ ಅನವರತ...
ಅಪ್ಪನ್ನ ಒಪ್ಪಿಸುವ ಕೆಲಸವೂ ನಿಂದೇನೆ.
ಆಯೀ - ಪ್ಲೀಸ್ ಪ್ಲೀಸ್ ಪ್ಲೀಸ್...

7 comments:

 1. This comment has been removed by the author.

  ReplyDelete
 2. ಕೆಲ ಭಾವಗಳಿಗೆ ನಾವು ಹೆಸರಿಡುವುದು ಸುಲಭವಲ್ಲ.

  ಅಂತಹ ಅವ್ಯಕ್ತತೆಯನ್ನು ಅತ್ಯುತ್ತಮವಾಗಿ ರೂಪಿಸಿಕೊಟ್ಟಿದ್ದೀರ.

  ReplyDelete
 3. tumbaa channaagi mooDi bandide.....:)

  ReplyDelete
 4. ಒಮ್ಮೊಮ್ಮೆ - ನಿನ್ನೆ ಮೊನ್ನೆ ಸತ್ತ, ಇಂದೂ ಸಾಯುತಿರುವ, ಅರ್ಧಕ್ಕೇ ಆತ್ಮಹತ್ಯೆ ಮಾಡ್ಕೊಂಡ, ನಾಳೆಗಳಲ್ಲೂ ಸಾಯಲಿರುವ ಕನಸುಗಳ ಬಗ್ಗೆ ಮಾತಾಡ್ತಾ ಅವನು ಭಾವುಕನಾದಾಗ ನನ್ನಂತೇ ಅವನೂ ಅತ್ತು ಬಿಡಲಿ ಎದೆಗವುಚಿಕೊಂಡು ಸಂತೈಸಿಯೇನು ಅಂತನಿಸುತ್ತೆ.
  ಆದರವನು ಮಹಾ ಸ್ವಾಭಿಮಾನಿ ಪ್ರಾಣಿ.
  ಎದೆಯ ನೋವನೆಂದೂ ಕಣ್ಣ ಹನಿಯಾಗಲು ಬಿಡಲೊಲ್ಲ.
  ಅತ್ತು ಬಿಡು ಮನಸು ಹಗುರಾದೀತು ಅಂದರೆ ಗಂಡಸು ಕಣೇ ಎಂಬ ಉತ್ತರ.
  ಆಗೆಲ್ಲ ನಂಗೆ ನಾನು ಹೆಣ್ಣಾಗಿದ್ದರ ಬಗ್ಗೆ ಖುಷಿಯಾಗುತ್ತೆ.
  ಯಾಕಮ್ಮ ಗಂಡಸು ಅಳಲೇ ಬಾರದಾ...??
  ತನ್ನ ಪ್ರೀತಿಯ ಮುಂದೆಯೂ...???


  ವಾವ್ ಎನಿಸಿದ ಸಾಲುಗಳು...

  ಇನ್ನು ಪೂರ್ಣ ಲೇಖನದ ಬಗೆಗಂತು ಮಾತೇ ಆಡುವಂತಿಲ್ಲ.. ಭಾವಗಳ ಮಳೆ... ಅಲ್ಲಲ್ಲಾ ಮಹಾಪೂರ ,... ಒಮ್ಮೆಲೇ ಕೊಚ್ಚಿ ಹೋದ ಭಾವ...

  ReplyDelete
 5. ನಾನೇ ನನ್ನ ಆಯಿ ಮುಂದೆ ಕೂತು ಈ ಮಾತುಗಳನ್ನು ಹೇಳುತ್ತಿದ್ದೇನಾ..??
  ಅನುಮಾನವಾಯಿತು..

  ಶ್ರೀ. ಒಂದೊಂದು ವ್ಯಾಕ್ಯಗಳು ಸಾವಿರ ಭಾವಗಳನ್ನು, ಕನಸುಗಳನ್ನು, ಪ್ರಶ್ನೆಗಳನ್ನು ಮನದೊಳಗೆ ಹುಟ್ಟು ಹಾಕುತ್ತದೆ.....
  ಮನ ತಟ್ಟಿದ ಬರಹ..

  ReplyDelete
 6. ಪ್ರೀತಿ, ಪ್ರೇಮದಲ್ಲಿರುವುದು ಹೆಣ್ಣು ಗಂಡು ಅನ್ನುವ ಬೇಧವಿರದ ಅನಿಸಿಕೆಗಳು, ಅವು ಅಲ್ಲೂ ಇಲ್ಲೂ ಸಲ್ಲುವ ಸ್ವತಂತ್ರ ಭಾವದಲೆಗಳು ಅನ್ನುವ ಸತ್ಯ ನಿಮ್ಮ ಬರಹದಲ್ಲಿ ಅವಳ ಅನಿಸಿಕೆಗಳ ನೈಜತೆಯನ್ನ ನೋಡಿ ಅರಿವಾಯ್ತು... ಸಾಗರದ ಅಸಂಖ್ಯ ಪ್ರಶ್ನೆಗಳಿಗೆ ದಂಡೆಯ ಮೆಲುನಗುವಿನ ಮೌನವೇ ಉತ್ತರ- ವಾಹ್! wonderful shreevatsa! ತುಂಬಾ ಸುಂದರವಾಗಿದೆ....

  ReplyDelete