Friday, March 13, 2020

ಗೊಂಚಲು - ಮುನ್ನೂರಿಪ್ಪತ್ತೈದು.....

 ಬದುಕು ಎಷ್ಟು ಚಂದದ ಭ್ರಮೆ.....

ಆಗಿದ್ದ ನಾನು ಈಗಿಲ್ಲಿ ಸಿಗುವುದಿಲ್ಲ - ಇಲ್ಲಿ ನಾನೂ ಪೂರ್ಣ ನನ್ನವನಲ್ಲ...
#ಬದುಕೇ_ಒಡೆದ_ಕನ್ನಡಿ...

ಇಲ್ಲಿ ಎಲ್ಲವೂ ನಶ್ವರ ಎಂಬ ವೇದಾಂತದ ಹೆಗಲು ಜೋತು ಕಾಲುಬಡಿಯುತ್ತಾ ನೋವುಗಳ ದಾಟಿ, ನಂಗೆ ಸಾವೇ ಇಲ್ಲ ಎಂಬಂತೆ ರಣ ಮೋಹದಲ್ಲಿ ಓಲಾಡುತ್ತಾ ಬದುಕಿಬಿಡುವುದು...
#ಬದುಕು_ಎಷ್ಟು_ಚಂದದ_ಭ್ರಮೆ...

"ಅಳುತ್ತಾ ಬಂದಿದ್ದೇನೆ - ನಗುತ್ತಾ ಹೊರಡಬೇಕು.‌‌.."
ಇದಿಷ್ಟೇ ನಿರೀಕ್ಷೆ ಇಲ್ಲಿಂದ...
#ಬಾಳ್ಮೆ..‌.
↜↟↡↝

ಮನೆಯ ಕಿಬ್ಳಿಗೆ ಹಕ್ಕಿ ಗೂಡು ಕಟ್ಟಲು ಅನುವು ಮಾಡಿಕೊಡುವುದಕ್ಕೂ, ಮಾಡಿಗೆ ಪಂಜರವ ನೇತಾಕಿ ಅದರಲ್ಲಿ ಹಕ್ಕಿಯ ಸಾಕುವುದಕ್ಕೂ ರೆಕ್ಕೆಯ ಸ್ವಾತಂತ್ರ್ಯದ ಸಾಮರ್ಥ್ಯ ಹಾಗೂ ಸೌಂದರ್ಯಗಳ ಹುಟ್ಟು ಸಾವಿನಷ್ಟು ಅಂತರವಿದೆ...
ಏನಿಲ್ಲ -
"ಹಕ್ಕಿಯನ್ನು ಹಕ್ಕಿಯಾಗಲು ಬಿಡುವಾ - ಹಾದಿಗೆ ನೆರಳಾಗಲಾಗದಿದ್ದರೂ ಅಡ್ಡಿಲ್ಲ, ಕನಿಷ್ಟ ಬೇಲಿಯಾದರೂ ಆಗದೇ ಇರುವಾ..."
ಒಂದು ಹೆಜ್ಜೆ ಪ್ರೀತಿಯೆಡೆಗೆ... ಅಷ್ಟೇ...
#ಭಾವ_ಬಂಧ_ಸಂಬಂಧ_ಇತ್ಯಾದಿ_ಇತ್ಯಾದಿ...
↜↟↡↝

ಮಳೆ ಸುರಿಸೋದು ಕಪ್ಪು ಮೋಡವೇ ಆದರೂ ಕಣ್ಣು ಸೋಲುವುದು ಕಾಮನಬಿಲ್ಲಿಗೇ...
ಕತ್ತಲ ಸೌಂದರ್ಯಕ್ಕೆ ಬೆಳಕಿನ ಸಾಕ್ಷಿ ಕೇಳುತ್ತಾರೆ...
ಸತ್ಯವನ್ನೂ ಬಣ್ಣದಲ್ಲದ್ದಿ ಹಂಚುವುದ ಕಲಿಯಬೇಕಿದೆ...
#ಬಣ್ಣ_ಬೆಡಗಿನ_ಸೋಗಲಾಡಿ_ಬದುಕು...
↜↟↡↝

ಬದುಕು ಭಾರ - ಸಾವು ದೂರ - ಎದೆ ಬತ್ತಿದರೆ ಕಣ್ಣ ದೂರಬಹುದೇ...
ಅವಳ ಕರುಳ ಧುನಿಯ ಕೂಗಿಗೆ ಉತ್ತರಿಸೋ ಶಕ್ತಿ ನಂಗೆಲ್ಲಿಂದ ಬರ್ಬೇಕು...
ನಾ ತೊರೆದ ಹಾದಿಯಾ ಊರಿಗೇನ ತೋರಲೆಂತು...
ದೂರುವುದಾದರೆ ಕಾಲನ ದೂರಬೇಕು - ಅದೂ ಗಟ್ಟಿ ಸಾಕ್ಷಿಗಳಿಲ್ಲದೆ...
ಉಳಿದ ಚೂರು ಉಸಿರನ್ನು ನಿದ್ದೆಯ ಉಡಿಗೆ ಹಾಕಿ - ಜಾರಿಕೊಳ್ಳಲಾಸೆ ತೀರಿತೆಂದು ಪಡೆದೆಲ್ಲ ಬಾಕಿ....
.......ನದಿ ಬತ್ತುವ ಕಾಲ...
#ಬೆಕ್ಕಿನ_ಮರಣದಂತಾ_ಸಾವು_ಬರಬೇಕು...
↜↟↡↝

ಪ್ರತಿ ಸರ್ತಿಯೂ ಹೊರಡೋ ಸಮಯಕ್ಕೆ ಸರಿಯಾಗಿ ನೀನು ಕರೆದಂಗಾಗುತ್ತೆ ಬಾಗಿಲ ಕಿಬ್ಳಿಯಿಂದ - ಮತ್ತೆ ಉಳಿದುಬಿಡುತ್ತೇನೆ ಇದೇ ನರಕದಲ್ಲಿ...
#ನೆಪ...
↜↟↡↝

ನಿನ್ನ ಅಬೋಧ ಕಂಗಳಲ್ಲಿ ನಿನ್ನೆದೆಯ ತಲ್ಲಣಗಳು, ಬೆಸೆದ ಬೆರಳುಗಳ ಬಿಸುಪಿನ ಬಿಗಿಯಲ್ಲಿನ ಹಂಬಲಗಳು, ಕಿಬ್ಬೊಟ್ಟೆಯಾಳದ ಕಂಪನಗಳೆಲ್ಲ ಬಿಳಿ ಗೋಳದ ಕಪ್ಪು ಚಿತ್ರಗಳಾಗಿ ತುಯ್ಯುವಾಗ ನನ್ನ ನಿಸ್ತೇಜ ನೋಟ ಬೇಕೆಂದೇ ಚುಕ್ಕಿಗಳ ಎಣಿಸುತ್ತವೆ...
ಹೃದಯ ಸೋತದ್ದನ್ನು ರೆಪ್ಪೆಗಳಲಿ ಮುಚ್ಚಿಟ್ಟು ಏನೂ ಅರಿಯದವನಂತಿರುವುದು ಅಲಿಖಿತ ಒಪ್ಪಂದದಂತ ನಿನ್ನ ಆಸೆ ಮತ್ತು ನಂಗಂಟಿದ ಶಾಪ...
ದೋಷ ತಟ್ಟದಂಗೆ ಮನಸಿನ ಆಣೆಗಳ ಮೀರುವ ದಾರಿಯಿದ್ದರೆ ಹೇಳಬಾರದೇ...
#ಬೇಲಿಗಳು...
↜↟↡↝

ಹುಟ್ಟು ಒಂಟಿ, ಸಾವು ಒಂಟಿ, "ಮಾತು ಕೊಂದುಕೊಂಡು" ತುಂಡು ಬದುಕನ್ನೂ ಹುಚ್ಚು ಬೇವರ್ಸಿಯಾಗಿಸಿಕೊಳ್ಳುವುದರಲ್ಲಿ ಯಾವ ಸಾರ್ಥಕತೆ ಇದೆ ಹೇಳು...
#ಪ್ರೀತಿ...
↜↟↡↝

ಎದುರಿನ ನಗುವನ್ನು ಬಗೆಯುವ ಸಾಹಸ ಮಾಡಲಾರೆ - ಆ ಒಡಲೊಳಗಣ ಬೆಂಕಿ ಎದೆಯ ಸುಟ್ಟೀತೆಂಬ ಭಯವಿದೆ...
#ಹೊಟ್ಟೆಯೊಳಗಣ_ಗುಟ್ಟು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment